ಭೈರಪ್ಪನವರ ಆತ್ಮಕಥನ ‘ಭಿತ್ತಿ’ ಓದುತ್ತಾ…
– ಪ್ರಶಸ್ತಿ.ಪಿ, ಸಾಗರ
ಒಂದು ಪುಸ್ತಕ ಇಷ್ಟ ಆಗ್ಬೇಕು ಅಂದ್ರೆ ಆ ಲೇಖಕನ ಪಕ್ಕಾ ಅಭಿಮಾನಿ ಆಗಿರ್ಬೇಕು ಅಂತೇನಿಲ್ಲ. ಲೇಖಕನ ಒಂದು ಪುಸ್ತಕ ಇಷ್ಟ ಆಯ್ತು ಅಂದ್ರೆ ಅವನ ಎಲ್ಲಾ ಪುಸ್ತಕಗಳು ಇಷ್ಟ ಆಗ್ಬೇಕು ಅಂತನೂ ಇಲ್ಲ. ಆ ಲೇಖಕ ಹಾಗೆ ಹೀಗೆ, ಆ ಪಂಥ, ಈ ಪಂಥ ಅಂತೆಲ್ಲಾ ಪೂರ್ವಾಗ್ರಹಗಳನ್ನ ಇಟ್ಕೊಳ್ದೇ ಪುಸ್ತಕವನ್ನು ಎಲ್ಲದರ ತರಹದ ಸುಮ್ನೆ ಒಂದು ಪುಸ್ತಕ ಅನ್ನೋ ಓದೋ ಪ್ರಯತ್ನ ಮಾಡಿದ್ರೆ ಪುಸ್ತಕ ಓದೋ ಸವಿ ಸವಿಯಬಹುದೇನೋ ಅಂತೊಂದು ಅಭಿಪ್ರಾಯ. ಈ ಪೀಠಿಕೆಗಳನ್ನೆಲ್ಲಾ ಬದಿಗಿಟ್ಟು ಹೇಳೋದಾದ್ರೆ , ಇವತ್ತು ಹೇಳೊಕೆ ಹೊರಟಿರೋ ಬುಕ್ಕು ಇತ್ತೀಚೆಗೆ ಎತ್ಕೊಂಡ ಪುಸ್ತಕ ಭೈರಪ್ಪನವರ ಆತ್ಮಕಥನ ಭಿತ್ತಿ.
ಸಂತೇಶಿವರ ಅನ್ನೋ ಊರಲ್ಲಿ ಹುಟ್ಟೋ ಭೈರಪ್ಪನವರಿಗೆ ಹುಟ್ಟಾ ಕಷ್ಟಗಳು.ಶ್ಯಾನುಭೋಗಿಕೆಯ ಮನೆತನ. ಆದರೆ ಅಪ್ಪ ಪಕ್ಕಾ ಆಲಸಿ, ಜವಾಬ್ದಾರಿಯಿಲ್ಲದವ. ಅಮ್ಮ ಊರೆಲ್ಲಾ ಸುತ್ತಿ ಕಷ್ಟಪಟ್ಟು ಲೆಕ್ಕ ಬರೆಯೋದು. ಊರವರು ವರ್ಷಾಂತ್ಯದಲಿ ತಂದು ಕೊಟ್ಟ ರಾಗಿಯನ್ನ ಮಾರಿ ಅದರ ದುಡ್ಡು ಖರ್ಚಾಗೋವರೆಗೂ ಅರಸೀಕೆರೆಯಲ್ಲಿದ್ದು ಹೋಟೆಲಿನಲ್ಲಿ ತಿನ್ನೋಕೆ ಅಲ್ಲಿ, ಇಲ್ಲಿ ಅಂತ ದುಂದು ಮಾಡಿ ಬರುವಂತಹ ಅಪ್ಪ. ಬುಡದಿಂದ ಪುಸ್ತಕದ ಮಧ್ಯಭಾಗದಲ್ಲಿ ಅಪ್ಪನ ದೇಹಾಂತ್ಯವಾಗೋ ತನಕವೂ ಅಪ್ಪನ ಗೋಳು ಹೀಗೆ ಮುಂದುವರೆಯುತ್ತದೆ. ಅವನ ಗೋಳು ಒಂದಲ್ಲಾ ಎರಡಲ್ಲ. ಪ್ರೈಮರಿಯಿಂದ ಮಾಧ್ಯಮಿಕಕ್ಕೆ ಅಂತ ಬೇರೆ ಕಡೆ ಶಾಲೆಗೆ ಹೋಗಬೇಕಾಗಿರತ್ತೆ. ಖರ್ಚಿಗೆ ಅಂತ ಸಂತೆಗೆ ಹೋಗಿ ಶರಬತ್ತು ಮಾರಿ ೨೫ ರೂಪಾಯಿ ಕೂಡಿಸಿರುತ್ತಾನೆ ಮಗ. ಮಗ ಎಲ್ಲೋ ಹೋದ ಸಂದರ್ಭದಲ್ಲಿ ಆ ಇಪ್ಪತ್ತೈದು ರೂಪಾಯಿ ಲಪಟಾಯಿಸಿ ಅದಕ್ಕೆ ಏನೇನೋ ತರ್ಕದ ಸಮರ್ಥನೆ ಕೊಡ್ತಿರ್ತಾನೆ ಅಪ್ಪ. ಮುಂದೆ ಬೇರೆ ಊರಲ್ಲಿ ಭಿಕ್ಷಾನ್ನ ಮಾಡಿ ಶಾಲೆಗೆ ಹೋಗ್ತಿರುತ್ತಾನೆ ಮಗ.ಅಲ್ಲಿಗೂ ಬಂದ ಅಪ್ಪ ದುಡ್ಡು ಕೇಳುತ್ತಾನೆ. ಇದ್ದರೆ ತಾನೆ ಕೊಡುವುದು ? ಮಗ ಭಿಕ್ಷಾನ್ನಕ್ಕೆ ಹೋಗುತ್ತಿದ್ದ ಬೀದಿ ಬೀದಿಗೆ ಹೋಗಿ ಮಗನಿಗೆ ಇನ್ನೂ ಉಪನಯನವಾಗಿಲ್ಲ, ಯಾರೂ ಭಿಕ್ಷೆ ಕೊಡಬೇಡಿ ಅಂತ ಸಾರಿ, ಇಲ್ಲಸಲ್ಲದ್ದನ್ನೆಲ್ಲಾ ಅಪಪ್ರಚಾರ ಮಾಡಿ ಸಿಗೋ ಹೊತ್ತಿನ ಊಟವನ್ನೂ ದಕ್ಕದಂತೆ ಮಾಡುತ್ತಾನೆ. ಮುಂದೆ ಭೈರಪ್ಪನ ತಾಯಿ ಸತ್ತಾಗ ಅದರ ಕರ್ಮ ಮಾಡೋ ಜವಾಬ್ದಾರಿಯನ್ನೂ ವಹಿಸಿಕೊಳ್ಳದೇ ಎಲ್ಲೋ ತಲೆಮೆರೆಸಿಕೊಳ್ಳುತ್ತಾನೆ ಅಪ್ಪ. ಮಗನೇ ಎಲ್ಲೋ ಸಾಲ ಸೋಲ ಮಾಡಿ , ಊರೂರು ಅಲೆದು ಮನೆಗೆ ನಾಲ್ಕು ಕಾಯಿಯಂತೆ ಪಡೆದು, ಅದನ್ನು ಮಾರಿ ದುಡ್ಡು ಕೂಡಿಸಿ ತಾಯಿಯ ಶ್ರಾದ್ದ ಮಾಡುತ್ತಾನೆ. ಎಲ್ಲೂ ಇಲ್ಲದ ಅಪ್ಪ, ಊಟಕ್ಕೆ ಸರಿಯಾಗಿ ಬಂದು ಊಟಕ್ಕೆ ಕೂತುಬಿಡುತ್ತಾನೆ.ಮುಂದೆಯೂ ಅಲ್ಲಿ ದುಡ್ಡು ಕೊಡು, ಇಲ್ಲಿ ಕೊಡು ಅಂತ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವುದೇ ಆ ಪಾತ್ರದ ಕೆಲಸ.
‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೨
–ಮು. ಅ. ಶ್ರೀರಂಗ,ಬೆಂಗಳೂರು
“ಹೆಗ್ಗುರುತು”ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹೀರೆಮಠರು ಆ ಕತೆಗಳ ಸಾರಾಂಶ / ತಾತ್ಪರ್ಯ/ ಭಾಷ್ಯ ಹೀಗೆ ಬರೆದಿರುವುದರಿಂದ ಅದರಲ್ಲಿ ಚರ್ಚಿಸುವ ಅಂಶಗಳು ಅಷ್ಟಾಗಿ ಇಲ್ಲ. “ನಿಜಕವಲು”ಜತೆಗೆ ಸ್ತ್ರ್ರೀ ವಾದಿಗಳೂ ಸೇರಿದಂತೆ ಹಲವರ ಕೋಪಕ್ಕೆ ಕಾರಣವಾದ ಭೈರಪ್ಪನವರ “ಕವಲು”ಕಾದಂಬರಿಯನ್ನು ಹೋಲಿಸಿದ್ದಾರೆ. ಈ ತೌಲನಿಕ ಅಧ್ಯಯನ ಹೇಗೆ ಸಾಧ್ಯವೋ ತಿಳಿಯದಾಗಿದೆ. ಕವಲು ಮತ್ತು ನಿಜಕವಲುವಿನ ನೆಲೆಗಳೇ ಬೇರೆ ಬೇರೆ. ಕಾನೂನಿಗೂ ನ್ಯಾಯ-ನೀತಿಗೂ ನಡುವೆ ಇರುವ ಕಂದರ ಕವಲುವಿನ ಮುಖ್ಯ ಸಮಸ್ಯೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ,ಜನ ಹಿತಕ್ಕಾಗಿ ಮಾಡಿದ ಕಾನೂನನ್ನೇ ಅದಕ್ಕೆ ವಿರುದ್ದವಾಗಿಯು ಉಪಯೋಗಿಸಿದಾಗ ಏನಾಗಬಹುದು ಎಂಬುದರಕದೆಗೆ ನಮ್ಮ ಗಮನವನ್ನು ಸೆಳೆಯುವುದು ಆ ಕಾದಂಬರಿಯ ಉದ್ದೇಶ. ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದು ಕೇವಲ ಗಂಡಸಿಗೆ ಮಾತ್ರ ಸೇರಿದ್ದಲ್ಲ;ಹೆಣ್ಣಿಗೂ ಆ ಕರ್ತವ್ಯದಲ್ಲಿ ಪಾಲಿದೆ. ತೀರ ಸಹಿಸಲು ಆಸಾಧ್ಯವಾದಾಗ ಬಿಡುಗಡೆ ಪಡೆಯುವುದರಲ್ಲಿ ತಪ್ಪೇನಿಲ್ಲ. ಇದನ್ನು ಭೈರಪ್ಪನವರು ವಿರೋಧಿಸುತ್ತಾರೆ ಎಂದು ಊಹಿಸುವುದು ತಪ್ಪಾಗುತ್ತದೆ.”ನಿಜ ಕವಲು”ವಿನಲ್ಲಿ ಬರುವ ಮಹಿಳಾ ಕಂಡಕ್ಟರ್ ರೀತಿಯಲ್ಲೇ ಇತರೆ ಉದ್ಯೋಗಸ್ಥ ಮಹಿಳೆಯರೂ ಸಹ ಒಂದಲ್ಲ ಒಂದು ವಿಧದಲ್ಲಿ ಸನ್ನಿವೇಶದಲ್ಲಿ :ವಾರೆ ನೋಟ”ಕ್ಕೆ ತುತ್ತಾಗ ಬಹುದಾದಂತಹವರೆ.”ಚಿಕ್ಕತಾಯಿ”ಕತೆ ಇದಕ್ಕೆ ಉದಾಹರಣೆ. ಕೊನೆಯಲ್ಲಿ ಅದು ಬೇರೆ ತಿರುವು ಪಡೆದರು ಸಹ ಪ್ರಾರಂಭದ ಹಂತಗಳನ್ನು ಮರೆಯಬಾರದಲ್ಲವೆ ಹೀಗಾಗಿ ದುಡಿಯುವ ಆಧುನಿಕ ಮಹಿಳೆಯ ಬಗ್ಗೆ ಭೈರಪ್ಪನವರದ್ದು “ವಾರೆ ನೋಟ”ಎಂಬ ಹಿರೇಮಠರ ಅಭಿಪ್ರಾಯ ಸರಿಯಿಲ್ಲ. ಜತೆಗೆ ಆಧುನಿಕ ಉದ್ಯೋಗಸ್ಥ ಮಹಿಳೆಯಿಂದಾಗಿ ನಮ್ಮ ಸನಾತನ ಸಂಸ್ಕೃತಿ ಕವಲು ದಾರಿ ಹಿಡಿದು ಹಾಳಾಗುತ್ತಿದೆ ಎಂಬ ಆತಂಕ ಭೈರಪ್ಪನವರನ್ನು ಕಾಡುತ್ತಿದೆ ಎಂಬ ಹಿರೇಮಠರ ಆರೋಪದಲ್ಲೂ ಹುರುಳಿಲ್ಲ. ಸನಾತನ ಸಂಸ್ಕೃತಿ ನಂಬಿಕೆಗಳಿಗೆ ಮುಜುಗುರ ತಂದಂತಹ “ಪರ್ವ”(ಮಹಾಭಾರತವನ್ನು”ಆಧರಿಸಿದ್ದು) ಕಾದಂಬರಿಯನ್ನು ಬರೆದ ಭೈರಪ್ಪನವರನ್ನು “ಸನಾತನ ಮಠದ ಸ್ವಾಮಿಗಳ ಪೀಠ”ದಲ್ಲಿ ಕೂರಿಸುವುದು ಕುಚೋದ್ಯವಾಗಬಹುದು. ಅಷ್ಟೆ.
‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೧
-ಮು. ಅ. ಶ್ರೀರಂಗ,ಬೆಂಗಳೂರು
ಕಥಾಸಂಕಲನಗಳು, ಕಾದಂಬರಿಗಳು, ಕವನಸಂಕಲನಗಳು … ಹೀಗೆ ಸಾಹಿತ್ಯದ ಯಾವುದೇ ಪ್ರಕಾರವಿರಲಿ ಅವುಗಳಿಗೆ ಮುನ್ನುಡಿಗಳು ಸಾಮಾನ್ಯವಾಗಿ ಇರುತ್ತವೆ.ಈ ಮುನ್ನುಡಿಗಳು ಕೆಲವೊಮ್ಮೆ ಸ್ನೇಹದ ಕುರುಹಾಗಿರಬಹುದು, ಅಥವಾ ಉದಯೋನ್ಮುಖರನ್ನು ಪ್ರೋತ್ಸಾಹಿಸುವ, ಅವರಲ್ಲಿ ಧೈರ್ಯ ತುಂಬುವ ಆಶೀರ್ವಚನಗಳಾಗಿರಬಹುದು. ಇನ್ನು ಕೆಲವು ಪರಸ್ಪರ ಸಹಕಾರದ (ಅವರದ್ದಕ್ಕೆ ಇವರು ಇವರದ್ದಕ್ಕೆ ಅವರು) ಸ್ವರೂಪದ್ದೂ ಆಗಿರುವುದುಂಟು.
ಕೆ.ಸತ್ಯನಾರಾಯಣರ ಇತ್ತೀಚಿನ ಸಣ್ಣ ಕಥೆಗಳ ಸಂಕಲನ ‘ನಕ್ಸಲ್ ವರಸೆ’ (ಪ್ರಕಾಶಕರು : ಅಕ್ಷರಪ್ರಕಾಶನ ಹೆಗ್ಗೋಡು , ೨೦೧೦)ಗೆ ಮುನ್ನುಡಿ ಬರೆದಿರುವ ಕೆ.ಫಣಿರಾಜ್ ಮತ್ತು ‘ಹೆಗ್ಗುರುತು’ (ಮನೋಹರ ಗ್ರಂಥಮಾಲ , ಧಾರವಾಡ ,೨೦೧೨)ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹಿರೆಮಠರದ್ದು ಮೇಲೆ ಹೇಳಿದ್ದ ಪ್ರಭೇಧಗಳಿಗೆ ಸೇರುವಂಥಹದಲ್ಲ.
ಫಣಿರಾಜರು ತಮ್ಮ ಮುನ್ನುಡಿಯಲ್ಲಿ ಸತ್ಯನಾರಾಯಣರ ಕಥೆಗಳ ಹಿನ್ನಲೆಯಲ್ಲಿ ಸಧ್ಯದ ಕೆಲವೊಂದು ವಾದ-ವಿವಾದಗಳ್ಳನ್ನು ಚರ್ಚಿಸಿರುವುದರಿಂದ ಆಸಕ್ತಿದಾಯಕವಾಗಿದೆ.ಹಿರೇಮಠರದ್ದು ಕಥೆಗಳ ಸಾರಾಂಶ ಅವುಗಳ ಬಗ್ಗೆ ಅವರ ಒಂದೆರೆಡು ಅಭಿಪ್ರಾಯಗಳು/ಅನಿಸಿಕೆಗಳಿಗೆ ಸೀಮಿತವಾಗಿದೆ.ಕಥೆಗಳ ಬಗ್ಗೆ ನೇರವಾಗಿ ಬರೆಯದೆ ಮುನ್ನುಡಿಗಳನ್ನು ಕುರಿತಂತೆ ಚರ್ಚಿಸುವುದಕ್ಕೆ ಒಂದು ಕಾರಣವಿದೆ.ಮುನ್ನುಡಿಗಳೂ ಒಂದು ರೀತಿಯ ವಿಮರ್ಶೆ ಆಗಿರುವುದರಿಂದ ಅದರ ನಿಲುವುಗಳ,ತೀರ್ಮಾನಗಳ ಬಗ್ಗೆ ಮಾತನಾಡುವುದೂ ಸಹ ಪರೋಕ್ಷವಾಗಿ ಆ ಕಥೆಗಳನ್ನು ಕುರಿತಂತೆ ಓದುಗನಾಗಿ ನನ್ನ ಅಭಿಪ್ರಾಯಗಳೂ ಆಗಿರುವ ಸಾಧ್ಯತೆಗಳಿವೆ
“ಡುಂಢಿ” ಅನ್ನುವ ಕೃತಿ ಮತ್ತು “ಸೆಕ್ಯುಲರಿಸಂ” ಅನ್ನುವ ಅವಕಾಶವಾದ …!
– ರಾಕೇಶ್ ಶೆಟ್ಟಿ
“ಡುಂಢಿ”ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು “Immortals of Meluha” ಪುಸ್ತಕವನ್ನು ಉಲ್ಲೇಖಿಸಿ, “ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ,ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ ೧೫೦-೨೦೦ ಪ್ರತಿಯಂತಲ್ಲ” ಅಂದರು. ನಾನಂದೆ “ನಿಮಗೆ, ’ದೇವರ ಪಾಲಿಟಿಕ್ಸ್’ ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, ’ಟಿಬೆಟಿಯನ್’ ಅನ್ನುವ ಬದಲೋ ’ಬ್ರಾಹ್ಮಣ/ಆರ್ಯ’ ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು”.
“ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ. ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ.” ಅನ್ನುವ ಮಾತುಗಳನ್ನಿಟ್ಟುಕೊಂಡ “ಡುಂಢಿ” ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? (“ಶಿವ”ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ…!)
ಅನುಭವಕ್ಕೆ ಮುಖಾಮುಖಿಯಾಗಿಸುವ ವಿಶೇಷ ಪುಸ್ತಕ
– ಡಂಕಿನ್ ಝಳಕಿ, ಸಂಶೋಧಕರು.
ಶಿವಕುಮಾರ, ಸಂಶೋಧನಾ ವಿದ್ಯಾರ್ಥಿ.
‘ಗ್ರಾಮೀಣ ಭಾರತದ ಸಾಮಾನ್ಯ ಜಗತ್ತಿನಲ್ಲಿ ಅನುಭವದೊಂದಿಗೆ ರೂಪತಾಳಿದ ಅಪರೂಪದ ಕೃತಿ’ : ನಮಗೆ ನಾವೇ ಪರಕೀಯರು
ಇತ್ತೀಚೆಗೆ ಕರ್ನಾಟಕದಲ್ಲಿ ಎಸ್.ಎನ್. ಬಾಲಗಂಗಾಧರರ (ಬಾಲುರವರ) ವಿಚಾರಧಾರೆಯು ಒಂದು ಸಂಶೋಧನಾ ಸಂಪ್ರದಾಯವಾಗಿ, ಒಂದು ಚಳುವಳಿಯಾಗಿ ಬೆಳೆಯುತ್ತಿರುವುದು ನಮಗೆ ತಿಳಿಯದ ಹೊಸ ವಿಚಾರವೇನಲ್ಲ. 2002ರಲ್ಲಿ ವಚನಗಳ ಕುರಿತ ಒಂದು ಕಾರ್ಯಾಗಾರವಾಗಿ ಕರ್ನಾಟಕಕ್ಕೆ ಕಾಲಿಟ್ಟ ಈ ವಿಚಾರಧಾರೆ ಕೇವಲ ಹತ್ತು ವರ್ಷಗಳಲ್ಲಿ ಎರಡು ಸಂಶೋಧನಾ ಸಂಸ್ಥೆಗಳಾಗಿ, ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಯೋಜನೆಗಳಾಗಿ ಬೆಳೆದು ನಿಂತಿದೆ. ಈ ವಿಚಾರಧಾರೆಯನ್ನು ಕನ್ನಡಕ್ಕೆ ಪರಿಚಯಿಸುವ ಹಲವು ಕೃತಿಗಳೂ ಈಗಾಗಲೇ ಪ್ರಕಟವಾಗಿವೆ. ರಾಷ್ಟ್ರೋತ್ಥಾನ ಸಾಹಿತ್ಯದವರು ಪ್ರಕಟಿಸಿರುವ ರಮಾನಂದ ಐನಕೈಯವರÀ ನಮಗೆ ನಾವೇ ಪರಕೀಯರು (2012) ಈ ಸಾಲಿಗೆ ಸೇರುವ ಒಂದು ವಿಶೇಷ ಕೃತಿ.
ಈ ಕೃತಿಯನ್ನು ಎರಡು ಪ್ರಮುಖ ಕಾರಣಗಳಿಗಾಗಿ ವಿಶೇಷ ಕೃತಿಯೆನ್ನಬಹುದು. ಇದುವರೆಗೂ ಬಾಲುರವರ ವಿಚಾರಧಾರೆಯ ಕುರಿತು ಪುಸ್ತಕರೂಪದಲ್ಲಿ ಬಂದ ಕೃತಿಗಳೆಲ್ಲಾ ಬಾಲಗಂಗಾಧರರ ಆಂಗ್ಲ ಕೃತಿಗಳ ಕನ್ನಡ ಅವತರಣಿಕೆಗಳೇ. ಈ ಕೃತಿ ಅವರ ವಿಚಾರಗಳನ್ನಿಟ್ಟುಕೊಂಡು ಕನ್ನಡದಲ್ಲಿ ಬಂದ ಮೊದಲ ಸ್ವತಂತ್ರ ಕೃತಿ. ಇದು ಈ ಕೃತಿಯ ಮೊದಲನೆಯ ವಿಶೇಷತೆ. ಇದರ ಎರಡನೆಯ ವಿಶೇಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಪ್ರದಾಯ ಮತ್ತು ಚಳುವಳಿಗಳ ಕುರಿತು ಒಂದು ವಿಚಾರವನ್ನು ನಾವು ಮನಗಾಣಬೇಕು. ಸಂಪ್ರದಾಯ ಮತ್ತು ಚಳುವಳಿಗಳ ಯಶಸ್ಸು ಅದು ಹುಟ್ಟುಹಾಕುವ ಅನುಯಾಯಿಗಳ ಸಂಖ್ಯೆ ಮತ್ತು ಪ್ರಕಟಿಸುವ ಕೃತಿಗಳ ಸಂಖ್ಯೆಯ ಮೇಲೆ ನಿರ್ಧಾರವಾಗುವುದಿಲ್ಲ. ಉದಾಹರಣೆಗೆ ವಚನ ಸಂಪ್ರದಾಯದ ಮತ್ತು ಚಳುವಳಿಯ ಯಶಸ್ಸು ಅದು ಹುಟ್ಟುಹಾಕಿದ (ಇಂದು ನಮಗೆ ತಿಳಿದಿರುವ ಅಂಕಿಸಂಖೆಗಳ ಆಧಾರದ ಮೇಲೆ ಹೇಳುವುದಾದರೆ) ಸುಮಾರು 200 ವಚನಕಾರರ ಮತ್ತು 21500 ವಚನಗಳ ಆಧಾರದ ಮೇಲೆ ನಾವು ಅಳೆಯುವುದಿಲ್ಲ್ಲ. ಒಂದು ಸಂಪ್ರದಾಯ, ಅನುಭವಗಳ ಕುರಿತು ಚಿಂತಿಸುವ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕಬೇಕು. ಆದರೆ ಎರಡು ವಸಾಹತುಶಾಹಿಗಳ ಬಳಿಕ, 21ನೇ ಶತಮಾನದಲ್ಲಿ ಒಂದು ಚಿಂತನಾ ವಿಧಾನವನ್ನು ಹುಟ್ಟುಹಾಕುವ ಮೊದಲು, ಒಂದು ಸಂಸ್ಕøತಿಯಾಗಿ ನಾವು (ಭಾರತೀಯರು) ಮರೆತಿರುವ ನಮ್ಮ ಅನುಭವಗಳನ್ನು ಕುರಿತು ಚಿಂತಿಸುವ ಪ್ರಕ್ರಿಯೆಯನ್ನೇ ಮತ್ತೊಮ್ಮೆ ಪುನರುಜ್ಜೀವನಗೊಳಿಸಬೇಕಾಗುತ್ತದೆ. ಇದು ಬಾಲುರವರ ಸಂಶೋಧನೆಯ ಪ್ರಮುಖ ಉದ್ದೇಶ. ಈ ಪ್ರಕ್ರಿಯೆಯನ್ನು ಅವರು ಪ್ರತ್ಯಭಿಜ್ಞಾನ ಎಂದು ಕರೆಯುತ್ತಾರೆ. ಒಂದು ಸಂಸ್ಕøತಿಯಾಗಿ ನಾವು ಕಲಿತು ಮರೆತಿರುವ ‘ಅನುಭವಗಳನ್ನು ಕುರಿತು ಚಿಂತಿಸುವ’ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವ ಈ ಪ್ರಕ್ರಿಯೆ ಒಂದು ಅಕಾಡೆಮಿಕ್ ಯೋಜನೆಯಷ್ಟೇ ಅಲ್ಲ, ಇದೊಂದು ಸಾಂಸ್ಕøತಿಕ ಚಳುವಳಿ ಕೂಡ. ಅಂದರೆ ಇದು ಎಲ್ಲಿ ಮತ್ತು ಹೇಗೆ ಆರಂಭವಾದರೂ ಸರಿ, ಅಂತಿಮವಾಗಿ ತನ್ನ ನಿತ್ಯದ ಸಾಮಾಜಿಕ ಜೀವನವನ್ನು ಇನ್ನಷ್ಟು ಅರ್ಥವತ್ತಾಗಿ ಬಾಳಲು ಇದರಿಂದ ಪ್ರತಿಯೋರ್ವನಿಗೂ ಸಹಾಯವಾಗಬೇಕು. ಪ್ರಸ್ತುತ ಕೃತಿ ಅಂತಹ ಪ್ರಕ್ರಿಯೆಗೆ ಒಂದು ಅತ್ಯುತ್ತಮ ಉದಾಹರಣೆ. ಅಷ್ಟೇ ಅಲ್ಲ ಅಂತಹ ಪ್ರಕ್ರಿಯೆಗೆ ಪ್ರೇರಣೆಯನ್ನೂ ನೀಡುತ್ತದೆ ಎನ್ನುವುದು ಈ ಕೃತಿಯ ಎರಡನೇ ಮತ್ತು ಅತ್ಯಂತ ಪ್ರಮುಖವಾದ ವಿಶೇಷತೆ.
ಯು ಟರ್ನ್ ತೆಗೆದುಕೊಂಡ ಸ್ತ್ರೀ ವಾದಿಗಳು !
– ಮು . ಅ . ಶ್ರೀರಂಗ ಯಲಹಂಕ ಬೆಂಗಳೂರು
ಎಸ್ ಎಲ್ ಭೈರಪ್ಪ ಅವರ “ಕವಲು” ಕಾದಂಬರಿ ಪ್ರಕಟವಾದಾಗ ಸುಮಾರು ಎರಡು ಮೂರು ತಿಂಗಳು ಪತ್ರಿಕೆಗಳಲ್ಲಿ ಎಡಬಿಡದೆ ವಾದ-ವಿವಾದಗಳ ಸುನಾಮಿ! ಜತೆಗೆ ಸ್ತ್ರೀ-ಪುರುಷ ಎಂಬ ಭೇದ ಭಾವ ಇಲ್ಲದೆ ಎಲ್ಲಾ ಸ್ತ್ರೀವಾದಿ ಸಾಹಿತಿಗಳು “ಕವಲು”ಕಾದಂಬರಿ ಸ್ತ್ರೀ ವಿರೋಧಿ ಎಂದು ಟೀಕಿಸಿದ್ದೆ ಟೀಕಿಸಿದ್ದು. ಭೈರಪ್ಪನವರ ವಿರೋಧಿ ಬಣಕ್ಕಂತೂ ಹೊಸ ಅಸ್ತ್ರ ಸಿಕ್ಕಿತು. ಸುಮಾರು ೫೦ ವರ್ಷಗಳಿಂದ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಾ ಬಂದಿರುವ ಕಾದಂಬರಿಯಿಂದ ಕಾದಂಬರಿಗೆ ಬೆಳೆಯುತ್ತಿರುವ ಭೈರಪ್ಪನವರನ್ನು ನಮ್ಮ ಅಕಾಡೆಮಿಕ್ ವಲಯದ ಧೀಮಂತರುಗಳು ತಮ್ಮ ಪರಿಧಿಯಿಂದ ಹೊರಗೆ ಇಟ್ಟಿರುವುದು ಸಾಹಿತ್ಯಾಸಕ್ತರಿಗೆ ತಿಳಿದ ವಿಷಯವೇ ಆಗಿದೆ. ನನ್ನ ಹಿರಿಯ ಸ್ನೇಹಿತರೂ ವಿಮರ್ಶಕರೂ ಮತ್ತು ಕಾಲೇಜೊಂದರಲ್ಲಿ ಕನ್ನಡದ ಪ್ರಾಧ್ಯಾಪಕರೂ ಆಗಿರುವ ಒಬ್ಬರು ಸ್ನಾತಕೋತ್ತರ ಕನ್ನಡದ ಸಿಲಬಸ್ಸಿನಲ್ಲಿ ಭೈರಪ್ಪನವರ ಬಗ್ಗೆ ಒಂದು ಪುಟದಷ್ಟೂ ಮಾಹಿತಿಗಳಿಲ್ಲ ಎಂದು ತಿಳಿಸಿದ್ದರು.ಈ ಮಾತು ಹೇಳಿ ಮೂರ್ನಾಲಕ್ಕು ವರ್ಷಗಳು ಕಳೆಯಿತು. ಈಗ ಪರಿಸ್ಥಿತಿ ಬದಲಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಗೊತ್ತಿರುವವರು ಹೇಳಬೇಕು.
ಈ ಪೀಠಿಕೆಗೆ ಮುಖ್ಯ ಕಾರಣ ೨೬ ಆಗಷ್ಟ್ ೨೦೧೩ರ ಕನ್ನಡಪ್ರಭ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ “ಪುರುಷರ ಆತ್ಮಹತ್ಯೆಗೆ ಮಹಿಳೆಯರೇ ಕಾರಣ” ಎಂಬ ಸುದ್ದಿ. ಇದೇನೂ ಮುದ್ರಾರಾಕ್ಷಸನ ಹಾವಳಿಯಿಂದಾದ ತಪ್ಪು ಸುದ್ದಿಯಲ್ಲ. ಕರ್ನಾಟಕ ರಾಜ್ಯ ಪುರುಷ ರಕ್ಷಣಾ ಸಮಿತಿ ಸದಸ್ಯರ ಪ್ರತಿಭಟನೆಯ ಸುದ್ದಿ. ಈ ಪ್ರತಿಭಟನೆಯಲ್ಲಿ ಕರ್ನಾಟಕದ ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್ ಅವರು ಎಲ್ಲಾ ವರ್ಗದ ಪುರುಷರ ಆತ್ಮಹತ್ಯೆಯ ಪ್ರಮಾಣ ಹೆಚ್ಚಲು ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದೇ ಕಾರಣ ಎಂದಿದ್ದಾರೆ. ರಾಜ್ಯ ಅಪರಾಧ ಮಾಹಿತಿ ಸಂಗ್ರಹ ಘಟಕದಲ್ಲಿ ದಾಖಲಾಗಿರುವ ಅಂಕಿ ಅಂಶಗಳೇ ಇದಕ್ಕೆ ಉದಾಹರಣೆ ಎಂದೂ ಹೇಳಿದ್ದಾರೆ.
ಮತ್ತಷ್ಟು ಓದು 
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು” ಪುಸ್ತಕದ ಕುರಿತು
– ಮು . ಅ . ಶ್ರೀರಂಗ ಯಲಹಂಕ ಬೆಂಗಳೂರು
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು ” (ನ. ನಾ. ಪ) (ಪ್ರಕಾಶಕರು : ರಾಷ್ಟ್ರೋತ್ಹಾನ ಸಾಹಿತ್ಯ ಬೆಂಗಳೂರು -೧೯ )ಪುಸ್ತಕ ಓದುವ ಮುನ್ನ ನಾನು ಪ್ರೊ .ಎಸ್ .ಎನ್. ಬಾಲಗಂಗಾಧರ (ಬಾಲು)ಅವರ ವಿಚಾರಗಳನ್ನು ಆಧರಿಸಿದ ಕನ್ನಡಕ್ಕೆ ಅನುವಾದವಾಗಿರುವ ಮೂರುಪುಸ್ತಕಗಳನ್ನು ಓದಿದ್ದೆ (ಪೂರ್ವಾವಲೋಕನ ,ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ? ಮತ್ತು ಹುಡುಕಾಟವನ್ನು ನಿಲ್ಲಿಸದಿರೊಣ). ಸ್ಮೃತಿ-ವಿಸ್ಮೃತಿ ;ಭಾರತೀಯ ಸಂಸ್ಕೃತಿ ತನ್ನ ವಿಚಾರ ಮತ್ತು ಗಾತ್ರದಲ್ಲಿ ತುಂಬಾ ಘನವಾಗಿದೆ ಹೀಗಾಗಿ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾಗಿದೆ. ಇದುವರೆಗೆ ಸುಮಾರು ಇನ್ನೂರು ಪುಟಗಳನ್ನು ಓದಿದ್ದೆನೆ. ರಮಾನಂದರ ಪ್ರಸ್ತುತ ಪುಸ್ತಕ ಮೇಲೆ ಹೇಳಿದ ಬಾಲು ಅವರ ನಾಲ್ಕು ಪುಸ್ತಕಗಳ ಅದರಲ್ಲೂ ಮುಖ್ಯವಾಗಿ ಸ್ಮೃತಿ-ವಿಸ್ಮೃತಿ ಪುಸ್ತಕದಲ್ಲಿರುವ ವಿಷಯಗಳನ್ನು ನೇರವಾಗಿ ಭಟ್ಟಿ ಇಳಿಸಿರುವುದರ ಪ್ರತಿಫಲ! ಇದಕ್ಕೆ ಪುರಾವೆಗಳು ರಮಾನಂದರ ನ.ನಾ.ಪ.. ಪುಸ್ತಕದಲ್ಲೇ ಇವೆ.
, ೧. ಬಾಲು ಅವರೇ ತಮ್ಮ ಮುನ್ನುಡಿಯಲ್ಲಿ—ರಮಾನಂದರ ಎಲ್ಲಾ ಲೇಖನಗಳು ಈ ವಿಷಯಗಳ ಕುರಿತಾಗಿ ಬೆಲ್ಜಿಯಂ ಹಾಗೂ ಭಾರತದಲ್ಲಿ ಕುವೆಂಪು ವಿ. ವಿ. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಭಾವಿತವಾಗಿವೆ ಎಂದ್ದಿದ್ದಾರೆ (ಪುಟxii)
೨. ಲೇಖಕರ ಮಾತಿನಲ್ಲಿ ಸ್ವತಃ ರಮಾನಂದ ಐನಕೈ ಅವರೇ ಮೇಲೆ ಹೇಳಿದ ಬಾಲು ಅವರ ಮಾತುಗಳನ್ನೇ ಅನುಮೋದಿಸಿದ್ದಾರೆ—ಬಾಲು ಅವರ ಮೂಲ ಸಿದ್ಧಾಂತಕ್ಕೆ ಚ್ಯುತಿ ಬಾರದ ಹಾಗೆ ಅವರ ವಿಚಾರಗಳನ್ನು ನನ್ನ ಅನುಭವಗಳ ಮೂಲಕ ಸರಳವಾಗಿ ನಿರೂಪಿಸುವ ಕೆಲಸ ಮಾಡಿದ್ದೇನೆ (ಪುಟ xvi )(ರಮಾನಂದರ ಅನುಭವಗಳ ಪ್ರಮಾಣ ಈ ಪುಸ್ತಕದ ವಿಚಾರದಲ್ಲಿ ತೀರಾ ಕಡಿಮೆ ಎಂಬುದು ಓದುಗರಿಗೆ ಮನವರಿಕೆಯಾಗುತ್ತದೆ!)
೩. ರಮಾನಂದರ ಪ್ರಸ್ತುತ ಪುಸ್ತಕ್ಕಕ್ಕೆ (ನ.ನಾ.ಪ) ಹಿನ್ನೆಲೆ ಬರೆದಿರುವ ದಾ॥ ರಾಜಾರಾಮ ಹೆಗಡೆಯವರು ಸಹ ರಮಾನಂದರದು ಸ್ವತಂತ್ರ ಲೇಖನಗಳಾದರೂ ಕೂಡ ಭಾರತೀಯ ಸಂಸ್ಕೃತಿಯ ಕುರಿತು ಎಸ್ . ಎನ್ . ಬಾಲಗಂಗಧರ ಅವರ ಹೊಸ ವಾದಗಳಿಂದ ಪ್ರಭಾವಿತವಾಗಿವೆ. (ಪುಟ xviii)
ಅಘೋರಿಗಳ ನಡುವೆ….. ಭಯಾನಕತೆಯ ಲೋಕದ ಅನಾವರಣ…
– ಕೆ.ಗುರುಪ್ರಸಾದ್
ಇತ್ತೀಚೆಗೆ ನನ್ನ ಗೆಳೆಯನೋರ್ವನ ಬಳಿ ಒಂದು ಪುಸ್ತಕ ನೋಡಲು ಸಿಕ್ಕಿತ್ತು. ” ಅಘೋರಿಗಳ ನಡುವೆ” ಮೂಲ “ಸುರೇಶ್ ಸೋಮಪುರ” ಬರೆದಿರುವ ಪುಸ್ತಕ ” ಎಮ್. ಎ. ನಾಗರಾಜ್ ರಾವ್ ” ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.(ಬಹಳ ವರ್ಷಗಳ ಹಿಂದೆ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಿತ್ತಂತೆ) ಕುಂಭಮೇಳದ ಸಂಧರ್ಭಗಳಲ್ಲಿ ಕಾಣಸಿಗುವ “ಅಘೋರಿ” ಗಳ ಜೀವನ ಶೈಲಿಯನ್ನ ಸುರೇಶ್ ಸೋಮಪುರ ಅವರು ತಮ್ಮ ಪುಸ್ತಕದ ವಸ್ತುವನ್ನಾಗಿಸಿದ್ದಾರೆ. ನಿಜಕ್ಕೂ, ಈ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಭಯಾನಕತೆಯ ಅನಾವರಣವಾಗುತ್ತಾ ಹೋಗುತ್ತದೆ. ಅಘೋರಿಗಳ ಜೀವನ ಅಂದರೆ ಈ ರೀತಿಯಲ್ಲೂ ಇರುತ್ತಾ ಅನ್ನುವಷ್ಟು ಭೀಕರವಾಗಿರುತ್ತಾ ಅಂತನಿಸತೊಡಗುತ್ತದೆ. ಅದಕ್ಕೆ ಅಲ್ವಾ ಅಘೋರಿಗಳನ್ನ ಹಠಯೋಗಿಗಳು ಅಂತ ಕರೆಯೋದು. ಹಿಮಾಲಯದ ಮಂಜಿನಲ್ಲಿ ನಗ್ನರಾಗಿ ಮಲಗುವುದು, ಚೂಪಾದ ಮೊಳೆಯ ಹಾಸಿಗೆಯ ಮೇಲೆ ಮಲಗುವುದು, ಸೂಜಿಯಿಂದ ಚುಚ್ಚಿಸಿಕೊಂಡು ತಮ್ಮನ್ನು ತಾವು ನೋಯಿಸಿಕೊಳ್ಳುವುದು ಇವೆಲ್ಲಾ ಅವರ ಹಠಯೋಗದ ಕೆಲವು ನಿದರ್ಶನಗಳು.
ಒಬ್ಬ ಅಘೋರಿಯಿಂದಾದ ತನ್ನ ಗೆಳೆಯನ ಸಾವು , ಲೇಖಕರನ್ನು ಈ ಅಘೋರಿಗಳ ಸಿದ್ಧಿಯ ಹಿಂದಿನ ರಹಸ್ಯವನ್ನು ತಿಳಿದುಕೊಳ್ಳಲು ಕಾತರರಾಗುವಂತೆ ಮಾಡುತ್ತದೆ. ಅದೃಷ್ಟವಶಾತ್ ಲೇಖಕರಿಗೆ ಅಜ್ನಾತ ಸ್ಥಳವೊಂದರಲ್ಲಿ ನಡೆಯುವ ಈ ಅಘೋರಿಗಳ ಸಾಧನಾ ಶಿಬಿರಕ್ಕೆ ಅತಿಥಿಯಾಗಿ ಹೋಗುವ ಅವಕಾಶ ಸಿಗುತ್ತದೆ. ಆ ಸಾಧನಾ ಶಿಬಿರದಲ್ಲಿ ಲೇಖಕರ ಸಹಾಯಕ್ಕಾಗಿ ಸಿಗುವ ಅಘೋರಿಯೊಬ್ಬ ತನ್ನ ಪೂರ್ವಾಶ್ರಮದಲ್ಲಿ ಒಬ್ಬ ಡಾಕ್ಟರ್ ಆಗಿದ್ದಿರುತ್ತಾನೆ ಅನ್ನೋ ವಿಷಯ ನಿಜಕ್ಕೂ ನಮ್ಮಲ್ಲಿ ಆಶ್ಚರ್ಯವನ್ನುಂಟುಮಾಡುತ್ತದೆ. ಅಲ್ಲಿಂದ ಮುಂದೆ ಓದುತ್ತಿದ್ದಂತೆ ನಿಮ್ಮ ಕಣ್ಣೆದುರು ಭಯ ಸುಳಿದಾಡಲು ಪ್ರಾರಂಭವಾಗುತ್ತದೆ. ತಮ್ಮ ಮಂತ್ರಶಕ್ತಿಯ ಬಲದಿಂದಾಗಿ ಈ ಅಘೋರಿಗಳು ಅನೇಕ ಸಿದ್ಧಿಗಳನ್ನು ಕರಗತ ಮಾಡಿಕೊಂಡಿರುತ್ತಾರಂತೆ. ಅವರಿಗೆ ತಮ್ಮ ಮಂತ್ರಶಕ್ತಿಯ ಮೇಲೆ ಬಲವಾದ ನಂಬಿಕೆ. ಸಾಧಾನಾ ಶಿಬಿರವನ್ನು ತಲುಪುತ್ತಿದ್ದಂತೆಯೇ ಲೇಖಕರಿಗೆ ಇದರ ಅನುಭವವಾಗುತ್ತದೆ. ನಿರ್ಮಲ್ ಆನಂದ್ ಅನ್ನುವ ಅಘೋರಿಯೊಬ್ಬ ಲೇಖಕರ ಕೈಗಳನ್ನು ಗೋಡೆಗೆ ಅಂಟುವಂತೆ ಮಾಡುತ್ತಾನೆ. ಅದೆಷ್ಟೇ ಪ್ರಯತ್ನ ಪಟ್ಟರೂ ಲೇಖಕರಿಗೆ ತಮ್ಮ ಕೈಗಳನ್ನು ಹಿಂಪಡೆಯಲಾಗುವುದಿಲ್ಲ. ಇದೊಂದು ಸಣ್ಣ ಉದಾಹರಣೆ… ಹೀಗೆ ಮುಂದೆ ಹೋದಂತೆಲ್ಲಾ ಲೇಖಕರು ಅನುಭವಿಸಿದ ಭೀಕರತೆಯನ್ನು ನಿಮ್ಮ ಕಂಗಳಿಗೆ ಉಣಬಡಿಸುತ್ತಾರೆ.
ಗಾಂಧಿ ಕ್ಲಾಸು: ಸೃಜನಶೀಲ ಬದುಕಿನ ವಿಭಿನ್ನ ಮುಖಗಳು
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
‘ಬದುಕು ನನ್ನನ್ನು ರೂಪಿಸಿತೋ, ನಾನೇ ನನ್ನ ಬದುಕನ್ನು ಹೀಗೆ ರೂಪಿಸಿಕೊಂಡೆನೋ ಆದರೆ ಒಂದಂತೂ ಸತ್ಯ ನನ್ನೀ ಬದುಕು ನನ್ನ ಪ್ರಾರಬ್ಧ ಮತ್ತು ಸವಾಲಿನದು. ನಾನು ಬಾಲ್ಯವನ್ನಾಗಲೀ ಹದಿಹರೆಯದ ದಿನಗಳನ್ನಾಗಲೀ ಉತ್ಕಟವಾಗಿ ಎಲ್ಲರಂತೆ ಅನುಭವಿಸುವುದು ಆಗಲೇ ಇಲ್ಲ. ದುರ್ಬರ ಬದುಕು ಅದಕ್ಕೆ ಆಸ್ಪದ ಮಾಡಿಕೊಡಲೇ ಇಲ್ಲ. ಬಾಲ್ಯದ, ಹದಿಹರೆಯದ ಅನುಭವಗಳಿಗೆ ಅಕ್ಷರ ರೂಪ ಕೊಡುವಾಗ ನನ್ನ ಕಣ್ಣುಗಳು ಒದ್ದೆಯಾಗಿರುವುದೂ ಉಂಟು. ಹಿಂಬಾಲಿಸುತ್ತಲೇ ಇದ್ದ ಆತಂಕ, ಅನಿಶ್ಚಿತತೆಗಳನ್ನು ನಿರಾಸೆಗೊಳಿಸಿ ಬದುಕು ಅರವತ್ತರ ಹೊಸ್ತಿಲ ಬಳಿ ತಂದು ನಿಲ್ಲಿಸಿರುವುದು ಪವಾಡವೇ ಸರಿ.’ ಈ ಸಾಲುಗಳು ಇತ್ತೀಚಿಗೆ ನಾನು ಓದಿದ ‘ಗಾಂಧಿ ಕ್ಲಾಸು’ ಪುಸ್ತಕದಿಂದ ಹೆಕ್ಕಿ ತೆಗೆದವುಗಳು.
‘ಗಾಂಧಿ ಕ್ಲಾಸು’ ಕನ್ನಡದ ಖ್ಯಾತ ಬರಹಗಾರ ಕುಂವೀ ಎಂದೇ ಹೆಸರಾದ ಕುಂಬಾರ ವೀರಭದ್ರಪ್ಪನವರ ಆತ್ಮಕಥನ. ಕುಂವೀ ನಾನು ಮೆಚ್ಚುವ ಹಾಗೂ ಅತಿಯಾಗಿ ಹಚ್ಚಿಕೊಂಡಿರುವ ಲೇಖಕರಲ್ಲೊಬ್ಬರು. ಅವರ ಆತ್ಮಕಥನ ಪ್ರಕಟವಾಗಿದೆ ಎಂದು ಗೊತ್ತಾದದ್ದೆ ತಡ ಓದಲೇ ಬೇಕೆನ್ನುವ ಉತ್ಕಟ ಆಸೆ ಪುಸ್ತಕವನ್ನು ಹುಡುಕಿಕೊಂಡು ಹೋಗಿ ಖರೀದಿಸಿ0iÉುೀ ಬಿಟ್ಟಿತು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಕುಂ.ವೀರಭದ್ರಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ 2009ರಲ್ಲಿ ನಿವೃತ್ತರಾಗಿರುವರು. ನೂರಾರು ಕಥೆಗಳನ್ನು ಬರೆದಿರುವ ಇವರು ಕಾದಂಬರಿಗಳು ಮತ್ತು ಜೀವನ ಚರಿತ್ರೆಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿರುವರು. ಅವರ ಅನೇಕ ಕಥೆಗಳು ಹಾಗೂ ಕಾದಂಬರಿಗಳು ಸಿನಿಮಾಗಳಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವುದರ ಜೊತೆಗೆ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸಂಧಿವೆ. ಅದು ಕಥೆ ಇರಲಿ, ಕಾದಂಬರಿಯಾಗಲಿ, ಜೀವನ ಚರಿತ್ರೆ ಇರಲಿ ಪ್ರತಿಯೊಂದರಲ್ಲಿ ಕುಂವೀ ಶೈಲಿ ತನ್ನ ಛಾಪು ಮೂಡಿಸಿ ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ತಮ್ಮ ಕೃತಿಗಳ ಓದಿಗಾಗಿ ಓದುಗರ ಒಂದು ವಲಯವನ್ನೇ ಸೃಷ್ಟಿಸಿಕೊಂಡಿರುವ ವಿಶಿಷ್ಟ ಬರಹಗಾರ ಕುಂವೀ. ಹಲವು ದಶಕಗಳಿಂದ ಕನ್ನಡದ ಸಾಹಿತ್ಯಾಸಕ್ತರನ್ನು ಕಾಡುತ್ತಲೇ ಬಂದಿರುವ ಈ ಲೇಖಕನ ವೈಯಕ್ತಿಕ ಬದುಕು ಹೇಗಿರಬಹುದೆಂಬ ಕುತೂಹಲ ನನ್ನದಾಗಿತ್ತು. ‘ಗಾಂಧಿ ಕ್ಲಾಸು’ ಆ ಕೃತಿ ಕೈಯಲ್ಲಿ ಹಿಡಿದ ಘಳಿಗೆ ಅದು ಹೇಗೆ ಸಮಯ ಸರಿದು ಹೋಯಿತು ಎಂದು ಅರಿವಿಗೆ ಬರದಂತೆ ಆರು ದಶಕಗಳ ಕುಂವೀ ಬದುಕು ಕಣ್ಣೆದುರು ಅನಾವರಣಗೊಂಡಿತು.
ಅಕ್ಷರ ಕಡಿತಕ್ಕೆ ತಮಿಳು ಮಾದರಿ?
-ಡಾ. ಅಜಕ್ಕಳ ಗಿರೀಶ್ ಭಟ್
ನನ್ನ ” ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಎಂಬ ಪುಸ್ತಕದ ಕೆಲವು ಭಾಗಗಳು.
ಅಕ್ಷರ ಕಡಿತಕ್ಕೆ ತಮಿಳು ಮಾದರಿ?
ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ” ಹೊಸ ಕನ್ನಡ”ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.
ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.
ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು ” ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ.” ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.




