ವಿಷಯದ ವಿವರಗಳಿಗೆ ದಾಟಿರಿ

Posts from the ‘ರಾಜಕೀಯ’ Category

21
ಡಿಸೆ

ರಷ್ಯಾದಲ್ಲಿ ಭಗವದ್ಗೀತೆ ನಿಷೇಧಕ್ಕೆ ಯಾಕೀ ಕೂಗಾಟ ?

-ಅರವಿಂದ್

ಮಾಧ್ಯಮಗಳಲ್ಲಿ ಹಾಗೂ ಲೋಕಸಭೆಯಲ್ಲಿ ನೆನ್ನೆಯಿಂದಲೂ ಒಕ್ಕೊರಲಿಗಿನ ವಾದ-ವಿವಾದ. ಬಿಜೆಪಿ ಇನ್ನಿತರ ವಿರೋಧಪಕ್ಷಗಳು, ಹಿಂದೂ ಹೋರಾಟಗಾರರು, ಇಸ್ಕಾನು ಎಲ್ಲರದೂ ಒಂದೇ, ಮಾತು. ರಷ್ಯಾದಲ್ಲಿ ಭಗವದ್ಗೀತೆ ನಿಷೇಧ ಬೇಡವೆಂಬ ಕೂಗು. ಇದ್ಯಾಕೋ ಗೊತ್ತಾಗಲಿಲ್ಲ. ರಷ್ಯಾದಲ್ಲಿ ಭಗವದ್ಗೀತೆ ನಿಷೇಧಿಸಿದರೆ ಭಾರತಕ್ಕಾಗುವ ನಷ್ಟವೇನು ? ಹೇಳಿ ಕೇಳಿ ರಷ್ಯಾ ಕಮ್ಯೂನಿಷ್ಟ್ ದೇಶ. ಆ ದೇಶ ಭಾರತದಂತೆ ಯಾವುದೇ ಧರ್ಮ ತಳಹದಿಯ ಮೇಲೆ ನಿರ್ಮಾಣವಾದ ದೇಶವಲ್ಲ. ಅದು ಧರ್ಮವನ್ನು ಅಫೀಮು ಎಂದುಕೊಂಡ ದೇಶ. ಇಂಥ ದೇಶಕ್ಕೆ ಧರ್ಮಗಳಿಂದ ನಾಗರೀಕರನ್ನು ಉದ್ಧಾರ ಮಾಡುವ ರಾಜಕೀಯವೂ ಇಲ್ಲ. ಇಂಥ ದೇಶದಲ್ಲಿ ಭಗವದ್ಗೀತೆಯಾದರೇನು, ಖುರಾನಾದರೇನು ಇನ್ಯಾವುದೇ…. ಇದ್ದರೇನು ಧರ್ಮಗ್ರಂಥಗಳಿಗೆ ವಿಶೇಷ ಮಾನ್ಯತೆಯೂ ಇಲ್ಲ.

ರಷ್ಯಾಕ್ಕೆ ತನ್ನದೇ ಆದ ಇತಿಹಾಸವಿದೆ, ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ಅಲ್ಲಿನ ಧರ್ಮಗ್ರಂಥವಿದ್ದಂತೆ. ಇಂಥ ದೇಶದಲ್ಲಿ ಭಗವದ್ಗೀತೆ ನಿಷೇಧಿಸಬಾರದೆಂಬ ಕೂಗು, ಅದಕ್ಕೆ ಬೇಕಾದ ರಾಜತಾಂತ್ರಿಕತೆಯ ರಾಯಭಾರ ಭಾರತಕ್ಯಾಕೆ ಅಂತ ತಿಳಿಯುತ್ತಿಲ್ಲ. ಹೋರಾಟ ಇವೆಲ್ಲ ಅವಶ್ಯಕತೆ ಇದ್ಯಾ ? ಭಾರತದಲ್ಲಿ ಮುಸಲ್ಮಾನ, ಕ್ರ್ಯೆಸ್ತ ಅನುಯಾಯಿಗಳು ಆ ಧರ್ಮದ ಪ್ರಚಾರ ಕ್ಯೆಗೊಂಡರೆ ಅದು ಮತಾಂತರವಾದರೆ, ರಷ್ಯಾಗೂ ಅದು ಅನ್ವಯಿಸುವುದಿಲ್ಲವೇ ? ನಾನಿಲ್ಲಿ ಯಾವುದೇ ಧರ್ಮ ದೊಡ್ಡದು ವಿಶಾಲವಾದದ್ದೂ ಅನ್ನೋ ತುಲನೆಗೆ ಹೇಳುತ್ತಿಲ್ಲ. ಪ್ರತಿ ದೇಶಕ್ಕೂ ಅದರದ್ದೇ ಆದ ಸಂವಿಧಾನ ಕರಡು ಇರುತ್ತದೆ. ರಷ್ಯಾಕ್ಕೆ ಭಗವದ್ಗೀತೆಯ ಅವಶ್ಯಕತೆಯಿಲ್ಲ ಮತ್ತು ಅಲ್ಲಿ ಭಗವದ್ಗೀತೆಯ ಯಾವುದೋ ಅಧ್ಯಾಯದ ಯಾವುದೋ ಸಾಲು ಅಹಿಂಸೆಯನ್ನು ಸೃಷ್ಠಿಮಾಡುತ್ತದೆ ಎಂಬ ಆಲೋಚನೆಯಿದ್ದರೆ ಇರಲಿ ಬಿಡಿ, ಅದರಿಂದ ನಮಗ್ಯಾವ ನಷ್ಟವೂ ಇಲ್ಲ. ಭಗವದ್ಗೀತೆ ಭಾರತದ ಸಂಸ್ಕೃತಿಗೆ ತಳಹದಿಯಾದರೆ, ಅದು ಭಾರತಕ್ಕಾದೀತು. ರಷ್ಯಾವೂ ಭಾರತದಂತೆ ಪಾಲಿಸಬೇಕು ಅನ್ನುವ ಹಠ ಯಾಕೆ ? ಅದೇನೋ ಆಗಬಾರದ್ದು ಮಾಡಬಾರದ್ದು ಮಾಡುತ್ತಿರುವಂತೆ ಕೂಗಾಡುವ ಅವಶ್ಯಕತೆಯೇನಿದೆ. ಮತ್ತಷ್ಟು ಓದು »

21
ಡಿಸೆ

ಜನಲೋಕಪಾಲ್ ಜಾರಿಯಿಂದ ಭ್ರಷ್ಟಾಚಾರ ನಾಶವಾಗಲಿದೆಯೇ ?

-ಉಮೇಶ್ ದೇಸಾಯಿ

ಹೌದು ಈ ಪ್ರಶ್ನೆ ಕಾಡುತ್ತಿದೆ. ಬಹುಶಃ ಅನೇಕರಿಗೂ ಈ ಪ್ರಶ್ನೆ ಕಾಡುತ್ತಿರಬಹುದು. ಸ್ವಲ್ಪ ಆರಾಮಾಗಿ ಉತ್ತರ ಹುಡುಕುವ. ಈಗ ನಾವು ನೀವು ವ್ಯವಸ್ಥೆ ಅಥವಾ ಸರಕಾರವನ್ನು ಸುಲಭವಾಗಿ ಟೀಕಿಸುತ್ತೇವೆ.ನಮ್ಮ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಇನ್ನೂ ಇದೆ

ಹೀಗಾಗಿ ನಾವು ಪೆನ್ನಿಂದ,ಕೀಲಿಮಣೆ ಕುಟ್ಟುವುದರಿಂದ ನಮ್ಮ ಕಹಿಭಾವನೆಗಳನ್ನುಮುಕ್ತವಾಗಿ ಕಾರುತ್ತೇವೆ. ಅದು ನಮ್ಮ ಹಕ್ಕು ನಿಜ. ಅದನ್ನು ನಾವು ಚಲಾಯಿಸುತ್ತೇವೆ ಕೂಡ.ಅನೇಕ ರೀತಿಯಲ್ಲಿ ಅಂದರೆ ಫೇಸಬುಕ್, ಟ್ವೀಟರ್ ಹಿಡಿದು ವಾಚಕರ ವಾಣಿವರೆಗೂ ನಮ್ಮ ಆಕ್ರೋಶ ಹರಿಯುತ್ತದೆ. ನಮ್ಮ ಈ ಕಾರುವಿಕೆಯಿಂದ ಏನಾದರೂ ಬದಲಾಗಿದೆಯೇ..

ನಮ್ಮ ಬೀದಿಯಲ್ಲಿ ಹಗಲು ದೀಪ ಉರಿಯುವುದು ಬಂದಾಗಿದೆಯೇ..ನಮ್ಮ ನಲ್ಲಿಯಲ್ಲಿ ನೀರು ನಿರಂತರ ಹರಿಯುತ್ತಿದೆಯೇ ಅಥವಾ ಉಗಿಸಿಕೊಂಡೂ ಕುರ್ಚಿಮೇಲೆ ಕೂಡುವ ರಾಜಕಾರಣಿ ಒಂದರೆಕ್ಷಣ ವಿಚಾರ ಮಾಡಿದ್ದಾನೆಯೇ..? ಈ ಪ್ರಶ್ನೆಗಳಿಗೆ ಪರಿಹಾರ ಸಿಕ್ಕಿಲ್ಲ ಯಾಕೆಂದರೆ ಇವು ನಾವು ಈಗಿರುವ ಸದ್ಯದ ಪರಿಸ್ಥಿತಿಯ ದ್ಯೋತಕ ವಾಗಿವೆ. ಹಾಗೂ ಇವುಗಳಿಗೆ ನಾವು ಚೆನ್ನಾಗಿ ಒಗ್ಗಿಕೊಂಡಿರುವೆವು..ನಮಗೂ ಗೊತ್ತು ಇವುಗಳಿಂದ ಬಿಡುಗಡೆ ಸಾಧ್ಯವಿಲ್ಲ ಅಂತ. ಆದರೇ ಕಾರುವುದು ಇನ್ನೂ ನಿಂತಿಲ್ಲ ..ಈಗ ಅದು ಹೊಸ ಆಯಾಮ ಪಡೆದುಕೊಂಡಿದೆ. ನಮಗೆ ನಮ್ಮ ದನಿ ಕೇಳಿಸಲು ಹೊಸ ಮುಖವಾಡಗಳು ಬಂದಿವೆ…ಅವರನ್ನು ನಾವು ನಮ್ಮನ್ನುಉದ್ಧಾರ ಮಾಡಲೆಂದೆ ಬಂದ ಅವತಾರಪುರುಷ ರನ್ನಾಗಿ ನೋಡುತ್ತಿದ್ದೇವೆ..ಜೈಕಾರ ಹೇಳುತ್ತಿದ್ದೇವೆ.

ಮತ್ತಷ್ಟು ಓದು »

20
ಡಿಸೆ

ಆಧುನಿಕ ವಿಕ್ರಮಾದಿತ್ಯ, ಬೇತಾಳನೂ ಮತ್ತು ಕುರುನಾಡ ಉಳಿಸಿ ವೇದಿಕೆಯ ವ್ಯಥೆಯೂ…

-ಸಾತ್ವಿಕ್ ಎನ್ ವಿ

ಎಂದಿನಂತೆ ಬೇತಾಳವು ಲೇಡಿಸ್ ಹಾಸ್ಟೆಲ್ ಎದುರಿಗಿನ ಹುಣಸೆ ಮರದ ತನ್ನ ಕೊಂಬೆಯ ಮೇಲೆ ನೇತಾಡುತ್ತಿತ್ತು. ರಸ್ತೆ ಅಗಲೀಕರಣವಾಗುವಾಗ  ತನ್ನ ಮರಕ್ಕೂ ಎಲ್ಲಿ ಕೊಡಲಿ ಬೀಳುತ್ತದೋ ಎಂಬ ಭಯ ಇದ್ದುದರಿಂದ ತರಗತಿಯಲ್ಲಿರುವ ಸಭ್ಯ ವಿದ್ಯಾರ್ಥಿಯಂತೆ ಒಂದೇ ಕಣ್ಣಿನಲ್ಲಿ ನಿದ್ದೆ ಮಾಡುತ್ತಿತ್ತು. ಇಂಥ ಸ್ಥಿತಿಯಲ್ಲಿ ವೋಟರ್ ಐಡಿಯಲ್ಲಿರುವ ಫೋಟೋದಂತೆ ಮುಖ ಮಾಡಿಕೊಂಡು ವಿಕ್ರಮರಾಜನು ಬೇತಾಳವನ್ನು ಸೆಳೆದುಕೊಂಡು ಹೋಗಲು ಧಾವಿಸಿದನು. ಆಗ ಬೇತಾಳವು ‘ನಿನಗಂತೂ ಕೆಲಸವಿಲ್ಲ. ಪದೇಪದೇ ಬಂದು ನನ್ನನ್ನು ಹೊತ್ತುಕೊಂಡು ಹೋಗುತ್ತಿಯಾ. ಆದರೆ ಒಮ್ಮೆಯೂ ನೀನು ನಿನ್ನ ಕೆಲಸದಲ್ಲಿ ಉತ್ತೀರ್ಣನಾಗಿಲ್ಲ. ಇದೆಲ್ಲ ನೋಡಿದರೆ ಮುಂದಿನ ಜನ್ಮದಲ್ಲಿ ನೀನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗುವ ಎಲ್ಲ ಅರ್ಹತೆಗಳಿವೆ’ ಎಂದಿತು.

ಇದೆಲ್ಲವನ್ನೂ ತಲೆಗೆ ತೆಗೆದುಕೊಳ್ಳದ ವಿಕ್ರಮನು, ಮುಂದೆ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇಲ್ಲದಿದ್ದರೂ ಮಕ್ಕಳಿಗೆ ಒಳಿತನ್ನೇ ಬಯಸುವ ಪಾಪದ ತಂದೆತಾಯಿಗಳ ಹಾಗೆ ತನ್ನಷ್ಟಕ್ಕೆ ತನ್ನ ಕಾರ್ಯದಲ್ಲಿ ನಿರತನಾದನು. ಇವನ ಹಸುತನವನ್ನು ಗಮನಿಸಿದ ಬೇತಾಳದ ಮನಸ್ಸು ಕರಗಿ ವಿಕ್ರಮನೇ, ನಿನ್ನ ಕಾರ್ಯಶ್ರದ್ಧೆಯನ್ನು ಮೆಚ್ಚಿದ್ದೇನೆ. ಪದೇ ಪದೇ ವಿಫಲನಾದರೂ ಸ್ವಮೇಕ್ ಚಿತ್ರವನ್ನೇ ಮಾಡುವ ಕನ್ನಡ ನಿರ್ದೇಶಕನಂಥ ನಿನ್ನ ಅಚಲ ನಿರ್ಧಾರವನ್ನು ಗೌರವಿಸುತ್ತೇನೆ. ದಾರಿ ಸವೆಯಲಿ ಎಂದು ಕಥೆಯೊಂದನ್ನು ಹೇಳುತ್ತೇನೆ ಎಂದು ಹೇಳಿ ವಿಕ್ರಮನ ಅನುಮತಿಯನ್ನೂ ಕಾಯದೇ ಕಥೆಯೊಂದನ್ನು ಹೇಳಲು ಪ್ರಾರಂಭಿಸಿತು. ಮತ್ತಷ್ಟು ಓದು »

20
ಡಿಸೆ

ರಾಮುಲು ಗೆಲುವು ಬಿಜೆಪಿಗೆ ದಿಗಿಲು

-ರಾಕೇಶ್ ಎನ್ ಎಸ್
ಈ ಬಾರಿ ಮಾಗಿಯ ಚಳಿಯಲ್ಲಿ ರಾಜ್ಯದ ಶ್ರೀಸಾಮಾನ್ಯ ಆರಾಮವಾಗಿ ದಿನ ಸಾಗಿಸುತ್ತಿದ್ದರೆ ರಾಜ್ಯದ ಅಧಿಕಾರರೂಢರು ಮಾತ್ರ ಗಡಗಡ ನಡುಗುತ್ತ ಅಯ್ಯೋ ರಾಮ ರಾಮ ಅನ್ನುತ್ತಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಕಂಬಳಿ ಹೊದ್ದುಕೊಂಡೆ ವಿಧಾನ ಸೌಧವನ್ನು ಆಳುತ್ತಿದ್ದವರನ್ನು ಈ ಬಾರಿ ಬಳ್ಳಾರಿಯಿಂದ ಬೀಸಿದ ರಾಮುಲು ನಾಮಧೇಯದ ಶೀತಲ ಮಾರುತ ಥರಗುಟ್ಟುವಂತೆ ಮಾಡಿದೆ.ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ‘ಸ್ವಾಭಿಮಾನಿ’ ಶ್ರೀರಾಮುಲು ಮತ್ತು ಕುಮಾರಸ್ವಾಮಿ ಗೆದ್ದಿದ್ದಾರೆ. ಬಿಜೆಪಿ ಸೋತಿದೆ. ಕಾಂಗ್ರೆಸ್ ಉಪಚುನಾವಣೆಗಳಲ್ಲಿ ಸೋಲುವ ತನ್ನ ಸಂಪ್ರದಾಯವನ್ನು ಇಲ್ಲಿಯೂ ಚಾಚು ತಪ್ಪದೆ ಪಾಲಿಸಿಕೊಂಡು ಬಂದಿದೆ. ಇದು ಮೊನ್ನೆ ಭಾನುವಾರದ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಿದ್ದ ವಿದ್ಯಮಾನ. ಆದರೆ ಈ ಚುನಾವಣೆ ನಡೆಯಲು ಕಾರಣ, ಚುನಾವಣೆಗೆ ನಡೆದ ಪ್ರಚಾರ ಯಾವುವು ಕೂಡ ಜನರ ಕಣ್ಣಿಗೆ ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲವೂ ರಾಜಕೀಯದ ಕರಾಳ ಕತ್ತಲೆಯ ಕೂಪದಲ್ಲಿ ನಡೆದ, ಆದರೆ ನಡೆಯಬಾರದ ಸಂಗತಿಗಳಾಗಿದ್ದವು ಎಂದೇ ನಾಡಿನ ಪ್ರಜ್ಞಾವಂತರು ಅಭಿಪ್ರಾಯಪಡುತ್ತಾರೆ.ರಾಮುಲು ಒಂದೆ ಒಂದು ಮತದಿಂದ ಗೆದ್ದಿದ್ದರೂ ಕೂಡ ರಾಜ್ಯ ರಾಜಕೀಯ ಮಗ್ಗಲು ಬದಲಾಯಿಸುವುದು ಸಾಧ್ಯವಿತ್ತು. ಅಂತಹದ್ದರಲ್ಲಿ ಅವರು ಗಳಿಸಿರುವ ಈ ಭಾರಿ ಅಂತರದ ಗೆಲುವಂತೂ ನಮ್ಮ ರಾಜ್ಯದ ರಾಜಕೀಯ ಚಿತ್ರಣವನ್ನೆ ಬದಲಾಯಿಸುವ ಎಲ್ಲ ಸಾಧ್ಯತೆಗಳಿವೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ (ಈ ಹಿಂದೆ ಕುರಗೋಡು ಕ್ಷೇತ್ರ ಎಂದು ಕರೆಯಲಾಗುತ್ತಿತ್ತು) ಹೆಚ್ಚಾಗಿ ಲಿಂಗಾಯತರೇ ಗೆದ್ದು ಬರುತ್ತಿದ್ದರು. ರಾಮುಲು ಈ ಪರಂಪರೆಯನ್ನು ಮುರಿದಿದ್ದಾರೆ (ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ). ಆದರೆ ಈ ಮುರಿಯುವ ಪ್ರಕ್ರಿಯೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಅನಭಿಷಿಕ್ತ ನಾಯಕ ತಾನೇ ಎಂದು ಸ್ವಯಂಘೋಷಿಸಿಕೊಂಡಿರುವ ಅಥವಾ ಆ ರೀತಿ ತನ್ನ ಭಟ್ಟಂಗಿಗಳಿಂದ ಘೋಷಿಸಲ್ಪಟ್ಟಿರುವ ಯಡಿಯೂರಪ್ಪರಿಗೆ ಒಂದು ರೀತಿಯಲ್ಲಿ ಹೊಡೆತ ಮತ್ತು ಮತ್ತೊಂದು ರೀತಿಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ಮತ್ತಷ್ಟು ಓದು »

19
ಡಿಸೆ

ಅಗತ್ಯವಿರುವವರಿಗೆ ವಿಮೆ ಕವಚ ಇಲ್ವಾ ?

-ಗೊವಿಂದ ನೆಲ್ಯಾರು
ಮೊನ್ನೆ ಮಂಗಳೂರಿನಿಂದ ಸರಕು ಹೊತ್ತು ಹೊರಟ ಹಡಗೊಂದು ಲಕ್ಷದ್ವೀಪದ ತೀರದಲ್ಲಿ ಮುಳುಗಿದ ವಿಚಾರ ಪತ್ರಿಕೆಯಲ್ಲಿ ಓದಿದೆ. ನಲುವತ್ತು ಲಕ್ಷ ರೂಪಾಯಿ ಹಡಗಿನ ಮೌಲ್ಯ. ಸಮುದ್ರದಲ್ಲಿ ಸಾಗುವ ಈ ಪುಟ್ಟ ಹಡಗುಗಳಿಗೆ ವೀಮೆ ಇಲ್ಲವೆನ್ನುವಾಗ ನನಗೆ ಕಳೆದ ವರ್ಷ ವೀಮಾ ಕಂಪೇನಿ ಸುತ್ತಿದ ವಿಚಾರ ನೆನಪಾಯಿತು.
ಕಳೆದ ವರ್ಷ ನಾನು ತ್ರಿಚಕ್ರ ತರಿಸಿ ನನ್ನ ದೂರ ಪ್ರಯಾಣದ ತಯಾರಿ ನಡೆಸುತ್ತಿದ್ದ ಕಾಲ. ಹಿರಿಯರಾದ ಶ್ರಿಪಡ್ರೆಯವರು ಹಲವು ಸಲಹೆ ಸೂಚನೆಗಳ ಕೊಟ್ಟಿದ್ದರು. ಅದರಲ್ಲಿ ಈ ವಿಮಾ ಯೋಜನೆಯೂ ಒಂದು. ಲಕ್ಷಾಂತರ ರೂಪಾಯಿ ವಿನಿಯೋಗಿಸಿದ ತ್ರಿಚಕ್ರದಲ್ಲಿ ಹಿಂದೆ ನೋಡದ ಪರಿಚಿತರಿಲ್ಲದ ಊರುಗಳಿಗೆ ಏಕಾಂಗಿಯಾಗಿ ಹೊರಟಿದ್ದೆ. ಅದುದರಿಂದ ವಿಮಾ ಪಡಕೊಳ್ಳುವುದು ಉತ್ತಮವೆನ್ನುವುದು ಸರಳ ವಿಚಾರ.

ಸೂಚನೆ ಕೊಟ್ಟುದಲ್ಲದೆ ಒಬ್ಬ ವಿಮಾ ಅಧಿಕಾರಿಯ ಸಂಪರ್ಕವನ್ನೂ ಶ್ರಿಪಡ್ರೆಯವರೇ ಕಲ್ಪಿಸಿಕೊಟ್ಟರು. ಹಾಗೆ ತಯಾರಿಯ ಗಡಿಬಿಡಿಯಲ್ಲಿಯೇ ಹಲವು ಬಾರಿ ಪುತ್ತೂರಿನ ವಿಮಾ ಕಛೇರಿಗೆ ಓಡಿದೆ. ಇದಕ್ಕೆ ಚಾಸಿ ನಂಬರ್ ಉಂಟಾ, ಆರ್ ಟಿ ಒ ಪರವಾನಿಗೆ ಉಂಟಾ ಇತ್ಯಾದಿ ಪ್ರಶ್ನೆಗಳ ಸರಮಾಲೆ ಮೇಲಿನವರು ರವಾನಿಸಿದರು. ಇಂತಹ ಗಾಡಿಗೆ ಹಿಂದೆ ಯಾವುದೇ ಬಾರತೀಯ ಕಂಪೇನಿ ವೀಮೆ ಕೊಟ್ಟಿರುವ ಸಾದ್ಯತೆ ಇಲ್ಲ. ಹಾಗಾಗಿ ನೀವೆ ಮೊದಲಿಗರಾಗಿರುತ್ತೀರಿ ಎಂದೂ ಹೇಳಿದೆ. ಪ್ರಯೋಜನವಾಗಲಿಲ್ಲ. ಅದರ ನೈಜ ಬೆಲೆ, ಖಚಿತ ಗುರುತು ಮೇಲಿನವರಿಗೆ ಸ್ಪಷ್ಟ ಪಡಿಸಲು ತಿಂಗಳುಗಳೇ ಬೇಕು ಅನಿಸಿತು. ಹಾಗಾಗಿ ಪ್ರವಾಸದ ಅವದಿಗೆ ವೀಮಾ ಕವಚದ ಆಸೆ ಬಿಟ್ಟೆ.

ನನ್ನ ಪ್ರವಾಸದುದ್ದಕ್ಕೂ ಯಾರಲ್ಲೂ ನನ್ನ ತ್ರಿಚಕ್ರದ ನೈಜ ಬೆಲೆ ಹೇಳುತ್ತಿರಲಿಲ್ಲ. ಹತ್ತು ಸಾವಿರವೋ ಅಂದಾಗ ಹೂಂ ಅನ್ನುತ್ತಿದ್ದೆ. ಹದಿನೈದೋ ಅಂದಾಗ ಹೌದು ಅನ್ನುತ್ತಿದ್ದೆ. ಅಂತೂ ಏನೂ ತೊಂದರೆಯಾಗದೆ ಸುಮಾರು ಒಂದೂವರೆ ವರ್ಷಗಳಿಂದ ಸುದಾರಿಸುತ್ತಿದ್ದೇನೆ. ನಮ್ಮೂರಲ್ಲಿ ಇಂತಹ ಬೇರೆ ತ್ರಿಚಕ್ರ ಇಲ್ಲದಿರುವದರಿಂದ ಕಳವು ಸಾದ್ಯತೆ ಕಡಿಮೆ. ಕದ್ದರೂ ಉಪಯೋಗಿಸುವುದು ಕಷ್ಟ. ಆಯಾ ಊರಲ್ಲಿ ನೆಲೆ ಇಲ್ಲದ ಪ್ರವಾಸಿಗಳು ಯಾವಾಗಲೂ ಪುಡಿಕಳ್ಳರ ಬಲಿಪಶು.

* * * * * * * * *

ಚಿತ್ರಕೃಪೆ: 1.bp.blogspot.com

 

12
ಡಿಸೆ

ನಾವು ನಿಜಕ್ಕೂ ತಾಂತ್ರಿಕತೆಯನ್ನು ಬಳಸ್ತಾ ಇದೇವ?

-ಮುರಳಿಧರ ದೇವ್
ಬೆಂಗಳೂರನ್ನು ವಿಶ್ವದಾದ್ಯಂತ ತಾಂತ್ರಿಕತೆಯಲ್ಲಿ ಮುಂದಿರುವ ನಗರವೆಂದು ಗುರುತಿಸಲಾಗುತ್ತೆ, ಅಲ್ಲದೆ ಜಗತ್ತಿನ ಬಹುತೇಕ ಕಂಪನಿಗಳು ನಮ್ಮ ಬೆಂಗಳೂರಿನಲ್ಲಿ ಅವರ ಒಂದು ವಿಭಾಗ ಅಥವಾ ಬ್ರ್ಯಾಂಚ್ ಇರಬೇಕೆಂದು ಬಯಸುತ್ತವೆ. ಬಹುತೇಕ ಸಾಫ್ಟವೇರ್ ಅನ್ನು ಅಭಿವೃದ್ದಿ ಪಡಿಸೋದರಲ್ಲೂ ಬೆಂಗಳೂರಿಗರು ಮುಂದಿದ್ದಾರೆ. ಆದರೆ ನಮ್ಮದೇ ರಾಜ್ಯದಲ್ಲಿ ಈ ತಾಂತ್ರಿಕತೆಯನ್ನು ಉಪಯೋಗ ಪಡೆಯೋದರಲ್ಲಿ ತುಂಬಾ ಹಿಂದೆ ಉಳಿದಿದಿವಿ ಅಂತ ಅನ್ಸುತ್ತೆ. ಬೆಂಗಳೂರಿನ ಬಹುತೇಕ ಬಿ.ಎಂ.ಟಿ.ಸಿ. ಬಸ್ಸುಗಳಲ್ಲಿ ಕೆಲ ದಿನಗಳಿಂದ ಬಸ್ ನಂಬರ್, ಮಾರ್ಗ ಇತ್ಯಾದಿಗಳನ್ನು ತೋರಿಸಲು ಎಲ್.ಇ.ಡಿ. ಗಳನ್ನೂ ಬಳಸ್ತಾ ಇದಾರೆ. ಇದರಿಂದ ಕೇವಲ ಕೆಲ ನಿಮಿಷದಲ್ಲೇ ರೂಟನ್ನು ಚಾಲಕರು ಬದಲಾಯಿಸಬಹುದು. ಆದರೆ ಮಾರ್ಗ ಇತ್ಯಾದಿ ತೋರಿಸುವಾಗ ಹೆಚ್ಚಾಗಿ ಇಂಗ್ಲಿಷ್ ಕಾಣ್ತಾ ಇದೆ, ಹಾಗಂತ ಕನ್ನಡ ಇಲ್ಲ ಅಂತೇನು ಅಲ್ಲ, ಮಾಹಿತಿ ಇಂಗ್ಲಿಷ್ನಲ್ಲಿ ೫ ಸೆಕೆಂಡ್ಸ್ ಬಂದ್ರೆ ಕನ್ನಡದಲ್ಲಿ ಕೇವಲ ೨ಡೇ ಸೆಕಂಡ್ ಬರುತ್ತೆ. ಇದನ್ನು ಪ್ರಶ್ನಿಸೋಕೆ ಹೋದರೆ ತಾಂತ್ರಿಕತೆ ಇರೋದೇ ಹೀಗೆ ಅಂತ ಸಿದ್ದ ಉತ್ತರ ಸಿಗುತ್ತೆ. ಅಲ್ಲದೆ ಟಿಕೆಟನ್ನು ಮುದ್ರಿಸೋ ಯಂತ್ರದಿಂದ ಟಿಕೆಟ್ ಪಡೆದರೆ ಅದರಲ್ಲಿ ಬಿ.ಎಂ.ಟಿ.ಸಿ. ಅಂತ ಬಿಟ್ರೆ ಬೇರೆಲ್ಲೂ ಕನ್ನಡ ಅನ್ನೋ ಪದಾನೆ ಇಲ್ಲ. ಎಲ್ಲಿಂದ, ಎಲ್ಲಿಗೆ, ಮಾರ್ಗ ಯಾವುದು ಎಲ್ಲ ಇಂಗ್ಲಿಷ್ನಲ್ಲೇ ಇರುತ್ತದೆ. ಇದಕ್ಕೂ ಅದೇ ಸಿದ್ದ ತಾಂತ್ರಿಕತೆಯ ಕಾರಣ ಕೊಡ್ತಾರೆ ಅಧಿಕಾರಿಗಳು. ಅಥವಾ ಕನ್ನಡದಲ್ಲಿ ಟಿಕೆಟ್ ಮುದ್ರಿಸೋಕೆ ಟಿಕೆಟ್ನಲ್ಲಿ ಸ್ಥಳದ ಅಭಾವ ಅಂತ ಹೇಳ್ತಾರೆ. ನಿಜಕ್ಕೂ ತಾಂತ್ರಿಕತೆಯಲ್ಲಿ ಇದು ಸಾಧ್ಯವಿಲ್ಲ ಅಂತ ನಂಬೋಣ ಅಂದ್ರೆ ಬೇರೆ ರಾಜ್ಯಗಳಲ್ಲಿ ಈ ಪರಿಸ್ಥೀತಿಯಿಲ್ಲ. ಮತ್ತಷ್ಟು ಓದು »
9
ಡಿಸೆ

ಈ ದೌರ್ಜನ್ಯಗಳಿಗೆ ಕೊನೆ ಎಂದು?

-ವಿಜಯೇಂದ್ರ

ದನಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದಲೆನ್ನಲಾದ ಕೃಷ್ಣಪ್ಪ ಎಂಬ ದಲಿತನನ್ನು ಪ್ರಾಣಿ ದಯಾ ಸಂಘಕ್ಕೆ  ಸೇರಿದವರು ಎನ್ನಲಾದ ಹಲವರು ತಡೆದು ಹೊಡೆದು ಸಾವಿಗೀಡು ಮಾಡಿದರು ಎಂದು ಸುದ್ದಿ ಇತ್ತೀಚೆಗಷ್ಟೇ ಗ್ರಾಮೀಣ ಬೆಂಗಳೂರು ವಿಭಾಗದಿಂದ ವರದಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಸ್ವ್ವಾತಂತ್ರ್ಯ ಬಂದ ಆರು ದಶಕಗಳ ಅನಂತರವೂ ಭಾರತದಲ್ಲಿ ಒಂದು ವರ್ಗದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಅತ್ಯಾಚಾರ, ಹಲ್ಲೆ, ಮಾನಭಂಗಗಳಂತಹ ಗಂಭೀರ ಅಫರಾದಗಳನ್ನು ಎಸಗಲಾಗುತ್ತಿದೆ.

೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು.

ಯಾವುದೇ ಧರ್ಮ ಜಾತಿ ಆಧರಿತ ತಾರತಮ್ಯ ಕಾನೂನು ಬಾಹಿರ ಎಂದು ಸಂವಿಧಾನದ ಕಲಂಗಳಲ್ಲಿ ಸಾರಿ ಹೇಳಿದರೂ ಸಮಾಜದ ಒಂದು ಪ್ರಮುಖ ಭಾಗದ ಜನರನ್ನು ನಾವು ನಿರ್ಲಕ್ಷಿಸಿದ್ದೇವೆ. ಅನುಚ್ಚೇದ ೧೭ ರಲ್ಲಿ ಅಸ್ಪೃಶ್ಯ ಆಚರಣೆ ನಿಷೇದವೆಂದು ಸ್ಪಷ್ಟಪಡಿಸಿದ್ದರೂ, ರಾಷ್ಟ್ರದ ಎಲ್ಲಾ ಕಡೆ ದಲಿತರ ಮೇಲೆ ಕೊಲೆ, ಅತ್ಯಾಚಾರ. ದೌರ್ಜನ್ಯ, ಬಹಿಷ್ಕಾರಗಳಂತಹ ಅನಿಷ್ಟ ಕ್ರೂರ ಪದ್ದತಿಗಳು ಮುಂದುವರಿದೇ ಇದೆ. ಮತ್ತಷ್ಟು ಓದು »

8
ಡಿಸೆ

ಗಾಂಧಿಬಂದ ವಿವಾದ : ಆತ್ಮಾವಲೋಕನೆಗೆ ಸುಸಂದರ್ಭ

-ಪ್ರವೀಣ್. ಟಿ. ಎಲ್

ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ   ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದು ‘ಜಾತಿ ಸಂಸ್ಥೆಗಳು’ ವಿಶ್ವವಿದ್ಯಾನಿಲಯಗಳ ಮೇಲೆ ತರುತ್ತಿರುವ ‘ಅನೈತಿಕ ಒತ್ತಡ’ವಾಗಿದ್ದು, ಅವುಗಳನ್ನು ‘ಲಕ್ಷ’ಕ್ಕೆ ತೆಗೆದುಕೊಳ್ಳಬಾರದೆಂಬ ವಾದವನ್ನು ಮುಂದಿಟ್ಟರು. ಹಾಗೂ ಅವರ ವಾದವು  ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಜಾತಿ ಸಂಸ್ಥೆಗಳ ರಾಜಕೀಯ ಎಂಬುದನ್ನು ಗುರುತಿಸಿದಾಗ ಈ ರಾಜಕೀಯದಲ್ಲಿ ಸಾಹಿತ್ಯವು ತಟಸ್ಥ ಪಕ್ಷವಾಗಿ ತನ್ನನ್ನು ಉಳಿಸಿಕೊಂಡಿದೆಯೆ? ಎಂಬ ಪ್ರಶ್ನೆ ಏಳುತ್ತದೆ.

ತಮಗೆ ಪಥ್ಯವಾಗದ ಯಾವುದೋ ವಿಚಾರವನ್ನು ಮಂಡಿಸಿದೆ ಎನ್ನುವ ಕಾರಣಕ್ಕಾಗಿ ಗ್ರಂಥಗಳನ್ನೇ ನಿಷೇಧಿಸಬೇಕೆಂಬ ಹಾಗೂ ಸಂಶೋಧನೆಗಳನ್ನೇ ನಿಲ್ಲಿಸಬೇಕೆಂದು ಒತ್ತಡ ತರುವ ಪೃವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಿಷಾದಕರ  ಸಂಗತಿ ಹಾಗೂ ಖಂಡನೀಯ. ಇದು ನಮ್ಮ ಸಂಸ್ಕೃತಿಗೆ ತೀರ ಅಸಹಜವಾದ ಒಂದು ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕೆಲವು ಜಾತಿಯ ಪಾತ್ರಗಳನ್ನು ಹಿಯ್ಯಾಳಿಸುವ, ವ್ಯಂಗ್ಯವಾಡುವ ಹಲವಾರು ಪ್ರದರ್ಶನ ಕಲೆಗಳು ಇಂದಿಗೂ ಯಾವ ‘ಜಾತಿಸಂಸ್ಥೆಗಳ’ ಕೆಂಗಣ್ಣಿಗೂ ಗುರಿಯಾಗದೇ ಮುಂದುವರೆದುಕೊಂಡು ಬರುತ್ತಿರುವುದನ್ನು ನಮ್ಮ ಸಮಾಜದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಉದಾಹರಣೆಗೆ ಜಾನಪದೀಯ ಕಲೆಗಳಾದ, ‘ಯಕ್ಷಗಾನ’, ‘ತಾಳಮದ್ದಳೆ’, ‘ಶನಿಮಹಾತ್ಮನ ಆಟ’ ಇವುಗಳ ಸಂದರ್ಭದಲ್ಲಿ ಬ್ರಾಹ್ಮಣರಾದಿಯಾಗಿ ಎಷ್ಟೋ ಜಾತಿಗಳ ಪಾತ್ರಗಳನ್ನು(ಮಾಣಿಭಟ್ಟ, ಇತ್ಯಾದಿ) ಹಾಸ್ಯಕ್ಕೆ, ವಿಡಂಬಿಸುವುದಕ್ಕಾಗಿ ಸೃಷ್ಟಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದೇ ಜಾತಿಯ ಜನರು ಅಂತಹ ಪ್ರದರ್ಶನಗಳನ್ನು ನೋಡಿ ಸಂತೋಷವನ್ನು ಪಡುತ್ತಾರೆ, ಕಲಾವಿದನ ಪ್ರತಿಭೆಯನ್ನು ಮೆಚ್ಚಿ ಹೊಗಳುತ್ತಾರೆ. ಜೊತೆಗೆ ಅಂತಹ  ಪ್ರದರ್ಶನಗಳು ಪದೇ ಪದೇ ತಮ್ಮ ಊರುಗಳಲ್ಲಿ ನಡೆಯುವಂತೆ ಅಲ್ಲಿನ ಜನರು ಮತ್ತು ಈ ‘ಜಾತಿಸಂಸ್ಥೆಗಳೇ’ ನೋಡಿಕೊಳ್ಳುತ್ತವೆ. ಈ ಸಾಂಪ್ರದಯಿಕ ಕಲೆಯ ಸಂದರ್ಭದಲ್ಲಿ ಕಾಣದ ಪೃವೃತ್ತಿಯು ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳಬೇಕು? ಆಧುನಿಕ ಸಾಹಿತ್ಯದ ಸಂದರ್ಭದಲ್ಲೂ ಕೂಡ ಚೆನ್ನಿಯವರು ಹೇಳುವಂತೆ ಈ ಪೃವೃತ್ತಿಯು ಜಾತಿ ರಾಜಕೀಯ ಸಂಸ್ಥೆಗಳಿಂದ ಪ್ರಚೋದಿತವಾದುದನ್ನೇ ಕಾಣುತ್ತೇವೆಯೇ ವಿನಃ ಸಾಮಾನ್ಯ ಓದುಗರಿಂದಲ್ಲ. ಹಾಗಾಗಿ ಈ ಪೃವೃತ್ತಿಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಇದೊಂದು ಭಿನ್ನವಾದ  ಸಾಮಾಜಿಕ ವಾಸ್ತವದಲ್ಲಿ ಹುಟ್ಟಿಕೊಂಡ ಸಮಸ್ಯೆಯಾಗಿದೆ. ಮತ್ತಷ್ಟು ಓದು »

6
ಡಿಸೆ

ಈ ವೆಬ್ಸೈಟ್ ನಲ್ಲಿ ಕನ್ನಡಕ್ಕಿಲ್ಲ ‘ಆಧಾರ’

-ಪ್ರಶಸ್ತಿ.ಪಿ, ಶಿವಮೊಗ್ಗ

ಪಾಣಿಯಿಂದ ಹಿಡಿದು ಪೋಸ್ಟಾಫೀಸಿನ ಕಡತದವರೆಗೆ ಎಲ್ಲವೂ ನಾಡಭಾಷೆ ಕನ್ನಡದಲ್ಲಿ ಸಿಗುತ್ತಿರುವಾಗ ರಾಜ್ಯ ಸರ್ಕಾರವೇ ಸ್ಥಾಪಿಸಿದ ಮಿಂಬಲೆ(website) http://www.karnataka.gov.in ಯೆಲ್ಲಾ ಇಂಗ್ಲೀಷ್ ಮಯ. .ಹೋಗುತ್ತಿದ್ದ ಹಾಗೆಯೇ ಕನ್ನಡ/ಇಂಗ್ಲೀಷ ಎಂಬ ಆಯ್ಕೆ ಸಿಗುತ್ತದೆ. ನೋಡೋಣ ಎಂದು ಕುತೂಹಲಕ್ಕೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ಒಳನಡೆದಾಗ ನನಗೆ ಗೋಚರಿಸಿ ಬೇಸರಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

“ಆಧಾರ್” ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಪ್ರತ್ಯೇಕ ಗುರುತಿನ ಚೀಟಿ ನೀಡಬೇಕೆಂಬ ಮಹೋದ್ದೇಶದ್ದು. ಅದು ಈಗಾಗಲೇ ಅಂಚೆ ಕಛೇರಿಗಳ ಮೂಲಕ ಚಾಲನೆಗೆ ಬಂದಿರುವುದು ನಿಮಗೆಲ್ಲಾ ತಿಳಿದೇ ಇದೆ. ಅದೇ ಆಧಾರ ನ ಬಗ್ಗೆ ಕರ್ನಾಟಕದ ಮಿಂಬಲೆಯಲ್ಲಿ ಮಾಹಿತಿ ಪಡೆಯಲು ಹೋದಾಗ ನನಗಾಗಿದ್ದು ಆಘಾತ.

ಅದರ ಹೆಸರೊಂದೇ ನಮ್ಮ ಆಧಾರ್ ಅಂತ. ಬಲಗಡೆ ಬರುವಂತ ಚಿತ್ರ ಪ್ರದರ್ಶನ(Slide Show) ದಲ್ಲಿ ಮಾತ್ರ ನಿಮಗೆ ಕನ್ನಡ ಕಾಣಸಿಗುತ್ತದೆ  ಅಷ್ಟೆ!!!http://www.karnataka.gov.in/nammaaadhaar/home.html..

 ಅದೂ ೮ ಚಾಯಾ ಚಿತ್ರಗಳಷ್ಟೆ.. ಆಧಾರ ಕಾರ‍್ಡನು ಶಾಲೆಗೆ ಸೇರಿಸಲು, ವೃದ್ದಾಪ್ಯ ವೇತನ ಪಡೆಯಲು,  ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು,ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಅಂತ ಅದಕ್ಕೆ ಸಂಬಂಧಿಸಿದಂತೆ ಇರುವ ಚಿತ್ರಗಳನ್ನು ಹಾಕಲಾಗಿದೆ. ಅದರಲ್ಲಿ “ಆಧಾರ್” ಪಡೆಯಲು  ಏನೇನು ದಾಖಲೆ ಸಲ್ಲಿಸಬೇಕು ಅಂತ ಹೇಳಲಾಗಿಲ್ಲ. ವಿಳಾಸದ ದಾಖಲೆಗಾಗಿ ಸೂಚಿಸಿದ ೨೯ ದಾಖಲೆಗಳ ಮೂಲಪ್ರತಿಯನ್ನು , ಗುರುತಿನ ದಾಖಲೆಗಾಗಿ ಸೂಚಿಸಿದ ದಾಖಲೆಗಾಗಿ ೧೭ರಲ್ಲಿ ಒಂದು , ಹುಟ್ಟು ದಿನಾಂಕದ ದಾಖಲೆಗಾಗಿ ೪ ದಾಖಲೆಗಳಲ್ಲಿ ಒಂದರ ಮೂಲ ಪ್ರತಿ ಸಲ್ಲಿಸಬೇಕು. !! ನೋದಣಿಯ ನಂತರ ಅವುಗಳನ್ನು ಹಿಂತಿರುಗಿಸಲಾಗುವುದು ಅಂತ ಇದೆ. ಆ ೨೯,೧೭,೪ ದಾಖಲೆಗಳು ಏನು . ಎತ್ತ ಎಂಬುದರ ಬಗ್ಗೆ ಮಾಹಿತಿಯಿಲ್ಲ.. ಅದನ್ನು ಆಧಾರ್ ನೊಂದಣಿ ಕೇಂದ್ರದಲ್ಲಿ ಪಡೆಯಬೇಕು  ಆಧಾರ್ ಅನ್ನು ಎಲ್ಲಿ ಪಡೆಯಬಹುದು ಎಂಬ ಸ್ಲೈಡಲ್ಲಿ ಜಿಲ್ಲಾಡಳಿತದಿಂದ ಸ್ಥಾಪಿಸಲ್ಪಟ್ಟ ಆಧಾರ್ ನೊಂದಣಿ ಕೇಂದ್ರಗಳು ಅಂತ ಹಾಕಿದ್ದಾರೆ.. ನಮ್ಮ ಜಿಲ್ಲೆಯಲ್ಲಿ ಆಧಾರ್ ನೊಂದಣಿ ಕೇಂದ್ರ ಎಲ್ಲಿದೆ ಅಂತ ಈ ಸೈಟಿಂದ ಹೇಗೆ ತಿಳಿಯೋಣ ಸ್ವಾಮಿ ?? ಆಧಾರ್ ಕೇಂದ್ರ ಹತ್ತಿರದಲ್ಲಿ ಎಲ್ಲಿದೆ ಅಂತ ತಿಳಿಯೋಕೆ ಆಧಾರ್ ಕೇಂದ್ರಕ್ಕೇ ಹೋಗಬೇಕೇ ?    ಮತ್ತಷ್ಟು ಓದು »

21
ನವೆಂ

ಶ್ರೀರಾಮುಲು ಪುರಾಣದೊಳ್ ಭಾಜಪದ ಅವಸ್ಥೆ….!!

-ಅರೆಹೊಳೆ ಸದಾಶಿವರಾವ್

ಇಡೀ ಕರ್ನಾಟಕದ ರಾಜಕೀಯ ನಕ್ಷೆಯ ಮೇಲೆ ತನ್ನ ಪ್ರಭಾವ ಬೀರಿ, ಒಂದು ಹಂತದಲ್ಲಿ ಪಕ್ಷದ ಹೈಕಮಾಂಡ್‌ನ್ನೂ ತನ್ನ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಬಳ್ಳಾರಿಯ ಕಥೆ ನೋಡಿ. ಇಂದು ತಮ್ಮಿಂದ ಉಪಕಾರ ಪಡೆದ ಎಲ್ಲರಿಗೂ ತಲೆನೋವಾಗಿ, ಉಪಚುನಾವಣೆಗೆ ಕಾರಣವಾಗಿ, ’ಬಹಿರಂಗ’ವಾಗಿ, ಅ ಕಾರಣವಾಗಿ ಭಾಜಪದಿಂದ ಡೈವೋರ್ಸ್ ಪಡೆದು, ಶ್ರೀರಾಮುಲು ನಡೆಸಿರುವ ಕಾರುಬಾರು, ಎಲ್ಲರ ಹುಬ್ಬೇರಿಸಿದೆ.
ಅಲ್ಲಿ, ಚಂಚಲಗೂಡಿನಲ್ಲಿ ಗಣಿಯ ಹಿರಿಧಣಿ,
ಪರಪ್ಪನ ಅಗ್ರಹಾರದಲ್ಲಿ ಭಾಜಪದ ಕಣ್ಮಣಿ!
ಈ ನಡುವೆ ಶ್ರೀರಾಮುಲುದ್ದೇ ಬೇರೆ ಹಣಾಹಣಿ.
ಈಗ ಬಳ್ಳಾರಿಗೆ ಮತ್ತೆ ಚುನಾವಣೆಯ ಸಗಣಿ!!!

ಈ ಸಗಣಿ ಎಂದ ಬಗ್ಗೆ ನಿಮಗೆ ಆಶ್ಚರ್ಯವಿರಬಹುದು. ಆದರೆ ಇದು ಶ್ರೀರಾಮುಲು ತಮ್ಮ ಮುಖಕ್ಕೆ ಮೆತ್ತಿದ ಸಗಣಿಯನ್ನು ಯಾರದ್ದೋ  ಮುಖಕ್ಕೆ ಹಚ್ಚಿ, ಏನೋ ಮಾಡಲು ಹೊರಟಿದ್ದಾರೆ. ಇನ್ನುಳಿದ ಕೇವಲ ಅಲ್ಪ ಸಮಯಕ್ಕೆ ಅಲ್ಲಿ ಚುನಾವಣೆಯ ಕಾವೇರುವಂತೆ ಮಾಡಿದ ಶ್ರೀರಾಮುಲು ಒಂದು ರೀತಿಯಲ್ಲಿ ತನ್ನ ಆಪ್ತ ಜನಾರ್ದನ ರೆಡ್ಡಿಯೊಂದಿಗೆ ಸೇರಿಕೊಂಡು, ರಾಜ್ಯಕ್ಕೆ ಸಾಲು ಸಾಲಾಗಿ ಉಪಚುನಾವಣೆಗಳನ್ನೇ  ತಂದವರು ಎಂಬುದು ಗಮನಾರ್ಹ!. ಇನ್ನೇನು ಸರಕಾರ ರಚನೆಗೆ ಅಣಿಯಾಗಬೇಕು ಎಂದು ಭಾಜಪ ಶಾಲು ಕೊಡವಿಕೊಳ್ಳುವಷ್ಟರಲ್ಲಿ ಎದುರಾದದ್ದು ಬಹುಮತದ ಕೊರತೆ. ಆಗ ಪಕ್ಷೇತರರಿಗೆ ಲಾಟರಿ ಹೊಡೆಸಿ, ಅವರನ್ನು ಹೆಲಿಕಾಪ್ಟರ್‌ನಲ್ಲಿಯೇ ತಂದು, ಖರೀದಿಸಿ ಸರಕಾರ ರಚಿಸಿದ ನಂತರ, ’ಆಪರೇಷನ್ ಕಮಲ’ದ ಆಮಿಷದ ಹಬ್ಬ. ಈ ಮೂಲಕ ಮತ್ತೆ ಮತ್ತೆ ಉಪಚುನಾವಣೆಗಳನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಜನತೆಯ ಮೇಲೆ ಹೇರಿದ್ದು, ಇದೇ ರೆಡ್ಡಿ ಮತ್ತು ಕಂಪೆನಿ.
ಮತ್ತಷ್ಟು ಓದು »