ದೆವ್ವಗಳ ಊರಿನಲ್ಲಿ
– ರಾಕೇಶ್ ಶೆಟ್ಟಿ
Most Haunted Places in India ಎನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರಾಜಸ್ಥಾನದಲ್ಲಿರುವ ಬಾಂಗ್ರಾ ಕೋಟೆ.
ಬಾಂಗ್ರಾ ಕೋಟೆಯಲ್ಲಿ ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತದ ನಂತರ ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡನ್ನು ಭಾರತೀಯ ಪುರಾತತ್ವ ಇಲಾಖೆಯೇ ತಗುಲಿಹಾಕಿದೆಯಂತೆ. ಈ ಎಚ್ಚರಿಕೆಯನ್ನು ಮೀರಿ ಸೂರ್ಯಾಸ್ತದ ನಂತರ ಕೋಟೆಯಲ್ಲಿಯೇ ಉಳಿಯಲೆತ್ನಿಸಿದವರು ಮರಳಿಬಂದಿಲ್ಲವೆಂಬುದು ಅಲ್ಲಿನ ಗ್ರಾಮಸ್ಥರ ಅಂಬೋಣ. ಸತ್ಯವೋ,ಸುಳ್ಳೋ ಗೊತ್ತಿಲ್ಲ. ಈ ಭೂತದ ಕೋಟೆಯ ಹಿಂದೆ ಎರಡು ಮೂರು ಕತೆಗಳಿವೆ. ಮತ್ತಷ್ಟು ಓದು 
ಅಗ್ನಿರಾಜನ ಪ್ರಕರಣ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ
ಮೊನ್ನೆ ತಾನೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತಂದೆಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳಿಗೆ ಪಂಚಾಯ್ತಿ ಛಡಿ ಏಟಿನ ಶಿಕ್ಷೆ ಕೊಟ್ಟಿದ್ದು ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇಂಥ ಕಥೆಯೊಂದು ಕ್ರಿ.ಶ. 900ರ ವೇಳೆಗೇ ನಡೆದಿದ್ದನ್ನು ಕಥೆಯೊಂದು ಹೇಳುತ್ತದೆ. ಇದನ್ನು ಹೇಳುವ ಮುನ್ನ ಸಣ್ಣ ಪೀಠಿಕೆ ಅಗತ್ಯ.
ಕಳೆದ ಮುನ್ನೂರು ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯ ಬಹುಪಾಲು ಸೈದ್ಧಾಂತಿಕ ಮತ್ತು ಪಠ್ಯ ಸಂಬಂಧಿ ಅಧ್ಯಯನವನ್ನು ಕೈಗೊಂಡವರು ಯೂರೋಪಿನ ಚಿಂತಕರು. ಅವರು ನಾವು ಹಾಗೂ ನಮ್ಮ ಸಮಾಜವನ್ನು ತಮ್ಮ ಇಷ್ಟದಂತೆ ಕಂಡು, “ಅಧ್ಯಯನ” ಮಾಡಿ, ನಮ್ಮ ಸಮಾಜ ಹಾಗೂ ಸಂಸ್ಕೃತಿಯಲ್ಲಿ ಏನೇನು ತಪ್ಪುಗಳಿವೆ ಎಂದು ತೋರಿಸಿ ಅದನ್ನೇ ಆಧುನಿಕ ಶಿಕ್ಷಣದ ಮೂಲಕ ನಮಗೆ ಕಲಿಸಿದರು. ಇಂದಿಗೂ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಕಳೆದ ಎರಡರಿಂದ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಭಾರತೀಯ ಚಿಂತಕರು ಏನೇನೂ ಚಿಂತನೆ ಮಾಡಲೇ ಇಲ್ಲವೇ? ನಮ್ಮಿಂದ ಯೂರೋಪ್ ಕಲಿಯುವುದು ಏನೂ ಇಲ್ಲವೇ? ಎಂದು ಸಂಸ್ಕೃತಿ ಚಿಂತಕ ಬಾಲಗಂಗಾಧರ್ ಕೇಳುತ್ತಾರೆ. ಇಡೀ ಭಾರತದ್ದಿರಲಿ, ಕನ್ನಡ ಸಾಹಿತ್ಯದ ಹಲವಾರು ಸಂಗತಿಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ. ಕನ್ನಡ ನವ್ಯ ಸಾಹಿತಿಗಳು ಪಾಶ್ಚಾತ್ಯರಿಂದ ಹೊಸದನ್ನು ತರುವ, ಪರಿಚಯಿಸುವ ಭರದಲ್ಲಿ ನಮ್ಮದೇ ಆದ ಹಳೆಗನ್ನಡವನ್ನು ಅಲಕ್ಷಿಸಿದರು. ಶಿಕ್ಷಣ, ಮಾಧ್ಯಮಗಳೆಲ್ಲ ನವ್ಯ ಸಾಹಿತ್ಯಕ್ಕೆ ನೀಡಿದ ಪ್ರಾಮುಖ್ಯವನ್ನು ಹಳೆಗನ್ನಡಕ್ಕೆ ನೀಡದೇ ಹೋದವು. ಮೂರ್ನಾಲ್ಕು ತಲೆಮಾರುಗಳು ಹೀಗೇ ರೂಪುಗೊಂಡು ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಮಾದರಿ ತಯಾರಾಗಿ ಈಗ ಪ್ರಾಥಮಿಕ ಹಂತವಿರಲಿ, ಉನ್ನತ ಶಿಕ್ಷಣದಲ್ಲೂ ಹಳೆಗನ್ನಡ ಓದುವವರೂ ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿ ಉಂಟಾಗಿದೆ. ನವ್ಯ ಪ್ರಭಾವದ ಇಂದಿನ ಕನ್ನಡ ಸಾಹಿತ್ಯ ಓದಿದವರಿಗೆ ಈಡಿಪಸ್ ಗೊತ್ತಿರುತ್ತಾನೆ, ಆದರೆ ಅಗ್ನಿರಾಜನಾಗಲೀ ಕುಮಾರರಾಮನಾಗಲೀ ಗೊತ್ತೇ ಇರದಿದ್ದರೆ ಅದು ವಿದ್ಯಾರ್ಥಿಗಳ ತಪ್ಪಲ್ಲ! ಸಿಗ್ಮಂಡ್ ಫ್ರಾಯ್ಡ್ ನ ಈಡಿಪಸ್ ಕಾಂಪ್ಲೆಕ್ಸ್ ಹೆಸರು ಹಾಗೂ ಕಥೆ ಪರಿಚಯವಿರುವಷ್ಟು ಅಗ್ನಿರಾಜನ ಕಥೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬಹಳಷ್ಟು ಅಧ್ಯಾಪಕರಿಗೂ ಗೊತ್ತೇ ಇಲ್ಲ! ಇದಕ್ಕೆ ಇರುವ ಕಾರಣವನ್ನು ಈಗಾಗಲೇ ಬಾಲು ಅವರ ಮಾತಿನಲ್ಲಿ ಕೇಳಿದ್ದಾಗಿದೆ.
ಸಣ್ಣಕಥೆ: ಕ್ಯಾಂಪಸ್ ಇಂಟರ್ವ್ಯೂವ್…
– ನಾಗೇಶ ಮೈಸೂರು
ಕಾರನ್ನು ಟ್ರಾಫಿಕ್ಕಿನ ಚಕ್ರವ್ಯೂಹದ ನಡುವೆಯೆ ಹೇಗೇಗೊ ತೂರಿಸಿಕೊಂಡು, ಹೆಚ್ಚು ಕಡಿಮೆ ಕಾಲ್ನಡಿಗೆಯಷ್ಟೆ ವೇಗದಲ್ಲಿ ತೆವಳುತ್ತ, ಕೊನೆಗು ಟ್ರಾಫಿಕ್ಕಿಲ್ಲದ ದೊಡ್ಡ ಮುಖ್ಯ ರಸ್ತೆಗೆ ತಂದಾಗ ನಿರಾಳತೆಯ ನಿಟ್ಟುಸಿರು ಬಿಟ್ಟೆ. ಇದು ಇನ್ನೂ ಪಯಣದ ಆರಂಭ; ಹೊರಟಿರುವ ಗಮ್ಯದ ಕಡೆಗೆ ಇನ್ನು ಎಂಟು ಗಂಟೆಗಳ ದೂರವಿದೆ. ಕೇರಳದ ಇಂಜಿನಿಯರಿಂಗ್ ಕಾಲೋಜೊಂದರಲ್ಲಿ ನಮ್ಮ ಕಂಪನಿಗೆ ಕಾಲೇಜಿನಿಂದ ನೇರ ಅಭ್ಯರ್ಥಿಗಳನ್ನು ಆಯ್ದುಕೊಳ್ಳಲು ಕ್ಯಾಂಪಸ್ ಇಂಟರ್ವ್ಯೂ ಸಲುವಾಗಿ ಹೊರಟಿದ್ದು… ಜತೆಯಲ್ಲಿರುವ ಕೇಶವ ನಾಯರ್ ಎಂಬೆಡೆಡ್ ಸಾಫ್ಟ್ ವೇರ್ ವಿಭಾಗದಲ್ಲಿರುವ ಮ್ಯಾನೇಜರನಾದರು,ಅವನ ಪರಿಚಯ ಅಷ್ಟಾಗಿಲ್ಲ… ಬಹುಶಃ ಈ ಟ್ರಿಪ್ಪಿನ ನಂತರ ಸ್ವಲ್ಪ ಹೆಚ್ಚಿನ ಪರಿಚಯವಾಗಬಹುದು… ಜತೆಗೆ ಮಾನವ ಸಂಪನ್ಮೂಲ ವಿಭಾಗದಿಂದ ಬಂದಿರುವ ಜಾನಕಿ ದೇವಿ.
ಮಧ್ಯೆ ಊಟ ತಿಂಡಿ ಕಾಫಿ ಎಂದು ಬ್ರೇಕ್ ಕೊಟ್ಟು, ಮತ್ತೆ ಹಾಗೂ ಹೀಗು ತಾಕಲಾಡುತ್ತ ಗಮ್ಯ ತಲುಪುವ ಹೊತ್ತಿಗೆ ಕತ್ತಲಾಗಿ ಹೋಗಿತ್ತು. ಇಂಟರ್ವ್ಯೂವ್ ಇದ್ದದ್ದು ಮರುದಿನವಾದ ಕಾರಣ ಅಲ್ಲೆ ಕಾಲೇಜು ಹಾಸ್ಟೆಲಿನ ಗೆಸ್ಟ್ ರೂಮಿನಲ್ಲಿ ರಾತ್ರಿ ಬಿಡಾರಕ್ಕೆ ವ್ಯವಸ್ಥೆಯಾಗಿತ್ತು. ಜಾನಕಿ ಇದರಲ್ಲೆಲ್ಲಾ ಕಿಲಾಡಿ. ಕಂಪನಿಯ ಕೆಲಸವೆ ಆದರು ಸುಮ್ಮನೆ ಹೋಟೆಲ್ಲು ವೆಚ್ಚವೇಕೆ ವ್ಯರ್ಥ ಮಾಡಬೇಕು ಎಂದು ಕಾಲೇಜಿನ ಗೆಸ್ಟ್ ರೂಮಲ್ಲಿ ಇರುವ ವ್ಯವಸ್ಥೆ ಮಾಡಿಬಿಟ್ಟಿದ್ದಾಳೆ.. ಹೇಗೂ ಅವರೂ ಇಲ್ಲವೆನ್ನುವಂತಿಲ್ಲ.. ಅಲ್ಲಿ ಸೊಳ್ಳೆ ಕಾಟ ಹೆಚ್ಚಾದ ಕಾರಣ , ರಾತ್ರಿ ಸೊಳ್ಳೆ ಬತ್ತಿ ಹಚ್ಚಿ ಮಲಗಿದರೆ ಸಾಕು, ಮನೆಯಲ್ಲಿದ್ದ ಹಾಗೆ ಅನಿಸಿ ಒಳ್ಳೆ ನಿದ್ದೆ ಬರುತ್ತೆ.. ಹೋಟೆಲ್ ರೂಮಿನದೇನು ಮಹಾ..? ಆ ಕಿಷ್ಕಿಂದದಲ್ಲಿ ಇರುವುದಕ್ಕಿಂತ ಇದೆ ವಾಸಿ ಎಂದು ದಾರಿಯಲ್ಲಿ ಸುಮಾರು ಆರೇಳು ಸಲ ಹೇಳಿದ್ದಾಳೆ – ಬಹುಶಃ ನಾವು ಮಾನಸಿಕವಾಗಿ ಅಲ್ಲಿರಲು ಸಿದ್ದರಾಗಿರಲಿ ಅಂತಿರಬೇಕು..
ಆದರೆ ಅದರಲ್ಲಿ ಸ್ವಲ್ಪ ಅತಿ ಎನಿಸಿದ್ದು ಮಾತ್ರ ರಾತ್ರಿಯೂಟದ ವ್ಯವಸ್ಥೆ.. ಹೇಗು ಕಾರಿತ್ತಾಗಿ ಸಿಟಿಯ ಯಾವುದಾದರು ಊಟದ ಹೋಟೆಲ್ಲಿಗೆ ಹೋಗಿ ಬರಬಹುದಿತ್ತು… ಅದು ಸಿಟಿಯಿಂದ ದೂರ ಎಂದು ಹೇಳಿ ಅಲ್ಲೆ ಹಾಸ್ಟೆಲಿನ ವೆಜಿಟೇರಿಯನ್ ಊಟವೆ ಓಕೆ ಎಂದು ಹೇಳಿ ಅಲ್ಲೆ ತಿನ್ನುವ ಹಾಗೆ ಮಾಡಿಬಿಟ್ಟಿದ್ದಳು..! ಅದೇ ಮೊದಲ ಬಾರಿಗೆ ನನಗೆ ಅಭ್ಯಾಸವಿಲ್ಲದ ಆ ಅನ್ನ ತಿಂದು, ನೀರಿನ ಬದಲಿಗೆ ನೀಡಿದ ವಿಶೇಷ ಬಣ್ಣದ ಕೇರಳದ ಟ್ರೇಡ್ ಮಾರ್ಕ್ ದ್ರವ ಪಾನೀಯ ಕುಡಿಯುವಂತಾಗಿತ್ತು.. ಆದರೂ ಆ ನೀರಿನ ಪಾನೀಯ ಮಾತ್ರ ಏನೊ ಚೇತೋಹಾರಿಯಾಗಿದೆ ಅನಿಸಿ ಎರಡೆರಡು ಬಾರಿ ಹಾಕಿಸಿಕೊಂಡು ಕುಡಿದಿದ್ದೆ.. ಪ್ರಯಾಣದ ಆಯಾಸಕ್ಕೊ, ಏನೊ ಸೊಳ್ಳೆ ಬತ್ತಿ ಹಚ್ಚಿ ಮಲಗುತ್ತಿದ್ದ ಹಾಗೆ ಮಂಪರು ಕವಿದಂತಾಗಿ ಗಾಢವಾದ ನಿದ್ದೆ ಬಂದುಬಿಟ್ಟಿತ್ತು , ಹೊಸ ಜಾಗವೆನ್ನುವ ಪರಿವೆಯಿಲ್ಲದೆ..
ಚೆಕಾಫ್ ನ ಕಥನಶಕ್ತಿಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಇಳಿಸಂಜೆಯ ಹೊತ್ತಿನಲ್ಲಿ ಆ ಚಿಕ್ಕ ಹಳ್ಳಿಯ ರೈಲು ನಿಲ್ದಾಣದ ಆವರಣದಲ್ಲಿ ಮೆಲ್ಲಗೆ ನಡೆದುಕೊಂಡು ಹೋಗುತ್ತಿದ್ದ ನವದಂಪತಿಗಳಿಗದು ಶೃಂಗಾರದ ಸಮಯ.ಉತ್ಕಟ ಪ್ರೇಮದಿಂದ ಅವರಿಬ್ಬರು ಒಬ್ಬರನ್ನೊಬ್ಬರು ಅಂಟಿಕೊಂಡಿದ್ದರು.ಅವನ ಕೈಗಳು ಆಕೆಯ ಸೊಂಟವನ್ನು ಬಳಸಿದ್ದರೆ.ಆಕೆ ಪ್ರೀತಿಯ ಅಭಿವ್ಯಕ್ತಿಯೆನ್ನುವಂತೆ ತನ್ನ ತಲೆಯನ್ನು ಅವನ ಭುಜಕ್ಕೆ ಆನಿಸಿಕೊಂಡೇ ನಡೆದುಬರುತ್ತಿದ್ದಳು. ಆಗಸದಲ್ಲಿ ತೇಲುತ್ತಿದ್ದ ಮೋಡಗಳ ನಡುವೆ ಸುಮ್ಮನೇ ಇಣುಕಿದ ಚಂದ್ರ ,ಇವರಿಬ್ಬರ ಪ್ರೀತಿಯನ್ನು ಕಂಡು ಮೋಡಗಳ ನಡುವೆ ತನ್ನ ಮುಖವನ್ನು ಮುಚ್ಚಿಕೊಂಡ.ಹುಡುಗಿಯ ಸೌಂದರ್ಯ ಮತ್ತು ತುಸು ಹೆಚ್ಚೇ ಎನಿಸುವಷ್ಟು ಎದ್ದು ಕಾಣುತ್ತಿದ್ದ ಅವಳ ಸ್ತ್ರೀತ್ವ ಚಂದ್ರನಲ್ಲೂ ಅಸೂಯೆ ಮೂಡಿಸಿತೇನೊ ಎನ್ನುವಂತೆ ಭಾಸವಾಗುತ್ತಿತ್ತು.ಮುಸ್ಸಂಜೆಯ ನಸುಗತ್ತಲಲ್ಲಿ ಹಿತವಾಗಿ ಬೀಸುತ್ತಿದ್ದ ತಂಗಾಳಿಯ ತುಂಬೆಲ್ಲ ಹರಡಿಕೊಂಡಿದ್ದ ಕಾಡುಹೂವೊಂದರ ನಸುಗಂಪು ,ಸಂಜೆಯನ್ನು ಇನ್ನಷ್ಟು ಕಾವ್ಯಾತ್ಮಕವಾಗಿಸಿತ್ತು.ನಡುನಡುವೆ ಕಾಡಿನಲ್ಲೆಲ್ಲೋ ಕೂಗುತ್ತಿದ್ದ ಹಕ್ಕಿಯ ದನಿಯೂ ಹಿತವಾಗಿ ಕೇಳಿಸುತ್ತಿತ್ತು.
’ಓಹ್.! ಸಂಜೆಯೆನ್ನುವುದು ಎಷ್ಟು ಸುಂದರವಲ್ಲವೇ ಸಾಶಾ’,ಎಂದು ಮೆಲ್ಲಗೆತನ್ನ ಗಂಡನ ಕಿವಿಯೊಳಗೆ ಉಸುರಿದಳು ಬೆಡಗಿ .’ಒಂದು ಚಂದದ ಕನಸಿನಂತಿದೆ ನೋಡು ಈ ವಾತಾವರಣ.ಅಲ್ಲಲ್ಲಿ ಕಾಣುವ ಪೊದೆಗಳು,ರೈಲಿಹಳಿಗಳ ಪಕ್ಕಕ್ಕೆ ಅಷ್ಟಷ್ಟು ದೂರಕ್ಕೆ ನಿಲ್ಲಿಸಲಾಗಿರುವ ಉದ್ದನೆಯ ಲೋಹದ ಕಂಬಗಳು ಎಲ್ಲವೂ ಅದ್ಭುತವೇ.ಮನುಕುಲದ ಪ್ರಗತಿಯ ಪ್ರತೀಕವಾಗಿರುವ ರೈಲು ಕೂಡ ಅಪರೂಪದ ಸೌಂದರ್ಯವತಿ.ದೂರದಲ್ಲೆಲ್ಲೋ ಬರುತ್ತಿರುವ ರೈಲಿನ ಶಿಳ್ಳೆಯ ಶಬ್ದವನ್ನು ನಮ್ಮ ಕಿವಿಗೆ ತಲುಪಿಸುವ ಗಾಳಿಯದ್ದೂ ಒಂದು ಬಗೆಯ ಸೊಗಸಾದರೆ,ಈ ಸಂಜೆಯ ತಂಪಿನಲ್ಲಿ ಆ ಶಬ್ದವನ್ನು ಕೇಳುವುದು ಸಹ ಎಷ್ಟು ಹಿತವಾಗಿದೆ ಅಲ್ಲವೇ..’? ಎಂಬ ಪ್ರಶ್ನೆ ಆಕೆಯದ್ದು.
ಮತ್ತಷ್ಟು ಓದು 
ಮೊಬೈಲ್ ಕಳ್ಳ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಆ ವ್ಯಕ್ತಿ ಶೇಖರನನ್ನೇ ಗಮನಿಸುತ್ತಿದ್ದ.ಒ೦ದೆರಡು ಬಾರಿ ಆ ಕಡೆಗೆ ಲಕ್ಷ್ಯ ಕೊಡದ ಶೇಖರನಿಗೆ,ಸ್ವಲ್ಪ ಸಮಯದ ನ೦ತರ ಆ ವ್ಯಕ್ತಿಯ ಮೇಲೆ ಅನುಮಾನ ಶುರುವಾಯಿತು.ಇವನು ಅವನಿರಬಹುದಾ? ಊಹು೦…ಇರಲಿಕ್ಕಿಲ್ಲ ತು೦ಬಾ ಡೀಸೆ೦ಟ್ ಎನಿಸುತ್ತಾನೆ ಎ೦ದುಕೊ೦ಡು ಆ ವ್ಯಕ್ತಿಯೆಡೆಗೆ ನೋಡಿದ ಶೇಖರ.ಅವನು ಶೇಖರನೆಡೆಗೆ ನೋಡುತ್ತಲೇ ಇದ್ದ.
ಶೇಖರನಿಗೆ ಈಗ ಭಯ ಶುರುವಾಗತೊಡಗಿತು.ಬಸ್ ಸ್ಟಾಪ್ ನಲ್ಲಿ ಇಷ್ಟೆಲ್ಲ ಜನ ಇದ್ದಾಗಲೂ ಅವನು ನನ್ನನ್ನೇ ಏಕೆ ನೋಡುತ್ತಿದ್ದಾನೆ,ಅಷ್ಟೇ ಅಲ್ಲ ,ನಾನು ಅವನನ್ನು ನೋಡಿದ ತಕ್ಷಣ ಬೇರೆಡೆ ನೋಡುತ್ತಾನೆ,ಯಾರಿಗ್ಗೋತ್ತು ? ಡೀಸೆ೦ಟ್ ಆಗಿ ಕ೦ಡ ಮಾತ್ರಕ್ಕೆ ಮೊಬೈಲ್ ಕಳ್ಳ ಆಗಿರಬಾರದು ಎ೦ದೇನಿರಲ್ಲವಲ್ಲ,ಯಾವುದಕ್ಕೂ ಬೇಗ ಮನೆಗೆ ಹೋಗಿ ಬಿಡಬೇಕು ಎ೦ದುಕೊ೦ಡ.
ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಶೇಖರ,ಇಪ್ಪತ್ತು ಸಾವಿರ ರೂಪಾಯಿಗಳ ಮೊಬೈಲೊ೦ದನ್ನು ಕೊ೦ಡಿದ್ದ.ತು೦ಬಾ ಮುದ್ದಾದ ಮೊಬೈಲ್ ಅದು.ಅದನ್ನು ಆತ ತು೦ಬಾ ಹಚ್ಚಿಕೊ೦ಡುಬಿಟ್ಟಿದ್ದ. ದಿನವಿಡಿ ಅದರಲ್ಲಿ ಫೇಸ್ ಬುಕ್ ,ವಾಟ್ಸಪ್ಪುಗಳ ಚಾಟಿ೦ಗ್ ,ಎಫ್.ಎಮ್ ನಲ್ಲಿ ಸ೦ಗೀತ ಕೇಳುವುದು,ಗ೦ಟೆಗಟ್ಟಲೇ ಸ್ನೇಹಿತರೊ೦ದಿಗೆ ಮಾತನಾಡುವುದರಲ್ಲಿ ಕಾಲ ಕಳೆಯುತ್ತಿದ್ದ.ಮೊಬೈಲಿನ ಅಲಾರಾ೦ ಸದ್ದಿನಿ೦ದಲೇ ನಿದ್ದೆಯಿ೦ದೇಳುತ್ತಿದ್ದ ಶೇಖರ,ಮೊಬೈಲ್ ಕೆಳಗಿಡುತ್ತಿದ್ದುದು ರಾತ್ರಿ ಸ್ನೇಹಿತರಿಗೆ ’ಗುಡ್ ನೈಟ್’ಎಸ್ ಎಮ್ ಎಸ್ ಕಳುಹಿಸಿದಾಗಲೇ. ಇತ್ತೀಚೆಗೆ ಅವನ ಸ್ನೇಹಿತನೊಬ್ಬನ ಮೊಬೈಲನ್ನು ಯಾರೋ ಕೈಯಿ೦ದಲೇ ಕಸಿದು ಕದ್ದರು ಎ೦ಬ ಸುದ್ದಿ ಕೇಳಿದಾಗಿನಿ೦ದ ಮಾತ್ರ ಅವನು ತು೦ಬಾ ಗಾಬರಿಯಾಗಿದ್ದ.ಆ ಸುದ್ದಿ ಕೇಳಿದಾಗಿನಿ೦ದ ಅವನಿಗೆ ತನ್ನ ಸುತ್ತಲೂ ಯಾರೇ ಹೊಸಬರು ಕ೦ಡರೂ ಅವರು ಮೊಬೈಲ್ ಕಳ್ಳರೇನೋ,ತನ್ನ ಮೊಬೈಲ್ಲನ್ನು ಕದಿಯಲೆ೦ದೇ ಬ೦ದಿದ್ದಾರೇನೋ ಎ೦ದುಕೊಳ್ಳುತ್ತಿದ್ದ.ಬಸ್ ಸ್ಟಾ೦ಡಿನಲ್ಲಿ ನಿ೦ತಿದ್ದ ಆ ವ್ಯಕ್ತಿ ಇವನನ್ನೇ ನೋಡುತ್ತಿದ್ದರಿ೦ದ ಆ ವ್ಯಕ್ತಿಯೂ ಮೊಬೈಲ್ ಕಳ್ಳನಿರಬಹುದು ಎ೦ದು ಶೇಖರನಿಗೆ ಅನುಮಾನ ಉ೦ಟಾಗಿತ್ತು.
ಎ ಸ್ಟ್ರೇಂಜ್ ಸ್ಟೋರಿ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಅಮೆರಿಕಾದ ಟೆಕ್ಸಾಸ್ ರಾಜ್ಯದ ರಾಜಧಾನಿಯಾಗಿರುವ ಆಸ್ಟಿನ್ ಪಟ್ಟಣದ ಉತ್ತರ ಭಾಗದಲ್ಲಿ ವಾಸವಿದ್ದ ಆ ಕುಟುಂಬ ನಗರದ ಸಂಸ್ಕಾರವಂತ ಕುಟುಂಬಗಳಲ್ಲೊಂದು ಎಂದು ಗುರುತಿಸಲ್ಪಡುತ್ತಿತ್ತು. ’ಸ್ಮೂದರ್ಸ್ ಕುಟುಂಬ’ ಎಂದೇ ಕರೆಯಲ್ಪಡುತ್ತಿದ್ದ ಕುಟುಂಬದಲ್ಲಿದ್ದಿದ್ದು ಜಾನ್ ಸ್ಮೂದರ್ಸ್, ಅವನ ಮಡದಿ ಮತ್ತವನ ಐದು ವರ್ಷದ ಪುಟ್ಟ ಮಗಳು ಮಾತ್ರ.ಪರಿವಾರದಲ್ಲಿದ್ದದ್ದು ಮೂರು ಸದಸ್ಯರೇ ಆಗಿದ್ದರೂ ,ಸರಕಾರಿ ದಾಖಲಾತಿಗಳಲ್ಲಿ ಮಾತ್ರ ಕುಟುಂಬ ಸದಸ್ಯರ ಸಂಖ್ಯೆ ಆರು ಎಂದು ದಾಖಲಾಗಿರುವುದು ಏಕೆನ್ನುವುದು ಸ್ವತ: ಜಾನ್ ಸ್ಮೂದರ್ಸನಿಗೂ ಸಹ ತಿಳಿದಿರಲಿಲ್ಲ.
ಅದೊಂದು ದಿನ ರಾತ್ರಿಯ ಊಟ ಮುಗಿಸಿ ಮಡದಿಯೊಂದಿಗೆ ಹರಟುತ್ತ ಕುಳಿತಿದ್ದ ಜಾನ್,ತನ್ನ ಮಗಳು ಹೊಟ್ಟೆ ನೋವಿನಿಂದ ಒದ್ದಾಡುತ್ತಿರುವುದನ್ನು ಗಮನಿಸಿದ.ಕ್ಷಣಗಳು ಉರುಳಿದಂತೆ ಮಗಳ ಉದರಶೂಲೆ ಹೆಚ್ಚುತ್ತ ಆಕೆ ಕಿರುಚಾಡುತ್ತಿರುವುದನ್ನು ಕಂಡು ಗಾಬರಿಯಾದ ಆತ ಔಷಧಿಯನ್ನು ತರಲು ತಕ್ಷಣ ಪಟ್ಟಣದತ್ತ ತೆರಳಿದ.ಮಗಳೆಡೆಗೆ ಗಮನವಿರಿಸುವಂತೆ ಮಡದಿಗೆ ತಿಳಿಸಿ,ಔಷಧಿಗಾಗಿ ಹಾಗೆ ಪಟ್ಟಣಕ್ಕೆ ತೆರಳಿದ ಜಾನ್,ಪುನ: ವಾಪಸ್ಸು ಬರಲೇ ಇಲ್ಲ!!ಅವನಿಗಾಗಿ ಕಾಯುತ್ತ ಕುಳಿತಿದ್ದ ಮಡದಿಗೆ ನಿಜಕ್ಕೂ ಇದು ಆಘಾತಕರ ಸಂಗತಿ.ಆದರೆ ಅಂಥದ್ದೊಂದು ಆಘಾತದಿಂದ ಆಕೆ ಬಲುಬೇಗ ಚೇತರಿಸಿಕೊಂಡಳು. ಸರಿಸುಮಾರು ಮೂರು ತಿಂಗಳನಂತರ ಮತ್ತೊಬ್ಬರನ್ನು ಮದುವೆಯಾದ ಆಕೆ ಆಸ್ಟಿನ್ ಪಟ್ಟಣವನ್ನು ತೊರೆದು ಸಾನ್ ಅಂಟೋನಿಯೊ ಪಟ್ಟಣವನ್ನು ಸೇರಿಕೊಂಡಳು.ಕಾಲಚಕ್ರ ಉರುಳುತ್ತ ಸಾಗಿತು.ಅಪ್ಪ ನಾಪತ್ತೆಯಾಗುವಾಗ ಐದು ವರ್ಷವಾಗಿದ್ದ ಬಾಲಕಿಗೆ ಈಗ ಇಪ್ಪತ್ತೈದರ ವಸಂತ.ಮನ ಮೆಚ್ಚಿದ ಹುಡುಗನೊಂದಿಗೆ ವಿವಾಹವಾದ ಅವಳು ಒಂದು ಮುದ್ದಾದ ಹೆಣ್ಣುಮಗುವಿನ ತಾಯಿಯೆನಿಸಿಕೊಂಡಿದ್ದಳು.ಮಗಳಿಗೆ ’ಪನ್ಸಿ’ ಎಂದು ನಾಮಕರಣ ಮಾಡಿದ ಆಕೆ ಕಳೆದು ಹೋದ ಅಪ್ಪನನ್ನು ಮರೆಯಲಾಗದೆ,ಪುನಃ ಆಸ್ಟಿನ್ ಪಟ್ಟಣವನ್ನು ಸೇರಿಕೊಂಡು ತಮ್ಮ ಹಳೆಯ ಮನೆಯಲ್ಲಿಯೇ ಪತಿಯೊಂದಿಗೆ ವಾಸವಾಗಿದ್ದಳು.
ಸಣ್ಣಕತೆಗಳ ಕೊರತೆಯ ನಡುವೆ ನೆನಪಾದವನು ಹೆಮ್ಮಿ೦ಗ್ವೆ…!!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ನಾವಿನ್ನೂ ಹಾಸಿಗೆಯಲ್ಲಿರುವಾಗಲೇ ಅವನು ನಮ್ಮ ಕೋಣೆಗೆ ಬ೦ದು ಕಿಟಕಿ ಮುಚ್ಚಲು ಪ್ರಯತ್ನಿಸುತ್ತಿದ್ದ.ಅದೇಕೋ ಸುಸ್ತಾದವರ೦ತೆ ಕಾಣುತ್ತಿದ್ದ ಆತ ಕೊ೦ಚ ಬಿಳಚಿಕೊ೦ಡಿದ್ದ. ನಡೆಯುವಾಗಲೂ ತು೦ಬ ನೋವಿನಲ್ಲಿದ್ದ೦ತೆ ಗೋಚರಿಸುತ್ತಿದ್ದ ಆತನ ಮೈಯಲ್ಲಿ ಸಣ್ಣ ನಡುಕವೂ ಕ೦ಡು ಬರುತ್ತಿತ್ತು.’ಏನಾಯ್ತು ಸ್ಕಾಟ್ಸ್’ ಎ೦ಬ ಪ್ರಶ್ನೆಗೆ ’ಸಣ್ಣ ತಲೆನೋವು’ಎನ್ನುವ ಚುಟುಕು ಉತ್ತರ ಅವನದು.’ಬರೀ ತಲೆ ನೋವಲ್ಲ ಮಗನೇ,ನೀನು ಹೋಗಿ ಮಲಗಿಕೊ,ನಿನಗೆ ಹುಶಾರಿಲ್ಲದ೦ತೆ ಕಾಣುತ್ತಿದೆ’ ಎ೦ದರೆ,’ಇಲ್ಲ ಅಪ್ಪ ನನಗೇನೂ ಆಗಿಲ್ಲ’ಎನ್ನುವ ಜವಾಬು.’ಊಹು೦ ಮೊದಲು ಹೋಗಿ ಮಲಗಿಕೊ,ನಾನು ಆಫೀಸಿಗೆ ತೆರಳುವಾಗ ಬ೦ದು ನಿನ್ನನ್ನು ಕಾಣುತ್ತೇನೆ’ ಎ೦ದಾಗ ಮರುಮಾತಿಲ್ಲದೆ ಹೊರನಡೆದ ಸ್ಕಾಟ್ಸ್.ಆದರೆ ನಾನ೦ದುಕೊ೦ಡ೦ತೆ ಆತ ತೆರಳಿದ್ದು ಪುನ: ಮಲಗಿಕೊಳ್ಳಲಿಕ್ಕಲ್ಲ ಎ೦ದು ನನಗೆ ತಿಳಿದಿದ್ದು ನಾನು ತಯ್ಯಾರಾಗಿ ಪಡಸಾಲೆಗೆ ಬ೦ದಾಗಲೇ.ಪೂರ್ತಿ ಸುಸ್ತಾದವರ೦ತೆ ಕಾಣುತ್ತಿದ್ದರೂ ಆತ ಶಾಲೆಗೆ ತೆರಳಲು ಸಿದ್ಧವಾಗಿ ಕುಳಿತಿದ್ದ.ನಾನು ಆತನ ಹಣೆಯ ಮೇಲೆ ಕೈಯಿಟ್ಟು ನೋಡಿದೆ.ಆತನಿಗೆ ಜ್ವರವಿರುವುದು ನನಗೆ ತಿಳಿಯಿತು.ಭಯಬಿದ್ದಾನೆ೦ಬ ಕಾರಣಕ್ಕೆ ಜ್ವರದ ಬಗ್ಗೆ ಅವನಿಗೆ ತಿಳಿಸದೆ ’ಹೋಗಿ ಮಲಗಿಕೊ’ ಎ೦ದು ಸೌಮ್ಯವಾಗಿ ಗದರಿಸಿ ,ಸ್ಕಾಟ್ಸ್ ನನ್ನು ಅವನ ಕೋಣೆಗೆ ಕಳುಹಿಸಿ ವೈದ್ಯರನ್ನು ಬರಹೇಳಿದೆ.
ಉಡುಗೊರೆ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ರೀಟಾ….ನಿನಗೆಷ್ಟು ಸಲ ಹೇಳೊದು ಪಲ್ಲವಿ ಬ೦ದ್ರೆ ಒಳಗೆ ಕಳಸ್ಬೇಡಾ ಅ೦ತಾ …” ಎ೦ದು ಸಿಟ್ಟಿನಿ೦ದ ಕೂಗಿದ ಫಣಿಕೇತ .
“ಸಾರಿ ಸರ್….ನಾನು ಎಷ್ಟು ಹೇಳಿದ್ರೂ ಕೇಳದೆ ಒಳಗೆ ನುಗ್ಗಿದ್ದಾಳೆ ಅವಳು” ಎ೦ದುತ್ತರಿಸಿದಳು ಅವನ ಸೆಕ್ರೆಟರಿ .
ಫಣಿಕೇತ ಪುರೋಹಿತ್:ಶ್ರೀಮ೦ತಿಕೆ ಎ೦ದರೇ ಹೇಗಿರುತ್ತದೆ ಎ೦ಬುದಕ್ಕೆ ಅತ್ಯುತ್ತಮ ಉದಾಹರಣೆ ಅವನು.ಆತ ದೇಶದ ಹತ್ತು ಆಗರ್ಭ ಶ್ರೀಮ೦ತರಲ್ಲೊಬ್ಬ.’ಫಣಿಕೇತ ಗ್ರೂಪ್ ಆಫ್ ಇ೦ಡಸ್ಟ್ರೀಸ್’ನ ಏಕೈಕ ಮಾಲಿಕ.ಫಣಿಕೇತ ಟೆಕ್ಸಟೈಲ್ಸ್, ಫಣಿಕೇತ ಕೆಮಿಕಲ್ಸ್,ಫಣಿಕೇತ ಅಪಾರ್ಟಮೆ೦ಟ್ಸ್,ಫಣಿಕೇತ ಸಿಮೆ೦ಟ್ಸ್ ಹೀಗೆ ಸರಿಸುಮಾರು ಇಪ್ಪತ್ತು ಕ೦ಪನಿಗಳನ್ನು ಹೊ೦ದಿದೆ ಫಣಿಕೇತ ಗ್ರುಪ್ ಆಫ್ ಇ೦ಡಸ್ಟ್ರೀಸ್.ವರ್ಷಕ್ಕೆ ಸುಮಾರು ಹದಿನೈದು ಸಾವಿರ ಕೋಟಿಗಳಷ್ಟು ಲಾಭವಿರುವ ದೇಶದ ಕೆಲವೇ ಕೆಲವು ಸ೦ಸ್ಥೆಗಳ ಪೈಕಿ ಒ೦ದು ಎ೦ಬ ಹೆಗ್ಗಳಿಕೆ ಅದರದ್ದು.
ಇ೦ಥಹ ಕ೦ಪನಿಯ ಒಡೆಯನಾದ ಫಣಿಕೇತ ಪುರೋಹಿತ್ ಎಲ್ಲದರಲ್ಲೂ ಬೆಸ್ಟ್ ಎನ್ನುವುದನ್ನೇ ಬಯಸುತ್ತಾನೆ.ಅವನ ಕ೦ಪನಿಯ೦ತೂ ಬೆಸ್ಟ್ ಎನ್ನುವುದರಲ್ಲಿ ಸ೦ಶಯವೇ ಇಲ್ಲ.ಆತನ ಶ್ರೇಷ್ಠತೆಯ ವ್ಯಸನ ಎ೦ಥದ್ದೆ೦ದರೇ ಅವನ ಕಾರು,ಅವನ ಬ೦ಗ್ಲೆ,ಅವನ ಬಟ್ಟೆಬರೆ,ಅವನ ಸೆಕ್ರೆಟರಿ,ಕೊನೆಗೆ ಅವನು ಬಳಸುವ ಪೆನ್ನುಗಳಲ್ಲಿಯೂ ಸಹ ಆತ ಅತ್ಯುತ್ತಮವಾದುದ್ದನ್ನೇ ಹುಡುಕುತ್ತಾನೆ.ಹಾಗೆ೦ದು ಆತ ದುರ೦ಹಕಾರಿಯಲ್ಲ.ಫಣಿಕೇತ ಪುರೋಹಿತ್ ಪ್ರತಿ ವರ್ಷ ತನ್ನ ಕ೦ಪನಿಯ ಪರವಾಗಿ ಆಶ್ರಮಗಳಿಗೆ,ಅನಾಥಾಲಯಗಳಿಗೆ ಲಕ್ಷಾ೦ತರ ರೂಪಾಯಿಗಳನ್ನು ದಾನ ಮಾಡುತ್ತಾನೆ.ಯಾರಿಗೂ ಮೋಸ ಮಾಡುವುದಿಲ್ಲ.ಸಾಮಾಜಿಕವಾಗಿ ಅವನದ್ದು ತು೦ಬಾ ಒಳ್ಳೆಯ ವ್ಯಕ್ತಿತ್ವ.
ಮತ್ತಷ್ಟು ಓದು 
ಬಡವ ಯಾರು ?
– ಮಹೇಶ ಹುಂಡೆಕಾರ್
ಸಹಾಯಕ ಪ್ರಾಧ್ಯಾಪಕ,ಜಿ. ಎನ್. ಡಿ. ಇಂಜಿನಿಯರಿಂಗ್ ಕಾಲೇಜ,ಬೀದರ್
ಬಡವನಾದವನು ಧನಿಕನಿಗೆ ದಿನಾ ತನ್ನ ಅಸಲಿನ ಬಡ್ಡಿ ಕೊಟ್ಟು ಬದುಕುತ್ತಾನೆ, ಹಾಗೆಯೆ ಧನಿಕನು ದಿನಾ ಬಡ್ಡಿ ಎನ್ನುತ್ತಾ ಸಾಯುತ್ತಾನೆ. ದುಡ್ಡು ಪಡೆದವನಿಗೆ ಅಸಲು ಮತ್ತು ಬಡ್ಡಿ ಹೊಂದಿಸುವುದಷ್ಟೆ ಕೆಲಸ ಆದರೆ ಧನಿಕನಿಗೆ ಬಡ್ಡಿ ಪಡೆದ ಮೇಲೆ ಅದರ ಲೆಕ್ಕದ ಕೆಲಸ ಕೂಡ. ಒಂದರ್ಥದಲ್ಲಿ ಬಾಳಿ ಬದುಕುವವನು ಬಡವನೆ ಹೊರತು ಧನಿಕನಲ್ಲ.ಇಲ್ಲದ ಚಿಂತೆ ಮಾಡಿ ಬರದ ಕಾಯಿಲೆಗಳನೆಲ್ಲಾ ಬರಮಾಡಿಕೊಂಡು,ಬಡ್ಡಿ ಪಡೆದ ಹಣವು ಗುಳಿಗೆಗಳಿಗೆ ಮೀಸಲಿಟ್ಟು, ಹಣದ ಲೆಕ್ಕ ಮಾತ್ರ ಮಾಡುತ್ತ ಹಾಸಿಗೆ ಹಿಡಿದು ಕೂತಿದ್ದಾನೆ ನಮ್ಮ ಕಥಾನಾಯಕ ತಿಮಯ್ಯಸೆಟ್ಟರು ಜೊತೆಗೆ ಜೀವದ ಗೆಳೆಯರಾದ ಗುಣಲಿಂಗ ಹಾಗೂ ಶಾಂತರೂಪರು ಆಸಿನರಾಗಿದ್ದರೆ.ನಮ್ಮ ತಿಮ್ಮಯ್ಯಸೆಟ್ಟರ ಭಾರಿ ವಿಚಾರಗಳು ಮತ್ತು ಅದಕ್ಕೆ ಪೂರಕವಾಗಿ ತನ್ನ ಸುತ್ತಲಿನ ಪರಿಸರವನ್ನು ತಾನೆ ನಿರ್ಮಿಸಿಕೊಳ್ಳುತಿದ್ದ ಏಕೆಂದರೆ ಆ ಬಡಾವಣೆಯಲ್ಲಿ ತಾನೆ ಶ್ರೀಮಂತ “ಹಣದಲ್ಲಿ” ಹಾಗೆಯೆ ಅದರ ಮಹಿಮೆಯಿಂದ ಮೆರೆಯತೊಡಗಿದ.ಅನುಕಂಪದ ಆಧಾರದ ಮೇಲೆ ಸರಕಾರಿ ಕೆಲಸ ಗಿಟ್ಟಿಸಿಕೊಂಡು ಬಹಳ ಚಿಕ್ಕ ವಯಸ್ಸಿನಲ್ಲೇ ದುಡ್ಡಿನ ಹುಚ್ಚು ಆಡರಿಸಿಬಿಟ್ಟಿತು. “ದುಡ್ಡು ಜೀವನಕ್ಕೆ ಬಹಳ ಅಗತ್ಯ, ಆದರೆ ದುಡ್ಡೆ ಜೀವನವಲ್ಲ” ನಮ್ಮ ತಿಮ್ಮಯ್ಯಸೆಟ್ಟರದು ದುಡ್ಡು ಒಂದೆ ಬೇಕು ಜೀವನಕ್ಕೆ ಎಂದು ಊರೆಲ್ಲ ಹಲಗೆ ಹೋಡಿದು ಸಾರುತ್ತಿದ್ದರು.
ದಿ ಲಾಸ್ಟ್ ಲೆಕ್ಚರ್: ಆತ ಸಾವಿನ ಸಾಂಗತ್ಯದಲ್ಲಿ ಬದುಕನ್ನು ಪ್ರೀತಿಸಿದ
– ರಾಜಕುಮಾರ.ವ್ಹಿ.ಕುಲಕರ್ಣಿ, ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
‘ಸಾವಿನ ಬಗ್ಗೆ ಮಾತನಾಡುವುದು ಸುಲಭ. ಸಾವು ಹೀಗೆ ಬರಬಹುದೋ ಹಾಗೆ ಬರಬಹುದೋ ಎಂದು ಕಲ್ಪಿಸಿಕೊಳ್ಳುವುದೂ ಸುಲಭ. ಸಾವು ಹೀಗೇ ಬರಲಿ ಎಂದು ಆಸೆ ಪಡುವುದೂ ಸುಲಭ. ತುಂಬು ಆರೋಗ್ಯವಂತನೊಬ್ಬ ಸಾವಿನ ಬಗ್ಗೆ, ಆ ಕ್ಷಣದ ತಲ್ಲಣದ ಬಗ್ಗೆ, ಸಾವಿನ ಅನಿವಾರ್ಯತೆಯ ಬಗ್ಗೆ ಭಾಷಣ ಹೊಡೆಯುವುದು, ಪ್ರಬಂಧ ಬರೆಯುವುದು ಇನ್ನೂ ಸುಲಭ. ಆದರೆ ಸಾವೆಂಬುದು ಕಣ್ಮುಂದೆಯೇ ಗಿರಿಗಿಟ್ಲೆ ತಿರುಗುತ್ತಿದೆ ಮುಂದಿನ ಕೆಲವೇ ದಿನಗಳಲ್ಲಿ ನನ್ನ ಬದುಕೇ ಮುಗಿದು ಹೋಗಲಿದೆ ಎಂದು ಗೊತ್ತಾದಾಗ ನಗು ನಗುತ್ತಲೆ ಬದುಕು ಸುಂದರ, ಸಂತೋಷದಿಂದ ಇರಿ ಎಂದು ಹೇಳುವುದಿದೆಯಲ್ಲ ಅದು ಕಷ್ಟ ಕಷ್ಟ’ ದಿ ಲಾಸ್ಟ್ ಲೆಕ್ಚರ್ ಕೃತಿಯ ಮುನ್ನುಡಿಯಲ್ಲಿ ಶ್ರೀ ವಿಶ್ವೇಶ್ವರ ಭಟ್ ಹೇಳಿದ ಮಾತಿದು.
ಹೌದು.ಸಾವು ಮನುಷ್ಯನ ಕೊನೆಯ ಸೋಲು. ಮನುಷ್ಯ ಜೀವನದಲ್ಲಿ ಯಾವ ಸೋಲಿಗೂ ಎದೆಗುಂದದಿದ್ದರೂ ಸಾವಿನಂಥ ಸೋಲಿಗೆ ಅಧೀರನಾಗುವುದು ಸತ್ಯ. ಆದರೆ ಅವನೊಬ್ಬನಿದ್ದ ಅವನು ಸಾವಿನಂಥ ಸಾವಿಗೇ ಸವಾಲೊಡ್ಡಿ ನಿಂತ. ಸಾವು ಬಂದು ಬದುಕನ್ನು ಕಬಳಿಸಲು ಹೊಂಚು ಹಾಕಿ ಕುಳಿತಿದೆ ಎಂದು ಗೊತ್ತಾದಾಗಲೂ ಆತ ಎದೆಗುಂದಲಿಲ್ಲ. ಇನ್ನು ನೀನು ಬದುಕಿರುವುದು ಕೆಲವೇ ದಿನಗಳು ಎನ್ನುವ ಸತ್ಯ ಬಂದು ತಟ್ಟಿದಾಗಲೂ ಆತ ಅಂಜಲಿಲ್ಲ ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳಲಿಲ್ಲ. ಸಾಯುತ್ತೇನೆ ಎಂದು ಗೊತ್ತಾದ ಮೇಲೆ ಹೆಚ್ಚು ಹೆಚ್ಚು ಕ್ರಿಯಾಶೀಲನಾದ. ಹೆಂಡತಿ, ಮಕ್ಕಳು ಮತ್ತು ವೃತ್ತಿಯನ್ನು ಅಪಾರವಾಗಿ ಪ್ರೀತಿಸಿದ. ಇಂಥದ್ದೊಂದು ಕ್ರಿಯಾಶೀಲ ಬದುಕಿಗೆ ತನ್ನನ್ನು ಅಣಿಗೊಳಿಸಿದ ಆ ಸಾವಿಗೇ ಆತ ಕೃತಜ್ಞತೆ ಸಲ್ಲಿಸಿದ. ಒಂದರ್ಥದಲ್ಲಿ ಆತ ಸಾವಿನ ಸಾಂಗತ್ಯದಲ್ಲೂ ಬದುಕನ್ನು ಪ್ರೀತಿಸಿದ. ಸಾವಿನಲ್ಲೂ ಬೇರೆಯವರ ಬದುಕಿಗೆ ಮಾದರಿಯಾದ. ಆತನೇ `ದಿ ಲಾಸ್ಟ್ ಲೆಕ್ಚರ್’ ಕೃತಿಯ ನಾಯಕ ಮತ್ತು ಲೇಖಕ ರ್ಯಾಂಡಿ ಪಾಶ್.
ಯಾರು ಈ ರ್ಯಾಂಡಿ ಪಾಶ್ ?
ಈ ರ್ಯಾಂಡಿ ಪಾಶ್ ಅಮೇರಿಕಾ ದೇಶದವನು. ಕಾರ್ನಿಗಿ ಮೆಲಿನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿ ಬಹು ದೊಡ್ಡ ಹೆಸರು ಗಳಿಸಿದವನು. ವೃತ್ತಿಯಿಂದ ಉಪನ್ಯಾಸಕನಾದರೂ ಅವನು ಮಾಡಿದ ಸಾಧನೆಗಳು ಅನೇಕ. ಅಡೋಬ್, ಗೂಗಲ್, ವಾಲ್ಟ್ ಡಿಸ್ನಿಯಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ. ಪಿಹೆಚ್‍ಡಿ ಅಭ್ಯಸಿಸಿ ಡಾಕ್ಟರೇಟ್ ಪಡೆದವ ನಂತರ ಗಗನಯಾತ್ರಿಯಾದ. ಅನಂತರ ವಿಜ್ಞಾನಿಯಾದ. ಅಷ್ಟಕ್ಕೆ ತೃಪ್ತನಾಗದೆ ಪೋಲಿಸ್ ಅಧಿಕಾರಿಯಾದ. ಕೊನೆಗೆ ಉಪನ್ಯಾಸಕನಾದ. ಹೀಗೆ ಬದುಕಿನಲ್ಲಿ ಅನೇಕ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸಿಕೊಂಡ.




