ವಿಷಯದ ವಿವರಗಳಿಗೆ ದಾಟಿರಿ

ಜನವರಿ 3, 2025

2

ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಹಿಂದಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಹೊಸ ಪುಸ್ತಕ “ಟಿಪ್ಪು ಸುಲ್ತಾನ್” ಕುರಿತು ಚರ್ಚಿಸುತ್ತ, ಲೇಖಕ ವಿಕ್ರಂ ಸಂಪತ್ ಅವರು, “ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಟಿಪ್ಪು ಜಯಂತಿ ಅಂತ ಮಾಡಿ ಬಳಸಿಕೊಂಡರು. ಬಿಜೆಪಿಯವರು, ಮೈಸೂರಿನ ಇತಿಹಾಸದಲ್ಲಿ ಬ್ರಿಟಿಷರು, ಮೈಸೂರಿನವರಿಂದ ಎಲ್ಲೂ ದಾಖಲಾಗದ ಉರಿಗೌಡ, ನಂಜೇಗೌಡ ಎನ್ನುವ ಫಿಕ್ಷನಲ್ ಕ್ಯಾರೆಕ್ಟರ್ ಗಳನ್ನು ಕಳೆದ ಚುನಾವಣೆಯಲ್ಲಿ ಸೃಷ್ಟಿಸಿ ಆಗಿನ ಎದುರಾಳಿಯಾಗಿದ್ದ ಜೆಡಿಎಸ್ ಪಕ್ಷದಿಂದ ಒಕ್ಕಲಿಗರ ಮತಗಳಿಸಲು ವ್ಯರ್ಥ ಪ್ರಯತ್ನ ಮಾಡಿದರು. ಕಡೆಗೆ ಒಕ್ಕಲಿಗ ಸಂಘದವರು, ನಮ್ಮ ಹೆಸರಿನಲ್ಲಿ ಸುಳ್ಳುಗಳನ್ನು ಹರಡಬೇಡಿ ಎಂದು ಆದೇಶ ನೀಡಿದ ನಿಂತರ ವಿಷಯಕ್ಕೆ ಮುಕ್ತಾಯ ಹಾಡಲಾಯಿತು.” ಎಂದಿದ್ದರು (ವಿಡಿಯೋ ಕೊಂಡಿ ಕಮೆಂಟ್ ಬಾಕ್ಸಿನಲ್ಲಿ). ಇದೇ ಮಾತನ್ನು ಅವರು ಪುಸ್ತಕದಲ್ಲಿಯೂ ಬರೆದಿದ್ದಾರೆ.

    ವಿಕ್ರಂ ಸಂಪತ್ ಹೇಳಿದ ಮಾತು ನಿಜವೇ. ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿವೆ. ಆದರೆ, ಕೇವಲ ರಾಜಕೀಯ ಪಕ್ಷಗಳು ಮಾತ್ರ ಬಳಸಿಕೊಂಡಿವೆಯೇ?

    ಇತಿಹಾಸಕಾರರು ತಮ್ಮ ಐಡಿಯಾಲಾಜಿಕಲ್ ಕ್ಯಾಂಪ್ ಬದಲಾದಾಗ, ತಾವಿರುವ ಕ್ಯಾಂಪಿನ ಗುಣಧರ್ಮಕ್ಕೆ ಹೊಂದುವಂತೆ ಇತಿಹಾಸವನ್ನು ಬಳಸಿಕೊಂಡಿಲ್ಲವೇ?

    ಇಬ್ಬರು ಇತಿಹಾಸಕಾರರ ಉದಾಹರಣೆಯನ್ನು ಕೊಡುತ್ತೇನೆ.

    ಮೊದಲಿಗರು ಪ್ರೊ.ನಂಜರಾಜ ಅರಸ್ ಅವರು. ಒಂದು ಕಾಲದಲ್ಲಿ “ಮೈಸೂರು ನೂರಿನ್ನೂರು ವರ್ಷಗಳ ಹಿಂದೆ” ಎನ್ನುವ ಪುಸ್ತಕವನ್ನು ಇವರು ಬರೆದಿದ್ದರು. ಬಹಳ ಚಂದದ ಪುಸ್ತಕ. ಆ ಪುಸ್ತಕದಲ್ಲಿ ಒಡೆಯರ್ ವಂಶವನ್ನು ಹೊಗಳಿ, ಟಿಪ್ಪುವನ್ನು ತೆಗಳಿ ಬರೆದಿದ್ದರು. ಅದೇ ಪುಸ್ತಕದ ಲೇಖಕರ ಅಭಿಪ್ರಾಯದಲ್ಲಿ, ಟಿಪ್ಪುವಿನ ಬಗ್ಗೆ ಸತ್ಯಾಂಶವನ್ನು ಹೇಳಿದ್ದರಿಂದ ಬರಗೂರು ರಾಮಚಂದ್ರಪ್ಪ ಇತ್ಯಾದಿ ಸೆಕ್ಯುಲರ್ ಸಾಹಿತಿ,ಚಿಂತಕರಿಂದ ಟೀಕೆ ವ್ಯಕ್ತವಾದ ಬಗ್ಗೆಯೂ ಬರೆದುಕೊಂಡಿದ್ದರು.

    ಕಾಲ ಚಕ್ರ ಉರುಳಿತು. ಅದೇನು ಕಾರಣವೋ ಗೊತ್ತಿಲ್ಲ ನಂಜರಾಜ ಅರಸ್ ಅವರು ಒಡೆಯರ್ ವಂಶವನ್ನು ಟೀಕಿಸುತ್ತಾ, ಟಿಪ್ಪುವನ್ನು ಹೊಗಳಲು ಆರಂಭಿಸಿದರು. ನಂತರ “ಟಿಪ್ಪು ಮಾನ್ಯತೆ ಸಿಗದ ಸುಲ್ತಾನ” ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಮೊದಲ ಪುಸ್ತಕದಲ್ಲಿ ಹೊಗಳಿದ್ದನ್ನು ಇದರಲ್ಲಿ ತೆಗಳಿದರು. ಮೊದಲು ತೆಗಳಿದವರನ್ನು ಈಗ ಹೊಗಳಿ, ಅವನೊಬ್ಬ ನತದೃಷ್ಟ ಮಹಾನ್ ನಾಯಕ ಎಂಬಂತೆ ಚಿತ್ರಿಸಿದರು. (ಎರಡೂ ಅಭಿರುಚಿ ಪ್ರಕಾಶನದಿಂದ ಪ್ರಕಟಿತ)

    ಮತ್ತೊಬ್ಬ ಇತಿಹಾಸಕಾರರ ಉದಾಹರಣೆ ಕೊಡುವ ಮೊದಲು, ಅವರ ಪುಸ್ತಕಗಳಲ್ಲೇ ಉಲ್ಲೇಖವಾಗಿರುವುದನ್ನು ತೋರಿಸುತ್ತೇನೆ ನೋಡಿ.

    “ವರ್ತಮಾನದ ಹಾಸ್ಯಾಸ್ಪದ ರಾಜಕೀಯ ಸನ್ನಿವೇಶಗಳ ಸಂದರ್ಭದಲ್ಲಿ ನಾವು ಸೃಷ್ಠಿಸಿಕೊಂಡಿರುವ ಮಾನದಂಡಗಳ ಮೂಲಕ ಭೂತಕಾಲದ ಜನರನ್ನು ನಿರ್ಣಯಿಸುವುದು ಸಂಪೂರ್ಣವಾಗಿ ನಿರರ್ಥಕವೆಂದು ತೋರುತ್ತದೆ. ಹಿಂದಿನ ಕಾಲದ ಈ ವೀರರು ಅವರ ಸಮಯ ಮತ್ತು ಸಂದರ್ಭಗಳ ಉತ್ಪನ್ನಗಳೆಂದು ಅರಿತುಕೊಳ್ಳಬೇಕು. ವರ್ತಮಾನದ ನೈತಿಕತೆಯ ಕನ್ನಡಕದಲ್ಲಿ ಅವರ ಬಗ್ಗೆ ತೀರ್ಪು ನೀಡುವುದು ಸರಿಯಲ್ಲ. ಟಿಪ್ಪು ಕೂಡ ಇತರ ಎಲ್ಲರಂತೆ ವಿವಿಧ ಭಾವನೆಗಳಿರುವ ಮನುಷ್ಯರಾಗಿದ್ದರು. ಅವರಿಗೆ ಶುದ್ಧ ಕಪ್ಪು ಅಥವಾ ಬಿಳಿ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ತೋರುತ್ತದೆ…”

    “… ನಿಸ್ಸಂದೇಹವಾಗಿ, ಟಿಪ್ಪು ಒಬ್ಬ ಮಹಾನ್ ಆಡಳಿತಗಾರ. ಅವರ ಕಾಲಕ್ಕಿಂತ ಮುಂದಿನದನ್ನು ಗ್ರಹಿಸಬಲ್ಲ ದಾರ್ಶನಿಕನಾಗಿದ್ದರು. ಹಿಂದೆ (ಹಿಂದಿನ ಅಧ್ಯಾಯಗಳಲ್ಲಿ) ಚರ್ಚಿಸಿದಂತೆ ಅವರ ಪ್ರಗತಿಪರ ಕ್ರಮಗಳು, ಮೈಸೂರು ರಾಜ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಂದಿನ ದುರ್ಬಲ ಒಡೆಯರ್‌ಗಳ ಅಡಿಯಲ್ಲಿ (ಮೈಸೂರು ರಾಜ್ಯ) ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿಯುತ್ತಿತ್ತು…”

    ಟಿಪ್ಪು ಬಗ್ಗೆ ಇಷ್ಟು ಪ್ರೀತಿಯಿಂದ ಮಾತನಾಡಿದವರು ಯಾರಿರಬಹುದು? ಯಾರೋ ಸೆಕ್ಯುಲರ್ ಇತಿಹಾಸಕಾರರಲ್ಲ. ಈದೀಗ ಬಿಜೆಪಿ ಆಂಡ್ ಪರಿವಾರದವರ ಕಣ್ಮಣಿಯಾಗಿರುವ ಲೇಖಕ ವಿಕ್ರಂ ಸಂಪತ್ ಅವರೇ. (ಪುಸ್ತಕ : ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು. ಅಧ್ಯಾಯ : ದಿ ಲೆಗೆಸಿ ಆಫ್ ಟೀಪು ಸುಲ್ತಾನ್. ಪುಟ.ಸಂ ೩೭೩. ರೂಪ ಪಬ್ಲಿಕೇಷನ್ಸ್, ೨೦೦೮)

    ಆಗ ಹಾಗೆ ಬರೆದವರು, ಈಗ ತಮ್ಮ ಹೊಸ ಪುಸ್ತಕದಲ್ಲಿ ಟಿಪ್ಪು ಕುರಿತು ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಗೊತ್ತೇ? (ಪು: ಟಿಪ್ಪು ಸುಲ್ತಾನ್ , ಅಧ್ಯಾಯ : ಎ ಬ್ಲಡೀಡ್ ಲೆಗೆಸಿ. ಪುಟ ಸಂ. ೬೭೩-೬೭೪. ಪೆಂಗ್ವಿನ್ ಪಬ್ಲಿಕೇಷನ್, ೨೦೨೪)

    “ಅವರದೇ ಪತ್ರಗಳು, ಅವರ ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಅವರ ಸ್ವಂತ ಕನಸಿನ ಬಗೆಗಿನ ದಾಖಲಾತಿಗಳ ಬರಹಗಳಿಂದ, ಟಿಪ್ಪು ಮುಸ್ಲಿಮೇತರರ ಬಗ್ಗೆ ಅಪಾರವಾದ ದ್ವೇಷವನ್ನು ಹೊಂದಿದ್ದರು ಮತ್ತು ಅವರ ವಿರುದ್ಧ ಪವಿತ್ರ ಯುದ್ಧವನ್ನು (ಜಿಹಾದ್) ನಡೆಸುವುದು ತನ್ನ ಬದ್ಧ, ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಿದ್ದರು ಎನ್ನುವುದು ಸ್ಪಷ್ಟವಾಗಿದೆ…”

    “… ಹೈದರ್‌ನಂತೆ, ಟಿಪ್ಪು ಕೂಡ, ಹಿಂದೂ ಬಹುಸಂಖ್ಯಾತರನ್ನು ಒಳಗೊಂಡಿರುವ ಮೈಸೂರು ಸಾಮ್ರಾಜ್ಯದ ಪ್ರಜೆಗಳಿಗೆ, ತನ್ನ ತಂದೆಯಿಂದ ಅಧಿಕಾರ ಕಳೆದುಕೊಂಡ ಒಡೆಯರ್ ಕುಟುಂಬದ ಬಗ್ಗೆ ಅಪರಿಮಿತವಾದ ಗೌರವ ಮತ್ತು ಮೃದು ಧೋರಣೆಯಿದೆ ಎನ್ನುವುದನ್ನು ಅರಿತುಕೊಂಡಿದ್ದರು. ಮೈಸೂರಿನಲ್ಲಿ ಬಹಿರಂಗವಾಗಿ ಯಾವುದೇ ರೀತಿಯ ಧಾರ್ಮಿಕ ಬದಲಾವಣೆಯ ಪ್ರಯತ್ನಗಳಲ್ಲಿ ತೊಡಗಿಕೊಂಡರೆ, ಪ್ರಜೆಗಳ ನಡುವೆ ಕುದಿಯುತ್ತಿರುವ ಕೋಪವು ಪೂರ್ಣ ಪ್ರಮಾಣದ ದಂಗೆಯಾಗಿ ಬದಲಾಗಬಹುದು ಎಂದು ಅವರು ತಿಳಿದಿದ್ದರು. ಯುದ್ಧರಂಗದಲ್ಲಿ ಅನೇಕ ಶತ್ರುಗಳೊಂದಿಗೆ ರಕ್ತಸಿಕ್ತ ಯುದ್ಧಗಳಲ್ಲಿ ತೊಡಗಿರುವಾಗ ಮತ್ತು ಇತರ ಸ್ಥಳಗಳಲ್ಲಿ ದಂಗೆಗಳನ್ನು ಅಡಗಿಸುವಲ್ಲಿ ಮಗ್ನರಾಗಿರುವಾಗ ಇದನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು… ಆದರೆ, ಅವರ ಆಲೋಚನೆಗಳು, ಅವರ ಬರಹ ಅವರ ಕನಸುಗಳು, ತಮ್ಮ ನಂಬಿಕೆಯ ಜೊತೆಗೆ ಇಲ್ಲದ ಜನರೆಡೆಗೆ ಸಹಜವಾದ ದ್ವೇಷವನ್ನು ಮತ್ತು ಅಂತವರನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವ ಆಲೋಚನೆ ಅವರ ಮನಸ್ಸಿನಲ್ಲಿ ನಿರಂತರವಾಗಿತ್ತು ಎನ್ನುವುದನ್ನು ತೋರಿಸಿಕೊಡುತ್ತವೆ.”

    ಇದಿಷ್ಟೇ ಅಲ್ಲ. ಮೊದಲ ಪುಸ್ತಕದಲ್ಲಿ ಶ್ರೀರಂಗಪಟ್ಟಣದ ಮೂಡಲು ಬಾಗಿಲು ಕೋಟೆ ಆಂಜನೇಯ ದೇವಸ್ತಾನವನ್ನು ಕೆಡವಿ ಮಸೀದಿ ಮಾಡಿದ ಕುರಿತು ಏನು ವಿವರವಾಗಿ ಬರೆದಿಲ್ಲ. ಬಹುಶಃ ಲೇಖಕರ ಆಗಿನ ಮನಸ್ಥಿತಿಗೆ ಅದು ಪೂರಕವಾಗಿರಲಿಲ್ಲವೇನೋ. ಅದೇ ಘಟನೆಯನ್ನು ಹೊಸ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈಗ ಆಂಜನೇಯ ನೆನಪಾಗಿದ್ದಾನೆ.

    ಮೊದಲ ಪುಸ್ತಕದಲ್ಲಿ ಟಿಪ್ಪುವನ್ನು ಟೈಗರ್, ಸುಲ್ತಾನ್ ಈ ಖುದಾದಾದ್ ಇತ್ಯಾದಿಯಾಗಿ ಹೊಗಳಲಾಗಿದೆ. ಉದಾಹರಣೆಗೆ, ಟಿಪ್ಪುವಿನ ಮೃತ ದೇಹವನ್ನು ಬ್ರಿಟಿಷರು ಹುಡುಕಿದ ಸಂದರ್ಭದಲ್ಲಿ, “ಟಿಪ್ಪುವಿನ ದೇಹ ಸಿಕ್ಕರೂ, ಹುಲಿ ಇನ್ನೂ ಜೀವಂತ ಇರಬಹುದು ಎಂದು ಮುಟ್ಟಲು ಬ್ರಿಟಿಷರು ಹೆದರಿದರು.” ಎಂದು ವರ್ಣಿಸಿದ್ದಾರೆ. ಹೊಸ ಪುಸ್ತಕದಲ್ಲಿ ಟೈಗರ್ ನಾಪತ್ತೆಯಾಗಿದೆ, ‘ಸುಲ್ತಾನ್ ಈ ಖುದಾದಾದ್’ ಹೋಗಿ ‘ಸರ್ಕಾರ್ ಈ ಖುದಾದಾದ್’ ಆಗಿದೆ.

    ಮೊದಲ ಪುಸ್ತಕದಲ್ಲಿ ಟಿಪ್ಪು ರಾಕೆಟ್ ಪಿತಾಮಹ ಎಂಬ ಸೆಕ್ಯುಲರ್ ಕಲ್ಪನೆಯನ್ನೇ ಯಥಾವತ್ ಚಿತ್ರಿಸಲಾಗಿದ್ದರೇ, ಹೊಸ ಪುಸ್ತಕದಲ್ಲಿ ರಾಕೆಟ್ ಬಳಕೆ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಿರುವುದರ ಬಗ್ಗೆ ಎಲ್ಲಾ ಹೇಳುತ್ತಾ, ಇದ್ದಿದ್ದನ್ನು ಇವರು ಇಂಪ್ರೂವ್ ಮಾಡಿಕೊಂಡಿದ್ದಾರೆ ಎನ್ನುತ್ತಾರೆ.

    ಮೊದಲ ಪುಸ್ತಕದಲ್ಲಿ ಕೊಡಗಿನಲ್ಲಿ ಟಿಪ್ಪು ನಡೆಸಿದ ದಮನಕಾರಿ ಯುದ್ಧಗಳ ಬಗ್ಗೆ ಮಾತನಾಡುತ್ತಾ, ಕೊಡವರಿಗೆ ಭೋಜನ ಕೂಟವನ್ನು ಏರ್ಪಡಿಸುವ ಮೂಲಕ ಅವರ ಜೊತೆಗಿನ ಯುದ್ಧಕ್ಕೆ ಕೊನೆ ಹಾಡಿದರು ಎಂದು ಬರೆದಿದ್ದಾರೆ. ಹೊಸ ಪುಸ್ತಕದಲ್ಲಿ ದೇವಾಟ್ ಪರಂಬು ಹತ್ಯಾಕಾಂಡದ ನೆನಪಾಗಿದೆ. ಐ.ಮಾ ಮುತ್ತಣ್ಣ,ಪಟ್ಟೋಲೆ ಪಳಮೆ, ಅಡ್ಡಂಡ ಕಾರ್ಯಪ್ಪ ಅವರ ಈ ಕುರಿತು ಬರೆದಿರುವುದಾಗಿ ಹೇಳಿದ್ದಾರೆ.

    ಇದು ವಿಕ್ರಂ ಹೇಳಿಕೆಯ ಮೊದಲ ಭಾಗವಾದ ಟಿಪ್ಪುವನ್ನು “ಬಳಸಿಕೊಂಡ” ಬಗ್ಗೆಯಾದರೇ, ಹೇಳಿಕೆಯ ಎರಡನೇ ಭಾಗವಾದ “ಬ್ರಿಟೀಷ್ , ಮೈಸೂರಿನ ಯಾವ ಇತಿಹಾಸಕಾರನೂ ದಾಖಲಿಸಿದ ಇಬ್ಬರನ್ನು ಬಿಜೆಪಿ ಸೃಷ್ಠಿಸಿತು” ಎಂದಿದ್ದಾರಲ್ಲ ಅದರ ಬಗ್ಗೆಯೂ ಬೆಳಕು ಚೆಲ್ಲಬೇಕಾದ ಸಮಯವಿದು.

    ಟಿಪ್ಪು ಸುಲ್ತಾನ್ ಪುಸ್ತಕದಲ್ಲಿ ತಮಗೆ ಸಹಾಯ ಮಾಡಿದ ಬಿಜೆಪಿಯ ನಾಯಕರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ನಾಯಕರ ಸಾಲಿನಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಹೆಸರು ಕಾಣಿಸಲಿಲ್ಲ! ಏಕೆಂದರೆ ಟಿಪ್ಪು ನಿಜ ಕನಸುಗಳು ಎಂಬ “ನಾಟಕ” ವನ್ನು ರಚಿಸಿದ ಅಡ್ಡಂಡ ಕಾರ್ಯಪ್ಪನವರು ನನಗೆ ತಿಳಿದ ಮಟ್ಟಿಗೆ ಆಗ ರಂಗಾಯಣದ ನಿರ್ದೇಶಕರಾಗಿದ್ದರೇ ಹೊರತು ಬಿಜೆಪಿಯ ಪದಾಧಿಕಾರಿಯೇನೂ ಆಗಿರಲಿಲ್ಲ. ಹೀಗಿದ್ದಾಗ ಬಿಜೆಪಿಯವರ ಸೃಷ್ಟಿ ಎಂದು ಹೇಳುವ ಬದಲಿಗೆ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಅವರ ಸೃಷ್ಟಿ ಎಂದು ನೇರವಾಗಿ ಹೇಳಬಹುದಿತ್ತಲ್ಲ? ಬಿಜೆಪಿಯೆಂದರೇ ಸಾರ್ವಜನಿಕ ಜಾಗದಲ್ಲಿರುವ ಗಂಟೆ ಯಾರಾದರೂ ಬಂದು ಸುಲಭವಾಗಿ ಬಡಿದು ಹೋಗಬಹುದು ಎನ್ನುವ ಕಾರಣಕ್ಕೆ ಹಾಗೆ ಹೇಳಿದರೇ?

    ಆದರೆ, ಈ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿಯ ನಾಯಕರು ಹೆಡ್ಡರಂತೆ ಮುಂದೆ ಬಂದಿದ್ದೇನೂ ಸುಳ್ಳಲ್ಲ.(ಮುಂದೆ ಬಂದರೋ, ಮುಂದೆ ಹೋಗಿ ಎಂದು ಸೂಚನೆ ನೀಡಲಾಯಿತೋ?) , ಆಗುತ್ತಿದ್ದ ರಗಳೆ ಸಾಲದು ಎಂಬಂತೆ ಆ ಕುರುಕ್ಷೇತ್ರದ ಮುನಿರತ್ನ ನಿರ್ಮಾಪಕರಾಗಿ, ಆರ್. ಅಶೋಕ್-ಸಿ.ಟಿ ರವಿ ಅರ್ಪಿಸುವ, ಅಶ್ವತ್ ನಾರಾಯಣ್ ಚಿತ್ರಕಥೆ ಅಂತೆಲ್ಲಾ ಚೀಪ್ ಕ್ವಾಲಿಟಿಯ ಪೋಸ್ಟರ್ ಅನ್ನು ಬಿಟ್ಟು ವಿಷಯದ ಗಂಭೀರತೆಯನ್ನು ಎಷ್ಟು ಹಾಳು ಮಾಡಲು ಸಾಧ್ಯವಿತ್ತೋ ಅದೆಲ್ಲವನ್ನೂ ಮಾಡಿದರು ಪುಣ್ಯಾತ್ಮರು. ಆ ಸಂದರ್ಭ ಪೂಜ್ಯ ನಿರ್ಮಲಾನಂದ ಶ್ರೀಗಳು ಬಂದು ಈ ಅಸಹ್ಯವನ್ನು ನಿಲ್ಲಿಸದೇ ಇದ್ದಿದ್ದರೇ, ಈ ಪ್ರಹಸನದ ಹಿಂದೆ ಇದ್ದ ಬುದ್ಧಿವಂತ ಸ್ಟಾಟರ್ಜಿಸ್ಟುಗಳು ಇನ್ನೇನು ಮಾಡುವವರಿದ್ದರೋ?

    ಈ ನಾಟಕವನ್ನು ಬರೆದ ಕಾರ್ಯಪ್ಪನವರಿಗೆ, ಈ ಹೋರಾಟಗಾರರ ಬಗ್ಗೆ ಬೇಸಿಕ್ ಇತಿಹಾಸವೂ ಗೊತ್ತಿಲ್ಲ ಎನ್ನುವುದನ್ನು ಖುದ್ದು ಅವರೇ ಮಾಧ್ಯಮಗಳ ಮುಂದೆ ತೋರಿಸಿಕೊಂಡರು. ಖಾಸಗಿ ವಾಹಿನಿಯ ಪ್ರಖ್ಯಾತ ಸಂವಾದ ಕಾರ್ಯಕ್ರಮವೊಂದರಲ್ಲಿ ಕುಳಿತ ಅಡ್ಡಂಡ ಕಾರ್ಯಪ್ಪನವರಿಗೆ, ಪ್ರೇಕ್ಷಕರ
    ಗ್ಯಾಲರಿಯಲ್ಲಿದ್ದವರೊಬ್ಬರು ಕೇಳಿದರು, ಇತಿಹಾಸದಲ್ಲಿ ಎಲ್ಲಿ “ಉರಿಗೌಡ, ನಂಜೇಗೌಡರ ಬಗ್ಗೆ ದಾಖಲಾಗಿದೆ?”. ಕಾರ್ಯಪ್ಪನವರ ಉತ್ತರ “ಮಲಬಾರ್ ಮ್ಯಾನುವಲ್” ನೋಡಿ ಎಂದಾಗಿತ್ತು. ಅಸಲಿಗೆ ಮಲಬಾರ್ ಮ್ಯಾನುವಲ್ ಅಲ್ಲಿರುವುದು ಏನೆಂದರೆ, ಮಲಬಾರಿನ ಜನರ ಆಚಾರ, ವಿಚಾರ, ಉಡುಗೆ, ತೊಡುಗೆ, ಜೀವನ ಶೈಲಿ ಇತ್ಯಾದಿ. ಇವರಿಬ್ಬರ ಉಲ್ಲೇಖ ಅಲ್ಯಾಕೆ ಬರುತ್ತದೆ? ಈ ಕಾಲದಲ್ಲೂ ಜನರು ದಡ್ಡರು, ನಾವು ಮಾತ್ರ ಬುದ್ಧಿವಂತರು ಅಂತ ಹೊರಡುವವರಿಗೆ ಏನು ಹೇಳಬೇಕು?

    ಪುಸ್ತಕಗಳು, ನಾಟಕದ ಟಿಕೆಟ್ ಗಳು ಭರ್ಜರಿಯಾಗಿ ಮಾರಾಟವಾಗಿ ಸಂಬಂಧಪಟ್ಟವರಿಗೆ ಭರ್ಜರಿ ಆರ್ಥಿಕ ಲಾಭವೇ ಆಗಿರಬಹುದು. ಆದರೆ, ನಷ್ಟವಾಗಿದ್ದು ಯಾರಿಗೆ ಗೊತ್ತೇ? ಟಿಪ್ಪುವಿನ ವಿರುದ್ಧ ನಿಜಕ್ಕೂ ತೊಡೆ ತಟ್ಟಿದ್ದ ಆ ಜೀವಗಳಿಗೆ. ಗಂಭೀರ ಅಕಾಡೆಮಿಕ್ ಚರ್ಚೆಯಾಗಬೇಕಾಗಿದ್ದ ಸ್ಥಳೀಯರ ಹೋರಾಟ ಅಧ್ಯಾಯವೊಂದು ಟ್ರೋಲ್ ಗೆ ಒಳಗಾಯಿತು. ಬರೆದವರಿಗೆ, ಬರೆಸಿದವರಿಗೆ ಲಾಭವಾಯಿತು, ವಿಷಯ ಸತ್ತು ಹೋಯಿತು.

    ವಿಕ್ರಂ ಸಂಪತ್ ಅವರು ಈ ಕುರಿತು ಇತಿಹಾಸದಲ್ಲಿ ಎಲ್ಲೂ ದಾಖಲಾಗಿಲ್ಲ ಎಂದು ಮೈಸೂರಿನ ಇತಿಹಾಸದಲ್ಲಿ ನನಗೆ ಗೊತ್ತಿಲ್ಲದ್ದು ಏನೂ ಇಲ್ಲವೇ ಇಲ್ಲ ಎನ್ನುವ ಅಧಿಕಾರವಾಣಿಯಲ್ಲಿ ಹೇಳಿದ್ದಾರೆ. ಕನಿಷ್ಠ ನನ್ನ ಓದಿಗೆ ಸಿಕ್ಕಂತೆ ಇಲ್ಲ ಅಂದಿದ್ದರು ನಮ್ರತೆ ಅನ್ನಿಸಿಕೊಂಡಿರೋದು.

    ಬಹುಶಃ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಟಿಪ್ಪು ಅಂತ್ಯದ ಬಗ್ಗೆ ಬರೆದು ಕೈ ಸುಟ್ಟುಕೊಂಡ ಕಾರಣಕ್ಕೋ ಏನೋ, ಇದೇ ವಿಕ್ರಂ ಸಂಪತ್ ಅವರು ಟಿಪ್ಪುವಿನ ಅಂತ್ಯದ ಚಿತ್ರಣವನ್ನು ಬ್ರಿಟಿಷ್ ಇತಿಹಾಸಕಾರರು ಸೃಷ್ಟಿಸಿಕೊಟ್ಟಿರುವ ನರೇಟಿವ್ ಅನ್ನು ಬಿಟ್ಟು ಆಚೀಚೆ ಅಲುಗಾಡಿಲ್ಲ. ಎಷ್ಟರಮಟ್ಟಿಗೆ ಎಂದರೆ, ಟಿಪ್ಪು ಸತ್ತ ಎಂದು ಗೊತ್ತಾದ ತಕ್ಷಣ “ಇನ್ನು ಇಂಡಿಯಾ ನಮ್ಮದೇ” ಎಂದು ಹ್ಯಾರಿಸ್ ಉದ್ಘಾರ ತೆಗೆದ ಎಂದು ಮೊದಲ ಪುಸ್ತಕದಲ್ಲಿ ಬರೆದಿದ್ದಾರೆ. (ನನ್ನ ಓದಿಗೆ ಅವನು ಹಾಗೆ ಹೇಳಿದ ಬಗ್ಗೆ ಬ್ರಿಟಿಷ್ ದಾಖಲೆಗಳಲ್ಲಿ ಸಿಗಲಿಲ್ಲ. ವಿಕ್ರಂ ಅವರಿಗೆ ಎಲ್ಲಿ ಸಿಕ್ಕಿತೋ, ಗೊತ್ತಾದರೆ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು.) ಆದರೆ, ಇದೇ ಉದ್ಘಾರ ಹೊಸ ಪುಸ್ತಕದಲ್ಲಿ ಕಾಣಿಸಿಲ್ಲ. ಹೀಗ್ಯಾಕೆ?

    ಇನ್ನು ಟಿಪ್ಪುವಿನ ಸೋಲಿಗೆ, ಸಾವಿಗೆ ಏಕೈಕ ಕಾರಣ ಎಂಬಂತೆ ಚಿತ್ರಿಸಲಾಗಿರುವ “ಮೀರ್ ಸಾದಿಖ್” ನನ್ನು ಮೊದಲ ಪುಸ್ತಕದಲ್ಲಿ “ಶೇಖರ್” ಎಂಬ ಟಿಪ್ಪು ಆಪ್ತ ಕೊಂದ ಎನ್ನುವ ವಿಕ್ರಂ , ಹೊಸ ಪುಸ್ತಕದಲ್ಲಿ ಮಾತ್ರ ಅನಾಮಿಕರಿಂದ “ಮೀರ್ ಸಾದಿಖ್” ಸತ್ತ ಎನ್ನುತ್ತಾರೆ.
    ಹಾಗಿದ್ದರೇ, ವಿಕ್ರಂ ಚಿತ್ರಿಸಿರುವಂತೆಯೇ ಟಿಪ್ಪು ಹತನಾದನೇ? ಅಲ್ಲಿ ಬ್ರೀಟಿಷರು-ನಿಜಾಮರನ್ನು ಬಿಟ್ಟರೆ ಮೂರನೇ ಶಕ್ತಿಗಳು ಇರಲಿಲ್ಲವೇ? ಖಂಡಿತ ಇದ್ದರು ಅದಕ್ಕೆ ಬೇಕಾದ ಇತಿಹಾಸದ ದಾಖಲೆಗಳನ್ನು, ಅಂದಿನ ಕಾಲದ ಮರಾಠ-ನಿಜಾಮ-ಬ್ರಿಟೀಷ್ ಸರ್ಕಾರಗಳು ಮೈಸೂರಿನ ಒಡೆಯರ್ ವಂಶವನ್ನು ನಡೆಸಿಕೊಂಡ ರೀತಿಯ ಬಗ್ಗೆ, ‘ದಕ್ಷ-ಸಮರ್ಥ ಆಡಳಿತಗಾರ” ಎಂದು ಬಿಂಬಿಸಲಾಗಿರುವ ದಿವಾನ್ ಪೂರ್ಣಯ್ಯ ಆಂಡ್ ಟೀಮ್ ಮಾಡಿದ್ದೇನು ಇತ್ಯಾದಿ ಅಪ್ರಿಯ ಸತ್ಯಗಳನ್ನು ನನ್ನ ಪುಸ್ತಕ “ಮುಚ್ಚಿಟ್ಟ ಕರ್ನಾಟಕ ಚರಿತ್ರೆ’ಯಲ್ಲಿ ನಾನು ನೀಡಿದ್ದೇನೆ.

    ಟಿಪ್ಪುವಿನ ಅಂತ್ಯದ ಕುರಿತ ಗಿಳಿಪಾಠದ ನಡುವೆಯೂ ಬ್ರಿಟಿಷರ ಇತಿಹಾಸದಲ್ಲೇ “Read between the lines” ಮಾಡಿದರೇ ಅನುಮಾನದ ಗೆರೆಗಳು ಖಂಡಿತ ಮೂಡುತ್ತವೆ. ಆದರೆ, ಈಗ ಸತ್ಯ ಯಾರಿಗೆ ಬೇಕಾಗಿದೆ? ತಮ್ಮ ತಮ್ಮ ಅಜೆಂಡಾಗಳು ಪೂರೈಸಿದರೆ ಸಾಕಷ್ಟೇ.

    ವಿಕ್ರಂ ಅವರ ಹೊಸ ಪುಸ್ತಕಕ್ಕಾಗಿ ಇಂಗ್ಲೀಷ್-ಹಿಂದಿಯ ಪ್ರಖ್ಯಾತ ಚಾನೆಲುಗಳಲ್ಲೆಲ್ಲಾ ವೇದಿಕೆ ಸಿಕ್ಕಿದೆ. ಅವರ ಹಿಂದೆ ಅಂತಹ ಪ್ರಭಾವಳಿಯಿರುವುದು ಸಂತೋಷವೇ. ಯಾವ ಲೇಖಕನಿಗೂ ಹಾಗೆ ವೇದಿಕೆ ಸಿಗುವುದು ಒಳ್ಳೆಯದೇ. ಪುಸ್ತಕ ಬಿಡುಗಡೆಗೆ ಬಿಜೆಪಿಯ ಸರ್ಕಾರದ ಮಂತ್ರಿಗಳಾದ ಜೈ ಶಂಕರ್, ಸಂಸದ ತೇಜಸ್ವಿ ಸೂರ್ಯ ಎಲ್ಲಾ ಹೋಗಿದ್ದರು ಎಂದು ಮಾಧ್ಯಮಗಳಲ್ಲಿ ಓದಿದ್ದೆ. ಬಿಜೆಪಿಯವರ ಬಗ್ಗೆ ಹೀಗೆ ಬರೆಯಲಾಗಿದೆ ಎನ್ನುವುದು ಪಾಪ ಇವರುಗಳಿಗೆ ಗೊತ್ತಿತ್ತೋ ಇಲ್ಲವೋ?

    “ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ ” ಎನ್ನುವ ಮಾತೊಂದಿದೆ ಎನ್ನುವುದನ್ನು ಲೇಖಕ ರೋಹಿತ್ ಅವರು “ಕಥನ-ಮಥನ” ಪುಸ್ತಕದ ಪೀಠಿಕೆಯಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಅನುಭವದ ಪ್ರಕಾರ, ಪ್ರಸಕ್ತ ಸನ್ನಿವೇಶಕ್ಕೆ ಇನ್ನಷ್ಟನ್ನು ಸೇರಿಸಿ ಹೀಗೆ ಸೇರಿಸಬಹುದು ಅನ್ನಿಸಿತು. – “ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ , ಬರೆದವರ ‘ನೇಮ್’ ಏನು , ‘surname’ ಏನು? ಯಾರನ್ನು ಕೇಳಿ ಬರೆದರು?” ಎನ್ನುವುದರ ಮೇಲೆಯೂ ಪುಸ್ತಕದ ಭವಿಷ್ಯವನ್ನು ನಿರ್ಧರಿಸಬಹುದು ಅನ್ನಿಸಿತು. (ಈ ಹೇಳಿಕೆ ಸಾಮಾನ್ಯ ಓದುಗರಿಗೆ ಅನ್ವಯಿಸವುದಿಲ್ಲ, ಅವರಿಗೆ ಏನು ಬರೆದಿದ್ದಾರೆ ಎನ್ನುವುದಷ್ಟೇ ಮುಖ್ಯವೆನಿಸುತ್ತದೆ. ಇದು ಕೇವಲ ಸಾಂಸ್ಥಿಕ ವ್ಯವಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.)

    ಕಡೆಯಲ್ಲಿ, ರಾಜಕೀಯ ಪಕ್ಷಗಳಿರುವುದೇ ರಾಜಕೀಯ ಲಾಭ ಎತ್ತಲು ಬಿಡಿ. ಆದರೆ ಇತಿಹಾಸಕಾರರು ಎನ್ನಿಸಿಕೊಂಡವರು, ಇತಿಹಾಸವನ್ನು ತಿರುಚಲಾಗಿದೆ ಎಂದೆಲ್ಲಾ ಮಾತನಾಡುವವರು ಹೀಗೆ ಬರೆಯುವುದನ್ನು ಹೇಗೆ ಅರ್ಥೈಸಿಕೊಳ್ಳಬೇಕು?

    ಯಾರಾದರೂ ಇತಿಹಾಸದ ವಿದ್ಯಾರ್ಥಿಗಳಿದ್ದರೆ, ಈ ಪುಸ್ತಕಗಳನ್ನಿಟ್ಟುಕೊಂಡೇ ಇತಿಹಾಸಕಾರರ ಬಗ್ಗೆ ಪಿಹೆಚ್ಡಿ ಪ್ರಬಂಧ ಬರೆಯಬಹುದು ಅನ್ನಿಸುತ್ತದೆ. ಟಿಪ್ಪು ಕಟ್ಟರ್ ಇಸ್ಲಾಮಿಸ್ಟ್ ಆಗಿದ್ದ ಮತ್ತು ತನ್ನ ನಂಬಿಕೆಯನ್ನು ಜಾರಿಗೊಳಿಸಲು ಏನೇನು ಮಾಡಬೇಕೋ ಅದನ್ನೇ ಮಾಡಿದ. ಕನಿಷ್ಠ, ಟಿಪ್ಪು ಹೀಗೆ, ಅವನನ್ನು ವಿರೋಧಿಸುವ-ಪರವಹಿಸುವವರಂತೆ ಲಾಭ-ನಷ್ಟದ ಆಧಾರದಲ್ಲಿ ತನ್ನ ಧಾರ್ಮಿಕ ನಿಲುವು ಬದಲಿಸುವ ದ್ವಂದ್ವ ನೀತಿಯವನೇನೂ ಆಗಿರಲಿಲ್ಲ.

    ಈ ಸತ್ಯ ಹಲವರಿಗೆ ಅಪ್ರಿಯ ಅನ್ನಿಸಬಹುದು. ಅನ್ನಿಸಲಿ. ಕೆಲವೊಮ್ಮೆ ಅನ್ಯಾಯವನ್ನು ನೋಡಿಯೂ ಸುಮ್ಮನಿರಬೇಕಾದ ಸಂದರ್ಭವಿರುತ್ತದೆ. ಕೆಲವೊಮ್ಮೆ ಅನ್ಯಾಯ, ತಾರತಮ್ಯ, ಹಿಪೊಕ್ರೇಸಿಗಳ ಬಗ್ಗೆ ದನಿಯೆತ್ತಲೇಬೇಕಾಗುತ್ತದೆ. ಇದು ಅದೇ ಸಮಯ.

    ( 1.ವಿಕ್ರಂ ಅವರ ಮೇಲೆ ನನಗೇನೋ ವೈಯಕ್ತಿಕ ಸಮಸ್ಯೆಯಿದೆ ಅಂದುಕೊಳ್ಳುವವರು ಇದ್ದರೆ, ಅಂತವರಿಗಾಗಿ – ನನಗೆ ಅವರ ಪರಿಚಯವಿಲ್ಲ. 2015-16ರಲ್ಲಿ ದೆಹಲಿಯಲ್ಲಿ ನಡೆದ ನ್ಯಾಷನಲ್ ರೈಟರ್ಸ್ ಮೀಟ್ ಅಲ್ಲಿ, ಹೈ ಹಲೋ ಹೇಳಿದ್ದು ನೆನಪಷ್ಟೇ. So, ಈ ಬರಹ ಅವರ ಪುಸ್ತಕದ ವಿಷಯವನ್ನು ಆಧರಿಸಿ ಮಾತ್ರವೇ ಹೊರತು ವ್ಯಕ್ಯಿಯ ಬಗ್ಗೆಯಲ್ಲ.

    2.ಈ ಲೇಖನ ಬೇಡ ತೆಗೆಯಿರಿ ಎಂದು ಕಾಲ್ ಬರಬಹುದಾದ್ದರಿಂದ, ಅಂತವರಿಗೆ ಹೇಳ ಬಯಸುವುದು ದಯವಿಟ್ಟು ಹಾಗೆ ಹೇಳಲು ಕಾಲ್ ಮಾಡಬೇಡಿ. ನಾನು ತೆಗೆಯುವುದಿಲ್ಲ. No ಎನ್ನಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ನನ್ನ ಜೊತೆ ಒಡನಾಡಿದವರಿಗೆ ಗೊತ್ತಿರುತ್ತದೆ.)

    2 ಟಿಪ್ಪಣಿಗಳು Post a comment
    1. SANKULA News's avatar
      ಜನ 3 2025

      ನನಗೆ ಯಾಕೆ ಕಳಿಸಿದ್ದೀಯ ಇದನ್ನ ಮಾಡಲು ಕೆಲಸ ಇಲ್ವ

      ಉತ್ತರ
    2. ಯಾರಪ್ಪ ನೀನು ಬುದ್ವಂತ? Subscribe ಮಾಡಿದ್ದಕ್ಕೆ ಬಂದಿರಬೇಕು. Common sense ಇರಬೇಕು. Unsubscribe ಮಾಡಿಕೋ

      ಉತ್ತರ

    ನಿಮ್ಮ ಅನಿಸಿಕೆ...

    Note: HTML is allowed. Your email address will never be published.

    Subscribe to comments