ವಿಷಯದ ವಿವರಗಳಿಗೆ ದಾಟಿರಿ

Posts from the ‘ವಿಜ್ಞಾನ’ Category

14
ಆಕ್ಟೋ

ನಮ್ಮ ನಮ್ಮ ಭಾಷೆಯ ಸಮಸ್ಯೆ

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

ಕನ್ನಡ ಕಲಿವಾರಗಳ ಹಿಂದೆ ಭಾರತದ ಖಗೋಳ ವಿಜ್ಞಾನಿಗಳ ತಂಡ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿತು. ಈ ಸಂದರ್ಭದಲ್ಲಿ ಬಹುತೇಕ ಕನ್ನಡ ವಾಹಿನಿಗಳು ಚರ್ಚೆಯನ್ನು ಏರ್ಪಡಿಸಿದ್ದವು. ಖಗೋಳ ಅನ್ನುತ್ತಿದ್ದಂತೆ ಈ ಕುರಿತ ಭಾರತದ ಪ್ರಾಚೀನ ಜ್ಞಾನವೇತ್ತರನ್ನು ಹಾಗೂ ಇಂದಿನ ವಿಜ್ಞಾನಿಗಳನ್ನು ಅಥವಾ ಅವರ ಪ್ರತಿನಿಧಿಗಳು ಅಂದುಕೊಂಡವರನ್ನು ಚರ್ಚೆಗೆ ಆಹ್ವಾನಿಸಬೇಕಲ್ಲ? ವಾಹಿನಿಗಳೂ ಹಾಗೆಯೇ ಮಾಡಿದವು. ಎರಡೂ ಕ್ಷೇತ್ರದವರನ್ನು ಜೊತೆಗೆ ನಡುವೆ ವಿಚಾರವಾದಿಗಳನ್ನು ಕರೆತಂದು ಕೂರಿಸಲಾಗಿದ್ದ ಚರ್ಚೆಯೊಂದನ್ನು ನೋಡುತ್ತಿದ್ದೆ. ಜ್ಯೋತಿಷಶಾಸ್ತ್ರದಲ್ಲಿ ಮಂಗಳನ ಬಗ್ಗೆ ಹೀಗೆ ಹೇಳಿದೆ, ಹಾಗೆ ಹೇಳಿದೆ. ಅದೇ ಸತ್ಯ; ಭಾರತೀಯ ಋಷಿ ಮುನಿಗಳು ಅಣುವಿನ ಬಗ್ಗೂ ಪ್ರಸ್ತಾಪಿಸಿದ್ದಾರೆ, ಅವರಿಗೆಲ್ಲ ತಿಳಿದಿತ್ತು ಎಂಬಂತೆ ಆ ಶಾಸ್ತ್ರದವರು ಅನ್ನುತ್ತಿದ್ದರೆ ಮತ್ತೊಂದೆಡೆ ಹಾಗಾದ್ರೆ ಅವರಿಗೆ ಅಣುಬಾಂಬ್ ತಿಳಿದಿತ್ತಾ? ಇದೆಲ್ಲ ನಾನ್ಸೆನ್ಸ್ ಎಂದು ಆಧುನಿಕ ಜ್ಞಾನ ಪ್ರತಿಪಾದಕರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದರು.ತಮ್ಮ ತಮ್ಮ ಪ್ರತಿಪಾದನೆಗೆ ಎರಡೂ ಗುಂಪಿನವರೂ ಬಲವಾಗಿ ಅಂಟಿಕೊಂಡೇ ಇದ್ದರು. ಸಮಯವಾಯ್ತು, ಚರ್ಚೆ ನಿಂತಿತು. ಇಂಥ ಚರ್ಚೆಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.

ಕಾರಣ ಇಷ್ಟೇ. ಭಾರತದ ಪ್ರಾಚೀನ ಜ್ಞಾನ ಅಂದರೆ ಇಲ್ಲಿ ಚಂದ್ರ, ಸೂರ್ಯ, ಮಂಗಳ ಮೊದಲಾದವುಗಳ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವ ಮಾತುಗಳು ಅಥವಾ ಪಾರಂಪರಿಕ ಜ್ಞಾನ. ಇವುಗಳ ವಿವರ ಭಾಸ್ಕರಾಚಾರ್ಯ, ವರಾಹಮಿಹಿರ ಮೊದಲಾದವರ ಕೃತಿಗಳಲ್ಲಿ ತಕ್ಕಮಟ್ಟಿಗೆ ದೊರೆಯುತ್ತದೆ. ಇದನ್ನು ಇಂದಿನ ಜ್ಯೋತಿಷ್ಕರು ತುಸು ತಿಳಿದಿರುತ್ತಾರೆ. ಇನ್ನು ಆಧುನಿಕ ವಿಜ್ಞಾನ ಕುರಿತು ಮಾತನಾಡುವವರು ವಿಜ್ಞಾನಿಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಓದಿದವರೋ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪಾಠ ಮಾಡುವವರೋ ಆಗಿದ್ದವರು. ಇವರಲ್ಲಿ ಎರಡೂ ವರ್ಗದವರೂ ಈ ಎರಡೂ ಕ್ಷೇತ್ರದ ಜ್ಞಾನ ಸೃಷ್ಟಿಗೆ ಕಾರಣರಾದವರಲ್ಲ, ಬದಲಿಗೆ ಯಾರೋ ಮಾಡಿದ ಪ್ರಯೋಗ-ಅದರ ಫಲಿತಗಳ ಅಂತಿಮ ಫಲಾನುಭವಿಗಳು.

ಮತ್ತಷ್ಟು ಓದು »

7
ಜೂನ್

ಸುಪ್ತ ಪ್ರಜ್ನೆಗೆ ಭವಿಷ್ಯವೂ ಗೊತ್ತಿರುತ್ತದೆ !

– ಸಚ್ಚಿದಾನಂದ ಹೆಗಡೆ

ಸುಪ್ತ ಪ್ರಜ್ನೆಹಿಂದಿನ ಜನ್ಮಗಳ ನೆನಪುಗಳ ಆಧಾರದ ಮೇಲೆ ಈ ಜನ್ಮದಲ್ಲಿ ಬಂದಿರುವ ಮನೋದೈಹಿಕ ತೊಂದರೆಗಳನ್ನು ನಿವಾರಿಸುವ ಚಿಕಿತ್ಸೆ ಬಗ್ಗೆ ಬಹುಶಃ ಈಗ ಟೀವಿ ನೋಡುವವರಿಗೆಲ್ಲರಿಗೂ ಗೊತ್ತಿದೆ. ನಮ್ಮ ದೇಶದಲ್ಲಿ ಬಹುಶಃ ನೂರಾರು ಜನ ಇಂಥ ಚಿಕಿತ್ಸಕರಿರಬಹುದು. ಸಮ್ಮೋಹನ, ರೇಕಿ, ಪ್ರಾಣಚೈತನ್ಯ ಚಿಕಿತ್ಸೆ, ಕಾಸ್ಮಿಕ್ ಚಿಕಿತ್ಸೆ ಮುಂತಾದ ಹಲವಾರು ಪದ್ಧತಿಗಳ ಮೂಲಕ ಪೂರ್ವಜನ್ಮಗಳ ನೆನಪುಗಳನ್ನು ಕೆದಕಿ, ಈಗಿನ ತೊಂದರೆಯ ಬೇರುಗಳು ಎಲ್ಲಿ ಅಡಗಿವೆ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ಮಾಡುವುದು ಈಗ ಅಪರೂಪವೇನೂ ಅಲ್ಲ.

ಸಮ್ಮೋಹನ ಪದ್ಧತಿಯ ಮೂಲಕ ೪೦೦೦ಕ್ಕೂ ಹೆಚ್ಚು ಪ್ರಯೋಗ ನಡೆಸಿ ಪುನರ್ಜನ್ಮದ ಬಗೆಗೆ ಸಂಶೋಧನೆ ನಡೆಸಿರುವುದಾಗಿ ಖ್ಯಾತ ಅಮೇರಿಕನ್ ಮನೋವೈದ್ಯ ಡಾ. ಬ್ರಿಯಾನ್ ವೇಯ್ಸ್ ಹೇಳಿದ್ದಾನೆ. ತಾನು ನಡೆಸಿದ ಪ್ರಯೋಗಗಳನ್ನು ಉಲ್ಲೇಖಿಸಿ ಆತ ಹತ್ತಾರು ಪುಸ್ತಕಗಳನ್ನು ಬರೆದಿದ್ದು ಅವು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗಿವೆ. ಅದೇರೀತಿ ಡಾ. ಬ್ರೂಸ್ ಗೋಲ್ಡ್ ಬರ್ಗ್ ಎಂಬ ಚಿಕಿತ್ಸಕನೂ ಜನ್ಮ-ಜನ್ಮಾಂತರಗಳ ವೃತ್ತಾಂತಗಳ ಆಧಾರದ ಮೇಲೆ ತಾನು ನಡೆಸಿದ ಚಿಕಿತ್ಸೆಗಳನ್ನು ಪುಸ್ತಕಗಳ ರೂಪದಲ್ಲಿ ದಾಖಲಿಸಿದ್ದಾನೆ.

ನಾನು ಬೆಂಗಳೂರಿನಲ್ಲಿರುವ ರಾಷ್ಟ್ರಖ್ಯಾತಿಯ ನಿಮ್ಹಾನ್ಸ್ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿಯೂ ಪೂರ್ವಜನ್ಮ ಚಿಕಿತ್ಸಕರಿದ್ದಾರೆಂದು ತಿಳಿಯಿತು. (ಅವರ ಹೆಸರುಗಳು ಈಗ ಮರೆತುಹೋಗಿವೆ).

ಇಂಥ ಚಿಕಿತ್ಸೆ-ಪ್ರಯೋಗಗಳಿಗೆ ಸಂಬಂಧಿಸಿ ನಾನು ಕೆಲವು ಪುಸ್ತಕಗಳನ್ನು ಮಗುಚಿಹಾಕಿದ್ದೇನೆ. ಮೊದಮೊದಲು ನನಗೆ ಪೂರ್ವಜನ್ಮದ ನೆನಪುಗಳೆಂದರೆ ತುಂಬ ರೋಮಾಂಚನವಾಗುತ್ತಿತ್ತು. ಆಧ್ಯಾತ್ಮಿಕ ಸಾಧಕರೊಬ್ಬರು ನನ್ನ ಕೆಲವು ಪೂರ್ವಜನ್ಮಗಳ ಬಗ್ಗೆ ಹೊಳಹುಗಳನ್ನು ನೀಡಿದಾಗಲೂ ನನಗೆ ಬಹಳ ಆಶ್ಚರ್ಯವೆನಿಸಿತ್ತು. ಆ ಸಾಧಕರು ನನ್ನ ಈ ಜನ್ಮದ ಒಂದು ವಿಚಿತ್ರ ಸಮಸ್ಯೆಯ ಮೂಲ ಹಿಂದಿನ ಒಂದು ಜನ್ಮದಲ್ಲಿದ್ದುದರ ಬಗ್ಗೆ ಹೇಳಿದಾಗ ನನ್ನ ಆ ಸಮಸ್ಯೆ ಬಹುಮಟ್ಟಿಗೆ ಪರಿಹಾರ ಕಂಡಿತ್ತು. ಆದರೆ ಈಗ ನನಗೆ ಇಂಥ ಸಂಗತಿಗಳು ಸಹಜ ಎನ್ನಿಸತೊಡಗಿವೆ. ಆಧ್ಯಾತ್ಮಿಕ ಸಾಹಿತ್ಯದಲ್ಲಂತೂ ಹಿಂದಿನ ಜನ್ಮಗಳ ಕರ್ಮ ಅನುಭವಿಸುವ ವಿಷಯ ಧಾರಾಳವಾಗಿ ಸಿಗುತ್ತವೆ.

ಮತ್ತಷ್ಟು ಓದು »

26
ಫೆಬ್ರ

ನಿಶ್ಯಬ್ದ …!

– ರಾಘವೇಂದ್ರ ಎಂ. ಸುಬ್ರಹ್ಮಣ್ಯ

anechoic chamberಕಲಾಸಿಪಾಳ್ಯ/ಕೆ.ಆರ್ ಮಾರ್ಕೆಟ್ ಕಡೆ ಹೋದವರಿಗೆ ಗೌಜು ಗದ್ದಲದ ನಿಜಾರ್ಥ ತಿಳಿದಿರುತ್ತೆ. ಹಾಗೆಯೇ ಕೊಡಚಾದ್ರಿ/ಕುಮಾರಪರ್ವತ ಚಾರಣಮಾಡಿದವರಿಗೆ ನಿಶ್ಯಬ್ದದ ಅನುಭವ ಆಗಿರುತ್ತೆ. ಈಗ ಪ್ರಶ್ನೆ ಏನಂದರೇ ಶಬ್ದಕ್ಕೆ ಮತ್ತಷ್ಟು ಶಬ್ದ ಸೇರಿಸಿ ಮತ್ತಷ್ಟು ಹೆಚ್ಚು ಶಬ್ದ ಮಾಡಬಹುದು. ಆದರೆ ನಿಶ್ಯಬ್ದವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯವೇ?

ಬೆಂಗಳೂರಿನ ನಾಲ್ಕು ರಸ್ತೆಗಳು ಸೇರುವಲ್ಲಿ ಗಣಪತಿ ಪೆಂಡಾಲ್ ಹಾಕಿ, ಸಂಜೆ ಕರ್ಣಭಯಂಕರ ಚಿತ್ರಗೀತೆಗಳನ್ನು ಹಾಕಿ, ಅದರ ಮೇಲೆ ಪಟಾಕಿ ಹೊಡೆದು, ಬೆಳಕಿಗಾಗಿ ಜನರೇಟರ್ ಇಟ್ಟು….ಹೇಗೆ ಶಬ್ದಕ್ಕೆ ಶಬ್ದಗಳನ್ನು ಸೇರಿಸುತ್ತಲೇ ಹೋಗಬಹುದು….ಶಬ್ದಮಾಲಿನ್ಯವನ್ನು ತಾರಕಕ್ಕೆ ತೆಗೆದುಕೊಂಡು ಹೋಗಬಹುದು. ಆದರೆ ಅದೇ ತರಹ ಅದರ ವಿರುದ್ದದೆಡೆಗೆ ಹೋಗುತ್ತಾ ಹೋದರೆ, ಅಂದರೆ ಗಣಪತಿ ಹಬ್ಬದ ಕೊನೆಯದಿನದ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ರಾತ್ರಿ 2:35ಕ್ಕೆ ಪೂರ್ತಿ ನಿಶ್ಯಬ್ದವನ್ನು ನೋಡಬಹುದು. ಆದರೆ ಅದು ಪೂರ್ತಿ ನಿಶ್ಯಬ್ದವಲ್ಲವಷ್ಟೇ? ಎಲ್ಲೋ ಒಂದು ನಾಯಿ ಓಳಿಡುತ್ತಿರುತ್ತದೆ. ಆ ನಾಯಿಯನ್ನು ಓಡಿಸಿದರೆ….ಇನ್ನಷ್ಟೂ ನಿಶ್ಯಬ್ದ. ಆದರೆ ಇನ್ನೆಲ್ಲೋ ಒಂದು ಜೀರುಂಡೆ ಕಿರ್ರೆನ್ನುತ್ತಿರುತ್ತದೆ. ಆ ಶಬ್ಧವನ್ನೂ ಇಲ್ಲವಾಗಿಸಿದರೆ…..ಹೀಗೆ ನಾವು ಎಷ್ಟರಮಟ್ಟಿಗಿನ ನಿಶ್ಯಬ್ದವನ್ನು ಸಾಧಿಸಬಹುದು!? ಶಬ್ದ ಪರಿವಹನಕ್ಕೆ ಯಾವುದೇ ಮಾಧ್ಯಮವಿಲ್ಲ ಬಾಹ್ಯಾಕಾಶ ಹೇಗಿರಬಹುದು? ಎಷ್ಟು ನಿಶ್ಯಬ್ದವಾಗಿರಬಹುದು!?

ಮತ್ತಷ್ಟು ಓದು »

20
ನವೆಂ

ವಿಜ್ನಾನವೂ ಒಂದು ನಂಬಿಕೆಯೇ ಅಲ್ಲವೇ?

– ಬಾಲಚಂದ್ರ ಭಟ್

Vijnana mattu Nambikeಈ ತಲೆಬರಹವನ್ನು ನೋಡಿದ ಬಹಳಷ್ಟು ಜನ ಇದೊಂದು ಮೂರ್ಖತನದ ಮಾತು ಎಂದುಕೊಳ್ಳುವದರಲ್ಲಿ ಸಂಶಯವಿಲ್ಲ. ಇಷ್ಟೆಲ್ಲ ನಾನು ಯಾಕೆ ಬರೆಯಲು ಪ್ರಾರಂಭಿಸಬೇಕಾಯಿತೆಂದರೆ ಇವತ್ತು ರಾಜಕೀಯ, ಸಾಮಜಿಕ ಹಾಗೂ ಇತ್ಯಾದಿ ವಲಯಗಳಲ್ಲಿ ನಂಬಿಕೆ, ಮೂಢನಂಬಿಕೆ ಹಾಗೂ ವಿಜ್ನಾನಗಳು ಬಹುಮಟ್ಟದಲ್ಲಿ ಚರ್ಚೆಯಾಗುತ್ತಿರುವದು. ಹೀಗೆ ಚರ್ಚೆಯಾದಾಗಲೆಲ್ಲ ನಂಬಿಕೆಯ ಬಗ್ಗೆ ಬೇರೆ ಬೇರೆ ಹಿನ್ನೆಲೆಯಲ್ಲಿ ಪರ/ವಿರೋಧ ವ್ಯಾಖ್ಯಾನಗಳನ್ನು ನೀಡಿದರೂ
ವಿಜ್ನಾನಕ್ಕೆ ಅವಿರೊಧ ಅನುಮೋದನೆ ಇರಬೇಕೆಂಬ ಇಂಗಿತ ಚರ್ಚೆಯ ಮೂಲ ತತ್ವವೇ ಆಗಿರುತ್ತದೆ.

ವೈಜ್ನಾನಿಕ ಚಿಂತಕರು ಜಡ್ಜ್ ಸ್ಥಾನದಲ್ಲಿಯೂ, ನಂಬಿಕೆ/ಮೂಢನಂಬಿಕೆಗಳ ಪರ/ವಿರೋಧಿಗಳು ಕಟೆಕಟೆಯಲ್ಲಿ ನಿಂತಿರುವಂತೆ ಅನಿಸುತ್ತದೆ. ಅಂತೆಯೆ ವಿಜ್ನಾನ ಇವತ್ತು ಜಡ್ಜ್ ಸ್ಥಾನವನ್ನು ಆಕ್ರಮಿಸಿದೆಯೆಂದರೆ ಮನುಕುಲದ ಬೌದ್ಧಿಕತೆ ಒಂದೇ ತಳಪಾಯದಡಿ ನಿರ್ಮಾಣವಾಗುತ್ತಿದೆ ಎನ್ನುವದರ ಅರ್ಥವೇನೊ! ಹಾಗೆಂದ ಮಾತ್ರಕ್ಕೆ ಎಲ್ಲರೂ ವಿಜ್ನಾನದ ಅಧ್ಯಯನದ ಬಗ್ಗೆ ಆಸ್ಥೆಯನ್ನು ತೋರಿಸುತ್ತಿದ್ದಾರೆಂದು ಅರ್ಥವಲ್ಲ. ಬದಲಿಗೆ ವಿಜ್ನಾನ ಇವತ್ತು ಜಡ್ಜ್ ಆಗಿರುವ ಕಾರಣ ಜನರು ತಮ್ಮ ತಮ್ಮ ಬದುಕಿನ ದೃಷ್ಟಿಕೋನಗಳನ್ನು ವಿಜ್ನಾನದ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದಾರಷ್ಟೆ.

ಮತ್ತಷ್ಟು ಓದು »

19
ನವೆಂ

ಶ್ವೇತಭವನ ತಲುಪಿದ ಜಯದೇವದ ಸಾಧನೆ ನಮ್ಮ ಸರ್ಕಾರಗಳಿಗೇಕೆ ಗೋಚರಿಸುತ್ತಿಲ್ಲ…

– ಗೋಪಾಲ ಕೃಷ್ಣ

Jayadeva Hospital‘ಹೀಗೆ ಮೂರು ವರ್ಷಗಳ ಹಿಂದೆ ಕ್ರಿಸ್ ಎಂಬ ಅಮೇರಿಕಾ ಪ್ರಜೆಯೊಬ್ಬರು ಕೆಲ ದಿನಗಳಿಗಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು.  ಒಂದು ತಡರಾತ್ರಿಯಲ್ಲಿ ಹೃದಯದ ನೋವು ಕಾಣಿಸಿದ್ದರಿಂದ, ವೈದ್ಯರೊಬ್ಬರ ಸಲಹೆಯ ಮೇರೆಗೆ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಿದ್ದಾರೆ.  ತಡರಾತ್ರಿಯಾದ್ದರಿಂದ ಆಸ್ಪತ್ರೆಯಲ್ಲಿ ಕೇಳುವವರು ಇರುವರೋ ಇಲ್ಲವೋ ಎಂಬ ಅನುಮಾನದಿಂದಲೇ ದಾಖಲಾದವರಿಗೆ ಜಯದೇವದಲ್ಲಿ ಆಶ್ಚರ್ಯ ಕಾದಿತ್ತು.  ಖುದ್ದು ಹೃದಯ ತಜ್ಞರಿಂದಲೇ ಚಿಕಿತ್ಸೆ ಪಡೆದು ದಾಖಲಾದ ಒಂದು ಗಂಟೆಯೊಳಗಾಗಿ ಮನೆಗೆ ಮರಳಿದ್ದಾರೆ.  ಅವರು ಚಿಕಿತ್ಸೆಗೆ ಭರಿಸಿದ್ದು 92 ರೂಪಾಯಿ.’

ನಮ್ಮ ಮನೆಯ ಅಥವಾ ನೆರೆಹೊರೆಯವರ ಅನುಭವಗಳನ್ನು ಕೇಳಿ ನೋಡಿ.  ತಡರಾತ್ರಿಯಲ್ಲಿ ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗೆ ಹೋದರೆ ಒಂದು ಗಂಟೆಯೊಳಗಾಗಿ ಚಿಕಿತ್ಸೆ ಪಡೆಯಲು ಸಾಧ್ಯವೇ?  ಇಸಿಜಿ, ರಕ್ತ ಪರಿಕ್ಷೆ, ತಜ್ಞ ವೈದ್ಯರಿಂದ ತಪಾಸಣೆಗೊಳಪಟ್ಟರೆ ಮೂರರಿಂದ ಐದು ಸಾವಿರಕ್ಕಿಂತ ಕಡಿಮೆಯಂತೂ ಬಿಲ್ ಮಾಡುವುದಿಲ್ಲ.  ಇಷ್ಟೆಲ್ಲವನ್ನೂ 92 ರೂಪಾಯಿಗೆ ನೀಡಲು ಹೇಗೆ ಸಾಧ್ಯವಾಯಿತು?  ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿಯೂ ಇಂತಹ ಆಸ್ಪತ್ರೆಗಳನ್ನು ಮುನ್ನಡೆಸಬಹುದು ಎಂದ ಮೇಲೆ, ಆರೋಗ್ಯದ ಸಮಸ್ಯೆಗಳು ಉಲ್ಭಣಿಸಲು ಜನಪ್ರತಿನಿಧಿಗಳು/ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯಿಲ್ಲದಿರುವುದೇ ಕಾರಣವಲ್ಲವೇ?

ಮತ್ತಷ್ಟು ಓದು »

4
ಜೂನ್

ಸಂಶೋಧನೆಯ ದಾರಿಯನ್ನು ಯಾರು ನಿರ್ಧರಿಸಬೇಕು?

  ಪ್ರೊ.ರಾಜಾರಾಮ ಹೆಗಡೆ

{20-5-2013 ಕನ್ನಡ ಪ್ರಭದಲ್ಲಿ ವರದಿಯಾದಂತೆ ಡಾ. ಎಂ.ಎಂimages. ಕಲ್ಬುರ್ಗಿಯವರು ಬಸವಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧಕರ ಕುರಿತು ಆಡಿದ ಮಾತಿಗೆ ಈ ಪ್ರತಿಕ್ರಿಯೆ.}

“ವಚನ ಚಳುವಳಿಯ ಚರ್ಚೆಯಲ್ಲಿ ಪ್ರಜಾವಾಣಿ ಪತ್ರಿಕೆಯು ಒಂದು ಪಕ್ಷದವರ ನಿಲುವುಗಳನ್ನು ಹೆಚ್ಚಾಗಿ ಬೆಂಬಲಿಸಿ ಈಗ ಚರ್ಚೆಯನ್ನು ಸಂಪೂರ್ಣವಾಗಿ ಆ ಪತ್ರಿಕೆಯು ನಿಲ್ಲಿಸಿಯಾಗಿದೆ. ಆದರೆ ಆ ಚರ್ಚೆಯ ಪರಿಣಾಮಗಳು ಗಾಢವಾಗಿವೆ ಎಂಬುದು ಸ್ಪಷ್ಟ. ಹಲವಾರು ಪ್ರಗತಿಪರ ಸಂಘಟನೆಗಳು ನಮ್ಮ ಸಂಶೋಧನಾ ಕೇಂದ್ರವನ್ನು ಮತ್ತು ಸಂಶೋಧನೆಯನ್ನು ನಿಲ್ಲಿಸುವಂತೆ ಸರ್ಕಾರದ ಮಟ್ಟದಲ್ಲಿ, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಾ ಒತ್ತಡ ತರುತ್ತಿವೆ. ಇಂತಹ ಸಮಯದಲ್ಲಿ ಬಸವಶ್ರೀ ಪ್ರಶಸ್ತಿ ಪಡೆದ ಎಂ.ಎಂ.ಕಲಬುರ್ಗಿಯವರು ವಿಕೃತ ಸಂಶೋಧನೆಯನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳ ಮುಂದೆ ಅಲವತ್ತುಕೊಂಡಿರುವುದು ಹಲವಾರು ಪತ್ರಿಕೆಗಳಲ್ಲಿ ಪಕ್ರಟವಾಗಿದೆ. ಅವರ ಕೋರಿಕೆಗೆ ಕೆಲವಾದರೂ ಪರಿಣಾಮಗಳು ಇದ್ದೇ ಇರುತ್ತವೆ. ಕನ್ನಡಪ್ರಭದಲ್ಲಿ ಪ್ರಕಟವಾದ ಅವರ ಅಂಬೋಣಕ್ಕೆ ಪ್ರತಿಕ್ರಿಯೆಯಾಗಿ ಈ ಲೇಖನವನ್ನು ಬರೆದು ಕನ್ನಡಪ್ರಭ ಪತ್ರಿಕೆಗೆ ಕಳುಹಿಸಲಾಗಿತ್ತು. ಆದರೆ ಪ್ರಕಟವಾಗಿಲ್ಲ.”

ವಿಶ್ವವಿದ್ಯಾನಿಲಯದ ಸಿಂಡಿಕೇಟು ಸದಸದ್ಯರು ಈ ಅಧ್ಯಾಪಕರಿಗೆ ಎಚ್ಚರಿಕೆ ನೀಡಬೇಕೆಂದು ಅವರು ಕರೆಕೊಟ್ಟಿದ್ದಾರೆ. ಅದೇ ಭಾಷಣದಲ್ಲಿ ಅವರು ವಚನಗಳ ಕುರಿತು ಕುವೆಂಪು ವಿಶ್ವವಿದ್ಯಾಲಯದ ಸಂಶೋಧಕರು ನಡೆಸುತ್ತಿರುವುದು ವಿಕೃತ ಸಂಶೋಧನೆ, ಅದನ್ನು ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೂ ಕೇಳಿಕೊಂಡಿದ್ದಾರೆ ಎಂಬುದನ್ನು ಇತರ ಪತ್ರಿಕೆಗಳೂ ಪ್ರಕಟಿಸಿವೆ.

ಕನ್ನಡ ಸಾರಸ್ವತ ಲೋಕದಲ್ಲಿ ಕಲಬುರ್ಗಿಯವರನ್ನು ಸಂಶೋಧಕರು ಎಂದೇ ಗುರುತಿಸಲಾಗುತ್ತದೆ. ಅವರು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ. ಅದಕ್ಕಿಂತ ಸ್ವತಃ ಅವರೇ ತಮ್ಮ ಮಾರ್ಗ 2 ಸಂಪುಟದಲ್ಲಿನ ಲೇಖನವೊಂದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು ಎದುರಿಸಬೇಕಾದ ಪರಿಸ್ಥಿತಿ ಕೂಡ ಒಮ್ಮೆ ಬಂದಿತ್ತು. ಆಗ ಅಭಿಪ್ರಾಯ ಸ್ವಾತಂತ್ರ್ಯದ ಮೌಲ್ಯ ಅವರಿಗೆ ರಕ್ಷಣೆಯಾಗಿ ಬಂದಿತ್ತು. ಆದರೆ ಈಗ ಒಂದು ವಿಪರ್ಯಾಸವನ್ನು ನೋಡುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆಯು ಸಂಶೋಧಕನೊಬ್ಬನಿಗೆ ನೀಡುವ ಯಾವ ಭರವಸೆಯು ಕಲಬುರ್ಗಿಯವರ ಸಂಶೋಧನೆಯನ್ನು ಸಾಧ್ಯ ಮಾಡಿತೊ ಹಾಗೂ ಅದರ ಹೆಸರಿನಲ್ಲಿ ಎದ್ದ ವಿವಾದಗಳಿಗೆ ಎದುರಾಗಿ ಅವರನ್ನು ರಕ್ಷಿಸಿತೊ ಅದು ಮುಂದಿನ ತಲೆಮಾರಿನ ಸಂಶೋಧಕರಿಗೆ ಬೇಡ ಎಂಬ ಅಭಿಪ್ರಾಯಕ್ಕೆ ಅವರು ಬಂದಂತಿದೆ. ಅಥವಾ ಅವರು ಈಗ ಸಂಶೋಧನೆಗೆ ಬೇರೆಯದೇ ಆದ ಅರ್ಥ ಹಚ್ಚುತ್ತಿರಲೂಬಹುದು

ಮತ್ತಷ್ಟು ಓದು »

26
ಫೆಬ್ರ

ರಾಮಸೇತು: ಭಕ್ತಿ ಭಾವನೆಯ ಜೊತೆಗೆ ಜೀವನೋಪಾಯದ ಪ್ರಶ್ನೆಯೂ ಹೌದು

– ಅಜಿತ್ ಶೆಟ್ಟಿ,ಉಡುಪಿ

Raama Setuveರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಹಿಂದೂಗಳಿಗೆ ಧಾರ್ಮಿಕ ಪವಿತ್ರ ಗ್ರಂಥಗಳಾಗಿದ್ದು, ಈ ಎರಡೂ ಕೃತಿಗಳು ಇತಿಹಾಸದ ಕಥೆಗಳಾಗಿವೆ .ಅನಾದಿಕಾಲದಿಂದ ಮಹಾಪಂಡಿತರು, ತಿಳಿದವರು ಇವನ್ನು ಪಂಚಮವೇದವೆಂದು ಕೈ ಮುಗಿಯುತ್ತಾರೆ. ಸಾವಿರಾರು ವರ್ಷಗಳಿಂದ ಭಾರತೀಯರ ಜನಜೀವನದಲ್ಲಿ ಮಿಳಿತವಾಗಿರುವ ಈ ಪವಿತ್ರ ಗ್ರಂಥಗಳ ಯಥಾರ್ಥವೇನು ಎಂದು ಕೇಳಿದರೆ ಏನೂಂತ ಹೇಳಬೇಕು? ಆರ್ಯ-ದ್ರಾವಿಡರು ವೈರಿಗಳೆಂದು ಕಥೆ ಕಲ್ಪಿಸಿ, ರಾಮ ಯಾವ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದನೆಂದು ಸರ್ಟಿಫಿಕೇಟ್ ಕೊಡಿ,ಸಾಕ್ಷಧಾರ ಕೊಡಿ ಎನ್ನುವ ಮೂರ್ಖ ಕರುಣಾನಿಧಿಯಂಥವರಿಗೆ ಏನೆಂದು ಉತ್ತರಿಸಬೇಕು ?

ಮೊದಲು ಹಿಂದೂ ರಾಷ್ಟ್ರ ಅಖಂಡ ಭಾರತದ ಮೇಲೆ ಮಹಮದೀಯರ ಆಕ್ರಮಣವಾಯಿತು . ನಂತರ ವ್ಯವಹಾರಕ್ಕೆ ಬಂದ ಕ್ರೈಸ್ತ ಯುರೋಪಿಯನ್ನರ ಆಕ್ರಮಣ . ಮಹಮದೀಯರು ಹೆದರಿಸಿ ಬೆದರಿಸಿ,ಕೊಲೆ ಸುಲಿಗೆ ಮಾಡುತ್ತ ನಮ್ಮ ಸಂಪತ್ತು ಲೂಟಿ ಹೊಡೆದರು.ಮೋಸದಿಂದ, ವಿಶ್ವಾಸಘಾತುಕ ಕೆಲಸದಿಂದ,ಕುಟಿಲ ತಂತ್ರದಿಂದ ಹಿಂದೂ ದೊರೆಗಳನ್ನು ಸೋಲಿಸಿ,ಪ್ರಜೆಗಳನ್ನು ಹೆದರಿಸಿ,ಒಪ್ಪದವರ ಕೊಲೆ ಮಾಡಿ ಅವರ ಮತ ಪ್ರಚಾರ ಮಾಡಿ ಮತಾಂತರಿಸಿದರು.ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್,ತುಘಲಕ್ ಅವರಿಂದ ಟಿಪ್ಪುವಿನವರೆಗೆ ಎಲ್ಲರೂ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣದ ಆಡಳಿತ ನಡೆಸಿದವರೇ. ಅದಕ್ಕೆ ಇರಬೇಕು ವಿಲ್ ದುರಂಟ್ STORY OF CIVILIZATION ಕೃತಿಯಲ್ಲಿ ಭಾರತದ ಮೇಲೆ ನಡೆದ ಇಸ್ಲಾಮಿನ ಆಕ್ರಮಣ ವಿಶ್ವದ ಇತಿಹಾಸದ ಅತ್ಯಂತ ರಕ್ತಸಿಕ್ತ ಅದ್ಯಾಯವೆಂದಿದ್ದು.ಯುರೋಪಿಯನ್ನರು ಭಾರತೀಯರ ಶಕ್ತಿ ಅಡಗಿರುವುದು ಭಾರತೀಯ ಸಂಸ್ಕೃತಿಯಲ್ಲಿ ಎಂದು ಮನಗಂಡು ಹಿಂಸಾ ಮಾರ್ಗವನ್ನು ಬದಿಗಿಟ್ಟು, ಹಿಂದೂ ನಂಬಿಕೆ , ಅಚಾರ ವಿಚಾರ ದೇವರನ್ನು ಪ್ರಶ್ನಿಸುತ್ತಾ,ಲೇವಡಿ ಮಾಡುತ್ತ,ಹಣದ ಆಮಿಷವೊಡ್ಡಿ ಮಿಷನರಿಗಳ ಮೂಲಕ ಉಪಾಯದಿಂದ ಮತಾಂತರದ ಕ್ರೈಸ್ತಿಕರಣಕ್ಕೆ ಮುಂದಾದರು.ಹಿಂದೂ ಧರ್ಮ ಪ್ರಸಾರಕ್ಕೆ ಇಲ್ಲಿತನಕ ಎಲ್ಲಿಯೂ ಹಿಂದೂಗಳು ಯುದ್ದ ಮಾಡಿಲ್ಲ,ಇನ್ನೊಂದು ಧರ್ಮವನ್ನು ನಿಂದಿಸಿಲ್ಲ ತೀರ ವಿಪರೀತವಾಗುತ್ತಿದೆ,ಸ್ವಾಭಿಮಾನಕ್ಕೆ ದಕ್ಕೆಯಾಗುತ್ತಿದೆ ಎಂದೆನಿಸಿದಾಗ ಅದಕ್ಕೆ ಉತ್ತರಿಸಿದ್ದಾರೆ.

ಮತ್ತಷ್ಟು ಓದು »

21
ಫೆಬ್ರ

ಶಾರ್ಕ್ ಮೀನಿಗೆ ಕ್ಯಾನ್ಸರ್ ಬರೊಲ್ವಂತೆ!! – ಸತ್ಯವೆಷ್ಟು ??

– ಆಜಾದ್ ಐ.ಎಸ್,ಕುವೈತ್

Meenಡಾಕ್ಟ್ರೇ..ಮೀನಿಗೆ ಕ್ಯಾನ್ಸರ್ ಬರೊಲ್ವಂತೆ ನಿಜವೇ…?, ನನಗೆ ಕೆಲವು ಕಡೆ ಎದುರಾಗಿರೋ ಪ್ರಶ್ನೆ ಇದು. ಹೌದೇ..? ನನಗೂ ಜಿಜ್ಞಾಸೆಗೆ ಎಡೆಮಾಡಿದ ವಿಷಯವಾಯಿತು-ಮೀನಿನ ಕ್ಯಾನ್ಸರ್ ನಿರೋಧಕತೆಯ ಪ್ರಶ್ನೆ. ಮೀನಿನ ಆರೋಗ್ಯನಿರ್ವಹಣೆ ನನ್ನ ಸಂಶೋಧನಾ ವಿಷಯವಾದರೂ ಈ ಬಗ್ಗೆ ಹೆಚ್ಚು ಓದಿದ ನೆನಪಿಲ್ಲ. ವಿಷಯ ಜಿಜ್ಞಾಸೆಯ ಹುಳ ತಲೆಗೆ ಹೊಕ್ಕರೆ ಅದರ ಬಗ್ಗೆ ತಿಳಿದುಕೊಳ್ಳುವ ಹುಚ್ಚು ಹಂಬಲ ಎಲ್ಲಾ ಸಂಶೋಧಕರಲ್ಲೂ ಇರುತ್ತೆ ಎನ್ನುವುದಕ್ಕೆ ನಾನು ಹೊರತಾಗಿಲ್ಲವಾದ್ದರಿಂದ ಶೋಧಕಾರ್ಯ ಪ್ರಾರಂಭವಾಯ್ತು.
ಮೀನು ಕಶೇರುಕಗಳ ವಿಕಸನಾ ಹಾದಿಯ ಮೂಲ ಜೀವಿ ಅಲ್ಲಿಂದಲೇ ಮಾನವ ವಿಕಾಸಗೊಂಡಿರುವುದು. ಹಾಗಾಗಿ ಕ್ಯಾನ್ಸರ್ ಬರದೇ ಇರಬಹುದಾದ ಗುಣವಿಶೇಷ ಮೀನುಗಳಲ್ಲಿದೆ ಎನ್ನುವುದೇ ಇಲ್ಲಿಯವರೆಗಿನ ನಡೆದಿರುವ ಸಂಶೋಧನೆಗಳಿಂದ ಸಿಧ್ದವಾಗಿರುವ ವಿಷಯ. ಮೀನು, ಉಭಯ ಜೀವಿ ಮತ್ತು ಉರಗಗಳ ಸುಮಾರು ೪೦೦೦ ಮಾದರಿ (ಸ್ಯಾಂಪಲ್) ಗಳು ಕ್ಯಾನ್ಸರ್ ಹೊಂದಿವೆ ಎನ್ನುವುದನ್ನು ಮಾದರಿಗಳ ಅಧ್ಯಯನದ ಮೂಲಕ ತಿಳಿದುಕೊಳ್ಳಲಾಗಿದೆ. ಹಾಗಾದರೆ ಮೀನುಗಳಲ್ಲಿ ಕ್ಯಾನ್ಸರ್ ವಿರೋಧಿಸುವ ಅಥವಾ ಕ್ಯಾನ್ಸರ್ ಗೆ ಕಡಿಮೆ ಗುರಿಯಾಗುವ ಬಗ್ಗೆ ಸುದ್ದಿಯಾಗಿದ್ದು ಏಕೆ?? ಇದರಲ್ಲಿ ಏನೂ ಹುರುಳಿಲ್ಲವೇ..???
ಮತ್ತಷ್ಟು ಓದು »

11
ಫೆಬ್ರ

ಮಂಗಳನ ಜೀವಿಗಳು ಭೂಮಿಗೆ ಬರುತ್ತಿವೆ

-ವಿಷ್ಣು ಪ್ರಿಯ

Mangalaಮಂಗಳನಲ್ಲಿ ಇರುವಂಥ ಜೀವಿಗಳನ್ನು ನಾವು ಭೂಮಿಗೆ ತೆಗೆದುಕೊಂಡು ಬರುತ್ತಿದ್ದೇವೆ. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ….

ಹೀಗಂತ ನಾಸಾದ ವಿಜ್ಞಾನಿಗಳು ಘೋಷಿಸಿದ್ದಾರೆ. ಮಂಗಳನ ಜೀವಿಗಳು ಎಂದಾಕ್ಷಣ ಹಾಲಿವುಡ್ ಚಲನಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿಯಿಲ್ಲ. ಸ್ಫೀಶೀಸ್-2, ಮೆನ್ ಇನ್ ಬ್ಲಾಕ್ 3, ಪ್ರಾಮೆಥೌಸ್ ಮೊದಲಾದ ಚಿತ್ರಗಳೆಲ್ಲ ಅನ್ಯಗ್ರಹಗಳ ಜಿವಿಗಳ ಕಲ್ಪನೆಯನ್ನಿಟ್ಟುಕೊಂಡೇ ನಿರ್ಮಿಸಿರುವಂಥದ್ದು. ಬೇರೆ ಗ್ರಹದ ಜೀವಿಗಳು ಭೂಮಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಹಲವು ಶತಮಾನಗಳ ಹಿಂದಿನಿಂದಲೇ ನಾವು ಕಲ್ಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆವು. ಆದರೆ ಆ ಕಲ್ಪನೆಗಳು ವಾಸ್ತವ ರೂಪಕ್ಕೆ ಬರುತ್ತಿರುವುದು ಮಾತ್ರ ಈಗ!ಮಂಗಳನಲ್ಲಿರುವ ಜೀವಿಗಳು ಇಲ್ಲಿಗೆ ಬರುತ್ತಿವೆ ಎಂದರೆ ಅವು ಹೇಗಿರಬಹುದು ಎಂಬ ಯೋಚನೆ ಹುಟ್ಟಿಕೊಳ್ಳುವುದು ಸಹಜ. ಸಿನೆಮಾಗಳಲ್ಲಿ ನೋಡಿದಂತೆ ಚಿತ್ರ-ವಿಚಿತ್ರ ಆಕಾರದ ಮಾನವರಂಥ ಜೀವಿಗಳು, ತಲೆ ಮೇಲೆ ಕೋಡು ಇರುವಂಥ ಮನುಷ್ಯರು, ಹಾರು ತಟ್ಟೆಗಳಲ್ಲಿ ಹಾರಾಡಿಕೊಂಡು ಬಂದು ಮನುಷ್ಯರ ಮೇಲೆ ಯುದ್ಧ ಮಾಡುವಂಥ ಜೀವಿಗಳು… ಅಲ್ಲ, ಈ ಸಿನೆಮಾಗಳು, ಫಿಕ್ಷನ್ನುಗಳಲ್ಲಿ ಅನ್ಯಗ್ರಹ ಜೀವಿಗಳ ಬಗೆಗಿನ ಕಲ್ಪನೆಯೇ ಅದ್ಭುತ. ಆದರೆ ಮಂಗಳಗ್ರಹದಿಂದ ತರಲಾಗುತ್ತಿರುವ ಜೀವಿಗಳು ಇಂಥವಲ್ಲ.

ಮತ್ತಷ್ಟು ಓದು »

31
ಆಕ್ಟೋ

ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಒಮ್ಮೆಗೆ ಹಲವು ಮಿಂಚೆ ರಚಿಸಿ

ಸ್ನೇಹಿತರೇ,

 ಜಿ-ಮೈಲ್‌ನಲ್ಲಿ ಹೊಸ ರೀತಿಯಲ್ಲಿ ಮಿಂಚೆ ರಚಿಸಿ.. ಈಗ. ಏನಿದು ವಿಶೇಷ? ಹೌದು.. ಎಷ್ಟೋ ಬಾರಿ ನೀವು ಮಿಂಚೆ ರಚಿಸುವಾಗ, ನಿಮಗನ್ನಿಸಿರಬಹುದು. ಛೇ..! ಕೆಲವು ವಿಚಾರ ಹಿಂದಿನ ಮೈಲ್‌ಗಳಲ್ಲಿ ನೋಡಿ ಕಾಪಿ(ಪ್ರತಿ) ಮಾಡಿಕೊಳ್ಳೋದಿತ್ತು. ಕಳುಹಿಸಿದ ಮೈಲ್‌ (Sent Mail)ನಲ್ಲಿ ಇರೋ ವಿಚಾರ ಒಂದಷ್ಟು ಪ್ರತಿ ಮಾಡಿಕೊಳ್ಳೋದಿತ್ತು. ಅದ್ಯಾವುದೋ ಮೈಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರ ಇತ್ತು. ಅದನ್ನೊಮ್ಮೆ ನೋಡಬೇಕಿತ್ತು. ಅದ್ಯಾವುದೋ ಮೇಲ್‌ ಮರೆತು ಹೋಯ್ತು.. ಅದನ್ನ ಹುಡುಕಿ, ಅದರಲ್ಲಿನ ವಿಚಾರ ಓದಿ ಅದಕ್ಕೆ ಪೂರಕ ಉತ್ತರ ಕೊಡೋದಿತ್ತು ಅಥವಾ ಅದರಲ್ಲಿನ ವಿಚಾರ ಸ್ವಲ್ಪ ಇಲ್ಲೂ ಪ್ರತಿ ಮಾಡಿ ಹಾಕೋ ಅವಶ್ಯಕತೆ ಇತ್ತು ಅಂತ ನಿಮಗನ್ನಿಸಿರಬಹುದು. ಆಗ ನಿಮಗಾಗುತ್ತಿದ್ದ ಸಮಸ್ಯೆ.. ನಿಮ್ಮ ಇನ್‌ಬಾಕ್ಸ್ ಅಥವಾ ಕಳುಹಿಸಿದ ಮಿಂಚೆಯ ಫೋಲ್ಡರ್‌ ಯಾವುದಾದರು ಒಂದು ತೆರೆಯಬಹುದು ಅಥವಾ ನಿಮ್ಮ ಮಿಂಚೆ ಬರೆಯುವಿಕೆಯ ಒಂದು ಕೆಲಸ ಒಮ್ಮೆ ಮಾತ್ರ ಮಾಡಬಹುದು. ಎಲ್ಲವೂ ಒಟ್ಟಿಗೆ ಮಾಡಬೇಕೆಂದಲ್ಲಿ ಬ್ರೌಸರ್‌ನ ಬೇರೆ ಬೇರೆ ಕಿಟಕಿಗಳನ್ನು ತೆರೆದು ಕೆಲಸ ಮಾಡಬೇಕಿತ್ತು.  ಈಗ ಗೂಗಲ್ ನಿಮಗೆ ಇದಕ್ಕೆ ಪರಿಹಾರ ಕೊಟ್ಟಿದೆ.

ನೋಡಿ..! ಈ ಕೆಳಗಿನ ವಿಚಾರಗಳನ್ನು.