ಏಕರೂಪ ನಾಗರಿಕ ಸಂಹಿತೆ – ಸುಪ್ರೀಂ ಕೋರ್ಟ್ V/S ಜಮಾತೆ ವಿಚಾರಧಾರೆ
– ಅನಿರುದ್ಧ ವಸಿಷ್ಟ,ಭದ್ರಾವತಿ
ಅರಾಜಕತೆ ತಂದೊಡ್ಡದಿರಲಿ ಧರ್ಮಾಧಾರಿತ ಕಾನೂನು
ಪ್ರಜಾಪ್ರಭುತ್ವ ದೇಶದಲ್ಲಿರುವ ಭಾರತೀಯರಿಗೆ ದೇಶದ ಸಂವಿಧಾನವೇ ಮೇಲ್ಪಂಕ್ತಿಯಾಗಿದ್ದು, ಸಂವಿಧಾನವೇ ಅಂತಿಮವಾದುದು. ಧರ್ಮ ಗ್ರಂಥಗಳಾದ ರಾಮಾಯಣ, ಮಹಾಭಾರತ, ಕುರಾನ್, ಬೈಬಲ್‌ಗಳು ಆಯಾ ಧರ್ಮದ ಅನುಯಾಯಿಗಳ ವೈಯಕ್ತಿಕವಾಗಿರಬೇಕು.ಆದರೆ,ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿ ಸರ್ಕಾರಗಳು ಕೈಗೊಂಡ ನಿರ್ಧಾರಗಳು ಸಂವಿಧಾನ ವಿರುದ್ಧ ನಡೆಯಲು ಪ್ರೇರಣೆಯಾಗುತ್ತವೆ ಎಂದರೆ ಅದು ಪ್ರಜಾಪ್ರಭುತ್ವದ ದುರಂತವೇ ಹೌದು.೩೦೦ ವರ್ಷಗಳ ಕಾಲ ಬ್ರಿಟೀಷರಿಂದ ಆಳಿಸಿಕೊಂಡ ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದರೂ, ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿಯನ್ನೆ ಇಂದಿಗೂ ಹೊಂದಿದೆ ಎಂದರೆ ತಪ್ಪಲ್ಲ. ಇದು ಕೇವಲ ಆಳುವ ಪಕ್ಷಗಳ ಮನಸ್ಥಿತಿ ಮಾತ್ರವಲ್ಲ, ದೇಶದ ಪ್ರತಿ ಧರ್ಮ ಹಾಗೂ ಜಾತಿಗಳಲ್ಲಿ ಇದು ಹಾಸು ಹೊಕ್ಕಾಗಿದೆ.
೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರೂಪಿಸಲಾದ ಸಂವಿಧಾನ ಮಹೋನ್ನತ ಆಶಯಗಳನ್ನು ಹೊಂದಿದೆ.ಸಂವಿಧಾನವೇ ಭಾರತೀಯರಿಗೆ ಒಂದು ರೀತಿಯಲ್ಲಿ ಸವೋತ್ತಮ ಎಂದರೂ ತಪ್ಪಲ್ಲ. ಆದರೆ, ಸಂವಿಧಾನ ಆಶಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಯಾವುದೇ ಸರ್ಕಾರ ಅಥವಾ ಧರ್ಮಗಳು ನಡೆದುಕೊಂಡಾಗ ಅದನ್ನು ನ್ಯಾಯಾಂಗದಲ್ಲಿ ಪ್ರಶ್ನೆ ಮಾಡುವ ಅಧಿಕಾರವನ್ನು ಇದೇ ಸಂವಿಧಾನ ಕಲ್ಪಿಸಿದೆ. ಆದರೆ, ಯಾವುದೇ ಒಂದು ಒಳ ವ್ಯವಸ್ಥೆ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸುತ್ತದೆ ಎಂದರೆ ಹೇಗೆ?
ಜೆಎನ್‍ಯು : ಯೂನಿವರ್ಸಿಟಿಯ ಹೆಸರಲ್ಲೇ ದೋಷ ಇರಬಹುದೆ?!
– ರೋಹಿತ್ ಚಕ್ರತೀರ್ಥ
ನೇರಾನೇರವಾಗಿ ವಿಷಯಕ್ಕೆ ಬರೋಣ. ಜವಹರ್‍ಲಾಲ್ ನೆಹರೂ ಹೆಸರಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮೊನ್ನೆ ಫೆಬ್ರವರಿ 9ನೇ ತಾರೀಖು ಡಿಎಸ್‍ಯು (ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್) ಎಂಬ ಸಂಘಟನೆಯ ವಿದ್ಯಾರ್ಥಿಗಳು ಎರಡು ವರ್ಷದ ಹಿಂದೆ ನೇಣುಗಂಬವೇರಿದ್ದ ಒಬ್ಬ ಭಯೋತ್ಪಾದಕನ “ಪುಣ್ಯತಿಥಿ”ಯನ್ನು ಆಚರಿಸಲು ನಿರ್ಧರಿಸಿದ್ದರು. ಕಾರ್ಯಕ್ರಮಕ್ಕೆ ಅವರು ಕೊಟ್ಟಿದ್ದ ಹೆಸರು “ಅಫ್ಜಲ್ ಗುರು ಮತ್ತು ಮಖ್‍ಬೂಲ್ ಭಟ್‍ರ ನ್ಯಾಯಾಂಗ ಹತ್ಯೆಯ ನೆನಪಿನಲ್ಲಿ” ನಡೆಸುವ ಕಾರ್ಯಕ್ರಮ ಎಂದು. ಈ ಡಿಎಸ್‍ಯು ಒಂದು ಮಾವೋವಾದಿ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ. ದೇಶದೊಳಗಿನ ಮಾವೋವಾದಿ ನಕ್ಸಲರಿಗೆ ಗುಟ್ಟಿನಿಂದಲ್ಲ, ಓಪನ್ ಆಗಿ ಬೆಂಬಲ ಸೂಚಿಸುವ ಸಂಘಟನೆ ಇದು! ಆದರೆ, ಎಲ್ಲಿಯವರೆಗೆ ಈ ಸಂಘಟನೆಯ ವಿದ್ಯಾರ್ಥಿಗಳು ತಾವಾಗಿ ಬಂದೂಕು ಹಿಡಿದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ತಿರುಗಾಡುವುದಿಲ್ಲವೋ ಅಲ್ಲಿಯವರೆಗೂ ಅವರನ್ನು ಸಹಿಸಿಕೊಳ್ಳಬಹುದು ಎಂಬುದು ವಿವಿಯ ಉದಾರ ಧೋರಣೆ. ಫೆಬ್ರವರಿ 9ರಂದು ಆಯೋಜನೆಯಾಗಿದ್ದ ಕಾರ್ಯಕ್ರಮದ ಬಗ್ಗೆ ಕಣ್ಮುಚ್ಚಿ ಕುಳಿತಿದ್ದ (ಅಸಲಿಗೆ ಮಾಹಿತಿಯೇ ಇರದಿದ್ದ) ವಿವಿಯ ಆಡಳಿತ ಮಂಡಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒಂದು ಪತ್ರ ಬರೆದು “ಸುಪ್ರೀಂ ಕೋರ್ಟಿನ ತೀರ್ಪಿಗೆ ಅನುಸಾರವಾಗಿ ಶಿಕ್ಷೆಗೊಳಪಟ್ಟ ಒಬ್ಬ ಉಗ್ರನ ಹೆಸರಲ್ಲಿ ಅವನ ಪುಣ್ಯತಿಥಿಯನ್ನು ಕ್ಯಾಂಪಸ್ ಒಳಗೆ ಆಚರಿಸುವುದು ಸರಿಯೇ? ಇದು ನ್ಯಾಯಾಂಗ ನಿಂದನೆ ಮಾತ್ರವಲ್ಲ; ದೇಶದ ಸಮಗ್ರತೆಯನ್ನೇ ಪ್ರಶ್ನಿಸುವ ಕೆಲಸ. ಇಂಥ ಅನರ್ಥಗಳು ನಡೆಯದಂತೆ ವಿವಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಕೇಳಿಕೊಂಡಿತು. ಬಹುಶಃ ಆಗ ವಿವಿಗೂ ಈ ಸಂಗತಿ ಮುಂದೆ ಹೇಗೆಲ್ಲ ಕವಲೊಡೆಯಬಹುದು, ಎಷ್ಟು ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂಬ ಅಂದಾಜು ಸಿಕ್ಕಿರಬೇಕು. ಕೂಡಲೇ ಅದು ಡಿಎಸ್‍ಯು ಸಂಘಟನೆಯ ಮುಖಂಡರನ್ನು ಕರೆದು, ಇಂಥಾದ್ದನ್ನೆಲ್ಲ ಇಲ್ಲಿ ಇಟ್ಟುಕೊಳ್ಳಬೇಡಿ; ಕ್ಯಾಂಪಸ್ ಹೊರಗೆ ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಸ್ಪಷ್ಟ ಸೂಚನೆ ಕೊಟ್ಟಿತು.
ದೇವಾಲಯ ಪ್ರವೇಶದ ಕುರಿತು ತಪ್ಪು ತಿಳಿವಳಿಕೆಗಳು
– ಡಾ. ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ,ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.
ಇಂದು ಎರಡು ವಿಭಿನ್ನ ಸ್ಥಳಗಳಲ್ಲಿ ದೇವಾಲಯಗಳಿಗೆ ಸ್ತ್ರೀಯರ ಪ್ರವೇಶದ ಕುರಿತು ಹೋರಾಟಗಳು ನಡೆಯುತ್ತಿವೆ. ಈ ಹೋರಾಟವನ್ನು ನಡೆಸುತ್ತಿರುವವರು ಪ್ರಗತಿಪರರು ಹಾಗೂ ಸ್ತ್ರೀವಾದಿಗಳು. ಈ ಸಂದರ್ಭದಲ್ಲಿ ಅವರು ಎತ್ತುತ್ತಿರುವ ಚರ್ಚೆಯನ್ನು ಗಮನಿಸಿದಾಗ ಭಾರತೀಯ ಸಂಸ್ಕೃತಿಯ ಕುರಿತು ಈ ಮುಂದಿನ ತಪ್ಪು ಕಲ್ಪನೆಗಳು ಅವರಿಗೆ ಇರುವುದು ಸ್ಪಷ್ಟ. ಅದೆಂದರೆ: 1. ಹಿಂದೂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು. 2. ಹಿಂದೂಗಳ ದೇವಾಲಯಗಳು ಚರ್ಚು ಮಸೀದಿಗಳಂತೆ ಹಿಂದೂಗಳ ಸಾರ್ವಜನಿಕ ಪೂಜಾ ಸ್ಥಳಗಳು. ಹಾಗಾಗಿ ಹಿಂದೂ ಮಹಿಳೆಯರಿಗೆ ಇಂಥ ದೇವಾಲಯಗಳಲ್ಲಿ ಬಿಟ್ಟುಕೊಳ್ಳದಿರುವುದು ಲೈಂಗಿಕ ತಾರತಮ್ಯವನ್ನು ಮಾಡಿದಂತೇ ಎಂಬುದು ಅವರ ತರ್ಕ.
ಹಿಂದೂ ಎನ್ನುವುದು ಇಸ್ಲಾಂ ಕ್ರಿಶ್ಚಿಯಾನಿಟಿಗಳಂತೆ ರಿಲಿಜನ್ನಲ್ಲ. ಇದೊಂದು ಬಹು ಸಂಪ್ರದಾಯಗಳ ಸಮಾಜ. ಈ ಸಂಪ್ರದಾಯಗಳಿಗೆ ಆಧಾರವಾಗಿ ಕ್ರೈಸ್ತ ಮುಸ್ಲಿಮರಿಗೆ ಇರುವಂತೆ ಯಾವುದೇ ದೇವವಾಣಿ, ಪವಿತ್ರ ಗ್ರಂಥ ಅಥವಾ ಏಕರೂಪೀ ಡಾಕ್ಟ್ರಿನ್ನುಗಳ ಆಧಾರವಿಲ್ಲ. ಹಾಗಾಗಿ ಇಂಥ ಸಂಪ್ರದಾಯಗಳು ವೈವಿಧ್ಯಪೂರ್ಣವಾಗಿ ಬೆಳೆದುಕೊಂಡಿವೆ. ಹಿಂದೂ ದೇವಾಲಯಗಳು ಚರ್ಚುಗಳಂತೆ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಘಟಕಗಳಲ್ಲ. ಅವು ಹುಟ್ಟಿಕೊಳ್ಳುವುದು,ಅವುಗಳ ಅಭಿವೃದ್ಧಿ,ಜನಪ್ರಿಯತೆ,ನಿರ್ವಹಣೆ,ಅವನತಿ ಇವೆಲ್ಲ ಆಯಾ ಕ್ಷೇತ್ರಗಳ ಕ್ರಿಯಾಶೀಲತೆಗೆ ಸಂಬಂಧಪಟ್ಟ ಖಾಸಗಿ ವಿಚಾರಗಳಾಗಿವೆ. ಅವುಗಳಿಗೆ ಭಕ್ತರು ನಾನಾ ಕಡೆಗಳಿಂದ ಬರುತ್ತಾರೆ ಎಂಬ ಕಾರಣಕ್ಕೆ ಅವು ಸಾರ್ವಜನಿಕವಲ್ಲ. ಏಕೆಂದರೆ ಆ ಭಕ್ತರಿಗೆ ಅಲ್ಲಿ ಬರಲೇಬೇಕೆಂಬ ನಿರ್ಬಂಧವಿಲ್ಲ.ಭಕ್ತರು ಆಯಾ ಕ್ಷೇತ್ರದ ರೀತಿ ರಿವಾಜುಗಳಿಗೆ ಗೌರವಕೊಟ್ಟೇ ಅಲ್ಲಿಗೆ ತಮ್ಮ ಇಷ್ಟಾರ್ಥಗಳನ್ನು ಪಡೆಯಲು ಅಲ್ಲಿಗೆ ಬಂದಿರುತ್ತಾರೆ.ಯಾರಿಗಾದರೂ ಹೊಸ ದೇವಾಲಯವನ್ನು ಕಟ್ಟಿ ಬೆಳೆಸುವ ಆಯ್ಕೆ ಮುಕ್ತವಾಗಿದೆ. ಹಾಗಾಗಿ ನಮ್ಮಲ್ಲಿ ಜಾತಿಗಳಿಗೆ,ಮತಗಳಿಗೆ,ಕುಲಗಳಿಗೆ,ಪ್ರದೇಶಗಳಿಗೆ,ಊರುಗಳಿಗೆ,ಗಲ್ಲಿಗಳಿಗೆ ಪ್ರತ್ಯೇಕದೇವಾಲಯಗಳು ಇರುವುದು.
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ
ಇತ್ತೀಚೆಗೆ, ಲೇಖಕ ರೋಹಿತ್ ಚಕ್ರತೀರ್ಥ ಅವರ ಕಥಾಸಂಕಲನಕ್ಕೆ ಹಿರಿಯ ಲೇಖಕರಾದ ಬೊಳುವಾರ ಮಹಮ್ಮದ್ ಕುಂಞ್ ಯವರು ಮುನ್ನುಡಿ ಬರೆದಿರುವ ವಿಷಯವಾಗಿ ಫೇಸ್ಬುಕ್ಕಿನಲ್ಲಿ ವಾದ-ವಿವಾದಗಳು ನಡೆಯುತ್ತಿವೆ.ಅದಕ್ಕೆ ಪ್ರತಿಕ್ರಿಯಿಸಿದ ಬೊಳುವಾರರು, ಮೂವತ್ತು ವರ್ಷಗಳ ಹಿಂದೆ ಬರೆದಿದ್ದ “ಮುಸ್ಲಿಮನಾಗಿರುವುದೆಂದರೆ…” ಲೇಖನವನ್ನು ನೆನೆಸಿಕೊಂಡರು.ಆ ಲೇಖನದ ಕುರಿತಾಗಿ ಕಥೆಗಾರರು ಮತ್ತು ವಿಜಯವಾಣಿಯ ಅಂಕಣ ಬರಹಗಾರರಾದ ಪ್ರೇಮಶೇಖರ ಅವರು ತಮ್ಮ ವಾಲ್ನನಲ್ಲೊಂದು ಅಭಿಪ್ರಾಯ ಹಾಕಿದ್ದರು.ಆ ಅಭಿಪ್ರಾಯದ ಕುರಿತು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಅವರು “ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ” ಎಂದಿದ್ದರು.ಪ್ರೇಮಶೇಖರ ಅವರು ಅಮೀನರಿಗೆ ಕೊಟ್ಟ ಉತ್ತರ ಇಲ್ಲಿದೆ… ಜೊತೆಗೆ ಬೊಳುವಾರರ ಹಳೇ ಲೇಖನದ ಪ್ರತಿಯೂ ಇದೆ – ನಿಲುಮೆ
– ಪ್ರೇಮ ಶೇಖರ ಅವರ ಮೊದಲ ಅಭಿಪ್ರಾಯ
ಬೊಳುವಾರರು “ಸುಧಾ” ಸಾಪ್ತಾಹಿಕದಲ್ಲಿ “ಮುಸ್ಲಿಮನಾಗಿರುವುದೆಂದರೆ…” ಎಂಬ ಲೇಖನ ಬರೆದು ಮೂವತ್ತನಾಲ್ಕೂವರೆ ವರ್ಷಗಳಾಗುತ್ತಾ ಬಂದಿವೆ. ಈ ಆವಧಿಯಲ್ಲಿ ನೇತ್ರಾವತಿಯಲ್ಲಿ ಅದೆಷ್ಟು ನೀರು ಹರಿದಿದೆ! ಹಾಗೆಯೇ ಬೊಳುವಾರರು ಬೆಳೆಯುತ್ತಾ ಹೋಗಿದ್ದಾರೆ, ಅದು ಅವರ ಹೆಗ್ಗಳಿಕೆ. ಆದರೆ ಅದಕ್ಕೆ ವಿರುದ್ಧವಾಗಿ, ಆ ಲೇಖನವನ್ನು ಅಂದು ಓದಿದವರು ಅಲ್ಲೇ ಉಳಿದುಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಅಧಃಪಾತಾಳಕ್ಕಿಳಿಯುತ್ತಿದೆ.
ಮೂವತ್ತೂ ದಾಟದ ಆ ದಿನಗಳಲ್ಲಿ ಬೊಳುವಾರರು ಬರೆದ, ವೈಚಾರಿಕತೆಗಿಂತಲೂ ಭಾವನಾತ್ಮಕತೆಗೆ ಒತ್ತುಕೊಟ್ಟಿದ್ದ, ಆ ಲೇಖನದಲ್ಲಿ ಒಳ್ಳೆಯ ಒಳನೋಟಗಳಿದ್ದಂತೇ ಉಪಖಂಡದ ಇತಿಹಾಸದ ಬಗ್ಗೆ, ದೇಶವಿಭಜನೆಯ ಬಗ್ಗೆ ಹಲವು ತಪ್ಪುಗ್ರಹಿಕೆಗಳೂ ಇದ್ದವು. ಭಾರತಕ್ಕೆ ಮುಸ್ಲಿಮರ, ನಂತರ ಬ್ರಿಟಿಷರ ಆಗಮನದ ಸ್ವರೂಪದ ಬಗ್ಗೆ, ದೇಶವಿಭಜನೆಯ ಬಗ್ಗೆ ಬೊಳುವಾರದ ತಿಳುವಳಿಕೆಗಳಲ್ಲಿ ಅಸ್ಪಷ್ಟತೆಯಿತ್ತು. ನನಗೆ ತಕ್ಷಣಕ್ಕೆ ನೆನಪಾಗುವುದು ಇದು- “ಪಾಕಿಸ್ತಾನ ಬೇಕೇ ಬೇಡವೇ ಎಂದು ಒಂದು ಜನಮತಗಣನೆ ನಡೆಯಿತಂತೆ, ಆದರೆ ಅಂಥದು ನಡೆದ ಬಗ್ಗೆ ನನ್ನ ತಂದೆಯವರಿಗೆ ಗೊತ್ತೇ ಇಲ್ಲ” ಎಂಬುದಾಗಿ ಬೊಳುವಾರರು ಬರೆದಿದ್ದರು. ವಾಸ್ತವವೆಂದರೆ ಬೊಳುವಾರರ ತಂದೆಯವರಿಗೆ ಆ ಜನಮತಗಣನೆಯ ಬಗ್ಗೆ ಗೊತ್ತಾಗಿ ಅವರದರಲ್ಲಿ ಭಾಗಿಯಾಗುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಅಂಥದೊಂದು ಆಯ್ಕೆ ಎದುದಾದದ್ದು ಗಡಿನಾಡು ಪ್ರಾಂತ್ಯ ಮತ್ತು ಸಿಲ್ಹೆಟ್ (ಈಗ ಬಾಂಗ್ಲಾದೇಶದಲ್ಲಿದೆ) ಜಿಲ್ಲೆಯ ಜನತೆಗೆ ಮಾತ್ರ. ದೇಶವಿಭಜನೆಯ ನಿಜವಾದ ಆರೋಪಿಗಳಾದ ಮುಸ್ಲಿಂ ಲೀಗ್ ಮತ್ತು ಬ್ರಿಟಿಷರ ಪಾತ್ರವನ್ನು ಕಡೆಗಣಿಸಿ ಪರಿಸ್ಥಿತಿಯ ಕೈಗೊಂಬೆಯಾದ ಕಾಂಗ್ರೆಸ್‍ನ ಪಾತ್ರವನ್ನು ದೊಡ್ಡದಾಗಿ ತೋರಿಸುವ ಪ್ರಯತ್ನವೂ ಆ ಲೇಖನದಲ್ಲಿತ್ತು. ಕೋಮುವಾದದ ಉಗಮದ ಬಗೆಗೂ ಅಂಥದೇ ತಪ್ಪುತಿಳುವಳಿಕೆಯ ಭಾವನಾತ್ಮಕ ವಿವರಣೆಗಳಿದ್ದವು. ಅಂಥದೊಂದು ತಪ್ಪುಗ್ರಹಿಕೆಯನ್ನು ಎರಡುವಾರಗಳ ನಂತರ ಸಮುದ್ರಮಧನ ವಿಭಾಗದಲ್ಲಿ ಪ್ರಜ್ಞಾವಂತ ಓದುಗರೊಬ್ಬರು “ಮುಸ್ಲಿಂ ಲೀಗ್ ಯಾವಾಗ ಸ್ಥಾಪನೆಯಾಯಿತು, ಆರ್‌ಎಸ್‌ಎಸ್ ಯಾವಾಗ ಸ್ಥಾಪನೆಯಾಯಿತು ಎಂದು ನೋಡಿದರೆ ಯಾವುದು ಯಾವುದಕ್ಕೆ ಪ್ರತಿಕ್ರಿಯೆ ಎಂದು ತಿಳಿಯುತ್ತದೆ” ಎಂಬುದಾಗಿ ಹೇಳುವುದರ ಮೂಲಕ ಬೊಳುವಾರರಿಗೆ ಈ ದೇಶದ ಚರಿತ್ರೆಯ ಒಂದು ಸತ್ಯವನ್ನು ಮನಗಾಣಿಸಲು ಪ್ರಯತ್ನಿಸಿದ್ದರು. ನಂತರ ಬೊಳುವಾರದು ಬೆಳೆಯುತ್ತಾ ಹೋದರು. ಐದೇ ತಿಂಗಳಲ್ಲಿ “ದೇವರುಗಳ ರಾಜ್ಯದಲ್ಲಿ” ಎಂಬ ಅದ್ಭುತ ಕಥೆ ರಚಿಸಿದರು. ಅವರ ಬೆಳವಣಿಗೆಯ ಓಟ ಇನ್ನೂ ಸಾಗಿದೆ. ನನಗವರು ಅನುಕರಣೀಯವಾಗುವುದು, ಈ ನಾಡಿಗೆ ಅವರು ಮುಖ್ಯವಾಗುವುದು ಈ ಕಾರಣಕ್ಕಾಗಿ.
ದುರಂತವೆಂದರೆ ಆ ಲೇಖನವನ್ನು ಅಂದು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ, ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ. ಬೊಳುವಾರರನ್ನೂ ಅಂದಿನ ದಿನಗಳಿಗೇ ಕಟ್ಟಿಹಾಕಲು ನೋಡುತ್ತಿದ್ದಾರೆ. ನಮ್ಮ ಬೊಳುವಾರರನ್ನೂ, ನಮ್ಮ ನಾಡನ್ನೂ, ನಮ್ಮ ಸಾಂಸ್ಕೃತಿಕ ಚಿಂತನೆಯನ್ನೂ ಈ ಪ್ರತಿಗಾಮಿಗಳಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಗೂಢಚರ್ಯದ ಅಂತ’ರಾ’ಳ
– ಸಂತೋಷ್ ತಮ್ಮಯ್ಯ
ಕಾಲೇಜು ದಿನಗಳ ರಸಪ್ರಶ್ನೆಯಲ್ಲಿ ಅದರ ಬಗ್ಗೆ ಪ್ರಶ್ನೆಗಳು ಬಂದಿರಬಹುದು. ಪತ್ರಿಕೆಗಳ ವರದಿಗಳು ಅವುಗಳ ಕುತೂಹಲವನ್ನು ಬೆಳೆಸಿರಬಹುದು. ಸಿನೆಮಾಗಳು ಆ ಕುತೂಹಲವನ್ನು ಕೆರಳಿಸಿರಬಹುದು. ದೇಶ ದ್ರೋಹಿ ISI ಪ್ರಸ್ಥಾಪವಾದಾಗಲೆಲ್ಲಾ ಅದು ನೆನಪಾಗಿರಬಹುದು, ಬಾಂಡ್ ಸಿನೆಮಾಗಳು ನೋಡುವಾಗಲೆಲ್ಲಾ ಅದು ನೆನಪಾಗಿರಬಹುದು. ಅದರ ಬಗ್ಗೆ ಹೆಮ್ಮೆ ಹುಟ್ಟಿರಬಹುದು. ಇಸ್ರೇಲಿನ ಮೊಸಾದ್‌ನಂತೆ, ಅಮೇರಿಕಾದ ಸಿಐಎನಂತೆ, ಇಂಗ್ಲೆಂಡಿನ MI-6 ನಂತೆ ನಮ್ಮ Research and Analysis Wing ಎಂದುಕೊಂಡಿರಲೂಬಹುದು.
ನಿಜ ಆ ಹೆಸರಲ್ಲಿ ಆಕರ್ಷಣೆಯಿದೆ. ಹಾಗಾಗಿ RAW ಎಂದರೆ ಎಲ್ಲರಿಗೂ ಗೊತ್ತಿದೆ. ಆ ಹೆಸರಿನೊಂದಿಗೆ ನಿಗೂಢತೆ ಮೆತ್ತಿಕೊಂಡಿದೆ. ಎಲ್ಲರಿಗೂ ಅದರ ಬಗ್ಗೆ ಕುತೂಹಲ ಇದ್ದೇ ಇದೆ. ಏಕೆಂದರೆ ಪ್ರತಿಯೊಬ್ಬ ಭಾರತೀಯನಿಗೂ RAW ಎಂದರೆ ಗೂಢಾಚಾರಿಕೆ ನೆನಪಾಗುತ್ತದೆ. ಪಾಕಿಸ್ಥಾನ ನೆನಪಾಗುತ್ತದೆ. ರೋಚಕ ಕಥೆಗಳು ನೆನಪಾಗುತ್ತವೆ. ಜೇಮ್ಸ್ ಬಾಂಡ್ ಸಿನೆಮಾಗಳಂತಹ ಸಾಹಸಗಳು ನೆನಪಾಗುತ್ತವೆ. ಶತ್ರು ದೇಶದೊಳಗೆ ನುಗ್ಗಿ ರಹಸ್ಯಗಳನ್ನು ಭೇದಿಸುವ ಪರಾಕ್ರಮಿ, ಯಾವುದೋ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಏಜೆಂಟ್ ನೆನಪಾಗುತ್ತದೆ. ಭಾರತದ ‘ರಾ’ ಅಂಥದ್ದು. ಸಿಕ್ಕಿ ಹಾಕಿಕೊಂಡು ವರ್ಷಾನುಗಟ್ಟಲೆ ಪಾಕಿಸ್ಥಾನದ ಜೈಲುಗಳಲ್ಲಿ ಕೊಳೆಯುವ ಅಥವಾ ಗಲ್ಲಿಗೇರಿಸಲ್ಪಡುವ ಆತನಿಗಾಗಿ ದೇಶ ಮರುಗಿದೆ. ದೇಶದ ರಹಸ್ಯಗಳು ಸೋರಿಕೆಯಾಗದಂತೆ ತಡೆಯುವುದು ಮತ್ತು ಶತ್ರುಗಳ ಆಗುಹೋಗುಗಳನ್ನು ಅರಿಯುವುದು ಈ ‘ರಾ‘ ದ ಕೆಲಸ.
ಆದರೆ ‘ರಾ’ ದ ಬಗ್ಗೆ ತಿಳಿಯಲು ಆಸಕ್ತರಾಗಿದ್ದರೂ ಅದರ ಬಗ್ಗೆ ಬಂದ ನಂಬಿಗಸ್ಥ ಪುಸ್ತಕಗಳು ಕಡಿಮೆ. ವಿಚಿತ್ರ ಎಂದರೆ ‘ರಾ’ ಬಗ್ಗೆ ಭಾರತೀಯರು ಬರೆದಿರುವುದಕ್ಕಿಂತಲೂ ಪಾಕ್ ನ ಐಎಸ್‌ಐ ಏಜೆಂಟರು, ಸಾಹಿತಿಗಳು ಬರೆದಿರುವುದೇ ಹೆಚ್ಚು! ನಿಂದಾಸ್ತುತಿಗಳಿಂದ ಕೂಡಿದ, ಸತ್ಯಕ್ಕೆ ದೂರವಾದ ಸಂಗತಿಗಳು ಮತ್ತು ಊಹೆಗಳಿಂದ ತುಂಬಿದ ಪಾಕಿಸ್ತಾನಿ ಪುಸ್ತಕಗಳು ತಮ್ಮ ಮೂಗಿನ ನೇರಕ್ಕೆ ‘ರಾ’ವನ್ನು ಚಿತ್ರಿಸಿವೆ. ಭಾರತದ ಕೆಲವು ಪುಸ್ತಕಗಳಲ್ಲಿ ಕೂಡ ಕೇವಲ ರೋಮಾಂಚಕಾರಿ ಕಥನಗಳಿಗೆ ಪ್ರೇಮವನ್ನು ತುರುಕಿ ಸತ್ಯವನ್ನು ಲಗಾಡಿ ಎಬ್ಬಿಸಿಲಾಗಿದೆ.ಒಟ್ಟು ‘ರಾ’ ವನ್ನು ಹೊರಗಿನಿಂದ ನೋಡಿ ಬರೆದವರೇ ಹೆಚ್ಚು. ಆದರೂ ಭಾರತೀಯ ಸಾಹಿತ್ಯದಲ್ಲಿ ಅಶೋಕ್ ರೈನಾ ಅವರ ಪುಸ್ತಕ ಮತ್ತು ‘ರಾ’ದ ಎಡಿಶನಲ್ ಸಕ್ರೇಟರಿಯಾಗಿದ್ದ ಬಿ. ರಾಮನ್ ಅವರ ಪುಸ್ತಕಗಳು ‘ರಾ’ ದ ನೈಜ ಮುಖವನ್ನು ಚಿತ್ರಿಸುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ‘ರಾ’ಬಗ್ಗೆ ಬರೆಯುವುದಕ್ಕಿಂತ ಸಿಐಎ ಬಗ್ಗೆ ಬರೆಯುವುದೇ ಸುಲಭ ಎಂಬಂತಹ ಪರಿಸ್ಥಿತಿ ಇದೆ. ಏಕೆಂದರೆ ಅವುಗಳ ಬಗ್ಗೆ ಅಧಿಕೃತ ವೆಬ್‌ಸೈಟುಗಳಿವೆ.ಅದರೆ ಭಾರತದಲ್ಲಿ ಇಲ್ಲ. ಜೊತೆಗೆ ಭಾರತದ ೧೯೨೩ರ ಭಾರತೀಯ ರಹಸ್ಯ ಕಾಯ್ದೆ ಸುರಕ್ಷತೆಯ ಹೆಸರಲ್ಲಿ ಕೆಲವು ಅಂಶಗಳನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಭಾರತೀಯರಿಗೆ ‘ರಾ’ ಬಗ್ಗೆ ತಿಳಿಯಬೇಕೆಂದು ಹೊರಟಷ್ಟೂ ಪಾಕಿಸ್ತಾನದ RAW ಕಾಣುತ್ತಾ ಹೋಗುತ್ತದೆ.
ಮತ್ತಷ್ಟು ಓದು 
ಮಲೇಷ್ಯಾದಲ್ಲಿ ನರಕಯಾತನೆ ಅನುಭವಿಸುತಿದ್ದ ಯುವಕರಿಗೆ ಒಂದು ಈ-ಮೇಲ್ #ಅಚ್ಚೇದಿನ್ ತಂದ ಕಥೆ
– ಅರುಣ್ ಬಿನ್ನಡಿ
ಕಾಡಿ ಬೇಡಿದ್ದಕ್ಕೆ ದಿನಕ್ಕೆ ಸಿಗುತ್ತಿದ್ದದ್ದು ಕೇವಲ ಒಂದೊತ್ತು ಊಟ,ಭವಿಷ್ಯದ ಕನಸುಗಳು ಮೊಸದ ಜಾಲಕ್ಕೆ ಸಿಲುಕಿ ಕಣ್ಮರೆಯಾಗಿದ್ದವು,ಕತ್ತಲೆಯ ಕೊಣೆಯಲ್ಲಿ ೨೦ ದಿನಗಳಿಂದ ನರಕಯಾತನೆಯ ರೌದ್ರನರ್ತನ,ಅಷ್ಟಕ್ಕೂ ಹೇಗಾದರು ಈ ವಿಷವರ್ತುಲದಿಂದ ಜೀವವನ್ನಾದರು ಉಳಿಸಿಕೊಳ್ಳೊಣವೆಂದರೆ ಆ ದೇಶದಲ್ಲಿ ಯಾರು ಪರಿಚಿತರಿರಲಿಲ್ಲ,ಒಟ್ಟಿನಲ್ಲಿ ಆ ಯುವಕರ ಪಾಲಿಗೆ ಜಗತ್ತಿನ ಬೆಳಕು ನೊಡಲು ಯಾವ ದಾರಿಯು ಉಳಿದಿರಲಿಲ್ಲ,ಉದ್ಯೋಗ ಅರಸಿ ದೂರದ ಮಲೇಶಿಯಾಕ್ಕೆ ಹೋದ ನಮ್ಮ ಬೆಂಗಳೂರಿನ ಇಬ್ಬರು ಯುವಕರ ದಾರುಣ ಕಥೆ ಇದು.
ಬೆಂಗಳೂರಿನ ಕೆಂಗೇರಿಯ ರಾಜೀವ್ ಮತ್ತು ಪ್ರಭು ಎಂಬ ಯುವಕರಿಬ್ಬರು ಉದ್ಯೋಗಕ್ಕಾಗಿ ಮಲೇಷ್ಯಾಗೆ ತೆರಳಲು ನಿರ್ಧರಿಸಿದ್ದರು.ಆಗ್ರಾದಲ್ಲಿರುವ ಟ್ರಾವೆಲ್ ಏಜೆಂಟ್ ಇಬ್ಬರಿಂದಲೂ ತಲಾ ೨.೫೦ಲಕ್ಷ ಹಣವನ್ನು ಕೇಳಿದ್ದಾನೆ.ಈ ಹುಡುಗರು ಹಣ ನೀಡಿದ ಬಳಿಕ ಅವರಿಗೆ ಏರ್-ಟಿಕೇಟ್ ಕೊಟ್ಟು ಮಲೇಷ್ಯಾಗೆ ಕಳುಹಿಸಲಾಗಿದೆ.ಅಲ್ಲಿ ತಲುಪಿಕೊಂಡ ನಂತರ ತಿಳಿದುಬಂದಿದ್ದೇನೆಂದರೆ ಭಾರತದ ಏಜೆಂಟ್ ಅಲ್ಲಿನ ಏಜೆಂಟರಿಗೆ ದುಡ್ಡು ನೀಡಿರಲಿಲ್ಲ.ಅಲ್ಲಿನ ಏಜೆಂಟರು ಈ ಹುಡುಗರನ್ನು ೧೮ ದಿನಗಳ ಗೃಹಬಂಧನದಲ್ಲಿಟ್ಟು ದಿನಕ್ಕೆ ಒಂದೊತ್ತು ಊಟ ಮಾತ್ರ ನೀಡುತಿದ್ದರು ಮತ್ತು ಕುಟುಂಬದವರಿಗೆ ಕರೆ ಮಾಡಿಸಿ ಹಣಕ್ಕಾಗಿ ಬೇಡಿಕೆಯಿಡುತಿದ್ದರು.ಅತ್ತ ಆ ಯುವಕರು ಸಿಬು ಎಂಬ ಸಣ್ಣ ಪಟ್ಟಣದಲ್ಲಿ ಒಂದು ಕೋಣೆಯಲ್ಲಿ ಬಂಧಿತರಾಗಿ ಹೈರಾಣಗಿದ್ದರೇ,ಇತ್ತ ಹೆತ್ತವರಿಗೆ ದಿಕ್ಕು ತೋಚದಂತಾಗಿತ್ತು.ಈ ಸುದ್ದಿ ಕೆಂಗೇರಿ ಬಿಜೆಪಿಯ ಯುವಮುಖಂಡರಾದ ಅನಿಲ್ ಚಳಗೇರಿಯವರ ಗಮನಕ್ಕೆ ಬಂದಿದೆ.
ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಲೇಖನ – ಡಾ.ಅನಂತರಾಮ ಭಟ್ಟರ ದುರಂತ ಕಥನ
ಮಹಾಪಂಡಿತ ರಾಹುಲ ಸಾಂಕೃತ್ಯಾಯನ (1893-1963)ರ ಬದುಕು ಮತ್ತು ಬರಹ ಒಬ್ಬ ಲೇಖಕನ ಸಾಧ್ಯತೆಗಳ ಬಗ್ಗೆ ಇರುವ ಇದುವರೆಗಿನ ಕಲ್ಪನೆಗಳಿಗೊಂದು ದೊಡ್ಡ ಸವಾಲು. ಈ ಜಗತ್ತು ಕಂಡ ಅಪರೂಪದ ‘ಮಹಾಕಾವ್ಯಾತ್ಮಕ’ ವ್ಯಕ್ತಿತ್ವ ಅವರದು. ಧರ್ಮ-ದರ್ಶನ, ರಾಜಕೀಯ, ಇತಿಹಾಸ, ಪುರಾತತ್ವ, ಸಾಹಿತ್ಯ ಭಾಷೆ, ಸಂಶೋಧನೆ-ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆಯನ್ನಿತ್ತ ರಾಹುಲ್ ಒಂದು ಮಹಾವಿಸ್ಮಯ. ಅವರಿಗೆ ಮುವತ್ತಾರು ಭಾಷೆಗಳು ತಿಳಿದಿದ್ದುವು. ನೂರೈವತ್ತಕ್ಕೂ ಮಿಕ್ಕಿ ಅವರ ಕೃತಿಗಳು ಪ್ರಕಟವಾಗಿದ್ದರೆ, ಅಪ್ರಕಟಿತ ಸಾಕಷ್ಟಿವೆ. ಒಬ್ಬ ವ್ಯಕ್ತಿಯಾಗಿ ಒಂದು ವಿಶ್ವವಿದ್ಯಾಲಯಕ್ಕೂ ಅಸಂಭವವೆನಿಸುವಂತೆ ನಾಲ್ಕು ಕೋಶಗ್ರಂಥಗಳನ್ನು ರಚಿಸಿದವರು ರಾಹುಲರು (ಶಾಸನ ಶಬ್ದಕೋಶ, ಟಿಬೇಟ್ ಹಿಂದಿಕೋಶ್, ಟಿಬೇಟ್ ಸಂಸ್ಕೃತಕೋಶ್, ರಾಷ್ಟ್ರ ಭಾಷಾಕೋಶ್). ತ್ರಿಪಿಟಕಗಳ ಹಾಗೂ ಬೌದ್ಧದಾರ್ಶನಿಕ ಕೃತಿಗಳ ಮಹಾನ್ ಸಂಪಾದಕರು. ‘ದರ್ಶನ ದಿಗ್ದರ್ಶನ’ ಅವರು ಬರೆದ ತತ್ವಶಾಸ್ತ್ರದ ಮೇರುಕೃತಿ. ಕಾಶಿಯ ವಿದ್ಯಾಪೀಠವೇ ಇವರ ಅಗಾಧ ಸಂಸ್ಕೃತ ಪಾಂಡಿತ್ಯಕ್ಕೆ ‘ಮಹಾಪಂಡಿತ’ ಎಂಬ ಬಿರುದನ್ನಿತ್ತಿದೆ. ಶ್ರೀಲಂಕಾ ಬೌದ್ಧ ವಿಶ್ವವಿದ್ಯಾಲಯ ‘ತ್ರಿಪಿಟಕಾಚಾರ್ಯ’ ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿತ್ತು. ಮಹಾನ್ ಪರ್ಯಟಕ, ಪುರಾತತ್ವವೇತ್ತ, ಸಾಹಿತ್ಯ ವಾಚಸ್ಪತಿ, ಪದ್ಮವಿಭೂಷಣ, ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಕೃತಿಗಳ ಸಂಖ್ಯೆ ಅಗಾಧ. 1994ರಲ್ಲಿ ಡೆಲ್ಲಿಯ ರಾಧಾಕೃಷ್ಣ ಪ್ರಕಾಶನವು ದೊಡ್ಡ ಗಾತ್ರದ ಐವತ್ತು ಖಂಡಗಳಲ್ಲಿ ರಾಹುಲರ ಕೃತಿಗಳನ್ನು ಪ್ರಕಟಿಸಿದೆ. ಆದರೆ, ಅಪ್ರಕಟಿತ ಇನ್ನೂ ಸಾಕಷ್ಟಿವೆ. ಖೇದದ ವಿಷಯವೆಂದರೆ ಪ್ರಕಟಿತ ಖಂಡಗಳಲ್ಲಿ ಹಲವು ಈಗ ಉಪಲಬ್ಧವಿಲ್ಲ.
ಪ್ರಸ್ತುತ ಲೇಖನ ಖಂಡ 2 ಭಾಗ 1 (ಜೀವನ ಚರಿತ್ರೆ ಮತ್ತು ಸಂಸ್ಮರಣ)ದ “ಜಿನ್‍ಕಾ ಮೈ ಕೃತಜ್ಞ್” ಮಾಲೆಯಲ್ಲಿ 34ನೇ ಲೇಖನ ಡಾ| ಅನಂತರಾಮ ಭಟ್ಟರ ದುರಂತ ಕಥನ. ಇದು ಪುಟ 685 ರಿಂದ 692ರಲ್ಲಿದೆ. ಅದರ ಪೂರ್ತಿ ಕನ್ನಡ ಅನುವಾದ ತಮ್ಮ ಮುಂದಿದೆ.
ಹಿಂದಿ ಮೂಲ: ಮಹಾಪಂಡಿತ ರಾಹುಲ ಸಾಂಕೃತ್ಯಾಯನ
ಕನ್ನಡಕ್ಕೆ : ಡಾ| ಜಿ. ಭಾಸ್ಕರ ಮಯ್ಯ
ಕೊಡವೂರು ಶ್ರೀ ಅನಂತರಾಮ ಭಟ್ಟರನ್ನು ನಾನು ಮೊದಲು ಭೇಟಿಯಾದದ್ದು 1928ನೆಯ ಇಸವಿಯಲ್ಲಿ. ಕೊಲೊಂಬೋದಲ್ಲಿ. ಒಬ್ಬ ಪಂಡಿತ ಭಿಕ್ಷು ನನ್ನೊಡನೆಂದ – ‘ನಮ್ಮಲ್ಲಿ ಜಂಬೂ ದ್ವೀಪದ ಒಬ್ಬ ಪಂಡಿತರು ಇದ್ದಾರೆ.’ ಇದನ್ನು ಕೇಳಿ ನಾನು ಅಲ್ಲಿಗೆ ಹೋದೆ. ಇಪ್ಪತ್ತು ವರ್ಷದ ಒಬ್ಬ ತರುಣನೊಂದಿಗೆ ನನ್ನ ಭೇಟಿಯಾಯ್ತು – ಅನಂತರಾಮ ಹುಟ್ಟಿದ್ದು ಫೆಬ್ರವರಿ 7, 1908. ಆತ ಸಂಸ್ಕೃತವನ್ನು ಮಾತೃಭಾಷೆಯ ಹಾಗೆ ಮಾತನಾಡುತ್ತಿದ್ದ. ಆನಂತರ ಪರಸ್ಪರ ಭೇಟಿಯಾಗುತ್ತಿದ್ದೆವು. ಅದು ಆಳವಾದ ಮೈತ್ರಿಯನ್ನೇ ಉಂಟುಮಾಡಿತು.
ಅನಂತರಾಮ ಮದ್ರಾಸಿನ ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯವರಾಗಿದ್ದರು.ಅವರ ಮಾತೃಭಾಷೆ ಕನ್ನಡ. ಮಾಧ್ವ ಸಂಪ್ರದಾಯದ ವೈಷ್ಣವ ಬ್ರಾಹ್ಮಣ. ಅವರು ಬಾಲ್ಯದಿಂದಲೇ ಸಂಸ್ಕೃತ ಓದಿದವರು. ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯ ಪಡೆದವರು. ಮೈಸೂರಿನಲ್ಲಿ ಓದು ಮುಗಿಸಿದ ನಂತರ ಅವರಿಗೆ ಅನ್ನಿಸಿದ್ದೇನೆಂದರೆ ಸಂಸ್ಕೃತ ವಿದ್ವಾಂಸನಿಗೆ ಮಾರುಕಟ್ಟೆಯಲ್ಲಿ ಯಾವ ಬೆಲೆಯೂ ಇಲ್ಲ. ಇಂಗ್ಲಿಷ್ ಓದಿದರೆ ಬೆಲೆ ಹೆಚ್ಚಾಗುತ್ತದೆ. ಇಂಗ್ಲಿಷ್ ಓದಿ ಮೆಟ್ರಿಕ್ ಪರೀಕ್ಷೆಗೆ ಕುಳಿತರು. ಆದರೆ ತೇರ್ಗಡೆಯಾಗಲಿಲ್ಲ. ಮುಂದಿನ ವರ್ಷವೂ ಇದೇ ಗತಿ ಎಂದು ಅನ್ನಿಸಿತು. ಯಾರೋ ಹೇಳಿದರು … ಸಿಲೋನಿನಲ್ಲಿ ನೇರವಾಗಿ ಲಂಡನ್ ಯುನಿವರ್ಸಿಟಿಯ ಪರೀಕ್ಷೆಗೆ ಕುಳಿತುಕೊಳ್ಳಲಿಕ್ಕಾಗುತ್ತದೆ. ಅದರ ಬೆಲೆ ಭಾರತೀಯ ಡಿಗ್ರಿಗಳಿಗಿಂತ ಹೆಚ್ಚು. ಹೇಗೋ ಮಾಡಿ ಅವರು ಸಿಲೋನಿಗೆ ಬಂದರು. ಸಿಲೋನಿನ ಮಹಾಸ್ಥವಿರ ಧರ್ಮಸ್ಕಂಧರನ್ನು ಭೇಟಿ ಮಾಡಿದರು. ಅವರು ಅನಂತರಾಮ ಅವರನ್ನು ತಮ್ಮ ಬಳಿ ಸೇರಿಸಿಕೊಂಡರು. ಮಹಾಸ್ಥವಿರರದ್ದು ಒಂದು ಸಣ್ಣ ವಿಹಾರ. ಅದರಲ್ಲಿ ನಾಲ್ಕಾರು ಭಿಕ್ಷುಗಳು ವಾಸಿಸುತ್ತಿದ್ದರು. ಭಟ್ಟರ ವಿದ್ಯೆಯ ಪೂರ್ಣ ಉಪಯೋಗ ಅಲ್ಲಿ ಆಗುತ್ತಿರಲಿಲ್ಲ. ಆದರೆ, ಅಲ್ಲಿ ಇರುವುದರಿಂದ ವಾಸ ಮತ್ತು ಊಟದ ಚಿಂತೆ ನೀಗಿತು. ಮಹಾಸ್ಥವಿರರು ಆಗಾಗ್ಗೆ ಒಂದು ನಾಲ್ಕು ಪುಟದ ಸಂಸ್ಕೃತದ ಪತ್ರಿಕೆ ಪ್ರಕಟಿಸುತ್ತಿದ್ದರು. ಭಟ್ಟರು ಅದರಲ್ಲಿ ಬರೆಯ ತೊಡಗಿದರು.
ಮತ್ತಷ್ಟು ಓದು 
ವಾಲ್ಮೀಕಿ ರಾಮಾಯಣದ ಕ್ಷೇಪಕಗಳು
– ಡಾ| ಜಿ. ಭಾಸ್ಕರ ಮಯ್ಯ
ಕ್ಷೇಪಕವೆಂದರೆ ನಂತರ ಸೇರಿಸಿದ್ದು.ಒಂದೊ ನಿಂದಿಸಲು ಅಥವಾ ವೈಭವೀಕರಿಸಲು ಅಥವಾ ಮೌಖಿಕ ರೂಪದಲ್ಲಿರುವ ಕಾವ್ಯವು ಸಹಜವಾಗಿಯೇ ಕಾಲಧರ್ಮಪ್ರಭಾವದಿಂದ ಜನರ ರುಚಿಸ್ವಾದ ಮತ್ತು ವಾಚಕರ ಪ್ರತಿಭೆಗನುಸರಿಸಿ ಭಾವಧರ್ಮಪರಿವರ್ತನೆಗಳಾಗುತ್ತಾ ಇರುತ್ತವೆ. ಐತಿಹಾಸಿಕ ಕಾಲಗಣನೆಯ ಪ್ರಕ್ರಿಯೆಯಲ್ಲಿ ಇಂಥವುಗಳಲ್ಲಿ ವಿದ್ವಾಂಸರು ಸಾಧಾರಣವಾಗಿ ಯಾವುದು ಪ್ರಕ್ಷಿಪ್ತ ಮತ್ತು ಯಾವುದು ಮೂಲವೆಂಬುದನ್ನು ಶೋಧಿಸುತ್ತಾರೆ.
ರಾಮಾಯಣದಲ್ಲಿರುವ ಒಟ್ಟು 7 ಕಾಂಡಗಳಲ್ಲಿ ಮೊದಲ ಮತ್ತು ಕೊನೆಯದು (1 ಮತ್ತು 7) ನಂತರ ಸೇರಿಸಲ್ಪಟ್ಟವುಗಳೆಂದು ಇಂದು ನಿರ್ವಿವಾದವಾಗಿ ವಿದ್ವತ್‍ವಲಯದಲ್ಲಿ ಸಿದ್ಧವಾದ ವಿಚಾರ. ಮೂಲಭಾರತವು ರಾಮಾಯಣಕ್ಕಿಂತ ಹಳೆಯದು. ವೇದದಲ್ಲಿ ರಾಮಾಯಣದ ಸುದ್ದಿಯೇ ಇಲ್ಲ; ಭಾರತದ ಸುಳಿವಿದೆ. ತ್ರಿಪಿಟಕಗಳಲ್ಲಿ ರಾಮಾಯಣದ ಪ್ರಸ್ತಾಪವಿಲ್ಲ. ಪಾಣಿನಿಯೂ ರಾಮಾಯಣವನ್ನು ಉದಾಹರಿಸುವುದಿಲ್ಲ. ಹಾಗಾಗಿ ಕ್ರಿ.ಪೂ. 3ನೆಯ ಶತಮಾನಕ್ಕಿಂತ ಹಿಂದೆ ರಾಮಾಯಣದ ರಚನೆಯಾಗಿರುವ ಸಂಭವವೇ ಇಲ್ಲ.
ರಾಮಾಯಣವು ಮೌಖಿಕ ಕಾವ್ಯ. ಅದು ಬರವಣಿಗೆಗೆ ಬಂದುದು ಕ್ರಿಸ್ತಶಕದ ನಂತರ.ಆ ಮುಂಚೆಯೂ ಆನಂತರವೂ ಎಷ್ಟೆಷ್ಟೋ ಅಂಶಗಳು ಅದರಲ್ಲಿ ಸೇರ್ಪಡೆಯಾಗಿವೆ. ವಾಲ್ಮೀಕಿಯದ್ದೆಂದು ಹೇಳಲಾಗುವ ಪ್ರಖ್ಯಾತ ಸಂಸ್ಕೃತ ರಾಮಾಯಣವು ಕ್ರಿ.ಪೂ. 2-3ರಲ್ಲಿ ರಚಿಸಲ್ಪಟ್ಟಿರಬಹುದು; ಬರೆಯಲ್ಪಟ್ಟಿರುವುದಿಲ್ಲ. ಹೊಸ ಸೇರ್ಪಡೆಗಳು ಅಂದರೆ ಪ್ರಕ್ಷಿಪ್ತಗಳು ಹೇರಳವಾಗಿ ತುಂಬಿಸಲ್ಪಟ್ಟು ಇಂದು ಉಪಲಬ್ಧ ವಾಲ್ಮೀಕಿ ರಾಮಾಯಣ ಒಂದಾದರೆ, ಬೇರೆ ಸಾವಿರಾರು ರಾಮಾಯಣಗಳೂ ಅಸ್ತಿತ್ವದಲ್ಲಿವೆ. ರಾಮನ ತಂಗಿ ಸೀತೆ ಎಂಬ ರಾಮಾಯಣವೂ ಇದೆ. ರಾವಣನನ್ನು ಕೊಂದವ ರಾಮನಲ್ಲ, ಲಕ್ಷ್ಮಣನೆಂತಲೂ ಇದೆ. ಅದಕ್ಕಾಗಿ ಆತ ನರಕಕ್ಕೆ ಹೋಗುತ್ತಾನೆ ಎಂತಲೂ ಜೈನ ‘ಪವುಮ ಚರಿತ’ ಹೇಳುತ್ತದೆ. ಎ.ಕೆ. ರಾಮಾನುಜನ್ ಸಂಗ್ರಹಿಸಿಕೊಟ್ಟ 300 ರಾಮಾಯಣಗಳಲ್ಲಿ ಒಂದು ಜಾನಪದ ರಾಮಾಯಣದಲ್ಲಿ ಸೀತೆ ರಾವಣನನ್ನು ಎಷ್ಟು ಮೋಹಿಸಿದ್ದಳೆಂದರೆ ಆಕೆ ಆತನ ಚಿತ್ರವನ್ನೂ ಬಿಡಿಸಿ ಅನಾಹುತ ಮಾಡಿಕೊಳ್ಳುತ್ತಾಳೆ. ಹೀಗಾಗಿ ರಾಮಾಯಣ ಯಾರ ಆಸ್ತಿಯೂ ಅಲ್ಲ, ಹಾಗೆಯೇ ಎಲ್ಲರ ಆಸ್ತಿಯೂ ಹೌದು.
ಏನೇ ಇರಲಿ, ವಾಲ್ಮೀಕಿ ರಾಮಾಯಣವನ್ನು ನಾವು ಒಂದು ಶ್ರೇಷ್ಠ ಮಹಾಕಾವ್ಯವೆಂದು ಭಾವಿಸುವುದಾದರೆ ಅದರಲ್ಲಿ ರಾಮನ ಉಜ್ವಲ ವ್ಯಕ್ತಿತ್ವಕ್ಕೆ ಕಳಂಕವನ್ನುಂಟು ಮಾಡುವ ಅಂಶಗಳನ್ನು ಪ್ರಕ್ತಿಪ್ತವೆಂದು ಕಿತ್ತೊಗೆಯಲೇ ಬೇಕು.
1) ಸೀತಾಪರಿತ್ಯಾಗ 2) ಶಂಬೂಕವಧ ಮತ್ತು 3) ಲವಕುಶರೊಡನೆ ರಾಮನ ಯುದ್ಧ – ಈ ಮೂರು ಅಸಂಬದ್ಧ ಮತ್ತು ಪ್ರಕ್ಷಿಪ್ತವೆಂದು ವೈದಿಕ ಜ್ಞಾನ ವಿಜ್ಞಾನ ಕೋಶದಲ್ಲೇ ಸ್ಪಷ್ಟೀಕರಿಸಲಾಗಿದೆ (ವೈದಿಕ ಜ್ಞಾನ ವಿಜ್ಞಾನ್ ಕೊಷ್: ಡಾ|| ಮನೋದತ್ತ ಪಾಠಕ್, ಪುಟ 252-254) :-
ಮತ್ತಷ್ಟು ಓದು 
ಆರ್ಯರಿಂದ ಭಾರತದ ಮೇಲೆ ದಾಳಿ ಎಂಬ ಪೊಳ್ಳು ವಾದ
– ವಿನೋದ್ ಹಿಂದೂ ನ್ಯಾಷನಲಿಸ್ಟ್
ದೇಶದಲ್ಲಿ ಅಸಹಿಷ್ಣುತೆ (Intolerance) ಮಿತಿ ಮೀರುತ್ತಿದೆ ದೇಶದಲ್ಲಿ ಉಸಿರುಗಟ್ಟೋ ವಾತಾವರಣವಿದೆ ಅಂತ ಕೆಲ ತಿಂಗಳಿನಿಂದ ಹಲವಾರು ಸಾಹಿತಿಗಳು, ಬುದ್ಧಿಜೀವಿಗಳು, ಲೇಖಕರು, ನಟ ನಟಿಯರು ತಮಗೆ ದೊರೆತ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವುದು ನಿಮಗೆಲ್ಲ ತಿಳಿದ ವಿಷಯವೇ, ಅದೇ ಪ್ರಶಸ್ತಿ ವಾಪಸಾತಿ, ಅಸಹಿಣ್ಣುತೆಯ ವಾದದ ತಿಕ್ಕಾಟದಲ್ಲೇ ಅಮೀರ್ ಖಾನ್ ಕೂಡ ದೇಶದಲ್ಲಿ ಕಳೆದ 6-8 ತಿಂಗಳಿನಿಂದ ಒಂದು ತರಹ ಭಯದ ವಾತಾವರಣ ದೇಶದಲ್ಲಿದೆ, “ನನ್ನ ಪತ್ನಿ ದೇಶ ಬಿಡೋಣವೇ” ಅಂದಿದ್ದಳು ಅಂತ ಹೊಸ ವಿವಾದವನ್ನೇ ಸೃಷ್ಟಿಸಿದ್ದರು ಹಾಗು ಅಮೀರ್ ಖಾನರವರ ಪರ ವಿರೋಧವಾಗಿ ನಾನಾ ರೀತಿಯ ಪ್ರತಿಭಟನೆಗಳು ನಡೆದಿದ್ದು ತಮಗೆಲ್ಲ ತಿಳಿದ ವಿಷಯವೇ.
ಇದೇ ವಿಷಯವನ್ನಿಟ್ಟುಕೊಂಡು ಮೊನ್ನೆ ತಾನೆ ಶುರುವಾಗಿರೋ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಕೋಲಾಹಲವೆದ್ದಿತ್ತು. ಆಗ ನಮ್ಮ ದೇಶದ ಮಾನ್ಯ ಗೃಹಮಂತ್ರಿ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಮಾತನಾಡುತ್ತ ಈ ತಥಾಕತಿತ ಅಸಹಿಣ್ಣುತೆಯ ಬಗ್ಗೆ ಚರ್ಚೆ ಮಾಡುವಾಗ ಸಂವಿಧಾನ ಕರ್ತೃ ಅಂಬೇಡ್ಕರರ ವಿಷಯವನ್ನು ಪ್ರಸ್ತಾಪಿಸುತ್ತ ದಲಿತ ಶೋಷಣೆಯನ್ನು ತಮ್ಮ ಧ್ವನಿ ಎತ್ತಿ ದಲಿತರ ಹಕ್ಕುಗಳಿಗಾಗಿ ಸಮರ್ಥವಾಗಿ ಹೋರಾಟ ನಡೆಸಿ ಅವರ ಹಕ್ಕುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಹೊರತು ಅಂಬೇಡ್ಕರರು ಯಾವತ್ತೂ ದೇಶ ಬಿಡುವ ಯೋಚನೆ ಮಾಡಿರಲಿಲ್ಲ ಅಂತ ಉಲ್ಲೇಖಿಸುತ್ತ ನಮ್ಮ ದೇಶ ಸಾವಿರಾರು ವರ್ಷಗಳಿಂದ ಇಡೀ ಜಗತ್ತಿನಲ್ಲೇ ಸಹಿಷ್ಣು ರಾಷ್ಟ್ರವಾಗಿದೆ ಅನ್ನೋ ಮಾತನ್ನು ಹೇಳಿದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಹಾಗು ಕಲ್ಬುರ್ಗಿಯ ಸಂಸದ ಮಲ್ಲಿಕಾರ್ಜುನ ಖರ್ಗೆಯವರು ಅಂಬೇಡ್ಕರ್ ದೇಶ ಬಿಡ್ತೀನಿ ಅನ್ನೋ ಮಾತನ್ನು ಆಡಿರಲೇ ಇಲ್ಲ. ನಾವು ದ್ರಾವಿಡರು ಈ ದೇಶದ ಮೂಲನಿವಾಸಿಗಳು ನೀವು(ಆರ್ಯರು) ಹೊರಗಿನಿಂದ ಬಂದವರು ಅಂತ ಒಂದು ಸ್ಟೇಟ್’ಮೆಂಟ್ ಕೊಟ್ಟಿದ್ದರು.
ಭಾರತಕ್ಕೆ ಆರ್ಯರು ಹೊರಗಿನಿಂದ ಬಂದವರು, ದ್ರಾವಿಡರು ಮೂಲನಿವಾಸಿಗಳು ಅನ್ನೋದು ಪೊಳ್ಳು ವಾದವಂತ ಎಷ್ಟೋ ಜನ ಪಾಶ್ಚಾತ್ಯ ವಿದ್ವಾಂಸರು, ಇತಿಹಾಸಕಾರರೇ ಸಾಕ್ಷ್ಯಾಧರ, ಸಂಶೋಧನೆಗಳ ಮೂಲಕ ಒಪ್ಪಿಕೊಂಡಾಗ “Aryan Invasion Theory” ಒಟ್ಟಾರೆಯಾಗಿ baseless ಅನ್ನೋದು ಜಗಜ್ಜಾಹಿರಾಗಿರುವ ಸಂದರ್ಭದಲ್ಲಿ ಮತ್ತೆ ಆ ಪೊಳ್ಳು ವಾದವನ್ನಿಟ್ಟುಕೊಂಡು ರಾಜಕಾರಣ ಮಾಡುವುದು ಮಾತ್ರ ಇನ್ನೂ ಭಾರತದಲ್ಲಿ ನಿಂತಿಲ್ಲ ಅನ್ನುವುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಮಾತಿನಿಂದಲೆ ಅರ್ಥವಾಗುತ್ತದೆ. ಇದೇ “ಆರ್ಯರಿಂದ ಭಾರತದ ಮೇಲೆ ದಾಳಿ” ಎಂಬ ವಿಷಯ ಮಂಡಿಸಿ ಬ್ರಿಟೀಷರು ಅನುಸರಿಸಿದ divide and rule ಪಾಲಿಸಿಯನ್ನ ನಮ್ಮ ರಾಜಕಾರಣಿಗಳು ಇನ್ನೂ ಅನುಸರಿಸಿ ಜನರ ಮನಸ್ಸಿನಲ್ಲಿ ಜಾತಿಯೆಂಬ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮಾತ್ರ ದೇಶದ ಐಕ್ಯತೆಗೆ ಮಾರಕವೇ ಸರಿ.
ಸುದ್ಧಿಮಾಧ್ಯಮ: ದೇಶ ಬೆನ್ನಿಗೆ ಕಟ್ಟಿಕೊಂಡ ಕೆಂಡ
– ಪ್ರೇಮಶೇಖರ
26/11ರ ಮುಂಬೈ ಧಾಳಿಗಳ ರೂವಾರಿಯೊಬ್ಬ ಕರಾಚಿಯಿಂದ ಹೊರಡುತ್ತಿದ್ದ ಅಜ್ಮಲ್ ಕಸಾಬ್ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ನೀಡಿದನೆನ್ನಲಾದ ‘ಉಪದೇಶ’ ಹೀಗಿತ್ತು: “ತಾಜ್ ಹೋಟೆಲ್ ಆಕ್ರಮಿಸಿಕೊಂಡ ನಂತರ ಯಾವುದಾದರೊಂದು ಕೋಣೆ ಸೇರಿ ಅಲ್ಲಿರುವ ಟೀವಿ ಚಾಲೂ ಮಾಡಿ ಭಾರತೀಯ ನ್ಯೂಸ್ ಚಾನಲ್ ಒಂದನ್ನು ನೋಡಿ. ಭಾರತೀಯ ಭದ್ರತಾ ಪಡೆಗಳು ನಿಮ್ಮ ವಿರುದ್ಧ ಕೈಗೊಳ್ಳುತ್ತಿರುವ ತಂತ್ರಗಳ ಇಡೀ ವಿವರ ಅದರಲ್ಲಿ ನಿಮಗೆ ದೊರೆಯತೊಡಗುತ್ತದೆ. ಅದಕ್ಕನುಗುಣವಾಗಿ ನಿಮ್ಮ ಪ್ರತಿತಂತ್ರಗಳನ್ನು ನೀವು ರೂಪಿಸಿಕೊಳ್ಳಬಹುದು.” ನಮ್ಮ ಮಾಧ್ಯಮಗಳು ಅತ್ಯುತ್ಸಾಹದಿಂದ ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ದೀರ್ಘವಾಗಲು ಕಾರಣವಾಯಿತು ಎಂಬ ಕಟುವಾಸ್ತವದ ಹಿನ್ನೆಲೆಯಲ್ಲಿ ಆ ಪಾಕ್ ಭಯೋತ್ಪಾದಕ ನಮ್ಮ ಮಾಧ್ಯಮಗಳ ನಾಡಿಮಿಡಿತವನ್ನು ಅದೆಷ್ಟು ಚೆನ್ನಾಗಿ ಅರಿತಿದ್ದ ಎಂಬ ಕಹಿಸತ್ಯ ಎದೆಗೆ ನಾಟುತ್ತದೆ. ಈ ಪೀಠಿಕೆಯೊಂದಿಗೆ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ಮಾಧ್ಯಮಗಳು ಅನುಸರಿಸುವ ಕುನೀತಿಯ ಪರಿಚಯ ಮಾಧ್ಯಮಗಳ ಬಗೆಗಿನ ಲೇಖನದ ಮೂರನೆಯ ಹಾಗೂ ಅಂತಿಮ ಕಂತಿನ ವಸ್ತುವಿಷಯ. ನನ್ನ ಅವಲೋಕನವನ್ನು ಕಾಲು ಶತಮಾನದಷ್ಟು ದೀರ್ಘವಾದ ಕಾಶ್ಮೀರದಲ್ಲಿನ ಭಯೋತ್ಪಾದನೆಯೊಂದಿಗೆ ಪ್ರಾರಂಭಿಸುತ್ತೇನೆ.




