ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ– 11
ಸೋದರಿ ನಿವೇದಿತಾ (ಮಾರ್ಗರೇಟ್ ಎಲಿಜಬೆತ್ ನೊಬೆಲ್)
– ರಾಮಚಂದ್ರ ಹೆಗಡೆ
ವಿದೇಶಿ ನೆಲದಲ್ಲಿ ಹುಟ್ಟಿ ಭಾರತದ ಸೇವೆಗೆ ತನ್ನ ಅರ್ಪಿಸಿಕೊಂಡ, ಭಾರತಕ್ಕಾಗಿಯೇ ತನ್ನ ಪೂರ್ತಿ ಜೀವನ ಅರ್ಪಿಸಿದ ಐರ್ಲೆಂಡ್ ದೇಶದ ಹೆಣ್ಣುಮಗಳು ಮಾರ್ಗರೇಟ್ ಎಲಿಜಬೆತ್ ನೊಬೆಲ್. ಸ್ವಾಮಿ ವಿವೇಕಾನಂದರ ಭಾಷಣ ಹಾಗೂ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಭಾರತದೆಡೆಗೆ ಆಕರ್ಷಿತರಾದ ಮಾರ್ಗರೇಟ್ ಸ್ವಾಮಿ ವಿವೇಕಾನಂದರಿಂದ ಬ್ರಹ್ಮಚರ್ಯ ಹಾಗೂ ಸೇವೆಯ ದೀಕ್ಷೆ ಪಡೆದು ‘ಸೋದರಿ ನಿವೇದಿತಾ’ ಆದರು. ಬಾಲ್ಯದಿಂದಲೇ ಆಧ್ಯಾತ್ಮದ ಸೆಳೆತ ಹೊಂದಿದ್ದ ಮಾರ್ಗರೇಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಭಾರತೀಯ ಧರ್ಮ, ಸಂಸ್ಕೃತಿ, ವೇದ ಉಪನಿಷತ್ತುಗಳ ಕುರಿತ ಅವರ ಚಿಂತನೆಗಳಿಂದ ಮಂತ್ರಮುಗ್ಧರಾದ ಆಕೆ ಅವರನ್ನೇ ತನ್ನ ‘ಗುರುದೇವ’ ರೆಂದು ಸ್ವೀಕರಿಸಿದರು. ಭಾರತೀಯ ಚಿಂತನೆಗಳ ಅಧ್ಯಯನದಲ್ಲಿ ತೊಡಗಿದ ಆಕೆಗೆ ಭಾರತವನ್ನು ಕಾಣುವ ಹೆಬ್ಬಯಕ್ಕೆ ಹುಟ್ಟಿತು. ಸ್ವಾಮೀಜಿ ಅವರೊಂದಿಗೆ ನಿರಂತರವಾಗಿ ಪತ್ರ ಸಂಪರ್ಕದಲ್ಲಿದ್ದ ಅವರಿಗೆ ಒಮ್ಮೆ ಸ್ವಾಮೀಜಿ ಹೀಗೆ ಬರೆದರು: “ನನ್ನ ದೇಶದ ಸ್ತ್ರೀಯರಿಗೆ ವಿದ್ಯಾಭ್ಯಾಸ ಕೊಡುವ ಅಗತ್ಯ ತುಂಬಾ ಇದೆ. ಅದಕ್ಕೆ ತಕ್ಕ ಯೋಜನೆಗಳನ್ನು ಹಾಕುತ್ತಿದ್ದೇನೆ. ನಿನ್ನಿಂದ ನನಗೆ ತುಂಬಾ ಸಹಾಯವಾದೀತು. ಇಲ್ಲಿ ನಿನಗಾಗಿ ಸಹಸ್ರಾರು ಮಹಿಳೆಯರು ಕಾಯುತ್ತಿದ್ದಾರೆ.” ಎಂದು ಬರೆದರು. ಈ ಕರೆಗೆ ಓಗೊಟ್ಟ ಮಾರ್ಗರೆಟ್ ಭಾರತಕ್ಕೆ ಬಂದು ಇಲ್ಲಿಯ ಸ್ತ್ರೀಯರ ಅನಕ್ಷರತೆ, ಅಜ್ಞಾನಗಳನ್ನು ತೊಡೆದು ಅವರ ಸರ್ವಾಂಗೀಣ ಉದ್ಧಾರಕ್ಕೆ ತೊಡಗಬೇಕೆಂಬ ನಿರ್ಧಾರವನ್ನು ಮನದಾಳದಿಂದ ಕೈಗೊಂಡರು. ಮತ್ತಷ್ಟು ಓದು 
ಅಪರಾಧಕ್ಕೆ ಜಾತಿ ಬಣ್ಣ ಬಳಿಯುವುದೇಕೆ?
– ರಾಕೇಶ್ ಶೆಟ್ಟಿ
ಕಳೆದ ವಾರ ಎರಡು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್ಪಿ ನಾಯಕಿ ಮಾಯಾವತಿಯವರ ಬಗ್ಗೆ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ದಯಾಶಂಕರ್ ಮಾಡಿದ ಕೆಟ್ಟ ಟೀಕೆಯ ಪ್ರಕರಣ ಮೊದಲನೆಯದು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ದಯಾಶಂಕರ್ ಮೇಲೆ BJP ಪಕ್ಷ ಆರು ವರ್ಷಗಳ ಕಾಲ ಉಚ್ಚಾಟನೆಯಂತಹ ಕಠಿಣ ಕ್ರಮ ಕೈಗೊಂಡಿದೆ. ಅವರ ಮೇಲೆ FIR ಕೂಡ ದಾಖಲಾಗಿದೆ. ಆದರೆ, ದಯಾಶಂಕರ್ ಅವರ ಮಗಳನ್ನು, ಮಡದಿಯನ್ನು ನಮಗೊಪ್ಪಿಸಿ ಎಂದಿರುವ BSP ನಾಯಕ ನಸೀಮುದ್ದೀನ್ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ಅಕ್ರಮ ಸಂತಾನ ಎನ್ನುವ ಮೂಲಕ, ದಯಾಶಂಕರ್ ಅವರ ತಾಯಿಗೆ ಅವಮಾನ ಮಾಡಿದ BSP ಶಾಸಕಿ ಉಷಾ ಚೌಧರಿ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ನಾಲಗೆ ಕತ್ತರಿಸಿ ತಂದವರಿಗೆ ಐವತ್ತು ಲಕ್ಷ ಕೊಡುತ್ತೇನೆ ಎಂದ BSP ಪಕ್ಷದ ನಾಯಕಿ ಜನ್ನತ್ ಜಹಾನ್ ಮೇಲೆ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಕ್ರಮ ಕೈಗೊಳ್ಳುವುದು ಪಕ್ಕಕ್ಕಿರಲಿ. ಮಾಯವತಿಯವರು, ಅವರ ಕಾರ್ಯಕರ್ತರ ಘೋಷಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ! ಮಾಯಾವತಿಯವರಿಗಾದರೆ ಮಾತ್ರ ನೋವು, ದಯಾಶಂಕರ್ ಅವರ ತಾಯಿ, ಮಗಳು, ಹೆಂಡತಿಗಾಗುವ ನೋವು ನೋವಲ್ಲವೇ? ಮತ್ತಷ್ಟು ಓದು 
ಇಲ್ಲಿ ಅಸಹಿಷ್ಣುತೆಯಿದೆ!
Dedicated to our purva paksha and uttara- paksha debating tradition. With gratitude to the purva-pakshins (opponents) I have learned from. May we engage in this intellectual yajna, with mutual respect.
-ನವೀನ ಗಂಗೋತ್ರಿ
ರಾಜೀವ್ ಮಲ್ಹೋತ್ರಾ ತಮ್ಮ ಇತ್ತೀಚಿನ ಹೊಸ ಪುಸ್ತಕ, ‘ದಿ ಬ್ಯಾಟಲ್ ಫಾರ್ ಸಂಸ್ಕೃತ್’ ನ ಅರ್ಪಣೆಯಲ್ಲಿ ಈ ರೀತಿ ಬರೆಯುತ್ತಾರೆ. ಈ ನೆಲದಲ್ಲಿ ಒಂದು ಕಾಲಕ್ಕೆ ಉತ್ತುಂಗ ತಲುಪಿದ್ದ ಮತ್ತು ಮಹತ್ತರ ಗೌರವಕ್ಕೆ ಪಾತ್ರವಾಗಿದ್ದ ’ವಾಕ್ಯಾರ್ಥ’ ಪರಂಪರೆ ಅಥವಾ ವಾದ ಪ್ರತಿವಾದದ ಸಂಸ್ಕೃತಿಯ ಕುರಿತು ಆ ಪುಸ್ತಕ ಧ್ವನಿಯೆತ್ತುತ್ತದೆ. ಹಾಗೆ ದನಿಯಾಗಲೇ ಬೇಕಾದ ಕಾಲಖಂಡದಲ್ಲಿ ನಾವಿದ್ದೇವೆಂಬುದು ವಿಷಯ.
ನಮ್ಮ ವೇದಗಳು, ಸ್ಮೃತಿಗಳು, ನಮ್ಮ ಕಥೆ, ಪುರಾಣ, ಕಾವ್ಯ, ಶಾಸ್ತ್ರ, ಕಲಾಪ್ರಕಾರ ಮತ್ತು ಸಮಾಜದ ವ್ಯವಸ್ಥೆಯನ್ನೆಲ್ಲ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಅನ್ನುವ ಭರದಲ್ಲಿ ನಾವಿದ್ದರೆ ನಮ್ಮದೆಲ್ಲವನ್ನೂ ತಮ್ಮ ಸಮಾಜ ಮತ್ತು ತಮ್ ತಮ್ಮ ನಾಗರಿಗಕತೆಯ ಅರಿವಿನ ಪರಿಧಿಯಲ್ಲಿ ಅರ್ಥವಿಸಿಕೊಂಡು ವ್ಯಾಖ್ಯಾನ ಬರೆಯುವ ಹುಕಿಯೊಂದು ಪಶ್ಚಿಮ ರಾಷ್ಟ್ರಗಳ ವಿದ್ವಾಂಸರಲ್ಲಿ ಬಹುಕಾಲದಿಂದ ಚಾಲ್ತಿಯಲ್ಲಿದೆ. ಭಾರತದ ಬಗ್ಗೆ ತಿಳಿದುಕೊಳ್ಳುವ ಅಗತ್ಯ ನಮಗೆ ಕಾಣಿಸಿದಾಗೆಲ್ಲ ಈ ಪಶ್ಚಿಮದ ವಿದ್ವಾಂಸರು ಬರೆದದ್ದನ್ನು ಓದದೇ ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಸಂಗತಿಗಳನ್ನೀಗಾಗಲೇ ಅವರು ಬರೆದಾಗಿದೆ. ಜಗತ್ತು ಮುನ್ನೂರರವತ್ತು ಡಿಗ್ರಿ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ಕುರಿತಾಗಿ ಜಗತ್ತಿನೆಲ್ಲ ಮೂಲೆಗಳಿಂದ ಬರುವ ಚಿಂತನೆಗಳಿಗೆ ನಾವು ಕಿವಿಯಾಗಲೇ ಬೇಕಾಗುತ್ತದೆನ್ನಿ. ಆದರೆ ಅದೇ ಹೊತ್ತಿನಲ್ಲಿ ನಮ್ಮ ಕುರಿತಾದ ವಿಮರ್ಶೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದೂ ಮತ್ತು ಅವರ ಕುರಿತಾದ ಆಮೂಲಾಗ್ರ ಅಧ್ಯಯನಮಾಡುವುದೂ ನಮಗೆ ಮುಖ್ಯವಾಗಬೇಕಿತ್ತು. ದುರದೃಷ್ಟವಶಾತ್ ನಾವು ಆ ಹಾದಿಯಲ್ಲಿ ತುಂಬಾ ತುಂಬಾ ಹಿಂದಿದ್ದೇವೆ. ಭಾರತೀಯವಲ್ಲದ ಆಬ್ರಹಾಮಿಕ್ ರಿಲಿಜನ್ನುಗಳ ಒಳಸುಳಿ ಮತ್ತು ಹುಳುಕುಗಳ ಬಗ್ಗೆ ತಾತ್ತ್ವಿಕವಾದ ಮರುಪ್ರಶ್ನೆಯನ್ನು ಹುಟ್ಟುಹಾಕುವುದಂತಿರಲಿ, ನಮ್ಮ ಕುರಿತಾಗಿಯೂ ಸರಿಯಾದ ಅವಗಾಹನೆಯೇ ಇಲ್ಲದಂಥಾ ಸ್ಥಿತಿಯಲ್ಲಿ ನಾವಿದ್ದೇವೆ.
’ದಿ ಬ್ಯಾಟಲ್ ಫಾರ್ ಸಂಸ್ಕೃತ್’- ಪುಸ್ತಕವು ಬರಿಯ ಸಂಸ್ಕೃತ ಭಾಷೆಯೊಂದರ ಬಗ್ಗೆ ಮಾತ್ರವೇ ಕಾಳಜಿಯ ದನಿಯೆತ್ತದೆ, ಸಮಗ್ರವಾಗಿ ನಮ್ಮ ಚಿಂತನ ಪರಂಪರೆಯ ಸಧ್ಯದ ಅವಸ್ಥೆಯನ್ನೂ ಚರ್ಚಿಸುತ್ತದೆ. ಅದನ್ನು ಕಳಕೊಂಡ ನಾವು ಇವತ್ತಿಗೆದುರಿಸುತ್ತಿರುವ ಬೌದ್ಧಿಕ ಅಪಾಯಗಳನ್ನು ವಿಶ್ಲೇಷಿಸುತ್ತದೆ. ನಮ್ಮ ಸುತ್ತಲೂ ಸುದ್ದಿ ಮಾಡುವ ಕನ್ನಡದ ಬೌದ್ಧಿಕ ಲೋಕವನ್ನು ಪ್ರಸ್ತುತ ಪುಸ್ತಕದ ಹಿನ್ನೆಲೆಯಲ್ಲಿ ನೋಡೋಣ.
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೨
– ರೋಹಿತ್ ಚಕ್ರತೀರ್ಥ
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧
ಮೊಳಗಿತು ಕಂಚಿನ ಕಂಠ
ಅಂದು, ಸೆಪ್ಟೆಂಬರ್ 11ನೇ ತಾರೀಖು, ಶಿಕಾಗೋದಲ್ಲಿ ಜಮಾಯಿಸಿದ್ದ ಧರ್ಮಜಿಜ್ಞಾಸುಗಳೆದುರು ಸರ್ವಧರ್ಮ ಸಂಸತ್ತಿನ ವೇದಿಕೆಯಲ್ಲಿ ನಿಂತ ವಿವೇಕಾನಂದರ ಮಾತು ಶುರುವಾಗಿದ್ದು “ಅಮೆರಿಕದ ಸೋದರ ಸೋದರಿಯರೇ” ಎಂಬ ಶಕ್ತಿಶಾಲಿಯಾದ ಪದಗಳ ಮೂಲಕ. ತನ್ನೆದುರು ಕೂತಿದ್ದ ಅಷ್ಟೂ ಜನರನ್ನು ಹಾಗೆ ಒಂದೇ ಉಸಿರಿನಲ್ಲಿ ತನ್ನವರನ್ನಾಗಿ ಮಾಡಿಕೊಂಡ ಯಾವ ಧರ್ಮಗುರುವೂ ಅಲ್ಲಿರಲಿಲ್ಲ. ಹಾಗಿದ್ದಾಗ ವಿವೇಕಾನಂದರು ಸೋದರ-ಸೋದರಿಯರೇ ಎಂದಿದ್ದೇ ತಡ ಇಡೀ ಸಭಾಂಗಣದಲ್ಲಿ ವಿದ್ಯುತ್ಸಂಚಾರವಾಯಿತು! ಸಭಿಕರು ಎದ್ದು ಮೂರ್ನಾಲ್ಕು ನಿಮಿಷಗಳ ದೀರ್ಘ ಕರತಾಡನ ಮಾಡಿದರು. ತನ್ನ ಕೇವಲ ಹದಿನೈದು ನಿಮಿಷಗಳ ಪುಟ್ಟ ಭಾಷಣದಲ್ಲಿ ವಿವೇಕಾನಂದರು ಭಾರತದ ಸನಾತನ ಸಂಸ್ಕøತಿಯ ಮೂಲ ಆಶಯವನ್ನು ಅನಾವರಣ ಮಾಡಿದ್ದರು. ಮರುದಿನದ ಪತ್ರಿಕೆಗಳಲ್ಲಿ ದೂರದ ಹಿಂದೂಸ್ತಾನದಿಂದ ಬಂದ ಈ ಯುವ ಸಂನ್ಯಾಸಿಯ ಸಿಂಹಗರ್ಜನೆಯದ್ದೇ ಸುದ್ದಿ! ದ ನ್ಯೂಯಾಕ್ ಹೆರಾಲ್ಡ್ ಪತ್ರಿಕೆ, “ಧರ್ಮ ಸಂಸತ್ತಿನ ಅತ್ಯಂತ ಪ್ರಮುಖ ಆಕರ್ಷಣೆ ಭಾರತದಿಂದ ಬಂದ ಸ್ವಾಮಿ ವಿವೇಕಾನಂದರು. ಅವರ ಮಾತುಗಳನ್ನು ಕೇಳಿದ ಮೇಲೆ, ಆ ಪುಣ್ಯಭೂಮಿಯತ್ತ ನಾವು ಮಿಷನರಿಗಳನ್ನು ಧರ್ಮಪ್ರಚಾರಕ್ಕಾಗಿ ಕಳಿಸುತ್ತಿರುವುದು ಅದೆಷ್ಟು ಹಾಸ್ಯಾಸ್ಪದ ಕಾರ್ಯ ಎಂಬುದು ಅರಿವಾಗುತ್ತದೆ” ಎಂದು ಬರೆಯಿತು. ಇನ್ನೊಂದು ಪತ್ರಿಕೆ, “ಜನರು ಉಳಿದವರ ಗಂಟೆಗಟ್ಟಲೆ ಉಪನ್ಯಾಸಗಳನ್ನು ಕೂಡ ಸಹಿಸಿಕೊಂಡು ಈ ಸ್ವಾಮೀಜಿಯ ಹದಿನೈದು ನಿಮಿಷಗಳ ಚಿಕ್ಕ ಭಾಷಣವನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದರು” ಎಂದು ವಿಮರ್ಶೆ ಬರೆದಿತ್ತು. ತನ್ನ ಹನ್ನೆರಡು ವರ್ಷಗಳ ಕಠಿಣ ತಪಸ್ಸು, ಸಾಧನೆ, ಅಧ್ಯಯನ, ಚಿಂತನಗಳಿಂದ ವಿವೇಕಾನಂದರು ಈಗ “ರಾತ್ರಿಬೆಳಗಾಗುವುದರಲ್ಲಿ” ತಾರೆಯಾಗಿದ್ದರು! ಭಾರತದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಕೂಡ ಅಮೆರಿಕನ್ ಪತ್ರಕರ್ತರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿದವು. ವಿವೇಕಾನಂದರ ಅಮೆರಿಕಾ ದಿಗ್ವಿಜಯ ಭಾರತದಲ್ಲಿ ಬಲುದೊಡ್ಡ ಸುದ್ದಿಯಾಯಿತು. ರಾಮಕೃಷ್ಣ ಮಠದಲ್ಲಂತೂ ಸಂಭ್ರಮವೇ ಸಂಭ್ರಮ ಮನೆಮಾಡಿತು. ಅಮೆರಿಕೆಯ ಹತ್ತುಹಲವಾರು ಕಡೆಗಳಲ್ಲಿ ಸ್ವಾಮೀಜಿಯ ಭಾಷಣ ಏರ್ಪಾಟಾಯಿತು. ಭಾರತದ ಸನಾತನ ಧರ್ಮದ ಬಗ್ಗೆ ಅರಿಯುವ ಆಸಕ್ತಿ ಅಲ್ಲಿನ ಬಿಳಿತೊಗಲಿನ ಜಿಜ್ಞಾಸುಗಳಿಗೆ ಹೆಚ್ಚಾಯಿತು.
ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧
– ರೋಹಿತ್ ಚಕ್ರತೀರ್ಥ
ಕೆಲ ವರ್ಷಗಳ ಹಿಂದೆ ವಿವೇಕಾನಂದರ ಮೇಲೆ ಅದೊಂದು ಲೇಖನ ಪ್ರಕಟವಾಗಿತ್ತು. ಭಗವಾನ್ ಗೀತೆಯನ್ನು ಸುಟ್ಟು ಹಾಕುತ್ತೇನೆ ಎಂದಮೇಲೆ ಏಕಾಏಕಿ ಆ ಪುಸ್ತಕದ ಸೇಲ್ಸ್ ಹೆಚ್ಚಾದಂತೆ, ವಿವೇಕರ ಮೇಲೆ ಬರೆದಿದ್ದ ಈ ಲೇಖನ ಪ್ರಕಟವಾದ ಮೇಲೆ ಹಲವು ತರುಣರು ವಿವೇಕಾನಂದರನ್ನು ಆಳವಾಗಿ ಅಭ್ಯಾಸ ಮಾಡಲು ಕೂತುಬಿಟ್ಟಿದ್ದರು! ಯಾಕೆಂದರೆ ವಿವೇಕರ ನಿಜಬಣ್ಣ ಬಯಲು ಮಾಡುವ ಉತ್ಸಾಹದಲ್ಲಿ ಲೇಖಕ ಬರೆದಿದ್ದ ಸಾಲುಗಳು ಆಘಾತ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಲೇಖನದ ತೊಂಬತ್ತೊಂಬತ್ತು ಭಾಗ ವಿವೇಕಾನಂದರನ್ನು ವಾಚಾಮಗೋಚರವಾಗಿ ತೆಗಳಿ, ಕೊನೆಯ ಒಂದೆರಡು ಸಾಲುಗಳಲ್ಲಿ “ಇಷ್ಟೆಲ್ಲ ಇದ್ದರೂ ಯಕಶ್ಚಿತ್ ಮನುಷ್ಯನೊಬ್ಬ ವಿವೇಕಾನಂದ ಆಗಲು ಸಾಧ್ಯ” ಎಂಬ “ತಿಪ್ಪೆ ಸಾರಿಸಿ” ಲೇಖನವನ್ನು ಮುಗಿಸಲಾಗಿತ್ತು. ಹೆತ್ತತಾಯಿಯನ್ನು ಅಸಹ್ಯ ಪದಗಳಿಂದ ನಿಂದಿಸಿ ಕೊನೆಗೆ “ಅವೇನೇ ಇದ್ದರೂ ನೀನು ತಾಯಿ” ಎಂದು ಹೇಳುವ ಧಾಟಿಯಲ್ಲಿ ಲೇಖಕರು ತನ್ನ ಜಾಣಮಾತುಗಳನ್ನು ಹೊಸೆದಿದ್ದರು. ವಿವೇಕಾನಂದರ ಬಗ್ಗೆ ಸರ್ವೇಸಾಧಾರಣವಾದ ಒಂದಷ್ಟು ಜನರಲ್ ಸಾಹಿತ್ಯವನ್ನು ಓದಿಕೊಂಡದ್ದು ಬಿಟ್ಟರೆ ನನಗೂ ಆ ಧೀಮಂತನ ಜೀವನದ ಹೆಚ್ಚಿನ ವಿವರಗಳು ತಿಳಿದಿರಲಿಲ್ಲ. ಲೇಖನದ ಅಪಪ್ರಚಾರವೊಂದು ನೆಪವಾಗಿ ನಾನೂ ವಿವೇಕಾನಂದರ ಬಗ್ಗೆ ಓದಲು ಕೂತೆ!
ಆ ಅಪಪ್ರಚಾರದ ಲೇಖನವನ್ನು ಓದುತ್ತಿದ್ದಾಗ ನನ್ನನ್ನು ತಡೆದುನಿಲ್ಲಿಸಿದ ಒಂದು ಸಾಲು ಹೀಗಿತ್ತು: ವಿವೇಕಾನಂದರು ಇಂಗ್ಲೀಷಿನಲ್ಲಿ 46 ಅಂಕ ಪಡೆದಿದ್ದರು; ಶಾಲಾಶಿಕ್ಷಕನಾಗುವ ಅರ್ಹತೆಯೂ ಇಲ್ಲ ಎಂಬ ಕಾರಣಕ್ಕೆ ಸ್ವತಃ ಈಶ್ವರಚಂದ್ರ ವಿದ್ಯಾಸಾಗರರು ಅವರನ್ನು ಕೆಲಸದಿಂದ ತೆಗೆದುಹಾಕಿದ್ದರು.ಈ ಮಾತುಗಳನ್ನು ಓದಿದಾಗ,ನನಗೆ ಥಟ್ಟನೆ ಆರ್.ಕೆ.ನಾರಾಯಣ, ಬನ್ನಂಜೆ ಗೋವಿಂದಾಚಾರ್ಯ, ಶ್ರೀನಿವಾಸ ರಾಮಾನುಜನ್, ಎವಾರಿಸ್ಟ್ ಗ್ಯಾಲ್ವ ನೆನಪಿಗೆ ಬಂದರು. ನಿಮಗೆ ಗೊತ್ತಿದೆಯೋ ಇಲ್ಲವೋ, ಭಾರತೀಯ ಇಂಗ್ಲೀಷ್ ಸಾಹಿತ್ಯಲೋಕದ ದಿಗ್ಗಜ ಆರ್.ಕೆ. ನಾರಾಯಣ್ ಕಾಲೇಜು ದಿನಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಫೇಲಾಗಿದ್ದರು! ಸಂಸ್ಕೃತದ ಪ್ರಕಾಂಡ ಪಂಡಿತ ಬನ್ನಂಜೆಯವರಿಗೆ ಎರಡು ಸಲ ಪ್ರವೇಶ ಪರೀಕ್ಷೆಗೆ ಕೂತರೂ ಸಂಸ್ಕೃತ ಕಾಲೇಜಿಗೆ ಸೇರಬೇಕಾದಷ್ಟು ಮಾರ್ಕು ಸಿಗಲಿಲ್ಲ! ಗಣಿತ ತಾರೆ ರಾಮಾನುಜನ್ ಎಫ್‍ಎ ಪರೀಕ್ಷೆಯಲ್ಲಿ ಫೇಲಾಗಿದ್ದ ಹುಡುಗ, ಮುಂದೆ ಕೇವಲ ಮೂವತ್ತು ವರ್ಷ ವಯಸ್ಸಲ್ಲೇ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿವಿಯಲ್ಲಿ ಬಿ.ಎ. ಪದವಿ ಪಡೆದು ಫೆಲೋ ಆಫ್ ರಾಯಲ್ ಸೊಸೈಟಿ ಆದರು! ಗಣಿತದ ಇನ್ನೊಂದು ಅದ್ಭುತ ಪ್ರತಿಭೆ; ಗ್ರೂಪ್ ಸಿದ್ಧಾಂತವೆಂಬ ಹೊಸ ಶಾಖೆಯನ್ನು ಹುಟ್ಟಿಸಿದ ಗ್ಯಾಲ್ವನಿಗೆ ತನ್ನ ಹುಟ್ಟೂರು ಪ್ಯಾರಿಸ್ಸಿನ ಎಕೋಲ್ ಪಾಲಿಟೆಕ್ನಿಕ್ ಎಂಬ ಕಾಲೇಜಿನ ಸಂದರ್ಶನದಲ್ಲಿ ಎರಡು ಸಲ ಮಂಗಳಾರತಿಯಾಗಿತ್ತು. ಯಾವುದೇ ವ್ಯಕ್ತಿಯ ಜೀವನ ನಿಂತ ನೀರಾಗಿರುವುದಿಲ್ಲ; ಅದು ನಿರಂತರ ಚಲನಶೀಲ. ಹಾಗೊಂದು ಊಧ್ರ್ವಗತಿ ಇರುವುದರಿಂದಲೇ ಸಾಮಾನ್ಯವ್ಯಕ್ತಿಗಳು ಮಹಾತ್ಮರಾಗುತ್ತಾರೆ ಎಂಬುದನ್ನು ಬಲ್ಲ ಯಾರಿಗೇ ಆಗಲಿ, ವಿವೇಕಾನಂದರು ಶಾಲೆ-ಕಾಲೇಜುಗಳಲ್ಲಿ ಕಡಿಮೆ ಮಾರ್ಕು ಪಡೆದರು ಎನ್ನುವುದು ಅವರನ್ನು ಅಳೆಯುವ ಮಾನದಂಡ ಅನ್ನಿಸುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೂ ತನ್ನ ಜೀವನದಲ್ಲಿ ಎದುರಾಗುತ್ತಹೋದ ಪಲ್ಲಟಗಳಿಗೆ ಎದೆಯೊಡ್ಡಿ ನಿಂತಾಗ ಮಾತ್ರ ಮಹಾತ್ಮನಾಗಬಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಶಾಲೆಯಲ್ಲಿ 46 ಮಾರ್ಕು ಪಡೆದರು ಎಂಬ ಕಾರಣ ಕೊಟ್ಟು ಓದುಗರನ್ನು ಆಘಾತಗೊಳಿಸಿದ ಲೇಖನದಲ್ಲಿ ವಿವೇಕಾನಂದರ ಔನ್ನತ್ಯವನ್ನು ಅರಿತುಕೊಳ್ಳಲು ದಾರಿಯಾಗುವ ಇನ್ನಷ್ಟು ಆಘಾತಗಳಿರಬಲ್ಲವು ಎಂದು ಮನದಟ್ಟಾಯಿತು. ಅಲ್ಲಿಂದ ಮುಂದಕ್ಕೆ ನಾನು ಕಂಡುಕೊಂಡ ವಿವೇಕಾನಂದರ ನಿಜಚಿತ್ರಣ ಇಲ್ಲಿದೆ.
ಭಾರತೀಯ ಆಹಾರ ಶೈಲಿಗಳ ಕುರಿತು ಒಂದು ವೈಜ್ಞಾನಿಕ ಚಿತ್ರಣ
– ವಿನಾಯಕ ಹಂಪಿಹೊಳಿ
ಆಹಾರದ ಶೈಲಿಗಳಲ್ಲಿ ಎಷ್ಟು ಪ್ರಕಾರಗಳು ಎಂಬ ಪ್ರಶ್ನೆಗೆ ಎಲ್ಲರೂ ಉತ್ತರಿಸುವದು ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಬಗ್ಗೆ. ಪಾಶ್ಚಿಮಾತ್ಯ ಲೋಕದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳ ಕುರಿತು ಅನೇಕ ಚರ್ಚೆಗಳು ವಾದ ವಿವಾದಗಳಾಗಿವೆ. ನಮ್ಮ ದೇಶದಲ್ಲಿಯೂ ಸಂತರು ಸಸ್ಯಾಹಾರಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುವ ಕೃತಿಗಳು ಕಾಣುತ್ತವೆ. ಆದರೂ ಸಸ್ಯಾಹಾರ v/s ಮಾಂಸಾಹಾರದಲ್ಲಿ ಯಾವದು ಸರಿ ಎಂಬಂಥ ಚರ್ಚೆಗಳು ಹಿಂದೆಂದೂ ಆದಂತೆ ಕಾಣುವದಿಲ್ಲವಾದರೂ ಈಗ ಅಂಥ ಚರ್ಚೆಗಳು ಚೆನ್ನಾಗಿಯೇ ನಡೆಯುತ್ತಿವೆ. ಇಂದು ನಮ್ಮ ದೇಶದಲ್ಲಿರುವ ಹೋಟೆಲ್ಲುಗಳ ರಚನೆಗಳು ಬಹುತೇಕ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಮೇಲೆಯೇ ಆಗಿರುತ್ತವೆ.
ನಮ್ಮ ದೇಶದ ಬುದ್ಧಿಜೀವಿಗಳು ಚರಿತ್ರೆಯಲ್ಲಿ ಆಗಿ ಹೋದ ಶ್ರೇಷ್ಠ ಸಂತರ ಜಾತಿ-ವಿರೋಧೀ ವಾಕ್ಯಗಳನ್ನು ಸಾಮಾಜಿಕ ಕ್ರಾಂತಿಗೆ ಸಮೀಕರಿಸಿ ಸಮಾನತೆ ಸ್ವಾತಂತ್ರ್ಯದ ಹಕ್ಕುಗಳ ಕಲ್ಪನೆ ಅವರಲ್ಲಿತ್ತು ಎಂದು ಹೇಳುತ್ತಾರಾದರೂ, ಅದೇ ಸಂತರು ವಿಧಿಸುವ ಆಹಾರ ಪದ್ಧತಿಯ ಕುರಿತು ದಿವ್ಯ ಮೌನವನ್ನು ತಾಳುತ್ತಾರೆ. ಕಾರಣ ಅದೇ ತರ್ಕದ ಅಡಿಯಲ್ಲಿ ಆ ವಿಧಿಯು ಹೇರಿಕೆಯಾಗಿ ಬಿಡುತ್ತದೆ ಇಲ್ಲವೇ ಸ್ವಾತಂತ್ರ್ಯದ ಹರಣವಾಗಿ ಪರಿಗಣಿಸಬೇಕಾಗುತ್ತದೆ. ಆದರೆ ಅದು ಬುದ್ಧಿಜೀವಿಗಳಿಗೆ ಇಷ್ಟವಿಲ್ಲ. ಪಾಶ್ಚಾತ್ಯರ ವಸಾಹತು ಶಿಕ್ಷಣ ಪಡೆದು ಹಿಂದೂ ಎಂಬ ರಿಲಿಜನ್ನನ್ನು ಒಪ್ಪಿಕೊಂಡ ಸಸ್ಯಾಹಾರಿಗೂ ಹಿಂದೂ ರಿಲಿಜನ್ನಿನ ಪವಿತ್ರ ಗ್ರಂಥಗಳಾದ ವೇದಗಳಲ್ಲಿ ಮಾಂಸಾಹಾರದ ಉಲ್ಲೇಖಗಳು ವಿಚಿತ್ರವಾಗಿ ಕಾಣುತ್ತವೆ.
ಹಾಗಿದ್ದರೆ ಭಾರತೀಯ ಆಹಾರ ಶೈಲಿ ಏನು? ಅದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ಎರಡು ರೀತಿಯಲ್ಲಿ ವಿಂಗಡಿಸಿ ಹೊರಟರೆ ನಮ್ಮ ಸಂಪ್ರದಾಯಗಳ ಆಹಾರದ ಶೈಲಿಗಳನ್ನು ವಿವರಿಸಬಲ್ಲದೇ? ಸಮರ್ಪಕವಾಗಿ ವಿವರಿಸುವ ಚಿತ್ರಣವನ್ನೇ ತಾನೇ ವೈಜ್ಞಾನಿಕವೆಂದು ಕರೆಯಲು ಸಾಧ್ಯ. ಆದ್ದರಿಂದ ಮೊದಲು ಈಗಿರುವ ಸಸ್ಯಾಹಾರ ಮತ್ತು ಮಾಂಸಾಹಾರವೆಂಬ ವಿಭಾಗಗಳ ಚಿತ್ರಣವನ್ನು ಮೊದಲು ಅವಲೋಕಿಸೋಣ. ಅದು ನಮ್ಮ ಸಂಪ್ರದಾಯಗಳ ಆಹಾರ ಪದ್ಧತಿಯನ್ನು ವಿವರಿಸಲು ಸಾಧ್ಯವೇ ಎಂಬುದನ್ನು ಅರಿಯೋಣ. ಇಲ್ಲವಾದಲ್ಲಿ ನಮ್ಮ ಸಂಪ್ರದಾಯಗಳಲ್ಲಿರುವ ವಿವಿಧ ಆಹಾರದ ಶೈಲಿಗಳನ್ನು ವಿವರಿಸುವ ಚಿತ್ರಣವನ್ನು ರಚಿಸಲು ಸಾಧ್ಯವೇ ಎನ್ನುವದನ್ನು ಚರ್ಚಿಸೋಣ.
ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ
– ರೋಹಿತ್ ಚಕ್ರತೀರ್ಥ
“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.
ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.
ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್‍ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.
ಮತ್ತಷ್ಟು ಓದು 
ಇವರೆಲ್ಲ ಭಾರತೀಯ ಮುಸ್ಲಿಮರ ಹಿತಚಿಂತಕರೆ?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಇತ್ತೀಚೆಗೆ ಯಾಕೂಬ್ ಮೆಮನ್ ಗಲ್ಲಿಗೇರಿದ ನಂತರ ದೇಶಾದ್ಯಂತ ಬಂದ ಪ್ರತಿಕ್ರಿಯೆಗಳಲ್ಲಿ ಒಂದು ಅಸಹಜತೆಯಿತ್ತು. ಮೊದಲನೆಯದಾಗಿ, ಕೆಲವರು ಮರಣ ದಂಡನೆ ಇರಬೇಕೇ ಬೇಡವೆ? ಎಂಬ ನೆಲೆಯಲ್ಲಿ ಚರ್ಚಿಸಿದರು. ಇದಕ್ಕೂ ಹಿಂದೆ ಎಷ್ಟೋ ಮರಣದಂಡನೆಗಳಾಗಿವೆ, ಇಷ್ಟು ಗಂಭಿರವಾಗಿ ನಾಗರಿಕರು ಚರ್ಚೆಯನ್ನೆತ್ತಿದ್ದು ನನ್ನ ಗಮನಕ್ಕೆ ಬಂದಿಲ್ಲ. ಸ್ವತಂತ್ರ ಭಾರತದಲ್ಲಿ ನಾಥೂರಾಮ ಗೋಡ್ಸೆಯ ಪ್ರಕರಣದಿಂದಲೇ ಇಂಥ ಉದಾಹರಣೆಗಳು ಪ್ರಾರಂಭವಾದವು. ಅವನ ಮರಣದಂಡನೆಯನ್ನು ತಡೆಯಬಹುದಿತ್ತೆಂದು ಈ ಮಾನವ ಹಕ್ಕುಗಳ ವಕ್ತಾರರಿಗೆ ಎಂದಾದರೂ ಅನ್ನಿಸಬಹುದೆ? ಹಾಗಾಗಿ ಈ ಕುರಿತು ಚರ್ಚೆ ನಡೆಸಬಯಸುವವರು ಇಂಥ ಕ್ಷುದ್ರತನದಿಂದ ಮೇಲೆ ಏರಬೇಕಾಗುತ್ತದೆ. ಎರಡನೆಯದಾಗಿ, ಯಾಕೂಬ್ ಅಪರಾಧಿಯಾಗಿದ್ದನೆ? ಎಂಬ ನೆಲೆಯಲ್ಲಿ ಕೂಡ ಹಲವರು ಚರ್ಚೆ ನಡೆಸಿದರು. ಈ ಚರ್ಚೆ ಕೂಡ ಈ ಸಂದರ್ಭದಲ್ಲೇ ಎದ್ದಿದ್ದು ಕುತೂಹಲಕಾರಿಯಾಗಿದೆ. ಏಕೆಂದರೆ ಅದು ನಮ್ಮ ನ್ಯಾಯದಾನದ ಕಾರ್ಯಕ್ಷಮತೆಯ ಕುರಿತ ಪ್ರಶ್ನೆ. ಆದರೆ ಯಾಕೂಬನಿಗೆ ಸಂಬಂಧಿಸಿದಂತೆ ನಡೆದಷ್ಟು ಅಳೆದು ತೂಗುವ ಕೆಲಸ ಹಿಂದೆಂದೂ ಇಂಥ ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ನಡೆದಿರಲಿಲ್ಲ.
ಈ ಚರ್ಚೆಯನ್ನು ಗಮನಿಸಿದರೆ ಕೇವಲ ನ್ಯಾಯ ಅನ್ಯಾಯಗಳಷ್ಟೇ ಇಲ್ಲಿನ ಸಮಸ್ಯೆಯಲ್ಲ ಎಂಬುದಂತೂ ಸ್ಪಷ್ಟ. ಇದಕ್ಕೆ ಮುಸ್ಲಿಂ ಜನಾಂಗವನ್ನು ತಳಕುಹಾಕುತ್ತಿರುವುದು ಆತಂಕಕಾರಿ. ಕೆಲವರು, ರಾಜೀವಗಾಂಧಿ, ಇಂದಿರಾ ಗಾಂಧಿ ಹಂತಕರು ಹಿಂದೂಗಳು ಎಂಬ ಕಾರಣಕ್ಕಾಗಿ ರಕ್ಷಿಸಿ, ಯಾಕೂಬ್ ಮುಸ್ಲಿಮನೆಂಬ ಕಾರಣಕ್ಕೆ ಗಲ್ಲಿಗೆ ಏರಿಸುತ್ತಿದ್ದಾರೆ ಎಂದರು. ಅವರಿಗೆ ಗಾಂಧಿ ಹಂತಕರಿಗೆ ಏನಾಯಿತೆಂಬುದು ಮರೆತೇ ಹೋದಂತಿದೆ. ಇನ್ನೂ ಕೆಲವರು ಅಹಮದಾಬಾದ ಗಲಭೆಯ ರೂವಾರಿಗಳಿಗೆ ಪ್ರಧಾನ ಮಂತ್ರಿ ಪಟ್ಟದ ಸನ್ಮಾನ, ಬಾಂಬೆ ಗಲಭೆಯ ರೂವಾರಿಗೆ ಮರಣದಂಡನೆ ಎಂಬುದಾಗಿ ವಿಷಾದ ವ್ಯಕ್ತಪಡಿಸಿದರು. ಇವರಿಗೆಲ್ಲ ಅಹಮದಾಬಾದ ಗಲಭೆಯ ಹಿಂದೆ ಗೋಧ್ರಾದಲ್ಲಿನ ನೂರಾರು ಜನ ಹಿಂದೂ ಕರಸೇವಕರ ಜೀವಂತ ದಹನದ ಘಟನೆ ಇತ್ತೆನ್ನುವುದು ಮರೆತೇ ಹೋಗಿದೆ. ಅದಕ್ಕಿಂತ, ತದನಂತರ ಮುಸ್ಲಿಂ ಭಯೋತ್ಪಾದಕರಿಂದ ಇಂಥದ್ದೇ ಇತರ ಅನೇಕ ಹಿಂಸಾಕಾಂಡಗಳ ಸಂದರ್ಭದಲ್ಲಿ ಹಿಂದೂಗಳು ಹೀಗೇನೂ ಪ್ರತಿಕ್ರಿಯಿಸದೇ ಸಂಯಮಿಸಿಕೊಂಡಿದ್ದು ಮರೆತೇ ಹೋಗಿದೆ. ಆಶ್ಚರ್ಯವೆಂದರೆ ಮೋದಿಯನ್ನು ವಿರೋಧಿಸುವ ಭರದಲ್ಲಿ ಅನೇಕ ಸೆಕ್ಯುಲರ್ ಚಿಂತಕರೂ ಇಂಥ ಅಪಾಯದ ಹಾದಿಯನ್ನು ತುಳಿಯುತ್ತಿದ್ದಾರೆ.
ವಸಾಹತುಪ್ರಜ್ಞೆಯಲ್ಲಿ ಪುಣ್ಯಯೋನಿ-ಪಾಪಯೋನಿ
– ವಿನಾಯಕ್ ಹಂಪಿಹೊಳಿ
ಇತ್ತೀಚೆಗೆ ಕೆ. ಎಸ್. ಭಗವಾನ್ ಎಂಬ ಬುದ್ಧಿಜೀವಿಯೋರ್ವರಿಂದಾಗಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಭಾರೀ ವಿವಾದಕ್ಕೊಳಗಾದವು. ಆ ಶ್ಲೋಕಗಳಲ್ಲಿ ಕೆಲವೇ ವರ್ಗದ ಜನರನ್ನು ಪುಣ್ಯಯೋನಿಗಳೆಂತಲೂ ಉಳಿದ ಬಹುಸಂಖ್ಯಾತರನ್ನು ಪಾಪಯೋನಿಗಳೆಂತಲೂ ಕೃಷ್ಣ ಕರೆದದ್ದು ಈ ಹಿಂದೂ ರಿಲಿಜನ್ನಿನಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಚಿತ್ರಿಸಲಾಯಿತು. ಆ ಎರಡು ಶ್ಲೋಕಗಳನ್ನು ಗದ್ದೆಯಲ್ಲಿನ ಕಳೆಗೆ ಹೋಲಿಸಿ, ಇವುಗಳನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯಪಟ್ಟರು. ಆ ಎರಡು ಶ್ಲೋಕಗಳು “ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ” ಎಂಬ ಉಪನಿಷದ್ವಾಕ್ಯಕ್ಕೆ ವಿರುದ್ಧವಾದ ಆಶಯವನ್ನು ಹೊಂದಿದೆ ಎಂಬುದಾಗಿ ಸಾರಿದರು. ಈ ಹಿಂದೂ ಎಂಬ ಧರ್ಮದಲ್ಲಿ ಎರಡು ಭಾಗಗಳಿವೆ, ಅವು ಸಾಮಾಜಿಕ ಮತ್ತು ಅಧ್ಯಾತ್ಮಿಕ, ಎರಡೂ ಕ್ಷೇತ್ರಗಳಲ್ಲಿ ಅನೇಕ ಕೃತಿಗಳಿವೆ, ಅದರಲ್ಲಿ ಅಧ್ಯಾತ್ಮಿಕ ಕೃತಿಗಳ ಕುರಿತು ಅವರಿಗೆ ಸಮ್ಮತಿಯಿದೆ, ಆದರೆ ಸಾಮಾಜಿಕ ಕೃತಿಗಳ ಕುರಿತು ಅವರಿಗೆ ಭಾರೀ ಆಕ್ಷೇಪವಿದೆ ಎಂಬ ಅವರ ಹೇಳಿಕೆಯನ್ನು ಅವರ ವಾದದ ಸಾರಾಂಶ ಎನ್ನಬಹುದು.
ನಮ್ಮ ಸಂಪ್ರದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಮತ್ತು ಜೀವನದಲ್ಲಿ ಕಾಣುವ ಪರಿಣಾಮಗಳಿಗೆ ಪ್ರತ್ಯಕ್ಷವಾಗಿ ಕಾಣದ ಕಾರಣಗಳನ್ನು ಪೂರ್ವಜನ್ಮಕ್ಕೆ ಹೊಂದಿಸಿ ಅರಿಯುವದು ನಮ್ಮಲ್ಲಿ ಮೊದಲಿನಿಂದ ಇರುವ ಪರಂಪರೆ. ತನ್ಮೂಲಕ ಒಬ್ಬ ಜೀವನದಲ್ಲಿ ಪಡೆದಿರುವ ಪ್ರತಿಯೊಂದಕ್ಕೂ ಒಂದು ಕಾರಣವನ್ನು ಹುಡುಕಿಕೊಳ್ಳುವದು ಸಹಜವಾದ ಪ್ರಕ್ರಿಯೆ. ಆತ್ಮಕ್ಕೆ ಲಿಂಗವಿರುವದಿಲ್ಲ, ಲಿಂಗವೆಂಬುದು ಕೇವಲ ದೇಹದ ಒಂದು ಗುಣ ಎಂಬುದು ನಮ್ಮ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿರುವ ವಿಚಾರ. ಹೀಗಾಗಿ ಆತ್ಮ-ಪುನರ್ಜನ್ಮ-ದೇಹಗಳ ಕುರಿತು ಇರುವ ಈ ಆಧ್ಯಾತ್ಮಿಕ ವಿಚಾರಗಳಲ್ಲಿ ಒಂದು ಆತ್ಮ ಒಮ್ಮೆ ಗಂಡಾಗಿ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಮತ್ತೊಂದು ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುವ ಕಲ್ಪನೆಗಳು ಕಥೆಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಜನ್ಮದಿಂದ ಜನ್ಮಕ್ಕೆ ಅಲೆಯುವ ಒಂದು ಆತ್ಮ ಗಂಡು ದೇಹ ಪಡೆಯುವದಕ್ಕೋ, ಇಲ್ಲವೇ ಹೆಣ್ಣು ದೇಹ ಪಡೆಯುವದಕ್ಕೋ ಒಂದು ಕಾರಣ ಬೇಕಾಗುತ್ತದೆ.
ಇಂಡಿಯಾಸ್ ಡಾಟರ್ ಮತ್ತು ಬಿಬಿಸಿ-ವಿದೇಶಿಗರೊಬ್ಬರ ಬಿಚ್ಚು ನುಡಿ
ಇಂಗ್ಲಿಷ್ ಮೂಲ: ಜೇಕಬ್ ಡಿ ರೂವರ್
ಕನ್ನಡಕ್ಕೆ: ಅಶ್ವಿನಿ ಬಿ ದೇಸಾಯಿ, ಆರೋಹಿ, ಬೆಂಗಳೂರು
ದೆಹಲಿಯಲ್ಲಿ ವರ್ಷಗಳ ಹಿಂದೆ ನಡೆದ ನಿರ್ಭಯಾ ಪ್ರಕರಣ ದೇಶವನ್ನಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಗೆಬಗೆಯ ಚರ್ಚೆಗೆ ಗ್ರಾಸವಾಗಿತ್ತು. ಅತ್ಯಾಚಾರದಂಥ ಹೇಯ ಕೃತ್ಯಗಳು ಎಲ್ಲೇ ನಡೆದರೂ ಖಂಡನೀಯ.ಇಂದು (12 ಅಕ್ಟೋಬರ್ 2015) ಕೂಡ ದೆಹಲಿಯಲ್ಲಿಯೂ ಮಂಡ್ಯದಲ್ಲಿಯೂ ಇದೇ ಬಗೆಯ ಪ್ರಕರಣಗಳ ವರದಿಯಾಗಿದೆ. ಇಂಥ ಕೃತ್ಯಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಗೆ ನೋಡುತ್ತವೆ? ಚರ್ಚೆಯ ದಿಕ್ಕನ್ನು ಹೇಗೆ ತಪ್ಪಿಸುತ್ತವೆ? ಭಾರತದೊಳಗಿನ ಚರ್ಚೆಯನ್ನು ಕೂಡ ಹೇಗೆ ಪ್ರಭಾವಿಸುತ್ತಿವೆ? ಈ ನೆಪದಲ್ಲಿ ಭಾರತವನ್ನು ಹೇಗೆ ಚಿತ್ರಿಸುತ್ತವೆ? ಎಂಬ ಬಗ್ಗೆ ಬೆಲ್ಜಿಯಂನ ಪ್ರಾಧ್ಯಾಪಕ ರೂವರ್ ಅವರು ನೀಡಿದ ಒಂದು ಒಳನೋಟ.
ಹೀಗೊಮ್ಮೆ ಕಲ್ಪಿಸಿಕೊಳ್ಳಿ. ದೇಶದಲ್ಲಿರುವ ಶಿಶುಕಾಮ ಹಗರಣಗಳ ಬಗ್ಗೆ ಕೇಳಿದ ಚಿತ್ರ ನಿರ್ಮಾಪಕಿಯೊಬ್ಬರು ಬೆಲ್ಜಿಯಂಗೆ ಪ್ರವಾಸ ಕೈಗೊಳ್ಳುತ್ತಾರೆ. ಕುಖ್ಯಾತ ಶಿಶುಕಾಮಿಯೊಬ್ಬನ ಸಂದರ್ಶನವನ್ನೊಳಗೊಂಡ ಕಿರುಚಿತ್ರವೊಂದನ್ನು ಆಕೆ ನಿರ್ದೇಶಿಸುತ್ತಾಳೆ. ತಾನು ಅತ್ಯಾಚಾರವೆಸಗಿದ ಹೆಣ್ಣುಮಕ್ಕಳು ನಿಜವಾಗಿ ತನ್ನನ್ನೇ ಕೆಡಿಸಲು ಮುಂದಾದರಲ್ಲದೇ,ತನ್ನ ಕೃತ್ಯವನ್ನು ಅವರು ಸಂತೋಷದಿಂದ ಅನುಭವಿಸಿದ್ದಾರೆ ಎಂದು ಈ ಮನುಷ್ಯ ಹೇಳುತ್ತಾನೆ. ಏನನ್ನು ಚಿಂತಿಸಬೇಕೆಂದು ಇಂಥ ಶಿಶುಕಾಮಿಗಳಿಗೆ ಬೋಧಿಸುವ ಮೂಲಕ? ಬೆಲ್ಜಿಯಂ ಸಮಾಜ ಇದಕ್ಕೆ ಜವಾಬ್ದಾರಿ ಎಂದು ಚಿತ್ರನಿರ್ಮಾಪಕಿ ಟಿಪ್ಪಣಿ ನೀಡುತ್ತಾಳೆ. ಈ ದೇಶದ ಬಹುತೇಕ ಪುರುಷರು ಹೀಗೇ ತಯಾರಾಗಿದ್ದಾರೆಂದೂ ಆಕೆ ಹೇಳುತ್ತಾಳೆ. ನಿಜವಾಗಿ ಶಿಶುಕಾಮ ಬೆಲ್ಜಿಯಂನ ದೊಡ್ಡ ರೋಗ ಮತ್ತು ಸಂಸ್ಕೃತಿಯ ಭಾಗವಾದ್ದರಿಂದ ಬೆಲ್ಜಿಯಂ ಸಿನಿಮಾಗಳೂ ಅದನ್ನೇ ಪ್ರತಿಫಲಿಸುತ್ತವೆ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಬೆಲ್ಜಿಯಂನ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಈ ರೀತಿಯ ಹೇಳಿಕೆಗಳು ಆಘಾತಕಾರಿಯೂ, ನಮ್ಮನ್ನು ಕೆರಳಿಸುವಂಥದ್ದೂ ಆಗಿದೆ ಎಂದು ನಾವು ಭಾವಿಸುತ್ತೇವೆ. ಈ ರೀತಿಯ ಹೇಳಿಕೆಗಳು ಶಿಶುಕಾಮ ನಮ್ಮ ಸಂಸ್ಕೃತಿಯ ತಿರುಳಿನ ಅಭಿವ್ಯಕ್ತಿಯಾಗಿದ್ದು ಬಾಲದೌರ್ಜನ್ಯ ನಡೆಸುವಂತೆಯೇ ನಮ್ಮನ್ನೆಲ್ಲರನ್ನು ಸಿದ್ದಪಡಿಸಿದ್ದಾರೆ ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ.




