ವಿಷಯದ ವಿವರಗಳಿಗೆ ದಾಟಿರಿ

Posts from the ‘ನಾಡು-ನುಡಿ: ಮರುಚಿಂತನೆ’ Category

16
ಜೂನ್

ನಾಡು-ನುಡಿ ಮರುಚಿಂತನೆ : ಶಂಕರಾಚಾರ್ಯರು ಮತ್ತು ಜಾತಿವ್ಯವಸ್ಥೆಯ ಕಥೆ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

Shankaraacharya1ಶಂಕರಾಚಾರ್ಯರು ಇಂದು ಒಂದು ವರ್ಗದ ಬುದ್ಧಿಜೀವಿಗಳ ಟೀಕೆಗೆ ಗುರಿಯಾಗಿದ್ದಾರೆ.ಅವರೆಂದರೆ ಜಾತಿ ವ್ಯವಸ್ಥೆಯ ವಿನಾಶವನ್ನು ಪ್ರತಿಪಾದಿಸುವವರು.ಜಾತಿ ವ್ಯವಸ್ಥೆ ಎಂಬ ಕಥೆಯ ಸಾರವಿಷ್ಟು: ಇಂದು ಭಾರತದಲ್ಲಿ ಕಂಡುಬರುವ ಸಕಲ ಜಾತಿಗಳನ್ನೂ, ಅವುಗಳ ಪದ್ಧತಿಗಳನ್ನೂ ಹಾಗೂ ತರತಮಗಳನ್ನೂ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ರಚಿಸಿದರು ಹಾಗೂ ತಮ್ಮ ಧರ್ಮಶಾಸ್ತ್ರಗಳೆಂಬ ಕಾನೂನುಗಳನ್ನು ಮಾಡಿ ಅವು ಮುಂದುವರೆಯುವಂತೆ ನೋಡಿಕೊಂಡರು. ಈ ಕಥೆಯನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕಾದರೆ ಅದಕ್ಕೆ ಆಧಾರಗಳು ಬೇಕೇ ಬೇಕು. ಶಂಕರಾಚಾರ್ಯರು ಅಂಥದ್ದೊಂದು ಆಧಾರ ಎಂಬುದಾಗಿ ಈ ಬುದ್ಧಿಜೀವಿಗಳು ನಂಬಿದ್ದಾರೆ. ಶಂಕರರ ತತ್ವಜ್ಞಾನ ಹಾಗೂ ಜಿಜ್ಞಾಸೆಗಳು ಈ ವರ್ಗಕ್ಕೆ ಅಪ್ರಸ್ತುತ. ಅವರ ತತ್ವಜ್ಞಾನವೇ ಬ್ರಾಹ್ಮಣಶಾಹಿಯ ಒಂದು ಕಣ್ಕಟ್ಟಾಗಿರುವುದರಿಂದ ಅದಕ್ಕೆ ಬಲಿಯಾಗಬಾರದು ಎಂಬ ಎಚ್ಚರಿಕೆ ಕೂಡ ಇವರಲ್ಲಿ ಸದಾ ಜಾಗೃತವಾಗಿ ಇರುತ್ತದೆ.

ಆದರೆ ಶಂಕರರ ಸಿದ್ಧಾಂತವನ್ನು ಪರಿಚಯಿಸಿಕೊಂಡ ಯಾರಿಗಾದರೂ ಅವರು ಎಲ್ಲಾ ಬಿಟ್ಟು ಜಾತಿಭೇದವನ್ನು ಎತ್ತಿ ಹಿಡಿಯಲಿಕ್ಕಾಗಿ ತಮ್ಮ ಜೀವ ಸವೆಸಿದರು ಎಂಬುದು ಹಾಸ್ಯಾಸ್ಪದವಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ತಾವು ಪ್ರತಿಪಾದಿಸುವ ಜ್ಞಾನವು ಜಾತಿ, ಒಣ ಪಾಂಡಿತ್ಯ, ತರ್ಕ, ಶಾಸ್ತ್ರ ಇತ್ಯಾದಿಗಳನ್ನು ಮೀರಿದ್ದು ಎಂಬುದನ್ನು ಅವರು ಸ್ಪಷ್ಟವಾಗಿಯೇ ಸಾರುತ್ತಾರೆ. ಜ್ಞಾನಿಯಾದವನಲ್ಲಿ ‘ಜಾತಿ ಭೇದ’ ಅಳಿಯುತ್ತದೆ ಹಾಗೂ ಎಲ್ಲರಲ್ಲೂ ನಾನೇ ಇದ್ದೇನೆ ಎನ್ನುವ ಅನುಭವವಾಗುತ್ತದೆ ಎನ್ನುತ್ತಾರೆ.  ಇಂಥ ಹೇಳಿಕೆಗಳು ಜಾತಿಭೇದವನ್ನು ಗಟ್ಟಿಮಾಡುತ್ತವೆ ಎನ್ನಬಹುದಾದರೆ ಜಾತಿಭೇದ ಅಳಿಯಬೇಕು ಎನ್ನುತ್ತಿರುವ ಇಂದಿನ ಎಲ್ಲ ಬುದ್ಧಿಜೀವಿಗಳ ಹೇಳಿಕೆಗಳೂ ಅದೇ ಕೆಲಸವನ್ನು ಮಾಡುತ್ತಿವೆ ಎಂದೇಕೆ ಹೇಳಬಾರದು? ಹಾಗಾಗಿ ಶಂಕರರ ಮೇಲಿನ ಆಪಾದನೆಯು ತರ್ಕಬದ್ಧವಾಗಿ ಕಾಣಿಸುವುದಿಲ್ಲ. ಹಾಗಾದರೆ ಈ ಆಪಾದನೆಯು ಎಲ್ಲಿಂದ ಹುಟ್ಟಿಕೊಂಡಿತು?

ಮತ್ತಷ್ಟು ಓದು »

10
ಜೂನ್

ನಾಡು-ನುಡಿ ಮರುಚಿಂತನೆ : ಹಿಂದೂ ಧರ್ಮ ಇಲ್ಲದಿದ್ದರೆ ಬಹುಸಂಖ್ಯಾತರು ಯಾರು?

– ರಾಜಾರಾಮ ಹೆಗಡೆ

ರಿಲಿಜನ್ಇತ್ತೀಚೆಗೆ ಲಿಂಗಾಯತ ಮಠಾಧೀಶರೊಬ್ಬರು ‘ಹಿಂದೂ ಧರ್ಮ ಇಲ್ಲ ಏಕೆಂದರೆ ಹಿಂದೂಗಳು ಸಾವಿರಾರು ದೇವತೆಗಳನ್ನು ಪೂಜಿಸುತ್ತಾರೆ, ಹಾಗಾಗಿ ವೀರಶೈವರು ಹಿಂದೂಗಳಲ್ಲ, ವೀರಶೈವರು ಒಬ್ಬನೇ ದೇವತೆಯನ್ನು ಪೂಜಿಸುತ್ತಾರೆ ಹಾಗಾಗಿ ಅವರದು ಪ್ರತ್ಯೇಕ ಧರ್ಮ’ ಎಂಬ ಹೇಳಿಕೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ ಮಠಾಧೀಶರೊಬ್ಬರು ‘ಹಿಂದೂಗಳು ಪೂಜಿಸುವ ಶಿವ ಹಾಗೂ ಲಿಂಗಾಯತರ ಶಿವ ಒಂದೇ ಆಗಿರುವುದರಿಂದ ಅವರೂ ಹಿಂದೂ ಧರ್ಮಕ್ಕೆ ಸೇರಿದ್ದಾರೆ’ ಎಂದರು. ಇವರೆಲ್ಲ ದೇವತೆಗಳನ್ನು ಹಾಗೂ ಧರ್ಮವನ್ನು ಸಮೀಕರಿಸುತ್ತ ತಮ್ಮ ವಾದವನ್ನು ಮಂಡಿಸುತ್ತಿರುವುದು ಕುತೂಹಲಕಾರಿಯಾಗಿದೆ. ನಮ್ಮ ಇತಿಹಾಸ ಪುರಾಣಾದಿಗಳಲ್ಲಿ ಧರ್ಮದ ಕುರಿತು ಎಷ್ಟೊಂದು ಜಿಜ್ಞಾಸೆಗಳಿವೆಯಾದರೂ ಅದರ ನಿರ್ಣಯಕ್ಕೆ ದೇವತೆಗಳನ್ನು ಯಾರೂ ಕರೆದು ತಂದಿಲ್ಲ. ಹಾಗಾದರೆ ನಮ್ಮ ಮಠಾಧೀಶರುಗಳೆಲ್ಲ ನಡೆಸುತ್ತಿರುವ ಚರ್ಚೆ ಏನು?

ನಾವು ಧರ್ಮ ಎಂಬ ಶಬ್ದವನ್ನು ಇಂಗ್ಲೀಷಿನ ರಿಲಿಜನ್ ಎಂಬ ಶಬ್ದದ ಭಾಷಾಂತರವಾಗಿ ಬಳಸುತ್ತೇವೆ. ಜ್ಯೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳು ಮಾತ್ರವೇ ರಿಲಿಜನ್ನುಗಳು. ಅವರಿಗೆ ಈ ಪ್ರಪಂಚವನ್ನು ಹಾಗೂ ಮನುಷ್ಯರನ್ನು ಸೃಷ್ಟಿಸಿದ ತಂತಮ್ಮ ದೇವನು ಒಬ್ಬನೇ ಸತ್ಯ. ಅವನ ಆಜ್ಞೆಯನ್ನು ಉಲ್ಲಂಘಿಸಿದ ಪಾಪಕ್ಕಾಗಿ ಅವನಿಂದ ಅಭಿಶಪ್ತರಾಗಿ ಮನುಷ್ಯರೆಲ್ಲ ಅವನ ಲೋಕದಿಂದ ಭೂಮಿಗೆ ಬಿದ್ದರು, ಇಂಥ ಮನುಷ್ಯರು ತಮ್ಮ ಪಾಪವನ್ನು ಕಳೆದುಕೊಂಡು ಮರಳಿ ದೇವನ ಲೋಕವನ್ನು ಸೇರುವ ಮಾರ್ಗವೇ ರಿಲಿಜನ್ನು. ಈ ಸಂಗತಿಯನ್ನು ಸತ್ಯದೇವನು ಸ್ವತಃ ಆಯಾ ರಿಲಿಜನ್ನಿನ ಒಬ್ಬ ಪ್ರವಾದಿಗೆ ತಿಳಿಸಿದ್ದಾನೆ ಹಾಗೂ ಅದನ್ನಾಧರಿಸಿ ಅವರ ಪವಿತ್ರ ಗ್ರಂಥ ರೂಪುಗೊಂಡಿದೆ. ಈ ಗ್ರಂಥಗಳ ವಾಕ್ಯಗಳು ಆಯಾ ರಿಲಿಜನ್ನಿನ ಅನುಯಾಯಿಗಳ ಕ್ರಿಯೆಗಳಿಗೆ ಆಧಾರವಾಗಿರುತ್ತವೆ.

ಮತ್ತಷ್ಟು ಓದು »

1
ಜೂನ್

ನಾಡು-ನುಡಿ ಮರುಚಿಂತನೆ : ಸಾಹಿತಿಗಳು ಮತ್ತು ಸಮಾಜದ ಕುರಿತ ಜ್ಞಾನ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

empty_mind_440ನನ್ನ ಅಣ್ಣ ಒಮ್ಮೆ ನನ್ನಲ್ಲಿ ಕುತೂಹಲದಿಂದ ವಿಚಾರಿಸಿದ್ದರು.‘ಅಲ್ಲ, ಈ ಜ್ಞಾನಪೀಠ ಪ್ರಶಸ್ತಿ ಯಾವಾಗಲೂ ಸಾಹಿತಿಗಳಿಗೇ ಬರುತ್ತದೆಯಲ್ಲ. ಅಂದರೆ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂದು ಅದನ್ನು ನೀಡುವವರ ಅಭಿಪ್ರಾಯವೆ?’. ನಾನು ಸಮಜಾಯಷಿ ನೀಡಿದ್ದೆ, ‘ಹಾಗಲ್ಲ, ಮೂಲತಃ ಅದು ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ. ಪ್ರಶಸ್ತಿಗೆ ಒಂದು ಹೆಸರಿಡಬೇಕಲ್ಲ. ಜ್ಞಾನಪೀಠ ಅಂತ ಹೆಸರಿಟ್ಟಿದ್ದಾರೆ. ಆ ಪ್ರಶಸ್ತಿಯನ್ನು ಪಡೆದವರನ್ನು ಜ್ಞಾನಪೀಠ ಪುರಸ್ಕೃತರು ಎನ್ನುತ್ತಾರೆಯೇ ವಿನಃ ಜ್ಞಾನಿಗಳು ಎಂದೇನೂ ಕರೆಯುವುದಿಲ್ಲವಲ್ಲ?’. ನನ್ನ ಉತ್ತರ ಸರಿ ಎಂದೇ ನನಗೆ ಇನ್ನೂ ಅನಿಸುತ್ತದೆ. ಆದರೆ ಕೆಲವೊಮ್ಮೆ ನನ್ನ ಅಣ್ಣ ಹೇಳಿದ ಹಾಗೇ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂಬುದಾಗಿ ಕೆಲವು ಸಾಹಿತಿಗಳೂ ಭಾವಿಸಿಕೊಂಡಿದ್ದಾರೇನೋ ಎಂದೂ ಅನ್ನಿಸುತ್ತದೆ. ಅದು ನನ್ನ ಅನುಭವಕ್ಕೆ ಬಂದದ್ದು ಇತ್ತೀಚಿನ ವರ್ಷಗಳಲ್ಲಿ. ನಾವು ಮಾಡುತ್ತಿರುವ ಸಮಾಜಶಾಸ್ತ್ರೀಯ ಸಂಶೋಧನೆಗಳನ್ನು ನಿಲ್ಲಿಸಬೇಕೆಂದು ಈ ಸಾಹಿತಿಗಳು ಸರ್ಕಾರದ ಮೇಲೆ ಒತ್ತಡ ಹೇರಿದರು. ನಾವು ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಏನೇನು ಸಂಶೋಧನಾ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ಗೂಢಚರ್ಯೆಯನ್ನು ನಡೆಸಿ, ನಮ್ಮನ್ನು ನಿಯಂತ್ರಿಸಿ ನಾವು ಏನನ್ನು ಹೇಳಬೇಕೆಂದು ಅಪ್ಪಣೆ ಕೊಡಿಸುವ ಮಟ್ಟಕ್ಕೆ ಕೂಡ ಹೋದರು.ಇವರಿಗೆಲ್ಲ ತಾವು ಎಲ್ಲಾ ಕ್ಷೇತ್ರಗಳಲ್ಲೂ ಜ್ಞಾನಿಗಳೆಂಬ ಭ್ರಮೆಯು ನೆತ್ತಿಗೇರಿರದಿದ್ದರೆ ಇಷ್ಟು ಅಸಭ್ಯವಾಗಿ ವರ್ತಿಸಲು ಕಾರಣಗಳಿರಲಿಲ್ಲ.

ಕಳೆದ ಕೆಲವು ವರ್ಷಗಳಿಂದ ನನಗೆ ಇದು ಅಭ್ಯಾಸವಾಗಿ ಬಿಟ್ಟಿದೆ. ಹಾಗೇ ಕೆಲವು ಹೇಳಿಕೆಗಳು ಕೂಡಾ. ‘ಈ ರಾಜಾರಾಮ ಹೆಗಡೆಯವರು ಬಾಲಗಂಗಾಧರರನ್ನು ಸೇರಿ ಹಾಳಾಗಿ ಹೋದರು’ ಎಂಬ ತೀರ್ಪನ್ನು ಇವರು ಸುಪ್ರೀಂ ಕೋರ್ಟಿನ ಜಡ್ಜುಗಳಿಗಿಂತ ಆತ್ಮ ವಿಶ್ವಾಸಪೂರ್ವಕವಾಗಿ ಕೊಡಬಲ್ಲರು. ಹಾಗಂತ ಇಂಥ ತೀರ್ಮಾನವನ್ನು ಕೊಡುವವರಲ್ಲಿ ಯಾರೂ ಬಾಲಗಂಗಾಧರರನ್ನು ಓದಿಯೇ ಇಲ್ಲ, ಓದಿದರೂ ಚೂರುಪಾರು ಓದಿರುತ್ತಾರೆ. ಸಮಾಜ ಶಾಸ್ತ್ರಜ್ಞರ ಕುರಿತು ಇಂಥ ಹೇಳಿಕೆಗಳನ್ನು ಉದುರಿಸಲಿಕ್ಕೆ ಅವರ ಕೃತಿಗಳನ್ನು ಓದುವ ಅಗತ್ಯವಿಲ್ಲ, ಬದಲಾಗಿ ನೀವು ಒಂದಷ್ಟು ಕಥೆ ಕವನಗಳನ್ನು ಅಥವಾ ಅವುಗಳ ಕುರಿತ ವಿಮರ್ಶಾ ಲೇಖನಗಳನ್ನು ಬರೆದಿದ್ದರೆ ಸಾಕು. ಈ ಧೋರಣೆ ಎಲ್ಲಿಂದ ಹುಟ್ಟುತ್ತದೆ? ಅದೇ ರೀತಿ ‘ ನಾನು ಬಾಲಗಂಗಾಧರರ ವಾದವನ್ನು ಒಪ್ಪುವುದಿಲ್ಲ.’ ‘ಬಾಲಗಂಗಾಧರರ ವಾದಗಳ ಕುರಿತು ನನಗೆ ನನ್ನದೇ ಅನುಮಾನಗಳಿವೆ’, ಎಂಬುದು ಮತ್ತೊಂದು ಪ್ರಕಾರದ ವರಸೆ. ಇವರೂ ಕೂಡ ಬಾಲಗಂಗಾಧರರನ್ನು ಓದಬೇಕೆಂದಿಲ್ಲ. ‘ಏನು ಅನುಮಾನಗಳಿವೆ?’ ಎಂದು ಮರು ಪ್ರಶ್ನಿಸಿದರೆ ಚಾಲ್ತಿಯಲ್ಲಿರುವ ಐಡಿಯಾಲಜಿಗಳ ಕ್ಲೀಷೆಗಳನ್ನು ತಿಳಿಸುತ್ತಿರುತ್ತಾರೆ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂಬ ವಾಕ್ಯದಲ್ಲಿ ಮೊದಲನೆಯ ಶಬ್ದವನ್ನು ಇವರೆಲ್ಲ ಗಂಭೀರವಾಗಿಯೇ ಅಳವಡಿಸಿಕೊಂಡಂತಿದೆ.
ಮತ್ತಷ್ಟು ಓದು »

25
ಮೇ

ನಾಡು-ನುಡಿ : ಮರುಚಿಂತನೆ – ನೈನಂ ದಹತಿ ಪಾವಕಃ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಭಗವದ್ಗೀತೆಇತ್ತೀಚೆಗೆ ಕೇಂದ್ರಸಚಿವರೊಬ್ಬರು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎನ್ನುವ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಭಗವದ್ಗೀತೆಯನ್ನು ಭಾರತೀಯರಿಗೆಲ್ಲರಿಗೂ ಕಡ್ಡಾಯವಾಗಿ ಕಲಿಸಬೇಕು ಎಂಬ ಕೂಗು ಕೂಡ ಒಂದೆಡೆ ಏಳುತ್ತಿದೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದೆಡೆ ಅದನ್ನು ಸುಟ್ಟುಹಾಕಬೇಕು ಎಂಬ ಹೇಳಿಕೆಗಳು ಕೂಡ ಬರತೊಡಗಿವೆ. ಭಗವದ್ಗೀತೆಯನ್ನು ರಾಷ್ಟ್ರ ಗ್ರಂಥವನ್ನಾಗಿ ಮಾಡಬೇಕೆನ್ನುವ ಅನೇಕರು ಅದನ್ನು ಓದಿ ಅರ್ಥಮಾಡಿಕೊಂಡು ಪ್ರಭಾವಿತರಾಗಿ ಅದೊಂದು ಮಹತ್ವದ ಗ್ರಂಥ ಎಂದು ಮನಗಂಡಿರುವ ಸಂಭಾವ್ಯತೆ ಇಲ್ಲ. ಅದು ಹಿಂದೂಗಳ ಪವಿತ್ರಗ್ರಂಥ, ಅದರಲ್ಲಿ ಏನೋ ಮಹತ್ವದ ಸಂಗತಿ ಇದೆ ಎಂಬುದಷ್ಟೇ ಅವರಿಗೆ ಮುಖ್ಯವಾಗಿದೆ. ಅಂದರೆ ಯಾವುದೋ ಒಂದು ಪುಸ್ತಕವನ್ನು ನಾವು ಓದದಿದ್ದರೂ ಅದರಷ್ಟಕ್ಕೇ ಅದು ಮುಖ್ಯ ಎಂದೇಕೆ ಅವರಿಗೆ ಅನ್ನಿಸುತ್ತದೆ ಎಂಬುದಕ್ಕೆ ಅವರು ಅದನ್ನು ಬೈಬಲ್ಲು, ಖುರಾನುಗಳ ಸಾಲಿನಲ್ಲಿ ಇಟ್ಟು ನೋಡುತ್ತಿದ್ದಾರೆ ಎನ್ನದೇ ಬೇರೆ ಉತ್ತರ ಹೊಳೆಯುವುದಿಲ್ಲ.

ಇದಕ್ಕಿಂತಲೂ ಆಶ್ಚರ್ಯಕರವಾದ ಸಂಗತಿಯೆಂದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವ ಹೇಳಿಕೆಗಳು. ಇಂಥ ಹೇಳಿಕೆಗಳನ್ನು ಮಾಡುವವರು ಕೂಡ ಹಿಂದೂಯಿಸಂ ಎಂಬುದಿದೆ, ಭಗವದ್ಗೀತೆಯು ಹಿಂದೂಗಳ ಪವಿತ್ರಗ್ರಂಥ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹಾಗೂ ಬ್ರಾಹ್ಮಣರು ಅದರ ಪುರೋಹಿತಶಾಹಿ ಎಂಬುದನ್ನು ಭದ್ರವಾಗಿ ನಂಬಿದ್ದಾರೆ. ಹಾಗೂ ಆ ನಿರ್ದಿಷ್ಟ  ಕಾರಣದಿಂದಲೇ ಅದನ್ನು ಸುಡಬೇಕು ಎನ್ನುತ್ತಿದ್ದಾರೆ. ಏಕೆ ಸುಡಬೇಕೆಂದರೆ ಬ್ರಾಹ್ಮಣರು ಭಗವದ್ಗೀತೆಯ ಮೂಲಕ ವರ್ಣ ವ್ಯವಸ್ಥೆಯನ್ನು ಹಾಗೂ ಶೋಷಣೆಯ ಡಾಕ್ಟ್ರಿನ್ನುಗಳನ್ನು ಬೋಧಿಸುತ್ತಿದ್ದಾರೆ. ಅದನ್ನಾಧರಿಸಿಯೇ ಭಾರತೀಯ ಜಾತಿವ್ಯವಸ್ಥೆ, ತರತಮಗಳು, ಶೋಷಣೆಗಳು ಅಸ್ತಿತ್ವದಲ್ಲಿ ಇವೆ, ಹಾಗಾಗಿ ನಮ್ಮ ಸಮಾಜದಲ್ಲಿ ಇದನ್ನೆಲ್ಲ ತೊಡೆಯಬೇಕಾದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವುದು ಅವರ ವಾದ. ಇಂಥ ಹೇಳಿಕೆಗಳನ್ನು ಮಾಡುವವರೂ ಭಗವದ್ಗೀತೆಯನ್ನು ಓದಿರುವುದಿಲ್ಲ, ಓದಿದ್ದರೂ ಅರ್ಥಮಾಡಿಕೊಂಡಿಲ್ಲ.
ಮತ್ತಷ್ಟು ಓದು »

21
ಮೇ

ವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೨

– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ವಸಾಹತುಶಾಹಿವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೧

ನೋಬಿಲಿಯ ಉಲ್ಲೇಖಗಳು ಅಸ್ಪಷ್ಟವಾಗಿದ್ದರೂ ಆತನ ವಾದದ ಕೇಂದ್ರಬಿಂದು ನೇರವಾಗಿತ್ತು. ಇವನನ್ನು ದಾರಿತಪ್ಪಿಸುವವರಂತಲ್ಲದೇ ಈತ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೇ ಧಾರ್ಮಿಕ ನಂಬಿಕೆಗಳ ಹಾಗೂ ಅದರ ಸಾಂಸ್ಕೃತಿಕ ಸಂಗತಿಗಳ ವೈಶಿಷ್ಟ್ಯವನ್ನು ತಿಳಿದುಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿದ್ದ. ಬ್ರಾಹ್ಮಣ ಸಂಪ್ರದಾಯದ ಅನೇಕ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಳವಡಿಸಿಕೊಂಡಿದ್ದ. ಶಿಖೆ, ತಿಲಕಧಾರಣೆ ಇತ್ಯಾದಿಗಳನ್ನು ಅನುಸರಿಸುತ್ತಿದ್ದ. ಬ್ರಾಹ್ಮಣ ತಜ್ಞರನ್ನು ಭೇಟಿ ಮಾಡಿ ಅವರಿಂದ ಆಚರಣೆಗಳ ಮೂಲದ ಅರ್ಥವನ್ನು ತಿಳಿದುಕೊಂಡ. ಬಹಳಷ್ಟು ಯೂರೋಪಿಯನ್ನರು ಹಿಂದೂಗಳ ಬಹುಪಾಲು ಆಚರಣೆಗಳನ್ನು ಅರ್ಥಮಾಡಿಕೊಳ್ಳದೇ ಅಪರಿಚಿತವಾದ ಅವು ಮೂರ್ತಿಪೂಜೆಯೊಂದಿಗೆ ಸೇರಿಕೊಂಡ ಮೂಢನಂಬಿಕೆಗಳೆಂದು ಹೇಳುತ್ತಿದ್ದರೆ, ನೋಬಿಲಿ ಇವುಗಳಲ್ಲಿ ಬಹುಪಾಲು ಆಚರಣೆಗಳು ನಾಗರಿಕ ಜೀವನ ಶೈಲಿಯನ್ನು ರೂಪಿಸುವಂಥವು ಎಂದು ದೃಢಪಡಿಸಿದ. ಕೆಲವು ಆಚರಣೆಗಳಿಗೆ ಧಾರ್ಮಿಕವಾಗಿ ಯಾವುದೇ ಸಂಬಂಧವಿಲ್ಲ ಎಂಬುದನ್ನು ತೋರಿಸಿದ. ಸಾಂಪ್ರದಾಯಿಕ ಧಾರ್ಮಿಕ ಹಿಂದೂ ಆಚರಣೆಗಳನ್ನು ಮೀರಿ ನಾಗರಿಕ ವರ್ತನೆಗಳನ್ನು ಮಾತ್ರ ಉಳಿಸಿಕೊಳ್ಳುವಂತೆ ಮತಾಂತರಿಗಳಿಗೆ ಸೂಚಿಸಿರುವುದಾಗಿ ಹೆಳಿರುವುದಾಗಿ ಸ್ವತಃ ಬ್ರಾಹ್ಮಣ ಆಚರಣೆ ಮಾಡುತ್ತಿದ್ದ ನೋಬಿಲಿ ವಾದಿಸಿದ.

ನಂತರ ಆತ ಯೂರೋಪಿಯನ್ನರ ಹೆಸರು ಇಟ್ಟುಕೊಳ್ಳುವಂತೆ, ವೇಷಭೂಷಣ ತೊಡುವಂತೆ, ಭಾರತೀಯ ಸಮಾಜದಲ್ಲಿನ ಯಾವುದೇ ಕುರುಹು ಉಳಿಯದಂತೆ ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದ್ದ ತನ್ನ ಮಾರ್ಗಕ್ಕೆ ಅಡ್ಡಿಯಾಗಿರುವವರನ್ನು ತರಾಟೆಗೆ ತೆಗೆದುಕೊಂಡ. ಮತಾಂತರಗೊಂಡವರು ಅನಗತ್ಯವಾಗಿ ತಮ್ಮ ಮೂಲಸಮಾಜದ ಆಚರಣೆಯನ್ನು ಕೈಬಿಡುವಂತೆ ಹೇಳುವ ಇಂಥವರನ್ನು ನೋಬಿಲಿ ಖಂಡಿಸಿದ. ಕ್ರಿಶ್ಚಿಯನ್ನೇತರ ಭಾರತೀಯ ಸಮಾಜದವರು ಮತಾಂತರಿಗಳನ್ನು “ತಮ್ಮ ಮೂಲವನ್ನು ಕಳೆದುಕೊಂಡವರು, ಅವನತಿ ಉಂಟುಮಾಡುವವರು’’ ಎಂಬಂತೆ ಕಾಣುತ್ತಿದ್ದರು. ಕ್ರಿಶ್ಚಿಯನ್ ಆಚರಣೆಯನ್ನು ನಾವೇಕೆ ಇಷ್ಟು ಕಡ್ಡಾಯ ಮಾಡಿದ್ದೇವೆ ಎಂಬುದನ್ನು ಕ್ರಿಶ್ಚಿಯನ್ನೇತರರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದು »

20
ಮೇ

ವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೧

– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ವಸಾಹತುಶಾಹಿಆಫ್ರಿಕ ಜಾನಪದ ಕುರಿತ ವಿಶ್ವಕೋಶವನ್ನು ಸಿದ್ಧಪಡಿಸುವ ಕೆಲಸದಲ್ಲಿರುವಾಗ ಅಲ್ಲಿನ ಮೂಲನಿವಾಸಿಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಕಲೆಹಾಕಬೇಕಾಗಿ ಬಂತು.ಮಾಕೊಂಡೆ, ಲುಂಗ, ಲುಂಡ, ಲುವಾಲೆ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಮೂಲನಿವಾಸಿಗಳನ್ನು ಕುರಿತ ಇತಿಹಾಸ, ಮಾಹಿತಿ ಕಲೆಹಾಕಿದಾಗ ಅಚ್ಚರಿ ಎನಿಸುವ ಸಂಗತಿಗಳು ಒಂದೊಂದಾಗಿ ಹೊರಬೀಳತೊಡಗಿದವು. ಆ ಹಿನ್ನೆಲೆಯಲ್ಲಿ ಈ ಲೇಖನ.

ಕ್ರಿಶ್ಚಿಯಾನಿಟಿಯ ಬಿಬ್ಲಿಕಲ್ ಥಿಯಾಲಜಿ ಹಿನ್ನೆಲೆಯ ಯೂರೋಪಿನ ಎಂಪಿರಿಕಲ್ ಇತಿಹಾಸವೇ ಇಡೀ ವಿಶ್ವದ ಮನುಕುಲದ ಇತಿಹಾಸ ಹೇಗಾಗಿದೆ ಎಂಬುದನ್ನು ಪ್ರೊ.ಬಾಲಗಂಗಾಧರ (ಬಾಲು) ಅವರು ಎಳ್ಳಷ್ಟೂ ಶಂಕೆ ಇಲ್ಲದಂತೆ ಸಾಧಾರವಾಗಿ ತಮ್ಮ ಕೃತಿಗಳಲ್ಲಿ ಅದರಲ್ಲೂ “ದಿ ಹೀದನ್ ಇನ್ ಹಿಸ್ ಬ್ಲೈಂಡ್‍ನೆಸ್ (1994)” ಹಾಗೂ “ಡು ಆಲ್ ರೋಡ್ ಲೀಡ್ ಟು ಜೆರುಸಲೇಂ? ದಿ ಮೇಕಿಂಗ್ ಆಫ್ ಇಂಡಿಯನ್ ರಿಲಿಜನ್ಸ್ (2014)” ಸಂಶೋಧನ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.ಸ್ಥಾಪಿತ ವಾದಗಳಲ್ಲೇ ಸ್ವಂತಿಕೆ ಕಂಡುಕೊಂಡ ಶೈಕ್ಷಣಿಕ ಹಾಗೂ ವಿದ್ವತ್ ವಲಯದ ಜನರಿಗೆ ಬಾಲು ಅವರ ಚಿಂತನೆಯಿಂದ ಕಿರಿಕಿರಿ ಆಗಬಹುದು, ಆಗುತ್ತಿದೆ. ಇದರ ಫಲವಾಗಿಯೇ ಅವರೆಲ್ಲ ಬಾಲು ಅವರ ಕೃತಿಯನ್ನು ಓದದೇ ಅವರೊಬ್ಬ ಪುರೋಗಾಮಿ, ಪ್ರತಿಗಾಮಿ ಇತ್ಯಾದಿ ಇತ್ಯಾದಿ ಹಣೆಪಟ್ಟಿ ಹಚ್ಚುವ ಕೆಲಸ ನಡೆಸಿದ್ದಾರೆ. ಜಾನಪದದ ವಿದ್ಯಾರ್ಥಿಯಾಗಿ, ಕ್ಷೇತ್ರಕಾರ್ಯಕರ್ತನಾಗಿ ಕೆಲಸಮಾಡುತ್ತಿರುವ ನನಗೆ ನಮ್ಮ ಸುತ್ತಲಿನ ಕನಿಷ್ಠ ಮೂವತ್ತು ವಿಭಿನ್ನ ಸಮುದಾಯಗಳ ವಿವಿಧ ಆಚಾರ-ವಿಚಾರಗಳ ಪ್ರತ್ಯಕ್ಷ ಅನುಭವವಿದೆ. ಬಾಲು ಅವರ ಚಿಂತನೆ ಓದುವವರೆಗೆ ಈ ಆಚಾರ-ವಿಚಾರಗಳಲ್ಲಿ ಇರುವ ಸಾಮ್ಯ, ವೈವಿಧ್ಯಗಳು ಅಸಂಖ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದವೇ ವಿನಾ ಎಡ-ಬಲಗಳ ಹೊಯ್ದಾಟದ ಯಾವ ಪ್ರಚಲಿತ ಸಿದ್ಧಾಂತಗಳೂ ತೃಪ್ತಿಕರ ಉತ್ತರ ನೀಡಿರಲಿಲ್ಲ. “ನಮ್ಮ ದೇಶದಲ್ಲಿ ರಿಲಿಜನ್ ಇಲ್ಲ; ಇಲ್ಲಿರುವುದು ಆಚರಣೆ ಮತ್ತು ಸಂಪ್ರದಾಯಗಳು. ಯಾರು ಯಾವ ಆಚರಣೆ ಮತ್ತು ಸಂಪ್ರದಾಯವನ್ನು ಬೇಕಾದರೂ ಅನುಸರಿಸಬಹುದು. ಇದಕ್ಕೆ ಜಾತಿ ಕಟ್ಟು ಎಂಬುದಿಲ್ಲ. ಯಾವುದೂ ಹೆಚ್ಚಲ್ಲ, ಯಾವುದೂ ಕೀಳಲ್ಲ. ನಮ್ಮಲ್ಲಿ ಧರ್ಮ ಇದೆ, ರಿಲಿಜನ್ ಇಲ್ಲ. ಯಾವುದೂ ನಮ್ಮಲ್ಲಿ ಒಂದು ಎನ್ನುವುದಿಲ್ಲ. ದೇವರಾಗಲೀ, ಸ್ಕ್ರಿಪ್ಚರ್ (ರಿಲಿಜಿಯಸ್ ಸೂತ್ರ ನಿರ್ದೇಶಿಸುವ ಗ್ರಂಥಗಳು) ಆಗಲೀ ಯಾವುದೂ ಒಂದಿಲ್ಲ. ಇವೆಲ್ಲ ಒಂದೇ ಎಂಬುದು ಇರುವುದು ಕ್ರಿಶ್ಚಿಯನ್, ಇಸ್ಲಾಂನಂಥ ರಿಲಿಜನ್ನುಗಳಲ್ಲಿ” ಎನ್ನುವ ಬಾಲು ಅವರು ವಸಾಹತುಗಳ ಮೂಲಕ ಭಾರತಕ್ಕೆ ರಿಲಿಜನ್ ಪರಿಕಲ್ಪನೆ ತಪ್ಪಾಗಿ ಹೇಗೆ ಬಂದಿದೆ ಹಾಗೂ ಅದು ಏನೆಲ್ಲ ಅನಾಹುತ ಉಂಟುಮಾಡಿದೆ ಎಂಬುದನ್ನು ಎಳೆಎಳೆಯಾಗಿ ವಿವರಿಸುತ್ತಾರೆ.

ಮತ್ತಷ್ಟು ಓದು »

14
ಮೇ

ನಾಡು-ನುಡಿ : ಮರುಚಿಂತನೆ – ಮೂಲಭೂತವಾದದ ಒಂದು ಸೆಕ್ಯುಲರ್ ಅವತಾರ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಮೂಲಭೂತವಾದಿ ಸೆಕ್ಯುಲರಿಸಂಪ್ರಗತಿಪರರು ಕ್ರೈಸ್ತ ಹಾಗೂ ಮುಸ್ಲಿಂ ಸಮಾಜಗಳನ್ನು ಟೀಕಿಸುವ ಕ್ರಮಕ್ಕೂ ಹಿಂದೂ ಸಮಾಜವನ್ನು ಟೀಕಿಸುವ ಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ಸಮಾಜಗಳಲ್ಲಿ ಯಾವುದಾದರೂ ತಪ್ಪು ಆಚರಣೆಯ ಕುರಿತು ಚರ್ಚೆ ಎದ್ದರೆ ಅವನ್ನು ಅವರ ಪವಿತ್ರಗ್ರಂಥಗಳು ಸಮರ್ಥಿಸಲು ಸಾಧ್ಯವೇ ಇಲ್ಲ ಎಂಬುದು ಇವರ ಧೃಡ ನಂಬಿಕೆ. ಅವು ಏನಿದ್ದರೂ ಇಂದಿನ ಅನುಯಾಯಿಗಳ ಅಜ್ಞಾನಕ್ಕೆ ಸಂಬಂಧಿಸಿದ್ದು ಅಷ್ಟೆ. ಉದಾಹರಣೆಗೆ, ಇಂದು ಭಯೋತ್ಪಾದನೆಯ ಕುರಿತು ನಡೆಯುವ ಚರ್ಚೆಗಳನ್ನು ಗಮನಿಸಿ. ಪ್ರತಿಯೊಬ್ಬರೂ ಕೂಡ ಅವು ಇಸ್ಲಾಂನ ಪವಿತ್ರಗ್ರಂಥಗಳಿಗೆ ವಿರುದ್ಧವಾಗಿವೆ ಎಂಬ ತರ್ಕವನ್ನಿಟ್ಟೇ ಅವುಗಳನ್ನು ಖಂಡಿಸುತ್ತಾರೆ. ಅಂದರೆ ಅವರ ಕೃತ್ಯಗಳನ್ನು ಇಸ್ಲಾಂನ ನಿರ್ದೇಶನಗಳಲ್ಲ ಎಂಬುದಾಗಿ ನೋಡುವುದು ಅತ್ಯಂತ ನಿರ್ಣಾಯಕವಾಗಿದೆ. ಜಿಹಾದಿಗೆ ಸಂಬಂಧಿಸಿದಂತೆ, ಬುರ್ಖಾಕ್ಕೆ ಸಂಬಂಧಿಸಿದಂತೆ, ತಲಾಖ್‍ಗೆ ಸಂಬಂಧಿಸಿದಂತೆ, ಹೀಗೆ ಇದುವರೆಗೆ ಎಷ್ಟು ಚರ್ಚೆಗಳು ಎದ್ದಿವೆಯೋ ಅವುಗಳಲ್ಲೆಲ್ಲ ಎಲ್ಲೂ ಕೂಡ ಪವಿತ್ರ ಗ್ರಂಥದ ನಿಂದನೆ ಆಗದಂತೇ ಎಚ್ಚರವಹಿಸಿ ವಾದಗಳನ್ನು ಬೆಳೆಸಲಾಗುತ್ತದೆ. ಅಂದರೆ ಇಸ್ಲಾಂ ರಿಲಿಜನ್ನು ಮೂಲತಃ ಒಳ್ಳೆಯದು, ಇಂದಿನ ದುಷ್ಪರಿಣಾಮಕ್ಕೆ ಅದು ಹೊಣೆಯಲ್ಲ ಎಂಬುದು ಇವರ ವಾದ.

ಇದರಲ್ಲೇನು ಸ್ವಾರಸ್ಯ? ಎಂದು ನೀವು ಹುಬ್ಬೇರಿಸಬಹುದು. ಪ್ರತಿಯೊಂದು ಮತಾನುಯಾಯಿಗಳಿಗೂ ತಮ್ಮ ಮತದ ಕುರಿತು ನಂಬಿಕೆ ಇರುವುದು ಸ್ವಾಭಾವಿಕ. ಆದರೆ ನಾನು ಹೇಳುತ್ತಿರುವುದು ಶ್ರದ್ಧಾವಂತ ಮುಸ್ಲಿಮರ ಕಥೆಯಲ್ಲ, ಬದಲಾಗಿ ತಾವು ಪ್ರಗತಿಪರರೆಂದು, ಸೆಕ್ಯುಲರ್‍ವಾದಿಗಳು ಅಥವಾ ಬುದ್ಧಿಜೀವಿಗಳೆಂದು ಕರೆದುಕೊಂಡ ಮುಸ್ಲಿಮರ ಕಥೆ. ಇದು ಮುಸ್ಲಿಂ ಬುದ್ಧಿಜೀವಿಗಳದೊಂದೇ ಕಥೆಯಲ್ಲ, ಸೆಕ್ಯುಲರ್ ಎಂದು ಕರೆದುಕೊಂಡ ಹಿಂದೂ ಬುದ್ಧಿಜೀವಿಗಳ ಕಥೆ ಕೂಡಾ ಹೌದು.  ಅಂದರೆ ಯಾವ ರಿಲಿಜನ್ನುಗಳಿಗೂ ಸೇರದೇ ತಟಸ್ಥವಾಗಿ ಚಿಂತನೆ ನಡೆಸಬೇಕೆಂದು ಪ್ರತಿಪಾದಿಸುವವರು. ಇದುವರೆಗೆ ಮುಸ್ಲಿಮರ ಪವಿತ್ರಗ್ರಂಥವೇ ಸರಿಯಿಲ್ಲ ಎಂದು ಯಾವ ಮುಸ್ಲಿಂ ಅಥವಾ ಹಿಂದೂ ಸೆಕ್ಯುಲರ್ ಬುದ್ಧಿಜೀವಿ ಕೂಡ ಹೇಳಿದ್ದು ನಾನು ಕೇಳಿಲ್ಲ. ಹಾಗಂತ ಅವರು ಹಾಗೆ ಹೇಳಬೇಕಿತ್ತು ಅಂತಾಗಲೀ, ಯಾರದಾದರೂ ಪವಿತ್ರಗ್ರಂಥವನ್ನು ನಿಂದಿಸುವುದು ಸರಿಯೆಂದಾಗಲೀ ನಾನಿಲ್ಲಿ ಸೂಚಿಸುತ್ತಿಲ್ಲ ಎಂಬುದನ್ನು ಸ್ಪಷ್ಟೀಕರಿಸುತ್ತೇನೆ. ನಾನು ನಿಮ್ಮ ಗಮನ ಸೆಳೆಯಲೆತ್ನಿಸುವುದು ನಮ್ಮ ಬುದ್ಧಿಜೀವಿಗಳ ಈ ಧೋರಣೆಯ ಕುರಿತು. ಅವರು ಅಪ್ರಾಮಾಣಿಕರು ಅಂತ ನನ್ನ ಹೇಳಿಕೆಯಲ್ಲ. ಅವರಿಗೆ ನಿಜವಾಗಿಯೂ ಹಾಗೇ ಅನಿಸುತ್ತದೆ ಅಂತಲೇ ಇಟ್ಟುಕೊಳ್ಳೋಣ.
ಮತ್ತಷ್ಟು ಓದು »

11
ಮೇ

ಮಹಾತ್ಮ ಬಸವಣ್ಣನವರು ನಮಗಿಂದು ಎಷ್ಟು ಪ್ರಸ್ತುತ?

– ಡಾ. ಸಂಗಮೇಶ ಸವದತ್ತಿಮಠ     

Basavannaಬಸವಣ್ಣನವರೆಂಬ ಮಹಾತ್ಮರ ಬಗ್ಗೆ ಯಾರಿಗೆ ಗೊತ್ತಿಲ್ಲ?  ಬಿಜ್ಜಳನ ಆಸ್ಥಾನದಲ್ಲಿದ್ದು ರಾಜಕಾರಣಿ, ಆಡಳಿತಗಾರ; ಧರ್ಮತತ್ತ್ವಪ್ರಮೇಯಗಳನ್ನು ಹೊಸ ಆನ್ವಯಿಕತೆಯಿಂದ ಪ್ರಯೋಜನಕಾರಿಯಾಗಿಸಿದ್ದರಿಂದ ತತ್ತ್ವಜ್ಞಾನಿ; ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು, ಆಧ್ಯಾತ್ಮದ ಬೆಳಸು ತೆಗೆದ ಶ್ರೇಷ್ಠ ಆಧ್ಯಾತ್ಮಸಂತ,ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸುಗಾರ, ಧೀಮಂತ ಸಮಾಜಪುರುಷ, ಬದಲಾವಣೆಯ ಹರಿಕಾರ ಕ್ರಾಂತಿಪುರುಷ ಬಸವಣ್ಣ.

ವೇದಿಕೆ, ಸಂದರ್ಭ ಸಿಕ್ಕರೆ ಸಾಕು, “12ನೇ ಶತಮಾನದ ಶರಣರ ಜೀವನ ಮತ್ತು ಸಂದೇಶಗಳು ನಮ್ಮ ಇಂದಿನ  ಕಾಲದಲ್ಲಿಯೂ ಬಹಳ ಪ್ರಸ್ತುತ, ಮಾದರಿ, ಅನುಸರಿಸಲು ಯೋಗ್ಯ” ಎಂದೆಲ್ಲ ಒತ್ತಿ ಒತ್ತಿ ಹೇಳುತ್ತೇವೆ. ವಾಸ್ತವವಾಗಿ ಅವುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇದು ವಿಪರ್ಯಾಸವಲ್ಲದೆ ಮತ್ತೇನು?  ಧಾರ್ಮಿಕ, ಸಾಮಾಜಿಕ, ರಾಜಕೀಯ ಯಾವುದೇ ಕ್ಷೇತ್ರವಿರಲಿ ಅಲ್ಲಿ ಬಸವಣ್ಣನವರು ಯಾವುದನ್ನು ಹೇಳಿಲ್ಲವೋ ಅದನ್ನು ನಾವು ಮಾಡುತ್ತ ಅವರಿಗೆ ದ್ರೋಹ ಬಗೆಯುತ್ತಿದ್ದೇವೆ ಅನ್ಯಾಯಮಾಡುತ್ತಿದ್ದೇವೆ. ವಚನಗಳ ಪ್ರಸ್ತುತತೆಯ ಪ್ರಸ್ತಾಪ ಮಾಡುವವರು ಸಾಮಾನ್ಯವಾಗಿ ಬಸವಣ್ಣನವರ ಸಾಮಾಜಿಕ ರಾಜಕೀಯ ವಿಷಯಗಳು ಮತ್ತು ಆಚರಣಾತ್ಮಕ ವಿಷಯಗಳನ್ನು ಒತ್ತುಕೊಟ್ಟು ಹೇಳುತ್ತಾರೆ. ಸರಿ, ಆದರೆ  ಬಸವಣ್ಣನವರು ಪರಮಾರ್ಥ,ಶಿವಯೋಗ,ಆಧ್ಯಾತ್ಮ ವಿಷಯಗಳನ್ನೂ ಕೂಡ ಅಷ್ಟೇ ಗಂಭೀರವಾಗಿಯೇ ತಗೆದುಕೊಂಡವರು.ಅಂಥ ವಿಷಯಗಳು ಈಗ ನಮಗೆ ಎಷ್ಟು ಪ್ರಸ್ತುತ? ಎಂಬುದನ್ನು ನಾವು ಬಹುತೇಕ ಬದಿಗೆ ಸರಿಸಿ ಅವರು ಲೌಕಿಕದ ಬಗ್ಗೆ ಹೇಳಿದ್ದನ್ನೇ ಪ್ರಸ್ತುತತೆಗೆ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಬಸವಣ್ಣನವರು ತೆರೆದ ಮನಸ್ಸಿನಿಂದ ಲೋಕವ್ಯವಹಾರವನ್ನು,ಪರಮಾರ್ಥವನ್ನು ಬಗಿದು ನೋಡಿದವರು. ಅವರಿಗೆ ಲೌಕಿಕ ಎನ್ನುವುದು ವರ್ಜ್ಯವಾಗಿರಲಿಲ್ಲ. ಆದರೆ ಬರೀ ಲೌಕಿಕದಲ್ಲೇ ತೊಳಲಾಡಿದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದಿಲ್ಲ. ಮನುಷ್ಯನ ಬದುಕಿನ ಸಾರ್ಥಕತೆ ಇರುವುದು ಲೌಕಿಕವನ್ನು ಸಾತ್ವಿಕವಾಗಿ ಅನುಭವಿಸುತ್ತಲೇ ಪರಮಾರ್ಥದ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿದೆ ಎಂಬುದನ್ನು ಅವರು ಆಚರಿಸಿ ತೋರಿಸಿಕೊಟ್ಟರು.
ಮತ್ತಷ್ಟು ಓದು »

5
ಮೇ

ನಾಡು-ನುಡಿ : ಮರುಚಿಂತನೆ – ಜಾತಿಗಣತಿ ಪ್ರತಿನಿಧಿಸುವುದೇನನ್ನು?

ಇಂಗ್ಲೀಷ್ ಮೂಲ:-ವಿವೇಕ್ ಧಾರೇಶ್ವರ್, ಸ್ಕಾಲರ್ ಇನ್ ರೆಸಿಡೆನ್ಸ್, ಸೃಸ್ಟಿ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು
ಕನ್ನಡ ಅನುವಾದ: ಅಶ್ವಿನಿ. ಬಿ. ದೇಸಾಯಿ, ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು

ಜಾತಿಗಣತಿನಮ್ಮ ರಾಜ್ಯದಲ್ಲಿ ಜಾತಿಗಳನ್ನು ಲೆಕ್ಕ ಮಾಡುವ, ಕರ್ನಾಟಕ ಸರಕಾರದ ಉದ್ದೇಶದ ಸ್ವರೂಪವೇನು ಎಂಬುದು ನಮಗೆ ಅರ್ಥವಾಗದ ಸಂಗತಿ. ಈ ಗಣತಿಯು,  ಗಂಭೀರವಾದ ಬೌದ್ದಿಕ ಪ್ರಕ್ರಿಯೆಯೋ, ಸರಕಾರದ ನೀತಿಗಳನ್ನು ಸುಲಭಮಾಡುವ ಮಾಹಿತಿ ಸಂಗ್ರಹಣೆಯೋ ಅಥವಾ ರಾಜಕೀಯ ಪ್ರೇರಿತವಾದದ್ದೋ ಎಂಬುದು ಇನ್ನೂ ಸರಿಯಾಗಿ ಅರ್ಥವಾಗುತ್ತಿಲ್ಲ, ಉದಾಹರಣೆ, ಜಾತಿಗಣತಿಯವರು ಬಂದು ನಮ್ಮ ಮನೆ ಬಾಗಿಲು ಬಡಿದರೆ, ಈ ಪ್ರಕ್ರಿಯೆ ಬಗ್ಗೆ, ಹಾಗೂ ಜಾತಿವ್ಯವಸ್ಥೆ ಬಗ್ಗೆ, ಅನುಮಾನವಿರುವ ನಮ್ಮಂಥವರು ಏನು ಹೇಳಬೇಕೆಂಬುದು ಒಂದು ದೊಡ್ದ ಪ್ರಶ್ನೆಯಾಗಿದೆ.

ಜಾತಿ ಗಣತಿಯವರು ನನ್ನ ಜಾತಿ ಯಾವುದೆಂದು ಕೇಳಿದಾಗ ನಾನು “ಕಂಪ್ಯೂಟರ್ ವಿಜ್ಞಾನಿ” ಅಥವಾ ‘ಲಿಬರಲ್’ ಅಥವಾ ಮಾರ್ಕಿಸ್ಟ್ ಎಂದು ಹೇಳಿದರೆ ಏನಾಗಬಹುದು? ‘ಬಡಗಿ’, ‘ಮಾಧ್ವ’ ಮತ್ತು ‘ಅಯ್ಯಂಗಾರ್’ ಸರಿಯಾದ ಉತ್ತರಗಳಾದರೆ, ನನ್ನ ಉತ್ತರಗಳೇಕೆ ಸರಿಯಲ್ಲ? ಮೇಲೆ ಹೇಳಿದ ಇಂಗ್ಲಿಷ್ ಪದಗಳನ್ನು, ಕನ್ನಡೀಕರಿಸಿದರೆ ‘ಗಣಕಿ’, ‘ಉದಾರಿ’, ‘ಎಡಪಂಥಿ’ ಎಂದಾಗುತ್ತವೆ. ಇವನ್ನು ನಾವೇಕೆ ಜಾತಿಗಣತಿಯ ಪಟ್ಟಿಗೆ ಸೇರಿಸಬಾರದು? ಮೇಲ್ಕಂಡ ಪ್ರಶ್ನೆಗಳು ನಮಗೆ ಈ ವಿಷಯದ ಬಗ್ಗೆ ಇರುವ ಅಸ್ಪಷ್ಟತೆ ಗೆ ಸ್ಪಷ್ಟ ಉದಾಹರಣೆ.

ನಮ್ಮಲ್ಲಿ ಅನೇಕರಿಗೆ ನಿಮ್ಮ ರಿಲಿಜನ್ ಯಾವುದು ಎಂದಾಗ, ಹಿಂದೂ ಎಂದು ಹೇಳುವುದು ಅಸಹಜವೆನಿಸುತ್ತದೆ. ಇಂತಹ ಪ್ರತಿಕ್ರಿಯೆ ಜಾತಿ ಎಂಬ ಪ್ರಭೇದಕ್ಕೂ ಅನ್ವಯಿಸುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಚರ್ಚೆ ಮಾಡುವಾಗ ತಾವು ಯಾವ ಮತದವರು? ಅಥವಾ ಯಾವ ಸಂಪ್ರದಾಯದವರು? ಎಂಬ ಪ್ರಶ್ನೆ ಎದುರಾಗುವುದುಸರ್ವೇಸಾಮಾನ್ಯ. ಇಂತಹ ಪ್ರಶ್ನೆಗಳಿಗೆ ಪಶ್ಚಿಮದಲ್ಲಿರುವುದು “ಎತ್ನಿಕ್” ಎಂಬ ಉತ್ತರಮಾತ್ರ. ಅದನ್ನು ವಿವರಿಸಲು ನಮ್ಮ ಬಳಿ ಶಬ್ದಗಳಿಲ್ಲ. ಜಾತಿ ಮತ್ತು ಮತ (ರಿಲಿಜನ್) ಈ ಅರ್ಥಕೊಡುವ ಶಬ್ದಗಳಾಗಿ ಮಾರ್ಪಟ್ಟಿವೆ. ಕಾರಣ, ಎತ್ನಿಕ್‍ಗೆ ಹೊಂದುವ ಶಬ್ದಗಳು ಇಲ್ಲಿಲ್ಲ.

ಮತ್ತಷ್ಟು ಓದು »

4
ಮೇ

ನಾಡು-ನುಡಿ : ಮರುಚಿಂತನೆ – ಭಕ್ತಿ ಮಾರ್ಗವನ್ನೇ ನಿರಾಕರಿಸುವವರಿಗೆ ಭಕ್ತರು ಹೇಗೆ ಅರ್ಥವಾದಾರು?

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಪುರಂದರದಾಸ,ಕನಕದಾಸಇತ್ತೀಚೆಗೆ ಕನಕದಾಸರ ಜಯಂತಿಯ ಆಚರಣೆ ನಡೆಯಿತು.ಹಾಗೂ ಪತ್ರಿಕೆಗಳಲ್ಲಿ ಅವರ ಕುರಿತು ಲೇಖನಗಳು ಪ್ರಕಟವಾದವು. ಜೊತೆಗೇ ರಾಜಕಾರಣಿಗಳು ತಮ್ಮ ಭಾಷಣಗಳಲ್ಲಿ ನೀಡಿದ ಹೇಳಿಕೆಗಳೂ ವರದಿಯಾದವು. ಅವುಗಳಲ್ಲಿ ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರಗತಿಪರ ಧೋರಣೆಯೊಂದರ ಕುರಿತು ಇಲ್ಲಿ ಚರ್ಚಿಸುತ್ತೇನೆ.ನಮ್ಮ ವಚನಕಾರರು, ದಾಸರು ಇವರೆಲ್ಲರೂ ಶಿವ ಭಕ್ತರು, ವಿಷ್ಣು ಭಕ್ತರು ಎಂಬುದಾಗಿ ತಿಳಿದಿದ್ದೇವೆ. ಆದರೆ ಆಶ್ಚರ್ಯದ ವಿಷಯವೆಂದರೆ  ಈ ಶರಣರ, ದಾಸರ ಭಕ್ತಿಯ ಪರಿಕಲ್ಪನೆಯ ಕುರಿತಾಗಲೀ, ಅವರು ಭಗವಂತನ ಕುರಿತು ಏನು ಹೇಳುತ್ತಾರೆ ಎಂಬುದರ ಕುರಿತಾಗಲೀ ಕುತೂಹಲವೇ ನಮ್ಮ ಬಹುತೇಕ ಸಾಮಾಜಿಕ ಚಿಂತಕರಿಗೆ ಅಪ್ರಸ್ತುತವಾದಂತಿದೆ. ಹಾಗೂ ಅಂಥ ಚಿತ್ರಣದ ಅಗತ್ಯವೇ ಇಲ್ಲ ಎಂಬ ಧೋರಣೆಯನ್ನು ಇಂಥ ಚಿಂತಕರು ಹಾಗೂ ಅವರಿಂದ ಪ್ರಭಾವಿತರಾದ ರಾಜಕಾರಣಿಗಳು ತಳೆದಂತಿದೆ. ಆ ಶರಣರು ಹಾಗೂ ದಾಸರೆಲ್ಲ ಲಿಂಗ, ಜಾತಿ, ವರ್ಗ ಸಮಾನತೆಗಾಗಿ ಹೋರಾಡಿದರು ಎಂಬುದೊಂದೇ ವಿಷಯ ಅಲ್ಲಿ ಮುಖ್ಯವಾಗುತ್ತದೆ. ಅದರಲ್ಲೂ ಅವರು ಜಾತಿಯ ತುಳಿತಕ್ಕೊಳಗಾಗಿದ್ದರು, ಹಾಗೂ ಅದರ ವಿರುದ್ಧ ಹೋರಾಡುವ ಏಕಮೇವ ಉದ್ದೇಶಕ್ಕಾಗಿಯೇ ಅವರು ಸಂತರಾದರು ಎಂದು ಬಿಂಬಿಸಲಾಗುತ್ತದೆ. ಇಂಥವರು ನಮ್ಮ ಭಕ್ತಿಯುಗದ ಸಂತರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ?

ಮತ್ತಷ್ಟು ಓದು »