ಸೆಕ್ಯುಲರಿಸಂ ವರ್ಸಸ್ ಮೂಲಭೂತವಾದ…?
– ಡಾ. ಪ್ರವೀಣ್ ಟಿ. ಎಲ್, ಶಿವಮೊಗ್ಗ
ಪ್ರಜಾವಾಣಿಯ ಚರ್ಚೆಯೊಂದಕ್ಕೆ ಬರೆದ ಪ್ರತಿಕ್ರಿಯೆ. ಪ್ರತಿದಿನ ‘ಮೂಲಭೂತವಾದ, ಕೋಮುವಾದ/ಕೋಮುವಾದಿ ರಾಜಕಾರಣ ಅಪಾಯಕಾರಿ’ ಎಂದು ಊಳಿಡುವ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಗೆ ಈ ಪ್ರತಿಕ್ರಿಯೆಯು ಅಪಥ್ಯವಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಏಕೆಂದರೆ ಪ್ರಕಟಿಸಿದರೆ ಕೆಲವರ ‘ವಿಶ್ವಾಸಾರ್ಹ’ತೆಯನ್ನು ಕಳೆದುಕೊಳ್ಳುವ ಭಯ. ಅದೇನೆ ಇರಲಿ ಸದ್ಯಕ್ಕೆ ಪತ್ರಿಕೆಯ ‘ವಿಶ್ವಾಸಾರ್ಹ’ತೆಯನ್ನು ಪ್ರಶ್ನಿಸುವುದು ಈ ಲೇಖನದ ಕಾಳಜಿ ಅಲ್ಲ.
ಹಿನ್ನೆಲೆ:
ಪ್ರೊ. ಮುಜಾಫ್ಫರ್ ಅಸ್ಸಾಧಿಯವರ “ರಾಜಕಾರಣದ ಲೆಕ್ಕಾಚಾರ ಮತ್ತು ಕಥನ” ಎಂಬ ಲೇಖನವನ್ನು ಪ್ರಜಾವಾಣಿಯಲ್ಲಿ 19-09-2015ರಂದು ಪ್ರಕಟಿಸಲಾಗಿತ್ತು. ಲೇಖನವು ವಸಾಹತುಶಾಹಿ ಪಳೆಯುಳಿಕೆಯಾದ ಜನಗಣತಿ ಮಾದರಿಯನ್ನು ನಿರ್ವಸಾಹತೀಕರಣಗೊಳಿಸುವ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಈ ಜನಗಣತಿ ಮಾದರಿಯು ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ವರ್ಗೀಕರಣಕ್ಕೆ ನಾಂದಿಹಾಡುತ್ತದೆ. ಇದರ ಲಾಭವನ್ನು ಕೋಮುವಾದಿ ರಾಜಕಾರಣವು ತನ್ನದನ್ನಾಗಿಸಿಕೊಳ್ಳುತ್ತದೆ. ಹಾಗಾಗಿ ವಸಾಹತುಶಾಹಿ ನಿರ್ಮಿಸಿದ ಈ ಜನಗಣತಿ ಮಾದರಿಗಳನ್ನು ನಿರ್ವಸಾಹತೀಕರಣಕ್ಕೊಳಪಡಿಸಬೇಕು ಎಂಬುದನ್ನು ವಿವರಿಸಿದ್ದರು. ಡಾ. ಅಜಕ್ಕಳ ಗಿರೀಶ್ ಅಲ್ಪಸಂಖ್ಯಾತ- ಬಹುಸಂಖ್ಯಾತ ಎಂಬ ವರ್ಗೀಕರಣಗಳೂ ವಸಾಹತುಶಾಹಿಯ ಪಳೆಯುಳಿಕೆಗಳೇ ಅಲ್ಲವೇ? ಎಂಬ ಪ್ರಶ್ನೆಯನ್ನು ಎತ್ತಿದ್ದರು. ಆದರೆ ಇಬ್ಬರ ಕಾಳಜಿಯೂ ಭಾರತದಲ್ಲಿನ ಧರ್ಮಾಧಾರಿತ ಪ್ರಕ್ಷುಬ್ಧತೆಗಳನ್ನು, ಸಂಘರ್ಷಗಳನ್ನು ತೊಲಗಿಸಿ, ಅವುಗಳ ನಡುವೆ ಸೌಹಾರ್ಧತೆಯನ್ನು ತರುವುದರ ಕುರಿತೇ ಆಗಿತ್ತು. ಈ ಕಾಳಜಿಯು ಅತ್ಯಂತ ಅಭಿನಂದನಾರ್ಹ ಕೂಡ. ಹಾಗೂ ಇಂದಿನ ತುರ್ತೂ ಕೂಡ. ಏಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ನೋಡಿದರೆ, ‘ಧಾರ್ಮಿಕ’ ಗುಂಪುಗಳ ನಡುವಿನ ವೈರತ್ವಕ್ಕೆ ಕಾರಣವೇನು? ಯಾಕೆ ದಿನೇ ದಿನೇ ಹೆಚ್ಚಾಗುತ್ತಿದೆ? ಎಂಬುದನ್ನು ತಿಳಿಯುವ ಅನಿವಾರ್ಯತೆ ಹಾಗೂ ಅದಕ್ಕೆ ಪರಿಹಾರವನ್ನು ಸೂಚಿಸುವ ಒತ್ತಡ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಅಸ್ಸಾಧಿಯವರು ಹೇಳುವಂತೆ ನಿರ್ವಸಾಹತೀಕರಣದ ಅಗತ್ಯತೆ ಇಂದಿನ ಜರೂರು. ಅದರೆ ಅದು ಅವರು ಸೂಚಿಸುವಂತೆ ಜನಗಣತಿಯ ಮಾದರಿಯಲ್ಲಿ ಮಾತ್ರವಲ್ಲ ಬದಲಾಗಿ ಸೆಕ್ಯುಲರ್ ತತ್ವದಲ್ಲಿಯೇ ಆಗಬೇಕಿದೆ.
ಮತ್ತಷ್ಟು ಓದು 
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ…
– ಡಾ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದಗುಚ್ಛವು ಪದೇ ಪದೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಕಲಬುರ್ಗಿಯವರಂತಹ ಹಿರಿಯ ವಿದ್ವಾಂಸರ ಹತ್ಯೆಯ ನಂತರ ಸಂಶೋಧಕರು ಹಾಗೂ ವಿಚಾರವಂತರು ದಿಙ್ಮೂಢರಾಗಿದ್ದಾರೆ. ಇದೊಂದು ಖಂಡನೀಯ ಕೃತ್ಯವಾಗಿದೆ.
ಸಂಶೋಧನೆಗಳನ್ನು ನಡೆಸುವುದೇ ಹೊಸ ವಿಷಯಗಳನ್ನು ತಿಳಿದುಕೊಳ್ಳಲಿಕ್ಕೆ. ಸ್ವೀಕೃತ ವಿಚಾರಗಳನ್ನು ಅಲ್ಲಗಳೆಯುವುದೂ ಸಂಶೋಧನೆಯ ಒಂದು ಭಾಗ. ಆದರೆ ಈ ಕೆಲಸಕ್ಕೆ ಪ್ರಾಣ ತೆರಬೇಕೆ? ಇದು ತುಂಬಾ ಅನಾರೋಗ್ಯಕರ ಹಾಗೂ ಅಪಾಯಕರ ಬೆಳವಣಿಗೆ. ಈ ಸಂದರ್ಭದಲ್ಲಿ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದಾಗಿ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪದೇ ಪದೇ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ ಚರ್ಚೆಗೆ ಬರುತ್ತಿದೆ. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಿರ್ದಿಷ್ಟವಾಗಿ ಏನು? ಇಂಥ ಭೀಕರ ಸ್ವರೂಪದ ಘಟನೆಗಳನ್ನು ಅದರ ಪರಿಧಿಗೆ ತರಬಹುದೆ ಎಂಬ ಕುರಿತು ಪರಿಶೀಲಿಸುವ ಜರೂರು ಇದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಿರ್ದಿಷ್ಟವಾಗಿ ಏನು ಎಂಬುದರ ಕುರಿತು ನಾವು ಊಹೆಗಳನ್ನು ಮಾಡುವ ಅಗತ್ಯವಿಲ್ಲ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಏನೆಂಬುದನ್ನು ತಿಳಿಸುತ್ತದೆ. ಅದರ ಪ್ರಕಾರ, ಪ್ರಜಾಪ್ರಭುತ್ವವು ಜನಾಭಿಪ್ರಾಯದ ಮೇಲೆ ನಿಂತಿರುವುದರಿಂದ ಪ್ರಭುತ್ವದ ನಿರ್ಬಂಧವಿಲ್ಲದೇ ವ್ಯಕ್ತಿಯೊಬ್ಬನು ಅಭಿಪ್ರಾಯಗಳನ್ನು ತಳೆಯಲು, ಮಾಹಿತಿಗಳನ್ನು ಹಾಗೂ ತನ್ನ ವಿಚಾರಗಳನ್ನು ಸಂವಹನೆ ಮಾಡಲು ಅವನಿಗೆ ಹಕ್ಕನ್ನು ನೀಡಲಾಗಿದೆ. ಅಂದರೆ ಅದು ಕಾನೂನಿನ ನಿರ್ಬಂಧಕ್ಕೆ ಬರುವುದಿಲ್ಲ. ಈ ಅಭಿವ್ಯಕ್ತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಅಭಿಪ್ರಾಯ ವ್ಯಕ್ತಪಡಿಸುವುದು ಮಾತ್ರ ಈ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಪತ್ರಿಕಾ ಸ್ವಾತಂತ್ರ್ಯವು ಈ ಕಾರಣದಿಂದ ಮಹತ್ವ ಪಡೆದುಕೊಳ್ಳುತ್ತದೆ.
ಈ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಭುತ್ವ ಮತ್ತು ನಾಗರಿಕನ ನಡುವೆ ಇರುವ ಸಂಬಂಧ, ಅಂದರೆ ಪ್ರಜಾಪ್ರಭುತ್ವವು ಪ್ರಜೆಯೊಬ್ಬನಿಗೆ ನೀಡುವ ಭರವಸೆಯಾಗಿದೆ. ಆದರೆ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳನ್ನು ಪ್ರಭುತ್ವವು ಹಾಕಬಹುದು: ರಾಷ್ಟ್ರೀಯ ಏಕತೆ ಹಾಗೂ ಸುರಕ್ಷತೆಯ ರಕ್ಷಣೆಗಾಗಿ, ಅವ್ಯವಸ್ಥೆ ಹಾಗೂ ಅಪರಾಧವನ್ನು ತಡೆಗಟ್ಟಲಿಕ್ಕಾಗಿ, ಆರೋಗ್ಯ ಹಾಗೂ ಸದಾಚಾರಗಳನ್ನು ರಕ್ಷಿಸಲು, ಇತರರ ಹಕ್ಕನ್ನು ರಕ್ಷಿಸಲು, ಇತ್ಯಾದಿ ಕಾರಣಗಳಿಗೆ ಅದನ್ನು ಪ್ರಭುತ್ವವು ಹತ್ತಿಕ್ಕಬಹುದು. ಒಬ್ಬ ನಾಗರಿಕನ ಅಭಿವ್ಯಕ್ತಿಯು ಈ ಮೇಲಿನ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎಂಬುದಾಗಿ ನಿದರ್ಶಿಸಿದರೆ ಪ್ರಭುತ್ವವು ತಾನು ನೀಡಿದ ಈ ಸ್ವಾತಂತ್ರ್ಯವನ್ನು ಮಿತಗೊಳಿಸಬಹುದು.
ಅಂದರೆ ಸಮುದಾಯಗಳ ಭಾವನೆಯನ್ನು ನೋಯಿಸಿದ ಬರಹಗಳನ್ನು ನಿಷೇಧಿಸುವುದು, ಭಾಷಣ ಮಾಡದಂತೆ ನಿರ್ಬಂಧಿಸುವುದು ಇತ್ಯಾದಿ. ಆದರೆ ಆ ಹಕ್ಕನ್ನು ಪ್ರಭುತ್ವವೇ ಮೊಟಕು ಮಾಡಬೇಕೇ ವಿನಾ ಇತರ ಪ್ರಜೆಗಳಲ್ಲ. ನೀಡುವುದು ಪ್ರಭುತ್ವವಾಗಿರುವುದರಿಂದ ಈ ಸ್ವಾತಂತ್ರ್ಯವನ್ನು ಕಿತ್ತುಕೊಂಡರೆ ಅದು ಪ್ರಭುತ್ವದಿಂದಲೇ ಆಗಬೇಕು. ಒಬ್ಬ ನಾಗರಿಕನು ಮತ್ತೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ನಾವು ನಡೆಸುವ ಚರ್ಚೆಗಳಲ್ಲಿ ಬಹುತೇಕ ಘಟನೆಗಳು ಅದರ ವ್ಯಾಪ್ತಿಯೊಳಗೇ ಬರುವುದಿಲ್ಲ.
ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಣ್ಣಿಸಲಾಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸುಳ್ಳೆ ಎಂಬ ಪ್ರಶ್ನೆ ಏಳಬಹುದು. ಇಂಥ ಘಟನೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಸಮಸ್ಯೆ ಎಂದು ತಪ್ಪುತಪ್ಪಾಗಿ ಗುರುತಿಸುವುದರಿಂದ ಅವುಗಳ ಪರಿಹಾರವೂ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಈ ಹಕ್ಕನ್ನು ಅನುಷ್ಠಾನಕ್ಕೆ ತಂದಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚೆಚ್ಚು ಪ್ರಾಶಸ್ತ್ಯ ಸಿಗುವ ಬದಲು ಅಭಿವ್ಯಕ್ತಿ ಹೆಚ್ಚೆಚ್ಚು ಕಷ್ಟವಾಗುತ್ತಿರುವಂತಿದೆ. ಅಡ್ಡಾದಿಡ್ಡಿಯಾಗಿ ಮಾತನಾಡುವವರೂ, ಅದಕ್ಕೆ ಕೆರಳುವವರೂ, ಜೀವ ಬೆದರಿಕೆ ಹಾಕುವವರೂ, ಪೊಲೀಸ್ ರಕ್ಷಣೆಯನ್ನು ಪಡೆಯುವವರೂ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ. ಈ ಚಂದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕಲಮನ್ನು ನಮ್ಮ ಸಂವಿಧಾನಕ್ಕೆ ಸೇರಿಸಿಕೊಳ್ಳಲಾಗಿದೆಯೆ? ಎರಡು ಸಾಧ್ಯತೆಗಳಿವೆ: ಒಂದೋ ಅಭಿವ್ಯಕ್ತಿ ಸ್ವಾತಂತ್ರ್ಯವೇ ಶಾಂತಿ ಸುರಕ್ಷತೆಗೆ ಕುತ್ತು ತರುತ್ತಿದೆ, ಇಲ್ಲವೇ ಇವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ಘಟನೆಗಳೇ ಅಲ್ಲ. ನನ್ನ ಪ್ರಕಾರ ಎರಡನೆಯ ಸಾಧ್ಯತೆಯೇ ಸಂಭವನೀಯ. ಹಾಗಾಗಿ ಅವನ್ನು ಬೇರೆ ಬೇರೆ ಸ್ವರೂಪದ ಸಮಸ್ಯೆಗಳನ್ನಾಗಿ ಗುರುತಿಸುವುದು ಅವುಗಳ ಪರಿಹಾರಕ್ಕೆ ನಿರ್ಣಾಯಕ. ಹಾಗೆ ಗುರುತಿಸದಿರುವುದರಿಂದಲೇ ಅವು ಬಿಗಡಾಯಿಸುತ್ತಿವೆ. ಹತ್ಯೆ ಮಾಡುವ ಪೃವೃತ್ತಿ ಹೆಚ್ಚಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯ ಎಂಬ ನಿಟ್ಟಿನಲ್ಲಿ ಚರ್ಚೆ ನಡೆದರೆ ಅದಕ್ಕೆ ಪರಿಹಾರಗಳು ಗೋಚರಿಸಬಹುದು. ಇಂಥ ಅನೇಕ ಹತ್ಯೆಗಳು ಈಗಾಗಲೇ ನಡೆದರೂ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಲಿಕ್ಕೆ ಏಕೆ ಆಗಿಲ್ಲ?
ಯಾರೋ ಒಬ್ಬರು ಯಾವುದೋ ಜಾತಿಯ, ಮತದ, ಆಚರಣೆಯ ಕುರಿತು ಮಾಡಿದ ಪ್ರಚೋದನಕಾರಿ ಹೇಳಿಕೆಗಳಾಗಿರಬಹುದು ಅಥವಾ ಅಂಥ ಹೇಳಿಕೆಗಳಿಗೆ ಪ್ರತಿಯಾಗಿ ಬರುವ ಹಿಂಸಾತ್ಮಕ ಪ್ರತಿಕ್ರಿಯೆಗಳಿರಬಹುದು, ಅವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಣ್ಣ ನೀಡಿದರೆ ದಾರಿ ತಪ್ಪುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯಲ್ಲಿ ಬರುವ ಹೇಳಿಕೆಗಳು ಸರ್ವ ಜನಾಭಿಪ್ರಾಯ ಅಥವಾ ಹಿತಾಸಕ್ತಿಗೆ ಸಂಬಂಧಿಸಿರಬೇಕು. ಖಾಸಗಿ ಹೇಳಿಕೆಗಳು, ಕೆಲವು ಗುಂಪು, ಜಾತಿಗಳ ಸ್ವಾರ್ಥ, ಪೂರ್ವಗ್ರಹಪೀಡಿತ ಹೇಳಿಕೆಗಳು, ಅಜ್ಞಾನದಿಂದ ಮಾಡುವ ಹೇಳಿಕೆಗಳು ಇತ್ಯಾದಿಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬಿಂಬಿಸಿದರೆ ಜನಾಭಿಪ್ರಾಯದ ಹೆಸರಿನಲ್ಲಿ ಸರ್ಕಾರದ ದಾರಿ ತಪ್ಪಿಸುವ ಕೆಲಸ ಆಗುತ್ತದೆ ಅಷ್ಟೆ. ಆದರೆ ಇಂದು ನಾವು ನೋಡುವುದೇನು? ಇಂಥವನ್ನೆಲ್ಲ ಯಾವಾಗಲೂ ವಿಚಾರವಾದಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾತ್ರವೇ ಧಕ್ಕೆ ತರುವ ಘಟನೆಗಳಾಗಿ ಬಿಂಬಿಸಲಾಗುತ್ತದೆ. ಅದೂ ಅವರೇ ತಿಳಿಸುವಂತೆ ಧಕ್ಕೆ ತರುವವರೆಲ್ಲ ಮತಾಂಧರು ಹಾಗೂ ಸಂಪ್ರದಾಯವಾದಿಗಳು. ಹಾಗಾದರೆ ಸಂಪ್ರದಾಯಸ್ಥರು ಹಾಗೂ ಮತಶ್ರದ್ಧೆಯುಳ್ಳವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ವಯವಾಗುವುದಿಲ್ಲವೆ? ಉದಾಹರಣೆಗೆ, ದೇವಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ತಪ್ಪಿಲ್ಲ ಎನ್ನುವುದು ವಿಚಾರವಾದಿಯೊಬ್ಬನ ಸ್ವಾತಂತ್ರ್ಯವಾದರೆ, ಅದನ್ನು ಅಷ್ಟೇ ಕೆಟ್ಟದಾಗಿ ವಿರೋಧಿಸುವುದು ಸಂಪ್ರದಾಯವಾದಿಯ ಸ್ವಾತಂತ್ರ್ಯವೇಕಲ್ಲ?
ಇದನ್ನು ಗಮನಿಸಿದಾಗ ಕೆಲವು ವಿಚಾರವಾದಿಗಳು ತಮ್ಮ ಐಡಿಯಾಲಜಿಯನ್ನು ಮುಂದೊತ್ತಲು ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಮಂತ್ರವನ್ನು ಬಳಸುತ್ತಿದ್ದಾರೆ ಎಂದೆನಿಸುತ್ತದೆ. ಇದು ಎಲ್ಲಿಗೆ ಬಂದು ನಿಂತಿದೆಯೆಂದರೆ ಅವರು ಆಡುವ ಮಾತುಗಳು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಾಂತಗಳು ಎಂಬಂತೆ ಚರ್ಚೆಯಾಗುತ್ತದೆ. ಅವರ ಮಾತುಗಳು ಅವರು ನಂಬಿದ ರಾಜಕೀಯ ಐಡಿಯಾಲಜಿಗಳ ಪ್ರತಿಪಾದನೆಗಳು ಅಷ್ಟೆ. ಇಂಥ ಪ್ರತಿಪಾದನೆಗಳಿಗೆ ವಿರೋಧಿ ಐಡಿಯಾಲಜಿಗಳಿಂದ ಅದೇ ನೆಲೆಯಲ್ಲಿ ಪ್ರತಿಕ್ರಿಯೆ ಬರುವುದು ಸ್ವಾಭಾವಿಕ. ಅಂಥ ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದಾಗಿ ಬಿಂಬಿಸಿ ಅವುಗಳನ್ನು ಅಕ್ರಮಗೊಳಿಸಲಾಗುತ್ತದೆ. ನಿಜವಾಗಿಯೂ ನೋಡಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಇಂಥ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ಇಂಥ ಪ್ರಚೋದನಕಾರಿ ಮಾತುಗಳಿಂದ ಯಾವ ಜನಾಭಿಪ್ರಾಯ ಅಥವಾ ಸಮುದಾಯಗಳ ಹಿತಾಸಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ? ಆ ಸಮುದಾಯಗಳ ಲೋಕದಲ್ಲಂತೂ ಇವರ್‍್ಯಾರೂ ಪ್ರಸ್ತುತತೆ ಪಡೆದಂತೆ ಕಾಣುವುದಿಲ್ಲ. ಇದರ ಒಂದೇ ಪರಿಣಾಮವೆಂದರೆ ಸಾಮಾಜಿಕ ಸಂಘರ್ಷ ಹಾಗೂ ಅಶಾಂತಿ. ಹಾಗಾಗಿ ಇಂಥ ಉದಾಹರಣೆಗಳಲ್ಲಿ ಮುಖ್ಯವಾಗುವುದು ನಮ್ಮ ಸಂಸ್ಕೃತಿ, ಸಮಾಜದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುವವರು ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ, ಶಿಸ್ತುಬದ್ಧವಾಗಿ ತಮ್ಮ ತಿಳಿವಳಿಕೆಯನ್ನು ಹೊಂದಿದ್ದಾರೆ ಎಂಬ ಪ್ರಶ್ನೆ.
ಅಂದರೆ ಕಲಬುರ್ಗಿಯವರ ನಿರ್ದಿಷ್ಟ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಚರ್ಚೆ ನಡೆಸುವ ಬದಲು ಸಂಶೋಧನೆಯೊಂದನ್ನು ಮಂಡಿಸುವ ಹಾಗೂ ಖಂಡಿಸುವ ಕ್ರಮವೇನು ಎಂಬುದರ ಕುರಿತು ಚರ್ಚೆ ನಡೆಸಿದರೆ ಉಪಯುಕ್ತವಾಗಬಹುದು. ಬಹುಶಃ ಇಂಥ ತಿಳಿವಳಿಕೆಯನ್ನು ಹೆಚ್ಚೆಚ್ಚು ಬೆಳೆಸಿದಷ್ಟೂ ಸಂಶೋಧನೆಗೆ ಸಂಬಂಧಿಸಿದ ಸಂಘರ್ಷಗಳು ಕಡಿಮೆಯಾಗಬಹುದು. ನಮಗೆ ಯಾರ ಹೇಳಿಕೆಯ ಕುರಿತಾದರೂ ಅಸಮ್ಮತಿ ಇದ್ದರೆ, ಅದು ತಪ್ಪು ಎಂದೆನಿಸಿದರೆ ಅದರ ಮಿತಿಯನ್ನು ನಿದರ್ಶಿಸಿ ತೋರಿಸಿ ಮನದಟ್ಟಾಗುವಂತೆ ನಮ್ಮ ವಾದವನ್ನು ಮಂಡಿಸುವುದು ಸಂಶೋಧನಾ ಮಾರ್ಗ ಅಥವಾ ಅದು ಸಮಾಜಕ್ಕೆ ಅಪಾಯಕಾರಿ, ಕೆಲವರ ಹಿತಕ್ಕೆ ಧಕ್ಕೆ ತರುತ್ತದೆ ಎಂದೆನಿಸಿದರೆ, ಅದನ್ನೂ ಸಂಶೋಧನೆಯ ಮೂಲಕವೇ ನಿದರ್ಶಿಸಿ ತೋರಿಸಬೇಕಾಗುತ್ತದೆ.
ಅಂದರೆ ಸಂಶೋಧನೆಯಲ್ಲಿ ತಪ್ಪುಗಳು ಬೌದ್ಧಿಕವಾಗಿ ಪರಿಹರಿಸಬಲ್ಲ, ಪರಿಹರಿಸಬೇಕಾದ ಸಮಸ್ಯೆಗಳಾಗಿವೆಯೇ ವಿನಾ, ಸಂಶೋಧನಾ ಕೇಂದ್ರಗಳನ್ನು ಮುಚ್ಚಿಸುವ, ಸಂಶೋಧಕರ ಬರವಣಿಗೆಯನ್ನೇ ನಿಲ್ಲಿಸುವ ಸಮಸ್ಯೆಗಳಲ್ಲ. ಅಂಥ ಸಂಶೋಧನೆಗಳಿಗೆ ಅನೈತಿಕ, ಅಮಾನವೀಯ ಎಂದು ಹಣೆಪಟ್ಟಿ ಅಂಟಿಸಿಬಿಟ್ಟರೆ, ಸಂಶೋಧಕರ ಉದ್ದೇಶಗಳನ್ನೇ ಶಂಕಿಸಿಬಿಟ್ಟರೆ, ಅವರು ಎತ್ತಿದ ಪ್ರಶ್ನೆಗಳನ್ನು ಉತ್ತರಿಸಿದ ಹಾಗಾಗುವುದಿಲ್ಲ ಹಾಗೂ ಅದನ್ನು ಅಭಿವ್ಯಕ್ತಿ ಸಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದೂ ಮತ್ತೊಂದು ಮೋಸ.
ಅಂದರೆ ಇಂಥ ಮಾರ್ಗವನ್ನು ಯಾರಾದರೂ ತುಳಿದ ಕ್ಷಣದಲ್ಲೇ ಸಂಶೋಧನಾ ಕ್ಷೇತ್ರಕ್ಕೆ ಹೊರತಾದ ವಿಧಾನದಿಂದ ಅದನ್ನು ಎದುರಿಸಲು ತೊಡಗಿರುತ್ತಾರೆ. ಅಲ್ಲಿಂದಲೇ ಸಂಶೋಧಕರನ್ನು ಹಿಂಸಿಸುವ ಕೆಲಸ ಪ್ರಾರಂಭವಾಗುತ್ತದೆ. ಬಹುಶಃ ಕೊಲೆಗಡುಕರು ಕೂಡ ಇದೇ ಕೆಲಸಕ್ಕೆ ಮತ್ತೊಂದು ಅತಿಗೆ ಹೋಗುತ್ತಾರೆ.
ಕೃಪೆ : ಪ್ರಜಾವಾಣಿ
ಅಂಬೇಡ್ಕರ್ ಮತ್ತು ಮಾರ್ಕ್ ವಾದ
– ಡಾ. ಜಿ. ಭಾಸ್ಕರ ಮಯ್ಯ
ಬಹಳ ಕಾಲದಿಂದಲೂ ಬುದ್ಧಿಜೀವಿಗಳ ವಲಯದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್ ವಾದದ ಬಗೆಗೆ ಚರ್ಚೆಯಿದೆ. ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಬುದ್ಧಿಜೀವಿಗಳು ಅಂಬೇಡ್ಕರರ ಕೊಡುಗೆ ಮತ್ತು ಭಾರತದ ಇತಿಹಾಸದಲ್ಲಿ ಅವರ ಸ್ಥಾನಮಾನಗಳ ಕುರಿತು ಸ್ಪಷ್ಟವಾಗಿ ಚರ್ಚಿಸಿದ್ದಾರೆ. ಈ ಕುರಿತು ಬಿ.ಟಿ. ರಣದಿವೆಯವರ “ಜಾತಿ ಮತ್ತು ವರ್ಗ” ಕೃತಿಯನ್ನು ನೋಡಬಹುದು. ಆದರೆ, ಬಹಳಷ್ಟು ಇತರೇ ಬುದ್ಧಿಜೀವಿಗಳಿಗೆ ಅಂಬೇಡ್ಕರ್ ಅವರು ಮಾರ್ಕ್ಸ್ ವಾದಕ್ಕೆ ಅತಿನಿಕಟ ಎಂತಲೊ ಅಥವಾ ಅಂಬೇಡ್ಕರ್‍ರದ್ದೇ ನಿಜವಾದ ಮಾರ್ಕ್ಸ್ ವಾದ ಎಂತಲೊ ಭ್ರಮೆಯಿದೆ.
ಇತ್ತೀಚೆಗೆ ವಿಜಯಕರ್ನಾಟಕದಲ್ಲಿ ಬರಗೂರು ರಾಮಚಂದ್ರಪ್ಪನವರ “ಕೆರಳಿದ ಕರುಳ ಧ್ವನಿ ಅಂಬೇಡ್ಕರ್” ಎಂಬ ಲೇಖನ ಪ್ರಕಟವಾಗಿದೆ. ಇಲ್ಲಿಯೂ ಅಂತಹ ಒಂದು ವಿಲಕ್ಷಣ ಭ್ರಮಾಪ್ರಯತ್ನವನ್ನು ನೋಡಬಹುದು. ಈ ಕುರಿತು ಒಂದು ಚರ್ಚೆ ಪ್ರಸ್ತುತ ಲೇಖನದ ಉದ್ದೇಶ. ಮೊದಲಿಗೆ ಬರಗೂರರು ಅಂಬೇಡ್ಕರರ ಮೂರು ಹೇಳಿಕೆಗಳನ್ನು (ಅವುಗಳಲ್ಲಿ 2, 3 ಮಾರ್ಕ್ಸ್ ವಾದವನ್ನು ಎತ್ತಿ ಹಿಡಿಯುತ್ತವೆ) ಉಲ್ಲೇಖಿಸಿ ಅದರ ಮೇಲೆ ತಮ್ಮ ಚರ್ಚೆಯನ್ನು ಆರಂಭಿಸುತ್ತಾರೆ.
ಗಾಂಧೀಜಿ ವರ್ಗರಹಿತ ಸಮಾಜದ ಪ್ರತಿಪಾದಕರಲ್ಲ
ಗಾಂಧೀಜಿಯವರ ಕುರಿತು ಬರಗೂರು “ಆರಂಭದಲ್ಲಿ ಜಾತಿವರ್ಣಗಳನ್ನು ತಮ್ಮದೇ ವ್ಯಾಖ್ಯಾನದ ಮೂಲಕ ಸಮರ್ಥಿಸುತ್ತಿದ್ದ ಗಾಂಧೀಜಿ ಆನಂತರ ಜಾತಿ ಮತ್ತು ವರ್ಗರಹಿತ ಸಮಾಜದ ನಿರ್ಮಾಣವನ್ನು ಪ್ರತಿಪಾದಿಸಿದರು” ಎಂದಿದ್ದಾರೆ. ಜಗತ್ತಿನ ಯಾವ ಮಾರ್ಕ್ಸ್ ವಾದಿಯೂ ಮೈಮರೆತು ಕೂಡಾ ಗಾಂಧೀಜಿ ವರ್ಗರಹಿತ ಸಮಾಜದ ಪ್ರತಿಪಾದಕರು ಎಂದು ಹೇಳಿಲ್ಲ. ಏಕೆಂದರೆ ಗಾಂಧೀಜಿ ಎಂದೂ ವರ್ಗರಹಿತ ಸಮಾಜ ನಿರ್ಮಾಣದ ಕನಸು ಕಂಡಿಲ್ಲ. ಭಾರತದ ಅತ್ಯುನ್ನತ ಮಟ್ಟದ ಮಾರ್ಕ್ಸ್ ವಾದಿಗಳಾದ ಡಾಂಗೆ, ಯಶ್‍ಪಾಲ್,ಇಎಂಎಸ್ ನಂಬೂದಿರಿ ಪಾಡ್-ಎಲ್ಲರೂ ಗಾಂಧೀಜಿಯ ಒಟ್ಟು ಐತಿಹಾಸಿಕ ಪಾತ್ರ ಬಂಡವಾಳಿಗರ ವರ್ಗವನ್ನು ಹೇಗೆ ಪ್ರತಿನಿಧಿಸುತ್ತಿತ್ತು ಎಂಬುದನ್ನೇ ವಿಶದೀಕರಿಸಿದ್ದಾರೆ. ಗಾಂಧೀಜಿಯವರ ಅತ್ಯಂತ ಯಥಾರ್ಥ
ಮೌಲ್ಯಮಾಪನವನ್ನು ಇಎಂಎಸ್ ತಮ್ಮ “ಗಾಂಧಿ ಎಂಡ್ ಹಿಸ್ ಇಸಮ್” ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ನನಗನ್ನಿಸುವಂತೆ ಬಹಳಷ್ಟು ಬುದ್ಧಿಜೀವಿಗಳಿಗೆ “ವರ್ಗ” ಎಂಬ ವಿಶೇಷ ಪದದ ಅರ್ಥವೇ ತಿಳಿದಿಲ್ಲ! ಅದರಿಂದಾಗಿಯೇ ಇಂತಹ ಅವಾಂತರಗಳು ಉಂಟಾಗುತ್ತವೆ.
ಸಂಲೇಖನಾ-ಸಂಥರಾ ಆತ್ಮಹತ್ಯೆಯೆ?
– ಡಾ| ಜಿ. ಭಾಸ್ಕರ ಮಯ್ಯ
ಇತ್ತೀಚೆಗೆ ರಾಜಸ್ತಾನ್ ಹೈಕೋರ್ಟ್ “ಸಂಲೇಖನಾ-ಸಂಥರಾ”ವನ್ನು ಕಾನೂನು ಬಾಹಿರಗೊಳಿಸಿರುವ ವಿಚಾರ ಜೈನ ಸಮುದಾಯದ ಸಾತ್ವಿಕ ಆಕ್ರೋಶಕ್ಕೆ ಕಾರಣವಾಗಿದೆ. ಜನಸಂಖ್ಯೆಯಲ್ಲಿ 1 ಶೇ.ದಷ್ಟೂ ಇರದ ಜೈನ ಸಮುದಾಯದ ಧಾರ್ಮಿಕ ಆಚರಣೆಯ ಮೇಲೆ ಇದು ನಿಜಕ್ಕೂ ತಾಲಿಬಾನ್ ಮಾದರಿಯ ವ್ಯವಹಾರವಾಗಿದೆ. ನಮ್ಮ ಮಾನವ ಹಕ್ಕು ಹೋರಾಟಗಾರರು ಹಾಗೂ ಪ್ರಾಣಿದಯಾ ಸಂಘದ ಮಹಾಮಹಿಮರಿಗೆ ಇರುವುದು ಕುರುಡು ಸಿದ್ಧಾಂತ ಪ್ರೀತಿ ಹೊರತು ಮಾನವ ಪ್ರೀತಿಯಲ್ಲ. ತಮ್ಮಷ್ಟಕ್ಕೆ ತಾವಿದ್ದು, ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದ ಹಾಗೂ ನೀಡುತ್ತಿರುವ ಜೈನ ಸಮುದಾಯಕ್ಕೆ ನೋವುಂಟು ಮಾಡುವ ಈ ಕೆಲಸ ನಿಜಕ್ಕೂ ನೀಚತನದ್ದಾಗಿದೆ.
ನಾನೀಗ ಈ ಆಚರಣೆಯ ಸಂಕ್ಷಿಪ್ತ ವಿವರವನ್ನು ನೀಡುತ್ತೇನೆ:-
ಈ ಆಚರಣೆಯನ್ನು ಜೈನ ದಿಗಂಬರ ಪರಂಪರೆಯಲ್ಲಿ “ಸಂಲೇಖನಾ” ಎಂತಲೂ ಶ್ವೇತಾಂಬರದಲ್ಲಿ “ಸಲ್ಲೇಖನಾ” ಎಂತಲೂ ಕರೆಯುತ್ತಾರೆ. ಇದು ಜೈನರ ಹಲವಾರು ವ್ರತಗಳಲ್ಲಿ ಅತಿಶ್ರೇಷ್ಠವಾದ ವ್ರತರಾಜ.ಸಂಲೇಖನಾ ಮನಸ್ಸಿನ ಸಾಧನೆಯ ಒಂದು ಉಚ್ಚತಮ ಆಧ್ಯಾತ್ಮಿಕ ಸ್ಥಿತಿ.
ಮರಣದ ವಿಧಗಳು: ಮರಣಗಳಲ್ಲಿ ಪ್ರಮುಖವಾಗಿ ಎರಡು ವಿಧ. ಬಾಲ ಮರಣ ಮತ್ತು ಪಂಡಿತ ಮರಣ.ಇದನ್ನು ಇನ್ನೊಂದು ಬಗೆಯಲ್ಲಿ-ಅಕಾಮ ಮರಣ (ವಿವೇಕ ರಹಿತ, ಹಲವು ಬಾರಿ) ಹಾಗೂ ಸಕಾಮ ಮರಣ(ವಿವೇಕ ಸಹಿತ, ಒಂದೇ ಬಾರಿ) ಎಂತಲೂ ಕರೆಯುತ್ತಾರೆ.”ಗುಮ್ಮಟಸಾರ”ದ ಪ್ರಕಾರ ಬಾಲ ಮರಣವು ಚ್ಯುತ ಮತ್ತು ಚ್ಯಾವಿತವೆಂದು ಎರಡು ಬಗೆ. ಚ್ಯುತವೆಂದರೆ ಆಯುಷ್ಯ ತೀರಿದ ಬಳಿಕ ಬರುವ ಸಾವು. ಚ್ಯಾವಿತವೆಂದರೆ ವಿಷ, ರಕ್ತಕ್ಷಯ, ಧಾತುಕ್ಷಯ ಶಸ್ತಾಘಾತ, ಅಗ್ನಿದಾಹ,ಜಲದಿಂದ ಬರುವ ಸಾವು. ಇನ್ನೊಂದು ಬಗೆಯ ಮರಣಕ್ಕೆ ‘ತ್ಯಕ್ತ’ ಎನ್ನುತ್ತಾರೆ. ತ್ಯಕ್ತವೆಂದರೆ ರೋಗದಿಂದಉಂಟಾದ ಅಸಾಧ್ಯ ಮಾರಣಾಂತಿಕ ಪರಿಸ್ಥಿತಿಯಲ್ಲಿ ವಿವೇಕದಿಂದ ಶರೀರ ತ್ಯಾಗ ಮಾಡುವುದು.
ಮತ್ತಷ್ಟು ಓದು 
ಆನುದೇವಾ ಹೊರಗಣವನು ಸೆಕ್ಯುಲರಿಸಂನಿಂದ
– ರಾಕೇಶ್ ಶೆಟ್ಟಿ
ಅರಸರ ಆಡಳಿತದಲ್ಲಿದ್ದು ಆ ನಂತರ ದಶಕಗಳಿಗೂ ಹೆಚ್ಚು ಕಾಲದ ಮಾವೋವಾದಿಗಳ ಹಿಂಸಾಚಾರದ ನಂತರ ಅರಸರ ಆಡಳಿತಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ನೇಪಾಳಿಗಳು ಮತ್ತು ನೇಪಾಳ ಹೆಜ್ಜೆ-ಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಲೇ ಸಾಗುತ್ತಲಿದೆ.ಪ್ರಜಾಪ್ರಭುತ್ವಕ್ಕೆ ಕಾಲಿಟ್ಟಂತೆ,ಹೊಸ ಸಂವಿಧಾನ ರಚಿಸುವ ನಿರ್ಧಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬಂದಿದ್ದರೂ ೨೦೦೬ರಿಂದ ಈ ಪ್ರಕ್ರಿಯೆ ನಾನಾ ವಿಘ್ನಗಳಿಂದ ಕುಂಟುತ್ತಲೇ ಸಾಗಿದೆ.ಇತ್ತೀಚೆಗೆ ನಡೆದ ಪ್ರಬಲ ಭೂಕಂಪದ ನಂತರ ದೊಡ್ಡ ಮನಸ್ಸು ಮಾಡಿ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಿ ಮತ್ತೆ ಈ ಕಾರ್ಯಕ್ಕೆ ಜೈ ಎಂದಿದ್ದವು.ಈಗ ಕಾರ್ಯ ಶುರುವಾದಂತೆ ಬಹಳಷ್ಟು ಪರ-ವಿರೋಧ ಪ್ರತಿಭಟನೆ ಚರ್ಚೆಗಳು ಶುರುವಾಗಿವೆ.
ಅವುಗಳಲ್ಲಿ ಒಂದು,ನೇಪಾಳದ ಭಾಗಗಳನ್ನು ಜನರ ಆಚರಣೆ-ಭಾಷೆಯ ಮೇಲೆ ಪ್ರತ್ಯೇಕವಾಗಿಸುವುದನ್ನು ವಿರೋಧ ವ್ಯಕ್ತವಾಗುತ್ತಿದೆ.ಈ ನಡೆ ಮುಂದೆ ನೇಪಾಳವನ್ನು ಇನ್ನಷ್ಟು ಚೂರು ಚೂರು ಮಾಡಲಿದೆ ಎಂಬ ದೂರದೃಷ್ಟಿಯುಳ್ಳವರು ನೇಪಾಳದಲ್ಲಿರುವುದು ನೇಪಾಳಿಗಳ ಪುಣ್ಯವೇ ಸರಿ.ಬಹುಷಃ ಅವರು ಭಾರತದ ಸ್ಥಿತಿಯಿಂದ ಪಾಠ ಕಲಿತಿರಬಹುದು.ಅದರಲ್ಲೂ ಮುಖ್ಯವಾಗಿ ಭಾರತದ ಈಶಾನ್ಯ ರಾಜ್ಯಗಳನ್ನು ನೋಡಿ.ಒಂದೆಡೆ ಮಿಷನರಿಗಳ ಚಿತಾವಣೆ,ಮತ್ತೊಂದೆಡೆ ಜನಾಂಗೀಯ ಆಧರಿತ ಉಗ್ರಪಡೆಗಳ ಹಿಂಸಾಚಾರಗಳಿಂದ ಈಗಾಗಲೇ ಎಂಟು ರಾಜ್ಯಗಳಾಗಿರುವ ಈಶಾನ್ಯ ಭಾಗವೂ ಇನ್ನೂ ಚೂರುಚೂರಾಗುವ ಆಂತಕವಿದ್ದೇ ಇದೆ.ಈಶಾನ್ಯ ರಾಜ್ಯಗಳ ಉದಾಹರಣೆಯೇಕೆ.ನೆರೆಯ ತಮಿಳುನಾಡಿನಲ್ಲಿಯೇ ಭಾಷೆ ಮತ್ತು ನಮ್ಮ ಸಂಸ್ಕೃತಿಯಗೇ ಪರಕೀಯವಾದ ’ದ್ರಾವಿಡ ಜನಾಂಗೀಯ’ ಎಂಬ ಹುಚ್ಚು ಕಲ್ಪನೆಯ ಚಳುವಳಿಯ ನೆಪದಲ್ಲಿ ಏನೆಲ್ಲಾ ಅಧ್ವಾನಗಳಾಯಿತು ಎಂಬುದನ್ನು ನೋಡಿದರೆ ಸಾಕಲ್ಲವೇ? ಈ ನಿಟ್ಟಿನಲ್ಲಿ ನೋಡಿದಾಗ ನೇಪಾಳಿಗಳ ಆತಂಕ ಸರಿಯಾಗಿದೆ ಎನಿಸುತ್ತದೆ.
Sin ಅನ್ನು ಭಾಷಾಂತರಿಸಿದ ಪಾಪವೇ ವಸಾಹತುಪ್ರಜ್ಞೆ
– ವಿನಾಯಕ ಹಂಪಿಹೊಳಿ
Sin ಶಬ್ದದ ಅರ್ಥವೇನು ಎಂದು ಕೇಳಿದರೆ ಎಗ್ಗಿಲ್ಲದೇ ಪಾಪ ಎಂದು ಉಚ್ಚರಿಸಿಬಿಡುತ್ತೇವೆ. ಇದರಲ್ಲಿ ಅಷ್ಟು ತಲೆಕೆಡಿಸಿಕೊಳ್ಳುವಂಥದ್ದೇನೂ ಇಲ್ಲ ಎಂದೇ ಅನ್ನಿಸುತ್ತದೆ. ಮಾಡಬಾರದ್ದನ್ನು ಮಾಡುವದು ಪಾಪ ಎಂದು ನಾವೂ ಹೇಳುತ್ತೇವೆ. ಪಾಶ್ಚಿಮಾತ್ಯ ಕ್ರೈಸ್ತರೂ ಹೇಳುತ್ತಾರೆ. ಹೀಗಾಗಿ ಒಂದು ಹಂತದಲ್ಲಿ Sin=ಪಾಪ ಎನ್ನುವದು ಒಪ್ಪಿತವೇ. ಹಾಗೆಯೇ sinner=ಪಾಪಿ ಎಂಬುದೂ ಸರಿ. ಆದರೆ ಇಲ್ಲೊಂದು ಸಮಸ್ಯೆಯಿದೆ. ಪಾಪದ ವಿರುದ್ಧ ಪದ ಏನು ಎಂದಾಗ ಕ್ಷಣವೂ ತಡಮಾಡದೇ ಪುಣ್ಯ ಎನ್ನುತ್ತೇವೆ. ಆದರೆ Sin ಶಬ್ದದ ವಿರುದ್ಧ ಪದ ಏನು ಎಂದು ಕೇಳಿದರೆ?
ಮುಗ್ಗರಿಸಿ ಬಿದ್ದ ಅನುಭವವಾಯಿತಲ್ಲವೇ? ಇರಲಿ, Thesaurus ನಲ್ಲಿ Sin ಗೆ ಎಷ್ಟೊಂದು ವಿರುದ್ಧಪದಗಳಿವೆಯೋ ಅವನ್ನೆಲ್ಲ ಗಮನಿಸೋಣ, ಅವುಗಳು advantage, good, goodness, good deed, kindness, obedience, right, virtue, perfection, behavior, morality.ಇವೆಲ್ಲ ಶಬ್ದಗಳೂ ಪುಣ್ಯದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಃ ಒಂದಾದರೂ ಪುಣ್ಯವನ್ನು ಸಂಪೂರ್ಣವಾಗಿ ಪ್ರತಿನಿಧಿಸುವಷ್ಟು ಪುಣ್ಯ ಕಟ್ಟಿಕೊಂಡಿದೆಯೇ? “ನೀವು ಜೀವನದಲ್ಲಿ ಬಹಳಷ್ಟು ಪುಣ್ಯ ಗಳಿಸಿದ್ದೀರಿ” ಎನ್ನುವದನ್ನು ಹೇಗೆ ಭಾಷಾಂತರಿಸುತ್ತೀರಿ?
ನಾಡು-ನುಡಿ ಮರುಚಿಂತನೆ : ಬೌದ್ಧ ಮತ – ಸಂಘ ಮತ್ತು ಸಂಸಾರ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ನಾವು ಇಂದು ಓದುತ್ತಿರುವ ಬೌದ್ಧ ಮತದ ಜನಪ್ರಿಯ ಇತಿಹಾಸದಲ್ಲಿ ಒಂದು ಸಮಸ್ಯೆಯಿದೆ. ಅದೆಂದರೆ ನಾವು ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮಿನ ಮಾದರಿಗಳನ್ನಿಟ್ಟುಕೊಂಡು ಅವುಗಳ ಲಕ್ಷಣಗಳನ್ನು ಆರೋಪಿಸಿಕೊಂಡು ಬೌದ್ಧ ಮತ ಎಂಬುದನ್ನು ಊಹಿಸಿಕೊಳ್ಳುತ್ತಿರುತ್ತೇವೆ. ಅಂದರೆ ಬೌದ್ಧ ಮತವನ್ನು ಒಂದು ರಿಲಿಜನ್ನು ಎಂಬದಾಗಿ ಭಾವಿಸಿಕೊಂಡು ಪಾಶ್ಚಾತ್ಯ ವಿದ್ವಾಂಸರು ಮೊತ್ತಮೊದಲು ಅದನ್ನು ಅಧ್ಯಯನಕ್ಕೊಳಪಡಿಸಿದರು ಹಾಗೂ ಅವರನ್ನನುಸರಿಸಿ ಭಾರತೀಯರೂ ಇಂಥ ಅಧ್ಯಯನಗಳನ್ನು ಮುಂದುವರಿಸಿದರು.
ಬೌದ್ಧ ಮತದ ಕುರಿತು ನಮ್ಮ ಜನಪ್ರಿಯ ಇತಿಹಾಸದ ಪ್ರಕಾರ ಬುದ್ಧನು ಬುದ್ಧಿಸಂ ಎಂಬ ಒಂದು ಹೊಸ ಜಾತ್ಯತೀತ ಸಮಾಜದ ಹುಟ್ಟಿಗೆ ಕಾರಣನಾದನು. ಅವನು ಮಾಡಿದ ಉಪದೇಶಗಳು ಅವನ ಅನುಯಾಯಿಗಳ ಜೀವನವನ್ನು ನಿರ್ದೇಶಿಸುವ ನಿಯಮಗಳಾದವು. ಇಂಥ ನಿಯಮಗಳನ್ನು ತಿಳಿಸುವ ಬೌದ್ಧರ ಪವಿತ್ರ ಗ್ರಂಥವೇ ಪಾಳಿ ತ್ರಿಪಿಟಕ. ಇಂಥ ನಿಯಮಗಳಾದರೂ ಯಾವವು? ನಮಗೆ ಸದ್ಯಕ್ಕೆ ಗೊತ್ತಿರುವುದು ಒಂದೇ ಒಂದು ನಿಯಮ: ಅದೆಂದರೆ ಜಾತಿ ಭೇದವನ್ನು ನಿರಾಕರಿಸಿದ್ದು. ಅಂದರೆ ಬೌದ್ಧರ ಆಚರಣೆಗಳಲ್ಲಿ ಜಾತಿಯನ್ನಾಧರಿಸಿ ತರತಮಗಳನ್ನಾಗಲೀ, ವ್ಯತ್ಯಾಸವನ್ನಾಗಲೀ ಮಾಡುವಂತಿಲ್ಲ. ಬೌದ್ಧ ಸಂಘಗಳೆಂದರೆ ಚರ್ಚುಗಳಂತೇ. ಅವುಗಳ ಕೆಲಸ ಬೌದ್ಧರಲ್ಲದವರನ್ನು ಬೌದ್ಧ ಮತಕ್ಕೆ ಪರಿವರ್ತನೆ ಮಾಡುವುದು. ಬೌದ್ಧ ಮತದ ಜಾತ್ಯತೀತತೆಗೆ ಮನಸೋತು ವರ್ಣ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಗಳನ್ನು ಕಳೆದುಕೊಂಡ ಜಾತಿಗಳೆಲ್ಲವೂ ಬೌದ್ಧರಾಗಿ ಸಮಾನತೆಯನ್ನು ಪಡೆದರು.ಈ ರೀತಿಯಲ್ಲಿ ಬೌದ್ಧ ಮತವು ಭಾರತ ಹಾಗೂ ಪೂರ್ವ ಏಶಿಯಾದಲ್ಲೆಲ್ಲ ಜನಪ್ರಿಯತೆಯನ್ನು ಪಡೆದು ವ್ಯಾಪಿಸಿಕೊಂಡಿತು. ಆದರೆ ಮಧ್ಯಕಾಲದಲ್ಲಿ ಭಾರತೀಯರೆಲ್ಲರೂ ಮತ್ತೆ ಬೌದ್ಧ ಮತವನ್ನು ಬಿಟ್ಟು ಹಿಂದೂಯಿಸಂಗೇ ಸೇರಿಕೊಂಡರು. ಬೌದ್ಧ ಮತವು ಭಾರತದಲ್ಲಿ ಅವನತಿ ಹೊಂದಿತು. ಆದರೆ ಉಳಿದೆಡೆ ಉಳಿದುಕೊಂಡಿತು.
ಮತ್ತಷ್ಟು ಓದು 
ಕೊಟ್ಟ ಕುದುರೆಯನೇರಲರಿಯದೆ : ಓದುಗರ ಕಣ್ಕಾಪು ತೆರೆಯಿಸುವ ಕೃತಿ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಇಂದಿನ ಕನ್ನಡ ಸಾಹಿತ್ಯ ಚರ್ಚೆ ಮತ್ತು ವಿಮರ್ಶೆಗಳು ಯಾವುದೇ ಕೃತಿ ಅಥವಾ ಅದಕ್ಕಿಂತ ಹೆಚ್ಚಾಗಿ ಅದರ ಕೃತಿಕಾರನನ್ನು ಹೇಗೆ ನೋಡಬೇಕು ಎಂದು ಮೊದಲೇ ನಿರ್ಧರಿಸಿ ಓದುಗರೂ ಹಾಗೆಯೇ ತಿಳಿಯತಕ್ಕದ್ದು ಎಂದು ಆಗ್ರಹಿಸುತ್ತವೆ. ಇಂಥ ಆಗ್ರಹಕ್ಕೆ ಕೆಲವೇ ಕೆಲವು ವರ್ಷಗಳ ಪರಂಪರೆ ಹಾಗೂ ಅಳ್ಳಕವಾದ ಬೇರು ಇದ್ದರೂ ಇದು ಬೀಸಿದ ಪ್ರಭಾವ ಮಾತ್ರ ತುಸು ಹೆಚ್ಚಿನದು. ಕುವೆಂಪು, ಭೈರಪ್ಪ, ಅನಂತಮೂರ್ತಿ ಮೊದಲಾಗಿ ಯಾರ್ಯಾರ ಕೃತಿಯನ್ನು ಹಾಗೂ ಆಯಾ ಕೃತಿಕಾರರನ್ನು ಹೇಗೆ ನೋಡಬೇಕು, ತಿಳಿಯಬೇಕು ಹಾಗೂ ಅವರನ್ನು ಎಲ್ಲಿ ಇಡಬೇಕು ಎಂದು ‘ನಿರ್ದೇಶಿಸುವ’ ಪ್ರವೃತ್ತಿ ಸಾಹಿತ್ಯಕ ವಲಯದಲ್ಲಿ ಕಾಣಿಸಿಕೊಂಡಿದೆ. ಇದು ತನ್ನ ಹಾಸುಬೀಸನ್ನು ಹೊಸಗನ್ನಡಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಅದರ ತೆಕ್ಕೆಗೆ ಹನ್ಮಿಡಿ ಶಾಸನಾದಿಯಾಗಿ ಎಲ್ಲವೂ ಸೇರಿವೆ! ಹೀಗಾಗಿ ಸಹಜವಾಗಿಯೇ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವೂ ಇಂಥ ನಿರ್ದೇಶನದ ವ್ಯಾಪ್ತಿಯಲ್ಲಿ ಬಂದುಬಿಟ್ಟಿದೆ. ಓದುಗನ ಮೇಲೆ ಹೇರಲಾಗುವ ಈ ಬಗೆಯ ನಿರ್ದೇಶನದಿಂದ ಸಾಹಿತ್ಯಕ್ಕಾಗಲೀ ಓದುಗನಾಗಲೀ ಲಾಭಕ್ಕಿಂತ ನಷ್ಟವೇ ಹೆಚ್ಚು. ವಚನ ಸಾಹಿತ್ಯ ಕುರಿತು ಹೀಗೆ ಹೇರಲಾಗಿರುವ “ಓದುವ-ತಿಳಿಯುವ ಕ್ರಮದ ನಿರ್ದೇಶನ”ದಿಂದಾಗಿ ಸಾಹಿತ್ಯವನ್ನು ಸಹಜವಾಗಿ ಓದುವವರಿಗೆ ಹುಟ್ಟುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಉತ್ತರ ದೊರಕಿದಂತೆ ನಟಿಸಬೇಕಾಗುತ್ತದೆ. ಆದರೆ ಅನುಮಾನ ಪರಿಹಾರವಾಗದು. ಅಂಥ ಸಂದರ್ಭದಲ್ಲಿ ಓದುಗರು ತಮ್ಮ ಓದಿನ ದೋಷವನ್ನು ಅರ್ಥಮಾಡಿಕೊಂಡು ಬೇರೆ ರೀತಿಯಲ್ಲಿ ಓದಿಕೊಳ್ಳುವ ಮಾರ್ಗ ಹುಡುಕಬೇಕಾಗುತ್ತದೆ. ಸ್ಥಾಪಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ವಚನಗಳನ್ನು ಓದಿದಾಗ ಉಂಟಾಗುವ ಸಮಸ್ಯೆ ಇಂಥ ಹೊಸ ಮಾರ್ಗವನ್ನು “ಕೊಟ್ಟಕುದುರೆಯನೇರಲರಿಯದೆ…” ಕೃತಿಯ ಮೂಲಕ ಈಗ ತೆರೆದಿದೆ.
ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿಕೊಂಡ ವಚನಗಳ ಹಿನ್ನೆಲೆ, ಅವುಗಳ ಸ್ವರೂಪ, ಭಾಷೆ, ವಿಷಯ ವೈವಿಧ್ಯಗಳನ್ನು ಗಮನಿಸಿದಾಗ ಓದುಗನಲ್ಲಿ ಸಹಜವಾಗಿಯೇ ಅನೇಕಾನೇಕ ಪ್ರಶ್ನೆಗಳು ಹುಟ್ಟುತ್ತವೆ: ‘ವಚನಗಳ ನಿರ್ದಿಷ್ಟ ಸಂಖ್ಯೆ ಯಾಕೆ ಲಭ್ಯವಿಲ್ಲ? ‘ಕಲ್ಯಾಣ ಕ್ರಾಂತಿಯಾದಾಗ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು’ ಎಂಬ ಹೇಳಿಕೆ ಸರಿಯಾಗಿದ್ದರೆ ಆ ಕಟ್ಟುಗಳು ಏನಾದವು?
ಕುವೆಂಪು ಮತ್ತು ಅಧ್ಯಾತ್ಮ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಕುವೆಂಪು ಮೂಲತಃ ಒಬ್ಬ ಕವಿ, ಶ್ರೇಷ್ಠ ಕವಿ. “ನಾನೃಷಿಃ ಕುರುತೇ ಕಾವ್ಯಂ” ಎಂಬ ಮಾತಿದೆ. ಋಷಿ ಎಂಬುದಕ್ಕೆ ದ್ರಷ್ಟಾರ ಎಂಬ ಅರ್ಥವಿದೆ. ಅಧ್ಯಾತ್ಮದ ಒಂದು ಮಜಲನ್ನು ದಾಟದಿದ್ದರೆ ದ್ರಷ್ಟಾರನಾಗುವುದು ಸಾಧ್ಯವಿಲ್ಲ. ಅಧ್ಯಾತ್ಮ ಎಂದರೆ ‘Immediate feeling of unity of the self with God’ ಎಂಬ ವ್ಯಾಖ್ಯೆಯನ್ನು ನೀಡಲಾಗಿದೆ. ದೇವರದೊಂದಿಗಿನ ಆತ್ಮದ ಐಕ್ಯವೇ ಅಧ್ಯಾತ್ಮ. ಕಾಯಕ, ನಿಸರ್ಗ, ಅಣುಜೀವ ಪ್ರೇಮ, ಹೀಗೆ ಯಾವುದೇ ಶಾಶ್ವತ ಮೌಲ್ಯವೂ ದೇವರಾಗಬಹುದು. ಇವು ವ್ಯಕ್ತಿಯಲ್ಲಿ ಲೀನವಾಗುವ ಬಗೆ ಅಧ್ಯಾತ್ಮದ ಹಂತಕ್ಕೆ ಒಯ್ಯುತ್ತದೆ.
ತೀವ್ರ ವಿಚಾರವಾದಿ, ಅಧ್ಯಾತ್ಮವಾದಿ, ಅಧ್ಯಾತ್ಮ ಜೀವಿಯಾದ ಕುವೆಂಪು ಸುಲಭಗ್ರಾಹ್ಯರಲ್ಲ. ಅವರು ವಿಚಾರವಾದಿ ನಿಜ, ಆದರೆ ಕೇವಲ ಭೌತವಾದಿಯಲ್ಲ. ಅಧ್ಯಾತ್ಮವಾದಿ ನಿಜ, ಆದರೆ ಕರ್ಮಠರಲ್ಲ. ಅಧ್ಯಾತ್ಮ ಜೀವಿ ನಿಜ, ಆದರೆ ಸಂನ್ಯಾಸಿಯಲ್ಲ. ನಿರಂಕುಶಮತಿಗಾಗಿ ಅವರು ನೀಡುವ ಕರೆ,ಆತ್ಮಶ್ರೀಗಾಗಿಯೇ ವಿನಾ ಭೌತಿಕ ರುಚಿಗಳ ಆರೈಕೆ, ಪೂರೈಕೆಗಳಿಗಾಗಿ ಅಲ್ಲ.
ಯಾವುದೇ ಅಧ್ಯಾತ್ಮ ತತ್ತ್ವದ ಅಂತಿಮ ಬಿಂದು ವ್ಯಕ್ತಿ ನಿಷ್ಠತೆ, ವ್ಯಕ್ತಿ ಉದ್ಧಾರ. ಸಮೂಹವನ್ನು ಇಡಿಯಾಗಿ ಉದ್ಧರಿಸುವ ಆಧ್ಯಾತ್ಮಿಕ ಸೂತ್ರ ಇಲ್ಲವೇ ಇಲ್ಲ. ಭಗವದ್ಗೀತೆಯಲ್ಲಿ ಹೇಳುವ “ಉದ್ಧರೇದಾತ್ಮನಾತ್ಮನಂ” ಎಂಬ ಮಾತು ಅಕ್ಷರಶಃ ನಿಜ. ವ್ಯಕ್ತಿ ಸ್ವತಃ ಉದ್ಧಾರವಾಗಬೇಕು. ವ್ಯಕ್ತಿ ವ್ಯಕ್ತಿಗಳು ಕೂಡಿ ಒಂದು ಸಮಾಜ. ವ್ಯಕ್ತಿಗಳ ಉದ್ಧಾರವೇ ಸಮಾಜದ ಉದ್ಧಾರ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರವೂ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ನಮ್ಮ ಉದ್ಧಾರಕ್ಕಾಗಿ ಯಾರೋ ಒಬ್ಬರು ದುಡಿಯುತ್ತಾರೆ ಎಂದು ಬಯಸುವಂತಿಲ್ಲ. ಎಲ್ಲರೂ ದುಡಿಯುತ್ತಲೇ ಅವರವರ ಹಾದಿಯಲ್ಲಿ ನಡೆದು, ಉದ್ಧಾರ ಕಂಡುಕೊಳ್ಳಬೇಕೆಂಬುದು ಅವರ ಕಾಣ್ಕೆ. ಹಾಗಾಗಿಯೇ ಅವರ ಸಾಹಿತ್ಯ ಸರ್ವಸ್ವದ ಸಾರವೇ ಆಗಿರುವ ಸಪ್ತ ಸೂತ್ರಗಳಲ್ಲಿ, “ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು ಹಾಗೂ ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾಗುವ ಎಲ್ಲವನ್ನೂ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ಪಡೆಯಬೇಕು” ಎಂದಿದ್ದಾರೆ.
ನಾಡು-ನುಡಿ ಮರುಚಿಂತನೆ : ಅಕ್ಷರಕ್ಕೂ,ಶಿಕ್ಷಣಕ್ಕೂ,ವಿದ್ಯೆಗೂ,ಜ್ಞಾನಕ್ಕೂ ಏನು ಸಂಬಂಧ?
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಸಾಧಾರಣವಾಗಿ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯ ಕುರಿತು ಒಂದು ಆರೋಪವನ್ನು ಪದೇ ಪದೇ ಮಾಡಲಾಗುತ್ತದೆ: ಅದೆಂದರೆ ಬ್ರಾಹ್ಮಣರು ಶೂದ್ರರನ್ನು ಹಾಗೂ ಅಸ್ಪೃಶ್ಯರನ್ನು ಅಕ್ಷರ ಜ್ಞಾನದಿಂದ ವಂಚಿಸಿದ್ದಾರೆ. ಆಕಾರಣದಿಂದಾಗಿ ಅವರಿಗೆ ಜ್ಞಾನವನ್ನೂ, ವಿದ್ಯೆಯನ್ನೂ ನಿರಾಕರಿಸಿದ್ದರು ಅಂತ. ನಮ್ಮ ಜಾತಿ ವ್ಯವಸ್ಥೆಯಲ್ಲಿ ಶೋಷಣೆಯ ಒಂದು ಲಕ್ಷಣ ಎಂಬಂತೆ ಕೆಲವು ಹಿತಾಸಕ್ತಿ ಪೀಡಿತ ಗುಂಪುಗಳು ಈ ಸಂಗತಿಯನ್ನು ತಪ್ಪದೇ ಹೇಳುತ್ತಿರುತ್ತವೆ.
ಹೀಗೆ ಹೇಳುವವರು ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಆಧುನಿಕ ಶಿಕ್ಷಣವು ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಒಂದು ಅವಿನಾಭಾವಿಯಾದ ಸಂಬಂಧ ಕಲ್ಪಿಸುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಸಾಕ್ಷರತೆಯ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದೆ ಹಾಗೂ ವಿಶ್ವಸಂಸ್ಥೆ ಕೂಡಾ ಅಕ್ಷರವನ್ನು ಅಭಿವೃದ್ಧಿಯ ಮಾನದಂಡವನ್ನಾಗಿ ಸ್ವೀಕರಿಸಿದೆ. ವಯಸ್ಕರಿಗೆ ಕೂಡಾ ಅವರು ಸಾಯುವುದರ ಒಳಗೆ ಒಮ್ಮೆಯಾದರೂ ಅಕ್ಷರಾಭ್ಯಾಸವನ್ನು ಮಾಡಿಸುವುದು ನಿರ್ಣಾಯಕ ಎಂದು ಭಾವಿಸಲಾಗಿದೆ. ಈ ರೀತಿಯ ಶಿಕ್ಷಣ ಪದ್ಧತಿಯಲ್ಲಿ ಜ್ಞಾನವನ್ನು ಪುಸ್ತಕವನ್ನು ಓದುವ ಮೂಲಕವೇ ಪಡೆಯುವುದು ಅತ್ಯವಶ್ಯ. ಇದು ಪಾಶ್ಚಾತ್ಯ ಸಂಸ್ಕೃತಿಯ ಕ್ರಮ. ಅಲ್ಲಿ ಸತ್ಯದೇವನ ವಾಣಿಯು ಅಂತಿಮವಾದ ಸತ್ಯವಾಗಿದ್ದು ಅದು ಬರೆಹದ ಮೂಲಕವೇ ಲಭ್ಯವಿರುವುದರಿಂದ ಬರೆಹವನ್ನು ಕಲಿಯುವುದು ನಿರ್ಣಾಯಕ.




