ವಿಷಯದ ವಿವರಗಳಿಗೆ ದಾಟಿರಿ

Posts from the ‘ಪುಸ್ತಕ ಪರಿಚಯ’ Category

20
ನವೆಂ

ವಾಲ್ಮೀಕಿ ಯಾರು?

– ಡಾ| ಜಿ. ಭಾಸ್ಕರ ಮಯ್ಯ

ವಾಲ್ಮೀಕಿ ಯಾರುಇಂದು ಕನ್ನಡ ಸಾಹಿತ್ಯದ ಅದಮ್ಯ ಚೇತನಗಳಾದ ಮಹಾಕವಿಗಳನ್ನು ಜಾತಿಯ ಗೂಟಕ್ಕೆ ಕಟ್ಟಿ ಬಲಿ ಕೊಡುತ್ತಿರುವ ಪದ್ಧತಿ ಈಗ ಸರಿಸುಮಾರು ನಾಲ್ಕು-ಐದು ದಶಕಗಳಿಂದ ನಡೆಯುತ್ತಿದೆ. ಇದರ ಐತಿಹಾಸಿಕ ದುರಂತವೆಂದರೆ ನವೋದಯದ ನಂತರ ಎಡವುತ್ತಾ ಬಂದ ಅರೆಬರೆ ಪ್ರಕಾರವಾದ ನವ್ಯ ಸಾಹಿತ್ಯ. ಅದು ಬೆಳೆಯುವ ಮುಂಚೆಯೇ ಕಮರಿ ಹೋಯ್ತು. ಅಡಿಗ, ಲಂಕೇಶ್ ಅದಕ್ಕೊಂದು ಅಪವಾದ. ನವೋದಯದ ಪತನಶೀಲ ಕಾಲದ ಕೆಲವು ಜಾತೀಯ ವಿಷಬೀಜಗಳು ಬಂಡಾಯದ ಕಾಲದಲ್ಲಿ ಅಲ್ಲಲ್ಲಿ ಮೊಳಕೆಯೊಡೆದವು. ಈ ಬಂಡಾಯದ ರೂವಾರಿಗಳಲ್ಲಿ ಅನೇಕ ಪ್ರಮುಖರು ಅಲ್ಪವಿದ್ಯಾ ಅಪ್ರಬುದ್ಧ ಹುಸಿ ಕ್ರಾಂತಿಕಾರರು. ಇವರು ನವೋದಯದ ಪತನಶೀಲ ಮತ್ತು ನವ್ಯದ ಗೊಬ್ಬರದಿಂದಲೇ ಬೆಳೆದವರು. ಭಾರತದಾದ್ಯಂತ ಹಿಂದಿ, ಬಂಗಾಳಿ ಮೊದಲಾದ ಭಾಷೆಗಳಲ್ಲಿ ಸರಿಸುಮಾರು ಪ್ರಗತಿಶೀಲ ಜನವಾದಿ ಸಾಹಿತ್ಯಪ್ರಕಾರವು ಆರೋಗ್ಯಕರವಾಗಿ ಬೆಳೆದು ಬಂದರೆ ಕರ್ನಾಟಕದಲ್ಲಿ ಮುಖ್ಯವಾಗಿ ರೂಲಿಂಗ್ ಐಡಿಯಾಗಳನ್ನು ಬಿಂಬಿಸುವ ಹುಸಿ ಬಂಡಾಯಗಾರರೇ ‘ರೂಲಿಂಗ್’ ಆದರು. ರೂಲಿಂಗ್ ಕ್ಲಾಸಿನ ಉತ್ಪನ್ನವಾದ ಈ ‘ರೂಲಿಂಗ್’ ಐಡಿಯಾದವರು ಇಂದು ಕೂಡಾ ರೂಲಿಂಗ್ ಪಕ್ಷದ ಬಹುದೊಡ್ಡ ಪರಾಕುದಾರರು.

ಇದರ ಪರಿಣಾಮವಾಗಿ ಇಂದು ಕನಕದಾಸರು ಕುರುಬನಾಗಿದ್ದಾರೆ.ಬಸವಣ್ಣ ಲಿಂಗಾಯತನಾಗಿದ್ದಾರೆ.ಕುವೆಂಪು ಗೌಡರಾಗಿದ್ದಾರೆ.ಅಂತೆಯೇ ಹಲವಾರು ಶ್ರೇಷ್ಠಲೇಖಕರು ಬ್ರಾಹ್ಮಣ-ಶೂದ್ರ ಇತ್ಯಾದಿ ವಿಧ ವಿಧ ಜೈಲುಗಳಲ್ಲಿ ಬಂಧಿತರಾಗಿದ್ದಾರೆ. ಹಿಂದೆಂದೂ ಇಲ್ಲದ ಜಾತಿವಾದ ಇಂದು ಸಾಹಿತ್ಯ ಮತ್ತು ಸಂಸ್ಕೃತಿಯ ವಲಯದಲ್ಲಿ ವ್ಯಾಪಿಸಿದೆ. ಈ ದುರಂತಕ್ಕೆ ಇತ್ತೀಚೆಗಿನ ಸೇರ್ಪಡೆ ವಾಲ್ಮೀಕಿ.

ವಾಲ್ಮೀಕಿ ಜನಾಂಗದ ವ್ಯಕ್ತಿಯೊಬ್ಬರು ಸರ್ಕಾರದಲ್ಲಿ ಪ್ರಭಾವಶಾಲಿಯಾಗಿದ್ದ ಕಾಲದಲ್ಲಿ ಆದಿಕವಿ ವಾಲ್ಮೀಕಿಗೆ ಹಠಾತ್ ಲಾಟರಿ ಹಾರಿತು.ವಾಲ್ಮೀಕಿ ಜಯಂತಿ ಆಚರಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತು.ಆ ದಿನ ಕರ್ನಾಟಕದಲ್ಲಿ ರಜಾದಿನವೆಂದು ಘೋಷಿಸಲಾಯಿತು. ಹೀಗೆ ಭಾರತದ ರಾಷ್ಟ್ರೀಯ ಮಹಾಕವಿಯೊಬ್ಬನಿಗೆ ಕರ್ನಾಟಕದಲ್ಲಿ ಈ ಪರಿ ಮರಣೋತ್ತರ ಗೌರವ ಸಂದಿತು. ಕರ್ನಾಟಕದಾದ್ಯಂತ ಸಭೆಸಮಾರಂಭಗಳು, ವಾಲ್ಮೀಕಿ ಭವನ ನಿರ್ಮಾಣದ ಯೋಜನೆ – ಇತ್ಯಾದಿಗಳು ವಿಜ್ರಂಭಿಸಿದವು.

ಮತ್ತಷ್ಟು ಓದು »

10
ನವೆಂ

ಆಡುಜೀವನ

– ಪ್ರಶಾಂತ್ ಭಟ್

ಆಡುಜೀವನಸ್ವಾತಂತ್ರ್ಯದ ಮಹತ್ವದ ಅರಿವಾಗುವುದು ಅದು ಇಲ್ಲವಾದಾಗಲೇ ಎಂಬ ಮಾತಿದೆ. ನಮ್ಮ ತಲೆಮಾರಿಗೆ ಈ ಮಾತಿನ ಅರ್ಥ ಆಗಿರುವ ಸಂಭವಗಳು ಕಡಿಮೆ. ಇತ್ತೀಚೆಗೆ ಓದಿದ ’ಬೆನ್ಯಾಮೀನ್’ ರ ’ಆಡುಜೀವನ’ (ಅನುವಾದ ಡಾ.ಅಶೋಕ್ ಕುಮಾರ್ ) ಇದರ ಅರ್ಥವ ತಕ್ಕಮಟ್ಟಿಗೆ ಮಾಡಿಸಿತು.ನಮಗೆಲ್ಲ ಒಂದು ಕಲ್ಪನೆಯಿದೆ. ಇಲ್ಲಿಂದ ಅರಬ್ ದೇಶಗಳಿಗೆ ಹೋದವರೆಲ್ಲ ಕೈ ತುಂಬಾ ದುಡಿದು ಝಣ ಝಣ ಎಣಿಸಿಕೊಂಡು ಬರುತ್ತಾರೆ ಎಂದು.ಈ ಕಾದಂಬರಿಯು ಅದೇ ಆಸೆ ಹೊತ್ತು ವಿದೇಶಕ್ಕೆ ತೆರಳುವ ಒಬ್ಬನ ಅನುಭವದ ಕತೆ. ಲೇಖಕರಿಗೆ ಇನ್ನೊಬ್ಬರ ಅನುಭವವಾಗಿ ದಕ್ಕಿದ ಈ ಕತೆ ಪ್ರಥಮ ಪುರುಷ ನಿರೂಪಣೆಯಲ್ಲಿ ನಮ್ಮದೇ ಕತೆಯಾಗಿ ಎದೆ ಹಿಂಡಿಸಿಕೊಳ್ಳುತ್ತದೆ.

ಮನೆಯ ಕಷ್ಟಗಳಿಗೆ ಒಂದೇ ಉತ್ತರವೆಂಬಂತೆ ನಜೀರ್ ವಿದೇಶಕ್ಕೆ ಹೋಗಲು ಅಣಿಯಾಗುತ್ತಾನೆ.ಪತ್ನಿಯ ಬಿಟ್ಟು ಯಾವುದೋ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಕೆಲಸ ಹುಡುಕಿ ಹೊರಡುವ ಆತನಿಗೆ ಅಲ್ಲಿ ಎದುರಾಗುವುದು ಕಷ್ಟ ಪರಂಪರೆ.ಏರ್ ಪೋರ್ಟ್ ನಲ್ಲಿ ಕಾದೂ ಕಾದೂ ಸುಸ್ತಾಗುವ ಅವನಿಗೆ, ಕೊನೆಗೊಮ್ಮೆ ಆಶಾಕಿರಣದಂತೆ ಬಂದ ಅರಬಾಬ್ ಅವನನ್ನು ಎಲ್ಲಿಗೋ ಕರೆದೊಯ್ಯುತ್ತಾನೆ. ಅಲ್ಲಿ ತಲುಪುವವರೆಗೂ ತನ್ನ ಕೆಲಸದ ಅರಿವಿರದ ನಜೀರ್ ಗೆ ಅಲ್ಲಿನ ಪರಿಸ್ಥಿತಿ ಕಂಡು ಅಯೋಮಯವಾಗುತ್ತದೆ. ಆಡುಗಳನ್ನು ನೋಡಿಕೊಳ್ಳುವ, ಅವುಗಳ ಚಾಕರಿ ಮಾಡುವ,ಅವಕ್ಕೆ ಹುಲ್ಲು ಹಾಕಿ ನೀರು ಕುಡಿಸುವ, ಅವುಗಳನ್ನು ಕಾಲಾಡಿಸಲು ಕರಕೊಂಡು ಹೋಗುವ ಕೆಲಸ.ಮಲಗಲು ನೆಲವೇ ಗತಿ.ಸ್ನಾನ ಕನಸಿನ ಮಾತು.ತಿನ್ನಲು ಖಾಮೂಸ್ ಎಂಬ ತಿನಿಸು ಮಾತ್ರ. ಬಹಿರ್ದೆಶೆಗೆ ಹೋದರೆ ಸ್ವಚ್ಚಗೊಳಿಸಲೂ ನೀರಿಲ್ಲ. ಅಲ್ಲಿ ಬಂದಿಳಿದವನಿಗೆ ನಿರ್ಭಾವುಕನಾದ ಭೀಕರ ಜೀವಿಯೊಬ್ಬ ಕಾಣ ಸಿಗುತ್ತಾನೆ. ತನ್ನಂತೆ ಅಲ್ಲಿಗೆ ಕೆಲಸ ಹುಡುಕಿಕೊಂಡು ಬಂದವನು ಅವನು ಎಂಬ ಸತ್ಯ ಗೊತ್ತಾದ ನಜೀರ್ ಗೆ ಅವನ ಅಸಹ್ಯ ವೇಷ ಕಂಡು ತನ್ನ ಭವಿಷ್ಯವೂ ಹೀಗೇ ಎಂಬ ಕಟು ಸತ್ಯ ಅರಿವಾಗುತ್ತದೆ.
ಮತ್ತಷ್ಟು ಓದು »

8
ಆಕ್ಟೋ

ಹುಳಿಮಾವಿನ ಮರ: ಪಿ.ಲಂಕೇಶ್ ಅವರ ಆತ್ಮಕಥನ

– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ

ಪಿ.ಲಂಕೇಶ್‘ಹುಳಿಮಾವಿನ ಮರ’ ಕನ್ನಡದ ಶ್ರೇಷ್ಟ ಲೇಖಕ ಹಾಗೂ ಪತ್ರಕರ್ತ ಪಿ.ಲಂಕೇಶ್ ಅವರ ಆತ್ಮಕಥನ. ಲಂಕೇಶ್ ಲೇಖಕರಾಗಿ ಮತ್ತು ಪತ್ರಕರ್ತರಾಗಿ ಕನ್ನಡಿಗರಿಗೆ ಚಿರಪರಿಚಿತರು. ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿಯೊಂದರ ರೈತಕುಟುಂಬದಲ್ಲಿ ಜನಿಸಿ ತನ್ನೊಳಗಿನ ಪ್ರತಿಭೆ ಮತ್ತು ಪ್ರಯತ್ನದಿಂದ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿದ ಪ್ರತಿಭೆ ಈ ಲಂಕೇಶ್. ಲಂಕೇಶರ ಆಸಕ್ತಿಯ ಕ್ಷೇತ್ರದ ಹರವು ಬಹುದೊಡ್ಡದು. ಬರವಣಿಗೆ, ಪತ್ರಿಕೋದ್ಯಮ, ನಾಟಕ, ಅಧ್ಯಾಪನ, ಕೃಷಿ, ಚಳವಳಿ,ಫೋಟೋಗ್ರಾಫಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಲೆದಾಡಿ ಕೊನೆಗೆ ತನ್ನ ಛಾಪನ್ನು ಮೂಡಿಸಿದ್ದು ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ. ಹತ್ತೊಂಬತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದು ವೃತ್ತಿಯ ಏಕತಾನತೆ ಬೇಸರ ಮೂಡಿಸಿದಾಗ ಮುಲಾಜಿಲ್ಲದೆ ರಾಜಿನಾಮೆಯಿತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ವಿಚಿತ್ರ ವ್ಯಕ್ತಿತ್ವ ಪಿ.ಲಂಕೇಶ್ ಅವರದು. 1978 ರಿಂದ 1980ರ ವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿಯೂ ಕನ್ನಡ ಚಿತ್ರೋದ್ಯಮದ ಪಟ್ಟುಗಳು ಅರ್ಥವಾಗದೇ ಹೋದಾಗ ಲಂಕೇಶರ ಆಸಕ್ತಿ ಪತ್ರಿಕೋದ್ಯಮದತ್ತ ಹೊರಳುತ್ತದೆ. 1980 ರಲ್ಲಿ ‘ಲಂಕೇಶ್ ಪತ್ರಿಕೆ’ಯನ್ನು ಆರಂಭಿಸುವುದರೊಂದಿಗೆ ಲಂಕೇಶ್ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯದ ಬಹುದೊಡ್ಡ ಪಲ್ಲಟಕ್ಕೆ ಕಾರಣರಾಗುತ್ತಾರೆ. ಪತ್ರಿಕೋದ್ಯಮ ಎನ್ನುವುದು ರಾಜಕಾರಣಿಗಳ ಮತ್ತು ಧನಿಕರ ಸೊತ್ತು ಎಂದು ಅದುವರೆಗೂ ತಿಳಿದುಕೊಂಡಿದ್ದ ಜನಸಾಮಾನ್ಯರಿಗೆ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಜನರ ಧ್ವನಿ ಎಂದು ಅರ್ಥಮಾಡಿಸುತ್ತಾರೆ. ಲಂಕೇಶ್ ಸಾಹಿತ್ಯ ಮತ್ತು ಸಿನಿಮಾಕ್ಕಿಂತ ಪತ್ರಿಕೆಯ ಮೂಲಕವೇ ಜನರಿಗೆ ಹೆಚ್ಚು ಹತ್ತಿರವಾದರು. ಬದುಕಿನ ಕೊನೆಯ ದಿನದವರೆಗೂ ಪತ್ರಿಕೋದ್ಯಮಕ್ಕೆ ನಿಷ್ಟರಾಗುಳಿದ ಲಂಕೇಶ್ ತಮ್ಮ ಪತ್ರಿಕೆಯನ್ನು ಕನ್ನಡದ ಜಾಣ-ಜಾಣೆಯರ ಪತ್ರಿಕೆಯಾಗಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದರು. ಪತ್ರಿಕಾ ಬರವಣಿಗೆಯಾಚೆಯೂ ಲಂಕೇಶ್ ಕಥೆ, ನಾಟಕ, ಕಾದಂಬರಿ, ಕವಿತೆ, ಗದ್ಯ, ಅನುವಾದದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಕನ್ನಡದ ಅನನ್ಯ ಬರಹಗಾರ. ಓದಿದ್ದು ಇಂಗ್ಲಿಷ್ ಸಾಹಿತ್ಯ, ಹತ್ತೊಂಬತ್ತು ವರ್ಷಗಳ ಕಾಲ ಪಾಠ ಮಾಡಿದ್ದು ಕೂಡ ಇಂಗ್ಲಿಷ್ ಸಾಹಿತ್ಯವನ್ನೇ ಆದರೆ ಬರೆದದ್ದು ಮಾತ್ರ ಕನ್ನಡದಲ್ಲಿ. ಲಂಕೇಶ್ ಅವರಂತೆ ಅನಂತಮೂರ್ತಿ, ಭೈರಪ್ಪ, ತೇಜಸ್ವಿ, ಚಂಪಾ, ಚಿತ್ತಾಲ ಇವರುಗಳೆಲ್ಲ ತಮ್ಮ ಅಧ್ಯಯನದ ವಿಷಯದಾಚೆಯೂ ಕನ್ನಡದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಲಂಕೇಶರ ಸಮಕಾಲೀನ ಬರಹಗಾರರು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡು ಬಂದ ಈ ಪ್ರವೃತ್ತಿ ಕನ್ನಡದ ಬರಹಗಾರರ ವಿಶಿಷ್ಟ ಗುಣದ ದ್ಯೋತಕವಾಗಿದೆ ಮತ್ತು ಅವರಲ್ಲಿನ ಈ ಗುಣ ಕನ್ನಡ ಸಾಹಿತ್ಯವನ್ನು ಸಾಕಷ್ಟು ಸಮೃದ್ಧಗೊಳಿಸಿತು.

ಮತ್ತಷ್ಟು ಓದು »

31
ಆಗಸ್ಟ್

‘ಆತ್ಮಾಹುತಿ’ ಯಿಂದ ಆತ್ಮವಿಮರ್ಶೆ

– ಮನುಶ್ರೀ ಜೋಯಿಸ್

ವೀರ ಸಾವರ್ಕರ್ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆ ಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹ ರೋಮಾಂಚನ. ಪೂರ್ವಜರ ಚರಿತ್ರೆಯೆಂದೆನೋ.. ಪುಸ್ತಕ ಮುಗಿದಾಗ ಮನಸು ತುಂಬಿ ಬರುತ್ತದೆ. ಇನ್ನು ಕೊನೆ ಅಧ್ಯಾಯದ ಪುಟಗಳಲ್ಲಿ ಕಣ್ಣಾಡಿಸುವಾಗ ಬಿಟ್ಟು ಹೋದ ಎಷ್ಟೋ ಹೆಜ್ಜೆ ಗುರುತುಗಳನ್ನು ಹಚ್ಚಿಕೊಂಡು ಬಿಟ್ಟಿರುತ್ತೇವೆ.

ಹೀಗೆ ಪುರಾಣಗಳಂತೆ ಮನಸಿಗೆ ಹತ್ತಿರವಾಗುವ, ಎತ್ತರದಲ್ಲಿ ನಿಲ್ಲುವ ಒಂದು ಅದ್ಭುತ ಕೃತಿ ಶಿವರಾಮುರವರ ‘ಆತ್ಮಾಹುತಿ’. ಇದು 1970 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಪ್ರತಿಯೊಬ್ಬ ಭಾರತೀಯನು ತಿಳಿದಿರಬೇಕಾದ ಇತಿಹಾಸ ಇದು. ಓದಲೇ ಬೇಕಾದ the best book.

ಸ್ವಾತಂತ್ರ್ಯ ವೀರ ಸಾವರಕರ ರವರ ಜೀವನ ಚರಿತ್ರೆ. ಇದನ್ನು ಆತ್ಮಕಥೆಯಂತೆ ನಿರೂಪಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬನ ಉನ್ನತ ಧೇಯ್ಯೋದ್ದೇಶಗಳು ಹೇಗೆ ಮಹಾನ್ ವ್ಯಕ್ತಿತ್ವಕ್ಕೆ ಮೆಟ್ಟಿಲುಗಳಾಗುತ್ತವೆ ಎಂಬುದಕ್ಕೆ ನಿದರ್ಶನವಿದು. ಬಾಲಕನಿದ್ದಾಗ ಚಿಗುರುವ ದೇಶ ಭಕ್ತಿ ಇಡೀ ವಿಶ್ವಕ್ಕೆ ವ್ಯಾಪಿಸುವ ಕಥಾನಕವಿದು. ಹಿಂದುತ್ವದ ಅಮೋಘ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಇವರ ಜ್ಞಾನ ಅಗಾಧ. ಇದೆಲ್ಲವನ್ನೂ ಕೇಳುವುದಕ್ಕಿಂತ ಅನುಭವಿಸ ಬೇಕೆಂದಿದ್ದರೆ ಆತ್ಮಾಹುತಿಯನ್ನು ಓದಲೇಬೇಕು ಬೇಕು.
ಮತ್ತಷ್ಟು ಓದು »

25
ಆಗಸ್ಟ್

ಸ್ವಪ್ನ ಸಾರಸ್ವತ – ಎರಡು ಅನಿಸಿಕೆಗಳು

ಸ್ವಪ್ನ ಸಾರಸ್ವತ – ಕುಲ ಮತ್ತು ಕಾಲದ ಕಥೆ

– ನವೀನ ಗಂಗೋತ್ರಿ

ಸ್ವಪ್ನ ಸಾರಸ್ವತ'ನೆನಪಳಿಯದ ಕೃತಿಗಳ ಸಾಲಿನಲ್ಲಿ ಈ ಹೆಸರು ಎಂದಿಗೂ ಅಜರಾಮರ- ಸ್ವಪ್ನ ಸಾರಸ್ವತ. ಒಂದು ಕೃತಿ ಯಾಕೆ ಹಾಗೆ ಪದೇ ಪದೇ ಸ್ಮರಣೀಯವಾಗುತ್ತದೆ ಎನ್ನುವುದಕ್ಕೆ ಆ ಕೃತಿಯ ರೋಚಕತೆಯಾಗಲೀ, ಕಥೆಯ ಕಲ್ಪಕತೆ ಅಥವಾ ಕುತೂಹಲದ ತುದಿಯಲ್ಲಿ ನಿಲ್ಲಿಸುವ ಗುಣವಾಗಲೀ ಕಾರಣವಾಗದೆ ಆ ಕೃತಿಯು ತನ್ನ ಪಾತ್ರಗಳ ಮೂಲಕ ಮಾನವ ಬದುಕಿನ ಯಾವೆಲ್ಲ ಘಟ್ಟಗಳನ್ನು ತಾಕಬಲ್ಲದು,ಮತ್ತು ತಾತ್ತ್ವಿಕವಾಗಿ ಯಾವ ಅನಿಸಿಕೆಯನ್ನು ವ್ಯಕ್ತಪಡಿಸಬಲ್ಲದು ಎನ್ನುವುದು ಕಾರಣವಾಗುತ್ತದೆ. ಮಹಾಕಾವ್ಯಗಳಲ್ಲದೆ, ನಮ್ಮನಡುವೆ ಉಳಿದುಬಂದ ಯಾವುದೇ ಮೌಲಿಕ ಕೃತಿಯನ್ನು ತೆಗೆದುಕೊಂಡರೂ ಅದರ ಸಾರ್ವತ್ರಿಕ ಗುಣ ಇದುವೇ ಆಗಿರುತ್ತದೆ- ಮಾನವ ಬದುಕನ್ನು ಅದು ಕಾಣುವ ರೀತಿ ಮತ್ತು ಕಟ್ಟಿಕೊಡುವ ತಾತ್ತ್ವಿಕತೆ. ಬದುಕಿನ ಅರ್ಥದ ಬಗ್ಗೆ ಮನುಷ್ಯನಿಗಿರುವ ಆರದ ಕುತೂಹಲವೂ ಇದಕ್ಕೆ ಕಾರಣವಿದ್ದೀತು. ಎಷ್ಟೇ ರೋಚಕವಾದರೂ ಯಾವುದೋ ಸಾಮಾನ್ಯ ಪತ್ತೇದಾರಿ ಕಾದಂಬರಿ, ಯಾವುದೋ ಸಾಮಾನ್ಯ ಪ್ರೇಮ ಕಥೆ ನೆನಪಿರುವುದು ತುಂಬ ತುಂಬ ವಿರಳ. ಸಾರಸ್ವತದ ಚಿರಂಜೀವಿತ್ವ ಇರುವುದು ಅದರ ಚಿಂತನೆ ಮತ್ತು ತಾತ್ತ್ವಿಕ ಹಿನ್ನೆಲೆಯಲ್ಲಿ.

ಗೋವೆಯೆಂಬ ಪುಟ್ಟ ನಾಡಲ್ಲಿ ತಮ್ಮಪಾಡಿಗೆ ತಾವು ಬದುಕಿದ್ದ ಸಾರಸ್ವತ ಜನಾಂಗ, ಏಕಾ ಏಕಿ ಎರಗಿದ ಹುಂಬ ಪೋರ್ಚುಗೀಸರ ಭಯಂಕರ ಕಿರುಕುಳ ತಾಳಲಾರದೆ ತಮ್ಮ ಉಸಿರಿನ ನೆಲ ಬಿಟ್ಟು, ಬದುಕಲ್ಲಿ ಎಂದಿಗೂ ಕಂಡಿರದಿದ್ದ ಅರಿಯದ ನೆಲೆಗೆ ಎದ್ದುನಡೆದ ಕಥೆ ಅದು. ಕಥೆಯ ಹಂದರವಂತೂ ತುಂಬ ತುಂಬ ಸಂಕೀರ್ಣವಾಗಿದೆ. ಓದುವುದಕ್ಕೇ ಅದೊಂದುಬಗೆಯ ಏಕಾಗ್ರತೆಯನ್ನು ಬೇಡುವ ಈ ಕೃತಿ ತನ್ನ ಬರಹಗಾರನಲ್ಲಿ ಬೇಡಿದ ತಪಸ್ಸಿನ ಮೊತ್ತವನ್ನು ಕಲ್ಪಿಸಿ ಚಕಿತನಾಗುತ್ತೇನೆ.

ಸಮುದಾಯವೊಂದು ತನ್ನ ಜೀವನೆಲೆಯಂತಿರುವ ಭೂಭಾಗವನ್ನು ತೊರೆದು ಬರುವಾಗ ಅದೊಂದು ’ಕೇವಲ ಸ್ಥಾನಾಂತರಣ’ ಆಗಿರದೆ, ತಲೆಮಾರುಗಳನ್ನು ಪ್ರಭಾವಿಸುವ ಸಂಗತಿಯಾಗಿರುತ್ತದೆ ಎನ್ನುವುದು ಸಾರಸ್ವತವನ್ನು ಓದುವಾಗ ನಿಚ್ಚಳವಾಗುತ್ತದೆ. ತನ್ನ ಪರಿವಾರ, ಪರಿಸ್ಥಿತಿ, ಸಮೂಹದ ಸಮೇತ ಒಂದು ಕುಲ ಸ್ಥಾನಾಂತರವಾಗುವಾಗ ಯಾವುದೆಲ್ಲವನ್ನು ತನ್ನೊಡನೆ ಕೊಂಡೊಯ್ಯಬಹುದು? ಆಸ್ತಿ, ಹಣ, ಒಡವೆ, ಉಳಿಕೆ, ಗಳಿಕೆ- ಯಾವುದನ್ನು? ಸಾರಸ್ವತದ ದೃಷ್ಟಿ ಕೇಂದ್ರಗೊಳ್ಳುವುದು ಇದ್ಯಾವುದರ ಮೇಲೆಯೂ ಅಲ್ಲ, ಬದಲಿಗೆ ಆ ಹಂತದಲ್ಲಿ ಮನುಷ್ಯ ತುಂಬಾ ಗಾಢವಾಗಿ ಹೊತ್ತೊಯ್ಯಲು ಬಯಸುವುದೆಂದರೆ ತನ್ನ ತಲೆಮಾರುಗಳಿಗೆ ಸಾಕಾಗುವಷ್ಟು ನೆನಪನ್ನು, ಸಂಪ್ರದಾಯ ಆಚಾರ ಮತ್ತು ನಂಬುಗೆಗಳನ್ನು ಎಂಬ ನಿಲುಮೆಗೆ ಸಾರಸ್ವತ ಬರುತ್ತದೆ. ನೆಲ ಬಿಟ್ಟೆದ್ದು ಬಂದದ್ದೇ ಆಚಾರದ ಉಳಿಕೆಗಾಗಿ ಎಂಬಾಗ, ಹೊತ್ತೊಯ್ಯಬೇಕಿರುವುದು ಅದನ್ನೇ ಅಲ್ಲವೆ?

ಮತ್ತಷ್ಟು ಓದು »

10
ಆಗಸ್ಟ್

‘ಸ್ವಪ್ನ ಸಾರಸ್ವತ’ದ ಪುಟಗಳಲ್ಲಿ

– ಮನುಶ್ರೀ ಜೋಯಿಸ್

ಸ್ವಪ್ನ ಸಾರಸ್ವತ'“ಸ್ವಪ್ನ ಸಾರಸ್ವತ” ಒಂದು ಸುಂದರ ಸುಧೀರ್ಘ ಕಾದಂಬರಿ. ಸುಮಾರು ಐದು ತಲೆಮಾರುಗಳ ಸಾರಸ್ವತ ಕುಟುಂಬದ ಇತಿಹಾಸ ಹೇಳುವಂತ ಕಥೆ. ಇದು ಬರೀ ಆ ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಸಂಘಜೀವಿ ಮನುಷ್ಯನ ಪರಿಸರ ಪ್ರೀತಿಯನ್ನು, ಪ್ರಕೃತಿಯನ್ನು ಹಚ್ಚಿಕೊಳ್ಳುವ ರೀತಿಯನ್ನು ಬಿಂಬಿಸುತ್ತದೆ.

ಗೋವಾದಲ್ಲಿ ಪೋರ್ಚುಗೀಸರ ಆಕ್ರಮಣಕ್ಕೆ ಸಿಕ್ಕು ದಿಕ್ಕಾಪಾಲಾಗುವ ಸಾರಸ್ವತ ಬ್ರಾಹ್ಮಣರ ಕಷ್ಟ-ಕಾರ್ಪಣ್ಯದಿಂದ ಈ ಕಥೆ ಪ್ರಾರಂಭವಾಗುತ್ತದೆ. ದಾಳಿಯಿಂದಾಗುವ ದೇವಸ್ಥಾನಗಳ ಹಾನಿ, ಆಸ್ತಿ-ಪಾಸ್ತಿಗಳ ನಷ್ಟ, ಸಂಸ್ಕೃತಿಯ ಪತನ ಮುಂತಾದವುಗಳನ್ನು ಲೇಖಕರು ಯಶಸ್ವಿಯಾಗಿ,ಸೂಕ್ಷವಾಗಿ ಚಿತ್ರಿಸಿದ್ದಾರೆ. ಇನ್ನು ಧರ್ಮಹಾನಿಯ ಸಮಯದಲ್ಲಿ ಮನದಲ್ಲಿನ ತೊಳಲಾಟ, ಗೊಂದಲಗಳನ್ನು ಸಾಮಾನ್ಯ ಮನುಷ್ಯನೊಬ್ಬ ಎದುರಿಸುವ ಪರಿ ಮನ ಮುಟ್ಟುವಂತಿದೆ.

ಸ್ನೇಹದ ಹಳಿಯಲ್ಲಿ ಬದುಕಿನ ಬಂಡಿ ಸಾಗುವುದು.ದೌರ್ಬಲ್ಯದಲ್ಲೇ ಮುಂದೆ ಸಾಗಿ ಮನಸಲ್ಲೇ ಮುಚ್ಚಿಟ್ಟು ಕೊಳ್ಳುವ ಪಶ್ಚಾತ್ತಾಪ. ದ್ವೇಷದ ಚಿಕ್ಕ ಕಿಡಿಯಿಂದ ಹೊತ್ತಿ ಉರಿವ ಮನೆ, ಮನಸ್ಸು.ಅಷ್ಟೈಶ್ವರ್ಯಗಳಿದ್ದೂ ಎಲ್ಲವನ್ನು ಕಳೆದುಕೊಂಡು ವಲಸೆಬಂದು ಪರಸ್ಥಳದಲ್ಲಿ ನೆಲೆನಿಂತು ಬದುಕು ಕಟ್ಟಿಕೊಳ್ಳುವ ಜೀವನ ಪ್ರೀತಿ. ಮನುಷ್ಯನ ಮೋಹ,ಲೋಭ,ದ್ವೇಷಗಳು, ದಾರಿ ತಪ್ಪುವ ಮನಸ್ಸಿನ ಹೊಯ್ದಾಟಗಳು,ಪರಿಣಾಮಗಳು,ಜಿಜ್ಞಾಸೆಗಳು ಯಥಾವತ್ತಾಗಿ ಜೀವನವೇ ಹಾಳೆಯ ಮೇಲೆ ಮೂಡಿ ಬಂದಂತಿದೆ.
ಮತ್ತಷ್ಟು ಓದು »

6
ಆಗಸ್ಟ್

ಶತಮಾನ ಕಂಡ ಕಾದಂಬರಿ: ಮಾಡಿದ್ದುಣ್ಣೋ ಮಹಾರಾಯ

– ರಾಘವೇಂದ್ರ ಅಡಿಗ ಎಚ್ಚೆನ್

ಮಾಡಿದ್ದುಣ್ಣೋ ಮಹಾರಾಯಸ್ನೇಹಿತರೇ ನಾನಿಲ್ಲಿ ಹೇಳ ಹೊರಟಿರುವ ಕಾದಂಬರಿ ಕನ್ನಡ ಕಾದಂಬರಿಗಳಲ್ಲೆಲ್ಲಾ ಅತ್ಯಂತ ಪ್ರಮುಖವಾದದ್ದು ಹಾಗೂ ಒಂದು ಶತಮಾನವನ್ನು ಕಂಡಂತದೂ ಆಗಿದೆ. ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದವರು ಕಾರಂತರು, ಅ.ನ.ಕೃ. ಮುಂತಾದವರಾದರೆ ಕಾದಂಬರಿ ಪ್ರಕಾರವನ್ನು ಹುಟ್ಟುಹಾಕಿದವರು ಗುಲ್ವಾಡಿ ವೆಂಕಟರಾವ್ (ಇಂದಿರಾಬಾಯಿ-ಕನ್ನಡದ ಮೊದಲ ಸಾಮಾಜಿಕ ಕಾದಂಬರಿ) ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ (ಎಂ.ಎಸ್. ಪುಟ್ಟಣ್ಣ) ನವರುಗಳು. ಇದರಲ್ಲಿ ಎಂ.ಎಸ್. ಪುಟ್ಟಣ್ಣನವರು ಬರೆದ ಪ್ರಥಮ ಕಾದಂಬರಿ-ಮಾಡಿದ್ದುಣ್ಣೋ ಮಹಾರಾಯ (1915) ಗೆ ಇದೀಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕೃತಿಕಾರರಾದ ಪುಟ್ಟಣ್ಣ ಹಾಗೂ ಕೃತಿಯ ಕುರಿತಂತೆ ನಾಲ್ಕು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಇರಾದೆ ನನ್ನದು.

ಅನೇಕರಿಗೆ ಇದಾಗಲೇ ಪುಟ್ಟಣ್ಣನವರ ಬಗೆಗೆ ತಿಳಿದಿರಬಹುದು ಆದರೂ ಇಲ್ಲಿ ಅವರ ಜೀವನದ ಕುರಿತಂತೆ ಸ್ವಲ್ಪ ತಿಳಿದುಕೊಂಡು ಬಳಿಕ ಕಾದಂಬರಿಯ ಕುರಿತು ವಿಚಾರ ಮಾಡೋಣ

ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ)ನವರು ಹುಟ್ಟಿದ್ದು ಮೈಸೂರಿನಲ್ಲಿ (21-11-1854). ತಂದೆ ಸೂರ್ಯನಾರಾಯಣ ಭಟ್ಟ, ತಾಯಿ ಲಕ್ಷ್ಮಮ್ಮ. ಹುಟ್ಟಿದ ಹತ್ತು ದಿವಸದಲ್ಲೇ ತಾಯಿಯನ್ನು ಕಳೆದುಕೊಂಡು ಬೆಳದದ್ದು ಸೋದರ ಮಾವನ ಮನೆಯಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ಖಾಸಗಿ ಮಠಗಳಲ್ಲಿ ಪೂರೈಸಿದ ಪುಟ್ಟಣ್ಣನವರು ಬಳಿಕ ರಾಜಾ ಸ್ಕೂಲಿನಲ್ಲಿ (ಇಂದಿನದ ಮಹಾರಾಜಾ ಕಾಲೇಜು) ಎಫ್. ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹ ಅಧ್ಯಾಪಕರಾಗಿ ನೇಮಕಗೊಂಡರು.ಮದರಾಸಿನಲ್ಲಿ ಬಿ.ಎ. ಪದವಿ ವ್ಯಾಸಂಗವನ್ನು ಮುಗಿಸಿದ ಇವರು ಅಧ್ಯಾಪಕ ಪದವಿ ಬಿಟ್ಟು ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟಿನಲ್ಲಿ) ಭಾಷಾಂತರಕಾರರಾಗಿ ದುಡಿದರು. 1867 ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರನ್ನಾಗಿ ನೇಮಿಸಲಾಯಿತು. ಮುಂದೆ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿ  ಅಮಲ್ದಾರರಾಗಿ  ಕಾರ್ಯ ನಿರ್ವಹಿಸಿದರು. ಬೆಂಗಳೂರಿನ ತೆರಿಗೆದಾರರ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿಯೇ ದಾಖಲೆಗಳನ್ನು ಕನ್ನಡದಲ್ಲಿ ಮೂಡಿಸಲು ಕಾರಣರಾದರು. ಮತ್ತಷ್ಟು ಓದು »

27
ಮೇ

ಸ೦ತೋಷ ಎನ್ನುವ ಸಾಪೇಕ್ಷತೆ ಮತ್ತು ಚೆಕಾಫ್

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಅ೦ಟೋನ್ ಚೆಕಾಫ್ಮಧ್ಯರಾತ್ರಿಯ ಸಮಯವದು.ಸ೦ಜೆಯೇ ವಿಹಾರಕ್ಕೆ೦ದು ಹೊರಗೆಲ್ಲೋ ತೆರಳಿದ್ದ ಮಿತ್ಯಾ ಕುಲ್ಡಾರೋವ್ ಖುಷಿಖುಷಿಯಾಗಿ ತನ್ನ ಮನೆಗೆ ಮರಳಿದ್ದ.ಅವನಿಗಾಗಿ ಕಾಯುತ್ತ ಕುಳಿತಿದ್ದ  ಅವನ ಪೋಷಕರು ಕುಳಿತಲ್ಲಿಯೇ ತೂಕಡಿಸಲಾರ೦ಭಿಸಿದ್ದರು.ಮಿತ್ಯಾನ ಅಕ್ಕ ಕಾದ೦ಬರಿಯೊ೦ದನ್ನು ಓದುತ್ತ ತನ್ನ ಹಾಸಿಗೆಯಲ್ಲಿ ಬೋರಲಾಗಿದ್ದಳು.ಅವನ ಇಬ್ಬರು ತಮ್ಮ೦ದಿರಿಗಾಗಲೇ ಜೋರು ನಿದ್ರೆ.ಮನೆಗೆ ಬ೦ದು ಕುಣಿಯಲಾರ೦ಭಿಸಿದ್ದ ಮಿತ್ಯಾನನ್ನು ನೋಡಿದ ಅವನಪ್ಪ,’ಕತ್ತೆ,ಎಷ್ಟೊತ್ತಿಗೆ ಮನೆಗೆ ಬರೋದು? ಇಷ್ಟು ಹೊತ್ತು ಎಲ್ಲಿ ಹಾಳಾಗಿ ಹೋಗಿದ್ದೆ’? ಎ೦ದು ಕೋಪದಿ೦ದ ಕಿರುಚಿದರು.

‘ಅಯ್ಯೊ ಅಪ್ಪಾ.!! ಇವತ್ತು ಏನೂ ಕೇಳಬೇಡಿ,ನಾನಿ೦ದು ತು೦ಬಾ ಖುಷಿಯಾಗಿದ್ದೇನೆ,ನೀವು ಬಯ್ದರೂ ನನಗೇನೂ ಬೇಸರವಿಲ್ಲ,’ ಎ೦ದವನಿಗೆ ಅಪ್ಪನ ಕೋಪದೆಡೆಗೆ ಇ೦ದೇಕೋ ದಿವ್ಯ ನಿರ್ಲಕ್ಷ್ಯ.ವಿನಾಕಾರಣ ಗಹಗಹಿಸಿ ನಗುತ್ತ ಅಲ್ಲಿಯೇ ಇದ್ದ ಆರಾಮ ಕುರ್ಚಿಯ ಮೇಲೆ ಕುಸಿದು ಕುಳಿತ ಮಿತ್ಯಾ. ಉಕ್ಕಿ ಬರುತ್ತಿರುವ ಸ೦ತೋಷಕ್ಕೆ ಗಟ್ಟಿಯಾಗಿ ನಿ೦ತುಕೊಳ್ಳಲಾಗದಷ್ಟು ಭಾವೋದ್ವೇಗ ಅವನಿಗೆ.ಅವನ ಗಲಾಟೆಗೆ ಅವನ ಅಕ್ಕ ಓದುತ್ತಿದ್ದ ಪುಸ್ತಕ ಮಡಚಿಟ್ಟು ಎದ್ದು ಕುಳಿತಿದ್ದಳು.ಅವನ ಸೋದರರು ನಿದ್ರೆಯಿ೦ದೆದ್ದು ಕಣ್ಣುಜ್ಜಿಕೊಳ್ಳಲಾರ೦ಭಿಸಿದ್ದರು.ರಾತ್ರಿ ತಡವಾಗಿ ಬ೦ದದ್ದಲ್ಲದೇ,ಈಗ ಇವನಾಡುತ್ತಿರುವ ಆಟವನ್ನು ಕ೦ಡು ಪಾಲಕರ ಕೋಪ ನೆತ್ತಿಗೇರಿತ್ತು.’ಏನಾಯಿತೀಗ ?ನಿನ್ನ ಈ ಸ೦ತೋಷಕ್ಕೆ ಕಾರಣವೇನೆ೦ದು ಹೇಳು.ಹುಚ್ಚನ೦ತೆ ವರ್ತಿಸುವುದನ್ನು ನಿಲ್ಲಿಸು’ ಎ೦ದು ಮಿತ್ಯಾನನ್ನು ಗದರಿದಳು ಅವನಮ್ಮ.’ಅಯ್ಯೊ ಅಮ್ಮ,ನಿನಗೆ ಗೊತ್ತಿಲ್ಲವಾ ? ಗೊತ್ತಾದರೇ ನೀನು ನನ್ನಷ್ಟೇ ಸ೦ತೋಷದಿ೦ದ ನಲಿದಾಡುತ್ತಿಯಾ,ನಿನ್ನೆಯವರೆಗೂ ಡಿಮಿಟ್ರಿ ಕುಲ್ದಾರೋವ್ ಎನ್ನುವ ಹೆಸರು ನಿನಗೆ ಮಾತ್ರ ಗೊತ್ತಿತ್ತು ಅಮ್ಮ,ಆದರೆ ಇ೦ದಿನಿ೦ದ ಈ ನಿನ್ನ ಮಗ ಇಡೀ ರಷ್ಯಾ ದೇಶಕ್ಕೆ ಪ್ರಸಿದ್ಧನಾಗಿಬಿಟ್ಟ’ ಎ೦ದು ನುಡಿದ ಮಿತ್ಯಾ ಮತ್ತೊಮ್ಮೆ ಕೋಣೆಯ ಸುತ್ತ ಹುಚ್ಚನ೦ತೆ ಒ೦ದು ಸುತ್ತು ತಿರುಗಿ ಮತ್ತೆ ಪುನ: ಕುರ್ಚಿಯೊ೦ದರಲ್ಲಿ ಆಸೀನನಾದ. ಅದಾಗಲೇ ಮಿತ್ಯಾನ ತ೦ದೆಯ ಕೋಪ ಮಿತಿಮೀರಿತ್ತು.’ರಾಸ್ಕಲ್,ಮೊದಲು ವಿಷಯನ್ನು ಸ್ಪಷ್ಟವಾಗಿ ಬೊಗಳು’ಎ೦ದು ಕಿರುಚಿದರು.ಅಷ್ಟಾದರೂ ಮಿತ್ಯಾ ತನ್ನ ತ೦ದೆಯ ಕೋಪದ ಪರಿವೆಯೇ ಇಲ್ಲ.

ಮತ್ತಷ್ಟು ಓದು »

19
ಮೇ

ವಿವೇಕ ಶಾನಭಾಗರ ಹೊಸ ಕಾದಂಬರಿ – ‘ಊರು ಭಂಗ’

– ರಾಘವೇಂದ್ರ ಅಡಿಗ ಹೆಚ್.ಎನ್

ಊರು ಭಂಗ‘ಎಲ್ಲವನ್ನೂ ಹೇಳುತ್ತೇನೆ…’

ಭಾಸ್ಕರರಾವ್ ಆಡಿದ್ದೆನ್ನಲಾದ ಈ ಮಾತಿನ ಕುರಿತು ನಮ್ಮೊಳಗೆ ತೀವ್ರ ಚರ್ಚೆ ಶುರುವಾಗಿತ್ತು. ಈ ಎರಡು ಶಬ್ದಗಳು ಒಂದು ಕಂಪನಿಯ ಕಾರ್ಪೊರೇಟ್ ಆಫೀಸಿನಲ್ಲಿ ಎಷ್ಟು ಕ್ರಾಂತಿಕಾರಿಯಾದ, ಭೀಕರ ಘೋಷಣೆಯಾಗಿ ಕೇಳಬಹುದೆನ್ನುವುದು ಇಂಥ ಜಗತ್ತಿನ ಬಗ್ಗೆ ಗೊತ್ತಿದ್ದವರಿಗೇ ಗೊತ್ತು. ಅಲ್ಲಿ ಮಾತ್ರ ಯಾಕೆ, ಕುಟುಂಬ ಅಥವಾ ರಾಜಕೀಯದಂಥ ಯಾವುದೇ ವ್ಯವಸ್ಥೆಯೂ ಅಂಜುವ ಶಬ್ದಗಳಿವು.

ಎಲ್ಲವನ್ನೂ ಹೇಳುತ್ತೇನೆಂಬುದೇ ಭಿನ್ನಮತದ ಅತ್ಯಂತ ಶಕ್ತಿಶಾಲಿ ಅಸ್ತ್ರ ತಾನೇ? ಪಕ್ಷ ತೊರೆದ ಧುರೀಣರು, ತಂಡದಿಂದ ಕೈಬಿಟ್ಟ ಆಟಗಾರರು, ಹೊಡೆದಾಡಿದ ವ್ಯಾಪಾರದ ಪಾಲುದಾರರು, ಜಗಳಾಡಿದ ಪ್ರೇಮಿಗಳು, ಬೇರೆಯಾದ ದಂಪತಿಗಳು – ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ಈ ಅಸ್ತ್ರ ಎತ್ತಿಕೊಂಡವರೇ. ಈ ಎರಡು ಮಾತಿನಲ್ಲಿ ಎದೆಗಾರಿಕೆ, ಇಷ್ಟು ದಿನ ಸಾಧ್ಯವಾಗದ್ದನ್ನು ಈಗಲಾದರೂ ಮಾಡುತ್ತಿದ್ದೇನೆನ್ನುವ ಆತ್ಮಸಮಾಧಾನ, ತುಸು ಹುತಾತ್ಮತೆ ಇರುವಂತೆಯೇ ಸ್ವಲ್ಪ ವಿಶ್ವಾಸಘಾತುಕತನವೂ ಇದೆ.

ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿರುವ ಭಾಸ್ಕರರಾವ್ ಅವಧಿಗಿಂತ ಮುನ್ನ ನಿವೃತ್ತಿ ಪಡೆಯುತ್ತಾರೆ ಎಂಬುದು ಬೆಳಗಿನ ಮುಖ್ಯ ಸುದ್ದಿಯಾಗಿತ್ತು. ಅದು ಜೀರ್ಣವಾಗುವ ಮೊದಲೇ ಅವರು ಹೇಳಿದ್ದಾರೆನ್ನಲಾದ ‘ಎಲ್ಲವನ್ನೂ ಹೇಳುತ್ತೇನೆ…’ ಎಂಬ ಶಬ್ದಗಳು ನಮ್ಮ ಆಫೀಸಿನಾದ್ಯಂತ ಕಂಪನಗಳನ್ನು ಎಬ್ಬಿಸಿದವು…

***

ಇದು ವಿವೇಕ್ ಶಾನಭಾಗ ಅವರ ಮೂರನೆಯ ಕಾದಂಬರಿ.“ಊರು ಭಂಗ” ದ ಮೊದಲ ಸಾಲುಗಳು ಸುಮಾರು ಇನ್ನೂರೈವತ್ತು ಪುಟಗಳ “ಊರು ಭಂಗ” ಕಾದಂಬರಿ ಆರಂಭದ ಪುಟಗಳಿಂದಲೇ  ಆವರಿಸಿಕೊಳ್ಳುವ ಧಾಟಿಯದು ಕಾರ್ಪೊರೇಟ್ ರಂಗದ ಒಳಸುಳಿಗಳನ್ನು ನಿಧಾನವಾಗಿ ಹೇಳುತ್ತಾ ಹೋದಂತೆ ತೆಂಕಣಕೇರಿ ಎಂಬ ಊರಿನ ಭೂತ ಜಗತ್ತು ಬಿಚ್ಚಿಕೊಳ್ಳತೊಡಗುತ್ತದೆ. ಕಾದಂಬರಿಯ ಮೊದಲ ಎರಡು ಅಧ್ಯಾಯಗಳು ಕಾರ್ಪೊರೇಟ್ ಜಗತ್ತಿನ ಕಿರು ಪರಿಚಯ ಮಾಡುವುದರೊಂದಿಗೆ, ಬರವಣಿಗೆಯ ನಿಖರ, ಆಕರ್ಷಕ ಶೈಲಿಯ ಪರಿಚಯವನ್ನೂ ಮಾಡುತ್ತವೆ. ಕಾದಂಬರಿಯುದ್ದಕ್ಕೂ  ಸಂಭಾಷಣೆಗಳು , ಸನ್ನಿವೇಶಗಳ ವಿವರಣೆಗಳು , ಎಲ್ಲವೂ ತುಂಬಾ ನೈಜವಾಗಿ ಮೂಡಿ ಬಂದಿವೆ. .
ಮತ್ತಷ್ಟು ಓದು »

12
ಮೇ

ಹೋರಾಟದ ಹಾದಿ : ಇದು ಪ್ರಾಮಾಣಿಕ ಬದುಕಿನ ಅನಾವರಣ

– ರಾಜಕುಮಾರ.ವ್ಹಿ.ಕುಲಕರ್ಣಿ
 ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಎಚ್.ನರಸಿಂಹಯ್ಯಎಚ್.ನರಸಿಂಹಯ್ಯನವರದು ನಾನು ಅತ್ಯಂತ ಗಾಢವಾಗಿ ಪ್ರೀತಿಸುವ ವ್ಯಕ್ತಿತ್ವ. ನನ್ನ ಕೆಲವು ಲೇಖನಗಳಲ್ಲಿ ಅವರ ವ್ಯಕ್ತಿತ್ವದ ಒಂದಿಷ್ಟು ಮುಖಗಳನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದೇನೆ. ಬದುಕೆಂದರೆ ಅದು ಹೇಗಿರಬೇಕೆಂದು ಪ್ರಭಾವ ಬೀರುವಷ್ಟರ ಮಟ್ಟಿಗೆ ಎಚ್.ನರಸಿಂಹಯ್ಯನವರು ತಮ್ಮ ಬದುಕನ್ನು ಬದುಕಿದವರು. ಇಂಥ ನರಸಿಂಹಯ್ಯನವರ ಬದುಕನ್ನು ಇಡೀಯಾಗಿ ಓದಬೇಕೆನ್ನುವ ನನ್ನ ಹಲವು ವರ್ಷಗಳ ಮನೋಭಿಲಾಷೆ ಇತ್ತೀಚಿಗೆ ತಾನೆ ಈಡೇರಿತು. ಅವರ ಆತ್ಮಕಥೆ `ಹೋರಾಟದ ಹಾದಿ’ ಪುಸ್ತಕವನ್ನು ಹುಡುಕಿ ಸೋತಿದ್ದೆ. ಅವರ ಕುರಿತು ಒಂದೆರಡು ಸಾಲು ಪುಸ್ತಕದಲ್ಲೊ ಅಥವಾ ಪತ್ರಿಕೆಯಲ್ಲೊ ಕಾಣಿಸಿದರೆ ಎಚ್ಚೆನ್‍ರ ಸಮಗ್ರ ಬದುಕನ್ನು ಓದಬೇಕೆಂದು ಮನಸ್ಸು ಕಾತರಿಸುತ್ತಿತ್ತು. ಕೊನೆಗೊಂದು ದಿನ ನನ್ನ ಮನಸ್ಸಿನ ಕಾತರತೆಯನ್ನು ಅರ್ಥ ಮಾಡಿಕೊಂಡವರಂತೆ ಹಿತೈಷಿಯೂ ಮತ್ತು ಮಿತ್ರರೂ ಆದ ಶ್ರೀ ಪಿ.ಎನ್.ಸಿಂಪಿ ಅವರು ಓದಲು ಪುಸ್ತಕವೊಂದನ್ನು ಕೈಗಿತ್ತರು. ಬಿಳಿಯ ರಕ್ಷಾ ಕವಚವನ್ನು ಧರಿಸಿದ್ದ ಆ ಪುಸ್ತಕದ ಹೆಸರು ಏನಿರಬಹುದೆಂದು ಶೀರ್ಷಿಕೆ ಪುಟದ ಮೇಲೆ ಕಣ್ಣು ಹಾಯಿಸಿದೆ. ನಿಜ ಹೇಳುತ್ತಿದ್ದೇನೆ ಒಂದು ಕ್ಷಣ ಮೈಯಲ್ಲಿ ವಿದ್ಯುತ್ ಸಂಚಾರವಾದ ಅನುಭವ. ಪುಸ್ತಕವನ್ನು ಕೈಯಲ್ಲಿ ಹಿಡಿದ ಆ ಸಮಯ ಕೋಟಿ ರೂಪಾಯಿ ಕೊಟ್ಟರೂ ಆಗದ ಸಂತಸ. ಯಾವ ಪುಸ್ತಕವನ್ನು ಓದಬೇಕೆಂದು ಹಲವು ವರ್ಷಗಳಿಂದ ಕಾತರಿಸುತ್ತಿದ್ದೇನೊ ಅದು ಅನಿರೀಕ್ಷಿತವಾಗಿ ಮತ್ತು ಅನಾಯಾಸವಾಗಿ ನನ್ನ ಕೈ ಸೇರಿತ್ತು. ರೂಢಿಯಂತೆ ರಾತ್ರಿಯ ನಿಶ್ಯಬ್ಧ ಮೌನದಲ್ಲಿ  ಪುಸ್ತಕವನ್ನು ಓದಿದ್ದಾಯಿತು.

ಪುಸ್ತಕವೇನೊ ಓದಿಯಾಯಿತು. ಆದರೆ ಮೊದಲಿಗಿಂತಲೂ ಒಂದಿಷ್ಟು ಹೆಚ್ಚೆ ಎನ್ನುವಷ್ಟು ಎಚ್.ನರಸಿಂಹಯ್ಯನವರು ಗಾಢವಾಗಿ ಕಾಡಲಾರಂಭಿಸಿದರು. ಮನಸ್ಸು ಅವರ ಬದುಕಿನ ಸುತ್ತಲೇ ಗಿರಿಕಿ ಹೊಡೆಯ ತೊಡಗಿತು. ಕುಳಿತಲ್ಲಿ, ನಿಂತಲ್ಲಿ ಅವರ ಬದುಕಿನ ಚಿತ್ರಗಳೇ ಕಣ್ಮುಂದೆ ಸುಳಿಯ ತೊಡಗಿದವು. ವ್ಯಕ್ತಿಯೊಬ್ಬ ಹೇಗೆಲ್ಲ ಬದುಕಬೇಕೆನ್ನುವುದಕ್ಕೆ ಎಚ್ಚೆನ್ ಹೊಸ ವ್ಯಾಖ್ಯಾನ ಬರೆದಿದ್ದರು. ಅವರ ಬದುಕಿನ ಗಾಢ ಪ್ರಭಾವಳಿಯನ್ನು ಕೆಲವು ಜನರೊಂದಿಗಾದರೂ ಹಂಚಿಕೊಳ್ಳಬೇಕೆನ್ನುವುದು ಪುಸ್ತಕವನ್ನು ಓದಿದ ನಂತರದ ನನ್ನ ಮನಸ್ಥಿತಿಗೆ ಅನಿವಾರ್ಯವಾಗಿತ್ತು. ಅವರ ಬದುಕಿನ ಸರಳತೆ, ಪ್ರಾಮಾಣಿಕತೆ, ಬದ್ಧತೆ ಎಲ್ಲವನ್ನೂ ಅನಾವರಣಗೊಳಿಸಿದ `ಹೋರಾಟದ ಹಾದಿ’ ಕೃತಿಯನ್ನು ಲೇಖನವನ್ನಾಗಿಸಿ ತೆಗೆದುಕೊಂಡು ಬಂದಿದ್ದೇನೆ. ಓದಿ ನೋಡಿ ನಿಮಗೂ ಮೆಚ್ಚುಗೆಯಾಗಬಹುದು.

ಹೋರಾಟದ ಹಾದಿ: ಆತ್ಮ ಕಥೆ

ಮತ್ತಷ್ಟು ಓದು »