ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

30
ಏಪ್ರಿಲ್

ಭಾರತದಲ್ಲಿ ಕನ್ನಡನೂ ಇದೆ ಹಿಂದಿ ಮಾತ್ರ ಅಲ್ಲ

ಅರುಣ್ ಜಾವಗಲ್
ತುಂಬ ದಿನದಿಂದ ವಂಡರ್ ಲಾ ಗೆ ಹೋಗ್ಬೇಕು ಅಂತ ಅಂದ್ಕೊಂಡಿದ್ದೆ ಅದು ನೆನ್ನೆ ನೆರವೇರ್ತು. ನಮ್ಮ ಮನೆಯವರು ಮತ್ತು ನನ್ನ ಸ್ನೇಹಿತರ ಮನೆಯವರು ಜೊತೆಗೆ ಹೋಗಿದ್ವಿ.
ಅಲ್ಲಿ ಸ್ಕೈ ವೀಲ್ ನಲ್ಲಿ ಹೋಗೋಕ್ಕೆ ಅಂತ ೧೩ ಅಂತಸ್ತಿನ ಮಹಡಿಗೆ ಲಿಫಟ್ ನಲ್ಲಿ ಹೋದ್ವಿ. ಆಟವನ್ನ ಮುಗಿಸಿ ವಾಪಸ್ ಬರಲು ಮತ್ತೆ ಲಿಪ್ಟ್ ಬಳಿ ಬಂದಾಗ ನಾವು, ಮತ್ತೆ ನಮ್ ಜೊತೆ ಲಿಪ್ಟ್ ಗಾಗಿ ಕಾಯ್ತಿದ್ದ ಚಿಕ್ಕ ಮಕ್ಕಳ ಗುಂಪೊಂದಿತ್ತು. ಅಲ್ಲೊಬ್ಬ ಸೆಕ್ಯುರಿಟಿ ನವನು ನಿಂತಿದ್ದ, ಲಿಪ್ಟ್ ಎಶ್ಟು ಹೊತ್ತಾದ ಮೇಲೂ ಕೆಳಗಿನಿಂದ ೧೩ ನೆ ಅಂತಸ್ತಿಗೆ ಬರಲೇ ಇಲ್ಲ, ಯಾಕಪ್ಪ ಲಿಪ್ಟ್ ಮೇಲಕ್ಕೆ ಬರ್ತಾನೇ ಇಲ್ಲ, ಏನಾದ್ರು ತೊಂದರೆಯಾಗಿದಿಯ ಅಂತ ಆ ಸೆಕ್ಯುರಿಟಿನವನನ್ನ ಕೇಳಿದಕ್ಕೆ, ಅವನು ಹಿಂದಿ…. ಹಿಂದಿ ಅಂದ. ಸರಿ ನಾವು ಏನಪ್ಪ ನಿಮ್ಮ ವಂಡರ್ ಲಾ ಗೆ ಬಂದು ಏನು ತೊಂದರೆ ಇಲ್ದೇ ವಾಪಸ್ ಹೋಗ್ಬೇಕಾದ್ರೆ ಹಿಂದಿ ಕಲಿತು ಬರ್ಬೇಕಾ ಅಂದ್ವಿ. ಅದುಕ್ಕೆ ಅವನು ಹಿಂದಿ ರಾಶ್ಟ್ರಬಾಶೆ , ಬಾರತದಲ್ಲಿ ಇರ್ಬೇಕು ಅಂದ್ರೆ ಹಿಂದಿ ಗೊತ್ತಿರಬೇಕು, ಇದು ಭಾರತ… ಇದು ಭಾರತ…. ಅಂತ ಹೇಳ್ತಿರ್ಬೇಕಾದ್ರೆ, ನಮ್ ಜೊತೆ ಇದ್ದ ಮಕ್ಕಳ ಗುಂಪಿಂದ ಒಂದು ಚಿಕ್ಕ ಹುಡುಗಿ(ಸುಮಾರು ೫ ನೆ ತರಗತಿ ಓಡ್ತಿರಬೇಕು) ಮುಂದೆ ಬಂದು “ಭಾರತದಲ್ಲಿ ಕನ್ನಡನೂ ಇದೆ ಹಿಂದಿ ಮಾತ್ರ ಅಲ್ಲ! “ ಅಂತ ಹೇಳಿದ್ಲು.
ಭಾರತದಲ್ಲಿ ಕನ್ನಡನೂ ಇದೆ ಅನ್ನೊದು ಆ ಪುಟ್ಟ ಹುಡುಗಿಗೆ ಕೂಡ ಗೊತ್ತಿದೆ, ಆದ್ರೆ ಇದು ನಮ್ಮ ದೇಶದ ಕೇಂದ್ರ ಸರಕಾರಕ್ಕೆ ಮತ್ತು ಹಿಂದಿನ ರಾಷ್ಟ್ರಬಾಶೆ ಅಂತ ಹೇಳೊ ಹಿಂದಿಯನ್ಸ್ ಗಳಿಗೆ ಗೊತ್ತಿಲ್ವಲ್ಲ.
ನಿಜವಾಗಿಯೂ ಹಿಂದಿಯೇತರರ ಮೇಲೆ ಹಿಂದಿಹೇರಿಕೆ ಮಾಡೋ ಕೇಂದ್ರ ಸರಕಾರ ಮತ್ತು ಒಂದಿಶ್ಟು ಜನ ಹಿಂದಿಯನ್ಸ್ ಗಳು ಹಿಂದಿನ ಸುಳ್ಳ್ ಸುಳ್ಳಾಗಿ ರಾಶ್ಟ್ರಬಾಶೆ ಅಂತ ಹೇಳ್ಕೊಡು ತಿರುಗ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಮತ್ತು ಹಿಂದಿ ರಾಶ್ಟ್ರಬಾಶೆ ಅನ್ನೊರಿಗೆಲ್ಲಾ ನಾವು ಕೊಡಬೇಕಾದ ಒಂದೇ ಒಂದು ಉತ್ತರ… ಭಾರತದಲ್ಲಿ ಕನ್ನಡನೂ ಇದೆ. ಹಿಂದಿ ಮಾತ್ರ ಅಲ್ಲ.
29
ಏಪ್ರಿಲ್

ಸಂಪಾದಕೀಯ ಅನ್ನೋ ಮೊಟ್ಟೆಯ ಮೇಲೆ ಒಂದು ಪ್ರೀತಿಯ ಕುಟುಕು…

– ಮಹೇಶ್ ಪ್ರಸಾದ್ ನೀರ್ಕಜೆ

ಸಂಪಾದಕೀಯದಲ್ಲಿ ಪ್ರಕಟವಾದ ಬ್ಲಾಗ್ ಬರಹಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ ಇದು.

ಸಾಯಿ ಬಾಬಾರ ಸುತ್ತ ಇರುವ ಪವಾಡಗಳ ಬಗೆಗಿನ ವಿವಾದಗಳ ಬಗ್ಗೆ ಸಂಪಾದಕೀಯ ಈ ಹಿಂದೆ ಒಂದೆರಡು ಲೇಖನಗಳಲ್ಲಿ ಬರೆದಿತ್ತು (ಅದರಲ್ಲಿ ಒಂದು ಸನ್ಮಾರ್ಗ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಬರಹ). ಅವುಗಳಲ್ಲೊಂದು ಲೇಖನಕ್ಕೆ ಬಂದ ಪ್ರತಿಕ್ರಿಯೆಯೊಂದಕ್ಕೆ  ಪ್ರತಿಯಾಗಿ ಸಂಪಾದಕೀಯ ಬರೆದ ಸ್ಪಷ್ಟೀಕರಣ ರೂಪದ ಬರಹವೇ ನಾನು ಮೇಲೆ ನೀಡಿದ ಬ್ಲಾಗ್ ಬರಹ. ಈ ಬ್ಲಾಗ್ ಬರಹದ ಸಾರಾಂಶ ಏನೆಂದರೆ ಸಾಯಿ ಬಾಬಾ ಮಾಡಿದ ಸಮಾಜ ಮುಖೀ ಕೆಲಸಗಳ ಬಗ್ಗೆ ಮೆಚ್ಚುಗೆಯಿದ್ದರೂ ಮೂಲತಹ ಬಾಬಾ ನಡೆದ ದಾರಿ ಪವಾಡಗಳನ್ನೊಳಗೊಂಡ ದಾರಿಯಾಗಿದ್ದು ಅದು ಜನರನ್ನು ದಿಕ್ಕುತಪ್ಪಿಸುವ, ಮೌಢ್ಯತೆಗೆ ನೂಕುವ ಮೋಸದ, ಸುಳ್ಳಿನ ದಾರಿಯಾಗಿದೆ, ಆದ್ದರಿಂದ ನಮಗೆ ಅಂತಹ ಸುಳ್ಳಿನ ದಾರಿ ಬೇಕೋ ಅಥವಾ ಬುಧ್ಧ ಹಾಕಿಕೊಟ್ಟ ಸತ್ಯದ ದಾರಿ ಬೇಕೋ ಎಂಬ ಜಿಜ್ಞಾಸೆ. ಕೊನೆಯಲ್ಲಿ ಸಂಪಾದಕೀಯ ಹೀಗೆ ಹೇಳುತ್ತದೆ – “ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು” ಮತ್ತು “ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?”. ಇದರ ಬಗ್ಗೆ ಒಂದು ಚಿಂತನೆ ನಡೆಸುವ ಉದ್ದೇಶ ಈ ಲೇಖನದ್ದು.

ಮತ್ತಷ್ಟು ಓದು »

27
ಏಪ್ರಿಲ್

‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು

ಅರೆಹೊಳೆ ಸದಾಶಿವರಾಯರು

ಫೇಸ್ ಬುಕ್‌ನಲ್ಲಿ ಒಂದು ಸಾಲು ಓದಿದೆ. ‘ಮ್ಯಾಜಿಷಿಯನ್’ ಸತ್ಯ ಸಾಯಿಬಾಬಾ ಇನ್ನಿಲ್ಲ ಎಂದು ಒಬ್ಬರು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಮುಂದುವರಿಯುತ್ತಾ, ಈ ಸತ್ಯಸಾಯಿಬಾಬಾ ಎಂಬ ಜಾದೂಗಾರನನ್ನು ಕೇವಲ ಮಾಧ್ಯಮಗಳು ಈ ಮಟ್ಟಿಗೆ ದೇವಮಾನವನನ್ನಾಗಿ ಮಾಡಿವೆ ಎಂದೂ ಸೇರಿಸಿಕೊಂಡಿದ್ದರು.
ಮೊದಲಾಗಿ ಮಾನವ ಎಂದರೆ ಏನು ಎಂಬತ್ತ ಗಮನ ಹರಿಸಬೇಕು. ಅದಕ್ಕೂ ಮೊದಲಾಗಿ ಒಂದು ವಿಷಯ ಸ್ಪಷ್ಟೀಕರಣದೊಂದಿಗೇ ಲೇಖನ ಆರಂಭಿಸಬೇಕು. ಅದೆಂದರೆ ನಾನು ಸಾಯಿ ಬಾಬಾ ಅವರ ಭಕ್ತನೂ ಅಲ್ಲ ಮತ್ತು ಅವರ ಪವಾಡಗಳ ಕುರಿತು ಪರ-ವಿರೋಧ ಎಂದು ಹೇಳಿಕೊಳ್ಳುವಷ್ಟು, ಜ್ಞಾನಿಯೂ ಅಲ್ಲ. ಆ ಮಟ್ಟಿಗೆ ಈ  ವಿಷಯದಲ್ಲಿ ನಾನು ತಟಸ್ಥ. ಇನ್ನು ಮಾನವ ಎಂದರೆ…..!. ಜೀವಂತ ಇರುವ ಎಲ್ಲವೂ ಮಾನವನಾಗುವುದಿಲ್ಲ ಅಥವಾ ಮನುಷ್ಯಗರ್ಭದಲ್ಲಿ ಜನಿಸಿದ ಎಲ್ಲರೂ ಮಾನವನಂತೆ ಬದುಕುವುದಿಲ್ಲ. ಪರಸ್ಪರರನ್ನು ಪ್ರೀತಿಸುತ್ತಾ ಸಾಧ್ಯವಾದಷ್ಟೂ ಜನರ ಬಳಿ, ಜನರನ್ನು ಗೌರವಿಸುತ್ತಾ ಬದುಕುವುದು ಮಾನವೀಯ ಧರ್ಮ ಎನಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು, ಅಕ್ಷರಶ: ಅದನ್ನೇ ಪಾಲಿಸಿದರೆ ಆತ ಜನರ ಪಾಲಿಗೆ ಜನಾರ್ದನನಾಗುತ್ತಾನೆ;ದೇವತ್ವವನ್ನು ಪಡೆಯುತ್ತಾನೆ-ಸಾಯಿಬಾಬಾ ವಿಷಯದಲ್ಲಿಯೂ ಅದೇ ಆಗಿದೆ. ಮತ್ತಷ್ಟು ಓದು »

27
ಏಪ್ರಿಲ್

ಬಂಜರಾದ ಬಾಂಜಾರು

ಪವನ್ ಎಂ. ಟಿ

ಪ್ರಿಯ ನಿಲುಮೆಯ ಓದುಗರೆ ಕಳೆದ ಕೆಲವು ದಿನಗಳ ಹಿಂದೆ ನಿಲುಮೆಯಲ್ಲಿ ಮಲೆಕುಡಿಯರ ಪ್ರದೇಶವಾದ ಬಂಗಾರ್ ಪಲ್ಕೆಯ ಕುರಿತಂತೆ, ಅಲ್ಲಿಯ ಸಾಮಾಜಿಕ ಸಮಸ್ಯೆಗಳ ಕುರಿತಂತೆ ಲೇಖನವೊಂದು ಪ್ರಕಟವಾಗಿತ್ತು.  ಇನ್ನೊಂದು ವಿಭಿನ್ನ ಪ್ರದೇಶವಾದ ಬಾಂಜಾರು ಮಲೆಯ ಮಲೆಕುಡಿಯರ ಕುರಿತಂತೆ, ಅವರ ಕಷ್ಟದ ಪರಿಪಾಟಲಿನ ಕುರಿತ ಸಣ್ಣ ಪರಿಚಯವನ್ನು ಈ ಲೇಖನದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಚಾರ್ಮಾಡಿ ರಸ್ತೆಯಲ್ಲಿ ಸುಮಾರು ೪೦ ಕಿಲೋಮೀಟರ್ ಪ್ರಯಾಣಿಸಿದರೆ ಘಾಟ್‌ನ ೯ ನೇ ತಿರುವಿನಲ್ಲಿ ಬಲಬದಿಗೆ ಒಂದು  ಕಿರಿದಾದ ಕಚ್ಚಾ ರಸ್ತೆ ಸಿಗುತ್ತದೆ. ಈ ಕಚ್ಚಾ ರಸ್ತೆ ಹೆಚ್ಚು ದೂರದ ವರೆಗೆ ಇಲ್ಲ. ಎಲ್ಲಿಯಾದರೂ ಸಾಮಾನ್ಯ ಜನರೀಗೆ ಇದರಿಂದ ಉಪಯೋಗವಾಗಿ ಬಿಟ್ಟರೆ ಕಷ್ಟ ನೋಡಿ ಅದಕ್ಕೆ  ಈ ರಸ್ತೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಎಸ್ಟೇಟ್ ನ ಅಥಿತಿ ಗೃಹದ ವರೆಗೆ ಮಾತ್ರವಿದೆ. ಇಲ್ಲಿ ಖಾಸಗಿ ಎಸ್ಟೇಟ್ ನವರು ಒಂದು ದೊಡ್ಡ ಗೇಟು ಹಾಕಿದ್ದಾರೆ ಈ ಗೇಟನ್ನು ಒಳ ಪ್ರವೇಶ ಮಾಡಿಯೇ ನಾವು ಬಾಂಜಾರು ಮಲೆಗೆ ಹೋಗಬೇಕು. ಇಲ್ಲಿ ಎಸ್ಟೇಟ್ ಮಾಲಿಕರ ಪರವಾನಿಗೆ ಇಲ್ಲದೇ ನಾವು ಒಳ ಹೋಗುವಂತಿಲ್ಲ.                                                                                                                                                                                                   ಮೊದಲು ನಮಗೆ ಮಲೆಕುಡಿಯರಲ್ಲಿಗೆ ಹೋಗುವುದಕ್ಕೆ ಎಸ್ಟೇಟ್‌ನವರ ಒಪ್ಪಿಗೆ ಯಾಕೆ ಪಡೆಯಬೇಕು ಎಂಬ ಪ್ರಶ್ನೆ ಮೂಡಿತು . ಆದರೆ ನಮ್ಮ ಕೆಲಸ ಆಗಬೇಕಾದರೆ ನಾವು ಒಪ್ಪಿಗೆ ಪಡೆಯಲೇ ಬೇಕಲ್ಲಾ ಅದಕ್ಕೆ ಆ ಕೆಲಸವನ್ನು ಮೊದಲು ಮಾಡಿದೆವು.  ಮುಂದೆ ಸಾಗಿದಂತೆ ಆ ಅಥಿತಿ ಗೃಹದಲ್ಲಿ ಕೆಲಸ ಮಾಡುವ ಮಲೆಕುಡಿಯರನ್ನು ಕಂಡೆವು.  ಇದೆಲ್ಲವನ್ನು ನೋಡುವಾಗ ನನ್ನಲ್ಲಿ ಮೂಡಿದ ಪ್ರಶ್ನೆ? ಎಸ್ಟೇಟ್ ನವರು ಯಾಕೆ ಈ ರೀತಿ ಗೇಟ್ ಹಾಕಿದ್ದಾರೆ? ಮಲೆಕುಡಿಯರನ್ನು ನಿಯಂತ್ರಣದಲ್ಲಿಟ್ಟಿರ ಬಹುದೇ? ನಮ್ಮನ್ನು ಯಾಕೆ ಪರೀಕ್ಷಿಸಿಯೇ ಒಳ ಬಿಡುತ್ತಾರೆ? ಇದರ ಹಿಂದೆ ಏನಿದೆ? ಮಲೆಕುಡಿಯರು ಯಾಕೆ ಇವರಲ್ಲಿಯೇ ಕೆಲಸ ಮಾಡುತಿದ್ದಾರೆ? ಎಂದು. ನಂತರ ಬಾಂಜಾರಿನ ಮಲೆಕುಡಿಯರೇ ಹೇಳಿದರೂ ಎಸ್ಟೇಟ್ ನವರು ನಮಗೆ ೫ ಎಕರೆ ಜಾಗವನ್ನು ಪ್ರತಿಯೊಬ್ಬರಿಗೂ ನೀಡಿದ್ದಾರೆ ಅದರಲ್ಲಿ ಕೃಷಿ ಮಾಡಿಕೊಂಡು ಮತ್ತು ಎಸ್ಟೇಟ್‌ನ ಕೆಲಸವನ್ನು ಮಾಡಿಕೊಂಡು ನಾವು ಬದುಕುತ್ತಿದ್ದೇವೆ. ಈ ಮಾತನ್ನು ಕೇಳಿದಾಗ ನನ್ನಲ್ಲಿ ಮೂಡಿದ್ದ ಪ್ರಶ್ನೆಗಳಿಗೆ ಅಲ್ಪ ಸ್ವಲ್ಪ ಉತ್ತರ ಸಿಕ್ಕಿದಂತಾಯಿತು. ಮತ್ತಷ್ಟು ಓದು »

26
ಏಪ್ರಿಲ್

ಕ್ರಾಂತಿಗೆ ಅಕ್ಷರದ ಹಂಗೇಕೆ?

– ಚಿತ್ರ ಸಂತೋಷ್

ಮಧ್ಯಪ್ರದೇಶದ ತಲನ್‌ಪುರ ಗ್ರಾಮದಲ್ಲಿ ಓದು ಬರಹ ತಿಳಿಯದ ಬುಡಕಟ್ಟು ಮಹಿಳೆಯರೇ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ. ನಿತ್ಯ ಕುಡಿದು, ಸಂಸಾರದ ಒಂದಿಷ್ಟು ಚಿಂತೆಯಿಲ್ಲದ ಪುರುಷರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಇಡೀ ಹಳ್ಳಿಯ ಮಹಿಳೆಯರು ಒಂದಾಗಿ ಸಾರಾಯಿ ನಿಷೇಧ ಮಾಡಿದ್ದಾರೆ.

ಆ ಹಳ್ಳಿಯೇ ಹಾಗೆಯೇ. ಬುಡಕಟ್ಟು  ಬದುಕುಗಳ ಸಂಗಮ. ನೂರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳನ್ನು ಹೊಂದಿರುವ ಆ  ಹಳ್ಳಿಯಲ್ಲಿ ಹೊತ್ತಿನ ಊಟಕ್ಕೂ ಕಷ್ಟ. ಪತಿ-ಪತ್ನಿಯರು ಎಲ್ಲಾರೂ ಕೂಲಿಗಾಗಿ ಅರಸುವವರು. ವಿದ್ಯೆ, ಶಿಕ್ಷಣ ಎಂಬುವುದು ಅವರ ಪಾಲಿಗೆ ಮರೀಚಿಕೆ. ಸಾಂಪ್ರದಾಯಿಕ ಬದುಕಿನ ಚೌಕಟ್ಟಿನಲ್ಲಿಯೇ ಇಂದಿಗೂ ಬದುಕು ಸವೆಸುವ ಅಲ್ಲಿನ ಕುಟುಂಬಗಳಲ್ಲಿ  ಆಧುನಿಕತೆಯ ಥಳುಕಿಲ್ಲ. ಸಿನಿಮಾ, ಫ್ಯಾಷನ್ ಯಾವುದೂ  ಗೊತ್ತಿಲ್ಲ. ದುಡಿಯುವುದು, ದಿನದ ಮೂರು ಹೊತ್ತಿನ ಅನ್ನ ತುಂಬಿಸಿಕೊಳ್ಳುವುದಷ್ಟೇ ಅವರಿಗೆ ಗೊತ್ತು.

ಅದು ಮಧ್ಯಪ್ರದೇಶದ ತಲನ್‌ಪುರ್ ಎಂಬ ಹಳ್ಳಿ
. ಇಲ್ಲಿನ  ಜನಸಂಖ್ಯೆ ಸುಮಾರು ೩೦೦೦. ಇಂದೋರ್‌ನಿಂದ ಇಲ್ಲಿಗೆ ಸುಮಾರು ೧೮೦ ಕಿ.ಮೀ. ದೂರವಿದೆ.

ಮತ್ತಷ್ಟು ಓದು »

24
ಏಪ್ರಿಲ್

ಇಂದಿನ ಯುವಕರು ಹಾಳಾಗಿದ್ದಾರೆಯೇ?

ಯೊಗೀಶ್ ಕೈರೋಡಿ

‘ಈಗಿನ ಯುವಕರು ಹಾಳಾಗಿದ್ದಾರೆ; ದಾರಿ ತಪ್ಪುತ್ತಿದ್ದಾರೆ’, ಇಂತಹ ಮಾತನ್ನು ಸಲೀಸಾಗಿ ಹೇಳಿ ಬಿಡುತ್ತೇವೆ. ಇದು ಸುಲಭದಲ್ಲಿ ಹೊರಳಿಕೊಳ್ಳುವ ನಾಲಗೆಯ ಮಾತೇ ಹೊರತು ಬುದ್ಧಿಪೂರ್ವಕ ವಿವೇಚನಯುಕ್ತ ಮಾತಲ್ಲ. ಭವಿಷ್ಯದ ಕುರಿತಂತೆ ಗಂಭೀರ ಚಿಂತನೆ ಹೊಂದಿರುವ ಅಧ್ಯಯನ ಶೀಲ ಹಾಗೂ ಮಾನವಪರವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗುವ ಯುವಕರು ನಮ್ಮ ಸುತ್ತ ಸಾಕಷ್ಟು ಇದ್ದಾರೆ. ಪ್ರತೀ ಕಾಲವೂ ಕೂಡ ತನ್ನ ನಂತರದ ತಲೆಮಾರನ್ನು ಕೆಟ್ಟಿದ್ದಾರೆ ಎಂದೇ ಪರಿಗಣಿಸಿ ಸಾಗುತ್ತಾ ಬಂತು. ಆದುದರಿಂದ ಇದೆಲ್ಲ ತಲೆಕೆಡಿಸಬೇಕಾದ ಸಂಗತಿಯಲ್ಲ.

ಒಂದು ವೇಳೆ ಯುವಕರು ದಾರಿತಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಾದರೂ ಅದರ ಹೊಣೆ ಸುತ್ತಲಿನ ಸಮಾಜದ್ದೇ ಹೊರತು ಯುವಕರದ್ದಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿ ಭಾಗಿಯಾಗಿದ್ದರು, ಅವರಿಗೆ ದೇಶ ಪ್ರೇಮವಿತ್ತು ಎಂದರೆ ಈ ರೀತಿಯ ಸದ್ಭಾವನೆಯನ್ನು ಆ ಕಾಲದ ಜವಾಬ್ದಾರಿಯುತ ಜನವರ್ಗ ಅಥವಾ ನಾಯಕರು ರೂಪಿಸಿದ್ದರು. ಇಂದು ರೀತಿಯ ಸದ್ಭಾವ ನೆಲೆಗೊಳ್ಳುವ ವಾತಾವರಣಕ್ಕಿಂತ ಮಾನವ ದ್ವೇಷಿ ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಅವಕಾಶಗಳು ಒದಗಿ ಬರುತ್ತಿದೆ. ಇದರಿಂದ ಮುಕ್ತಗೊಂಡು ಸ್ವತಂತ್ರ ಹಾಗೂ ಸ್ವಸ್ಥ ಮನಸ್ಸು ಯುವ ಸಮುದಾಯದಲ್ಲಿ ನೆಲೆಗೊಳ್ಳುವ ವಾತಾವರಣ ನಿರ್ಮಾಣ ಒಂದು ಬಗೆಯ ಆಂದೋಲನದಂತೆ ನಡೆಯಬೇಕು. ವರ್ತಮಾನದ ನಮ್ಮ ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಗಮನಿಸುವುದರೊಂದಿಗೆ ಸ್ವಸ್ಥ ಸಮಾಜದ ನಿರ್ಮಿತ ಸಾಧ್ಯ.

ವಿಭಜಕ ಮನಸ್ಸುಗಳ ಸೃಷ್ಟಿ:

ಜಾತಿ, ಮತ, ಪಕ್ಷ ಈ ಮೂರು ಅಂಶಗಳು ಮಾನವ ಮನಸ್ಸನ್ನು ನಿರಂತರ ಒಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಒಂದು ಸಮಾಜದ ಏಳಿಗೆಯಲ್ಲಿ ಜಾತಿ ಅಥವಾ ಮತದ ಸೇವಾಪರ ಚಟುವಟಿಕೆಯ ಮಹತ್ವವನ್ನು ಅಲ್ಲಗೆಳೆಯುವಂತಿಲ್ಲ. ಜನತೆಯ ಕಣ್ಣೀರನ್ನು ಒರೆಸುವ ಕಾರ್ಯಗಳನ್ನು ಸಾಂಘಿಕ ನೆಲೆಯಲ್ಲಿ ಮಾಡಿದೆ ಎಂಬುದು ಸತ್ಯ. ಒಂದು ಸಮುದಾಯದ ಒಳಗಿರುವ ಉಳ್ಳವರು ದುರ್ಬಲರ ಏಳಿಗೆಗೆ ಸ್ಪಂದಿಸಲು ಇದೊಂದು ಉತ್ತಮ ವ್ಯವಸ್ಥೆ. ಆದರೆ ಒಂದು ವ್ಯವಸ್ಥೆಯ ಒಳಗಡೇ ಒಬ್ಬರನ್ನು ಒಬ್ಬರು ಅವಲಂಬಿಸಿ ಸಹಕಾರ ಪ್ರವೃತ್ತಿಯಿಂದ ಬದುಕಬೇಕಾದುದು ಅಷ್ಟೇ ಅಗತ್ಯ. ಸ್ವಸಂಘಟನೆಯ ಬಲವರ್ಧನೆಗಾಗಿ ಅನ್ಯ ಸಮುದಾಯವನ್ನು ಅನಾವಶ್ಯಕ ಶತ್ರುವಾಗಿ ಬಿಂಬಿಸುವ ಸಂದರ್ಭ ಒದಗಿ ಬರಬಹುದು. ಇದು ಪರಸ್ಪರ ಅಪನಂಬಿಕೆಗೆ ಕಾರಣವಾಗಿ ಮಾತು ಮುರಿಯದೆಯೂ ಅಶಾಂತಿಗೆ ಕಾರಣವಾಗಬಹುದು. ಪೂರ್ವಾಗ್ರಹ ಮನೆ ಮಾಡಬಹುದು. ಇನ್ನು ತನ್ನ ಪಕ್ಷಬಲಪಡಿಸಿ ಅಧಿಕಾರಕ್ಕೆ ಮತ್ತಷ್ಟು ಓದು »

23
ಏಪ್ರಿಲ್

ಕ್ರಿ”ಕೆಟ್ಟಾ”ಟ

*ವಿಜಯ್ ಕುಮಾರ್

ಇನ್ನೇನು ವರ್ಲ್ಡ್ ಕಪ್ ಕ್ರಿಕೆಟ್ ಬಿಸಿ ಆರಿತು, ಕ್ರಿಕೆಟ್ ಕುರಿತಾದ ಚರ್ಚೆಗೆ ಒಂದಿಷ್ಟು ವಿರಾಮ ದೊರಕಬಹುದು ಅಂದುಕೊಳ್ಳುವಷ್ಟರಲ್ಲಿ ಐಪಿಎಲ್ ಟಿ-ಟ್ವೆಂಟಿ ಶುರುವಾಯ್ತು. ಆದರೆ ವರ್ಲ್ಡ್ ಕಪ್ ಕ್ರಿಕೆಟ್ ಹಾಗು ಐಪಿಎಲ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ವರ್ಲ್ಡ್ ಕಪ್ ಕ್ರಿಕೆಟ್  ಭಾಗವಹಿಸುವ ಪ್ರತಿಯೊಂದು ರಾಷ್ಟ್ರದ ಪ್ರತಿಷ್ಠೆಯ, ಅಭಿಮಾನದ ಸಂಕೇತದಂತೆ ಕಂಡರೆ ಐಪಿಎಲ್ ಒಬ್ಬ ವ್ಯಕ್ತಿಯ, ತಂಡದ ಮಾಲೀಕನ ಪ್ರತಿಷ್ಠೆಯ,ಗರ್ವದ ಸಂಕೇತವಾಗಿ ತೋರುತ್ತಿದೆ.
             ಐಪಿಎಲ್ ಕುರಿತು ಹೀಗೆ ಹೇಳಲು ಕಾರಣವಿದೆ. ಐಪಿಎಲ್ ಇಂದು ಒಂದು ಕ್ರೀಡೆಯಾಗಿ ಕಾಣುವ ಬದಲು ವ್ಯಾಪಾರವಾಗಿ ಬದಲಾಗಿದೆ. ಆಟಗಾರರು, ಕೋಚುಗಳು ಅಷ್ಟೇ ಅಲ್ಲದೇ ವಸ್ತ್ರವಿನ್ಯಾಸಕಾರರನ್ನೂ ಬಿಕರಿಗಿಡುವ, ಖರೀದಿ ಮಾಡುವ ಖಯಾಲಿ ಇರುವ ಸಿರಿವಂತರ ಗುಂಪೇ ಇಲ್ಲಿದೆ. Its not a game, Its a Gamble- ಹೌದು, ಈ ಮಾತನ್ನು ಹೇಳಲು ದುಃಖವಾಗುತ್ತದೆ. ಹಿಂದೆ ಈ ಸಿರಿವಂತ ಜನ ಕುದುರೆ ರೇಸುಗಳಲ್ಲಿ, ಕ್ಯಾಸಿನೋಗಳಲ್ಲಿ ತಮ್ಮ ಹಣ ತೊಡಗಿಸಿ ಮೋಜು ಮಾಡುತ್ತಿದ್ದರು, ಈಗ ಐಪಿಎಲ್ ನಲ್ಲಿ ಹಣ ತೊಡಗಿಸಿ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದಾರೆ.
                      ವಿಜಯ್ ಮಲ್ಯ ಇರಬಹುದು, ಶಾರುಖ್ ಖಾನ್ ಇರಬಹುದು, ಇಲ್ಲವೇ ಅಂಬಾನಿ ಕುಟುಂಬದವರಿರಬಹುದು ಇವರಿಗೆ ಕ್ರಿಕೆಟ್ ಬಗ್ಗೆ ಇರುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ಬಳಿ ಇರುವ ಕಪ್ಪುಹಣವನ್ನು ಬೆಳ್ಳಗೆ ಮಾಡಿಕೊಳ್ಳುವ ಸುಲಭೋಪಾಯದಂತೆ ಐಪಿಎಲ್ ಗೋಚರಿಸುತ್ತಿದೆ. ಇವರಲ್ಲಿ ತಮ್ಮ ತಂಡ ಪ್ರತಿನಿಧಿಸುವ ಪ್ರಾಂತ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದಕ್ಕೆ ನಮ್ಮ (!!??) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾಜಾ ಉದಾಹರಣೆಯಂತಿದೆ. ಒಬ್ಬ ಅಭಿಮನ್ಯು ಮಿಥುನ್ ಹೊರತುಪಡಿಸಿದರೆ ದುರ್ಬೀನು ಹಾಕಿ ಹುಡುಕಿದರೂ ಮತ್ತೊಬ್ಬ ಕರ್ನಾಟಕದ ಆಟಗಾರನೂ ತಂಡದಲ್ಲಿ ಇಲ್ಲ ಎಂದರೆ ಅದು ಕನ್ನಡಿಗರ ದುರದೃಷ್ಟವೋ ಅಥವಾ ವಿಜಯ್ ಮಲ್ಯ ಎಂಬ ಮಹಾನ್ ಕನ್ನಡಿಗನ ಕನ್ನಡ ಪ್ರೇಮವೋ ತಿಳಿಯದಾಗಿದೆ. ಮತ್ತಷ್ಟು ಓದು »
23
ಏಪ್ರಿಲ್

ಬಂಗಾರಪಲ್ಕೆಗೆ ಮುಕ್ತಿ ಎಂದು?

ಪವನ್ ಎಂ.ಟಿ

ನಮ್ಮ ಸರಕಾರ ಕ್ರಿಕೇಟ್ ಆಟಗಾರರಿಗೆ ೨೫ ಲಕ್ಷ ರೂಪಾಯಿ ಹಣವನ್ನು ಕೊಡಲು ಮುಂದಾಗಿದೆ. ಪಾಪ ಅವರಿಗೆ ಏನೂ ಇಲ್ಲ ನೋಡಿ ಅದಕ್ಕೆ ಕೊಡ್ಲಿ ಬಿಡಿ. ನಮ್ಮ ಸರಕಾರದ ಹಣೆ ಬರಹವೇ ಅಷ್ಟು. ಹಣ ಇರುವವರಿಗೆ ಹಣವನ್ನು ನೀಡುತ್ತಾರೆಯೇ ಹೊರತು ಬಡವರಿಗೆ ನೀಡುವುದಿಲ್ಲ. ನಮ್ಮಲ್ಲಿ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ವಿನಹ ಬಡವ ಶ್ರೀಮಂತನಾದದಿಲ್ಲ. ನಮ್ಮಲ್ಲಿ ಕಾನೂನನ್ನು ಪಾಲಿಸುವವರಿಗೆ ಮಾತ್ರ ಕಾನೂನಿದೆ. ಆದರೆ ನಮ್ಮಲ್ಲಿ ಒಂದು ಒತ್ತಿನ ಊಟಕ್ಕೂ ಕಷ್ಟಪಡೊ, ನಾಗರೀಕ ಸೌಲಭ್ಯವನ್ನೇ ಕಾಣದೆ ಇರೋ ಕೆಲವು ಗ್ರಾಮಗಳಿವೆ, ಜನರಿದ್ದಾರೆ ಅಂತ ಸರಕಾರಕ್ಕೆ ಗೊತ್ತೇ ಇಲ್ಲ ಅಂತ ಕಾಣ್‌ತ್ತದೆ. ಯಾಕಂದ್ರೇ ನಮ್ಮ ಸರಕಾರಕ್ಕೆ ಕುರ್ಚಿ ಉಳಿಸ್‌ಕೊಳ್ಳೊ ಚಿಂತೆಯಾದರೆ ವಿರೋಧ ಪಕ್ಷಕ್ಕೆ ಕುರ್ಚಿ ಬೀಳಿಸೋ ಚಿಂತೆ ಇದರ ನಡುವೆ ಸಿಲುಕಿರೂ ಜನರ ಗತಿ ಅದೋಗತಿ.

ನಿಮ್ಮ ಮನೆಗೆ ಇನ್ನಾರದೋ ಮನೆಯ ರಸ್ತೆಯಲ್ಲಿ ಅಥವ ತೋಟದ ರಸ್ತೆಯಲ್ಲಿ ಹೋಗಬೇಕು ಎಂದಾದರೆ ನಿಮಗೆ ಮನೆಗೆ ಅಥವ ತೋಟಕ್ಕೆ ಸಂಬಂಧಪಟ್ಟ ಮಾಲಿಕನಿಂದ ಏನೆಲ್ಲ ನಿರ್ಭಂದಗಳು ಬರಬಹುದೆಂದು ನೀವೆ ಯೋಚಿಸಿ. ನಿವು ಅವ್ರು ಹೇಳುವ ಎಲ್ಲಾ ಮಾತುಗಳನ್ನು ಸರಿಯಾಗಿ ಕೇಳಿದರೆ ಮಾತ್ರ ನಿಮಗೆ ಅಲ್ಲಿ ಸಂಚರಿಸಲು ಅವಕಾಶ. ಹಾಗೆಂದು ನಿರ್ಭಂದನೆಯನ್ನು ಸಹಿಸಿಕೊಂಡು ಎಷ್ಟುದಿನವೆಂದು ನೀವು ಓಡಾಡುತ್ತಿರಿ. ಅದು ನಿಮ್ಮಿಂದ ನಮ್ಮಿಂದ ಕಂಡಿತಾ ಸಾಧ್ಯವಿಲ್ಲ. ಆದ್ರೆ ಇಲ್ಲಿ ಎಲ್ಲ ನಿರ್ಭಂದನೆಗಳ ನಡುವೆ ಸರಿಯಾದ ರಸ್ತೆ ಇಲ್ಲದೆಬದುಕುತ್ತಿರುವವರು ಬೆಳ್ತಂಗಡಿತಾಲೂಕಿನ ದಿಡುಪೆಯ ಸಮೀಪದ ಬಂಗಾರು ಪಲ್ಕೆಯ ಮಲೆಕುಡಿರು. ಪಾಪ ಇವರ ಪರಿಸ್ಥಿತಿಯನ್ನು ನಮ್ಮಲ್ಲಿ ಆಡಳಿತಗಾರರೆಂದು ಕರೆಯಿಸಿಕೊಳ್ಳುವವರಿದ್ದಾರಲ್ಲ ಅವರೊಮ್ಮೆ ಬಂದು ನೋಡಬೇಕು.

ನಾವು ಮಲೆಕುಡಿಯರ ಪ್ರದೇಶಗಳಿಗೆ ಭೇಟಿ ನೀಡಿದಾಗ ನಮಗೆ ದಿಡುಪೆಯ ಬಂಗಾರು ಪಲ್ಕೆ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿತ್ತು  ಇಲ್ಲಿಯ ರಸ್ತೆ, ಜನ, ನಾಗರಿಕ ಸೌಲಭ್ಯ ಎಲ್ಲವೂ ಇಲ್ಲಿ ವಿಭಿನ್ನವೇ.

ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ದಿಡುಪೆ ಎನ್ನವ ಸ್ಥಳದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿರುವ ಬಂಗಾರ್ ಪಲ್ಕೇಗೆ ತೆರಳಬೇಕಾದರೆ, ಪ್ರಪಂಚದ ಅತ್ಯಂತ ಕೆಟ್ಟದಾದ ರಸ್ತೆ ನಮಗೆ ಸಿಗುತ್ತದೆ. ಮನುಷ್ಯ ಸರಿಯಾಗಿ ಕಾಲು ನಡಿಗೆಯಲ್ಲಿಯೂ ಸಂಚರಿಸಲು ಸಾಧ್ಯವಿಲ್ಲದ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉಧ್ಯಾನದ ಒಳಗಿದೆ. ಬೇಸಿಗೆ ಸಮಯವಾದುದರಿಂದ ನಮಗೆ ತೆರಲು ಒಂದೊ ೪ ವೀಲ್ ವ್ಯವಸ್ಥೆಯಿರುವ ಒಂದು ಜೀಪ್ ನಮಗೆ ಸಿಕ್ಕಿತು ಈ ೪ ವೀಲ್ ಜೀಪ್ ಬಿಟ್ಟು ಬೇರೆ ಯಾವುದೇ ವಾಹನ ಅಲ್ಲಿಗೆ ತೆರಳು ಸಾಧ್ಯವಿಲ್ಲ. ಮತ್ತಷ್ಟು ಓದು »

22
ಏಪ್ರಿಲ್

ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ…

– ಸಂಪಾದಕೀಯ

ಮಾನ್ಯರೆ,

ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.

ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.

ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.

ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ. ಮತ್ತಷ್ಟು ಓದು »

22
ಏಪ್ರಿಲ್

ನೀರು ಅತ್ಯಮೂಲ್ಯವೇಕೆ?

– ಅರುಣ್ ಎಲ್

ಭೂಪಟವನ್ನೋ, ಭೂಗೋಲವನ್ನೋ ನೋಡಿದಾಗ ಕಾಣುವ ನೀಲಿ ಬಣ್ಣದ್ದೆಲ್ಲವೂ ನೀರು ಎಂಬುದು ಗೊತ್ತಿರುವ ಸಂಗತಿಯಷ್ಟೆ. ಭೂಗ್ರಹದ ಮುಕ್ಕಾಲು ಭಾಗ ನೀರಿದ್ದೂ, ಕೇವಲ ಕಾಲು ಭಾಗವಷ್ಟೇ ನೆಲವೆಂಬ ವಿಷಯವನ್ನು ಪ್ರಾಥಮಿಕ ಶಾಲೆಯಾಲ್ಲೇ ಕಲಿತಿರುತ್ತೇವೆ. ಅಷ್ಟೊಂದು ನೀರಿದ್ದೂ ನಾವು “ಕೊರತೆ”ಯ ಬಗ್ಗೆ ಮಾತನಾಡುತ್ತಿರುತ್ತೇವೆ. ಏಕೆ?

ವಿಶ್ವಸಂಸ್ಥೆಯ ವರದಿಯ ಪ್ರಕಾರ ಭೂಗ್ರಹದಲ್ಲಿ ಸುಮಾರು ಒಂದುವರೆ ಸಾವಿರ ಮಿಲಿಯನ್ ಕ್ಯುಬಿಕ್ ಕಿಲೋಮೀಟರು ನೀರಿದೆಯಂತೆ.

ಇದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದು ಕಿಲೋಮೀಟರು ಉದ್ದದ, ಒಂದು ಕಿಲೋಮೀಟರು ಅಗಲದ, ಒಂದು ಕಿಲೋಮೀಟರು ಆಳದ ಘನವಸ್ತುವನ್ನು ನೀರಿನಿಂದ ತುಂಬಿಸಿದರೆ ಅದು ಒಂದು ಕ್ಯುಬಿಕ್ ಕಿಲೋಮೀಟರ್. ಇದನ್ನು ಸಾವಿರದೈನೂರರಿಂದ ಗುಣಿಸಿದರೆ ನೀರಿನ ಪ್ರಮಾಣವು ಕಲ್ಪನೆಗೆ ಸಿಕ್ಕೀತು.

ಇಷ್ಟೊಂದು ನೀರಿನಲ್ಲಿ ಶೇ. 98ರಷ್ಟು ಸಮುದ್ರವೇ ಆಗಿದೆ. ಅಂದರೆ, ಒಟ್ಟು ನೀರಿನಲ್ಲಿ ಕೇವಲ ಶೇ. ಎರಡರಷ್ಟು ಮಾತ್ರ ಶುದ್ಧ ಜಲ ಇರುವುದೆಂದಾಯಿತಷ್ಟೆ?

ಈ ಶೇ. ಎರಡರಷ್ಟು ಶುದ್ಧಜಲದಲ್ಲಿ ಮುಕ್ಕಾಲು ಭಾಗ ಧ್ರುವಪ್ರದೇಶಗಳಲ್ಲಿ ಮಂಜುಗೆಡ್ದೆಗಳ ರೂಪದಲ್ಲಿದೆ. ಇನ್ನು ಶೇ 22.5ರಷ್ಟು ನೀರು ಅಂತರ್ಜಲದ ರೂಪದಲ್ಲಿ ಅತಲ, ವಿತಲ, ರಸಾತಲ, ಪಾತಾಲವನ್ನು ಸೇರಿಕೊಂಡಿದೆ.

ಮತ್ತಷ್ಟು ಓದು »