ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 7, 2016

3

ಉಪನಿಷತ್ ವಾಙ್ಮಯ 1: ಮೃತ್ಯುಮುಖದಲ್ಲಿ ಜ್ಞಾನದಾಹಿ; ಕೇಳಿದ ಗುರುವನು “ದೇಹಿ! ದೇಹಿ!”

‍ನಿಲುಮೆ ಮೂಲಕ

– ಸ್ವಾಮಿ ಶಾಂತಸ್ವರೂಪಾನಂದ

yama_nachiketaಉಪನಿಷತ್ ಎಂಬುದು ವೇದಕಾಲದ ಗದ್ಯಕಾವ್ಯ. ವಿದ್ಯೆ, ಜ್ಞಾನ, ಚಿಂತನೆಗಳು ಮುಪ್ಪುರಿಗೊಂಡ ಮನಸ್ಸುಗಳು ರಚಿಸಿದ ಅನನ್ಯ ಜೀವನಾಮೃತ ಸಾರ. ವೇದಗಳ ಒಟ್ಟರ್ಥವನ್ನು ಇವು ಸಂಗ್ರಹವಾಗಿ ತಿಳಿಸುತ್ತವೆ ಎನ್ನುವ ಕಾರಣಕ್ಕೆ ಇವನ್ನು ವೇದಾಂತ ಎಂದೂ ಕರೆಯುತ್ತಾರೆ. ಉಪನಿಷತ್ತುಗಳ ಸಾಲಿನಲ್ಲಿ ಅತಿವಿಶಿಷ್ಟವಾದದ್ದು ಕಠ. ಕೃಷ್ಣಯಜುರ್ವೇದದ ಕಠ ಪರಂಪರೆಯಲ್ಲಿ ಬರುವ ಈ ಉಪನಿಷತ್ತು ಗುರು-ಶಿಷ್ಯರ ಸಂವಾದದ ಒಂದು ಸಂಕ್ಷಿಪ್ತ ಚಿತ್ರಣ. ಗುರುಸ್ಥಾನದಲ್ಲಿ ಕೂತವನು ಸಾಕ್ಷಾತ್ ಯಮಧರ್ಮರಾಯ! ಮತ್ತು ಅವನೆದುರು ಶಿಷ್ಯನಾಗಿ ತಲೆಬಾಗಿ ವಿನೀತನಾಗಿ ಪವಡಿಸಿದವನು ಏಳೋ ಎಂಟೋ ವಯಸ್ಸಿನ ಮುದ್ದುಬಾಲಕ ನಚಿಕೇತ. ಪ್ರಪಂಚದ ಎರಡು ಧ್ರುವಗಳಂತಿರುವ ಈ ಇಬ್ಬರು ಜೊತೆಯಾದದ್ದು ಹೇಗೆ ಎಂಬುದೇ ಒಂದು ವಿಚಿತ್ರ ಕತೆ. ಕಠೋಪನಿಷತ್ತನ್ನು ಪ್ರವೇಶಿಸುವ ಮೊದಲು ನಮಗೆ ಆ ಹಿನ್ನೆಲೆ ತಿಳಿದಿದ್ದರೆ ಒಳ್ಳೆಯದು.

ಹಿಂದೊಂದು ಕಾಲದಲ್ಲಿ ಇದ್ದರೊಬ್ಬ ವಾಜಶ್ರವಸ್ ಎಂಬ ಪ್ರಾಜ್ಞ ಋಷಿ. ಅವರ ಮಗಳು ಅರುಣಾ. ಆಕೆಯ ಮಗ ಉದ್ದಾಲಕ. ಉದ್ದಾಲಕರಿಗೆ ಇಬ್ಬರು ಮಕ್ಕಳು: ಶ್ವೇತಕೇತು ಮತ್ತು ನಚಿಕೇತ. ಮೊದಲ ಮಗ ಚೂಟಿ, ಬುದ್ಧಿವಂತ. ಕಂಡದ್ದನ್ನೆಲ್ಲ ಪ್ರಶ್ನಿಸುವ ತಾರ್ಕಿಕ. ಶ್ವೇತಕೇತು ಎಂದರೆ ಪರಿಶುದ್ಧವಾದ ಜ್ಞಾನವನ್ನು ಸಂಪಾದಿಸಿದವನು ಎಂದರ್ಥ. ಅಣ್ಣನಿಗೆ ತದ್ವಿರುದ್ಧ ಸ್ವಭಾವದ ಹುಡುಗ ನಚಿಕೇತ. ನ ಕಿಂಚಿತ್ ಚಿಕೇತಃ ಇತಿ ನಚಿಕೇತಃ – ಅಂದರೆ ಏನನ್ನೂ ಮಾಡದವನು ಎಂದರ್ಥ! ಈತ ಅಂತರ್ಮುಖಿ. ಮಾತು ಕಡಿಮೆ. ಹಿರಿಯರ ಕೂಟ ಸೇರಿದಲ್ಲಿ ಈತ ಕಾಣಿಸಿಕೊಳ್ಳುವವನೇ ಅಲ್ಲ. ಚಿಪ್ಪಿನೊಳಗಿನ ಹುಳದಂತೆ ತಾನಾಯಿತು ತನ್ನ ಪಾಡಾಯಿತು ಎಂಬಂತಿದ್ದ, ಬಹುತೇಕ ಮೂಕನಂತಿದ್ದ ಬಾಲಕ. ಇಂಥವನು ಏತಕ್ಕೆ ಪ್ರಯೋಜನಕ್ಕೆ ಬಂದಾನು ಎಂದು ಬಗೆದ ಅಪ್ಪ ಉದ್ದಾಲಕ, ಆತನನ್ನು ಗುರುಕುಲಕ್ಕೂ ಕಳಿಸದೆ ಮನೆಯಲ್ಲೇ ಉಳಿಸಿಕೊಂಡರು. ಗೃಹಕೃತ್ಯ ಮಾಡಿಕೊಂಡಿರಲಿ ಎಂದು ಅಸಡ್ಡೆಯಿಂದ ಬೆಳೆಸಿದರು. ಕೋಶದೊಳಗಿದ್ದೇ ಚಿಟ್ಟೆಯಾಗಬಲ್ಲ ಅವನ ಸಾಮರ್ಥ್ಯ ವನ್ನು ಅವರು ಗುರುತಿಸಲಾರದೇ ಹೋದರು. ಗುರುಕುಲದಲ್ಲಿ ಶಾಸ್ತ್ರವಿದ್ಯೆಗಳನ್ನು ಕಲಿತುಬಂದ ಶ್ವೇತಕೇತುವಿಗೆ ಮನೆಗೆ ಬಂದಾಗ ಸಂಶಯವೊಂದು ಕಾಡಿತಂತೆ. ತಾನೀಗ ಪಂಡಿತ; ವಿದ್ಯಾಪಾರಂಗತ. ಕಡಿಮೆ ಕಲಿತ ಅಪ್ಪನ ಕಾಲಿಗೆ ಬೀಳುವುದು ಉಚಿತವೋ ಅಲ್ಲವೋ ಎಂದು! ಅಷ್ಟೆಲ್ಲ ತರ್ಕಮೀಮಾಂಸೆ ಕಲಿಯದವನಾದ್ದರಿಂದ ಪುಣ್ಯವಶಾತ್ ನಚಿಕೇತನಿಗೆ ಬದುಕಿನಲ್ಲಿ ಗಹನ ಪ್ರಶ್ನೆಗಳೇನೂ ಕಾಡಿದ್ದಿಲ್ಲ.

ಉದ್ದಾಲಕರು ಒಂದು ದಿನ ವಿಶ್ವಜಿತ್ ಯಾಗವನ್ನು ಮಾಡುವುದೆಂದು ಸಂಕಲ್ಪಿಸಿದರು. ಇದಕ್ಕೆ ಸರ್ವ ದಕ್ಷಿಣಾ ಎಂದೂ ಹೆಸರಿದೆ. ತನ್ನ ಬಳಿ ಇರುವ ಎಲ್ಲವನ್ನೂ ದಕ್ಷಿಣೆಯ ಜೊತೆ ದಾನ ಮಾಡಿ ಬಟ್ಟಬರಿದಾಗಿಬಿಡುವುದು ಈ ಯಜ್ಞದ ಮುಖ್ಯವಿಧಿ. ಉದ್ದಾಲಕರ ಈ ನಿರ್ಣಯ ಕೇಳಿದಾಗ ಹಿರಿಯರು ಬೆಚ್ಚಿದರು. “ಆರ್ಯ! ಈ ಯಜ್ಞದ ಅರ್ಥ-ಔಚಿತ್ಯಗಳನ್ನು ಬಲ್ಲೆಯಷ್ಟೇ? ನಿನ್ನದೆಂಬ ಎಲ್ಲವನ್ನೂ ದಾನವಾಗಿ ಕೊಟ್ಟು ಸರ್ವಸಂಗ ಪರಿತ್ಯಾಗಿಯೆಂದು ಅನ್ನಿಸಿಕೊಳ್ಳಬೇಕು. ಅದಕ್ಕೆ ತಯಾರಾಗಿದ್ದೀಯೇನು?” ಎಂದು ಕೇಳಿ ಪರೀಕ್ಷಿಸಿದರು. ಹೌದೆಂಬ ಉತ್ತರ ಬಂತು ಉದ್ದಾಲಕರಿಂದ. ಸರಿ, ಯಜ್ಞ ಪ್ರಾರಂಭವಾಯಿತು. ಅಲ್ಲಿಗೆ ದಾನ ಪಡೆಯಲು ಬಂದಿದ್ದ ಬ್ರಾಹ್ಮಣರಿಗೆ ಉದ್ದಾಲಕರು ಗೋವುಗಳನ್ನು ದಾನ ಮಾಡಿದರು. ಮಗ ನಚಿಕೇತ ಅಪ್ಪನ ಚಟುವಟಿಕೆಯನ್ನು ಮೌನವಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ತಂದೆಯವರು ದಾನವನ್ನೇನೋ ಕೊಟ್ಟರು; ಆದರೆ ಎಂಥವನ್ನು? ತಿನ್ನುವ ಹುಲ್ಲೆಲ್ಲವನ್ನೂ ತಿಂದು ಮುಗಿಸಿರುವ, ಕುಡಿಯುವಷ್ಟು ನೀರಷ್ಟನ್ನೂ ಕುಡಿದುಬಿಟ್ಟಿರುವ, ಒಟ್ಟಾರೆ ಹೇಳುವುದಾದರೆ, ಜೀವನದ ಎಲ್ಲ ಭೋಗಭಾಗ್ಯಗಳನ್ನೂ ಅನುಭವಿಸಿ ಮೃತ್ಯುವಿನ ಬಾಯನ್ನು ಹೊಗಲು ತಯಾರಾಗಿನಿಂತ ಹಸುಗಳು ಅವು. ಬಡಕಲು, ಸೊರಕಲು ಮೈ. ನೀರಿಂಗಿ ಬತ್ತಿದ ಬಾವಿಯಂತಾಗಿರುವ ಕಣ್ಣು. ಹಾಲು ಕೊಡುವುದನ್ನು ನಿಲ್ಲಿಸಿ ವರ್ಷಗಳೇ ಕಳೆದಂತಿರುವ ದಡ್ಡುಹಿಡಿದ ಕೆಚ್ಚಲು. ಇಂಥವನ್ನು ಹುಡುಹುಡುಕಿ ತೆಗೆದು ಅಪ್ಪ ದಾನವೆಂಬ ಹೆಸರಲ್ಲಿ ಬ್ರಾಹ್ಮಣರ ಕೊರಳಿಗೆ ಕಟ್ಟುತ್ತಿದ್ದಾನಲ್ಲಾ, ಇದು ಸರಿಯೇ? ಯಜ್ಞದ ಮೂಲಕ ಮನುಷ್ಯ, ತಾನು-ತನ್ನದು ಎಂಬ ಭ್ರಮೆ ಮತ್ತು ಮೋಹಗಳನ್ನು ಕಳಚಿನಿಲ್ಲಬೇಕು. ಅದೇ ಯಜ್ಞದ ಸಾರ್ಥಕ್ಯ. ಅಂತಿರುವಾಗ, ಲೋಭವನ್ನು ಇನ್ನೂ ಮನಸ್ಸಿನಲ್ಲಿ ಬೆಟ್ಟದಷ್ಟು ಹೊತ್ತಿರುವ ವ್ಯಕ್ತಿ ತೋರಿಕೆಗಾಗಿ ಯಜ್ಞ ಮಾಡಿದರೆ ಫಲವೇನು? ಹಾಗೆ ಯೋಚಿಸಿದ ನಚಿಕೇತ ದಾನ ಕೊಡುತ್ತಿದ್ದ ಉದ್ದಾಲಕರ ಬಳಿ ಬಂದು, “ಅಪ್ಪಾ! ನಿಮ್ಮದೆಂಬ ಎಲ್ಲವನ್ನೂ ದಾನದ ಮೂಲಕ ಕಳೆದುಕೊಂಡು ಋಣದ ಭಾರವನ್ನು ಇಳಿಸಿಕೊಳ್ಳುವುದಕ್ಕಾಗಿ ಈ ಯಜ್ಞವನ್ನು ಮಾಡುತ್ತಿದ್ದೀರಿ ಅಲ್ಲವೇ? ನಿಮ್ಮದು ಎಂಬ ಪಟ್ಟಿಯಲ್ಲಿ ನಾನೂ ಸೇರುತ್ತೇನೆಂಬುದನ್ನು ನೀವು ಮರೆಯುವಂತಿಲ್ಲ. ನನ್ನನ್ನು ಯಾರಿಗೆ ದಾನ ಕೊಡುತ್ತೀರಿ?” ಎಂದು ಕೇಳಿದ. ಬ್ರಾಹ್ಮಣರ ಉಡಿ ತುಂಬುತ್ತಿದ್ದ ಉದ್ದಾಲಕರಿಗೆ ಮಗನ ಚೇಷ್ಟೆಯಿಂದ ಕೋಪ ಬಂತು. ಆದರೂ ಅವಡುಗಚ್ಚಿ ಸಹಿಸಿಕೊಂಡರು. ಹುಡುಗ ಎರಡನೇ ಸಲ ಮತ್ತೆ ಬಂದು ಕೇಳಿದ. ಆಗಲೂ ಅಪ್ಪನ ಸಿಟ್ಟಿನ ಮೌನವೇ ಉತ್ತರವಾಯಿತು. ಚಡಪಡಿಕೆ ಹುಟ್ಟಿದ ಮಗ ಮೂರನೇ ಸಲ ಬಂದು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದಾಗ ಅಪ್ಪನಿಗೆ ಕೋಪ ಹದ್ದುಮೀರಿತು. “ನಿನ್ನನ್ನು ಯಾರಿಗೆ ಕೊಡುತ್ತೇನೆಂಬ ಪ್ರಶ್ನೆ ತಾನೇ ನಿನ್ನದು? ಕೇಳು ಹಾಗಾದರೆ, ನಿನ್ನನ್ನು ಮೃತ್ಯುವಿಗೆ ಕೊಟ್ಟುಬಿಡುತ್ತೇನೆ” ಎಂದು ಅಬ್ಬರಿಸಿಬಿಟ್ಟರು.

ತಂದೆಯ ಮಾತಿನಂತೆ ನಚಿಕೇತ ಯಮಧರ್ಮನ ಅರಮನೆಗೆ ಹೋದ – ಎಂದು ಒಂದೇ ವಾಕ್ಯದಲ್ಲಿ ಕತೆಯನ್ನು ಹಲವುಪಟ್ಟು ಎತ್ತರಕ್ಕೆ ಹಾರಿಸಿಬಿಡುತ್ತದೆ ಉಪನಿಷತ್ತು. ಅಪ್ಪನೇನೋ ಕೋಪದ ಭರದಲ್ಲಿ ಹೇಳಿಬಿಟ್ಟರು. ಅಷ್ಟಕ್ಕೇ ಈ ಹುಡುಗ ಹೊರಟುಬಿಟ್ಟನೇ? ತಾನಾಗಿ ಹೊರಟು ಬಂದನೇ ಅಥವಾ ಯಾರಾದರೂ ಕಳಿಸದರೋ? ಹೇಗೆ ಬಂದ? ಸಜೀವನಾಗಿ ಬಂದನೋ ಅಥವಾ ಸತ್ತು ಆತ್ಮಸ್ವರೂಪದಲ್ಲಿ ಯಮನ ಬಳಿ ಬಂದನೋ? ಇವಕ್ಕೆಲ್ಲ ಉಪನಿಷತ್ತು ಉತ್ತರ ಕೊಡುವುದಿಲ್ಲ. ಆದರೆ ನಚಿಕೇತನ ಕತೆಯನ್ನು ಹೇಳುವ ಬೇರೆ ಮೂಲಗಳನ್ನು ಪರಿಶೀಲಿಸಿ ನೋಡಿದಾಗ ನಮಗೆ ಆತ ಅಪ್ಪನ ಮಾತು ಕೇಳುತ್ತಲೇ ಕುಸಿದುಬಿದ್ದ ಎಂಬ ಅಂಶ ತಿಳಿಯುತ್ತದೆ. ನಚಿಕೇತ ತೊಟ್ಟು ಕಳಚಿದ ಹಣ್ಣಿನಂತೆ ನಿಂತಲ್ಲೇ ದೊಪ್ಪನೆ ಬಿದ್ದುಬಿಟ್ಟನಂತೆ. ತಪ್ಪು ಮಾಡಿಬಿಟ್ಟೆನೆಂಬ ಪಶ್ಚಾತ್ತಾಪದಲ್ಲಿ ಅವನ ದೇಹವನ್ನು ತನ್ನ ಮಡಿಲಲ್ಲಿರಿಸಿ ಆರೈಕೆ ಮಾಡಿದ ಉದ್ದಾಲಕರಿಗೆ ಕೂತಲ್ಲೇ ಆಯಾಸದಿಂದ ನಿದ್ದೆ ಹತ್ತಿತಂತೆ. ಮತ್ತೆ ಎಚ್ಚರ ತಿಳಿದು ಎದ್ದಾಗ ಒಂದು ದಿನವೇ ಕಳೆದುಹೋಗಿತ್ತು! ಯಮಧರ್ಮನಲ್ಲಿಗೆ ಹೋಗಿದ್ದ ಮಗ ತನ್ನೆದುರು ನಗುತ್ತ ನಿಂತಿದ್ದನಂತೆ! ಉಪನಿಷತ್ತು ಹೇಳದೇ ಉಳಿಸಿದ ಒಂದು ವ್ಯಂಗ್ಯದ ಕಡೆಗೆ ನಾವು ಗಮನ ಹರಿಸಬೇಕು. ಅದೇನೆಂದರೆ, ಮಗ ನಚಿಕೇತ ಮೂರು ಸಲ ಬಂದು ತಂದೆಯಲ್ಲಿ ಪ್ರಾರ್ಥಿಸಿದಾಗ ತಂದೆಯಾದ ಉದ್ದಾಲಕರಿಗೆ ಸಿಟ್ಟಿನ ಕಟ್ಟೆ ಒಡೆದುಹೋಗುತ್ತದೆ. ಏಕಾಏಕಿಯಾಗಿ “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂಬ ಮಾತು ಅವರ ಬಾಯಿಯಿಂದ ಜಾರಿಬಿಡುತ್ತದೆ. ಅಂದರೆ ತನ್ನದೆಂಬ ಎಲ್ಲವನ್ನೂ ದಾನ ಮಾಡಿದೆನೆಂದು ಭಾವಿಸಿದ್ದ ಉದ್ದಾಲಕರು ತನ್ನೊಳಗಿನ ಕೋಪವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದ್ದರು! ಬಡ ಗೊಡ್ಡು ಹಸುಗಳನ್ನು ದಾನ ಮಾಡಿದ್ದರಿಂದ ಉದ್ದಾಲಕರಿಗೆ ಪುಣ್ಯ ಸಂಚಯವಾಗಲಿಲ್ಲ. ಅವರೊಳಗಿನ ಕ್ರೋಧಾಗ್ನಿ ತಣಿಯಲಿಲ್ಲ. ಯಜ್ಞ ಪೂರ್ತಿಗೊಳ್ಳಲಿಲ್ಲ ಎಂಬ ಸೂಚ್ಯಸಂದೇಶವನ್ನು ಈ ಘಟನೆ ಹೇಳುತ್ತಿರಬಹುದು.

ಸರಿ, ನಚಿಕೇತ ಭೂಲೋಕದಲ್ಲಿ ತೀರಿಕೊಂಡು ಆತ್ಮಸ್ವರೂಪಿಯಾಗಿ ಯಮನ ಆಸ್ಥಾನಕ್ಕೆ ಬಂದ. ಬರುವಾಗ ದಾರಿಯಲ್ಲಿ ಆತನನ್ನು ವಾಗ್ದೇವತೆ ತಡೆದು ನಿಲ್ಲಿಸಿ ಒಂದಷ್ಟು ಕ್ಷೇಮಸಮಾಚಾರ ಮಾತಾಡಿದಳಂತೆ. ಹುಡುಗ ತನ್ನ ಪಯಣದ ಉದ್ದೇಶ ತಿಳಿಸಿದಾಗ, “ಮಗೂ ನಚಿಕೇತ! ಮೂರು ದಿನಗಳ ಮಟ್ಟಿಗೆ ಯಮಧರ್ಮ ಯಮಪುರಿಯನ್ನು ಬಿಟ್ಟು ಹೋಗಿದ್ದಾನೆ. ಹಾಗಾಗಿ ನೀನು ಅಲ್ಲಿ ಮೂರು ದಿನ ಕಾಯಬೇಕಾದೀತು. ತನ್ನ ಮನೆಗೆ ವಾಪಸು ಬಂದ ಯಮ ನಿನ್ನಲ್ಲಿ ಆ ಮೂರು ದಿನಗಳ ಪರ್ಯಂತ ಏನನ್ನು ತಿಂದು ಬದುಕುಳಿದೆ ಎಂದು ವಿಚಾರಿಸಬಹುದು. ಮೊದಲ ದಿನ ಯಮಲೋಕದ ಜನರನ್ನು ತಿಂದೆ ಎನ್ನು. ಎರಡನೇ ದಿನ ಅಲ್ಲಿನ ಪಶುಗಳನ್ನೆಲ್ಲ ತಿಂದು ಮುಗಿಸಿದೆನೆಂದು ಹೇಳು. ಮೂರನೆಯ ದಿನ ಯಮನ ಪುಣ್ಯವನ್ನೆಲ್ಲ ತಿಂದೆನೆನ್ನು” ಎನ್ನುತ್ತಾಳೆ. ಆಕೆ ಹೇಳಿದಂತೆಯೇ, ಯಮಪುರಿಯಲ್ಲಿ ಮೂರು ದಿನ ಪ್ರತೀಕ್ಷೆ ಮಾಡಬೇಕಾಗಿ ಬಂತು. ಆ ಮೂರು ದಿನಗಳು ಕಳೆದು ಯಮ ತನ್ನ ಅರಮನೆಗೆ ಬಂದಾಗ ತನಗಾಗಿ ಕಾಯುತ್ತಿರುವ ಈ ಪುಟ್ಟ ಬಾಲಕನನ್ನು ಕಂಡು ಆಶ್ಚರ್ಯಗೊಂಡು ಏನನ್ನು ತಿಂದು ಹಸಿವು ನೀಗಿಸಿಕೊಂಡೆ ಎಂಬ ಕುಶಲಪ್ರಶ್ನೆ ಹಾಕಿದ. ವಾಗ್ದೇವತೆ ಹೇಳಿಕೊಟ್ಟಂತೆಯೇ ನಚಿಕೇತ ಉತ್ತರಿಸಿದಾಗ, ಪ್ರಸನ್ನನಾದ ಯಮ ಆತನಿಗೆ ಮೂರು ವರಗಳನ್ನು ಕೊಟ್ಟ. ಆ ಮೂರನ್ನು ಬಹಳ ಎಚ್ಚರಿಕೆಯಿಂದ ಬಳಸುವ ಗುರುತರ ಹೊಣೆಗಾರಿಕೆ ಈಗ ಈ ಪುಟ್ಟ ಹುಡುಗನ ಹೆಗಲ ಮೇಲೆ ಬಿತ್ತು.

“ಮೃತ್ಯು ದೇವತೆಯೇ, ನನ್ನ ಮೊದಲ ಬೇಡಿಕೆ ತಂದೆಯ ಸಲುವಾಗಿ. ನನ್ನನ್ನು ನಿನಗೆ ದಾನ ಮಾಡಿಕೊಟ್ಟ ಸಂದರ್ಭದಲ್ಲಿ ಅವರು ಬಹಳ ಕೋಪಗೊಂಡಿದ್ದರು. ಉದ್ವಿಗ್ನರಾಗಿದ್ದರು. ನಾನು ಮರಳಿಹೋದಾಗ ಅಂತ ಕ್ರೋಧಾವೇಶಗಳೊಂದೂ ಇಲ್ಲದೆ ನನ್ನನ್ನು ಸ್ವೀಕರಿಸುವಂತೆ ಅನುಗ್ರಹಿಸು. ಇದು ನಾನು ಕೇಳುತ್ತಿರುವ ಮೊದಲನೆ ವರ. ಇನ್ನು ಎರಡನೆಯದು ಸಮಾಜಮುಖಿ ಬೇಡಿಕೆ. ಯಾವ ಯಜ್ಞವನ್ನು ಮಾಡಿದರೆ ಮನುಷ್ಯ ತನ್ನೆಲ್ಲ ಪಾಪಗಳಿಂದ ಮುಕ್ತನಾಗುತ್ತಾನೋ, ಸ್ವರ್ಗವನ್ನೂ ಅಲ್ಲಿನ ಅಮಿತ ಆನಂದ – ಅನುಭೂತಿಗಳನ್ನೂ ಪಡೆಯುತ್ತಾನೋ ಅಂಥ ಯಜ್ಞದ ಕುರಿತು ನನಗೆ ಜ್ಞಾನವನ್ನು ನೀಡು. ಮತ್ತು ಮೂರನೆಯದಾಗಿ ಜೀವನು ತನ್ನ ಜೀವಿತ ಮುಗಿದ ಮೇಲೆ ಏನಾಗುತ್ತಾನೆ ಎಂಬುದರ ಕುರಿತು ತಿಳಿಸು” ಎಂದ ನಚಿಕೇತ. ಮೊದಲೆರಡು ವರಗಳನ್ನು ಕೇಳಿದಾಗ ಸಂತೋಷದಿಂದ ಒಪ್ಪಿ “ತಥಾಸ್ತು” ಎಂದಿದ್ದ ಯಮರಾಜ, ಮಗುವಿನ ಮೂರನೇ ಪ್ರಶ್ನೆಯನ್ನು ಕೇಳಿದಾಗ ಮಾತ್ರ ಬೆಚ್ಚಿದ. ನಿನಗೆ ಒಳ್ಳೊಳ್ಳೆಯ ಬಟ್ಟೆ, ಆಭರಣಗಳು, ಯಮವೇಗದಿಂದ ಓಡುವ ಕುದುರೆಗಳು, ರಥಗಳು, ಸಾಕುಸಾಕೆನಿಸುವಷ್ಟು ಕಾಂಚಾಣ – ಎಲ್ಲವನ್ನೂ ಕೊಡುವೆ; ಆದರೆ ಆ ಪ್ರಶ್ನೆಯನ್ನು ಹೊರತುಪಡಿಸಿ ಮಿಕ್ಕಿದ್ದೇನಾದರೂ ಕೇಳು, ಎಂದು ಪುಸಲಾಯಿಸಿದ. ಆದರೆ ಹುಡುಗನ ಅಚಲಶ್ರದ್ಧೆಯನ್ನು ಕದಲಿಸಲು ಆಗಲಿಲ್ಲ. “ಈ ಕುದುರೆ, ಬಟ್ಟೆ, ಆಭರಣ ಇವೆಲ್ಲವುಗಳಿಂದ ಮನುಷ್ಯ ದಾರಿ ತಪ್ಪುತ್ತಾನೆ. ಅವುಗಳ ಮೋಹಕ್ಕೆ ಬೀಳುತ್ತಾನೆ. ದುಡ್ಡಿನ ಬಾಯಾರಿಕೆಯನ್ನು ಸಂಪೂರ್ಣವಾಗಿ ಪರಿಹರಿಸಿಕೊಂಡವರು ಇದುವರೆಗೆ ಯಾರಾದರೂ ಇದ್ದಾರೆಯೇ? ಹಾಗಾಗಿ ಅಂಥ ಯಾವ ಪ್ರಲೋಭನೆಗಳನ್ನೂ ಒಡ್ಡಬೇಡ. ಅವ್ಯಾವುವೂ ನನ್ನ ಜ್ಞಾನತೃಷೆಯನ್ನು ತಣಿಸಲಾರವು. ಮೃತ್ಯುವಿನ ಬಳಿಕ ಏನಾಗುತ್ತದೆಂಬ ಜ್ಞಾನವನ್ನಷ್ಟೇ ಕೊಡು” ಎಂದು ಪಟ್ಟುಹಿಡಿದ ನಚಿಕೇತ. “ನೀನಲ್ಲದೆ ಈ ಪ್ರಶ್ನೆಯನ್ನು ನಾನು ಬೇರಾರಲ್ಲೂ ಕೇಳಲಾರೆ. ಇದಕ್ಕುತ್ತರಿಸಲು ನಿನಗಿಂತ ಸಮರ್ಪಕವಾದ ವ್ಯಕ್ತಿ ಬೇರಾರು ಇದ್ದಾರು ಜಗತ್ತಿನಲ್ಲಿ! ಹಾಗಾಗಿ ದಯವಿಟ್ಟು ಇಲ್ಲವೆನ್ನದೆ ನಿನ್ನ ಜ್ಞಾನಗಂಗೆಯನ್ನು ನನ್ನ ತಲೆ ಮೇಲೆ ಹರಿಸು. ಜನ್ಮವನ್ನು ಪಾವನ ಮಾಡು” ಎಂದು ಮತ್ತೆ ಕಾಡಿದ.

ಕಠೋಪನಿಷತ್ತಿನಲ್ಲಿ ಮೂರು ಎಂಬ ಸಂಖ್ಯೆ ಮತ್ತೆ ಮತ್ತೆ ಹಲವು ವಿಧಗಳಲ್ಲಿ ಬಂದುಹೋಗುವುದನ್ನು ನಾವು ಪ್ರಾರಂಭದಿಂದ ಗಮನಿಸಬಹುದು. ಈ ಉಪನಿಷತ್ತನ್ನು ಮೂರು ವಲ್ಲಿ(ಭಾಗ)ಗಳಲ್ಲಿ ಬರೆದಿಡಲಾಗಿದೆ. ನಚಿಕೇತ ತನ್ನ ತಂದೆಯ ಬಳಿ ಮೂರು ಸಲ ಪ್ರಶ್ನೆ ಮಾಡುತ್ತಾನೆ ಮತ್ತು ಮೂರನೇ ಬಾರಿ ತಂದೆಯ ಉತ್ತರ ಪಡೆಯುತ್ತಾನೆ. ಯಮನಲ್ಲಿಗೆ ಹೋಗುತ್ತಿರುವಾಗ ಸಿಗುವ ವಾಗ್ದೇವತೆ ಕೊಡುವ ಸಲಹೆಗಳು ಮೂರು. ನಚಿಕೇತ ಯಮನ ಮನೆಯಲ್ಲಿ ಕಾಯಬೇಕಾಗುವುದು ಮೂರು ದಿನ. ಆತನ ಉತ್ತರದಿಂದ ಪ್ರಸನ್ನನಾಗುವ ಯಮ ತನ್ನ ಅತಿಥಿಯನ್ನು ಸಂತೃಪ್ತಿಪಡಿಸಲು ದಯಪಾಲಿಸುವ ವರಗಳು ಮೂರು. ಇಲ್ಲಿ, ಪ್ರತಿ ಸಲವೂ ಮೊದಲೆರಡರಲ್ಲಿ ಪ್ರಾರಂಭಿಕ ಹಂತವನ್ನು ತೋರಿಸಿ ಮೂರನೇ ಘಟ್ಟದಲ್ಲಿ ದೊಡ್ಡದೊಂದು ಪ್ರಕ್ರಿಯೆಯನ್ನು ಅಭಿನಯಿಸಲಾಗುತ್ತದೆ. ಇದು ಕತೆ ಹೇಳುವ ಅತ್ಯುತ್ತಮ ತಂತ್ರವೂ ಹೌದು. ನಚಿಕೇತ ಮೊದಲೆರಡು ವರಗಳಲ್ಲಿ ಸರಳ ಪ್ರಶ್ನೆಗಳನ್ನು ಕೇಳಿ ಅತ್ಯಂತ ಜಿಗುಟಿನ ಸವಾಲನ್ನು ಮೂರನೆಯದ್ದಾಗಿ ಉಳಿಸಿಕೊಳ್ಳುವುದರಲ್ಲಿ ಉಪನಿಷತ್ ರಚನಕಾರನ ಸಾಹಿತ್ಯಸೃಷ್ಟಿಯ ಪ್ರಬುದ್ಧತೆಯನ್ನು ಗಮನಿಸಬಹುದು. ಮೂರನೆಯ ಪ್ರಶ್ನೆಗೆ ಬಂದಾಗ ಯಮರಾಜನ ಮೂಲಕ “ಅದನ್ನೊಂದು ಕೇಳಬೇಡ!” ಎಂದು ಮತ್ತೆಮತ್ತೆ ಹೇಳಿಸಿ ಮುಂದಿನ ಭಾಗವನ್ನು ಅತ್ಯಂತ ಆಸಕ್ತಿಯಿಂದ ಓದಲು ರಚನಕಾರ ಓದುಗನನ್ನು ಅಣಿಗೊಳಿಸುತ್ತಿದ್ದಾನೆ ಎನ್ನಬಹುದು. ಸರಿ, ನಚಿಕೇತನ ಅಚಲ ನಿಷ್ಠೆಯನ್ನು ಅಲುಗಿಸಲಾಗದೆ ವಿಫಲನಾದ ಯಮ ಪ್ರಸನ್ನನಾದ. ಅಪರೂಪದ ಶಿಷ್ಯನೊಬ್ಬ ಸಿಕ್ಕಿದ ಖುಷಿಯಲ್ಲಿ ತನ್ನ ಜ್ಞಾನವನ್ನೆಲ್ಲ ನಚಿಕೇತನ ಮೇಲೆ ಸುವರ್ಣಾಭಿಷೇಕದಂತೆ ಸುರಿದ. ಗುರು-ಶಿಷ್ಯರ ನಡುವಿನ ಈ ಸಂವಾದವೇ ಕಠೋಪನಿಷತ್ತಿನ ಬಹು ಫಲವತ್ತಾದ ಭಾಗ.
(ಮುಂದುವರಿಯುತ್ತದೆ)

3 ಟಿಪ್ಪಣಿಗಳು Post a comment
 1. Venugopal
  ಆಗಸ್ಟ್ 9 2016

  ವಾಗ್ದೇವತೆ ಹೇಳಿಕೊಟ್ಟಿರುವುದರಲ್ಲಿ ಯಮನು ಮೆಚ್ಚುವಂತಹುದೇನಿತ್ತು… ಆ ಮೂರು ಸಲಹೆಗಳಲ್ಲಿ ಅಂತಹ ಅರ್ಥ ಏನಿತ್ತು?, ಏನಿದೆ?…

  ಉತ್ತರ
  • GANAPATI
   ಆಕ್ಟೋ 28 2016

   Nice Article though! If some one let a person to be hungry even for a day, one should think how much sin he accumulates! This interesting Conversation between YamaDharma and Nachiketa elightened us with some important secrets regarding this. Vagdevi told Nachiketa to tell………. 1) since Nachiketa was remained hungry for one day, means Yama got sin equivalent to killing of children/people 2) Yama let him hungry for second day, that means he got the sin of killing Cows 3) being hungry on third day Nachiketa got all holiness of Yamadharma. To nullify these sins Yama offers three boons to Nachiketa…… conversation continues thus far. That is how upanishats embed with secrets within…..

   ಉತ್ತರ

Trackbacks & Pingbacks

 1. ಉಪನಿಷತ್ ವಾಙ್ಮಯ 2: ಆಮಿಷ ಒಡ್ಡದೆ ಉತ್ತರಿಸು; ಅರಿವಿನ ಮಟ್ಟವನೆತ್ತರಿಸು! | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments