ವಿಷಯದ ವಿವರಗಳಿಗೆ ದಾಟಿರಿ

ಜನವರಿ 14, 2016

7

ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೧

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

Swami Vivekanandaಕೆಲ ವರ್ಷಗಳ ಹಿಂದೆ ವಿವೇಕಾನಂದರ ಮೇಲೆ ಅದೊಂದು ಲೇಖನ ಪ್ರಕಟವಾಗಿತ್ತು. ಭಗವಾನ್ ಗೀತೆಯನ್ನು ಸುಟ್ಟು ಹಾಕುತ್ತೇನೆ ಎಂದಮೇಲೆ ಏಕಾಏಕಿ ಆ ಪುಸ್ತಕದ ಸೇಲ್ಸ್ ಹೆಚ್ಚಾದಂತೆ, ವಿವೇಕರ ಮೇಲೆ ಬರೆದಿದ್ದ ಈ ಲೇಖನ ಪ್ರಕಟವಾದ ಮೇಲೆ ಹಲವು ತರುಣರು ವಿವೇಕಾನಂದರನ್ನು ಆಳವಾಗಿ ಅಭ್ಯಾಸ ಮಾಡಲು ಕೂತುಬಿಟ್ಟಿದ್ದರು! ಯಾಕೆಂದರೆ ವಿವೇಕರ ನಿಜಬಣ್ಣ ಬಯಲು ಮಾಡುವ ಉತ್ಸಾಹದಲ್ಲಿ ಲೇಖಕ ಬರೆದಿದ್ದ ಸಾಲುಗಳು ಆಘಾತ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಲೇಖನದ ತೊಂಬತ್ತೊಂಬತ್ತು ಭಾಗ ವಿವೇಕಾನಂದರನ್ನು ವಾಚಾಮಗೋಚರವಾಗಿ ತೆಗಳಿ, ಕೊನೆಯ ಒಂದೆರಡು ಸಾಲುಗಳಲ್ಲಿ “ಇಷ್ಟೆಲ್ಲ ಇದ್ದರೂ ಯಕಶ್ಚಿತ್ ಮನುಷ್ಯನೊಬ್ಬ ವಿವೇಕಾನಂದ ಆಗಲು ಸಾಧ್ಯ” ಎಂಬ “ತಿಪ್ಪೆ ಸಾರಿಸಿ” ಲೇಖನವನ್ನು ಮುಗಿಸಲಾಗಿತ್ತು. ಹೆತ್ತತಾಯಿಯನ್ನು ಅಸಹ್ಯ ಪದಗಳಿಂದ ನಿಂದಿಸಿ ಕೊನೆಗೆ “ಅವೇನೇ ಇದ್ದರೂ ನೀನು ತಾಯಿ” ಎಂದು ಹೇಳುವ ಧಾಟಿಯಲ್ಲಿ ಲೇಖಕರು ತನ್ನ ಜಾಣಮಾತುಗಳನ್ನು ಹೊಸೆದಿದ್ದರು. ವಿವೇಕಾನಂದರ ಬಗ್ಗೆ ಸರ್ವೇಸಾಧಾರಣವಾದ ಒಂದಷ್ಟು ಜನರಲ್ ಸಾಹಿತ್ಯವನ್ನು ಓದಿಕೊಂಡದ್ದು ಬಿಟ್ಟರೆ ನನಗೂ ಆ ಧೀಮಂತನ ಜೀವನದ ಹೆಚ್ಚಿನ ವಿವರಗಳು ತಿಳಿದಿರಲಿಲ್ಲ. ಲೇಖನದ ಅಪಪ್ರಚಾರವೊಂದು ನೆಪವಾಗಿ ನಾನೂ ವಿವೇಕಾನಂದರ ಬಗ್ಗೆ ಓದಲು ಕೂತೆ!

ಆ ಅಪಪ್ರಚಾರದ ಲೇಖನವನ್ನು ಓದುತ್ತಿದ್ದಾಗ ನನ್ನನ್ನು ತಡೆದುನಿಲ್ಲಿಸಿದ ಒಂದು ಸಾಲು ಹೀಗಿತ್ತು: ವಿವೇಕಾನಂದರು ಇಂಗ್ಲೀಷಿನಲ್ಲಿ 46 ಅಂಕ ಪಡೆದಿದ್ದರು; ಶಾಲಾಶಿಕ್ಷಕನಾಗುವ ಅರ್ಹತೆಯೂ ಇಲ್ಲ ಎಂಬ ಕಾರಣಕ್ಕೆ ಸ್ವತಃ ಈಶ್ವರಚಂದ್ರ ವಿದ್ಯಾಸಾಗರರು ಅವರನ್ನು ಕೆಲಸದಿಂದ ತೆಗೆದುಹಾಕಿದ್ದರು.ಈ ಮಾತುಗಳನ್ನು ಓದಿದಾಗ,ನನಗೆ ಥಟ್ಟನೆ ಆರ್.ಕೆ.ನಾರಾಯಣ, ಬನ್ನಂಜೆ ಗೋವಿಂದಾಚಾರ್ಯ, ಶ್ರೀನಿವಾಸ ರಾಮಾನುಜನ್, ಎವಾರಿಸ್ಟ್ ಗ್ಯಾಲ್ವ ನೆನಪಿಗೆ ಬಂದರು. ನಿಮಗೆ ಗೊತ್ತಿದೆಯೋ ಇಲ್ಲವೋ, ಭಾರತೀಯ ಇಂಗ್ಲೀಷ್ ಸಾಹಿತ್ಯಲೋಕದ ದಿಗ್ಗಜ ಆರ್.ಕೆ. ನಾರಾಯಣ್ ಕಾಲೇಜು ದಿನಗಳಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಫೇಲಾಗಿದ್ದರು! ಸಂಸ್ಕೃತದ ಪ್ರಕಾಂಡ ಪಂಡಿತ ಬನ್ನಂಜೆಯವರಿಗೆ ಎರಡು ಸಲ ಪ್ರವೇಶ ಪರೀಕ್ಷೆಗೆ ಕೂತರೂ ಸಂಸ್ಕೃತ ಕಾಲೇಜಿಗೆ ಸೇರಬೇಕಾದಷ್ಟು ಮಾರ್ಕು ಸಿಗಲಿಲ್ಲ! ಗಣಿತ ತಾರೆ ರಾಮಾನುಜನ್ ಎಫ್‍ಎ ಪರೀಕ್ಷೆಯಲ್ಲಿ ಫೇಲಾಗಿದ್ದ ಹುಡುಗ, ಮುಂದೆ ಕೇವಲ ಮೂವತ್ತು ವರ್ಷ ವಯಸ್ಸಲ್ಲೇ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿವಿಯಲ್ಲಿ ಬಿ.ಎ. ಪದವಿ ಪಡೆದು ಫೆಲೋ ಆಫ್ ರಾಯಲ್ ಸೊಸೈಟಿ ಆದರು! ಗಣಿತದ ಇನ್ನೊಂದು ಅದ್ಭುತ ಪ್ರತಿಭೆ; ಗ್ರೂಪ್ ಸಿದ್ಧಾಂತವೆಂಬ ಹೊಸ ಶಾಖೆಯನ್ನು ಹುಟ್ಟಿಸಿದ ಗ್ಯಾಲ್ವನಿಗೆ ತನ್ನ ಹುಟ್ಟೂರು ಪ್ಯಾರಿಸ್ಸಿನ ಎಕೋಲ್ ಪಾಲಿಟೆಕ್ನಿಕ್ ಎಂಬ ಕಾಲೇಜಿನ ಸಂದರ್ಶನದಲ್ಲಿ ಎರಡು ಸಲ ಮಂಗಳಾರತಿಯಾಗಿತ್ತು. ಯಾವುದೇ ವ್ಯಕ್ತಿಯ ಜೀವನ ನಿಂತ ನೀರಾಗಿರುವುದಿಲ್ಲ; ಅದು ನಿರಂತರ ಚಲನಶೀಲ. ಹಾಗೊಂದು ಊಧ್ರ್ವಗತಿ ಇರುವುದರಿಂದಲೇ ಸಾಮಾನ್ಯವ್ಯಕ್ತಿಗಳು ಮಹಾತ್ಮರಾಗುತ್ತಾರೆ ಎಂಬುದನ್ನು ಬಲ್ಲ ಯಾರಿಗೇ ಆಗಲಿ, ವಿವೇಕಾನಂದರು ಶಾಲೆ-ಕಾಲೇಜುಗಳಲ್ಲಿ ಕಡಿಮೆ ಮಾರ್ಕು ಪಡೆದರು ಎನ್ನುವುದು ಅವರನ್ನು ಅಳೆಯುವ ಮಾನದಂಡ ಅನ್ನಿಸುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೂ ತನ್ನ ಜೀವನದಲ್ಲಿ ಎದುರಾಗುತ್ತಹೋದ ಪಲ್ಲಟಗಳಿಗೆ ಎದೆಯೊಡ್ಡಿ ನಿಂತಾಗ ಮಾತ್ರ ಮಹಾತ್ಮನಾಗಬಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಶಾಲೆಯಲ್ಲಿ 46 ಮಾರ್ಕು ಪಡೆದರು ಎಂಬ ಕಾರಣ ಕೊಟ್ಟು ಓದುಗರನ್ನು ಆಘಾತಗೊಳಿಸಿದ ಲೇಖನದಲ್ಲಿ ವಿವೇಕಾನಂದರ ಔನ್ನತ್ಯವನ್ನು ಅರಿತುಕೊಳ್ಳಲು ದಾರಿಯಾಗುವ ಇನ್ನಷ್ಟು ಆಘಾತಗಳಿರಬಲ್ಲವು ಎಂದು ಮನದಟ್ಟಾಯಿತು. ಅಲ್ಲಿಂದ ಮುಂದಕ್ಕೆ ನಾನು ಕಂಡುಕೊಂಡ ವಿವೇಕಾನಂದರ ನಿಜಚಿತ್ರಣ ಇಲ್ಲಿದೆ.

ಸಂಪಿಗೆ ಮರದಲ್ಲಿ ಬ್ರಹ್ಮರಾಕ್ಷಸ
ಸ್ವಾಮಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರನಾಥ ದತ್ತ. ಹುಟ್ಟಿದ್ದು 1863ರ ಜನವರಿ 12ರಂದು. ಕೋಲ್ಕತ್ತದ ಹೊರವಲಯದಲ್ಲಿದ್ದ; ನಮ್ಮ ದೇವನಹಳ್ಳಿಯಂಥಾ ಒಂದು ಪುಟ್ಟ ಊರಲ್ಲಿ. ಅಪ್ಪ ವಿಶ್ವನಾಥ ದತ್ತ ಒಳ್ಳೆಯ ವಕೀಲರೆಂದು ಹೆಸರು ಮಾಡಿದವರು. ಆಗರ್ಭ ಶ್ರೀಮಂತ ಎಂದು ಹೇಳುಕೊಳ್ಳುವಂಥ ಸಿರಿವಂತಿಕ್ಕೆ ಇಲ್ಲದಿದ್ದರೂ ಮೂರು ಮಾಳಿಗೆಯ ಮನೆ ಪಿತ್ರಾರ್ಜಿತವಾಗಿ ಬಂದಿತ್ತು. ಮಕ್ಕಳಿರಲವ್ವ ಮನೆತುಂಬ ಎಂಬ ಮಾತನ್ನು ನಿಜಮಾಡಿದ ಭುವನೇಶ್ವರಿ ದೇವಿ ತನ್ನ ಉಡಿಯಲ್ಲಿ ಜೋಗುಳ ಹಾಡಿ ಬೆಳೆಸಿದ್ದು ಬರೋಬ್ಬರಿ ಹತ್ತು ಮಕ್ಕಳನ್ನು. ಇವರೆಲ್ಲರಲ್ಲಿ ನರೇಂದ್ರನೇ ಹೆಚ್ಚು ತುಂಟ. ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ ಶಕ್ತಿನಿರ್ಘಾತ ಆತ. ಬೀದಿಯಲ್ಲಿ ಸಾಧುಸಂತರನ್ನು ಕಂಡರೆ ತನ್ನ ಕೈಯಲ್ಲಿದ್ದದ್ದನ್ನೆಲ್ಲ ನಿರ್ಮೋಹದಿಂದ ಕೊಟ್ಟು ಬರಿಗೈಯಲ್ಲಿ ಮನೆ ಸೇರುತ್ತಿದ್ದ. ಈ ಹುಚ್ಚು ಅತಿರೇಕ ಹೆಚ್ಚಾಯಿತೆಂದು ಕೋಣೆಯಲ್ಲಿ ಕೂಡಿಹಾಕಿದರೆ ಕಿಟಕಿಯಲ್ಲಿ ಒಂದಷ್ಟು ಉಡುಗೊರೆ ಎಸೆದು ತೀಟೆ ತೀರಿಸಿಕೊಳ್ಳುತ್ತಿದ್ದ. ಒಮ್ಮೆ ಗೆಳೆಯನ ಮನೆಯ ಸಂಪಿಗೆ ಮರದಲ್ಲಿ ಕೋತಿಯಾಟವಾಡುತ್ತಿದ್ದ ನರೇಂದ್ರನಿಗೆ ಹಿರಿಯರು ಆ ಮರದಲ್ಲಿ ಬ್ರಹ್ಮರಾಕ್ಷಸ ಇದೆಯೆಂದು ಹೆದರಿಸಿದರು. ಅದು ಇದೆಯೋ ಇಲ್ಲವೋ ನೋಡೇಬಿಡಬೇಕೆಂದು ಈ ಚೂಟಿ ಒಂದಿಡೀ ದಿನ ಮರದಲ್ಲೇ ಕೂತುಕಳೆದು ಮನೆಯವರಿಗೆ ಪ್ರಾಣಕ್ಕೆ ತಂದಿಟ್ಟಿದ್ದ. ನರೇಂದ್ರನಲ್ಲಿ ಸತ್ಯ ಹೇಳುವುದು ಕಷ್ಟ; ಸುಳ್ಳು ಹೇಳುವುದು ಇನ್ನೂ ದೊಡ್ಡ ಕಷ್ಟ ಎಂದು ಸುತ್ತಮುತ್ತಲಿನ ಜನಕ್ಕೆ ನಿಧಾನವಾಗಿ ಅರ್ಥವಾಗತೊಡಗಿತು.

ತನ್ನ ಎಂಟನೇ ವಯಸ್ಸಿನಲ್ಲಿ ನರೇಂದ್ರ, ಈಶ್ವರಚಂದ್ರ ವಿದ್ಯಾಸಾಗರರು ನಡೆಸುತ್ತಿದ್ದ ಮೆಟ್ರೊಪಾಲಿಟನ್ ಶಾಲೆಗೆ ಎರಡನೆ ತರಗತಿಗೆ ಸೇರಿಕೊಂಡ. ಓದಿಗಿಂತ ಕುಣಿದಾಟವೇ ಹೆಚ್ಚಾಯಿತು. ಆದರೆ ಹುಡುಗನ ಕುಶಾಗ್ರಮತಿ ಮೇಷ್ಟ್ರುಗಳಿಗೆ ಮೆಚ್ಚಾಯಿತು. ಶಾಲೆಯ ಪರೀಕ್ಷೆಗಳಲ್ಲಿ 46 ಅಂಕ ಪಡೆದಿದ್ದ ಅದೇ ನರೇಂದ್ರನಾಥ, ಪ್ರೆಸಿಡೆನ್ಸಿ ಕಾಲೇಜಿನ ಪ್ರವೇಶ ಪರೀಕ್ಷೆಗಳಲ್ಲಿ ಮೊದಲ ಶ್ರೇಣಿ ಪಡೆದ ಏಕಮೇವ ವಿದ್ಯಾರ್ಥಿಯಾಗಿದ್ದ! ಶಾಲಾದಿನಗಳು ಕಳೆದ ಮೇಲೆ ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ಬಿಎ ಓದು ಮುಂದುವರಿಯಿತು. ಪುಸ್ತಕಗಳ ಒಣವೇದಾಂತಕ್ಕಿಂತ ತನಗೆ ದಕ್ಕಿದ ಸತ್ಯವನ್ನಷ್ಟೇ ಒಪ್ಪಿಕೊಳ್ಳಬೇಕೆಂದು ಮನಸ್ಸು ಹಾತೊರೆಯತೊಡಗಿತು. “ಹಳೆಯ ವೇದೋಪನಿಷತ್ತುಗಳಲ್ಲಿ ಬರೆದಿತ್ತು ಎಂಬ ಕಾರಣಕ್ಕಾಗಿ ನಂಬಬೇಡಿ. ಅದನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ. ಯಾರೋ ಮಹಾತ್ಮರು ಹೇಳಿದರೆಂಬ ಕಾರಣಕ್ಕೂ ನಂಬಬೇಡಿ. ಸತ್ಯದರ್ಶನ ಎಂದರೆ ನೀವಾಗಿ ಸತ್ಯಕ್ಕೆ ಮುಖಾಮುಖಿಯಾಗುವುದು. ಇನ್ನೊಬ್ಬರ ಉಪದೇಶವನ್ನು ಪರೀಕ್ಷಿಸದೆ ಒಪ್ಪಿಕೊಂಡರೆ ಅದು ನಂಬಿಕೆಯಾಗುತ್ತದೆಯೇ ಹೊರತು ಸತ್ಯ ಆಗುವುದಿಲ್ಲ”, ಯುವಕ ನರೇಂದ್ರ ತನಗೆ ಸಂಪಿಗೆಮರ ಕಲಿಸಿದ್ದ ಪಾಠದ ಸಾರಾಂಶವನ್ನು ಬರೆದ. ಇಪ್ಪತ್ತರ ಆ ವಯಸ್ಸಿನಲ್ಲೇ ಹಲವು ಶಾಸ್ತ್ರ-ಪುರಾಣಗಳನ್ನು ತಿರುವಿಹಾಕಿದ ಫಲವೋ ಏನೋ “ದೇವರಿದ್ದಾನೆಯೇ?” ಎಂಬ ಪ್ರಶ್ನೆಯನ್ನು ಹಿರಿಯರಲ್ಲಿ ಕೇಳತೊಡಗಿದ. “ಇಲ್ಲವೇ ಇಲ್ಲ; ಕಾಣದ ವಸ್ತುವನ್ನು ಇದೆಯೆಂದು ನಂಬುತ್ತಾರೆಯೇ?” ಎಂದು ಬುದ್ಧಿ ಹೇಳಿದರು ಕೆಲವರು. “ಇದ್ದಾನೆ; ಆದರೆ ಗಾಳಿಯನ್ನು ಹೇಗೆ ತೋರಿಸಲು ಸಾಧ್ಯವಿಲ್ಲವೋ ಹಾಗೆಯೇ ದೇವರು ಕೂಡ ನಿರಾಕಾರ ಮತ್ತು ಸರ್ವಾಂತರ್ಯಾಮಿ” ಎಂದು ಜಾಣನುಡಿಯಾಡಿ ಸಂಶಯವನ್ನು ಹೆಚ್ಚಿಸಿದರು ಹಲವರು. ತಮಾಷೆಯೆನ್ನುವಂತೆ ಶುರುವಾದ ಈ ದೇವರ ಹುಡುಕಾಟ ನರೇಂದ್ರನಿಗೊಂದು ದೊಡ್ಡ ತಾತ್ತ್ವಿಕಪ್ರಶ್ನೆಯಾಗಿ ನಿಂತಿತು.

ಆಗ ಒಬ್ಬ ಸ್ನೇಹಿತ “ಈ ಪ್ರಶ್ನೆಯನ್ನು ನೀನು ರಾಮಕೃಷ್ಣ ಪರಮಹಂಸರಲ್ಲಿ ಯಾಕೆ ಕೇಳಬಾರದು? ಅವರಿಗೆ ಉತ್ತರ ಗೊತ್ತಿದೆಯೋ ಇಲ್ಲವೋ ಮುಖ್ಯವಲ್ಲ. ಆದರೆ ದೇವರ ಹುಡುಕಾಟದ ಹಾದಿಯಲ್ಲಿ ಬಹುದೂರ ಹೋಗಿರುವ ಮನುಷ್ಯ ಆತ” ಎಂದ. ನರೇಂದ್ರನಿಗೆ ಆ ಪ್ರಶ್ನೆ ಅದೆಷ್ಟು ಕಾಡುತ್ತಿತ್ತೆಂದರೆ ಮರುಕ್ಷಣವೇ ಆತ ರಾಮಕೃಷ್ಣರನ್ನು ಭೇಟಿಯಾಗಲು ಹೊರಟುನಿಂತ. ಇಬ್ಬರು ಗೆಳೆಯರನ್ನು ಕಟ್ಟಿಕೊಂಡು ಅವನು ಕಾಳಿ ದೇವಸ್ಥಾನದಲ್ಲಿದ್ದ ರಾಮಕೃಷ್ಣರನ್ನು ಭೇಟಿಮಾಡಿದ. ಈತನನ್ನು ಕಾಣುತ್ತಲೇ ಅವರು ಹಲವು ವರ್ಷಗಳಿಂದ ಪರಿಚಯವಿರುವವರಂತೆ ಆತ್ಮೀಯವಾಗಿ ಮಾತಾಡಿಸಿದರು! ನರೇಂದ್ರ ಮಾತುಕತೆಯ ನಡುವೆ ತನ್ನ ಮುಖ್ಯಪ್ರಶ್ನೆಗೆ ಬಂದು “ದೇವರಿದ್ದಾನೆಯೇ? ನೀವು ಆತನನ್ನು ನೋಡಿದ್ದೀರಾ?” ಎಂದು ಕೇಳಿದಾಗ ರಾಮಕೃಷ್ಣರು “ಯಾಕಿಲ್ಲ! ನಿನ್ನನ್ನು ಎಷ್ಟು ಸ್ಪಷ್ಟವಾಗಿ ನೋಡುತ್ತಿದ್ದೇನೋ ದೇವರನ್ನೂ ಅಷ್ಟೇ ಖಚಿತತೆಯಿಂದ ನೋಡುತ್ತಿದ್ದೇನೆ. ಉತ್ಕಟಭಕ್ತಿಯಿಂದ ಬೇಡಿದವರಿಗೆ ಆತ ಪ್ರಕಟವಾಗಲು ಹಿಂಜರಿಯುವುದಿಲ್ಲ” ಎಂದುಬಿಟ್ಟರು. ತನ್ನ ತಲೆತಿನ್ನುತ್ತಿದ್ದ ಪ್ರಶ್ನೆಗೆ ಇಷ್ಟು ನೇರವಾಗಿ ಸರಳವಾಗಿ ಸ್ಪಷ್ಟವಾಗಿ ಯಾರಿಂದಲೂ ಸಿಗದಿದ್ದ ಉತ್ತರವನ್ನು ಈ ಫಕೀರನಂಥ ವಿದ್ವಾಂಸರು ಕೊಟ್ಟುಬಿಟ್ಟರಲ್ಲ ಎಂದು ನರೇಂದ್ರನಿಗೆ ರೋಮಾಂಚನವಾಯಿತು. ಆ ಕ್ಷಣವೇ ಗುರುವಿನ ಗುಲಾಮನಾದ.

ರಾಮಕೃಷ್ಣರ ಭೇಟಿಯಾದಾಗ ನರೇಂದ್ರನ ಕಾಲೇಜು ವಿದ್ಯಾಭ್ಯಾಸ ಇನ್ನೂ ಪೂರ್ತಿಯಾಗಿರಲಿಲ್ಲ. ಕಾಲೇಜಿನ ಕೊನೆಯ ವರ್ಷ ಮುಗಿಸಿ ಪರೀಕ್ಷೆ ಬರೆದು ಪದವಿಯ ಕಿರೀಟ ಹೊತ್ತು ಹೊರಬರುವ ಹೊತ್ತಿಗೆ ಅವನ ಮನೆಯಲ್ಲಿ ಹಲವು ಬಿರುಗಾಳಿಗಳು ಎದ್ದು ಕಂತಿದ್ದವು. ಕಾಲೇಜು ವಿದ್ಯಾಭ್ಯಾಸ ಮುಗಿಯುವುದಕ್ಕೂ ತಂದೆ ತೀರಿಕೊಳ್ಳುವುದಕ್ಕೂ ಸರಿಹೋಯಿತು. ಅದನ್ನೇ ಕಾಯುತ್ತಿದ್ದ ಸಂಬಂಧಿಕರು ಆಸ್ತಿಗಲಾಟೆಗೆ ನಿಂತುಬಿಟ್ಟರು. ಸ್ವತಃ ಅತ್ತೆಯೇ ನರೇಂದ್ರನ ಕುಟುಂಬದ ಮೇಲೆ ಆಸ್ತಿವ್ಯಾಜ್ಯ ಹೂಡಿ ಕೋರ್ಟಿಗೆ ಅಲೆದಾಡಿಸಹತ್ತಿದಳು. ಇವೆಲ್ಲದರ ನಡುವಲ್ಲಿ ಅತ್ತ ಯಾವುದಾದರೊಂದು ಉದ್ಯೋಗ ಹಿಡಿದು ಮನೆಗೆ ಆಸರೆಯಾಗಲೇ ಇಲ್ಲಾ ರಾಮಕೃಷ್ಣರಿಗೆ ಮಾತುಕೊಟ್ಟಂತೆ ಅಧ್ಯಾತ್ಮದ ದಾರಿಯಲ್ಲಿ ನಡೆದು ಸಂನ್ಯಾಸ ಸ್ವೀಕರಿಸಲೇ ಎಂಬ ಹೊಯ್ದಾಟ ಎದ್ದಿತು. ಒಂದೆರಡು ಕೆಲಸ ಹಿಡಿದರೂ ಅದ್ಯಾವುದೂ ಸರಿಬರದೆ ಕೊನೆಗೆ ನರೇಂದ್ರ ಗಟ್ಟಿಮನಸ್ಸು ಮಾಡಿ ರಾಮಕೃಷ್ಣರ ಬಳಿ ನಡೆದೇಬಿಟ್ಟ. ಅಧ್ಯಾತ್ಮವೇ ನನ್ನ ದಾರಿ, ಸಂನ್ಯಾಸವೇ ಪಯಣ, ಭಾರತೀಯ ಆರ್ಷೇಯ ಜ್ಞಾನಸಂಪಾದನೆಯೇ ಗುರಿ ಎಂದು ಗುರುವಿನ ಪಾದಗಳಿಗೆ ಸಾಷ್ಟಾಂಗ ಎರಗಿದ. ಅಂದಿನಿಂದ ಗುರುಮುಖೇನ ವೇದ-ವೇದಾಂತಗಳ ಅಧ್ಯಯನ ಮೊದಲಾಯಿತು. ಹಗಲುರಾತ್ರಿಗಳ ಭೇದ ಅಳಿಯಿತು. ಇರುಳಿನ ನೀರವದಲ್ಲಿ ದೀಪದ ಬುಡ್ಡಿಯು ಜೊತೆ ಕೊಟ್ಟಿತು. 1881ರಿಂದಲೇ ವೇದೋಪನಿಷತ್ತುಗಳ ಆಳವಾದ ಅಧ್ಯಯನ ಕೈಗೊಂಡಿದ್ದರೂ ಈಗ ಗುರುವಿನ ಇರವಲ್ಲಿ ಅರಿವಿನ ದಿಗಂತ ವಿಸ್ತರಿಸುವ ಹೊಸ ಓದು ಸಾಧ್ಯವಾಯಿತು ನರೇಂದ್ರನಿಗೆ. ರಾಮಕೃಷ್ಣರು ತನ್ನ ಪ್ರೀತಿಯ ಶಿಷ್ಯನಿಗೆ ಭಕ್ತಿಯೋಗ ಮತ್ತು ಜ್ಞಾನಯೋಗಗಳ ಆಳವಾದ ಪಾಂಡಿತ್ಯಪೂರ್ಣ ಪಾಠ ಮಾಡಿದರು.

1885ರಲ್ಲಿ ಗುರುವಿನ ಆರೋಗ್ಯ ಕೆಟ್ಟಿತು. ವೈದ್ಯಕೀಯ ತಪಾಸಣೆಯ ಬಳಿಕ ತಿಳಿದುಬಂದದ್ದು ಅವರಿಗೆ ಗಂಟಲಿನ ಕ್ಯಾನ್ಸರ್ ಆಗಿದೆ ಎಂದು. ಹೆಚ್ಚಿನ ವೈದ್ಯಕೀಯ ಸೌಕರ್ಯಗಳಿಲ್ಲದ ಆ ಕಾಲದಲ್ಲಿ ಕ್ಯಾನ್ಸರ್ ಬಂತೆಂದರೆ ದಿನವೆಣಿಸುವುದೆಂದೇ ಅರ್ಥವಿದ್ದದ್ದು. ಗುರು ತನ್ನ ಜೊತೆ ಬಹುಕಾಲ ಕಳೆಯುವ ಸಾಧ್ಯತೆ ಇಲ್ಲವೆನ್ನುವುದು ಖಚಿತವಾದಾಗ ನರೇಂದ್ರ ತನ್ನ ಅಧ್ಯಯನವನ್ನು ಇನ್ನಷ್ಟು ಆಳ, ವಿಸ್ತಾರ, ಕಠೋರವಾಗಿಸಿಕೊಂಡ. ಗುರುಗಳು ತೀರಿಕೊಳ್ಳುವ ಕೆಲವೇ ದಿನಗಳ ಮೊದಲು ಆತನಿಗೆ ನಿರ್ವಿಕಲ್ಪ ಸಮಾಧಿ ಸಿದ್ಧಿ ಸಾಧ್ಯವಾಯಿತು. ರಾಮಕೃಷ್ಣರು ತಾನು ಕೊನೆಯುಸಿರೆಳೆಯುವುದು ತನಗೇ ಖಚಿತವಾದ ಮೇಲೆ ಒಂದುದಿನ ಮಠದ ಮಾಣಿಗಳನ್ನೆಲ್ಲ ಕರೆದು, ಅವರ ಸಮ್ಮುಖದಲ್ಲಿ ನರೇಂದ್ರನಿಗೆ ದೀಕ್ಷೆ ಕೊಟ್ಟು ತನ್ನ ಪೀಠದ ಉತ್ತರಾಧಿಕಾರಿಯಾಗಿ ನೇಮಿಸಿದರು. ಅಂದು ಕೋಶ ಕಳಚಿದ ಪತಂಗದಂತೆ, ತನ್ನ ಹಳೆಯ ನಾಮಧೇಯವನ್ನು ವಿದ್ಯುಕ್ತವಾಗಿ ಕಳಚಿ ನರೇಂದ್ರನಾಥ ದತ್ತ “ವಿವಿಧೀಶಾನಂದ”ನಾದ. 1886ರ ಆಗಸ್ಟ್ 16ರಂದು, ತನ್ನ ಐವತ್ತನೇ ವರ್ಷದಲ್ಲಿ ಗುರು ಪರಮಹಂಸರು ಲೌಕಿಕ ವ್ಯವಹಾರ ಮುಗಿಸಿದರು. ಅಧ್ಯಾತ್ಮದ ಸಾಧನೆಯ ದಾರಿಯಲ್ಲಿದ್ದೂ ಈ ನಿರ್ಗಮನದಿಂದ ದೊಡ್ಡ ಆಘಾತ ಮತ್ತು ಶೂನ್ಯವನ್ನು ಅನುಭವಿಸಿದ್ದು ಪಟ್ಟದ ಶಿಷ್ಯ ವಿವಿಧೀಶಾನಂದರೇ. ಮರುವರ್ಷ ಇವರು ಕೋಲ್ಕತ್ತದ ಹೊರವಲಯದಲ್ಲಿದ್ದ ಬಾರಾನಗರದಲ್ಲಿ ಒಂದು ಸಣ್ಣ ಜಾಗ ಪಡೆದು ರಾಮಕೃಷ್ಣರ ಹೆಸರಲ್ಲಿ ಒಂದು ಮಠದ ಸ್ಥಾಪನೆ ಮಾಡಿದರು. ತನ್ನ ಶಿಷ್ಯಂದಿರಿಗೆ ದೀಕ್ಷೆ ಕೊಟ್ಟು ಹೊಸದಾಗಿ ನಾಮಕರಣ ಮಾಡಿದರು. ಭಕ್ತಿ ಮತ್ತು ಜ್ಞಾನದ ಮಾರ್ಗದಲ್ಲಿ ಅಂತಿಮಸತ್ಯವನ್ನು ಅನ್ವೇಷಿಸುವುದು ಈ ಗುರುಶಿಷ್ಯರ ಮುಖ್ಯ ಧ್ಯೇಯವಾಯಿತು. ವೇದ-ವೇದಾಂತ-ಪುರಾಣ, ಮಹಾಭಾರತ ರಾಮಾಯಣ ಮಹಾಕಾವ್ಯಗಳನ್ನೆಲ್ಲ ಓದಿ ಅರ್ಥೈಸಿಕೊಂಡು ಭಾರತದ ಹೃದಯವನ್ನು ಅರಿಯುವ ಕೆಲಸವನ್ನು ಶಿಷ್ಯರು ಎತ್ತಿಕೊಂಡರು. ಇಲ್ಲಿ ವ್ಯಾಸಂಗ ಮಾಡಿ ದೀಕ್ಷೆ ಪಡೆದು ಸ್ವಾಮಿಗಳಾದ ಹಲವರು ದೇಶಾದ್ಯಂತ ವೈದಿಕ ಪರಂಪರೆಯ ಪ್ರಚಾರಕಾರ್ಯ ಕೈಗೊಂಡರು. ಗಂಗಾಧರನೆಂಬ ವಿದ್ಯಾರ್ಥಿ ವಿವಿಧೀಶಾನಂದರ ನೇರಶಿಷ್ಯನಾಗಿ ವಿದ್ಯಾರ್ಜನೆ ಮಾಡಿ ಬಳಿಕ ಸಂನ್ಯಾಸಿಯಾಗಿ ದೀಕ್ಷೆ ಪಡೆದು ಅಖಂಡಾನಂದನೆಂಬ ಹೆಸರು ಧರಿಸಿದ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆ ಸರಸಂಘಚಾಲಕರಾಗಿದ್ದ ಗೋವಾಳ್ಕರ್ ಅವರ ಗುರುವಾಗಿದ್ದವರು ಅಖಂಡಾನಂದರು.

ಕಡಲತಡಿಯಲ್ಲಿ ಧ್ಯಾನಾಸಕ್ತ
ಅದೊಂದು ದಿನ ಗುರುವಿಗೆ ತನ್ನ ವಿವಿಧೀಶಾನಂದನೆಂಬ ಹೆಸರನ್ನು ಬದಲಿಸಬೇಕೆಂಬ ಪ್ರೇರಣೆಯಾಯಿತಂತೆ. ವಿವೇಕಾನಂದ ಎಂಬ ಹೆಸರೇ ಮೆಚ್ಚಾಯಿತಂತೆ. 1888ರ ಹೊತ್ತಿಗೆ ಅದೇ ಹೆಸರನ್ನು ಗಟ್ಟಿಮಾಡಿಕೊಂಡರು. ಅಲ್ಲಿಂದ ಮುಂದೆ ವಿವೇಕಾನಂದರ ಅಖಂಡ ಭಾರತ ಪರ್ಯಟನ ಪ್ರಾರಂಭವಾಯಿತು. ರಾಜಸ್ತಾನದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿನೊಂದು ಸಂಸ್ಥಾನದಲ್ಲಿ ಮಂಗಲ ಸಿಂಹನೆಂಬ ರಾಜ ಮೂರ್ತಿಪೂಜೆಯನ್ನು ವಿರೋಧಿಸುತ್ತಿದ್ದ ವಿಚಾರ ವಿವೇಕಾನಂದರಿಗೆ ತಿಳಿಯಿತು. ಅವನನ್ನು ಕಂಡು ಮಾತಾಡಿಸಿ ಮನಃಪರಿವರ್ತನೆ ಮಾಡುವ ದಾರಿಯಲ್ಲಿ ತುಸುದೂರ ನಡೆದ ಮೇಲೆ ವಿವೇಕಾನಂದರಿಗೆ ಇದು ಚರ್ಚೆ-ಸಂವಾದಗಳ ಮೂಲಕ ಬಗೆಹರಿಯಬಲ್ಲ ಸಂಗತಿಯಲ್ಲ ಎಂಬುದು ತಿಳಿಯಿತು. ಕೆಲವೊಮ್ಮೆ ಸತ್ಯದರ್ಶನವನ್ನು ಆಘಾತಗೊಳಿಸುವ ಮೂಲಕವೂ ಮಾಡಬೇಕಾಗುತ್ತದೆ. ವಿವೇಕಾನಂದರು ರಾಜನ ಆಸ್ಥಾನದಲ್ಲಿ ಗೋಡೆಯ ಮೇಲೆ ಇಳಿಬಿದ್ದಿದ್ದ ರಾಜನದ್ದೇ ಒಂದು ಚಿತ್ರಪಟವನ್ನು ಮಂತ್ರಿಗೆ ತೋರಿಸಿ ಅದರ ಮೇಲೆ ಉಗುಳಲು ಹೇಳಿದರು. ತಲ್ಲಣಗೊಂಡ ಮಂತ್ರಿ ಉಗುಳಲು ನಿರಾಕರಿಸಿದಾಗ ವಿವೇಕಾನಂದರು “ರಾಜ, ಈ ಪಟ ನೀನಲ್ಲ. ಇದಕ್ಕೆ ಉಗುಳಿದರೆ ನಿನಗೆ ಉಗುಳಿದಂತೆಯೂ ಅಲ್ಲ. ಆದರೂ ಅದಕ್ಕೂ ನಿನಗೂ ಅವಿನಾಭಾವ ಸಂಬಂಧವಿದೆ. ಪಟದಲ್ಲಿರುವ ಚಿತ್ರದ ಮೂಲಕ ಜನ ನಿನ್ನನ್ನೇ ಕಾಣುತ್ತಾರೆ. ಹಾಗೆಯೇ, ದೇವರನ್ನು ಭಕ್ತರು ಚಿತ್ರಪಟದ ಮೂಲಕವೋ ವಿಗ್ರಹದ ಮೂಲಕವೋ ತಮ್ಮ ಸಾಮಥ್ರ್ಯಕ್ಕೆ ತಕ್ಕಷ್ಟು ಗ್ರಹಿಸಲು ಪ್ರಯತ್ನಪಡುತ್ತಾರೆ.” ಎಂದು ತಿಳಿಹೇಳಿದರು. ಹಲವು ಶಾಸ್ತ್ರಗ್ರಂಥಗಳ ಮೂಲಕ ಬಗೆಹರಿಯದೆ ಉಳಿದುಬಿಡಬಹುದಾಗಿದ್ದ ಅನುಮಾನವನ್ನು ಒಂದು ಸಣ್ಣ ದೃಷ್ಟಾಂತದ ಮೂಲಕ ವಿವೇಕಾನಂದರು ಪರಿಹರಿಸಿ ಆ ರಾಜನ ವಿಶ್ವಾಸ ಗೆದ್ದರು. ಅಲ್ಲಿಂದ ಮುಂದಕ್ಕೆ ಅವರ ಕೀರ್ತಿ ಸಂಜೆಮಲ್ಲಿಗೆಯ ಪರಿಮಳದಂತೆ ನಿಧಾನವಾಗಿ ಆದರೆ ಗಾಢವಾಗಿ ಹಬ್ಬುತ್ತಾ ಹೋಯಿತು. ಖೇತ್ರಿಯ ಮಹಾರಾಜ ಇವರನ್ನು ಬಹಳ ಆದರದಿಂದ ನೋಡಿಕೊಂಡರು. ವಿಪರ್ಯಾಸವೆಂದರೆ ದೇಶದ ದೊಡ್ಡ ವ್ಯಕ್ತಿಗಳನ್ನೆಲ್ಲ ತನ್ನ ಮಾತಿನ ಶಕ್ತಿಯಿಂದ ಸೋಲಿಸಿ ಒಲಿಸಿಕೊಳ್ಳುತ್ತಿದ್ದ ವಿವೇಕಾನಂದರಿಗೆ ಸಂಬಂಧಿಕರು ಹಾಕಿದ್ದ ಕೋರ್ಟು ಕೇಸನ್ನು ಮಾತ್ರ ಜಯಿಸಲಾಗಲಿಲ್ಲ! ಸಂಸಾರ ದೊಡ್ಡದು, ಜಿಗುಟುಗಳೂ ಅನೇಕ. ಸಂಬಂಧಗಳ ಸಂಕೀರ್ಣತೆಯೋ ಯಾವ ಟಿವಿ ಧಾರಾವಾಹಿಗೂ ಸ್ಪರ್ಧೆ ಕೊಡುವಂತಿತ್ತು. ತಂದೆ ತೀರಿಕೊಂಡಮೇಲೆ ತಾಯಿಯನ್ನು ಬಹುವಾಗಿ ಹಚ್ಚಿಕೊಂಡಿದ್ದ ವಿವೇಕರು ಸ್ವಾಮಿಯಾಗಿ ಕಾವಿ ತೊಟ್ಟ ಮೇಲೂ ತನ್ನ ಮಾತೃಸಂಬಂಧವನ್ನು ಕಡಿದುಕೊಂಡವರಲ್ಲ. ಹಾಗಾಗಿ ಸ್ವಾಮಿಯಾಗಿಯೂ ಕೋರ್ಟಿನಲ್ಲಿ ತನ್ನ ತಾಯಿಯ ಪರವಾಗಿ ಹೋರಾಡುತ್ತಾ ಬಂದರು. ಇವೆಲ್ಲ ರಗಳೆಗಳನ್ನು ತನ್ನ ಆಶ್ರಯದಾತ ರಾಜರುಗಳಲ್ಲಿ ಹೇಳಿ ಸಹಾಯ ಕೇಳಲೇ ಬೇಡವೇ ಎಂಬ ದ್ವಂದ್ವದಲ್ಲೇ ಹಲವು ದಿನಗಳು ಕಳೆದುಹೋದವು. ಖೇತ್ರಿಯ ರಾಜನ ಕಡೆಯಿಂದ, ಅಗತ್ಯ ಬಿದ್ದರೆ ಸಹಾಯ ಮಾಡುವ ಭರವಸೆ ಸಿಕ್ಕಿತು.

ವಿವೇಕರು ಪರಿವ್ರಾಜಕನಾಗಿ ಗುಜರಾತ್‍ನಿಂದ ಇಳಿದು ದಕ್ಷಿಣದ ರಾಜ್ಯಗಳನ್ನು ಒಂದೊಂದಾಗಿ ಸಂದರ್ಶಿಸಿದರು. ಕರ್ನಾಟಕಕ್ಕೂ ಬಂದರು. ಕೊನೆಗೆ ದಕ್ಷಿಣದ ತುದಿ ಕನ್ಯಾಕುಮಾರಿಯನ್ನು ಮುಟ್ಟಿದರು. ತಾನು ಸಂಚರಿಸಿದಲ್ಲೆಲ್ಲ ಭಾರತದ ಬಡತನ, ಶೋಷಣೆ, ತಾರತಮ್ಯಗಳನ್ನು ಕಣ್ಣಾರೆ ಕಂಡರು. ಒಂದು ಕಾಲದ ಭವ್ಯ ಸನಾತನ ಧರ್ಮ ಇದೀಗ ಕಂಡಿದ್ದ ಅವನತಿ ಅವರನ್ನು ವಿಹ್ವಲಗೊಳಿಸಿತು. ವೇದ ಪುರಾಣಗಳಲ್ಲಿ ಬರೆದಿದ್ದ ಮಾತುಗಳನ್ನು ತಿರುಚಿ ಹೊಸಕಾಲಕ್ಕೆ ಬಲವಂತವಾಗಿ ಹೊಂದಿಸಲು ಯತ್ನಿಸುತ್ತಿದ್ದವರನ್ನೂ ಅವರ ಕೈಯಲ್ಲಿ ವಿರೂಪಗೊಂಡು ಅಸ್ಮಿತೆ ಕಳೆದುಕೊಂಡಿದ್ದ ಧರ್ಮದ ಅವಸ್ಥೆಯನ್ನೂ ಕಂಡು ಮಮ್ಮಲ ಮರುಗಿದರು. ಕನ್ಯಾಕುಮಾರಿ ಭೂಶಿರವನ್ನು ಮುಟ್ಟುವ ಹೊತ್ತಿಗೆ ಅವರು ಅದೆಷ್ಟು ಕಲ್ಲವಿಲಗೊಂಡಿದ್ದರೆಂದರೆ, ಅಲ್ಲಿಂದ ದೂರದಲ್ಲಿ ಕಾಣುತ್ತಿದ್ದ ಒಂದು ಬಂಡೆಗೆ ಈಜಿಕೊಂಡೇಹೋಗಿ, ಆ ಬಂಡೆಯ ಮೇಲೆ ಮೂರು ದಿನ ಕದಲದೆ ಕೂತು ಧ್ಯಾನೋನ್ಮುಖರಾದರು. ದೇಶದ ಹಲವು ಅಧ್ಯಾತ್ಮಸಾಧಕರು ಧ್ಯಾನಕ್ಕಾಗಿ ಸಾಕ್ಷಾತ್ಕಾರಕ್ಕಾಗಿ ಉತ್ತರದ ಹಿಮಾಲಯಕ್ಕೆ ಹೋಗುತ್ತಿದ್ದರೆ ವಿವೇಕಾನಂದರು ದಕ್ಷಿಣಾಗ್ರದಲ್ಲಿ ಕೂತದ್ದು ವಿಶಿಷ್ಟವಾಗಿ ಕಾಣುತ್ತದೆ. ಅಲ್ಲಿ ಮೂರುದಿನಗಳ ತೀವ್ರ ಆತ್ಮಶೋಧನೆಯಿಂದ ಅವರಿಗನ್ನಿಸಿದ ಸಂಗತಿಯೊಂದೇ – ಜನರ ಉದ್ಧಾರಕ್ಕಾಗಿ ಕೆಲಸ ಮಾಡಬೇಕು. ಸನಾತನ ಧರ್ಮದ ಅಗ್ಗಳಿಕೆಯನ್ನು ಹೊರದೇಶಗಳಲ್ಲೂ ಪಸರಿಸಬೇಕು. ಭವ್ಯ ಇತಿಹಾಸವುಳ್ಳ ಭಾರತದ ಅಸ್ಮಿತೆಯನ್ನು ಮತ್ತೆ ಮರಳಿದೊರಕಿಸಬೇಕಾದರೆ ಅದನ್ನು ಜಾಗತಿಕ ಮಟ್ಟದಲ್ಲಿ ಹೊಳೆಯುವಂತೆ ಮಾಡಬೇಕು. ಹೌದು, ತನ್ನೊಳಗಿನ ಕಟ್ಟುಪಾಡುಗಳಿಂದಲೇ ಉಸಿರುಗಟ್ಟಿ ಜೀವ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದ ಧರ್ಮವನ್ನು ಪುನರುತ್ಥಾನ ಮಾಡಬೇಕಾದರೆ, ಸಂನ್ಯಾಸಿಯ ಕಟ್ಟುಪಾಡುಗಳನ್ನು ಸಡಿಲಿಸಿಕೊಂಡು ತಾನು ಸಮುದ್ರೋಲ್ಲಂಘನ ಮಾಡಲೇಬೇಕು! ಕಣ್ಣೆದುರು ಮೈದಾಳಿ ನಿಂತ ವಿಶಾಲ ನೀಲಿಕಡಲು ಅವರ ಸಂಕಲ್ಪವನ್ನು ಗಟ್ಟಿ ಮಾಡಿತು. ಅಮೆರಿಕೆಗೆ ಹೋಗುವ ನಿರ್ಧಾರ ಸ್ಪಷ್ಟರೂಪ ಪಡೆಯಿತು.

ಪರದೇಶದಲ್ಲಿ ಪರಿವ್ರಾಜಕ
ಖೇತ್ರಿ ಮಹಾರಾಜ ಕೊಟ್ಟ ದೊಡ್ಡ ಇಡುಗಂಟು ಮತ್ತು ಹಲವು ಸ್ನೇಹಿತರು, ಶಿಷ್ಯರು ಸಂಗ್ರಹಿಸಿ ಕೊಟ್ಟ ಧನದಿಂದ ವಿವೇಕಾನಂದರು ಅಮೆರಿಕಾ ಯಾತ್ರೆ ಮಾಡುವಂತಾಯಿತು. 1893ರ ಮೇ ತಿಂಗಳ ಕೊನೆ ದಿನದಂದು ಭಾರತದ ನೆಲ ಬಿಟ್ಟ ಹಡಗು ಜಪಾನಿನ ಯೊಕೊಹಾಮಕ್ಕೆ ಹೋಗಿ ಅಲ್ಲಿಂದ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ವ್ಯಾಂಕೋವರ್ ನಗರವನ್ನು ತಲುಪಿತು. ಅಲ್ಲಿಂದ ರೈಲು ಹಿಡಿದು ಶಿಕಾಗೋ ನಗರಕ್ಕೆ ಬಂದ ವಿವೇಕರ ದಿರಿಸು ಹಾಗೂ ಒಟ್ಟಾರೆ ಚಹರೆ ನೋಡಿದ ಸ್ಥಳೀಯರಿಗೆ ಅವರೊಂದು ವಿಚಿತ್ರದಂತೆ ಕಂಡರು. ಭಾರತದ ಹಿಂದೂ ಸ್ವಾಮಿಗಳನ್ನು ಅದುವರೆಗೆ ಕಂಡಿರದಿದ್ದ ಕೆಲ ಬಿಳಿಯರು, ಇವರನ್ನು ಆಫ್ರಿಕದಿಂದ ಬಂದ ಅಮೆರಿಕನ್ ಇರಬಹುದೆಂದೂ ಅಂದಾಜಿಸಿದ್ದರಂತೆ. ಅಲ್ಲಿ ಉಳಿದುಕೊಳ್ಳುವುದೆಲ್ಲಿ; ಮಾಡುವುದೇನು ವಿವೇಕಾನಂದರಿಗೆ ಸ್ಪಷ್ಟವಿರಲಿಲ್ಲ. ತಾನು ಶಿಕಾಗೋದಲ್ಲಿ ನಡೆಯಲಿದ್ದ ಧರ್ಮ ಸಂಸತ್‍ನಲ್ಲಿ ಭಾಗವಹಿಸಿ ಹಿಂದೂ ಧರ್ಮದ ಹೆಗ್ಗಳಿಕೆಯನ್ನು ಜಗತ್ತಿಗೆ ಸಾರಬೇಕೆಂದು ಬಯಸಿ ಬಂದಿದ್ದರೆ ಅಲ್ಲಿ ಆ ಸಂಸತ್ತಿಗೆ ಹೆಸರು ನೋಂದಾಯಿಸಿಕೊಳ್ಳುವ ಅವಧಿ ಮುಗಿದಿದೆ ಎಂಬ ಉತ್ತರ ಬಂತು.  ಒಂದು ಸರಿಯಾದ ವೇದಿಕೆ ಸಿಕ್ಕದೆ ಧರ್ಮಪ್ರಚಾರ ಮಾಡುವುದಾದರೂ ಹೇಗೆ? ಯಾರು ಕೇಳುತ್ತಾರೆ ತನ್ನ ಮಾತನ್ನು? ಅದೂ ಅಲ್ಲದೆ ಪರದೇಶದ ನೆಲದಲ್ಲಿ ಅವರ ರೀತಿ ರಿವಾಜುಗಳು ಏನೋ ಹೇಗೋ! ಈ ಎಲ್ಲ ರಗಳೆಗಳಿಂದ ಪಾರಾಗಿ ವಾಪಸು ಭಾರತಕ್ಕೆ ಹೋಗಿಬಿಡಲೇ ಎಂಬ ಯೋಚನೆ ಮತ್ತೆಮತ್ತೆ ಬರತೊಡಗಿತು. ಆದರೆ, ನೀನು ಬಂದಿರುವ ಕೆಲಸವನ್ನು ಮುಗಿಸದೆ ಮರಳಬೇಡ; ಇಟ್ಟ ಹೆಜ್ಜೆ ಹಿಂದಿಡಬೇಡ; ಮಾಡಿರುವ ಸಂಕಲ್ಪವನ್ನು ನೀನಾಗಿ ಮುರಿಯಬೇಡ ಎಂದು ಒಳಮನಸ್ಸು ಕಿವಿ ಹಿಂಡಿ ಎಚ್ಚರಿಸತೊಡಗಿತು.

ಶಿಕಾಗೋದಲ್ಲಿ ದಿನನಿತ್ಯದ ವ್ಯವಹಾರಕ್ಕೆ ಜಾಸ್ತಿ ಖರ್ಚಾಗುತ್ತಿದೆ ಎಂಬುದನ್ನು ಅರಿತ ಸ್ವಾಮೀಜಿ ಜೀವನವೆಚ್ಚ ಕಮ್ಮಿಯಿರುವ ಬಾಸ್ಟನ್‍ಗೆ ಹೋದರು. ಅಲ್ಲಿ, ಭಾರತದ ಬಗ್ಗೆ ಅಪಾರ ಒಲವಿದ್ದ ಜೆ.ಎಚ್. ರೈಟ್ ಎಂಬ ಪ್ರೊಫೆಸರ್ ಒಬ್ಬರ ಪರಿಚಯವಾಯಿತು. ವಿವೇಕಾನಂದರ ಪೂರ್ವಾಪರಗಳನ್ನು ತಿಳಿದ ರೈಟ್ ಅದೆಷ್ಟು ಆನಂದತುಂದಿಲರಾದರೆಂದರೆ, ನೀವು ಧರ್ಮ ಸಂಸತ್ತಿನಲ್ಲಿ ಮಾತಾಡಲೇಬೇಕು; ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ನಾನು ಮಾಡಿಕೊಡುತ್ತೇನೆ ಎಂಬ ದೊಡ್ಡ ಭರವಸೆ ಕೊಟ್ಟರು. “ಅಲ್ಲಿ ಮಾತಾಡಲು ಈ ಕಾವಿಧಾರಿಗೆ ಏನು ಅರ್ಹತೆ ಇದೆ ಎಂದು ಅವರು ಕೇಳಬಹುದು. ನಿಮ್ಮಲ್ಲಿ ಹಾಗೆ ಕೇಳುವುದೂ ಒಂದೇ ಸೂರ್ಯನ ಪ್ರಕಾಶಗೊಳ್ಳುವ ಸಾಮಥ್ರ್ಯವನ್ನು ಸಂಶಯಿಸುವುದೂ ಒಂದೇ” ಎಂದುಬಿಟ್ಟರು ಪ್ರೊಫೆಸರ್ ರೈಟ್. ವಿವೇಕಾನಂದರಿಗೆ ಆ ಕ್ಷಣ ತನ್ನ ತಲೆಮೇಲಿದ್ದ ಗೋವರ್ಧನ ಬೆಟ್ಟ ಹಗುರಾಗಿ ಹತ್ತಿಯ ಉಂಡೆಯಾಗಿ ಹಾರಿಹೋದಂತೆನಿಸಿತು. ಮಣಭಾರದ ಸಂಕಷ್ಟವೊಂದು ಮಂಜಿನಂತೆ ಕರಗಿತು. ರೈಟ್, ಭಾರತದ ಈ ಸಂನ್ಯಾಸಿಯ ಘನತೆ, ಅರ್ಹತೆಗಳ ಬಗ್ಗೆ ಶಿಫಾರಸು ಮಾಡಿ ಧರ್ಮ ಸಂಸತ್ತಿನ ಆಯೋಜಕರಿಗೆ ಪತ್ರ ಬರೆದರು. “ನಮ್ಮಲ್ಲಿರುವ ಎಲ್ಲ ವಿದ್ವಾಂಸರಿಗಿಂತಲೂ ಹೆಚ್ಚು ತಿಳಿವಳಿಕೆಯುಳ್ಳ ವ್ಯಕ್ತಿ ಇಲ್ಲಿದ್ದಾರೆ ನೋಡಿ” ಎಂಬುದೇ ಪತ್ರದ ಒಕ್ಕಣೆ. ಶಿಕಾಗೋ ತಲುಪಿದ ಮೇಲೆ ಯಾರನ್ನು ಭೇಟಿಯಾಗಬೇಕು, ಎಲ್ಲಿ ಉಳಿದುಕೊಳ್ಳಬೇಕು ಎಂಬ ಮಾಹಿತಿಯನ್ನು ಒಂದು ಚೀಟಿಯಲ್ಲಿ ಬರೆದು ರೈಟ್, ವಿವೇಕಾನಂದರಿಗೆ ಕೊಟ್ಟರು.

ಬಹುಶಃ ವಿವೇಕರ ಕಷ್ಟಪರಂಪರೆ ಇನ್ನೂ ಮುಗಿದಿರಲಿಲ್ಲವೆಂದು ಕಾಣುತ್ತದೆ. ಬಾಸ್ಟನ್‍ನಿಂದ ಶಿಕಾಗೋಗೆ ರೈಲಿನಲ್ಲಿ ಬಂದಿಳಿಯುವ ಹೊತ್ತಿಗೆ ವಿವೇಕಾನಂದರ ಕೈಯಿಂದ ಆ ಚೀಟಿಯನ್ನು ಮಾಯವಾಗಿತ್ತು! ಎಲ್ಲಿ ಯಾವ ವಿಧಿ ಅವರ ಜೇಬಿಂದ ಕಸಿಯಿತೋ ಬಲ್ಲವರಾರು! ಎಲ್ಲಿ ಉಳಿಯುವುದು, ಏನು ಮಾಡುವುದು ಎಂಬುದೇ ದೊಡ್ಡ ಸಮಸ್ಯೆಯಾಯಿತು. ಮತ್ತೊಮ್ಮೆ ರೈಟ್ ಸಾಹೇಬರಿಗೆ ಪತ್ರ ಬರೆದು ಉತ್ತರ ಪಡೆಯುವುದಕ್ಕೂ ಒಂದೆರಡು ವಾರಗಳೇ ಬೇಕು. ಅಷ್ಟರವರೆಗೆ ಶಿಕಾಗೋ ನಗರದ ಆ ಶೀತಲ ಥಂಡಿಯಲ್ಲಿ ದಿನಗಳೆಯುವುದು ಹೇಗೆ? ರೈಲುನಿಲ್ದಾಣದ ಪಾವಟಿಗೆಗಳೇ ಈ ಸ್ವಾಮೀಜಿಯ ಚಾಪೆ-ದಿಂಬುಗಳಾದವು. ಅಲ್ಲೇ ರಾತ್ರಿ ಕಳೆಯುತ್ತ, ಹಗಲು ತಾನು ಹೋಗಬೇಕಿದ್ದ ವಿಳಾಸ ಹುಡುಕುತ್ತ ಅಲೆಯುವುದೇ ನಿತ್ಯ ಕಾಯಕವಾಯಿತು. ಹೀಗೆ ಒಂದು ದಿನ ಅಲ್ಲಿನ ಬೀದಿಗಳಲ್ಲಿ ಅಲೆಮಾರಿಯಂತೆ ನಡೆಯುತ್ತಿದ್ದ ಸ್ವಾಮೀಜಿಯನ್ನು ಮಿಸೆಸ್ ಜಾರ್ಜ್ ಹೇಲ್ ಎಂಬ ಹೆಂಗಸು ನೋಡಿದಳು. ಕೃಶವಾದ ದೇಹ, ಒಂದಿಷ್ಟು ಕೊಳೆಯಾಗಿದ್ದ ಬಟ್ಟೆ, ಕಣ್ಣಲ್ಲಿ ಕೂತ ನಿದ್ದೆ, ನೆರಿಗೆಗಟ್ಟಿದ ಹಣೆ, ಹಲವು ಹಗಲಿರುಳುಗಳನ್ನು ಬೀದಿ ಬದಿಯಲ್ಲಿ ಬೈರಾಗಿಯಾಗಿ ಕಳೆದಿದ್ದೇನೆಂದು ಹೇಳುವಂತಿದ್ದ ದೀನಸ್ಥಿತಿ ಮತ್ತು ಅವೆಲ್ಲವನ್ನೂ ಮೀರಿ ಮುಖದಿಂದ ಹೊರಸೂಸುತ್ತಿದ್ದ ಅದ್ಯಾವುದೋ ಅವರ್ಣನೀಯ ಪ್ರಭೆ – ಸ್ವಾಮೀಜಿಯನ್ನು ಕಂಡ ಆ ಹೆಂಗಸು ಧೈರ್ಯದಿಂದ ಹತ್ತಿರ ಬಂದಳು; ಕುಶಲ ಕೇಳಿದಳು; “ಒಬ್ಬ ಪರಿವ್ರಾಜಕನಂತೆ ಕಾಣುತ್ತೀರಿ. ಮನೆಮಠ ಇಲ್ಲದಂತೆ ಸೊರಗಿದ್ದೀರಿ. ಬನ್ನಿ ಮನೆಗೆ” ಎಂದೇಬಿಟ್ಟಳು! ವಿವೇಕಾನಂದರು ತನ್ನ ಕತೆ ಹೇಳಿಕೊಂಡು, ತನಗೆ ಧರ್ಮ ಸಂಸತ್ತಿನಲ್ಲಿ ಭಾಗವಹಿಸಬೇಕಾಗಿದೆ; ಅದಕ್ಕೆ ಬೇಕಾದ ಸಹಾಯ ಮಾಡಿ ಎಂದು ಕೇಳಿಕೊಂಡರು. ಜಾರ್ಜ್ ಹೇಲ್‍ನ ಕುಟುಂಬ ವಿವೇಕಾನಂದರನ್ನು ಮನೆಯಲ್ಲಿ ಉಳಿಸಿಕೊಂಡು, ಅವರಿಗೆ ಬೇಕಿದ್ದ ಎಲ್ಲ ನೆರವನ್ನೂ ಕೊಟ್ಟಿತು. ಅದೃಷ್ಟವಶಾತ್ ಕೆಲವೇ ದಿನಗಳಲ್ಲಿ ಅವರಿಗೆ ಧರ್ಮ ಸಂಸತ್ತಿನ ಆಯೋಜಕರ ಭೇಟಿಯೂ ಆಯಿತು. ರೈಟ್ ಅವರು ಬರೆದಿದ್ದ ಪತ್ರ ಆಯೋಜಕರಿಗೆ ತಲುಪಿದ್ದದ್ದರಿಂದ ವಿವೇಕಾನಂದರು ಮತ್ತೊಮ್ಮೆ ತನ್ನ ಪ್ರವರ ಹೇಳಿಕೊಂಡು ಅಹಂ ಭೋ ಅಭಿವಾದಯೇ ಎನ್ನಬೇಕಾದ ಪರಿಸ್ಥಿತಿ ಬರಲಿಲ್ಲ. 1893ರ ಸೆಪ್ಟೆಂಬರ್ 11ರಂದು ಪ್ರಾರಂಭವಾಗಲಿದ್ದ ಧರ್ಮ ಸಂಸತ್ತಿನಲ್ಲಿ ಭಾರತದ ಈ ವೀರಸಂನ್ಯಾಸಿ ಮಾತಾಡುವುದೆಂದು ನಿಕ್ಕಿಯಾಯಿತು.

(ಇನ್ನೂ ಇದೆ)

7 ಟಿಪ್ಪಣಿಗಳು Post a comment
 1. Shashi
  ಜನ 14 2016

  Thank you very much

  ಉತ್ತರ
 2. hemapathy
  ಜನ 14 2016

  ಲೇಖನ ಮನಮುಟ್ಟುವಂತಿದೆ. ಲೋಹಿತ್ ಚಕ್ರತೀರ್ಥರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ನಾನು ಕಣ್ಣಿಗೆ ಕಾಣದ, ಕೈಗೆ ಸಿಕ್ಕದ, ಮಾನವ ಸೃಷ್ಟಿಯಾದ ಅಂತೆ ಕಂತೆ ದೇವರನ್ನು ನಂಬುವುದಿಲ್ಲ. ಕಣ್ಣಿಗೆ ಕಾಣಿಸುವ ಪ್ರಕೃತಿ ಮಾತೆಯನ್ನು ನಾನು ದೇವರೆನ್ನುತ್ತೇನೆ. ಆ ಪ್ರಕೃತಿ ಮಾತೆ ದಯಪಾಲಿಸಿರುವ ಅಭೂತಪೂರ್ವ ಮೆದುಳೇ ನನಗೆ ದೇವರು, ನನ್ನ ಜೀವನಕ್ಕೆ ಆಧಾರವಾಗಿರುವ ತಿಂಗಳ ನಿವೃತ್ತಿ ವೇತನವೇ ದೇವತೆ.

  ಉತ್ತರ
 3. Gurudatta
  ಜನ 14 2016

  Thank you. Excellent.

  ಉತ್ತರ
 4. ಜನ 14 2016

  thanku rohith sir

  ಉತ್ತರ
 5. vasu
  ಜನ 15 2016

  ಲೇಖನ ಚೆನ್ನಾಗಿದೆ. ಆದರೆ, ವಿವೇಕಾನಂದ ಭಕ್ತರು ಮೂರ್ತಿ ಪೂಜೆಯನ್ನು ಸಮರ್ಥಿಸಲು ಪೋಟೋ ವನ್ನು ಉಗಿಯಲು ಹೇಳುವ ದೃಷ್ಟಾಂತವನ್ನು ಸಾರಿ ಸಾರಿ ಹೇಳಿ ಇದೊಂದು ತರ್ಕಶುದ್ಧ ವಿಚಾರ ಎಂದು ಬಿಂಬಿಸಿ ಮೂರ್ತಿಪೂಜೆ ಸಮರ್ಥನೀಯ ಎಂಬ ವಾದವನ್ನು ಇಡುತ್ತಾರೆ. ಇಲ್ಲಿ ಒಂದು ವೈತ್ಯಾಸವಿದೆ. ವೇದಗಳಲ್ಲಿ ಪರಮಾತ್ಮನಿಗೆ ಪ್ರತಿಮೆ ಇಲ್ಲ ಎಂದು ಹೇಳಿದೆ ‘ ನ ತಸ್ಯ ಪ್ರತಿಮಾ ಅಸ್ತಿ.” ಎಂದರೆ ಆ ದೇವರಿಗೆ ಪ್ರತಿಮೆ ವಿಗ್ರಹ ಇತ್ಯಾದಿಗಳಿಲ್ಲ. ವಿವೇಕಾನಂದರು ಹೇಳಿದ ಪೋಟೋದಲ್ಲಿರುವ ವ್ಯಕ್ತಿ ಮನುಷ್ಯನಾಗಿ ಜನ್ಮ ತಾಳಿದ್ದು ಅವನ ಪೋಟೋ ಸಾಧ್ಯವಿದೆ. ಆದರೆ ಆಜನ್ಮನೂ, ಅಮರನೂ ಸರ್ವಾಂತರ್ಯಾಮಿಯೂ ಆದ ಪರಮಾತ್ಮನಿಗೆ ಪೋಟೋ ಇರಲು ಸಾಧ್ಯವೇ? ಇಲ್ಲ. ವಿವೇಕಾನಂದರು ಕೆಲವೊಮ್ಮೆ ವಿಗ್ರಹಾರಾಧನೆ ಪರ ಮಾತಾಡಿದ್ದಾರೆ. ಕೆಲವೊಮ್ಮೆ ಅದನ್ನು ವಿರೋಧಿಸಿದ್ದಾರೆ. ವಿಗ್ರಹಾರಾಧನೆಯು ಮಂದ ಮತಿಗಳಿಗೆ ಎಂದು ಹೇಳುವ ಮಧ್ವಾಚಾರ್ಯರಂತೆ ಇವರೂ ಸಹ ವಿಗ್ರಹಾರಾಧನೆ ಪ್ರಬುದ್ಧರಗಿಲ್ಲ ಎಂದೂ ಸಹ ಹೇಳಿದ್ದಾರೆ. ವಿವೇಕಾನಂದರು ಕೆಲವೊಮ್ಮೆ ವಿರೋಧಾಬಾಸದ ಮಾತುಗಳನ್ನೂ ಆಡಿದ್ದಾರೆ. ಅಂತೆಯೇ, ಅವರು ಸ್ವದೇಶಿ, ಭಾರತದ ಸ್ವಾತಂತ್ರ್ಯ, ಮಹಿಳೆಯರಿಗೆ ಸಮಾನತೆ, ಗೋಸಂರಕ್ಷಣೆ, ಇತ್ಯಾದಿ ವಿಷಯಗಳಲ್ಲಿ ಇಂದು ಹಿಂದೂ ವಾದಿಗಳು ತಳೆದಿರುವ ಧೋರಣೆಗಿಂತ ವಿಭಿನ್ನ ಧೋರಣೆ ತಳೆದಿದ್ದಾರೆ. ವಿವೇಕಾನಂದರು ನಮ್ಮ ಧರ್ಮ ಜಾಗೃತಿಯಲ್ಲಿ ಬಹಳಷ್ಟು ಪ್ರದಾನ ಪಾತ್ರ ವಹಿಸಿದ್ದಾರೆ ನಿಜ. ಆದರೆ, ಬಾರತದ ಸರ್ವಾಂಗೀಣ ಉನ್ನತಿಯಲ್ಲಿ ಅವರ ಪಾತ್ರ ಅಂತಹ ದೊಡ್ಡದೇನೂ ಅಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

  ಉತ್ತರ

Trackbacks & Pingbacks

 1. ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೨ | ನಿಲುಮೆ
 2. ವಿಶ್ವಗುರು ವಿವೇಕಾನಂದ ಹೀಗಿದ್ದರು – ಭಾಗ ೨ – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments