ನೆಡುವ ಗಿಡ, ಪ್ರಾಕೃತಿಕ ಸಮಸ್ಯೆಗಳ ನೈಜ ಪರಿಹಾರವೇ ?
– ಅನೇಕಲೇಖ
ವನಮಹೋತ್ಸವ, ಜನ್ಮದಿನ ಇಂತಹ ಹಲವು ಸಂದರ್ಭಗಳಲ್ಲಿ ಸಸಿಗಳನ್ನು, ಗಿಡಗಳನ್ನು ನೆಡುತ್ತೇವೆ. ಇದರ ಹಿಂದಿನ ಕಾರಣಗಳು, ಉದ್ದೇಶಗಳು ನಮಗೆ ಗೊತ್ತೇ ಇವೆ. ತಾಪಮಾನ ಏರಿಕೆ, ಪ್ರಾಕೃತಿಕ ಅಸಮತೋಲನ ಮುಂತಾದ ಪರಿಣಾಮಗಳನ್ನು ತಡೆಯಲು,ನಾವು ಈ ಹಸಿರೀಕರಣದ ಮೊರೆ ಹೋಗಿದ್ದೇವೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉಸಿರಾಟಕ್ಕೆ ಆಮ್ಲಜನಕ ಬೇಕು ಅದನ್ನು ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಗಿಡಗಳು ಎಂಬ ಕಾರಣಕ್ಕಾಗಿ ನಾವು ಹಸಿರನ್ನು ಬೆಳೆಸುತ್ತೇವೆ. ಇತರ ಜೀವಿಗಳ ಉಳಿವು ಅಭಿವೃದ್ಧಿ ನಮ್ಮ ಗುಂಪಿಗೆ ಸೇರದ ವಿಷಯ. ಅದಕ್ಕೆ ಕಾರಣವಿಷ್ಟೇ, ನಮ್ಮ ಮನುಜ ಸಂತತಿಯನ್ನೇ ನಮ್ಮಿಂದ ಸಂಭಾಳಿಸುವುದು ಸಾಧ್ಯವಾಗದಿರದಾಗ ಇನ್ನು ಬ್ರಹತ್ ಜೀವರಾಶಿಯ ಜವಾಬ್ದಾರಿ ನಮ್ಮಿಂದ ಆಗುಹೋಗದ ವಿಷಯ.ಹಾಗಾಗಿ ನಮ್ಮ ಧ್ಯೇಯ ಸ್ಪಷ್ಟ “ಮನುಷ್ಯರಿಗೆ ಮಾತ್ರ”.
ಈ ಹಸಿರೀಕರಣಕ್ಕೆ ನಾವು ಕಾಲಾಂತರಗಳಲ್ಲಿ ಅಳವಡಿಸಿಕೊಂಡ ಸೂತ್ರಗಳು, ಪದ್ಧತಿಗಳನ್ನು ಗಮನಿಸಿದರೆ ನಾವು ಮಾಡಿದ ತಪ್ಪು ನಿರ್ಧಾರಗಳು ನಮ್ಮ ಕಣ್ಣೆದುರೆ ನಿಲ್ಲುತ್ತವೆ. ಈ ಸೂತ್ರಗಳ ಹಿಂದೆ ಅರಣ್ಯ ಇಲಾಖೆ, ಸರ್ಕಾರದ ಯೋಜನೆಗಳ ಕೈ ಕೂಡ ಶಾಮೀಲು.
ಮೊದಲಿಗೆಲ್ಲ ನಮ್ಮ ಯೋಜನೆಯಿದ್ದದ್ದು ಆರ್ಥಿಕ ಆದಾಯಗಳುಳ್ಳ ಮರಗಳನ್ನು ಬೆಳೆಸುವುದು (ಉದಾ :ಅಕೇಶಿಯ, ನೀಲಗಿರಿ). ನಾವು ಒಂದೇ ಹೂಡಿಕೆಯಿಂದ ಪ್ರಾಣವಾಯು, ಹಣ ಎರಡನ್ನೂ ಸಂಪಾಡಿಸುವ ಅಂದಾಜಿನಲ್ಲಿದ್ದೆವು. ನಂತರದ ದಿನಗಳಲ್ಲಿ ನಮಗೆ ತಿಳಿಯಿತು. ಈ ರೀತಿಯ ಮರಗಳು ಮಣ್ಣಿನ ಸತ್ವಸಾರಗಳನ್ನು ಬರಿದು ಮಾಡಿ, ನಿಸರ್ಗದಲ್ಲಿನ ಶೀತವನ್ನು ಹೀರಿಕೊಂಡು, ಸುತ್ತಲಿನ ತಾಪಮಾನವನ್ನು ಏರಿಸುತ್ತದೆ ಹಾಗೂ ಇವುಗಳ ಸುತ್ತಮುತ್ತ ಅನ್ಯ ರೀತಿಯ ಗಿಡಗಳು ಬೆಳೆಯದಂತೆ ಇವು ತಡೆಯುತ್ತವೆ ಎಂದು. ಹಾಗಾಗಿ ನಾವು ನಮ್ಮ ಉಪಾಯಗಳನ್ನು ಬದಲಾಯಿಸಿಕೊಂಡೆವು ಹಣ್ಣಿನ ಮರಗಳನ್ನು ಬೆಳೆಸುವ ಯೋಜನೆಯನ್ನು ಹೊಂದಿದೆವು. ಇದರ ಹಿಂದಿನ ಉದ್ದೇಶ ಒಳ್ಳೆಯದೇ. ಗಿಡ ಬಿಡುವ ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತದೆ. ಇವುಗಳಿಂದ ಪಸರಿಸಲ್ಪಡುವ ಹಣ್ಣಿನ ಬೀಜಗಳಿಂದ ಹೊಸ ಸಸಿಯೊಂದರ ಹುಟ್ಟಾಗುತ್ತದೆ. ಈ ಉಪಾಯ ಮೇಲ್ನೋಟಕ್ಕೆ ಅದ್ಭುತವೆಂದು ತೋರುತ್ತದೆ.
ಆದರೆ ಕಾಡುಗಳು ಹೇಗೆ ನಿರ್ಮಾಣಗೊಳ್ಳುತ್ತವೆ? ಪ್ರಕೃತಿಯಲ್ಲಿ ಹಣ್ಣು ಕೊಡದ ಸಸ್ಯ ಪ್ರಭೇದಗಳ ವೈವಿಧ್ಯತೆ, ಪ್ರಾಮುಖ್ಯತೆಗಳನ್ನು ನೋಡಿದರೆ ನಮ್ಮ ಅದ್ಭುತ ಉಪಾಯ ತನ್ನ ಉಪಯುಕ್ತತೆ ಕಳೆದುಕೊಳ್ಳುತ್ತದೆ. ಒಂದು ಕಾಡು ನಿರ್ಮಿತವಾಗಬೇಕಾದರೆ ಮೊದಲು ಪಾಚಿಗಳ ಪದರ ಬೆಳೆದು ಕಲ್ಲು-ಖನಿಜಗಳನ್ನು ಮಣ್ಣನ್ನಾಗಿ ಮಾಡಿ. ಅದರ ಮೇಲೆ ಫರ್ನ್,ಮಾಸಸ್(Ferns Mosses) ಬೆಳೆದು ಮಣ್ಣನ್ನು ಹದಗೊಳಿಸಿ, ತದನಂತರ ಹುಲ್ಲು ಗಿಡಗಳು ಬೆಳೆದು,ಕೆಲವು ಗಿಡವು ಮರವಾಗುತ್ತವೆ. ಇಷ್ಟು ಕ್ಲಿಷ್ಟ ಹಾಗೂ ಸಮಯ ಯಾಚಕ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಹಲವು ಸೂಕ್ಷ್ಮಜೀವಿಗಳ, ಪ್ರಾಣಿಕೀಟಗಳ ಸಂಯುಕ್ತತೆಯು ಸಹಕರಿಸುತ್ತದೆ. ಅಲ್ಲೊಂದು ಸಮತೋಲಿತ ವ್ಯವಸ್ಥೆ ರೂಪುಗೊಳ್ಳುತ್ತದೆ.
ಆದರೆ ಗಿಡಗಳನ್ನಷ್ಟೇ ನೆಟ್ಟಾಗ, ಆ ಗಿಡಕ್ಕೆ ಸಹಕರಿಸುವ ಅಥವಾ ಅವಲಂಬಿತವಾದ ಜೀವಿಗಳು ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ತದನಂತರ ಪಾಚಿ ಹುಲ್ಲುಗಳ ಬೆಳವಣಿಗೆ ಆಗುತ್ತದೆಯಾದರೂ ಅದೊಂದು ವ್ಯವಸ್ಥಿತ ಸಮತೋಲಿತ ವ್ಯವಸ್ಥೆಯಲ್ಲ. ನಾವು ರಸ್ತೆ ಕಟ್ಟಡಗಳನ್ನು ಮಾಡುವಾಗ ಪ್ರಕೃತಿಯ ಪ್ರಾಣಿ, ಪಕ್ಷಿ, ಕೀಟ, ಕಲ್ಲು, ನೀರ ಒರತೆ, ಮಣ್ಣು ಸಕಲವನ್ನು ನಾಶ ಮಾಡುತ್ತೇವೆ, ಆದರೆ ಪರಿಸರದ ಪುನಶ್ಚೇತನಕ್ಕೆ ಒಂದು ಗಿಡವನ್ನು ನೆಟ್ಟು ಸುಮ್ಮನಾಗುತ್ತೇವೆ. ಇದು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಸಾಮರಸ್ಯದಲ್ಲಿರುವ ವ್ಯವಸ್ಥೆ.ಅದರ ಅಡಿಪಾಯವನ್ನೆಲ್ಲ ತೆಗೆದು ಒಂದು ಗೋಡೆಯನ್ನಷ್ಟೇ ನಿಲ್ಲಿಸಿದರೆ ಅದನ್ನು ‘ಮನೆ’ ಎಂದು ಹೇಗೆ ಕರೆಯಲಾದೀತು?. ನಾವು ಗಿಡಗಳನ್ನು ನೆಡಬಹುದು ಆದರೆ ಪ್ರಕೃತಿ ತನ್ನನ್ನು ತಾನು ಕಟ್ಟಿಕೊಳ್ಳುವ ಪ್ರಕ್ರಿಯೆ ವಿಧಾನಗಳನ್ನು ನಾವು ಅರ್ಥೈಸಿಕೊಂಡು ಅದನ್ನು ಮರುಸೃಷ್ಟಿ ಮಾಡುವುದು ಬಹುಷಃ ಅಸಾಧ್ಯ. ಹಾಗಾಗಿ ಗಿಡ ನೆಡುವುದು, ನಾವು ಸೃಷ್ಟಿಸಿದ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರವಾಗಲಾರದು. ಏಕೆಂದರೆ ಈ ಯೋಜನೆ ಎಲ್ಲ ಜೀವಿಗಳ ಶ್ರೇಯವನ್ನು ಒಳಗೊಂಡ ಉಪಾಯವಲ್ಲ.
ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?. ಬಹುಷಃ ಮನುಜ ‘ತಾನು’ ಎಲ್ಲದಕ್ಕೂ ಉತ್ತರ ಕಂಡುಹಿಡಿಯುತ್ತಾನೆ ಎಂಬುದು ಮನುಜನ ಅಹಂಕಾರ. ಪ್ರಕೃತಿಯ ವಿಷಯದಲ್ಲಿ ಅದಕ್ಕೆ ತನ್ನನ್ನು ತಾನು ಕಟ್ಟಿಕೊಳ್ಳುವ, ಕಂಡುಕೊಳ್ಳುವ ಸಾಮರ್ಥ್ಯವಿದೆ. ನಾವು ಪ್ರಕೃತಿಯ ಪ್ರಕ್ರಿಯೆಗಳಲ್ಲಿ ಮೂಗು ತೂರಿಸದಿದ್ದರೆ, ಅದು ಪ್ರಕೃತಿಯ ಉಳಿವಿಗೆ ನಾವು ಮಾಡುವ ದೊಡ್ಡ ಉಪಕಾರ. ಈ ಪ್ರಕೃತಿಯೆ ನಮ್ಮನ್ನು ರೂಪಿಸಿದ್ದು ಎಂಬುದನ್ನುನಾವು ಮರೆಯಬಾರದು. ಅಷ್ಟಕ್ಕೂ ನೂರು ಮರಗಳನ್ನು ಕಡಿದು ಹತ್ತು ಸಸಿಗಳನ್ನು ನೆಡುವುದು, ಕಡಿಯಲ್ಪಟ್ಟ ಮರ ಅದರ ಬೆಳವಣಿಗೆಗೆ ತೆಗೆದುಕೊಂಡ ಸಮಯ ಅದು ಬಳಸಿಕೊಂಡ ಪ್ರಾಕೃತಿಕ ಸವಲತ್ತುಗಳ ಮೌಲ್ಯವನ್ನು ನಾವು ಅವಮಾಣನಿಸಿದಂತೆ ಅಲ್ಲವೇ?. ಹಾಗಾಗಿ ಈ ಪ್ರಕೃತಿಯ ಬಗ್ಗೆ ನಮಗಿರುವ ಕಲ್ಪನೆ ಹಾಗೂ ಜ್ಞಾನ ಯಾವ ರೀತಿಯಲ್ಲೂ ಸಂಪೂರ್ಣವಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು.
ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?
– ರಾಘವೇಂದ್ರ ಅಡಿಗ ಎಚ್ಚೆನ್.
ಯುದ್ಧ …
ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ. ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ. ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8 ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!
ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ? ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.
ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?
ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ. ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.
ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು! ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ? ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.
ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ. ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ. ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ. ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ. 1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?
ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ.