ಇವರದ್ದು ಅಭಿವೃದ್ಧಿ! ಅವರದ್ದು ವ್ಯಾಪಾರ!?
ರಾಜ್ಯದಲ್ಲಿ ೯೬೩೨ ಕಿಮೀ ರಾಷ್ಟ್ರೀಯ ಹೆದ್ದಾರಿಯಿದ್ದು, ರಾಜ್ಯ ಸರ್ಕಾರ ಭೂಮಿ ನೀಡಿದರೆ, ಕೇಂದ್ರದಿಂದ ೧ ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿಕೊಡಲು ಸಿದ್ಧರಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುತ್ತಿದ್ದ ಕಾಂಗ್ರೆಸ್ಸಿಗರೇ, ಕೇಂದ್ರ ಈ ತೀರ್ಮಾನಕ್ಕೆ ಈಗೇನು ಹೇಳುತ್ತೀರಿ? ಕೇಂದ್ರದಲ್ಲಿ ನಿಮ್ಮ ಸರ್ಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರವಿದ್ದ ವೇಳೆ ಇಂತಹ ವಿಶಾಲ ಮನಸ್ಥಿತಿಯನ್ನು ಪ್ರದರ್ಶಿಸಿದ್ದಿರೇ? ನಾಚಿಕೆಯಾಗಬೇಕು ನಿಮ್ಮ ಮನಸ್ಥಿತಿಗೆ.
– ಎಸ್.ಆರ್ ಅನಿರುದ್ಧ ವಸಿಷ್ಠ,ಭದ್ರಾವತಿ
ಬನ್ನಿ, ಕರ್ನಾಟಕದಲ್ಲಿ ಬಂಡವಾಳ ಹೂಡಿ: ರಾಜ್ಯದ ಪರವಾಗಿ ಉದ್ಯಮಿಗಳ ಕರೆ…
ಎಷ್ಟಾದರೂ ಭೂಮಿ ಕೊಡಲು ಸಿದ್ಧರಿದ್ದೇವೆ: ಸಿದ್ಧರಾಮಯ್ಯ…
ಇದು ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿರುವ ಇನ್ವಸ್ಟ್ ಕರ್ನಾಟಕ ಸಮಾವೇಶದ ಪ್ರಮುಖ ನುಡಿಮುತ್ತುಗಳು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ಇದರಲ್ಲಿ ಪಾಲ್ಗೊಂಡ ಗಣ್ಯೋದ್ಯಮಿಗಳು ರಾಜ್ಯದ ಹಲವೆಡೆ ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದು, ಮೊದಲ ದಿನವೇ ಈ ಕುರಿತ ೯೫ ಸಾವಿರ ಕೋಟಿ ಹೂಡಿಕೆಯ ೧೦೦ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ದೇಶದ ಉದ್ಯಮ ಕ್ಷೇತ್ರದಲ್ಲಿ ದಿಗ್ಗಜರು ನಿನ್ನೆಯ ವೇದಿಕೆಯಲ್ಲಿ ಉಪಸ್ಥಿತರಿದ್ದು, ಇವರಿಗೆಲ್ಲಾ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಂಪು ಹಾಸು ಹಾಕಿ ಬರಮಾಡಿಕೊಂಡಿದೆ. ಈ ಮೂಲಕ ಸಮಾಜವಾದ ಹಾಗೂ ಬಡವರ ಪರ ಮಾತನಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ, ಬಂಡವಾಳಶಾಹಿಗಳಿಗೆ ಮಣೆ ಹಾಕಿದೆ!!
ಹೌದು, ತಮ್ಮದು ಬಡವರ ಪರ ಸರ್ಕಾರ, ಅಹಿಂದ ಪರವಾಗಿಯೇ ನಮ್ಮ ಯೋಜನೆಗಳು, ದೀನ ದ..ರ ಅಭಿವೃದ್ಧಿಯೇ ನಮ್ಮ ಗುರಿ. ಆದರೆ, ಬಿಜೆಪಿ ಹಾಗೂ ನರೇಂದ್ರ ಮೋದಿ ಕಾರ್ಪೊರೇಟ್ ಸಂಸ್ಕೃತಿಯವರು. ಮೋದಿ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿದ್ದಾರೆ. ದೇಶದ ಬಡ ರೈತನಿಂದ ಹಿಡಿದು, ಜನ ಸಾಮಾನ್ಯರ ಹಿತವನ್ನು ಕಡೆಗಣಿಸಿರುವ ಮೋದಿ, ಉದ್ಯಮಿಗಳಿಗೆ ಹಾಗೂ ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ದೇಶವನ್ನು ಮಾರಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿಯಿಂದ ಮೊದಲ್ಗೊಂಡು, ಕಾಂಗ್ರೆಸ್‌ನ ಕೆಲ ಹಂತದ ಕಾರ್ಯಕರ್ತನವರೆಗೂ ಹೀಗಳೆದಿದ್ದರು. ಮತ್ತಷ್ಟು ಓದು 
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೊಂದು ಬಹಿರಂಗ ಪತ್ರ
– ನಾಗರಾಜ್ ಹೆತ್ತೂರು
ಕಾರ್ಯಾಧ್ಯಕ್ಷರು, ಅಂಬೇಡ್ಕರ್ ಯುವ ಸೇನೆ ರಾಜ್ಯ ಸಮಿತಿ
ವಿಷಯ: ಅಕಾಡೆಮಿ ಪ್ರಶಸ್ತಿ ಮೌಲ್ಯವನ್ನು ಉಳಿಸಲು ಮತ್ತು ವಾಪಾಸು ಮಾಡಿದ ಪ್ರಶಸ್ತಿಗಳನ್ನು ಆಯಾ ಸಾಲಿನ ಪ್ರಶಸ್ತಿ ವಂಚಿತ ಪ್ರತಿಭಾವಂತರಿಗೆ ನೀಡಲು ಒತ್ತಾಯ
ನಮ್ಮೆಲ್ಲರ ಪ್ರೀತಿಯ ಸಾಹಿತಿಗಳೂ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿಪಟ್ಟಣಶೆಟ್ಟಿ ಅವರಿಗೆ ನಮಸ್ಕಾರಗಳು. ತಾವು ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಅಕಾಡೆಮಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ಇತರೆ ಎಲ್ಲಾ ಅಕಾಡೆಮಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಈ ನಡುವೆ ಕೆಲವು ತಿಂಗಳಿಂದ ದೇಶದಲ್ಲಿ ಸಹಿಷ್ಣುತೆ-ಅಸಹಿಷ್ಣುತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ನಮ್ಮೊಳಗಿನ ಪ್ರಮುಖ ಚಿಂತಕರಾದ ಕಲಬುರ್ಗಿ ಅವರ ಹತ್ಯೆ ನಂತರ ರಾಜ್ಯದಲ್ಲಿ ಈ ಕುರಿತು ದೊಡ್ಡ ಜನಾಭಿಪ್ರಾಯ ರೂಪಿತವಾಗಿದ್ದು ಕೆಲವು ಸಾಹಿತಿಗಳು ಪ್ರಶಸ್ತಿ ವಾಪಾಸ್ ನೀಡುವ ಮೂಲಕ ಪ್ರತಿಭಟನಾತ್ಮಕ ನಡೆ ಇಟ್ಟಿದ್ದಾರೆ. ಈಚೆಗೆ ಅಕಾಡೆಮಿ ಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕಿರಿಯ ಸಾಹಿತಿಯೊಬ್ಬರು ಪ್ರಶಸ್ತಿ ಬಹಿಷ್ಕರಿಸಿ, ನಿಮಗೆ ಮತ್ತು ಮಾಧ್ಯಮಗಳಲ್ಲಿ ಪತ್ರ ಬರೆದಿದ್ದನ್ನು ಗಮನಿಸಿದ್ದೇವೆ. ಅವರ ಪ್ರತಿಭಟನೆ ಹಕ್ಕನ್ನು ಗೌರವಿಸುತ್ತೇವೆ. ಕಲಬುರ್ಗಿ ಸೇರಿದಂತೆ ದೇಶದಲ್ಲಿ ನಡೆದ ಸಾಹಿತಿಗಳ ಅವರ ಹತ್ಯೆಯನ್ನು ಖಂಡಿಸುತ್ತೇವೆ ಮತ್ತು ಈ ಸಂಬಂಧ ಪ್ರತಿಭಟನೆ ಮಾಡಿ ಸರಕಾರಕ್ಕೆ ಒತ್ತಾಯಿಸಿದ್ದೇವೆ ಎಂಬುದನ್ನು ನಿಮಗೆ ನೆನಪಿಸುತ್ತಲೇ ಪ್ರಶಸ್ತಿ ವಾಪಾಸತಿ ಕುರಿತಂತೆ ಕೆಲವು ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದು ಈ ಬಗ್ಗೆ ಸಾರ್ವಜನಿಕ ಹಿತಾದೃಷ್ಟಿಯಿಂದ ಅಕಾಡೆಮಿ ಕೆಲವು ಸ್ಪಷ್ಟೀಕರಣ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.
ಕಳೆದುಹೋಗುತ್ತಿರುವ ದಲಿತ ಚಿಂತನೆ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
ದಲಿತ ಸಾಹಿತ್ಯವಲಯ ಒಂದಿಷ್ಟು ಹೆಚ್ಚೇ ಎನ್ನುವಷ್ಟು ಮುನಿಸಿಕೊಂಡಿದೆ. ಅದಕ್ಕೆಂದೇ ಕಳೆದ ಆರು ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುತ್ತಿರುವರು. ಸಾಹಿತ್ಯದ ಮುಖ್ಯವಾಹಿನಿಯಲ್ಲಿ ನಮಗೆ ಪ್ರವೇಶ ದೊರೆಯುತ್ತಿಲ್ಲ, ಪ್ರಶಸ್ತಿ-ಪುರಸ್ಕಾರ-ಗೌರವಗಳಿಂದ ನಾವು ವಂಚಿತರು, ದಲಿತ ಸಾಹಿತ್ಯ ಮತ್ತು ಬರಹಗಾರರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಕನ್ನಡದ ದಲಿತ ಸಾಹಿತ್ಯವಲಯ ತನ್ನ ಅಸ್ಮಿತೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಿಜಕ್ಕೂ ಕನ್ನಡದ ಒಟ್ಟು ಸಾಹಿತ್ಯ ಕ್ಷೇತ್ರಕ್ಕೆ ಆತಂಕ ತಂದೊಡ್ಡುತ್ತಿರುವ ಬೆಳವಣಿಗೆಯಿದು. ದಲಿತ ಸಾಹಿತ್ಯ ಈಗ ಕನ್ನಡ ಸಾಹಿತ್ಯದ ಬಹುಮುಖ್ಯ ಭಾಗ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಇತಿಹಾಸವನ್ನು ನೋಡುವುದು ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಅಸಾಧ್ಯದ ಸಂಗತಿ. ಹಾಗೆ ನೋಡುವುದು ಕೂಡ ಸಲ್ಲದು. ಹಾಗೊಂದು ವೇಳೆ ದಲಿತ ಸಾಹಿತ್ಯವನ್ನು ಹೊರಗಿಟ್ಟು ನೋಡಿದಲ್ಲಿ ಕನ್ನಡ ಸಾಹಿತ್ಯದ ಒಟ್ಟು ಚಿತ್ರಣ ನಮಗೆ ದಕ್ಕಲಾರದು. ಇಲ್ಲಿ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ ಸಹ ಕನ್ನಡದ ಬಹುಮುಖ್ಯ ಬರಹಗಾರರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ದಲಿತ ಬರಹಗಾರರು ನೀಡಿದ ಕೊಡುಗೆ ತುಂಬ ಮೌಲಿಕವಾದದ್ದು. ಇವತ್ತು ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ಮುಖ್ಯಧಾರೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಅನೇಕ ದಲಿತ ಲೇಖಕರ ಸಾಹಿತ್ಯವನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ದಲಿತೇತರ ಬರಹಗಾರರು ಇಲ್ಲಿರುವರು. ಕಾರಂತರ ‘ಚೋಮನ ದುಡಿ’ಯಷ್ಟೇ ಮಹಾದೇವರ ‘ಕುಸುಮ ಬಾಲೆ’ ಸಹ ಅಸಂಖ್ಯಾತ ಓದುಗರ ಓದಿನ ವ್ಯಾಪ್ತಿಗೆ ದಕ್ಕಿದೆ. ಅನೇಕ ದಲಿತ ಲೇಖಕರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿರುವರು. ದಲಿತ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುತ್ತಿಲ್ಲ ಎನ್ನುವ ಆಪಾದನೆಯಿಂದ ಕಳಚಿಕೊಳ್ಳುವ ಪ್ರಯತ್ನವಾಗಿ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಲಿಂಗಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ದಲಿತ ಸಾಹಿತಿಗಳನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ. ಹೀಗಿದ್ದೂ ದಲಿತ ಸಾಹಿತ್ಯವಲಯ ಮುನಿಸಿಕೊಂಡಿದೆ.
ಕನ್ನಡ ಭಾಷೆಯ ಆತಂಕಗಳು
– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ದೇಶದ ಬಹುದೊಡ್ಡ ರಾಜ್ಯದ ನಾಡ ಭಾಷೆಯಾಗಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುವ ಅಪಾಯವಿರುತ್ತದೆ. ಇದಕ್ಕೆ ಲಿಪಿಯಿಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಉದಾಹರಣೆಯಾಗಿ ಹೇಳಬಹುದು. ಭಾಷೆಯೊಂದು ಗಟ್ಟಿಯಾಗಿ ತಳವೂರಿ ಬೆಳೆಯಲು ಆ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಈ ನಾಡಿನಲ್ಲಿ ಸಮೃದ್ಧವಾಗಿ ಬಳಸಿಕೊಳ್ಳಲಾಗಿದೆ. ಅದಕ್ಕೆಂದೇ ಕನ್ನಡ ಭಾಷೆಯಲ್ಲಿ ಸಾಹಿತ್ಯ ಮತ್ತಿತರ ಸೃಜನಶೀಲತೆಯ ಫಸಲು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅಮೋಘವರ್ಷ ನೃಪತುಂಗನ ಕಾಲದಿಂದ ಕುವೆಂಪು, ಕಾರಂತ, ಬೇಂದ್ರೆ ಮತ್ತು ನವ್ಯದ ಅಡಿಗರು, ಅನಂತಮೂರ್ತಿ, ಲಂಕೇಶ್, ಭೈರಪ್ಪನವರವರೆಗೆ ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕೃತಿಗಳು ರಚನೆಯಾದವು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅನೇಕ ಅಗ್ನಿದಿವ್ಯಗಳನ್ನು ಹಾದು ತನ್ನತನ ಮತ್ತು ಸಮೃದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಕಳೆದ ಮೂರು ದಶಕಗಳಿಂದ ಕನ್ನಡಕ್ಕೆ ಎದುರಾದ ಸಮಸ್ಯೆಗಳು ಈ ನೆಲದ ಭಾಷೆಯನ್ನು ಜರ್ಜರಿತಗೊಳಿಸಿವೆ. ಪರಭಾಷೆಗಳ ಪೈಪೋಟಿ, ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲಿಷ್ ಭಾಷೆ, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತಿದೆ.
ಪ್ರಶಸ್ತಿಯ ಮಾನ ಕಳೆದ ಅಕಾಡೆಮಿ
– ರಾಕೇಶ್ ಶೆಟ್ಟಿ
ಕೆಲವು ವ್ಯಕ್ತಿಗಳು ಪ್ರಶಸ್ತಿಗಳನ್ನು ಮೀರಿ ಬೆಳೆದಿರುತ್ತಾರೆ.ಅವರ ವ್ಯಕ್ತಿತ್ವದ ಮುಂದೆ ಪ್ರಶಸ್ತಿಯೂ ಕುಬ್ಜವೆನಿಸುತ್ತದೆ. ಮಹಾತ್ಮ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ಅಥವಾ ನೇತಾಜಿ ಸುಭಾಷ್ ಅವರಿಗೆ ಭಾರತ ರತ್ನವನ್ನು ಕೊಟ್ಟರೇ,ಪ್ರಶಸ್ತಿಗಳೇ ಕುಬ್ಜವಾಗಿ ಬಿಡುತ್ತವೆ.ಇನ್ನೊಂದಿಷ್ಟು ವ್ಯಕ್ತಿತ್ವಗಳು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸುತ್ತವೆ.ಡಿ.ವಿ.ಜಿ,ಕುವೆಂಪು,ಕಾರಂತರಂತಹ ಶ್ರೇಷ್ಟ ಸಾಹಿತಿಗಳು ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿಗೆ ಭಾಜನಾರಾಗಿ ‘ಪ್ರಶಸ್ತಿ’ಗೆ ಮೆರುಗು ತಂದವರು.
೨೦೧೩ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಪಟ್ಟಿ ನೋಡಿದರೇ,ಈ ಹಿಂದೆ ಪ್ರಶಸ್ತಿ ಸ್ವೀಕರಿಸಿದ ಮಹಾನ್ ಚೇತನಗಳಿಗೇ ಅವಮಾನ ಮಾಡುವಂತಿದೆ. “ಶ್ರೀರಾಮ ಅಪ್ಪನಿಗೆ ಹುಟ್ಟಿದವನಲ್ಲ;ಕುಂತಿ ಮಕ್ಕಳನ್ನು ಹೆತ್ತಿದ್ದು ಕೂಡಾ ವ್ಯಭಿಚಾರದಿಂದ; ಭಗವದ್ಗೀತೆಯನ್ನು ಸುಡಬೇಕು;ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ” ಹೀಗೆ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ,ಒಂದು ಸಮುದಾಯವನ್ನು ಹಿಂಸೆಗೆ ಪ್ರಚೋದಿಸುವಂತಹ ಬೇಜವಬ್ದಾರಿ ಹೇಳಿಕೆಗಳನ್ನು ಒಂದು ವರ್ಷದಿಂದೀಚೆಗೆ ನೀಡುತ್ತ ಬಂದಿರುವ ಪ್ರೊ.ಭಗವಾನ್ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರವೂ ಸಹ ಇಂತ ಶಾಂತಿ ಭಂಗ ತರುವ ಹೇಳಿಕೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದಂತಿದೆ.ಅಷ್ಟಕ್ಕೂ ಭಗವಾನ್ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಕೃತಿಗಳಿಂದ ಹೆಸರು ಮಾಡಿದವರಲ್ಲ ಬದಲಿಗೆ ‘ಬೈಗುಳ’ಗಳಿಂದ ಚಾಲ್ತಿಗೆ ಬಂದವರು.ಭಗವಾನರ ಬಡಬಡಿಕೆಗಳನ್ನೇ ವೈಚಾರಿಕತೆ ಎಂದು ಬಿಂಬಿಸುವುದು ರಾಜ್ಯದ ವೈಚಾರಿಕ ಪರಂಪರೆಗೂ ಅವಮಾನ.
ಆಳ್ವಾಸ್ ನುಡಿಸಿರಿ – 2015
– ಡಾ| ಎಂ.ಮೋಹನ ಆಳ್ವ
ಅಧ್ಯಕ್ಷರು,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ),ಮೂಡುಬಿದಿರೆ
ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಈ ಸಮ್ಮೇಳನವನ್ನು ಕಳೆದ 12 ವರ್ಷಗಳಿಂದ ಕನ್ನಡ ಬಾಂಧವರ ಸಹಕಾರದಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ಸಾಧ್ಯವಾಗಿದೆ. ಕನ್ನಡಿಗರ ಹೆಮ್ಮೆಯ ಈ ಕಾರ್ಯಕ್ರಮವು ಈ ವರ್ಷ ನವೆಂಬರ್ 26, 27, 28 ಮತ್ತು 29 (ಗುರುವಾರ, ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ) ನೇ ದಿನಾಂಕಗಳಂದು ನಾಲ್ಕು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಆಳ್ವಾಸ್ ನುಡಿಸಿರಿ ಉದ್ಘಾಟನೆಗೆ ನೂತನ ವೇದಿಕೆ
ನವೆಂಬರ್ 26 ರಂದು ಸಂಜೆ ಗಂಟೆ 6.00 ಕ್ಕೆ ಆಳ್ವಾಸ್ ನುಡಿಸಿರಿಯ ಉದ್ಘಾಟನೆಯು ಅದಕ್ಕೆಂದೇ ನಿರ್ಮಾಣವಾದ ವೇದಿಕೆಯಲ್ಲಿ ನಡೆಯಲಿದೆ. ಸುಮಾರು 20,000 ಪ್ರೇಕ್ಷಕರು ನೋಡಿ ಆನಂದಿಸಬಹುದಾದ ಬೃಹತ್ ಸಭಾಂಗಣವು ಇದಾಗಿದೆ. ಉಳಿದಂತೆ, 27, 28, 29ನೇ ದಿನಾಂಕಗಳಂದು ‘ಕರ್ನಾಟಕ : ಹೊಸತನದ ಹುಡುಕಾಟ’ ಎನ್ನುವ ಪ್ರಧಾನ ಪರಿಕಲ್ಪನೆಯಲ್ಲಿ ವಿವಿಧ ಗೋಷ್ಠಿಗಳು, ಸಂಸ್ಮರಣೆ, ಕವಿಸಮಯ-ಕವಿನಮನ, ವಿಶೇಷೋಪನ್ಯಾಸಗಳು ರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ನಡೆಯಲಿವೆ. 29ನೇ ದಿನಾಂಕದಂದು 3.00 ಗಂಟೆಗೆ ಸಮಾರೋಪ ಸಮಾರಂಭವು ಜರುಗಲಿದೆ.
ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷತೆಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆ.
ಮತ್ತಷ್ಟು ಓದು 
ಡಾ. ಯು.ಆರ್ ಅನಂತಮೂರ್ತಿ ನೆನಪಿನಲ್ಲಿ
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಕನ್ನಡದ ಶ್ರೇಷ್ಟ ಬರಹಗಾರ ಮತ್ತು ಚಿಂತಕ ಡಾ.ಯು.ಆರ್.ಅನಂತಮೂರ್ತಿ ನಿಧನರಾಗಿ ಅಗಸ್ಟ್ 22 ಕ್ಕೆ ಒಂದು ವರ್ಷವಾಯಿತು. ತಮ್ಮ ಸಮಗ್ರ ಸಾಹಿತ್ಯದ ಮೂಲಕ ಕನ್ನಡಕ್ಕೆ ಆರನೆ ಜ್ಞಾನಪೀಠ ತಂದುಕೊಟ್ಟು ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ ಡಾ.ಯು.ಆರ್.ಅನಂತಮೂರ್ತಿ ಅವರು ಸಂಸ್ಕಾರ, ಭವ, ಘಟಶ್ರಾದ್ಧ, ಬರ ಹೀಗೆ ಸಂಖ್ಯಾತ್ಮಕ ದೃಷ್ಟಿಯಿಂದ ಬೆರಳೆಣಿಕೆಯ ಕಾದಂಬರಿಗಳನ್ನು ಮತ್ತು ಕೆಲವು ಕಥಾ ಸಂಕಲನಗಳನ್ನು ಬರೆದು ಬರೆದದ್ದು ಕಡಿಮೆ ಎಂದೆನಿಸಿದರೂ ಅವರು ಬರೆದದ್ದೆಲ್ಲ ತುಂಬ ಮೌಲಿಕವಾದದ್ದು. 1960 ರ ದಶಕದಲ್ಲಿ ‘ಸಂಸ್ಕಾರ’ದಂಥ ಸಂಪ್ರದಾಯ ವಿರೋಧಿ ಕಾದಂಬರಿಯನ್ನು ಅದು ಕುರುಡು ನಂಬಿಕೆಗಳು ಅತ್ಯಂತ ಪ್ರಸ್ತುತವಾಗಿದ್ದ ದಿನಗಳಲ್ಲಿ ಬರೆಯಲು ಸಾಧ್ಯವಾಗಿದ್ದು ಮೂರ್ತಿಗಳಲ್ಲಿದ್ದ ಸಮಾಜದ ಕುರಿತಾದ ಕಳಕಳಿಗೆ ನಿಜವಾದ ದೃಷ್ಟಾಂತ. ಸಂಪ್ರದಾಯವನ್ನು ವಿರೋಧಿಸಿ ಬರೆಯಲು ತಮಗೆ ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಮ್ಮ ಆತ್ಮಕಥನ ‘ಸುರಗಿ’ಯಲ್ಲಿ ಹೀಗೆ ಹೇಳಿಕೊಂಡಿರುವರು ‘ಅಪ್ಪ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದ ಹೊಲದ ಕೆಲಸದ ಆಳನ್ನು ತಮ್ಮ ಸಮಕ್ಕೆ ಕೂಡಿಸಿಕೊಂಡು ಊಟ ಹಾಕುತ್ತಿದ್ದ ಅಂದಿನ ಮನೆಯ ವಾತಾವರಣವೇ ನಾನು ಬದುಕುತ್ತಿದ್ದ ವ್ಯವಸ್ಥೆಯನ್ನು ವಿರೋಧಿಸಿ ಬರೆಯಲು ಸ್ಪೂರ್ಥಿ ನೀಡಿತು’. ಸಂಪ್ರದಾಯಗಳು ಜಡ್ಡುಗಟ್ಟಿದ ಆ ದಿನಗಳಲ್ಲೇ ಅನಂತಮೂರ್ತಿ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದು ಅವರೊಳಗಿನ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಕೇವಲ ಉಪದೇಶಿಸದೆ ಹೇಳಿದ್ದನ್ನು ಸ್ವತ: ಕಾರ್ಯಗತ ಮಾಡಿತೋರಿಸಿದ ಅವರೊಳಗಿನ ಈ ಧಾಡಸಿತನದ ಗುಣವೇ ಅವರನ್ನು ವಿರೋಧಿಸುವವರಂತೆ ಮೆಚ್ಚುವ ಮತ್ತು ಅಭಿಮಾನಿಸುವ ಅಭಿಮಾನಿಗಳ ಪಡೆಯನ್ನೇ ಸೃಷ್ಟಿಸಿತು. ಡಾ.ಯು.ಆರ್.ಅನಂತಮೂರ್ತಿ ವೈಚಾರಿಕವಾಗಿ ಅತ್ಯಂತ ಪ್ರಬುದ್ಧರಾಗಲು ಮತ್ತು ತಾನು ಬದುಕುತ್ತಿದ್ದ ವ್ಯವಸ್ಥೆಯ ಅಪಸವ್ಯಗಳನ್ನು ವಿರೋಧಿಸುವಂತಾಗಲು ಅವರು ಪಡೆದ ಇಂಗ್ಲಿಷ್ ಶಿಕ್ಷಣವೂ ಕಾರಣವಾಯಿತು. ಬರ್ಮಿಂಗ್‍ಹ್ಯಾಮ್ ಯುನಿವರ್ಸಿಟಿಯಲ್ಲಿನ ಇಂಗ್ಲಿಷ್ ಶಿಕ್ಷಣ ಅವರನ್ನು ಬರಹಗಾರನ ಜೊತೆಗೆ ಒಬ್ಬ ಚಿಂತಕನನ್ನಾಗಿಯೂ ರೂಪಿಸಿತು. ಅದಕ್ಕೆಂದೇ ಅವರು ತಮ್ಮ ಬರಹ ಮತ್ತು ವೈಚಾರಿಕ ಚಿಂತನೆಗಳಿಂದ ತಾವು ಬದುಕುತ್ತಿದ್ದ ಸಮಾಜವನ್ನು ಕಾಲಕಾಲಕ್ಕೆ ಜಾಗೃತಗೊಳಿಸುತ್ತಲೇ ಬಂದರು. ಬರಹಗಾರನೊಬ್ಬ ಸಮಾಜದ ಸಮಸ್ಯೆಗಳು ಮತ್ತು ವ್ಶೆರುಧ್ಯಗಳಿಗೆ ಸದಾಕಾಲ ಮುಖಾಮುಖಿಯಾಗಿರಬೇಕು ಎನ್ನುವ ನಿಲುವು ಅವರದಾಗಿತ್ತು. ಉತ್ತಮವಾದದ್ದನ್ನು ಉತ್ತೇಜಿಸಿ ಮಾತನಾಡುತ್ತಿದುದ್ದಕಿಂತ ತಮಗೆ ಸರಿಕಾಣದ್ದನ್ನು ಅವರು ಖಂಡಿಸಿ ಮಾತನಾಡಿದ್ದೇ ಹೆಚ್ಚು. ಲೇಖಕ ಸತ್ಯನಾರಾಯಣ ಅವರು ಹೇಳುವಂತೆ ಲೇಖಕನಾದವನ ಕೆಲಸ ಸದಾಕಾಲ ಓದುಗರಿಗೆ ಪ್ರಿಯವಾದದ್ದನ್ನೇ ಹೇಳುವುದಲ್ಲ ಎನ್ನುವ ಮಾತು ಅನಂತಮೂರ್ತಿ ಅವರಿಗೆ ಹೆಚ್ಚು ಅನ್ವಯವಾಗುತ್ತದೆ. ಈ ಕಾರಣದಿಂದಲೇ ಅವರು ‘ಬರಹಗಾರ ಏನನ್ನೂ ಸುಲಭವಾಗಿ ಒಪ್ಪಿಕೊಳ್ಳದೆ ಎಲ್ಲವನ್ನೂ ಅನುಮಾನದಿಂದ ನೋಡಬೇಕು’ ಎಂದು ಯುವಬರಹಗಾರರಿಗೆ ಕಿವಿಮಾತು ಹೇಳುತ್ತಿದ್ದರು.
ಮತ್ತಷ್ಟು ಓದು 
ನೂರರ ಹೊಸ್ತಿಲಲ್ಲಿ ಕನ್ನಡ ಸಾಹಿತ್ಯ ಪರಿಷತ್ತು
– ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರರ ಹೊಸ್ತಿಲಲ್ಲಿ ನಿಂತಿದೆ. 1915 ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಏಳು ಬೀಳುಗಳ ನಡುವೆಯೂ ನೂರು ವರ್ಷಗಳನ್ನು ಪೂರೈಸುತ್ತಿರುವುದು ಕನ್ನಡಿಗರಾದ ನಮಗೆಲ್ಲ ಅಭಿಮಾನದ ಸಂಗತಿಯಿದು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗಾಗಿ ಅಂದಿನ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಆದತ್ಯೆ ನೀಡಿದರು. ಇಂಥದ್ದೊಂದು ಕನ್ನಡ ಸಂಸ್ಥೆಯ ಸ್ಥಾಪನೆಗೆ ಆ ದಿನಗಳ ಅನೇಕ ಸಾಹಿತಿಗಳ ಬೇಡಿಕೆಯೂ ಇತ್ತು. ಸರ್ ಎಮ್.ವಿಶ್ವೇಶ್ವರಯ್ಯ ಮತ್ತು ಕರ್ಪೂರ ಶ್ರೀನಿವಾಸರಾವ್ ಕನ್ನಡ ಸಾಹಿತ್ಯದ ರಕ್ಷಣೆಗಾಗಿ ಪರಿಷತ್ತನ್ನು ಸ್ಥಾಪಿಸಲು ಕಂಕಣಬದ್ಧರಾಗಿ ದುಡಿದರು. ಒಟ್ಟಾರೆ ಎಲ್ಲರ ಪ್ರಯತ್ನ ಮತ್ತು ಆಸೆಯಂತೆ 05.05.1915 ರಂದು ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿನ ಸಣ್ಣ ಕೊಠಡಿಯೊಂದರಲ್ಲಿ ಸ್ಥಾಪನೆಯಾದ ಪರಿಷತ್ತಿಗೆ ನಂತರದ ದಿನಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ, ಉತ್ತಂಗಿ ಚೆನ್ನಪ್ಪ, ಹಂ.ಪಾ.ನಾಗರಾಜಯ್ಯ, ಮೂರ್ತಿರಾವ್, ವೆಂಕಟಸುಬ್ಬಯ್ಯ, ಗೊರುಚ, ಚಂಪಾ ಅವರಂಥ ಖ್ಯಾತನಾಮ ಸಾಹಿತಿಗಳ ಅಧ್ಯಕ್ಷತೆ ಲಭ್ಯವಾಯಿತು. ಸಣ್ಣ ಕೊಠಡಿಯಿಂದ ಸ್ವತಂತ್ರ ಕಟ್ಟಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳಾಂತರಗೊಂಡು ಕನ್ನಡ ಸಾಹಿತ್ಯದ ಮತ್ತು ನಾಡಿನ ರಕ್ಷಣೆಯ ಕೆಲಸದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿತು. ಪುಸ್ತಕಗಳ ಪ್ರಕಟಣೆ, ಸಾಹಿತ್ಯ ಸಮ್ಮೇಳನದ ಏರ್ಪಾಡು, ದತ್ತಿ ಉಪನ್ಯಾಸ ಇತ್ಯಾದಿ ಚಟುವಟಿಕೆಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಬಹುಬೇಗ ಜನರಿಗೆ ಹತ್ತಿರವಾಯಿತು. ಪ್ರಾರಂಭದ ದಿನಗಳಲ್ಲಿ ದೊರೆತ ಸಾಹಿತ್ಯಾಸಕ್ತರ ನೆರವು ಮತ್ತು ಅವರುಗಳ ಪ್ರಾಮಾಣಿಕ ದುಡಿಮೆಯ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ತು ಬಹಳಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸಲು ಹಾಗೂ ಯಶಸ್ಸನ್ನು ಕಾಣಲು ಸಾಧ್ಯವಾಯಿತು.
ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸವಾಲುಗಳು
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ
ಈ ವಿಷಯ ಮೊನ್ನೆ ಗೊತ್ತಾಯಿತು. ಲೇಖಕ ಮತ್ತು ಪ್ರಕಾಶಕರಾಗಿರುವ ನನ್ನ ಸ್ನೇಹಿತರೋರ್ವರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಉಲ್ಲೇಖಿಸಿದಂತೆ ಪುಸ್ತಕದ ಮೂರು ನೂರು ಪ್ರತಿಗಳನ್ನು ಕಳುಹಿಸಿಕೊಡುವಂತೆ ಹಾಗೂ ಪುಸ್ತಕದ ಪ್ರತಿ ಪುಟಕ್ಕೆ 40 ಪೈಸೆಗಳ ಬೆಲೆ ನಿಗದಿಪಡಿಸಲಾಗಿರುವುದನ್ನು ಸೂಚಿಸಲಾಗಿತ್ತು. ನನ್ನ ಸ್ನೇಹಿತನ ಪುಸ್ತಕ ಒಟ್ಟು ನೂರು ಪುಟಗಳಲ್ಲಿದ್ದು ಅದರ ಮುಖ ಬೆಲೆ ಎಪ್ಪತ್ತು ರೂಪಾಯಿಗಳಾಗಿತ್ತು. ಹೀಗಿದ್ದೂ ಆತ ಒಂದು ಪ್ರತಿಗೆ ನಲವತ್ತು ರೂಪಾಯಿಗಳಂತೆ 300 ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಈ ಪುಸ್ತಕದ ಮಾರಾಟದಿಂದ ಅವನಿಗೇನಾದರೂ ಲಾಭವಾಗಿರಬಹುದೆ ಎನ್ನುವ ಸಂದೇಹ ನನ್ನನ್ನು ಕಾಡುತ್ತಿರುವ ಹೊತ್ತಿನಲ್ಲೇ ಆತ ಪ್ರಕಟಣೆಯ ಮೇಲೆ ಆದ ಖರ್ಚಿನ ಲೆಕ್ಕ ಒಪ್ಪಿಸಿದ. ಪುಸ್ತಕದ ಒಟ್ಟು ಸಾವಿರ ಪ್ರತಿಗಳ ಪ್ರಕಟಣೆಗಾಗಿ ಆತ ಮುದ್ರಕರಿಗೆ ಕೊಟ್ಟ ಹಣ ಬರೊಬ್ಬರಿ ಮೂವತ್ತು ಸಾವಿರ ರೂಪಾಯಿಗಳು.ಈ ನಡುವೆ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕಾಗಿ ನಾಲ್ಕೈದು ಸಾವಿರ ರೂಪಾಯಿಗಳು ಖರ್ಚಾದವು. ಸಾವಿರ ಪ್ರತಿಗಳು ಕೈಸೇರಿದಾಗ ಅವುಗಳಲ್ಲಿ ನೂರರಿಂದ ನೂರೈವತ್ತು ಪ್ರತಿಗಳು ಗೌರವ ಪ್ರತಿ ರೂಪದಲ್ಲಿ ಪುಕ್ಕಟ್ಟೆಯಾಗಿ ಕೈಬಿಟ್ಟವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡುವುದರಿಂದ ಬರುವ ಹಣ ಹನ್ನೆರಡು ಸಾವಿರ ರೂಪಾಯಿಗಳು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳೇನೋ ಶೇಕಡಾ 20ರ ರಿಯಾಯಿತಿ ದರದಲ್ಲಿ ಮಾರಾಟವಾದರೂ ಅವರಿಂದ ಬರಬೇಕಾದ ರೂ.11,200/- ಇನ್ನೂ ಆತನ ಕೈಸೇರಿಲ್ಲ. ಸುಮಾರು ಮೂರು ನೂರು ಪ್ರತಿಗಳು ಮಾರಾಟವಾಗದೆ ಹಾಗೇ ಉಳಿದುಕೊಂಡಿವೆ.
ಮಾನ ಕಳೆದುಕೊಂಡ ಸನ್ಮಾನಗಳು
– ರೋಹಿತ್ ಚಕ್ರತೀರ್ಥ
ನಾನು ಮಾಡಿದ ಕೆಲಸ ಸರಿಯಿದೆ ಎಂದು ಒಪ್ಪಿದರೆ ಸಾಕು. ಅದೇ ನನಗೆ ಬಹುದೊಡ್ಡ ಪ್ರಶಸ್ತಿ. ಬೇರೆ ಬಹುಮಾನ ಏಕೆ? – ಎಂದ ಗ್ರೆಗೊರಿ ಪೆರೆಲ್ಮನ್. ಅವನ ಕೆಲಸದ ಔನ್ನತ್ಯವನ್ನು ಮೆಚ್ಚಿ ಒಂದು ಮಿಲಿಯ ಡಾಲರ್‍ಗಳನ್ನು (ಅಂದರೆ, ಆರು ಕೋಟಿ ರುಪಾಯಿ!) ಹಿಡಿದು ನಿಂತಿದ್ದವರಿಗೆ ಬಾಗಿಲು ಕೂಡ ತೆರೆಯಲಿಲ್ಲ ಆ ಮಹರಾಯ! ನಿಮ್ಮನ್ನು ಒಳಬಿಟ್ಟೆನೆಂದರೆ, ಹಿಂದೆಯೇ ಪತ್ರಕರ್ತರು ತೂರಿಕೊಂಡು ಒಳಸೇರುತ್ತಾರೆ. ನೂರೆಂಟು ಪ್ರಶ್ನೆ ಕೇಳಿ ತಲೆ ತಿನ್ನುತ್ತಾರೆ. ಇನ್ನು ಪತ್ರಿಕೆಗಳಲ್ಲಿ, ಟಿವಿಯಲ್ಲಿ ನನ್ನ ಮುಖ ಕಂಡರೆ ಸಾಕು, ಬೀದಿಯಲ್ಲಿ ಆರಾಮಾಗಿ ನಡೆದುಹೋಗಲಿಕ್ಕೂ ತೊಂದರೆ. ಪ್ರಶಸ್ತಿ ಬಂತು ಅಂತ ಕೈಗೊಂದು-ಕಾಲಿಗೊಂದು ಗೆಳೆಯರು, ನೆಂಟರು ಹುಟ್ಟಿಕೊಳ್ಳುತ್ತಾರೆ. ಇದೆಲ್ಲ ಬೇಕಾ? ಪ್ರಶಸ್ತಿಯೂ ಬೇಡ, ಅದು ತರುವ ನೂರೆಂಟು ತಾಪತ್ರಯಗಳೂ ಬೇಡ ಎಂದು ಎಲ್ಲರನ್ನೂ ಗೇಟ್‍ಪಾಸ್ ಮಾಡಿದ್ದ ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬನಾದ ಪೆರೆಲ್ಮನ್.
“ದುಡ್ಡೇ ಎಲ್ಲ ತೊಂದರೆಗಳಿಗೆ ಬೇರು” ಎಂದು ಸ್ವಾಮೀಜಿಗಳು ಹೇಳಿದಾಗ ಭಕ್ತರೆಲ್ಲ ಒಂದೇ ಧ್ವನಿಯಲ್ಲಿ “ನಮಗೆ ಆ ಬೇರು ಬೇಕು!” ಎಂದು ಕೂಗಿದ್ದರಂತೆ. ಬಹುಶಃ ಈಗ, “ಪ್ರಶಸ್ತಿಯೇ ಎಲ್ಲ ತಾಪತ್ರಯಗಳಿಗೂ ಮೂಲ” ಎಂದು ಹೇಳಿದರೆ, ಸರಕಾರ ಕೊಟ್ಟ ಗೆಡ್ಡೆಗೆಣಸುಗಳಲ್ಲೇ ಉಸಿರು ಹಿಡಿದುಕೊಂಡಿರುವ ಬುದ್ಧಿಜೀವಿಗಳು ನಮಗೂ ಆ ಕಂದಮೂಲ ಬೇಕು ಎಂದು ಪಟ್ಟುಹಿಡಿದಾರು. ಅರ್ಹರನ್ನು ಅನ್ಯರು ಗುರುತಿಸಿ ಪ್ರಶಸ್ತಿಯ ಕಿರೀಟ ತೊಡಿಸಿ ಶಾಲುಹೊದಿಸಿ ಒಂದಷ್ಟು ದುಡ್ಡೋ ಸ್ಮರಣಿಕೆಯೋ ಕೈಯಲ್ಲಿಟ್ಟು ಕೃತಾರ್ಥರಾಗುವ ಕಾಲ ಒಂದಿತ್ತು. ಆದರೆ, ಈಗ ಪ್ರಶಸ್ತಿಗಳನ್ನು ಕೂಡ ಬಿಕರಿಗಿಡಲಾಗಿದೆ. ರಾಜ್ಯ ಅಥವಾ ಕೇಂದ್ರದಲ್ಲಿ ಸರಕಾರ ಬದಲಾದ ಕೂಡಲೇ, ಆಯಾಯಾ ಪಕ್ಷಗಳನ್ನು ಬೆಂಬಲಿಸುವ ಪ್ರತಿಭಾವಂತರು ಚುರುಕಾಗುತ್ತಾರೆ. ಇಷ್ಟು ವರ್ಷ ಆಗದೇ ನೆನೆಗುದಿಗೆ ಬಿದ್ದ ಕೆಲಸವನ್ನು ಈಗ ಹೇಗಾದರೂ ಮಾಡಿಸಿಕೊಳ್ಳಬೇಕು ಎಂದು ಸರಕಾರವೆಂಬ ವೃಂದಾವನಕ್ಕೆ ಸುತ್ತುಬರುತ್ತಾರೆ. ಕಾಯಿ ಒಡೆಯುತ್ತಾರೆ. ಹಣ್ಣು ನೈವೇದ್ಯ ಸಮರ್ಪಣೆ ಮಾಡುತ್ತಾರೆ. ಅಷ್ಟಶತೋತ್ತರ ನಾಮಾವಳಿಯೂ ನಡೆಯುತ್ತದೆ. ಇಷ್ಟೆಲ್ಲ ಪಾಡುಪಟ್ಟ ಭಕ್ತನನ್ನು ಸಂಪ್ರೀತಗೊಳಿಸಲು ಸರಕಾರ ಅವನಲ್ಲಿ ಯಾವ ಪ್ರಶಸ್ತಿ ಬೇಕು ವತ್ಸಾ ಎಂದು ಕೇಳಲೇಬೇಕಾದ ಪರಿಸ್ಥಿತಿ ಬರುತ್ತದೆ. ಪೂಸಿ ಹೊಡೆದು ಗಾಳಿ ಖಾಲಿಯಾದವರು ಯಾವುದಾದರೂ ನಡೆದೀತು ಎಂಬ ಹಂತಕ್ಕೆ ಬಂದಿರುತ್ತಾರೆ. ಆದರೆ, ಕೆಲವು ಜಗಜಟ್ಟಿಗಳು ಇಂಥದ್ದೇ ಬೇಕು, ಅದು ಕೊಡೋದಿಲ್ಲವಾದರೆ ಯಾವುದೂ ಬೇಡ ಎಂದು ರಚ್ಚೆ ಹಿಡಿಯುತ್ತಾರೆ. ಇಂತಹ ಕಂದಮ್ಮಗಳನ್ನು ರಮಿಸಿ ಮುದ್ದಿಸಿ ಹಾಲುಕೊಟ್ಟು ತಣ್ಣಗಾಗಿಸುವ ಹೊತ್ತಿಗೆ ಕೆಲವು ಸಲ ಸರಕಾರಕ್ಕೆ ಹೆಣ ಬಿತ್ತೆನ್ನಿಸುವಷ್ಟು ಸುಸ್ತು ಹೊಡೆಯುವುದೂ ಉಂಟು. ಆದರೇನು ಮಾಡೋಣ? ಸರಕಾರಕ್ಕೆ ತನ್ನ ಪರಾಕುಪಂಪು ಒತ್ತಿಸಿಕೊಳ್ಳಲು ಈ ವಂಧಿಮಾಗಧರ ಗಡಣ ಬೇಕು. ಮತ್ತು ಈ ಗಡಣಕ್ಕೆ ತನ್ನಗಂಟಲನ್ನು ಸದಾ ತೇವವಾಗಿಟ್ಟುಕೊಳ್ಳಲು ನೆರವು ನೀಡುವ ರಾಜಾಶ್ರಯ ಬೇಕು. ಇದು ಸಾರ್ವಜನಿಕ ತೆರಿಗೆ ದುಡ್ಡಿನ ಕೃಪಾಪೋಷಿತ ಪರಸ್ಪರ ಸಹಕಾರ ಸಂಘ.




