ವಿಷಯದ ವಿವರಗಳಿಗೆ ದಾಟಿರಿ

Posts from the ‘ಪುಸ್ತಕ ಪರಿಚಯ’ Category

11
ನವೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 10 -ಮೇಳವನ್ನು ಉಳಿಸಿದ ಹರಕೆಯ ಆಟಗಳು

ಧರ್ಮಸ್ಥಳ ಮೇಳದ ಆಡಳಿತವೆಂದರೆ ಅಷ್ಟು ಸುಲಭವಾಗಿ ತೀರ್ಮಾನಿಸುವ ವಿಷಯವಲ್ಲ. ಸುಲಭದ ಮಾತೂ ಅಲ್ಲ. ತುಂಬಾ ವಿಚಾರ ಮಾಡಿ ನಿರ್ಧರಿಸಬೇಕಾದುದು’ ಎಂದು ಸಿ. ಎಸ್. ಶಾಸ್ತ್ರಿಗಳು ನನ್ನ ಯೋಜನೆಯ ಬಗ್ಗೆ ತಿಳಿಸಿದರು.

ಒಂದೆರಡು ದಿನ ಕಳೆದು ಕಾಣಸಿಕ್ಕಿದ ಶ್ರೀ ರಾಮಕೃಷ್ಣಯ್ಯನವರಲ್ಲೂ ಅದೇ ಆಸೆಯನ್ನು ಪ್ರಸ್ತಾಪಿಸಿದಾಗ ಅವರು-

“ಯಾವುದಕ್ಕೂ ನೀವು ಸ್ಥಳಕ್ಕೆ ಬನ್ನಿ. ಅಲ್ಲಿ ಮಾತನಾಡಿ ನೋಡೋಣ” ಎಂದರು.

ಆ ಮಾತಿಗೆ ಅಣ್ಣನವರ ಒಪ್ಪಿಗೆಯೂ ಸಿಕ್ಕಿತು. ಹಾಗೆ ನಾವಿಬ್ಬರೂ ಧರ್ಮಸ್ಥಳಕ್ಕೆ ಹೋಗಿ ಶ್ರೀಮಾನ್ ಹೆಗ್ಗಡೆಯವರನ್ನು ಭೇಟಿಯಾದೆವು.

ನನ್ನ ಆಸೆಯನ್ನು ಶ್ರೀ ರಾಮಕೃಷ್ಣಯ್ಯನವರೇ ಶ್ರೀ ಹೆಗ್ಗಡೆಯವರೊಂದಿಗೆ ಅರುಹಿದರು.

ಅವರದು ಶೀಘ್ರ ನಿರ್ಧಾರದ ಕ್ರಮವೋ ಏನೋ ಎಂದು ನಾನು ಭಾವಿಸುವ ಹಾಗೆ-

“ಆಗಲಿ ಸಂತೋಷ” ಎಂದು ಅವರ ಅಪ್ಪಣೆ ಬಂದಿತು.

ಮೇಳಕ್ಕೆ ಬೇಕಾದ ವೇಷಭೂಷಣಗಳು ಯಾವುವೆಲ್ಲ ಅಗತ್ಯವಿದೆ ಎಂದು ಒಂದು ಪಟ್ಟಿ ತಯಾರಿಸಿ ಕೊಡಲೂ ಹೇಳಿದರು.

ಅವರಿಂದ ವಾಗ್ದಾನ ಪಡೆದು ಊರಿಗೆ ಬರುವಾಗಲೇ ಧರ್ಮಸ್ಥಳ ಮೇಳವನ್ನು ನಾನು ವಹಿಸಿಕೊಳ್ಳಲಿರುವ ಸುದ್ದಿ ಗಾಳಿಯಲ್ಲಿ ಹರಡತೊಡಗಿತ್ತು.

ಮತ್ತಷ್ಟು ಓದು »

5
ನವೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 9 – ಯುದ್ಧಕಾಲದ ಅಭಾವಗಳ ಬಿಸಿ

“ಈ ವರ್ಷವಾದರೂ ನಮ್ಮ ಮೇಳಕ್ಕೆ ಬನ್ನಿ.” ಶೆಟ್ಟರು ಮನೆಗೆ ಬಂದ ಕಾರಣ ನನಗೆ ಅರ್ಥವಾಯಿತು.”ನಿಮ್ಮಂತಹ ಕಲಾವಿದರು ಹೀಗೆ ಸುಮ್ಮನಿರುವುದು ಸರಿಯಲ್ಲ. ನೀವು ಮೇಳದಲ್ಲಿದ್ದರೆ ಉಳಿದವರಿಗೂ ಮಾರ್ಗದರ್ಶನ ಆದೀತು.”

ನಾನು ಮೇಳದ ತಿರುಗಾಟಕ್ಕೆ ಹೋಗುವುದನ್ನು ನಿಲ್ಲಿಸಿದ ಕಾರಣವನ್ನು ಅವರಿಗೆ ವಿವರಿಸಲೇ ಬೇಕಾಯಿತು. ಆದರೆ, ಆ ತಲೆನೋವಿಗೂ ಅವರು ಚಿಕಿತ್ಸೆ ಬಲ್ಲವರಾಗಿದ್ದರು.

“ನಾನು ಈ ವರ್ಷ ಎರಡು ಮೇಳಗಳನ್ನು ನಡೆಸಬೇಕೆಂದಿದ್ದೇನೆ. ಒಂದು ಮೇಳಕ್ಕಂತೂ ಸರಿಯಾದ ವ್ಯವಸ್ಥಾಪಕನ ಅಗತ್ಯವಿದೆಯಲ್ಲ!” ಎಂದರವರು.

“ಅಂದರೆ?”

“ಅಂದರೆ, ಒಂದು ಮೇಳದ ವ್ಯವಸ್ಥಾಪಕನ ಕೆಲಸವನ್ನು ನೀವು ವಹಿಸಿಕೊಳ್ಳಿ. ಲಾಭ ನಷ್ಟಕ್ಕೆ ಮಾತ್ರ ನಾನು. ಉಳಿದ ಎಲ್ಲ ವಿಚಾರಗಳಿಗೂ ನೀವೇ ಅದರ ಯಜಮಾನರಾಗಿ. ನಿಮ್ಮ ಮನಸ್ಸಿನಂತೆ ಆಟಗಳನ್ನು ಆಡಿ ಪ್ರದರ್ಶಿಸುವ ಅನುಕೂಲ; ನನಗೆ ಒಬ್ಬ ವ್ಯವಸ್ಥಾಪಕನ ಸೌಕರ್ಯ. ನೀವೇ ಹೊಸ ಮೇಳವನ್ನು ನಡೆಸಿರಿ. ಆಗದೇ?”

ವ್ಯವಹಾರಶೂನ್ಯನಾದ ನನ್ನನ್ನು ನಂಬಿ ಸಾವಿರಾರು ರೂ.ಗಳನ್ನು ಸುರಿಯುವುದೆ? ನನ್ನ ಅಸಮರ್ಥತೆಯನ್ನು ಸ್ಪಷ್ಟವಾಗಿ ಹೇಳಿದೆ.

“ಮೊದಲೇ ಹೇಳಿದೆನಲ್ಲ. ನಷ್ಟವಾದರೆ ನನಗೇ ಇರಲಿ.”

“ಆಗಲಿ ನೋಡೋಣ.”

ಮತ್ತಷ್ಟು ಓದು »

14
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 6 – ಕುಣಿಯಲು ಕಲಿತವರೇ …

ನನ್ನ ಇನ್ನೊಬ್ಬ ಗೆಳೆಯರಾದ ಕೆ.ಪಿ. ಗೋಪಾಲಕೃಷ್ಣ ಭಟ್ಟರು ಸಲಹೆ ನೀಡುವವರೆಗೂ ಮೇಳಕ್ಕೆ ಸೇರಿ ವೃತ್ತಿಪರ ಕಲಾವಿದನಾಗುವ ಯೋಚನೆ ನನ್ನ ತಲೆಯಲ್ಲೇ ಸುಳಿದಿರಲಿಲ್ಲ.

ಕೆಲವೊಂದು ಕಡೆ ಆಟಗಳಿಂದ ಆಕರ್ಷಿತನಾದಾಗ, ಒಂದೆರಡು ವೇಷಗಳು ನನ್ನ ಮೇಲೆ ಪ್ರಭಾವ ಬೀರಿದಾಗ ‘ನಾನು ಹಾಗೆ ಕುಣಿಯಲಾಗುತ್ತಿದ್ದರೆ?’ ಎಂದುಕೊಂಡಿದ್ದೆಯೇ ಹೊರತು, ಆರು ತಿಂಗಳ ಕಾಲ ಎಡೆಬಿಡದೆ ಪ್ರತಿ ರಾತ್ರೆಯೂ ಗೆಜ್ಜೆ ಕಟ್ಟುವ ಯೋಚನೆ ಮಾಡಿರಲಿಲ್ಲ.

ಮೇಳಗಳ ನೇರ ಸಂಪರ್ಕವಿರಲಿಲ್ಲವಾದರೂ, ವೇಷ ಹಾಕುವವರು ಕೆಲವರ ಗುರುತಿತ್ತು. ವೇಷಧಾರಿಗಳ ಜೀವನದ ‘ಸೊಗಸು’ ಕಾಣಿಸಿತ್ತು.

ಅವರು ಯಾವ ದೇವಿಯ ವರಪ್ರಸಾದದಿಂದಾಗಿಯೇ ಕಲಾವಿದರಾಗಿರಲಿ, ಬೇರೇನೂ ಉದ್ಯೋಗ ದೊರೆಯದೆಯೇ ಆಟದ ಮೇಳ ಸೇರಲು ಬಂದವರು ಎನ್ನುವ ಭಾವನೆ ಜನರಲ್ಲಿ ಬೇರೂರಿತ್ತು. ಕೆಲವರಂತೂ, ಆ ಭಾವನೆಯನ್ನು ಮತ್ತೂ ಬೆಳೆಸಲು ಸಹಕರಿಸಿದ್ದರೆಂದರೆ ಹೆಚ್ಚಲ್ಲ.

ಮತ್ತಷ್ಟು ಓದು »

7
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 5 – ಕರ್ಣನಿಂದಾಗಿ ಕಣ್ಣೀರು ಬಂತು ….

ಅಡವಿ ಗಿಡ ಮರ ಕಲ್ಲು ನೋಡಿದರೆಯರಸಿನದ ಪುಡಿಯಂತೆ ತೋರುತಿದೆ ತಮ್ಮಾ! ಒಡಲೊಳುರಿ ತಾಪ ಬೇರ್ವಿಡಿದು ಜಠರಾಗ್ನಿಯಲಿ ನಡುಗುತಿದೆ ಕೈ ಕಾಲು ತಮ್ಮಾ” ಎಂದು ಸೀತೆಯನ್ನು ಕಳೆದುಕೊಂಡ ಶ್ರೀರಾಮ ಹಂಬಲಿಸುತ್ತಾನೆ. ಲಕ್ಷ್ಮಣನೊಡನೆ ಅಳಲನ್ನು ತೋಡಿಕೊಳ್ಳುತ್ತಾನೆ. ಪದ್ಯದ ತರುವಾಯ, ರಾಮನ ಉದ್ವೇಗದ ಸಂಪೂರ್ಣ ಚಿತ್ರಣವಾಗಬೇಕಾದರೆ- ತಾಳಮದ್ದಳೆಯ (ಕುಳಿತು ಮಾತನಾಡುವ- ವೇಷವಿಲ್ಲದ) ರಾಮ ಬಹಳ ಮಾತುಗಳನ್ನು ಖರ್ಚು ಮಾಡಬೇಕಾಗುತ್ತದೆ. ಭಾವನೆಗಳು ಮೂಡದೆ ಬರಿಯ ಮಾತುಗಳನ್ನೇ ಹೊರಡಿಸುವವನು ರಾಮನಾಗಿದ್ದರೆ, ಪ್ರೇಕ್ಷಕರಲ್ಲಿ ಪ್ರತಿಕ್ರಿಯೆ ಮೂಡಿಸುವ ಪ್ರಯತ್ನ ನಿರರ್ಥಕ ಎನಿಸುತ್ತದೆ,

ಶೃಂಗಾರ ರಸದ ನಿರೂಪಣೆ ಇರುವ ಪಾತ್ರಗಳಲ್ಲೂ ಅಂತಹುದೇ ಅನುಭವ. ”ಕಾಮಸನ್ನಿಭ ಮಾತ ಕೇಳೂ! ನಿನ್ನೊಳ್! ಕಾಮಿಸಿ ಕಾಮಿಸಿ ಬಂದೆ ಕೃಪಾಳೂ!!” ಎಂದು ಮಾಯಾ ಶೂರ್ಪನಖಿಯು ಲಕ್ಷ್ಮಣನೊಡನೆ ನುಡಿದ ಸನ್ನಿವೇಶದಲ್ಲಿ ಬರಿ ಮಾತಿನ ಬರಡುತನವನ್ನೂ ಕಂಡುಕೊಳ್ಳುವಂತಾಗಿತ್ತು.

ಅತೃಪ್ತಿ
ವೀರರಸದ ಸಂದರ್ಭಗಳಲ್ಲೂ ಅದೇ ತೊಡಕು, ಒಂದೆರಡು ಸನ್ನೆಗಳು, ಎರಡು ಮೂರು ಮಾತುಗಳಲ್ಲಿ ಪರಿಣಾಮಕಾರಿಯಾಗಿ ಮಾಡಬಹುದಾದ ಕೆಲಸಕ್ಕೆ ಬಹಳ ಮಾತುಗಳನ್ನೇ ವೆಚ್ಚ ಮಾಡಿದ ತರುವಾಯವೂ ‘ಇದು ಸಾಕಾಗಲಿಲ್ಲ!’ ಎಂದು ಅತೃಪ್ತಿ.

”ಅರ್ಥ ಉದ್ದವಾಯಿತು.” ಎಂಬ ಮಾತು ಕೇಳಿ ಬಂದರೆ ಅದರಲ್ಲಿ ಆಶ್ಚರ್ಯವೇನು?

ಇಂತಹುದೇ ವಿಚಾರಗಳ ಚರ್ಚೆ ಜಿಜ್ಞಾಸೆಗಳು ಗೆಳೆಯರೊಂದಿಗೆ ಆಗಾಗ ನಡೆಯುತ್ತಿದ್ದವು.
ಮತ್ತಷ್ಟು ಓದು »

1
ಆಕ್ಟೋ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 4 – ಐದು ವರ್ಷಗಳಲ್ಲಿ ಆಸ್ತಿ ಅಡವು

1931ರ ಆರ್ಥಿಕ ಮುಗ್ಗಟ್ಟಿನ ದಿನಗಳ ನೆನಪಿರುವವರು ಬಹಳ ಮಂದಿ. ನಮ್ಮ ನಾಟಕ ಮಂಡಳಿಯಿಂದಾಗಿ ನನಗೂ ಆ ದಿನಗಳ ನೆನಪು ಉಳಿದಿದೆ; ಅಂದಿನ ಮತ್ತು ಇಂದಿನ ಪರಿಸ್ಥಿತಿಗಳ ವ್ಯತ್ಯಾಸವನ್ನು ಜ್ಞಾಪಿಸಿಕೊಳ್ಳುವ ಹಾಗಾಗಿದೆ.

ಆಗ ಊರಿಂದೂರಿಗೆ ಸಾಮಾನು ಸಾಗಿಸುವ ಲಾರಿಗಳ ಸೌಕರ್ಯವಿರಲಿಲ್ಲ. ಸಾಗಾಟಕ್ಕೆ ಸಿಗುತ್ತಿದ್ದುದು ಎತ್ತಿನ ಗಾಡಿಗಳು ಮಾತ್ರ.

ದಶಾವತಾರದ ಮೇಳಗಳಲ್ಲಿ ಇರುತ್ತಿದ್ದ ಸಾಮಾನುಗಳನ್ನು ಸಾಗಿಸಲು ಬಹಳ ಕಷ್ಟವಾಗುತ್ತಿರಲಿಲ್ಲ. ಪರದೆ ಇತ್ಯಾದಿಗಳ ತೊಡಕು ಇಲ್ಲದ ಕಾರಣ, ಕೆಲವು ಪೆಟ್ಟಿಗೆಗಳನ್ನು ತಲೆ ಹೊರೆಯಲ್ಲಿ ಸಾಗಿಸಲು ಸಾಧ್ಯವಾಗುತ್ತಿತ್ತು. ಸಂಚಾರಕ್ಕೆ ರಸ್ತೆಯ ಅನುಕೂಲವಿದ್ದರೆ ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದರೆ ಸಾಕಾಗುತ್ತಿತ್ತು. ಊರು ಸೇರಿದ ತರುವಾಯ ಡೇರೆಯ ವ್ಯವಸ್ಥೆಯೂ ಬೇಕಾಗುತ್ತಿರಲಿಲ್ಲ. ಹೆಚ್ಚಾಗಿ ಬಯಲಾಟಗಳೇ ಅಂದು ನಡೆಯುತ್ತಿದ್ದುವು.

ಆದರೆ ಯಕ್ಷಗಾನ ನಾಟಕ ಕಂಪೆನಿಯ ಹೊಣೆ ಹೊತ್ತ ನಮ್ಮ ಪರಿಸ್ಥಿತಿ ಅದಕ್ಕೆ ತೀರಾ ವ್ಯತಿರಿಕ್ತವಾಗಿತ್ತು.

ದೃಶ್ಯಾವಳಿಗಳಿಗಾಗಿ ಪರದೆಗಳು, ‘ಪಕ್ಕದ ರೆಕ್ಕೆ’ಗಳು, ಆಸನ- ಪೀಠೋಪಕರಣಗಳು, ಕಿರೀಟ-ಆಯುಧ, ಅಲಂಕಾರಗಳು ಇವೆಲ್ಲವುಗಳ ಜೊತೆಗೆ ಸಾಕಷ್ಟು ಫರ್ನಿಚರ್‌ಗಳನ್ನು ಸಾಗಿಸಲು ಎಂಟು ಹತ್ತು ಗಾಡಿಗಳನ್ನು ಅನುವು ಮಾಡಿಕೊಳ್ಳಬೇಕಾಗುತ್ತಿತ್ತು. ಎಷ್ಟೇ ಜನಪ್ರಿಯತೆ ಗಳಿಸಿದರೂ, ಕೆಲವು ದಿನಗಳ ತರುವಾಯ ಊರು ಬದಲಾಯಿಸಲೇಬೇಕಾಗುವುದಷ್ಟೇ.

ಊರಿಂದೂರಿಗೆ
ಬಟ್ಟೆಯ ಡೇರೆಗೆ ಬೇಕಾದ ಅನುಕೂಲ ನಮಗೆ ಇರಲಿಲ್ಲ. ಆದುದರಿಂದ ಪ್ರತಿಯೊಂದು ಊರಿನಲ್ಲೂ ”ಥಿಯೇಟರ್” ಕಟ್ಟಿಸಬೇಕಾಗುತ್ತಿತ್ತು. ಸರಾಸರಿ ಒಂದು ಸಾವಿರ ರೂ. ಅದಕ್ಕಾಗಿ ವೆಚ್ಚವಾಗುತ್ತಿತ್ತು.
ಮತ್ತಷ್ಟು ಓದು »

8
ಸೆಪ್ಟೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ: ತಲೆಗೆ ಬಿದ್ದ ತಾಳ

“ನನ್ನಿಂದಾದಷ್ಟು ಸಮಯ… ಈ ಜೀವನ ನನ್ನನ್ನು ಕುಣಿಸಿದಷ್ಟು ದಿನವೂ ಕುಣಿಯುತ್ತೇನೆ…. ಕುಣಿಯುತ್ತಲಿರುತ್ತೇನೆ…”  ಎಂದು ತೀರ್ಮಾನಿಸಿ ಯಕ್ಷಗಾನ ಕಲೆಗಾಗಿ ಅವಿರತವಾಗಿ ದುಡಿದು  18.11.1972  ರಂದು ಬಣ್ಣ ಕಳಚಿ  ಯಕ್ಷಗಾನ ರಂಗವನ್ನು ತಬ್ಬಲಿಯನ್ನಾಗಿ ಮಾಡಿ ಯಕ್ಷಮಾತೆಯ ಪಾದವನ್ನು ಸೇರಿದ ಕುರಿಯ ವಿಠಲ ಶಾಸ್ತ್ರಿಯವರು ಜನಿಸಿದ್ದು ಕಳೆದ ಶತಮಾನದ ದಿನಾಂಕ 8.9.1912  ರಂದು .ಯಕ್ಷಗಾನ ರಂಗದಲ್ಲಿ ಎಲ್ಲೂ ಸಲ್ಲುವ ಯಾವ ವೇಷಕ್ಕೂ ಸೈ ಎನಿಸಿಕೊಳ್ಳುತ್ತಿದ್ದ  ಒಬ್ಬ ಪ್ರಬುದ್ಧ ಹಾಗೂ ಮೇರು ಕಲಾವಿದರಾಗಿದ್ದ  ದಿವಂಗತ ಕುರಿಯ ವಿಠಲ ಶಾಸ್ತ್ರಿಯವರು  ತಮ್ಮ ವಯಸ್ಸಿನ ನೂರನೇ ಸಂವತ್ಸರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪದ್ಯಾಣ ಎಂದೊಡನೆ ತಕ್ಷಣ ನೆನಪಿಗೆ ಬರುವುದು ಯಕ್ಷಗಾನ .ಕನ್ನಡ ನಾಡಿನ ರಾಜಧಾನಿ ಬೆಂಗಳೂರು ನಗರದಲ್ಲಿ  ಮೊದಲ ಬಾರಿಗೆ ಯಕ್ಷಗಾನದ ಕೇಳಿ ಬಡಿದವರು ಎಂದು 1955ನೇ ಇಸವಿಯಲ್ಲಿ ಗುರುತಿಸಿಕೊಂಡವರು ಕಳೆದ ಶತಮಾನದ ಮಂಗಳೂರಿನ ಹಿರಿಯ ಪತ್ರಕರ್ತ ಹಾಗೂ  ಅಂಕಣಕಾರ  ಪದ್ಯಾಣ ಗೋಪಾಲಕೃಷ್ಣ  ( ಪ.ಗೋ. 1928 -1997 ).)ರವರರು ನಿರೂಪಣೆ ಗೈದಿರುವ ಕುರಿಯ  ವಿಠಲ ಶಾಸ್ತ್ರಿಯವರ ಆತ್ಮ ಕಥನ “ಬಣ್ಣದ ಬದುಕು”  ಇಂದು ಯಕ್ಷಗಾನ ಅಭಿಮಾನಿಗಳಿಗಾಗಿ ನಿಲುಮೆಯಲ್ಲಿ…

—————-

ಮತ್ತಷ್ಟು ಓದು »

17
ಏಪ್ರಿಲ್

ಸರ್ವಸಂಭವಾಂ

– ಜಯಂತ್ ರಾಮಚಾರ್

ನಾಹಂ ಕರ್ತಾ ಹರಿಃ ಕರ್ತಾ, ತತ್ ಪೂಜಾ ಕರ್ಮಚಾಖಿಲಂ I
ತಥಾಪಿ ಮತ್ ಕೃತಾ ಪೂಜಾ, ತತ್ ಪ್ರಸಾದೇನನಾನ್ಯಥಾ II

ತಾತ್ಪರ್ಯ: ನಾ ಮಾಡುಗನಲ್ಲ, ಹರಿಯೇ ಮಾಡುಗ, ನಾ ಮಾಡುವ ಎಲ್ಲವೂ ಅವನ ಪೂಜೆಯೇ I
ಇಷ್ಟಾಗಿಯೂ ನಾ ಮಾಡುವ ಪೂಜೆಯೆಲ್ಲವೂ ಕೂಡಾ ಅವನ ಪ್ರಸಾದವಲ್ಲದೆ ಮತ್ತೊಂದಲ್ಲ II

ಈ ಸಾಲುಗಳು “ಸರ್ವಸಂಭಾವಾಂ” ಎಂಬ ಪುಸ್ತಕದಿಂದ ಆರಿಸಿಕೊಂಡದ್ದು. ಈ ಪುಸ್ತಕ ತೆಲುಗಿನಲ್ಲಿದ್ದು ಇದರ ಲೇಖಕರು ಶ್ರೀ ಪತ್ರಿ ವೆಂಕಟ ರಾಮಕೃಷ್ಣ ಪ್ರಸಾದ್ (ಪಿ.ವಿ.ಆರ್.ಕೆ.ಪ್ರಸಾದ್). ಆಂಧ್ರಪ್ರದೇಶದ ಗುಂಟೂರಿನ ಸಂಪ್ರದಾಯಸ್ಥ ಮಧ್ವ ಕುಟುಂಬದಲ್ಲಿ ಜನಿಸಿದ ಇವರು ಐ.ಎ.ಎಸ ಪದವಿಧರರು. ಆಂಧ್ರಪ್ರದೇಶದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿ ೧೯೭೮ ರಲ್ಲಿ ತಿರುಮಲ ತಿರುಪತಿ ದೇವಸ್ಥಾನದ E O (Executive Officer ) ಆಗಿ ಅಧಿಕಾರ ಕೈಗೆತ್ತಿಕೊಂಡರು. ೧೯೭೮ ರಿಂದ ೧೯೮೨ ರವರೆಗೆ ಇವರು ಅಧಿಕಾರದಲ್ಲಿದ್ದಾಗ ನಡೆದ ಅನುಭವಗಳ ಸಂಗ್ರಹವೇ ಈ “ಸರ್ವಸಂಭಾವಾಂ” ಪುಸ್ತಕ.

ಆ ನಾಲ್ಕು ವರ್ಷಗಳ ಅವಧಿಯಲ್ಲಿ ಇವರು ತಿರುಮಲ ತಿರುಪತಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಯಾವುದೇ ಒಳ್ಳೆಯ ಕೆಲಸ ನಡೆಯುವಾಗಲೂ ಏನಾದರೂ ಒಂದು ಅಡ್ಡಿ ಆತಂಕ ಇದ್ದೆ ಇರುತ್ತದೆ. ಆ ಅಡ್ಡಿ ಆತಂಕಗಳು ಹೇಗೆ ಶ್ರೀನಿವಾಸನ ದಯೆಯಿಂದ ದೂರವಾದವು ಎಂಬುದನ್ನು ವಿಸ್ತೃತವಾಗಿ ಉಲ್ಲೇಖಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ಮಾಡಿದ ಕೆಲಸಗಳೆಂದರೆ ಮೊದಲಿದ್ದ ಇರುಕುಮುರುಕು ಕ್ಯೂ ಪದ್ದತಿಯನ್ನು ಈಗಿರುವ Q Complex ಆಗಿ ಪರಿವರ್ತಿಸಿರುವುದು. ಸನ್ನಿಧಿ ಬೀದಿಯನ್ನು ವಿಶಾಲವಾಗಿ ಮಾಡಿದ್ದು, ಕಲ್ಯಾಣ ಕಟ್ಟೆ. ಸಾಮೂಹಿಕ ಅನ್ನದಾನ ಶಾಲೆ, ವಸತಿಗೃಹಗಳು, ಪದ್ಮಾವತಿ ವಸತಿಗೃಹ, ಪಾಪನಾಶಿನಿ ಆಣೆಕಟ್ಟು, ಇಷ್ಟೇ ಅಲ್ಲದೆ ದೇವರ ಸೇವೆಗಳಲ್ಲಿ, ದರ್ಶನದಲ್ಲಿ ಹಿಂದೆಂದು ಕಾಣದ ಮಾರ್ಪಾಡುಗಳನ್ನು ಅಭಿವೃದ್ಧಿಗಳನ್ನು ಯಶಸ್ವಿಯಾಗಿ ಮಾಡಿದ್ದು. ಆದರೆ ಇವಿಷ್ಟು ಕೆಲಸಗಳು ಅಂದುಕೊಂಡ ಮಾತ್ರದಲ್ಲಿ ಸಾಧಿಸಲಾಗಲಿಲ್ಲ.

ಮತ್ತಷ್ಟು ಓದು »

17
ಮಾರ್ಚ್

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

–  ಶ್ಯಾಮಲ ಜನಾರ್ದನನ್

ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು – ಮದಕರಿ ನಾಯಕ ಒಬ್ಬ ಅರಸನಲ್ಲ ಜೀವಂತ ಆಪ್ತನೆಂಟ. ಚಿತ್ರದುರ್ಗ – ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ ” ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.

ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ – ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ “ದುರ್ಗಾಸ್ತಮಾನ” ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.

ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.

ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ – ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.

ಮತ್ತಷ್ಟು ಓದು »

1
ಮಾರ್ಚ್

“ದೇವರು” ಇದ್ದಾನಾ….? ಮೂರ್ತಿರಾಯರು ಏನಂತಾರೆ ಕೇಳಿ


ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?

ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.

ಹೀಗೆ ಪ್ರಕೃತಿಯ ರೋಷವನ್ನೂ ಅದರ ಮಾರಕ ಪರಿಣಾಮವನ್ನೂ ನೋಡಿದ ಮಾನವನೇ ಅದರ ಮತ್ತೊಂದು ಮುಖವನ್ನೂ ನೋಡಿದ; ಸೂರ್ಯೋದಯ ಸೂರ್ಯಾಸ್ತಗಳ ಬಣ್ಣದ ಸಿರಿ; ಕಾಮನಬಿಲ್ಲಿನ ಸೊಬಗು; ಮಳೆಯಿಂದ (ಆ ಮಳೆ ಗುಡುಗು ಸಿಡಿಲುಗಳ ಜೊತೆಗೆ ಬಂದದ್ದು!) ತೊಯ್ದು ಕಾಡಿನಲ್ಲೂ ಬಯಲಿನಲ್ಲೂ ಹಸುರಿನ ಹಬ್ಬ; ಗಾಳಿಯಲ್ಲಿ ನಲಿದಾಡುತ ಹೂವುಗಳ ಕೋಮಲತೆ, ಸುಗಂಧ; ರಾತ್ರಿಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು, ಅವುಗಳ ನಡುವಿನ ರಹಸ್ಯಪೂರ್ಣ
ನೀಲಿಯಾಳ; ಜಗತ್ತಿಗೆಲ್ಲ ಸೌಮ್ಯ ಸೌಂದರ್ಯವನ್ನು ಕೊಟ್ಟು, ತಂಪೆರೆಯುವ ಬೆಳದಿಂಗಳು; ಸಮುದ್ರದ ಪಾರವಿಲ್ಲದ ಹರವು, ಗಾಂಭೀರ್ಯ……….

ಮತ್ತಷ್ಟು ಓದು »

11
ಫೆಬ್ರ

ಬದುಕು ಬದಲಿಸಬಹುದು!

ಸವಿತ ಎಸ್.ಆರ್

ನಾ ಹತ್ತನೇ ತರಗತಿ ಮುಗಿಸಿದ ನಂತರ ನನ್ನಣ್ಣ ಕೊಟ್ಟ ಪುಟಾಣಿ ಪುಸ್ತಕ “ಬೆಳಕಿನೊಂದು ಕಿರಣ ಮೇಡಂ ಕ್ಯೂರಿ“. ವಿಜ್ಞಾನದ ಬಗ್ಗೆ ಬೆರಗು ಮೂಡಿಸಿ ಹೆಚ್ಚು ಕಲಿಯಲು ಪ್ರೇರೇಪಿಸಿದ ಬರವಣಿಗೆಯದು. ಬರೆದವರು ನೇಮಿ ಚಂದ್ರ. ಆ ಪುಸ್ತಕದ ಮೊದಲ ಪುಟದಲ್ಲಿ ಓದಿದ ಅರ್ಪಣೆಯ ಸಾಲುಗಳು ಈ ದಿನಕ್ಕೂ ನೆನಪಿವೆ…

ಚೆನ್ನಾಗಿ ಓದಮ್ಮ, ರ‍್ಯಾಂಕ್ ಬರಬೇಕು. ಈ ಕಸ ಮುಸುರೆಯಲ್ಲೇನಿದೆ? ಎಂದು ಸದಾ ಹುರಿದುಂಬಿಸಿದ, ಬಯಲು ಸೀಮೆಯ ಹಳ್ಳಿಗಾಡಿನ ಅಪ್ಪಟ ಅನಕ್ಷರಸ್ಥೆ ನನ್ನಮ್ಮನಿಗೆ

ಪುಸ್ತಕ ಮುಗಿಯೊದರೊಳಗೆ ನನ್ನ ಮುಂದಿನ ಓದಿನ ದಾರಿ ಕಾಣಿಸತೊಡಗಿತ್ತು. ಕೊನೆಯ ಪುಟದಲ್ಲಿ ಇದ್ದ ಲೇಖಕರ ಬಗ್ಗೆ ಓದುತ್ತಾ ಹೋದಂತೆ..ಅನ್ನಿಸತೊಡಗಿತ್ತು… ನೇಮಿ ಚಂದ್ರ…ಅಬ್ಬಾ!! ಹೆಣ್ಮಗಳೊಬ್ಬಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಬಹುದೇ….ನಾನೂ ಓದಬಾರದೇಕೆ ಅಂತ ಅವತ್ತೇ ಅನ್ನಿಸಿತ್ತು. ನಂತರ ನನ್ನ ಆಯ್ಕೆ ಕೂಡಾ ಅದೇ ಆಯ್ತು 🙂

ಅಂದಿನಿಂದ ಇಂದಿನವರೆಗೆ ಯಾವಾಗ ಲೈಫು ಡಲ್ ಅನಿಸಿದಾಗಲೆಲ್ಲಾ “ಬೆಳಕಿನೊಂದು ಕಿರಣ” ಪುಸ್ತಕ ಧೈರ್ಯ ತುಂಬಿ ಹೊಸ ಕನಸುಗಳನ್ನ ಕಾಣಲು ಸ್ಫೂರ್ತಿ ನೀಡುತ್ತಿದೆ.

ಮೊನ್ನೆ ಸಪ್ನ ಬುಕ್ ಸ್ಟಾಲಿಗೆ ಹೋದಾಗ ಹಾಗೇ ಕಣ್ಣಾಡಿಸುತ್ತಿರುವಾಗ ಕಂಡದ್ದು “ಬದುಕು ಬದಲಿಸಬಹುದು” – ನೇಮಿಚಂದ್ರ.. ಅರೆ ವಾವ್ ನನ್ನ ನೆಚ್ಚಿನ ಪುಸ್ತಕದ ಲೇಖಕರು…ಕೊನೆಯ ಪುಟದಲ್ಲಿ..ಮೊದಲ ಬಾರಿಗೆ..ಅವರ ಪೋಟೋ ನೋಡಿ ಸಕತ್ ಖುಷಿಯಾಯ್ತು. ಮನೆಗೆ ತಂದ ಪುಸ್ತಕ ಒಂದೆರಡು ದಿನ ಮನಃ ಪೂರ್ತಿಯಾಗಿ ಓದಿದೆ. : )

ಪ್ರತಿ ಪುಟಗಳಲ್ಲಿ ಅದೆಷ್ಟೊಂದು ಕಾನ್ಫಿಡೆನ್ಸ್ ತುಂಬಿದ ಬರಹಗಳು, ಕೆಲವು ಲೇಖನಗಳ ಶೀರ್ಷಿಕೆಗಳು ಹೀಗಿವೆ…

ಸಮಯವಿಲ್ಲವೆ ಹೇಳಿ
ಕನಸು ಕಾಣುವ ಬನ್ನಿ
ಸ್ನೇಹಕ್ಕೆ ಯಾವ ಸರಹದ್ದು
ಸೋಲಿಲ್ಲದ ಮನೆಯ ಸಾಸಿವೆ
ಜಗತ್ತು ಬದಲಾಗಬಹುದು
ಆಯ್ಕೆಯಿದೆ ನಮ್ಮ ಕೈಯಲ್ಲಿದೆ
ಬರೆದಿಡಿ….ಬರೆದಿಡಿ
ಆತ ಕೊಟ್ಟ ವಸ್ತು ಒಡವೆ, ನನಗೆ ಅವಗೆ ಗೊತ್ತು
ಮುಗಿಲು ಕೂಡ ಮಿತಿಯಿಲ್ಲ
ಬದುಕು…ನಿನ್ನಲ್ಲೆಂಥಾ ಮುನಿಸು
ಆದದ್ದೆಲ್ಲಾ ಒಳಿತು ಆಯಿತು
ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು
ಕಾಸಿಲ್ಲದೆ ಕಲಿಸಿದ್ದು
ದುಡಿಯಬಲ್ಲೆವು ನಾವು
ಚಿಗುರಿಸಿ ಕನಸುಗಳನ್ನು
ಬದುಕು ಬರಿದಾಗದಿರಲಿ
.
.
.
.
.
ಇಷ್ಟು ಚೆಂದದ ಶೀರ್ಷಿಕೆಯ ಲೇಖನಗಳೊಂದಿಗೆ ಲೇಖಕಿಯವರು ನಮ್ಮ ದಿನ ನಿತ್ಯದ ಜೀವನವನ್ನ ಬೇರೆ ಪರಿಮಾಣದಲ್ಲೂ ನೋಡಬಹುದೆಂಬುದನ್ನ…ಕಲಿಸುವಿಕೆ ಪರಿ ಮಾತ್ರ… ತುಂಬಾ ತುಂಬಾ ಇಷ್ಟವಾಯ್ತು.
ನೀವೂ ಕೂಡ ಓದಿ, ಮೆಚ್ಚಿನ ಪುಸ್ತಕಗಳ ಸಾಲಿಗೆ ಈ ಪುಸ್ತಕದ ಹೆಸರು ಸೇರುವುದು ಖಂಡಿತ 🙂