ಗುರು – ಶಿಷ್ಯ
– ಗೀತಾ ಹೆಗ್ಡೆ
ಅರಿವು ಅಂದರೆ ತಿಳುವಳಿಕೆ. ಇದು ನಮಗೆ ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಇದಕ್ಕೆ ಒಬ್ಬ ಗುರುವಿನ ಅಗತ್ಯ ಇದೆ. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿ ಮೊದಲ ಗುರು. ಎಳೆ ಕಂದಮ್ಮನಿಗೆ ಹಾಲುಣಿಸುವ ತರಬೇತಿಯಿಂದ ಹಿಡಿದು ತನ್ನ ಜೀವಿತಾವಧಿಯ ಕೊನೆಯವರೆಗೂ ಒಂದಲ್ಲಾ ಒಂದು ಗಳಿಗೆಗಳ ಸಂದರ್ಭದಲ್ಲಿ ಜೊತೆಯಾಗಿ ನಿಂತು ಸಲಹುವ ಗುರು ರಕ್ಷೆ ಅವಳು. ಹಾಗಾದರೆ ತಂದೆ? ಮುದ್ದು ಮಾಡಿ ಎತ್ತಿ ಹಾರಿಸಿ ಕಂದನ ಲಾಲನೆ ಪಾಲನೆ ಕಡೆ ಕಣ್ಣಿಟ್ಟು ಬೇಕಾದ್ದೆಲ್ಲ ತನ್ನ ಶಕ್ತ್ಯಾನುಸಾರ ತಂದು ಕೊಡುವ; ತರಲಾರದ್ದಕ್ಕೆ ಸಂಕಟ ಪಡುತ್ತ ಹಪಹಪಿಸಿ ಮರೆಯಲ್ಲಿ ಕಣ್ಣೊರೆಸಿಕೊಂಡು ಜವಾಬ್ದಾರಿ ಹೊತ್ತು ಮಕ್ಕಳಿಗೆ ಶ್ರೀ ರಕ್ಷೆ ನೀಡಿ, ಬೆಳೆಯುವ ಮಕ್ಕಳ ಏಳಿಗೆಯ ನೋಡಿ ಬೀಗುವ ಕಣ್ಣಿಗೆ ಕಾಣದ ಗುರು ಎಂದರೂ ತಪ್ಪಾಗಲಾರದು. ಏಕೆಂದರೆ ಸಂಸಾರದಲ್ಲಿ ಮಕ್ಕಳಿಂದ ಏನೆ ತಪ್ಪು ಒಪ್ಪಿದ್ದರೂ ಸಾಮಾನ್ಯವಾಗಿ ತಾಯಿ ಕಲಿಸಿದ ಬುದ್ಧಿ ಹೇಳೋದೆ ಜಾಸ್ತಿ. ತಂದೆ, ತಾಯಿ ಕಲಿಸಿದ ಬುದ್ಧಿ ಹೇಳೋದು ಅಪರೂಪ. ತಂದೆ ತಾಯಿಯಾದವರೂ ಹೇಳುವುದೂ ಹಾಗೆ, ಒಳ್ಳೆದಾದರೆ ನಾ ಕಲಿಸಿದ್ದು ಅದೆ ತಪ್ಪಾದರೆ ಅವರಮ್ಮ ಕಲಿಸಿದ ಬುದ್ಧಿ. ಎಷ್ಟು ವಿಪರ್ಯಾಸ! ಮತ್ತಷ್ಟು ಓದು 
ಅಂತ್ಯದ ಬೆನ್ನೇರಿ…!
-ವಿನಾಯಕ ಪೈ ಬಿ
ಒಂದು ಸುಸಂಸ್ಕೃತ ಸಮಾಜ ಎಂದರೆ ವ್ಯಕ್ತಿಗತ ಚಿಂತನೆಗಳ, ಸಾಮಾಜಿಕ ಸ್ಥಿತ್ಯಂತರಗಳ, ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ನಂಬಿಕೆಗಳ ಮತ್ತು ಅದರ ಕಾಲಾಂತರ್ಗತ ಪರಿಷ್ಕರಣೆಗಳ ಸಮ್ಮಿಲನವೇ ಆಗಿದೆ. ಈ ಸಮ್ಮಿಲನದಲ್ಲಿ ಯಾವುದಾದರು ಒಂದನ್ನು ನಿರ್ಲಕ್ಷಿಸಿದರು, ಸುಜ್ಞಾನದ ಕೊರತೆ ಸಮಾಜದ ಬೆಳವಣಿಗೆಯ ಮೇಲೆ ತೀವ್ರವಾಗಿ ಪ್ರತಿಫಲಿಸುತ್ತದೆ. ಮಾನವೀಯ ಮೌಲ್ಯಗಳು, ಸದ್ವಿಚಾರಗಳ ಸಾಂಗತ್ಯವೇ ನಮ್ಮ ಸಮೂಹದ ಅಂತಃಸತ್ವ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳೇ ಸಮಾಜಕ್ಕೆ ಭದ್ರಬುನಾಧಿಯನ್ನು ಒದಗಿಸಿ, ಸಾಮಾಜಿಕ ಚಿಂತನೆಗಳು ಸದ್ಭಾವನೆಯ ಮೆಟ್ಟಿಲುಗಳಾಗಿ, ಮನುಕುಲವನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ . ಮತ್ತಷ್ಟು ಓದು 
ಇಂಡೋನೇಷ್ಯದ ನೋಟಿನಲ್ಲೂ ಈತನದೊಂದು ಫೋಟೋ ಇದೆ!
– ರೋಹಿತ್ ಚಕ್ರತೀರ್ಥ
ಗಿರೀಶ ಕಾರ್ನಾಡರ ಹಯವದನ ನಾಟಕ ಗೊತ್ತಲ್ಲ? ಪದ್ಮಿನಿ ಎಂಬ ಸುರಸುಂದರ ಹೆಣ್ಣನ್ನು ಮೋಹಿಸಿ ತಲೆ ಕಡಿದುಕೊಳ್ಳುವ ಮತ್ತು ಇದ್ದ (ಮತ್ತು ಬಿದ್ದ) ತಲೆಯ ಬದಲಾಗಿನ್ನೊಂದು ತಲೆ ಅಂಟಿಸಿಕೊಂಡು ಪೇಚಾಡುವ ಇಬ್ಬರು ಜೀವದ ಗೆಳೆಯರ ಕತೆ ಅದು. ಆ ನಾಟಕದ ಪ್ರಾರಂಭದಲ್ಲಿ ಭಾಗವತ ಹೇಳುತ್ತಾನೆ: “ಸರ್ವ ವಿಘ್ನಗಳನ್ನೂ ನಿರ್ಮೂಲನಗೊಳಿಸಿ ಸಕಲ ಈಪ್ಸಿತಗಳಲ್ಲಿ ಸಿದ್ಧಿಯನ್ನು ನೀಡುವ ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸನ್ನು ನೀಡಲಿ. ಆತನ ಮಹಾತ್ಮ್ಯವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೇ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನಹರ್ತನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೇ ಒಗ್ಗಲಾರದಂಥಾದ್ದು ಎಂಬುದನ್ನೇ ಈ ಮಂಗಳಮೂರ್ತಿಯ ರೂಪ ಸಂಕೇತಿಸುತ್ತಿರಬಹುದು” ಮತ್ತಷ್ಟು ಓದು 
ಉಪನಿಷತ್ ವಾಙ್ಮಯ 2: ಆಮಿಷ ಒಡ್ಡದೆ ಉತ್ತರಿಸು; ಅರಿವಿನ ಮಟ್ಟವನೆತ್ತರಿಸು!
– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ವಾಙ್ಮಯ :- ಉಪನಿಷತ್ ವಾಙ್ಮಯ 1
ನಚಿಕೇತ ಯಮಸದನಕ್ಕೆ ಹೋದ. ಅಲ್ಲಿ ಮೂರು ದಿನ ಕಾದ. ಭೂಮಿಯಿಂದ ಸೂಕ್ಷ್ಮದೇಹಿಯಾಗಿ ಮೃತ್ಯುವಿನ ಲೋಕಕ್ಕೆ ಹೋಗುತ್ತಿರುವಾಗ ಅವನು ಒಬ್ಬನೇ ಇದ್ದದ್ದಲ್ಲ. ಅವನ ಮುಂದೆ ಸಾವಿರಾರು ಜನ, ಹಿಂದೆ ಸಾವಿರಾರು ಜನ ಸಾಗರದ ರೀತಿಯಲ್ಲಿ ಹೋಗುತ್ತಿದ್ದರಂತೆ. ಅವರೆಲ್ಲರೂ ಯಾವಾವುದೋ ಕಾರಣಕ್ಕೆ ತೀರಿಕೊಂಡರು. ಬದುಕಿನ ಯಾತ್ರೆ ಮುಗಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡವರು. ಭೂಮಿಯ ಮೇಲಿನ ವ್ಯವಹಾರಗಳನ್ನು ಮುಗಿಸಿ ಪರಲೋಕಕ್ಕೆ ಹೊರಟವರು. ಇಲ್ಲಿ ನಾವು ಉಪನಿಷತ್‍ಕಾರನ ಲೋಕಪ್ರಜ್ಞೆಯನ್ನು ಗಮನಿಸಬೇಕು. ಕತೆ ಕೇವಲ ನಚಿಕೇತ ಮತ್ತು ಯಮನ ಮಾತುಕತೆಯ ಸುತ್ತ ಸುತ್ತುವುದಾದರೂ ಉಪನಿಷತ್‍ಕಾರ ಇವೆಲ್ಲ ಸಣ್ಣಸಣ್ಣ ವಿವರಗಳನ್ನು ಕೂಡ ನಮ್ಮ ಕಣ್ಮುಂದೆ ತಂದು ಬೆಚ್ಚಿಬೀಳಿಸುತ್ತಾನೆ. ಭೂಮಿಯಲ್ಲಿ ಪ್ರತಿಕ್ಷಣದಲ್ಲೂ ನೂರಾರು ಜೀವಗಳು ಕೈಕಾಲು-ಪಪ್ಪುಸಗಳ ಕಾರ್ಯ ನಿಲ್ಲಿಸಿ ನಿಶ್ಚೇಷ್ಟಿತವಾಗುತ್ತಲೇ ಇರುತ್ತವೆ; ಪ್ರತಿ ನಿಮಿಷದಲ್ಲೂ ಅಸಂಖ್ಯಾತ ಜನರು ಮೃತ್ಯುವಿಗೆ ಪಕ್ಕಾಗುತ್ತಲೇ ಇರುತ್ತಾರೆ ಎಂಬ ಎಚ್ಚರಿಕೆಯನ್ನು ಓದುಗನಿಗೆ ಅದುಹೇಗೆ ಉಪನಿಷತ್ ದಾಟಿಸುತ್ತದೆ ನೋಡಿ! ಇಂಥ ನೂರಾರು ಜೀವರ ನಡುವಿನಲ್ಲಿ ನಚಿಕೇತನೂ ಇದ್ದ. ಅವನಿಗೆ ಭೂಲೋಕವನ್ನು ಬಿಟ್ಟು ಬಂದೆನಲ್ಲಾ ಎಂಬ ಚಿಂತೆಯೂ ಇರಲಿಲ್ಲ; ದೇವರ ಲೋಕ ಸೇರುವ ದಾರಿಯಲ್ಲಿದ್ದೇನೆಂಬ ಸಂತೋಷವೂ ಇರಲಿಲ್ಲ. ದುಃಖ ಸಂತೋಷಗಳಿಲ್ಲದ ಒಂದು ವಿಚಿತ್ರ ಸ್ಥಿತಿಯಲ್ಲಿ ಅವನು ಯಮಪುರಿಗೆ ಹೋದ. ಮತ್ತಷ್ಟು ಓದು 
ನಂಬಿಕೆ, ನಿಷೇಧ, ಆಚರಣೆಗಳಲ್ಲಿ ಆಹಾರ
ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಕುರಿತು ಬಹಳಷ್ಟು ಚರ್ಚೆ ರಾಷ್ಟ್ರಮಟ್ಟದಲ್ಲಿ ಆಗಾಗ ನಡೆಯುತ್ತದೆ. ದನ ಕದಿಯುವ ಹಾಗೂ ಅದನ್ನು ರಕ್ಷಿಸುವ ಗುಂಪುಗಳ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ “ಸೋ ಕಾಲ್ಡ್ ಗೋರಕ್ಷಕರ” ವಿರುದ್ಧ ಗುಡುಗುತ್ತಿದ್ದಂತೆಯೇ ಮತ್ತೆ ಇಂಥ ಚರ್ಚೆ ಶುರುವಾಗಿದೆ. ಈ ಚರ್ಚೆಗಳಲ್ಲಿ ಮೇಲ್ನೋಟದಲ್ಲಿ ಬಹುಸಂಖ್ಯಾತರ ಆಹಾರ ಕ್ರಮವನ್ನು ಅಲ್ಪ ಸಂಖ್ಯಾತರ ಮೇಲೆ ಹೇರುವ ಹುನ್ನಾರ; ದಲಿತರು ಹಾಗೂ ಅಲ್ಪಸಂಖ್ಯಾತರ ಆಹಾರ ಪದ್ಧತಿಯನ್ನು ಪುರೋಹಿತಶಾಹಿ ವ್ಯವಸ್ಥೆ ಆಳುತ್ತಿರುವ ಸಂಕೇತ ಎಂದೂ, ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಸಾವಿರಾರು ಜಾತಿ-ಸಮುದಾಯಗಳಿಗೆ ಆಹಾರ ಸಂಬಂಧಿ ವಿಧಿ-ನಿಷೇಧಗಳೇ ಇಲ್ಲ ಎಂಬಂತೆಯೂ ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ, ಆಹಾರ ಸೇವಿಸುವಾಗಲೂ ಬ್ರಾಹ್ಮಣರು ಮಾತ್ರ ಅನ್ಯರನ್ನು ಸಹಪಂಕ್ತಿ ಭೋಜನದಲ್ಲಿ ಕೂರಿಸಿಕೊಳ್ಳುವುದಿಲ್ಲ, ಉಳಿದವರಲ್ಲಿ ಇಂಥ ಸಂಪ್ರದಾಯವಿಲ್ಲ ಎಂಬಂತೆಯೂ ಬಿಂಬಿಸುತ್ತ, ಇವೆಲ್ಲ ಜಾತಿಪದ್ಧತಿಯನ್ನು ಬಲಗೊಳಿಸುವ ಪುರೋಹಿತಶಾಹಿಯ ಹುನ್ನಾರ ಎಂದೂ ಸರಳವಾಗಿ ವಾದಿಸಲಾಗುತ್ತದೆ. ಆದರೆ ಇವೆಲ್ಲ ಹಾಗೆ ವಾದಿಸುವವರ ವಿವಿಧ ಸಮುದಾಯಗಳ ಆಹಾರ ಸಂಬಂಧಿ ಅಜ್ಞಾನವನ್ನು ತೋರಿಸುತ್ತದೆಯಲ್ಲದೇ ಇನ್ನೇನನ್ನೂ ಅಲ್ಲ. ಇಂಥ ತಿಳಿವಳಿಕೆಯನ್ನು ತಲೆಕೆಳಗಾಗಿಸುವ ಕ್ಷೇತ್ರಾಧಾರಿತ ಅಧ್ಯಯನದ ಫಲಿತ ಹಾಗೂ ವಾಸ್ತವ ಇಲ್ಲಿದೆ. ಇದು ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತ ಯೋಜನೆಯೊಂದನ್ನು ಆಧರಿಸಿದೆ. ಮತ್ತಷ್ಟು ಓದು 
ಉಪನಿಷತ್ ವಾಙ್ಮಯ 1: ಮೃತ್ಯುಮುಖದಲ್ಲಿ ಜ್ಞಾನದಾಹಿ; ಕೇಳಿದ ಗುರುವನು “ದೇಹಿ! ದೇಹಿ!”
– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ಎಂಬುದು ವೇದಕಾಲದ ಗದ್ಯಕಾವ್ಯ. ವಿದ್ಯೆ, ಜ್ಞಾನ, ಚಿಂತನೆಗಳು ಮುಪ್ಪುರಿಗೊಂಡ ಮನಸ್ಸುಗಳು ರಚಿಸಿದ ಅನನ್ಯ ಜೀವನಾಮೃತ ಸಾರ. ವೇದಗಳ ಒಟ್ಟರ್ಥವನ್ನು ಇವು ಸಂಗ್ರಹವಾಗಿ ತಿಳಿಸುತ್ತವೆ ಎನ್ನುವ ಕಾರಣಕ್ಕೆ ಇವನ್ನು ವೇದಾಂತ ಎಂದೂ ಕರೆಯುತ್ತಾರೆ. ಉಪನಿಷತ್ತುಗಳ ಸಾಲಿನಲ್ಲಿ ಅತಿವಿಶಿಷ್ಟವಾದದ್ದು ಕಠ. ಕೃಷ್ಣಯಜುರ್ವೇದದ ಕಠ ಪರಂಪರೆಯಲ್ಲಿ ಬರುವ ಈ ಉಪನಿಷತ್ತು ಗುರು-ಶಿಷ್ಯರ ಸಂವಾದದ ಒಂದು ಸಂಕ್ಷಿಪ್ತ ಚಿತ್ರಣ. ಗುರುಸ್ಥಾನದಲ್ಲಿ ಕೂತವನು ಸಾಕ್ಷಾತ್ ಯಮಧರ್ಮರಾಯ! ಮತ್ತು ಅವನೆದುರು ಶಿಷ್ಯನಾಗಿ ತಲೆಬಾಗಿ ವಿನೀತನಾಗಿ ಪವಡಿಸಿದವನು ಏಳೋ ಎಂಟೋ ವಯಸ್ಸಿನ ಮುದ್ದುಬಾಲಕ ನಚಿಕೇತ. ಪ್ರಪಂಚದ ಎರಡು ಧ್ರುವಗಳಂತಿರುವ ಈ ಇಬ್ಬರು ಜೊತೆಯಾದದ್ದು ಹೇಗೆ ಎಂಬುದೇ ಒಂದು ವಿಚಿತ್ರ ಕತೆ. ಕಠೋಪನಿಷತ್ತನ್ನು ಪ್ರವೇಶಿಸುವ ಮೊದಲು ನಮಗೆ ಆ ಹಿನ್ನೆಲೆ ತಿಳಿದಿದ್ದರೆ ಒಳ್ಳೆಯದು. ಮತ್ತಷ್ಟು ಓದು 
ಹಸುವಿನ ಕೆಚ್ಚಲು ಹಿಂಡಿ ತೋಳನಿಗೆ ಹಾಲುಣಿಸುವವರು
– ರೋಹಿತ್ ಚಕ್ರತೀರ್ಥ
ದಡ್ಡ ವೈರಿಯನ್ನು ಗೆಲ್ಲುವುದು ಸುಲಭ. ಆದರೆ ಅತಿ ಬುದ್ಧಿವಂತ ಶತ್ರುವಿನದ್ದೇ ಸಮಸ್ಯೆ. ಕ್ರಿಸ್ಟೋಫರ್ ನೊಲನ್‍ನ ಡಾರ್ಕ್ ನೈಟ್ ಸಿನೆಮಾ ಸರಣಿಯನ್ನು ನೋಡಿದವರಿಗೆ ಜೋಕರ್‍ನ ಪರಿಚಯ ಚೆನ್ನಾಗಿಯೇ ಇರುತ್ತದೆ. ಈತ ಹೊಡೆ ಬಡಿ ಕೊಲ್ಲು ಎನ್ನುವಂಥ ನೇರಾನೇರ ವಿಲನ್ ಅಲ್ಲ. ನಾಯಕನ ಜೊತೆಗೇ ಇದ್ದು, ಆತನ ತಂತ್ರಗಳನ್ನೆಲ್ಲ ಕರಗತ ಮಾಡಿಕೊಳ್ಳಬಲ್ಲ; ಸಂದರ್ಭ ಬಂದರೆ ನಾಯಕನಿಗಿಂತ ಚೆನ್ನಾಗಿ ಅವನ್ನು ಪ್ರಯೋಗಿಸಬಲ್ಲ ಚತುರನೀತ. ಇಂಥವರನ್ನು ಸಂಭಾಳಿಸುವುದು ಕಷ್ಟದ, ನಾಜೂಕಿನ, ಬುದ್ಧಿವಂತಿಕೆ ಮತ್ತು ಸಂಯಮ ಬೇಡುವ ಕೆಲಸ. ಸಿನೆಮಾದಲ್ಲಿ ಈತನ ಹಾವಭಾವ, ವೇಷಭೂಷಣಗಳನ್ನು ನೋಡಿಯಾದರೂ ವಿಲನ್ ಎನ್ನಬಹುದೇನೋ; ಆದರೆ ನಿಜಜೀವನದಲ್ಲಿ ಇವರು ನಮ್ಮ ನಿಮ್ಮಂತೆಯೇ ಇರುತ್ತಾರೆ. ನಮ್ಮ ಭಾಷೆಯನ್ನೇ, ನಮ್ಮ ಧಾಟಿಯಲ್ಲೇ ಮಾತಾಡುತ್ತಾರೆ. ನಮಗೇನೋ ಬಹಳ ದೊಡ್ಡ ಉಪಕಾರ ಮಾಡಲಿಕ್ಕೆಂಬಂತೆ ಹಿಂದೆ ಮುಂದೆ ಸುಳಿದಾಡಿಕೊಂಡಿರುತ್ತಾರೆ. “ನೀನೂ? ಬ್ರೂಟಸ್!” ಎಂದು ನಾವು ಕಂಗಾಲಾಗಿ ನೆಲಕ್ಕುರುಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಮತ್ತಷ್ಟು ಓದು 
ಅರಿವೇ ಗುರು
– ಗೀತಾ ಹೆಗ್ಡೆ
ಗುರು ಬ್ರಹ್ಮ ಗುರು ವಿಷ್ಣುಃ ಗುರು ದೇವೊ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುಭ್ಯೋನಮಃ
ಕೆಲವೊಮ್ಮೆ ಅನಿರೀಕ್ಷಿತವಾಗಿ ಮನಸ್ಸನ್ನು ಕಲಕುವ ಬೇಸರದ ಸಂಗತಿಗಳು ಎದುರಾದಾಗ ಯಾವ ರೀತಿ ಸ್ವೀಕರಿಸಬೇಕು ಎನ್ನುವ ಗೊಂದಲ ಕಾಡುತ್ತದೆ. ತಪ್ಪು ಎಲ್ಲಿ ನಡೆದಿದೆ ಅನ್ನುವ ಹುಡುಕಾಟದಲ್ಲಿ ಅರಿವಾಗದೆ ಕಣ್ಣು ಮಂಜಾಗುವುದು ಸ್ವಾಭಾವಿಕ. ಇದುವರೆಗೆ ಸ್ನೇಹಿತರಂತೆ, ಹಿತೈಷಿಗಳಂತೆ ಜೊತೆಯಾಗಿದ್ದವರ ನಡೆ ಒಗಟಾಗಿ ಕಾಣುತ್ತದೆ. ನಾನು ನನ್ನವರು ಅನ್ನುವ ಮಮಕಾರ ಹೃದಯದಲ್ಲಿ ಮನೆ ಮಾಡಿ ಅನೇಕ ಸಂತಸದ ಕ್ಷಣಗಳು, ಮಾತುಗಳು ಮನಃಪಟದಲ್ಲಿ ಸರಿದಾಡಿ ದುಃಖಿಸಲು ಎಡೆಮಾಡಿಕೊಡುತ್ತದೆ. “ಹೊಡೆದವನಿಗೆ ನೋವು ಗೊತ್ತಾಗುವುದೇ ಇಲ್ಲ. ಆದರೆ ಹೊಡೆಸಿಕೊಂಡವನಿಗೆ ಮೌನದ ಪೆಟ್ಟು ಮನಸ್ಸನ್ನು ಘಾಸಿಗೊಳಿಸುತ್ತದೆ.” ಮತ್ತಷ್ಟು ಓದು 
ಒಳಗಣ್ಣು – 1 ( ಭಗವದ್ಗೀತೆಯನ್ನು ಯಾವ ಪ್ರಾಯದಲ್ಲಿ ಓದಬೇಕು? )
– ಸ್ವಾಮಿ ಶಾಂತಸ್ವರೂಪಾನಂದ
ನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಒಮ್ಮೆ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ಒಂದು ಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಮತ್ತು ಪ್ರವಚನ ಏರ್ಪಾಟಾಗಿತ್ತು. ಪೂಜೆಯ ಹೊತ್ತಿಗೆ ಊರಿನ ಹಲವು ತರುಣರು ಹಾಜರಿದ್ದರು. ಆದರೆ ಪೂಜೆಯ ಬಳಿಕ ಗೀತಾಪ್ರವಚನ ಎಂದಾದಾಗ ಅಲ್ಲಿದ್ದ ತರುಣರೆಲ್ಲ ಹೊರಟುಹೋಗಿ ನಡುವಯಸ್ಸು ದಾಟಿದ ಮಂದಿಯಷ್ಟೇ ಉಳಿದರು. ಹಾಗೇಕಾಯಿತು ಎಂದು ಅಲ್ಲಿದ್ದವರಲ್ಲಿ ಕೇಳಿದಾಗ “ಸತ್ಸಂಗ, ಪ್ರವಚನ ಇವೆಲ್ಲ ಮಕ್ಕಳಿಗೇಕೆ ಸ್ವಾಮಿ! ಅದನ್ನು ಕೇಳುವುದೇನಿದ್ದರೂ ಜೀವನದ ಎಲ್ಲ ವ್ಯಾಪಾರ ಮುಗಿಸಿ ಪರಲೋಕಕ್ಕೆ ಹೊರಡಲನುವಾದ ಮುದುಕರ ಕೆಲಸವಲ್ಲವೆ?” ಎಂದು ಹೇಳಿದರು. ಇನ್ನೊಂದು ಸಂದರ್ಭದಲ್ಲಿ, ಮುಂಬಯಿಯ ಮನೆಯೊಂದಕ್ಕೆ ಆಮಂತ್ರಿತನಾಗಿ ಹೋಗಿದ್ದೆ. ಮನೆ ಯಜಮಾನ ನನಗೆ ಅವರ ದೇವರ ಮನೆ ತೋರಿಸುತ್ತ, ಅಲ್ಲೇ ಪಕ್ಕದಲ್ಲಿ ಪೇರಿಸಿದ್ದ ಉದ್ಗ್ರಂಥಗಳನ್ನು ತೋರಿಸಿ, ಅವಕ್ಕೆ ಪ್ರತಿದಿನ ಪೂಜೆ ಮಾಡುತ್ತೇನೆ ಎಂದರು. “ಹೌದೆ? ಏನು ಪುಸ್ತಕಗಳವು?” ಎಂದು ಕೇಳಿದೆ. ನೋಡಿದರೆ ಬಹಳ ಹಳೆಯ ಕಾಲದ ಪುಸ್ತಕಗಳಂತೆ ಕಂಡವು. ಹಾಳೆ ವೃದ್ಧಾಪ್ಯದ ಕಾರಣದಿಂದ ಬೂದುಬಣ್ಣಕ್ಕೆ ತಿರುಗಿತ್ತು. ರಟ್ಟಿಗೂ ಮನುಷ್ಯನೊಬ್ಬನ ಆಯುಸ್ಸಿನಷ್ಟೇ ಪ್ರಾಯವಾಗಿರಬೇಕು! “ಇವು ರಾಮಾಯಣ, ಮಹಾಭಾರತ ಮತ್ತು ಭಾಗವತದ ಗ್ರಂಥಗಳು. ನನ್ನ ಅಜ್ಜ ಅವನ್ನು ಬಳಸುತ್ತಿದ್ದರಂತೆ. ನಂತರ ತಂದೆಯ ಕೈಗೆ ಬಂದವು. ಅಲ್ಲಿಂದ ನನಗೆ ಸಿಕ್ಕವು. ಮೂರು ತಲೆಮಾರಿನಿಂದ ಅವು ಹೀಗೆ ದೇವರ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆ” ಎಂದರಾತ. “ಓಹ್! ನೀವು ಇವನ್ನು ಅಭ್ಯಾಸ ಮಾಡಿದ್ದೀರೆಂದು ತುಂಬ ಖುಷಿಯಾಯಿತು” ಎಂದು ಹರ್ಷ ವ್ಯಕ್ತಪಡಿಸಿದೆ. “ಇಲ್ಲ ಇಲ್ಲ! ಇವೆಲ್ಲ ಸಂಸ್ಕೃತದಲ್ಲಿರುವ ಪುಸ್ತಕಗಳು! ನನಗೆ ಇಂಗ್ಲೀಷ್ ಮತ್ತು ಕೊಂಚ ಹಿಂದಿ ಬಿಟ್ಟರೆ ಮಿಕ್ಕ ಭಾಷೆಗಳ ಅಭ್ಯಾಸವಿಲ್ಲ. ಸಂಸ್ಕೃತವಂತೂ ನನ್ನ ಅಜ್ಜನ ಕಾಲಕ್ಕೇ ನಿಂತುಹೋಯಿತು. ಅವರು ಆಗಿನ ಕಾಲದ ಮೇಧಾವಿಗಳೊಂದಿಗೆ ಸಂಸ್ಕೃತದಲ್ಲಿ ಚರ್ಚೆ ಮಾಡುತ್ತಿದ್ದರಂತೆ. ತಂದೆಗೆ ಅಲ್ಪಸ್ವಲ್ಪ ಬರುತ್ತಿದ್ದಿರಬೇಕು. ನನಗಂತೂ ಸಂಸ್ಕೃತವನ್ನು ಸುಡುತಿನ್ನಲಿಕ್ಕೂ ಬರುವುದಿಲ್ಲ! ಇವೆಲ್ಲ ಹಳೆ ತಲೆಮಾರಿನ ವಸ್ತುಗಳೆಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ ಅಷ್ಟೆ! ನಿವೃತ್ತನಾದ ಮೇಲೆ ನಾನು ಮಹಾಭಾರತವೋ ರಾಮಾಯಣವೋ ಯಾವುದಾದರೊಂದು ಕೃತಿಯ ಇಂಗ್ಲೀಷ್ ಅನುವಾದವನ್ನು ಕೊಳ್ಳಬೇಕೆಂದಿದ್ದೇನೆ” ಎಂದರು ಆ ಪುಣ್ಯಾತ್ಮ. ನನಗೆ ಭ್ರಮನಿರಸನವಾದರೂ ಮತ್ತಷ್ಟು ಕುತೂಹಲ ಉಳಿದಿತ್ತು. “ಅದೇಕೆ ಯಾವುದಾದರೊಂದು ಕೃತಿ ಎನ್ನುತ್ತೀರಿ? ಎರಡೂ ಕೊಳ್ಳಬಹುದಲ್ಲ!” ಎಂದೆ ನಾನು. ಅದಕ್ಕೆ ಆ ಮನುಷ್ಯ ನಗುತ್ತ “ತಮಾಷೆ ಮಾಡ್ತಿದ್ದೀರಾ ಸ್ವಾಮೀಜಿ! ನಿವೃತ್ತನಾದ ಮೇಲೆ ನಮಗೆ ಎಷ್ಟು ಮಹಾ ಆಯುಷ್ಯ ಉಳಿದಿರುತ್ತೆ! ಹೆಚ್ಚೆಂದರೆ ಹತ್ತು ವರ್ಷ! ಅಷ್ಟರಲ್ಲಿ ಒಂದು ಗ್ರಂಥ ಓದಿ ಅರ್ಥೈಸಿಕೊಳ್ಳುವುದೇ ಕಷ್ಟದ ಮಾತು. ಅಂಥಾದ್ದರಲ್ಲಿ ಎರಡೆರಡು ಹೇಗೆ ಸಾಧ್ಯ? ಎರಡು ಪುಸ್ತಕ ಕೊಂಡು ಅವುಗಳಲ್ಲೊಂದನ್ನು ಓದಲು ಆಗದೇ ಹೋದರೆ ಆ ನಿರಾಸೆ ಮನಸ್ಸಲ್ಲಿ ಉಳಿದುಬಿಡುತ್ತದಲ್ಲವೆ?” ಎಂದು ಉತ್ತರಿಸಿದರು. ಮತ್ತಷ್ಟು ಓದು 
ನುಡಿ ಮರಣ ಭಾಷಾವಸಾನ
– ಸುದರ್ಶನ ಗುರುರಾಜರಾವ್
ಮುನ್ನುಡಿ:
ಕೆಳಗಿನ ಕವಿತಾ ಸಂಭಾಷಣೆಯ ಮೂಲಕ – ಸಮಸ್ಯೆಯ ಪರಿಚಯ ಗಮನಿಸಿ
ಕನ್ನಡಿಗ
ಓ ತಾಯಿ ನೀನೇಕೆ ಬೇಡುತಿಹೆ ಭಿಕ್ಷೆ
ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ
ಬಾಡಿ ನಲುಗಿಹುದಲ್ಲ ಈ ನಿನ್ನ ವದನ
ಏನಾಯ್ತು ಆ ನಿನ್ನ ಬಹು ಭವ್ಯ ಸದನ
ಭುವನೇಶ್ವರಿ ದೇವಿ (ಕನ್ನಡ ಮಾತೆ:)
ಮಗುವೆ ಮನೆಯಿದ್ದು ಪರದೇಶಿ ನಾನು
ದಿನವೂ ನಾ ಅರೆಹೊಟ್ಟೆ ನೀ ತಿಳಿಯೆಯೇನು
ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು
ಬೇಯಿಸುತ ಬಡಿಸಿಹರು ಕಲಬೆರೆಕೆಯನ್ನು ಮತ್ತಷ್ಟು ಓದು 





