ವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೧
– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಆಫ್ರಿಕ ಜಾನಪದ ಕುರಿತ ವಿಶ್ವಕೋಶವನ್ನು ಸಿದ್ಧಪಡಿಸುವ ಕೆಲಸದಲ್ಲಿರುವಾಗ ಅಲ್ಲಿನ ಮೂಲನಿವಾಸಿಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಕಲೆಹಾಕಬೇಕಾಗಿ ಬಂತು.ಮಾಕೊಂಡೆ, ಲುಂಗ, ಲುಂಡ, ಲುವಾಲೆ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಮೂಲನಿವಾಸಿಗಳನ್ನು ಕುರಿತ ಇತಿಹಾಸ, ಮಾಹಿತಿ ಕಲೆಹಾಕಿದಾಗ ಅಚ್ಚರಿ ಎನಿಸುವ ಸಂಗತಿಗಳು ಒಂದೊಂದಾಗಿ ಹೊರಬೀಳತೊಡಗಿದವು. ಆ ಹಿನ್ನೆಲೆಯಲ್ಲಿ ಈ ಲೇಖನ.
ಕ್ರಿಶ್ಚಿಯಾನಿಟಿಯ ಬಿಬ್ಲಿಕಲ್ ಥಿಯಾಲಜಿ ಹಿನ್ನೆಲೆಯ ಯೂರೋಪಿನ ಎಂಪಿರಿಕಲ್ ಇತಿಹಾಸವೇ ಇಡೀ ವಿಶ್ವದ ಮನುಕುಲದ ಇತಿಹಾಸ ಹೇಗಾಗಿದೆ ಎಂಬುದನ್ನು ಪ್ರೊ.ಬಾಲಗಂಗಾಧರ (ಬಾಲು) ಅವರು ಎಳ್ಳಷ್ಟೂ ಶಂಕೆ ಇಲ್ಲದಂತೆ ಸಾಧಾರವಾಗಿ ತಮ್ಮ ಕೃತಿಗಳಲ್ಲಿ ಅದರಲ್ಲೂ “ದಿ ಹೀದನ್ ಇನ್ ಹಿಸ್ ಬ್ಲೈಂಡ್‍ನೆಸ್ (1994)” ಹಾಗೂ “ಡು ಆಲ್ ರೋಡ್ ಲೀಡ್ ಟು ಜೆರುಸಲೇಂ? ದಿ ಮೇಕಿಂಗ್ ಆಫ್ ಇಂಡಿಯನ್ ರಿಲಿಜನ್ಸ್ (2014)” ಸಂಶೋಧನ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.ಸ್ಥಾಪಿತ ವಾದಗಳಲ್ಲೇ ಸ್ವಂತಿಕೆ ಕಂಡುಕೊಂಡ ಶೈಕ್ಷಣಿಕ ಹಾಗೂ ವಿದ್ವತ್ ವಲಯದ ಜನರಿಗೆ ಬಾಲು ಅವರ ಚಿಂತನೆಯಿಂದ ಕಿರಿಕಿರಿ ಆಗಬಹುದು, ಆಗುತ್ತಿದೆ. ಇದರ ಫಲವಾಗಿಯೇ ಅವರೆಲ್ಲ ಬಾಲು ಅವರ ಕೃತಿಯನ್ನು ಓದದೇ ಅವರೊಬ್ಬ ಪುರೋಗಾಮಿ, ಪ್ರತಿಗಾಮಿ ಇತ್ಯಾದಿ ಇತ್ಯಾದಿ ಹಣೆಪಟ್ಟಿ ಹಚ್ಚುವ ಕೆಲಸ ನಡೆಸಿದ್ದಾರೆ. ಜಾನಪದದ ವಿದ್ಯಾರ್ಥಿಯಾಗಿ, ಕ್ಷೇತ್ರಕಾರ್ಯಕರ್ತನಾಗಿ ಕೆಲಸಮಾಡುತ್ತಿರುವ ನನಗೆ ನಮ್ಮ ಸುತ್ತಲಿನ ಕನಿಷ್ಠ ಮೂವತ್ತು ವಿಭಿನ್ನ ಸಮುದಾಯಗಳ ವಿವಿಧ ಆಚಾರ-ವಿಚಾರಗಳ ಪ್ರತ್ಯಕ್ಷ ಅನುಭವವಿದೆ. ಬಾಲು ಅವರ ಚಿಂತನೆ ಓದುವವರೆಗೆ ಈ ಆಚಾರ-ವಿಚಾರಗಳಲ್ಲಿ ಇರುವ ಸಾಮ್ಯ, ವೈವಿಧ್ಯಗಳು ಅಸಂಖ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದವೇ ವಿನಾ ಎಡ-ಬಲಗಳ ಹೊಯ್ದಾಟದ ಯಾವ ಪ್ರಚಲಿತ ಸಿದ್ಧಾಂತಗಳೂ ತೃಪ್ತಿಕರ ಉತ್ತರ ನೀಡಿರಲಿಲ್ಲ. “ನಮ್ಮ ದೇಶದಲ್ಲಿ ರಿಲಿಜನ್ ಇಲ್ಲ; ಇಲ್ಲಿರುವುದು ಆಚರಣೆ ಮತ್ತು ಸಂಪ್ರದಾಯಗಳು. ಯಾರು ಯಾವ ಆಚರಣೆ ಮತ್ತು ಸಂಪ್ರದಾಯವನ್ನು ಬೇಕಾದರೂ ಅನುಸರಿಸಬಹುದು. ಇದಕ್ಕೆ ಜಾತಿ ಕಟ್ಟು ಎಂಬುದಿಲ್ಲ. ಯಾವುದೂ ಹೆಚ್ಚಲ್ಲ, ಯಾವುದೂ ಕೀಳಲ್ಲ. ನಮ್ಮಲ್ಲಿ ಧರ್ಮ ಇದೆ, ರಿಲಿಜನ್ ಇಲ್ಲ. ಯಾವುದೂ ನಮ್ಮಲ್ಲಿ ಒಂದು ಎನ್ನುವುದಿಲ್ಲ. ದೇವರಾಗಲೀ, ಸ್ಕ್ರಿಪ್ಚರ್ (ರಿಲಿಜಿಯಸ್ ಸೂತ್ರ ನಿರ್ದೇಶಿಸುವ ಗ್ರಂಥಗಳು) ಆಗಲೀ ಯಾವುದೂ ಒಂದಿಲ್ಲ. ಇವೆಲ್ಲ ಒಂದೇ ಎಂಬುದು ಇರುವುದು ಕ್ರಿಶ್ಚಿಯನ್, ಇಸ್ಲಾಂನಂಥ ರಿಲಿಜನ್ನುಗಳಲ್ಲಿ” ಎನ್ನುವ ಬಾಲು ಅವರು ವಸಾಹತುಗಳ ಮೂಲಕ ಭಾರತಕ್ಕೆ ರಿಲಿಜನ್ ಪರಿಕಲ್ಪನೆ ತಪ್ಪಾಗಿ ಹೇಗೆ ಬಂದಿದೆ ಹಾಗೂ ಅದು ಏನೆಲ್ಲ ಅನಾಹುತ ಉಂಟುಮಾಡಿದೆ ಎಂಬುದನ್ನು ಎಳೆಎಳೆಯಾಗಿ ವಿವರಿಸುತ್ತಾರೆ.
ನಮ್ಮ ದೇಶದ ಜಾತಿ, ಸಮುದಾಯಗಳ ಆಚಾರ ವಿಚಾರಗಳನ್ನು ಇಂದು ಅಧ್ಯಯನ ಮಾಡುವಾಗ ಯೂರೋಪಿಯನ್ ಶಿಕ್ಷಣ ವ್ಯವಸ್ಥೆ ನಿರ್ದೇಶಿಸಿ ಕಲಿಸಿದ ತತ್ತ್ವ ಮತ್ತು ತಥಾಕಥಿತ ಸಿದ್ಧಾಂತಗಳು ಹೇಳುವ ಮೇಲು-ಕೀಳು ಜಾತಿಗಳು, ಪುರೋಹಿತಶಾಹಿ, ವೈದಿಕ ಆಚರಣೆಯ ಹುನ್ನಾರ, ಹೇರಿಕೆ ಮೊದಲಾದ ಸಂಗತಿಗಳು ನಿಜವಾದ ಕ್ಷೇತ್ರಕಾರ್ಯದಲ್ಲಿ ಯಾವ ಕೆಲಸಕ್ಕೂ ಬರುವುದಿಲ್ಲ. ಮೈಲಾರಲಿಂಗನಿಗೆ ನಡೆದುಕೊಳ್ಳುವ ವಿವಿಧ ಜಾತಿಯ ಜನ ಗೊರವರಾಗುತ್ತಾರೆ. ಗೊರವ ಎಂಬುದು ಜಾತಿಯಲ್ಲ. ಕಂಬಳಿ ಗೊರವ, ಮಡಿಗೊರವ ಇತ್ಯಾದಿ ಹತ್ತಾರು ಗೊರವ ವ್ರತ ಹಿಡಿಯುವ ಜನರಿದ್ದಾರೆ. ಇವರಲ್ಲಿ ಬ್ರಾಹ್ಮಣರೂ ಇರುತ್ತಾರೆ. ಬ್ರಾಹ್ಮಣರ ಸಂಪರ್ಕವೇ ಇಲ್ಲದ ಕಾಡುಗೊಲ್ಲರಲ್ಲಿ ಇರುವಷ್ಟು ಮಡಿ ಮೈಲಿಗೆ, ವಿಧಿ ನಿಷೇಧಗಳನ್ನು ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣರಲ್ಲೂ ಇಂದು ಕಾಣುವುದು ಕಷ್ಟ. ಇವೆಲ್ಲ ಅವರವರ ಆಚರಣೆಗಳು. ಇಂಥ ನಿದರ್ಶನಗಳು ದೇವರಗುಡ್ಡರಲ್ಲೂ ಇವೆ. ಇನ್ನೂ ಅನೇಕ ವ್ರತಗಳಲ್ಲೂ ಇವೆ. ಇವೇ ನಮ್ಮ ಸಮಾಜ-ಸಂಸ್ಕೃತಿಯ ವೈವಿಧ್ಯಕ್ಕೆ ಕಾರಣವಾದವು.ಎಡ-ಬಲ ಸಿದ್ಧಾಂತಗಳು ಇದನ್ನು ವಿವರಿಸಲಾರವು.ಬದಲಿಗೆ ಮತ್ತಷ್ಟು ಗೊಂದಲ ಹುಟ್ಟಿಸಬಲ್ಲವು. ಇಂದು ವಿಶ್ವವಿದ್ಯಾನಿಲಯಗಳಲ್ಲಿನ ಸಮಾಜವಿಜ್ಞಾನದ ಸಿದ್ಧಾಂತಗಳು 1910ರ ರಿಸ್ಲೆ, 1931ರ ಬ್ಯೂಗಲ್ಸ್, ಹೆಚ್ಚೆಂದರೆ 1960ರ ದಶಕದ ಎಂ ಎನ್ ಶ್ರೀನಿವಾಸರ ಅಧ್ಯಯನಕ್ಕೇ ನಿಂತುಹೋಗಿವೆ. 2000ದಿಂದ ಈಚಿನ ದೀಪಂಕರ್ ಗುಪ್ತಾ,ಡಕ್ರ್ಸ್ಅವರ ಅಧ್ಯಯನವನ್ನಾಗಲೀ ಬಾಲು ಅವರ ಅಧ್ಯಯನವನ್ನಾಗಲೀ ಗಮನಿಸದಿದ್ದರೆ ಸಮಾಜ ಅಥವಾ ಮಾನವಿಕ ಅಧ್ಯಯನಗಳಿಗೆ ಅರ್ಥವೇ ಇಲ್ಲ.
ಭಾರತದಂಥ ವೈವಿಧ್ಯಮಯ ಆಚರಣೆಯ ದೇಶ ಬ್ರಿಟಿಷ್ ಅಥವಾ ಯೂರೋಪಿಯನ್ ಆಡಳಿತಗಾರರಿಗೂ ವಿದ್ವಾಂಸರಿಗೂ ಅರ್ಥವೇ ಆಗಲಿಲ್ಲ. ತಮಗೆ ಪರಿಚಿತ ಜೀವನ ಶೈಲಿ ಮತ್ತು ರಿಲಿಜನ್ನಿನ ದೃಷ್ಟಿಯಿಂದ ನೋಡಿದ ಅವರು ಇದನ್ನು ಹೇಗೆ ಅರ್ಥೈಸಿದರು ಎಂಬುದನ್ನು ಬಾಲು ವಿಸ್ತೃತವಾಗಿ ಹೇಳುತ್ತಾರೆ. ವಸಾಹತುಶಾಹಿಗೆ ಮತ್ತೊಂದು ಮುಖವೂ ಇದೆ. ನೈಸರ್ಗಿಕ ಸಂಪನ್ಮೂಲವನ್ನು ಲೂಟಿ ಮಾಡುವುದಷ್ಟೇ ವಸಾಹತುಗಳ ಉದ್ದೇಶವಾಗಿರಲಿಲ್ಲ. ಹಾಗೆ ನೋಡಿದರೆ ಅನಾಗರಿಕ ಜನರಿಗೆ ನಾಗರಿಕ ಎನಿಸುವ ತಮ್ಮ ರಿಲಿಜನ್ನನ್ನು ಬೋಧಿಸುವುದು ಅವುಗಳ ಮುಖ್ಯ ಗುರಿಯಾಗಿತ್ತು. ಎರಡನೆಯ ಉದ್ದೇಶ ಸಂಪನ್ಮೂಲ ಲೂಟಿ.ಇದಕ್ಕೆ ನಿದರ್ಶನ ಭಾರತ ಮಾತ್ರವಲ್ಲದೇ ಆಫ್ರಿಕದ ಮೊಜಾಂಬಿಕ, ತಾಂಜಿನಿಯಗಳಲ್ಲಿ ವಸಾಹತುಗಳು ನಡೆದುಕೊಂಡ ರೀತಿಗಳಲ್ಲಿದೆ. ಯೂರೋಪಿನ ನಾವಿಕರು ಸಾಹಸದಿಂದ ಹೊಸ ಭೂಪ್ರದೇಶಗಳನ್ನು ಕಂಡುಹಿಡಿದು ಜೀವಂತವಾಗಿ ಮರಳಿ ರಮ್ಯ ಪ್ರವಾಸಿ ಕಥನಗಳ ಮೂಲಕ ತಮ್ಮ ದೇಶಗಳಲ್ಲಿ ಪ್ರಚುರಪಡಿಸಿದ್ದು ಸ್ಥಳೀಯ ಪ್ರಭುತ್ವಗಳು ಪ್ರಪಂಚಾದ್ಯಂತ ತಮ್ಮ ನೆಲೆ ಸ್ಥಾಪಿಸಲು ಮುಂದಾಗುವಂತೆ ಮಾಡಿತು. ವಸಾಹತುಗಳ ರಮ್ಯ ಕಥನಕ್ಕೆ ಮೂಲ ಪ್ರೇರಣೆ ಇದೇ. ಆದರೆ ಕೇವಲ ಭೂಪ್ರದೇಶ ವಶಪಡಿಸಿಕೊಳ್ಳುವುದನ್ನು ವ್ಯಾಟಿಕನ್ ವಿರೋಧಿಸಿತ್ತು. ಇದು ಕುತೂಹಲಕರ ಸಂಗತಿ.
ಜೆಸ್ಯೂಟರು ಏಷ್ಯಾಕ್ಕೆ ಬಂದು ತಮ್ಮ ನೆಲೆ ಸ್ಥಾಪಿಸಿದ ಹಿನ್ನೆಲೆಯನ್ನು ಸೊಗಸಾಗಿ ವರ್ಣಿಸುವ ಚಿತ್ರಣ ಕ್ರಿಸ್ ಲೋನೆಯವರ “ಹಿರಾಯಿಕ್ ಲೀಡರ್‍ಶಿಪ್’’ ಕೃತಿಯಲ್ಲಿದೆ. ಒಂದು ಅನನ್ಯ ಓದು ಇದು. 2001ರಲ್ಲಿ ಪ್ರಕಟವಾದ ಈ ಕೃತಿ ಸಿಬಿಪಿಎ ಬೆಸ್ಟ್ ಸೆಲರ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಪ್ರಪಂಚದ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಈಗಾಗಲೇ ಅನುವಾದವಾಗಿರುವ, ಏಕಕಾಲಕ್ಕೆ ಆಡಳಿತ ನಿರ್ವಹಣೆ ಮತ್ತು ವ್ಯಕ್ತಿತ್ವ ನಿರ್ಮಾಣಗಳೆರಡನ್ನೂ ಕಲಿಸುವ ಅಪೂರ್ವ ಕೃತಿ ಇದು. ಇದರಲ್ಲಿ ಮೊದಲು ವಸಾಹತು ಸ್ಥಾಪಿಸಿದ ಸ್ಪೇನ್ ಮತ್ತು ಪೋರ್ಚುಗೀಸರು ಪ್ರಪಂಚದೆಲ್ಲೆಡೆ ಹರಡತೊಡಗಿದ ಸ್ವಾರಸ್ಯಕರ ಇತಿಹಾಸವಿದೆ. ಅದರಲ್ಲಿ ಹೇಳಲಾದ ಸಂಗತಿಗಳು ಭಾರತದಂಥ ದೇಶಕ್ಕೆ ಯೂರೋಪಿಯನ್ನರು ಬಂದು ವಸಾಹತು ಸ್ಥಾಪಿಸಿದ್ದು ಈಗಾಗಲೇ ಎಲ್ಲರೂ ನಂಬಿದಂತೆ ಕೇವಲ ವ್ಯಾಪಾರದ ಉದ್ದೇಶದಿಂದ ಅಲ್ಲ. ಇದೇನಿದ್ದರೂ ಅವರ ಎರಡನೆಯ ಆದ್ಯತೆಯಾಗಿತ್ತು. ಮೊದಲ ಆದ್ಯತೆ ರಿಲಿಜನ್ ಇಲ್ಲದ ಇಲ್ಲಿನ ‘ಅನಾಗರಿಕರಿಗೆ’ ರಿಲಿಜನ್ ನೀಡುವ ತಮ್ಮ ಮತಪ್ರಚಾರವಾಗಿತ್ತು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ಉದ್ದೇಶವನ್ನು ಸ್ಪಷ್ಟಪಡಿಸುವವರೆಗೆ ಏಷ್ಯದತ್ತ ತೆರಳಲು ವ್ಯಾಟಿಕನ್‍ನಿಂದ ಪೋರ್ಚುಗೀಸರಿಗೆ ಅನುಮತಿಯೇ ದೊರೆತಿರಲಿಲ್ಲ. ಅಂದಹಾಗೆ ಭಾರತಕ್ಕೆ ಸ್ಪ್ಯಾನಿಶ್ ವಸಾಹತು ಬರಲೇ ಇಲ್ಲ! ಯಾಕೆಂದರೆ ಸ್ಪ್ಯಾನಿಶ್ ಮತ್ತು ಪೋರ್ಚುಗೀಸರ ನಡುವೆ ನಡೆದಿದ್ದ ಟಾರ್ಡೆಸಿಲಾಸ್ ಒಪ್ಪಂದ!
ಈ ಕೃತಿಯಲ್ಲಿನ ಕೆಲ ಭಾಗಗಳು ಹೀಗಿವೆ:
ಜೆಸ್ಯೂಟರಿಗೆ ದೊರೆತ ಮೊದಲ ವಿದೇಶೀ ಅವಕಾಶ ಬಂದುದು ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿದ್ದ ದೇಶವೊಂದರಿಂದ. ಸಣ್ಣ ದೇಶ ಪೋರ್ಚುಗಲ್ ಅಕ್ಷರಶಃವಾಗಿ ಮತ್ತು ಭೌಗೋಳಿಕವಾಗಿ ಬಹಳ ಹಿಂದಿನಿಂದಲೂ ಯೂರೋಪಿನ ಕಕ್ಷೆಯಲ್ಲೇ ಸೊರಗಿತ್ತು. ಆದರೆ ಅದರ ಒಳನಾಡೇನಾದರೂ ವಾಣಿಜ್ಯ ಚಟುವಟಿಕೆಗೆ ತೆರೆದುಕೊಂಡರೆ ಅಟ್ಲಾಂಟಿಕ್ ಸಮುದ್ರ ಶೋಧಕ್ಕೆ ಅದೊಂದು ಆದರ್ಶ ತಾಣವಾಗುತ್ತಿತ್ತು. ಪೋರ್ಚುಗೀಸ್ ಮತ್ತು ಸ್ಪಾನಿಷ್ ಶೋಧಕರು ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಪೋರ್ಚುಗೀಸ್ ಶೋಧಕ ಬಾರ್ತಲೋಮು ಡಯಾಸ್ 1488ರ ವೇಳೆಗೆ ಆಫ್ರಿಕಾದ ದಕ್ಷಿಣ ತುದಿಯನ್ನು ತಲುಪಿದ. ನಾಲ್ಕು ವರ್ಷಗಳ ನಂತರ ಕೊಲಂಬಸ್ ಅಮೆರಿಕದಲ್ಲಿ ಸ್ಪೇನಿನ ಧ್ವಜ ನೆಟ್ಟ.
ಏಷ್ಯಾ ಮತ್ತು ಅಮೆರಿಕದಲ್ಲಿ ಈ ಎರಡು ದೇಶಗಳು ತೀವ್ರ ಸ್ವರೂಪದ ಚಟುವಟಿಕೆ ಆರಂಭಿಸಿದ ಕಾರಣ ಯೂರೋಪಿನ ಅಧಿಕಾರ ಸಮತೋಲನ ಮೂಲತಃ ಮರು ಹೊಂದಾಣಿಕೆ ಪಡೆಯುವಂತಾಯಿತು. ಸಣ್ಣ ಪೋರ್ಚುಗಲ್ ಆ ಸ್ವರೂಪದಲ್ಲೇ ಉಳಿಯಲಿಲ್ಲ. ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳು ತಮಗೆ ಇಡೀ ಪ್ರಪಂಚವೇ ಇದೆ ಎಂದು ಭಾವಿಸಿದವು. ಸಾಮರ್ಥ್ಯ ಮೀರಿದ ಹೋರಾಟಕ್ಕೆ ಮುಂದಾಗುವ ಬದಲು ಅವರು ನಯವಾದ ಒಪ್ಪಂದ ಮಾಡಿಕೊಳ್ಳಲು ಮುಂದಾದವು. ಆ ದೇಶಗಳ ರಾಯಭಾರಿಗಳು ಕೇಪ್ ವರ್ಡೆ ದ್ವೀಪದ ಪಶ್ಚಿಮದ 370 ಲೀಗ್ (ಒಂದು ಲೀಗ್ ಅಂದರೆ ಸುಮಾರು 3.5 ಮೈಲು ದೂರ) ದೂರದಿಂದ (ಈ ಹೆಸರಿನ ದೇಶವೂ ಇರಲಿಲ್ಲ, ಅದೆಲ್ಲಿದೆ ಎಂಬುದೂ ತಿಳಿದಿರಲಿಲ್ಲ) ಪ್ರಪಂಚದ ಭೌಗೋಳಿಕ ರೇಖೆಯ ವಿಭಜನೆಗೆ ಒಪ್ಪಿಕೊಂಡರು.
ಅವರ ಈ ದುರ್ಬಲ ಹಾಗೂ ಕಾಲ್ಪನಿಕ ವಿಭಜನೆಯ ಆಧಾರದಿಂದ ಪೋರ್ಚುಗಲ್ ಹಾಗೂ ಸ್ಪೇನ್ ದೇಶದವರು ಉತ್ತರದಿಂದ ದಕ್ಷಿಣ ಧ್ರುವದವರೆಗೆ ಪ್ರಪಂಚವನ್ನು ಇಬ್ಭಾಗಿಸುವಂತೆ ಒಂದು ರೇಖೆಯನ್ನು ಎಳೆದರು. ಪ್ರಪಂಚದ ಅರ್ಧ ಭಾಗ ಸ್ಪೇನ್‍ಗೂ ಇನ್ನರ್ಧ ಭಾಗ ಪೋರ್ಚುಗಲ್‍ಗೂ ಸೇರಿತು. ಇನ್ನೆಷ್ಟು ಸರಳವಾಗಿರಬೇಕು? ಹೀಗೆ ಗುರುತಿಸಿದ ರೇಖೆಯ ಈಶಾನ್ಯ ಭಾಗದಲ್ಲಿ ಶೋಧಿತವಾದ ಹಾಗೂ ಇನ್ನೂ ಶೋಧಿತವಾಗದ ಭೂ ಪ್ರದೇಶ ಇನ್ನೂ ಕ್ರಿಶ್ಚಿಯನ್ ಒಡೆತನದಲ್ಲಿ ಇರದಿದ್ದರೆ ಅದು ತನ್ನದೆಂದು ಪೋರ್ಚುಗಲ್ ಮನಸ್ಸಿನಲ್ಲೇ ಮಂಡಿಗೆ ತಿನ್ನಲಾರಂಭಿಸಿತು. ಇದಾಹೋ ದೇಶದ ಅರ್ಧದಷ್ಟಿದ್ದ ಹಾಗೂ ಇಂದಿನ ಇದಾಹೋದಲ್ಲಿರುವಷ್ಟು ಜನರನ್ನು ಅಂದು ಹೊಂದಿದ್ದ ದೇಶವೊಂದು ಇಂಥ ಕನಸು ಕಂಡಿದ್ದರೆ ತಪ್ಪೇನೂ ಇಲ್ಲ.
“ಶೋಧಿತವಾಗದ’’ ಈ ಎಲ್ಲ ಭೂ ಪ್ರದೇಶವನ್ನು ಕ್ರಿಶ್ಚಿಯನ್ನರಲ್ಲದ ಜನ ಶತಮಾನಗಳ ಹಿಂದಿನಿಂದಿಲೇ ಆಕ್ರಮಿಸಿಕೊಂಡಿದ್ದರು. ಸಂಧಾನ ಕೈಗೊಳ್ಳುವಾಗ ಇವರನ್ನು ನಿರ್ಲಕ್ಷಿಸಲಾಗಿತ್ತು. ಅವರನ್ನು ಉದಾಸೀನ ಮಾಡಲಾಗಿತ್ತು ಮಾತ್ರವಲ್ಲದೇ ಯೂರೋಪಿನ ಯಾವೊಂದು ರಾಜ್ಯವೂ ಇವರನ್ನು ಆಹ್ವಾನಿಸಿರಲಿಲ್ಲ. ಈ ಸಂಧಾನವನ್ನು ಯಾರೂ ಗಂಭೀರವಾಗಿ ಪರಿಗಣಿಸದಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಬಹುಪಕ್ಷೀಯ ಮಾತುಕತೆ ನಡೆಸುವ ಬದಲಾಗಿ ಸ್ಪೇನ್ ಹಾಗೂ ಪೋರ್ಚುಗಲ್ ದೇಶಗಳು ಈ ಒಪ್ಪಂದಕ್ಕೆ ಉನ್ನತಾಧಿಕಾರದ ಒಪ್ಪಿಗೆ ಕೋರಿದವು. ತಾವು ಜಯಿಸಿದ ಭೂಪ್ರದೇಶದಲ್ಲಿ ಕ್ರಿಶ್ಚಿಯಾನಿಟಿಯನ್ನು ಹರಡುವ ಈ ದೇಶಗಳ ಟಾರ್ಡೆಸಿಲಾಸ್ ಒಪ್ಪಂದ ಜಾರಿಯ ಕೋರಿಕೆಗೆ ವ್ಯಾಟಿಕನ್ ಅನುಮತಿ ನೀಡಿತು (ಟ್ರೀಟಿ ಆಫ್ ಟಾರ್ಡೆಸಿಲಾಸ್ ಎಂದು ಹೆಸರಾದ ಈ ಒಪ್ಪಂದದ ಮೂಲ ಪ್ರತಿಯ ನಕಲು, ವಿವರಗಳು ವೆಬ್‍ನಲ್ಲಿ ಲಭ್ಯ).
ಈ ಒಪ್ಪಂದ ಊರ್ಜಿತಗೊಂಡ ಐವತ್ತು ವರ್ಷಗಳ ನಂತರ ಪೋರ್ಚುಗಲ್ಲಿನ 3ನೆಯ ಕಿಂಗ್ ಜಾನ್ ವರದಿಯೊಂದನ್ನು ಪಡೆದ. ಇದನ್ನು ಪ್ಯಾರಿಸ್‍ನಲ್ಲಿದ್ದ ಲೊಯೋಲಾನ ತಂಡವನ್ನು ಬಲ್ಲ ರೋಮ್ ಆಸ್ಥಾನದಲ್ಲಿದ್ದ “ವಿಶಿಷ್ಟ ಜೀವನ ನಡೆಸುತ್ತಿದ್ದ ಕೆಲವು ಶಿಕ್ಷಣವೇತ್ತ ಪಾದ್ರಿಗಳು’’ ನೀಡಿದ್ದರು. ಇವರು ರಾಜನ ಇಷ್ಟಾರ್ಥಕ್ಕೆ ತಕ್ಕುದಾಗಿದ್ದರು. ಭಾರತಕ್ಕೆ ಹೋಗಬೇಕೆಂಬ ಬಯಕೆ ಅವನಿಗಿತ್ತು. ಅವರನ್ನು ಉಳಿಸಿಕೊಳ್ಳಿ ಎಂದು ರೋಮ್‍ನಲ್ಲಿದ್ದ ತನ್ನ ಪ್ರತಿನಿಧಿಗಳಿಗೆ ಆತ ನಿರ್ದೇಶನ ನೀಡಿದ್ದ. ರಾಜನ ರಾಯಭಾರಿ ಆರು ಜನ ಜೆಸ್ಯೂಟರನ್ನು ಕೊಡುವಂತೆ ಲೊಯೋಲಾನನ್ನು ಕೋರಿದ. ಕ್ಷಮಾಪಣೆ ಕೋರಿದ ಲೊಯೋಲಾ “ನಿಮ್ಮ ನಾಯಕತ್ವ ಪ್ರಪಂಚಕ್ಕೆ ಏನು ಕೊಡುತ್ತದೆ?’’ ಎಂದು ಪ್ರತಿಕ್ರಿಯಿಸಿದ.
ಪ್ರಪಂಚ ಪ್ರಭುತ್ವ ಸಾಧಿಸುವ ವಿಷಯದಲ್ಲಿ ಪೋರ್ಚುಗಲ್ ಅಚ್ಚರಿಯ ಸಾಮರ್ಥ್ಯ ಉಳ್ಳದ್ದಾಗಿದ್ದರೆ ಜೆಸ್ಯೂಟ್ ಕಂಪನಿ ಸ್ಪರ್ಧಾ ಕಣದಲ್ಲೇ ಇರಲಿಲ್ಲ. ವಾಸ್ತವವಾಗಿ ಜೆಸ್ಯೂಟರು ನಿಜವಾಗಿ ಒಂದು ಕಂಪನಿಯೂ ಆಗಿರಲಿಲ್ಲ, ತಮ್ಮ ಉದ್ದೇಶ ಸಾಧನೆಗೆ ಇನ್ನೂ ಪೋಪರ ಅನುಮತಿಗೆ ಅವರು ಕಾಯುತ್ತಿದ್ದರು. ಪೋರ್ಚುಗೀಸ್ ರಾಯಭಾರಿಗೆ ತನ್ನ ಅಭಿಪ್ರಾಯ ತಿಳಿಸಿದ ಲೊಯೋಲಾ ತಪ್ಪೇನೂ ಮಾಡಿರಲಿಲ್ಲ. ಅವನ ಇಡೀ “ಕಂಪನಿ” ಅದು ಇದ್ದ ರೂಪದಲ್ಲಿ ಕೇವಲ ಹತ್ತು ಜನ ಪೂರ್ಣ ಕಾಲಿಕ ಸದಸ್ಯರನ್ನು ಒಳಗೊಂಡಿತ್ತು. ಇವರಲ್ಲಿ ಆರು ಜನ ಆಗ ರೋಮ್‍ನಲ್ಲಿದ್ದರು. ಆರು ಜನರನ್ನು ಕಳುಹಿಸುವುದು ಎಂದರೆ ಪ್ರಪಂಚಕ್ಕೆ ಇನ್ನೇನೂ ಉಳಿಸುತ್ತಿರಲಿಲ್ಲ. ಆದರೂ ಯಾವುದೇ ಮಹತ್ವಾಕಾಂಕ್ಷೆ ಹೊಂದಿರದ ಕಂಪನಿ ಬೆಳೆಯಲು ಅದೊಂದು ಅವಕಾಶವಾಗಿತ್ತು. ಕಂಪನಿಯ ಶೇ.20 ರಷ್ಟು ಜನ(ಇಬ್ಬರು)ರನ್ನು ಭಾರತಕ್ಕೆ ಕಳುಹಿಸಲಾಯಿತು. ಪ್ರಯಾಣದ ವೇಳೆ ಇವರಲ್ಲೊಬ್ಬ ಕಾಹಿಲೆ ಬಿದ್ದ. ಕಾಹಿಲೆ ಬಿದ್ದವನ ಬದಲು ಬೇರೆಯವರನ್ನು ಕಳುಹಿಸುವಂತೆ ಇನ್ನೊಬ್ಬ ಕೋರಿದ. ತಕ್ಷಣ ಕ್ಸೇವಿಯರ್ “ಒಳ್ಳೆಯದಾಯಿತು, ನಾನು ಸಿದ್ಧನಿದ್ದೇನೆ’’ ಅಥವಾ ನಂತರದ ಜೆಸ್ಯೂಟ್ ಪೀಳಿಗೆ ಹೇಳಿದಂತೆ “ಅದ್ಭುತ, ನಾನು ನಿಮ್ಮವನು’’ ಎಂದು ಪ್ರತಿಕ್ರಿಯಿಸಿದ.
ನಲ್ವತ್ತೆಂಟು ಗಂಟೆಗಳ ಒಳಗೆ ತನ್ನ ಎರಡು ಜೊತೆ ಬಟ್ಟೆ ಬರೆ ಜೋಡಿಸಿಕೊಂಡು, ಪೋಪ್‍ರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಆತ ಹೊರಟೇ ಬಿಟ್ಟ.
ಡೆ ನೋಬಿಲಿಯಂತೆ ಅಕ್ವಾವಿಯಾ ಇಟಲಿಯ ಪ್ರತಿಷ್ಠಿತ ಕುಟುಂಬದಿಂದ ಬಂದವನು. ಭಾರತದಲ್ಲಿದ್ದ ಜೆಸ್ಯೂಟರಿಗೆ ಸವಾಲು ಎಸೆದಂತೆ ಅಕ್ವಾವಿಯಾ ತನ್ನದೇ ವಿಧಾನದಲ್ಲಿ ಕಾರ್ಯಮಾಡುತ್ತಿದ್ದ. ವ್ಯಾಟಿಕನ್ ಅಧಿಕಾರ ಶ್ರೇಣಿಯಲ್ಲಿ ಒಂದು ಹಂತದವರೆಗೆ ಬಂದ ಮೇಲೆ ಜೆಸ್ಯೂಟ್ ವ್ಯವಸ್ಥೆ ಸೇರಿದ ಅಕ್ವಾವಿಯಾ ಮೂವತ್ತೇಳನೇ ವಯಸ್ಸಿನಲ್ಲಿ ಈ ವ್ಯವಸ್ಥೆಯಲ್ಲಿ ಅತ್ಯಂತ ಕಿರಿಯ ಮುಖ್ಯಸ್ಥನಾಗಿ ಆಯ್ಕೆಯಾದ. 13ನೆಯ ಪೋಪ್ ಗ್ರೆಗರಿಗೆ ಜೆಸ್ಯೂಟ್ ಪ್ರತಿನಿಧಿಗಳು ಈ ಮಾಹಿತಿಯನ್ನು ನೀಡಿದಾಗ ಸ್ತಂಭೀಭೂತನಾದ ಎಪ್ಪತ್ತೊಂಬತ್ತು ವರ್ಷದ ಪಾದ್ರಿ ಅನುಮೋದನೆ ನೀಡದೇ ಬೇರೆ ದಾರಿ ಇರಲಿಲ್ಲ. “ದೇವರೇ, ನಲವತ್ತು ವರ್ಷವೂ ತುಂಬಿರದ ಒಬ್ಬ ಹುಡುಗನನ್ನು ಆಡಳಿತ ನಿರ್ವಹಿಸಲು ನೀನು ಆಯ್ಕೆ ಮಾಡಿರುವೆ!’’ ಎಂದು ಅವರು ಉದ್ಗರಿಸಿದ್ದರು.
ಆದರೆ ನೋಬಿಲಿಗೆ ಸಂಬಂಧಿಸಿದಂತೆ ಭಾರತದಲ್ಲಿ ಉಂಟಾದ ವಿವಾದದ ಬಗ್ಗೆ ಅಕ್ವಾವಿಯಾ ಕೈಗೊಂಡ ನಿರ್ಧಾರ ನೋಬಿಲಿಯ ಹಾಗೂ ಸ್ವಂತ ಮೇಲ್ನೋಟದ ಸಂಗತಿಗಳಿಗಿಂತ ಹೆಚ್ಚಾಗಿ ತೀರಾ ವೈಯಕ್ತಿಕವಾಗಿತ್ತು. ಅಕ್ವಾವಿಯಾ ಮೊದಲು ಜೆಸ್ಯೂಟ್‍ನಾದಾಗ ಚರ್ಚ್ ಆಡಳಿತ ನಿರಂಕುಶ ಅಧಿಕಾರಿಗಳಿಂದ ತುಂಬಿತ್ತು. ಅಕ್ವಾವಿಯಾನ ಜಾಗಕ್ಕೆ ಆತನ ಅಣ್ಣನ ಮಗ ರೊಡಾಲ್ಫೋ ಹೆಸರನ್ನು ಸೂಚಿಸಲಾಯಿತು. ಆದರೆ ರೊಡಾಲ್ಫೋಗೆ ಬೇರೆ ಯೋಚನೆ ಇತ್ತು. ಕೌಟುಂಬಿಕ ವಿರೋಧದ ನಡುವೆ ಆತ ಜೆಸ್ಯೂಟ್ ವ್ಯವಸ್ಥೆ ಸೇರುವುದಾಗಿ ಘೋಷಿಸಿದ. ಉತ್ತಮ ಸ್ಥಾನದಲ್ಲಿದ್ದ ಚಿಕ್ಕಪ್ಪನ ಒಲುಮೆ ಗಳಿದುವುದು ಇದರ ಉದ್ದೇಶವಾಗಿರಲಿಲ್ಲ, ಉತ್ತಮ ಜವಾಬ್ದಾರಿಗಳಿಸುವುದೂ ಆಗಿರಲಿಲ್ಲ. ವರ್ಷಗಟ್ಟಲೆ ದೀರ್ಘವಾದ ಸಮುದ್ರಯಾನದ ಮೂಲಕ ಆತ ಭಾರತಕ್ಕೆ ಹೋಗಲು ಒಪ್ಪಿಕೊಂಡ.
ಅವನ ಜೀವನದಲ್ಲಿ ಮಹತ್ವದ ತಿರುವು ಕಾಣಿಸಿತು. ಇಟಲಿಯಲ್ಲಿ ಕ್ಲಾಡಿಯೋ ಜೆಸ್ಯೂಟ್ ವ್ಯವಸ್ಥೆಯಲ್ಲಿ ಮೇಲೇರುತ್ತಿದ್ದರೆ ಇತ್ತ ಮೊಘಲ್ ಸಾಮ್ರಾಟ ಅಕ್ಬರನ ಆಸ್ಥಾನಕ್ಕೆ ಬಂದು ಉಳಿಯಬೇಕೆಂದು ರೊಡಾಲ್ಫೋಗೆ ಆಹ್ವಾನ ಬಂದಿದೆ ಎಂಬ ಸುದ್ದಿ ರೋಮ್ ತಲುಪಿತು. ಅಲ್ಲಿ ಆತ ನಾಲ್ಕು ವರ್ಷಗಳ ಕಾಲ ಇದ್ದ. ಆತ ಇಲ್ಲಿ ರೂಪಿಸಿದ ಜೆಸ್ಯೂಟ್ ರಾಯಭಾರ ಕಚೇರಿಗೆ 20 ವರ್ಷಗಳ ನಂತರ ಬೆನೆಡೆಟ್ಟೋ ಡೆ ಗೋಸ್ ಬಂದ.
ಕ್ಲಾಡಿಯೋ ಜೆಸ್ಯೂಟ್ ಮುಖ್ಯಸ್ಥನಾಗಿ ಬಂದ ಕೆಲವು ಸಮಯದಲ್ಲೇ ಅಕ್ವಾವಿಯಾನಿಗೆ ಮತ್ತೊಂದು ಆಘಾತವಾಯಿತು. ಇದು ಇನ್ನೂ ಕಹಿಯಾಗಿತ್ತು. ಇತರ ಮೂವರು ಜೆಸ್ಯೂಟ್ ಸಹೋದ್ಯೋಗಿಗಳೊಂದಿಗೆ ರೊಡಾಲ್ಫೋ ಅಕ್ವಾವಿಯಾ ಭಾರತದಲ್ಲಿ ಕೊಲೆಯಾಗಿಹೋಗಿದ್ದ. ಪೋರ್ಚುಗೀಸರ ನೆಲೆ ಗೋವಾದಲ್ಲಿದ್ದ ಹಿಂದೂ ದೇವಾಯಲಗಳನ್ನು ನೆಲಸಮಗೊಳಿಸಿದ್ದೇ ಈ ಕೊಲೆಗೆ ಕಾರಣ ಎಂದು ದೊರೆತ ಅಲ್ಪ ಸ್ವಲ್ಪ ಮಾಹಿತಿಗಳು ತಿಳಿಸಿದವು. ರೊಡಾಲ್ಫೋ ಹಾಗೂ ಅವನ ಸಹೋದ್ಯೋಗಿಗಳು ಯಾವ ತಪ್ಪನ್ನೂ ಮಾಡಿರಲಿಲ್ಲ. ಅವರು ಸಂಕಟದ ಸಂಕೇತವಾದರಷ್ಟೆ.
ಬಹುಶಃ ಅಣ್ಣನ ಮಗನ ಸಾವು ಭಾರತದ ಬಗ್ಗೆ ಅಕ್ವಾವಿಯಾ ವೈಯಕ್ತಿಕ ಆಸಕ್ತಿ ತಾಳುವಂತೆ ಮಾಡಿತು. ವೃಥಾ ನಿಷೇಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಡೆ ನೋಬಿಲಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಆತ ಶ್ರಮಿಸಿದ. ಡೆ ನೋಬಿಲಿಗೆ ಇದೊಂದು ಕಷ್ಟದ ಸಮಯವಾಗಿತ್ತು ಆದರೆ ಇದನ್ನು ಅವನಿಗೆ ಯಾರೂ ತಿಳಿಸಲಿಲ್ಲ. ಆತ ಬಹುಕಾಲವನ್ನು ಸಂಸ್ಕೃತ ಅಧ್ಯಯನ ಹಾಗೂ ತಮಿಳಿನಲ್ಲಿ ಧಾರ್ಮಿಕ ಗ್ರಂಥ ರಚನೆಯಲ್ಲಿ ವಿನಿಯೋಗಿಸಿರಬಹುದು. ಆದರೆ ಲ್ಯಾಟಿನ್ ಚರ್ಚುಗಳಿಗೆ ಹೇಗೆ ಉತ್ತರಿಸಬೇಕು ಎಂಬುದು ಅವನಿಗೆ ತಿಳಿದಿತ್ತು. ಅಕ್ವಾವಿಯಾ ಅಥವಾ ಅವನ ಧಾರ್ಮಿಕ ಸಲಹಾಕಾರರಾಗಲಿ ಅಥವಾ ಯೂರೋಪಿನಲ್ಲಿದ್ದ ಬೇರೆ ಯಾರೇ ಆಗಲಿ, ಡೆ ನೋಬಿಲಿ ಬರೆದ “ಭಾರತ ದೇಶದ ಕೆಲವು ರೀತಿ ರಿವಾಜಿನ ವರದಿ’’ ಎಂಬಂಥ 175 ಪುಟಗಳ ಕೃತಿಯನ್ನು ಈ ಮೊದಲು ಕಂಡಿರಲಿಲ್ಲ. ರೋಮನ್ ಪುರಾಣದಿಂದ ಹಿಡಿದು ಕ್ರಿಸ್ತನವರೆಗೆ, ಅಲ್ಲಿಂದ ಸಂತ ಆಗಸ್ಟೀನ್ ಮತ್ತು ಸಂತ ಥಾಮಸ್ ಅಕ್ವಿನಾಸ್‍ನಿಂದ ಹಿಂದೂ ಮನುಧರ್ಮ ಶಾಸ್ತ್ರದವರೆಗೆ ಎಲ್ಲವನ್ನೂ ಕರಗತ ಮಾಡಿಕೊಂಡು ವಾದಿಸುವ ಸಾಮರ್ಥ್ಯ ಬೆಳೆಸುವ ರೋಮನ್ ಕಾಲೇಜಿನ ಸ್ವಾತಂತ್ರ್ಯದ ಬಗ್ಗೆ ಓದುಗರು ಅಚ್ಚರಿಪಟ್ಟಿರಬೇಕು. ಸುಲಭವಾಗಿ ಅರ್ಥವಾಗದ ನೋಬಿಲಿ ನೀಡಿದ ಉಲ್ಲೇಖಗಳು ಧಾರ್ಮಿಕ ಪಂಡಿತರನ್ನು ತಬ್ಬಿಬ್ಬುಗೊಳಿಸಿದವು.
ಮುಂದುವರಿಯುವುದು…
ಚಿತ್ರಕೃಪೆ : http://www.ridingthetiger.org
Trackbacks & Pingbacks