ವಿಷಯದ ವಿವರಗಳಿಗೆ ದಾಟಿರಿ

Recent Articles

20
ಜೂನ್

ಕಸದ ಬುಟ್ಟಿ

ಪ್ರೀತೀಶ

ಛೀಮಾರಿ ಹಾಕಬೇಡಿ. ಇದೇನು ಬರೆಯುವಂಥ ವಿಷಯವೇ ಎಂದು ಪ್ರಶ್ನಿಸಬೇಡಿ. ಪ್ರಶ್ನೆ ಸರಿಯಾದುದೇ. ಆದರೆ ಉತ್ತರವಿಲ್ಲವಲ್ಲ! ಏನು ಮಾಡಲಿ ಹೇಳಿ? ಬರೆಯಲು ಎಷ್ಟು ತಿಣುಕಾಡಿದರೂ ಒಂದೂ ವಿಷಯ ಸಿಗಲಿಲ್ಲ. ಅದಕ್ಕೆ ಕಾಲಬುಡದಲ್ಲಿ ಸಿಕ್ಕ ಬಡಪಾಯಿಯ ಅಪಮಾನ ಮಾಡುವ ದರಿದ್ರ ಕೆಲಸಕ್ಕಿಳಿದಿರುವೆ. ಕ್ಷಮೆಯಿರಲಿ. ಕ್ಷಮೆ? ಅದಕ್ಕೆ ಅರ್ಹನೇ ನಾನು? ಪ್ರಶ್ನೆಯನ್ನು ಒಂದಿನಿತು ಹೊತ್ತು ಬದಿಗಿಟ್ಟು ಓದಿ ನಂತರ ನಿಮ್ಮ ಉತ್ತರ ನಕಾರಾತ್ಮಕವಾಗಿದ್ದರೆ ಒಂದಿಷ್ಟು ಝಾಡಿಸಿ ಒದೆಯಿರಿ. (ಒದೆ ತಿನ್ನಲು ಎದುರಿಗೆ ನಾನಿಲ್ಲವಲ್ಲ ಎಂದು ಒಳಗೊಳಗೆ ನಾನು ನಕ್ಕುದನ್ನು ತಾವು ನೋಡಿಲ್ಲವೆಂಬುದು ನನ್ನ ಭ್ರಮೆ) ಇಂಥ ರಸಹೀನ, ಕೊಳಕು, ದರಿದ್ರ ವಸ್ತುವನ್ನು ಆಯ್ದುಕೊಳ್ಳುವಾಗ ಇದನ್ನು ಓದಲು ನೀವು ಆಯ್ದುಕೊಂಡಾಗ ಆದಷ್ಟೇ ನನಗೂ ಅಸಹ್ಯವಾಯಿತು. ಆದರೆ ಜಗತ್ತಿನ ಕೊಳಕನ್ನೆಲ್ಲ ತನ್ನ ಒಡಲಲ್ಲಿ ಅವಿತಿಟ್ಟುಕೊಂಡ, ಕೆಲವೊಮ್ಮೆ ತೆರೆದುಕೊಂಡ, ಬಹಳಷ್ಟು ಸಾರಿ ಸುತ್ತೆಲ್ಲ ಚೆಲ್ಲಿಕೊಂಡ ಈ ಕಸದ ಬುಟ್ಟಿಯ/ತೊಟ್ಟಿಯ (ಸಂಕ್ಷಿಪ್ತವಾಗಿ ಕ.ಬು.) ಬಗ್ಗೆ ಯೋಚಿಸಲು ತೊಡಗಿದಾಗ ನನಗೆ ಆದ ಜ್ಞಾನೋದಯದಿಂದ ಬೆಚ್ಚಿ ಇದನ್ನೆಲ್ಲ ತಮ್ಮ ಮುಂದೆ ಕಾರಿಕೊಳ್ಳಲು ಸನ್ನಧ್ಧನಾದೆ. ಸುಮ್ಮನೆ ವಸ್ತುವಿನ ಬಗ್ಗೆಯೇ ಕಿರಿಕಿರಿ ಮಾಡುವುದನ್ನು ಬಿಟ್ಟು ಏನು ಕೊರೆಯುವುದಿದೆಯೋ ಅದನ್ನು ಕೊರೆದು ಮುಗಿಸಪ್ಪ ಎಂದು ಬೇಜಾರಾಗಬೇಡಿ.

ಕ.ಬು. ನಮ್ಮಂಥ ಹೇಳಹೆಸರಿಲ್ಲದ, ಅಕ್ಷರ ಬರೆಯಲು ಬಂದರೆ ಲೇಖಕನಾದೆ ಎಂಬ ಹುಸಿಗರ್ವದಿಂದ ಮೆರೆವ ಯಾರೂ ಗುರುತಿಸದ ಲೇಖಕರಿಗೆ ಹೊಸದೇನಲ್ಲ. ಜಗತ್ತಿನಲ್ಲಿ ಎಲ್ಲ ಕ.ಬು.ಗಳೂ ಬಹುಶ: ಅತೀ ಹೆಚ್ಚಾಗಿ ಬೆದರುವ ಕಸವೆಂದರೆ ನಾವು ಬರೆದ ಕವನಗಳು (?), ಕತೆಗಳು (?), ಲೇಖನಗಳು (?). ವೊದಲಿಗೆ ಬರೆಯಬೇಕೆಂಬ ಹುಂಬತನದಿಂದ ಎಷ್ಟೆಲ್ಲ ಗುದ್ದಾಡಿ ಒಂದು ವಸ್ತುವನ್ನು ಹುಡುಕಿ, ಅದರ ಬಗ್ಗೆ ಎಷ್ಟೆಲ್ಲ ಯೋಚಿಸಿ, ತಲೆ ಕೆರೆದುಕೊಂಡು, ಎಲ್ಲೆಲ್ಲೋ ತಡಕಾಡಿ ಯಾರಿಗೂ ಗೊತ್ತಾಗದಂತೆ ಹತ್ತಿಪ್ಪತ್ತು ಕವನಗಳಿಂದ ತುಣುಕುಗಳ ತುಡುಗು ಮಾಡಿ, ನಿಘಂಟನ್ನೆಲ್ಲ ಬರಿದು ಮಾಡಿ ಒಂದು ಕವನ ಬರೆಯುವಾಗ ಒಂದೋ ಎರಡೋ ಕ.ಬು.ಗಳು ತುಂಬಿಕೊಂಡಿರುತ್ತವೆ. ಹೀಗೆ ಕೊನೆಗೂ ಬರೆದು ಮುಗಿಸಿದ ಕವನ ಎಷ್ಟೆಲ್ಲ ಪತ್ರಿಕಾ ಕಾರ್ಯಾಲಯಗಳಿಗೆ ಹೋಗಿ ಅವರಿಗೆ ಹೇಸಿಗೆ ಬಂದು ಒಂದು ಕವನಕ್ಕಾಗಿ ಅವರೂ ಒಂದೋ ಎರಡೋ ಕ.ಬು.ಗಳ ತುಂಬಿ, ಪ್ರಕಟಗೊಂಡ ಕವನಗಳ ಓದಲಾಗದೇ ಓದುಗರು ಇನ್ನೆಷ್ಟೋ ಕ.ಬು. ತುಂಬಿ… ಅಯ್ಯಯ್ಯೋ ಈ ಕಸದ ಬುಟ್ಟಿಯಷ್ಟು ಸಹನೆ ನಮಗೆ ಇರಬಾರದೇ ಎನಿಸದಿರದು. ಕ.ಬು.ಗಳು ಇಲ್ಲಿಯವರೆಗೆ ಮುಚ್ಚಿಟ್ಟುಕೊಂಡ ಅತ್ಯಂತ ಹೆಚ್ಚಿನ ಕೊಳಕೂ ಅದೇ ಎಂಬುದು ನನ್ನ ಖಡಾಖಂಡಿತವಾದ ನಂಬುಗೆ. ಅದು ನಿಜವೆಂದು ಒಪ್ಪಲು ಮನಸ್ಸು ತಯಾರಿಲ್ಲ. ಕ.ಬು. ಮಾಡುವ ಬಹಳ ಮಹತ್ವದ ಸಮಾಜಸೇವೆಯೇ ಈ ಕೊಳಕನ್ನು ಜನರ ಕಣ್ಣಿನಿಂದ ದೂರ ಇಟ್ಟಿರುವುದು. ಆ ಪುಣ್ಯದ ಕೆಲಸಕ್ಕಾಗಿ ಕಸದ ಬುಟ್ಟಿ ಯಾವಾಗಲೋ ಸ್ವರ್ಗ ಸೇರಿ ಆರಾಮಾಗಿ ಇರಬಹುದಿತ್ತು. ಆದರೆ ಜಗತ್ತಿನ ಒಳ್ಳೆಯ ಕೊಳಕೆಲ್ಲ ಧರಣಿ ಹೂಡಿ ಭೂಮಿಯಲ್ಲೇ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸು ಪಡೆದದ್ದು ಯಾವ ಇತಿಹಾಸದಲ್ಲೂ ದಾಖಲಾಗದ ಒಂದು ಕಟುಸತ್ಯ.

ಮತ್ತಷ್ಟು ಓದು »

19
ಜೂನ್

ಟಿ ವಿ ಎಂಬ ಸುಂದರಿ ..

– ಅನಿತ ನರೇಶ್ ಮಂಚಿ

ವಾಶಿಂಗ್ ಪೌಡರ್ ನಿರ್ಮ, ವಾಶಿಂಗ್ ಪೌಡರ್ ನಿರ್ಮ..’ ಇದು ಗೆಳತಿಯ ಬಾಯಲ್ಲಿ ಕೇಳಿ ಬರುತ್ತಿದ್ದ ಹೊಸ ಹಾಡು. ‘ಯಾರೇ ಹೇಳ್ಕೊಟ್ಟಿದ್ದು’ ಕೊಂಚ ಅಸೂಯೆ ಇತ್ತು ನನ್ನ ಧ್ವನಿಯಲ್ಲಿ. ‘ಹೇಳ್ಕೊಡೋದ್ಯಾಕೆ..? ನಾನೇ ಕೇಳಿ ಕಲ್ತಿದ್ದು, ಟಿ ವಿ  ನೋಡಿ… ಗೊತ್ತಾ ನಿಂಗೆ , ನಮ್ಮಲ್ಲಿ ಹೊಸ ಟಿ ವಿ ತಂದಿದ್ದಾರೆ.., ಇದರ ಡ್ಯಾನ್ಸ್ ಕೂಡ ಇದೆ ನಿಲ್ಲು ತೋರಿಸ್ತೀನಿ,ಮೊದ್ಲು ಬಟ್ಟೆ ಮಣ್ಣಾಗಿರುತ್ತೆ, ಹೀಗೆ ಮಾಡಿದ ಮೇಲೆ ಬಟ್ಟೆ ಹೊಸದಾಗಿ ಹೊಳೆಯುತ್ತೆ’ ಎಂದು ತನ್ನ ಫ್ರಾಕಿನ ಎರಡೂ ತುದಿಗಳನ್ನು ಬೆರಳುಗಳಲ್ಲಿ ಅಗಲಿಸಿ ಹಿಡಿದು ಉರುಟುರುಟಾಗಿ ಸುತ್ತಿದಳು ರಸ್ತೆಯಲ್ಲಿಯೇ.. !!

ಟಿ ವಿ ನಾ..?? ಕೇವಲ ಅದರ ಬಗ್ಗೆ ಕೇಳಿ ಮಾತ್ರ ತಿಳಿದಿದ್ದ ನನ್ನ ಕಣ್ಣ ಗೋಲಿಗಳು ಸಿಕ್ಕಿ ಹಾಕಿ ಕೊಳ್ಳುವಷ್ಟು ಮೇಲೇರಿದವು  ಅಚ್ಚರಿಯಿಂದ  !! ಕೂಡಲೇ  ಅವಳನ್ನು ಕೇಳಿ ಅದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದೆ.
ಮನೆಗೆ ಹೋದವಳೇ ಕೈಕಾಲು ತೊಳೆಯದೆ ಅಡುಗೆ ಮನೆಗೆ ನುಗ್ಗಿ ಅಮ್ಮನಿಗೆ ಎಲ್ಲಾ ಸುದ್ಧಿಯನ್ನು ಬಿತ್ತರಿಸಿದೆ. ಅಮ್ಮನೂ ಇದನ್ನು ಅಪ್ಪನಿಗೆ ವರದಿ ಒಪ್ಪಿಸಿದಳು. ಅಪ್ಪನೂ ಇಂತಹ ವಿಷಯಗಳಲ್ಲಿ ತುಂಬಾ ಉತ್ಸಾಹಿ . ಹೊಸತೇನೇ ಇದ್ದರೂ ಅದು ಎಲ್ಲರ ಮನೆಗಳಲ್ಲಿ ಕಣ್ಬಿಡುವ ಮೊದಲೇ ನಮ್ಮಲ್ಲಿ ಇರಬೇಕಿತ್ತು.
ರೇಡಿಯೊ, ಟೇಪ್ ರೆಕಾರ್ಡರ್ ಗಳಷ್ಟೆ ಅಲಂಕರಿಸಿದ್ದ ಮೇಜೀಗ ಟಿ ವಿ  ಯ ಸ್ವಾಗತಕ್ಕೂ ಸಜ್ಜಾಗಿ ನಿಂತಿತು.ಒಂದು ಶುಭ ಮುಹೂರ್ತದಲ್ಲಿ ಬಲಗಾಲಿಟ್ಟು ಒಳ ಪ್ರವೇಶಿಸಿದಳು ಟಿ ವಿ  ಎಂಬ ಸುಂದರಿ. ನಾನಂತೂ’ಯಾರಿಗೂ ಹೇಳೋದ್ಬೇಡ ಗುಟ್ಟು, ನಮ್ಮಲ್ಲಿ ಟಿ ವಿ  ತರ್ತಾರೆ’ ಅಂತ ಮೊದಲೇ ಎಲ್ಲರ ಬಳಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಹೇಳಿ ಆಗಿತ್ತು. ಇದರ ಜೊತೆಗೆ ನಮ್ಮದು ವಠಾರದ ಮನೆಯಾಗಿದ್ದ ಕಾರಣ ಕುತೂಹಲದ ಧ್ವನಿಗಳೂ, ಕಣ್ಣುಗಳೂ ನೂರ್ಮಡಿಸಿದವು. ಆ ಹೊತ್ತಿನಲ್ಲಿ ನಮ್ಮಲ್ಲಿ ಜಮಾಯಿಸಿದ್ದ ಜನರನ್ನು ಯಾರಾದರು ಹೊರಗಿನವರು ನೋಡಿದ್ದರೆ ಇಲ್ಲೇನೋ ಬಹು ದೊಡ್ಡ ಸಮಾರಂಭ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದರು.
19
ಜೂನ್

ಮೀಸಲಾತಿ ಕೇವಲ ಉಳ್ಳವರಿಗೆ ಮಾತ್ರನಾ?

– ಮುರುಳಿಧರ್ ದೇವ್

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಒಬ್ಬ ದಲಿತ ಹೆಂಗಸು ತನ್ನ ಮಗ ಕರ್ನಾಟಕ ಸರಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ೧೨೦೦೦ ರ್‍ಯಾಂಕ್ ಬಂದಿರೋದನ್ನ ತುಂಬಾ ಖುಷಿಯಿಂದ ಹೇಳ್ಕೋತ ಇದ್ಲು. ಇದೇನು ೧೨೦೦೦ ರ್‍ಯಾಂಕ್ ಬಂದಿರೋದು ಅಂತ ದೊಡ್ಡ ವಿಷಯ ಅಂತ ಅನ್ಕೋಬೇಡಿ. ಅವಳು ಮನೆ ಮನೆಗಳಲ್ಲಿ ಪಾತ್ರೆ ತೊಳೆದು ತನ್ನ ಮಗನನ್ನು ಓದುಸ್ತ ಇರೋದು. ಅವರ ಕುಟುಂಬದಲ್ಲಿರೋದು ನಾಲ್ಕು ಜನ, ಗಂಡ ದಿನ ಕುಡಿದು ಬಂದು ಇವಳನ್ನು ಹೊಡೆಯೋದು, ಮಗಳು ಈಗ ೯ನೆ ತರಗತಿ ಓದ್ತಾ ಇರೋದು. ಸಂಪೂರ್ಣ ಮನೆಯ ಜವಾಬ್ದಾರಿ ಇವಳ ಹೆಗಲಿಗೆ. ಆದರೆ ಆ ಹುಡುಗನ ಮುಖದಲ್ಲಿ ಸಂತಸಕ್ಕಿಂತ ಮುಂದೇನು ಅನ್ನೋ ಚಿಂತೆಯೇ ಬಹುವಾಗಿ ಕಾಡ್ತಾ ಇತ್ತು. ಮಾತಿನ ಮಧ್ಯೆ ಯಾಕಿಷ್ಟು ಚಿಂತೆ ಪಡ್ತಿಯ, ಹೇಗಿದ್ರು ಸರಕಾರದವರು ದಲಿತರಿಗಾಗಿ ಶೈಕ್ಷಣಿಕ ಸೌಲಭ್ಯ ಕೊಡುತ್ತೆ, ನಿನ್ನ ಫೀಸ್ ಬಗ್ಗೆನು ಯೋಚಿಸಬೇಡ ಅಂತ ಹೇಳ್ತಾ ಇದ್ದೆ. ಆದ್ರೆ ಇದ್ಯಾವುದರಿನ್ದಾನು ಆತನ ಮುಖದಲ್ಲಿನ ಚಿಂತೆ ಕಡಮೆ ಆಗ್ಲಿಲ್ಲ.

ಕೊನೆಗೆ ಆತನೇ, ಸರಕಾರದವರೆನೋ ಶುಲ್ಕ ತುಂಬುತ್ತಾರೆ, ಆದರೆ ಮಿಸಲಾತಿ ಇದ್ದರು ಒಳ್ಳೆಯ ಕಾಲೇಜ್ ನಲ್ಲಿ ಸೀಟು ದೊರಕೋದು ಕಷ್ಟ ಅಂದ. ನಾನೋ ಅದ್ಯಾಕೆ ಮಿಸಲಾತಿ ಇರೋದು ಹಿಂದುಳಿದ ಜನಾಂಗ ಮುಂದೆ ಬರಲಿ ಅಂತ ಹೇಳಿದ್ರೆ ಎಲ್ಲಿತ್ತೋ ಕೋಪ ಎಲ್ಲ ಸೇರ್ಸಿ ಹೇಳ್ದ, ನಂಗೆ ಮನೇಲಿ ಕಷ್ಟ ಇದೆ ಅದ್ಕೆ ೧೨೦೦೦ ರ್‍ಯಾಂಕ್ ಬಂದಿದೆ ಸ್ವಲ್ಪ ಮಟ್ಟಿಗೆ ತೀರ ಒಳ್ಳೇದು ಅಲ್ಲದೆ ಇದ್ರುನು ಉತ್ತಮ ಕಾಲೇಜ್ ನಲ್ಲಿ ಸೀಟು ಸಿಗಬಹುದು, ಆದರೆ ನಮ್ಮ ಅಮ್ಮ ಕೆಲಸಕ್ಕೆ ಹೋಗೋ ಮನೆಯ ಯಜಮಾನ ಸರಕಾರದಲ್ಲಿ ಉನ್ನತ ಹುದ್ದೆಲಿ ಇದ್ದಾರೆ, ಅವರ ಮಗನಿಗೆ ಖಾಸಗಿಯಾಗಿ ಕೋಚಿಂಗ್ ಕೊಡ್ಸಿದಾರೆ, ಇಷ್ಟಾಗಿಯೂ ಅವನಿಗೂ ನನಗು ಇರೋ ರ್‍ಯಾಂಕ್ ವ್ಯತ್ಯಾಸ ಕೇವಲ ೫೦೦.

ಮತ್ತಷ್ಟು ಓದು »

18
ಜೂನ್

ಕಾನೂನಿನಂಗಳ ೬ : ಕಾನೂನಿನ ಕಣ್ಣಲ್ಲಿ ವಿವಾಹ

ಉಷಾ ಐನಕೈ  ಶಿರಸಿ

ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಅಂದರೆ ಒಂದು ಪವಿತ್ರ ಬಂಧನ. ಈ ಮೂಲಕ ಮಾತ್ರ ಮನುಷ್ಯ ಪರಿಪೂರ್ಣತೆಯತ್ತ ಹೋಗಲು ಸಾಧ್ಯ ಎಂಬ ನಂಬಿಕೆಯಿದೆ. ಈ ವೈವಾಹಿಕ ಜೀವನ ಸುಸಂಬದ್ಧವಾಗಿ ಸಾಗಲು ಅನುಕೂಲವಾಗುವಂತೆ ಕಾನೂನುಗಳನ್ನು ರಚಿಸಲಾಗಿದೆ. ಈ ಕಾನೂನುಗಳು ವಿವಾಹ ಅಂದರೇನು? ವಿವಾಹವನ್ನು ಯಾವಾಗ ಅನೂರ್ಜಿತಗೊಳಿಸಬಹುದು? ಗಂಡ-ಹೆಂಡತಿಯ ಹಕ್ಕು-ಬಾಧ್ಯತೆಗಳು ಹಾಗೂ ಅದನ್ನು ಚ್ಯುತಿಗೊಳಿಸಿದಲ್ಲಿ ಪಡೆಯಬಹುದಾದ ಶಿಕ್ಷೆಗಳು ಮುಂತಾದವುಗಳನ್ನೆಲ್ಲ ವಿವರಿಸುತ್ತದೆ.

ಹಿಂದೂ ಸಂಪ್ರದಾಯದಲ್ಲಿ ವಿವಾಹಕ್ಕೆ ಒಂದು ವಿಶೇಷ ಅರ್ಥವಿದೆ. ಇಲ್ಲಿ ವಿವಾಹ ಒಂದು ಪವಿತ್ರ ಬಂಧನ. ಹೆಣ್ಣು-ಗಂಡು ಪರಸ್ಪರ ಅಗ್ನಿಸಾಕ್ಷಿಯಾಗಿ ಕೈಹಿಡಿದು ನೆಮ್ಮದಿಯ ಬದುಕಿಗೆ ಸಂಕಲ್ಪ ಕಟ್ಟಿಕೊಳ್ಳುವ ಸಂದರ್ಭ ಇದು. ವಿವಾಹವಿಲ್ಲದ ಜೀವನ ಅಪೂರ್ಣ ಎಂಬ ಭಾವನೆ ನಮ್ಮಲ್ಲಿದೆ. ‘ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿ ಚರಿತವ್ಯಾ ತ್ವಯೀಯಮ್ ನಾತಿ ಚರಾಮಿ’ ಎನ್ನುತ್ತ ಧರ್ಮ, ಅರ್ಥ, ಕಾಮ ಈ ಮೂರರಲ್ಲೂ ಇಬ್ಬರೂ ಒಂದಾಗಿ ಬಾಳೋಣ ಎನ್ನುವ ಪ್ರತಿಜ್ಞೆಯೊಂದಿಗೆ ವಿವಾಹ ಸಂಸ್ಕಾರ ನಡೆಯುತ್ತದೆ. ಹಾಗಾಗಿ ಹಿಂದೂ ಪದ್ಧತಿಯಲ್ಲಿ ವಿವಾಹ ಒಂದು ಧಾರ್ಮಿಕ ಸಂಸ್ಕಾರ.

ವಿವಾಹ ಎಂದರೆ ಹೆಣ್ಣು-ಗಂಡು ಒಂದಾಗಿ ಬಾಳುವುದಕ್ಕೋ, ಸಂತಾನೋತ್ಪತ್ತಿಗೋ ಸೀಮಿತವಾಗಿಲ್ಲ. ಇದರ ಅರ್ಥ ಬಹು ವಿಶಾಲವಾಗಿದೆ. ಹೆಣ್ಣು-ಗಂಡು ಸೇರಿ ಒಂದು ಪೂರ್ಣತೆಯನ್ನು ಕಾಣುವುದು.  ಈ ರೀತಿಯಾಗಿ ಇಡೀ ಬದುಕನ್ನೇ ಪೂರ್ಣತೆಯತ್ತ ಒಯ್ಯುವುದು. ಈ ಬದುಕಿನಲ್ಲಿ ಸಾವಿರಾರು ಕನಸುಗಳಿವೆ. ನೂರಾರು ಸವಾಲುಗಳಿವೆ. ಎರಡು ವಿಭಿನ್ನ ಮನಸ್ಸುಗಳು ಒಂದೇ ಬಿಂದುವಿನೊಂದಿಗೆ ಮುಂದುವರಿಯುವ ವಿಸ್ಮಯವಿದೆ. ಹೀಗೆ ವಿವಾಹದ ಅರ್ಥ ಮಾಡುತ್ತಹೋದರೆ ಅನಂತದೆಡೆಗೆ ಸಾಗುತ್ತದೆ. ಇದೇ ಭಾರತೀಯ ಸಂಸ್ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಬಂಧನ ಎನ್ನುವುದು ಅದ್ಭುತವಾದ ಲಕ್ಷಣ.

ಮತ್ತಷ್ಟು ಓದು »

16
ಜೂನ್

ಮನದರಸಿಯಾಗುವಾಸೆ

ಅನಾಮಿಕ ಸಿದ್ದಾಂತ್

ನಿನ್ನ ಬೆಚ್ಚಗಿನ ಶ್ವಾಸದಲಿ, ಹೆಪ್ಪುಗಟ್ಟಿದ
ದುಃಖ ದುಮ್ಮನಗಳ ಕರಗಿಸಿ 
ಕಣ್ಣೀರಾಗಿ ಹರಿಸುವಾಸೆ

ಪರಿಸ್ಥಿತಿಗಳ ಹೊಡೆತಗಳಿಂದ ಬಳಲಿ, ಬೆಂಡಾಗಿರುವ
ನಿನ್ನ ತೋಳುಗಳ ಬಂಧನದಲ್ಲಿ
ದಣಿವಾರಿಸಿ ಕೊಳ್ಳುವಾಸೆ

ಎಲ್ಲರ ಕಣ್ತಪ್ಪಿಸಿ ನಿನ್ನ ಬರುವಿಕೆಯನ್ನೇ ಎದಿರುನೋಡುತಾ,
ನಿನ್ನಾಗಮನದ ಕನಸಿನ ರೋಮಾಂಚನದಲ್ಲಿ
ಮೈ ಮನಗಳ ಮೀಯಿಸುವಾಸೆ

ನಿನ್ನಯ ಮುಂದಿನ ಚಿಂತೆಗಳ ಹೊದಿಕೆಯಲಿ
ಇಂದಿನ ಅಸ್ಥಿರ ಬೆತ್ತಲ ದೇಹವನ್ನು ಮುಚ್ಚಲು,
ನಿನ್ನಾಸರೆಯ ದುಪ್ಪಟವನ್ನು ಹೊದೆಯುವಾಸೆ

ಇರುಳಿನಲಿ ನಿದ್ರಾದೇವಿಯು ಕೈಕೊಟ್ಟು ಕಾಮನ
ಕೈಗೆ ಜಾರಿಸಿದಾಗ, ನಕ್ಷತ್ರಗಳ ಬೆಳಕಿನಲಿ
ಅವನನ್ನೇ ಕಾಣುವಾಸೆ

ಹೊಟ್ಟೆತುಂಬಾ ಹಿಟ್ಟಿಲ್ಲದಿದ್ದರೂ ಮಲ್ಲಿಗೆ ಮುಡಿದು
ಲತಾಂಗಿಯಾಗಿ ಮನದನ್ನನ
ಮನದರಸಿಯಾಗುವಾಸೆ

******************************************

15
ಜೂನ್

ಕೆಟ್ಟ ಹೆಣ್ಣಿರಬಹು​ದು, ಕೆಟ್ಟ ಅಮ್ಮನಿರಲಿಕ್ಕಿಲ್ಲ

ಚೇತನ್ ಹೊನ್ನವಿಲೆ

ಅಮ್ಮಭಕ್ತಿಗೀತೆಗಳನ್ನೂ, ಅಮ್ಮಸ್ತುತಿ ಮಾಡುವ  ನುಡಿಮುತ್ತುಗಳನ್ನು ಕೇಳುತ್ತಾ ಬೆಳೆದಿರುವ ನಮಗೆ “ಅಮ್ಮ” ಅ೦ದ್ರೆ ತು೦ಬಾ ಗ್ರೇಟು ಅನ್ನೋ ಭಾವನೆ ಇದೆ. ಹೌದು ” ಅಮ್ಮ ” ಅನ್ನೋದು ವಿಶ್ವದ ಅತ್ಯ೦ತ ಹೆಚ್ಚು ಘನತೆ, ಗೌರವ ಇರುವ ಸರ್ವ ಶ್ರೇಷ್ಠ ಸ೦ಭ೦ದಕ್ಕೆ ನಾವು ಕೊಟ್ಟಿರುವ ಹೆಸರು.  ನನ್ನ ಪಾಲಿಗೆ “ಅಮ್ಮ” ಅ೦ದ್ರೆ ನಾನು ಹೇಳುವ ಅಷ್ಟೂ ಸುಳ್ಳುಗಳನ್ನು , ಅಷ್ಟೇ ಮುಗ್ಧವಾಗಿ ನ೦ಬುತ್ತಾ ಬ೦ದಿರುವ ಹಾಗೂ ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ ನಾನು ಚೆನ್ನಾಗಿರೋದನ್ನ  ಬಯಸೋ ಒ೦ದು ಪೆದ್ದುಜೀವ.
ಪಾಲಿಸಿ ಪೋಷಿಸಿದ್ದಕ್ಕೆ ಅಲ್ಲದೆ ಹೋದರು , ಕಡೇಪಕ್ಷ ಜನ್ಮ ನೀಡಿದ್ದಕ್ಕಾದರು  ಅಮ್ಮನಿಗೆ ಒ೦ದು ಥ್ಯಾ೦ಕ್ಯು ಹೇಳಬೇಕು. ಈ ಅದ್ಭುತ ವಿಶ್ವದಲ್ಲಿ ಅವತರಿಸುವ೦ತೆ ಮಾಡಿದ್ದಕ್ಕಾದರೂ…

ಇಲ್ಲಿ ಪ್ರಶ್ನೆ ಇರೋದು ಅಮ್ಮ ನಮಗೆ ಯಾಕೆ.? ಇಷ್ಟ ಅನ್ನೋದಲ್ಲ. ಅಮ್ಮಂಗೆ ನಾವು ಅ೦ದ್ರೆ ಯಾಕೆ ಅಷ್ಟು ಇಷ್ಟ ಅನ್ನೋದು. ಹಿ೦ಗೆ ಸ೦ಶೋಧನೆ ಮಾಡುತ್ತಿದ್ದೆ. ” ಇನ್ನೂರ ಐವತ್ತಕ್ಕೂ ಜಾಸ್ತಿ ದಿನ ತನ್ನ ಒಡಲೊಳಗೆ ಬೆಚ್ಚಗೆ ಮಲಗಿಸಿಕೊ೦ಡಿರುವಾಗ ಇದು ನನ್ನ ಸ್ವತ್ತು, ನಾನು ಇದರ ವಾರಸುಧಾರಿಣಿ, ಇದರ ಸರ್ವಾ೦ಗೀಣ ಉದ್ಧಾರ ನನ್ನ ಜನ್ಮ ಸಿದ್ಧ ಕರ್ತವ್ಯ, ಎ೦ದೆಲ್ಲಾ ತನಗೆ ತಾನೇ ಸ್ವಯಂ ಸಿದ್ಧಾ೦ತಗಳನ್ನು ಹಾಕಿಕೊ೦ಡುಬಿಡುವಳು.ಬಹುಶಃ ಅವಳ ಮೋಹದ ಕೊ೦ಡಿ ಇಲ್ಲಿ೦ದ ಪ್ರಾರ೦ಭ ಆಗುತ್ತೆ ಅನ್ನೋದು ನನ್ನ ಅ೦ಬೋಣ “.
 
ಹೀಗೆ ಜನರಲ್ ಆಗಿ ಅಮ್ಮಂದಿರ ಬಗ್ಗೆ ಬರೆಯೋದಕ್ಕಿ೦ತ , ಅಮ್ಮನ  ಕಾಳಜಿಯ ಬೆಚ್ಚನೆಯ ಹೊದಿಕೆಯೊಳಗೆ ಕಳೆದ ಹಲವು ಸನ್ನಿವೇಶಗಳನ್ನು ಬರೆಯುತ್ತಾ ಅಮ್ಮನ ಚಿತ್ರವನ್ನು ಬಿಡಿಸ ಬಯಸುತ್ತೇನೆ. ತು೦ಬಾ ವೈಯಕ್ತಿಕ ಅನ್ನಿಸಿದರೂ ಸ್ವಾರಸ್ಯ ಇರುವುದರಿ೦ದ ಹೇಳಿಕೊಳ್ಳಲು ಅ೦ಜಿಕೆ ಇಲ್ಲ. ಮು೦ದುವರೆಯೋಣ
********** 1**********

ಮತ್ತಷ್ಟು ಓದು »

13
ಜೂನ್

೨೦೦೦೦೦ ಲಕ್ಷ ಹೆಜ್ಜೆಗಳ ದಾಟಿದ ನಿಮ್ಮ ನಿಲುಮೆ.. !

ಪ್ರೀತಿಯ ಗೆಳೆಯರೇ,

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು.

ಇಲ್ಲಿ ಒಂದಿಷ್ಟು ಹಾಸ್ಯ,ಹತಾಶೆ,ನೋವು,ಸಿಟ್ಟು,ಸೆಡವು,ಪ್ರಚಲಿತ ವಿದ್ಯಮಾನಗಳು,ಕಥೆ-ವ್ಯಥೆಗಳು,ಇತಿಹಾಸ, ದೇಶ, ಭಾಷೆ,ಧರ್ಮ,ಸಿನೆಮ,ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ.

  ಮತ್ತಷ್ಟು ಓದು »

13
ಜೂನ್

ಅಕೌಂಟ್ಸ್ ಮತ್ತು ಫ್ಯೆನಾನ್ಸ್ – ಅನುಭವಿಗಳು – ಕನ್ನಡಿಗರಿಗೆ ಆದ್ಯತೆ

-ಅರವಿಂದ್

ಅಕೌಂಟ್ಸ್ ಮತ್ತು ಫ್ಯೆನಾನ್ಸಿನಲ್ಲಿ ಕನಿಷ್ಟ ೩ ರಿಂದ ೪ ವರ್ಷಗಳ ಅನುಭವಿಗಳು ಬೇಕಾಗಿದ್ದಾರೆ.

 

ಶಿಕ್ಷಣ ಅರ್ಹತೆ : ಬಿ,ಕಾಂ, ಎಂ.ಕಾಂ.

ಮತ್ತಷ್ಟು ಓದು »

12
ಜೂನ್

ಪತ್ರಿಕಾ ಪ್ರಕಟಣೆ : ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ

(ಬೆಂಗಳೂರು, ಮೆ ೨೯, ೨೦೧೨): ವಿಕಿಪೀಡಿಯ ವಿಶ್ವಕೋಶದ ಕನ್ನಡದ ಅವತರಣಿಕೆಯಾದ ಕನ್ನಡ ವಿಕಿಪೀಡಿಯವು (http://kn.wikipedia.org) ಇದೇ ಜೂನ್ ೧೨ ರಂದು ೯ ವರ್ಷಗಳನ್ನು ಪೂರೈಸಲಿದೆ. ಈ ವಿಶೇಷ ದಿನವನ್ನು ಆಚರಿಸಲು ವಿಕಿಪೀಡಿಯನ್ನರ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ.

ವಿಕಿಪೀಡಿಯವು ವಿವಿಧ ವಿಷಯಗಳ ಬಗ್ಗೆ ೪೦ ಲಕ್ಷಕ್ಕಿಂತ ಹೆಚ್ಚು ಲೇಖನಗಳನ್ನು ಹೊಂದಿರುವ, ೪೮.೯ ಕೋಟಿ ಜನರಿಂದ ಓದಲ್ಪಡುತ್ತಿರುವ ಒಂದು ಆನ್‌ಲೈನ್ ಸ್ವತಂತ್ರ ವಿಶ್ವಕೋಶ. ಇದು ವಿಶ್ವದಲ್ಲೇ ಅತಿ ಹೆಚ್ಚು ಜನರು ಭೇಟಿ ಕೊಡುವ ತಾಣಗಳಲ್ಲಿ ೫ನೆಯದು. ಇದು ಕನ್ನಡವೂ ಸೇರಿದಂತೆ ೨೦ ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಕನ್ನಡ ವಿಕಿಪೀಡಿಯವು ೧೨,೦೦೦ಕ್ಕಿಂತ ಹೆಚ್ಚು ಲೇಖನಗಳನ್ನು ಹೊಂದಿದ್ದು, ಪ್ರತಿ ತಿಂಗಳು ೧೧.೫ ಲಕ್ಷ ಜನ ಸಂದರ್ಶಕರನ್ನು ಹೊಂದಿದೆ. ಬಹಳಷ್ಟು ಜನರಿಗೆ ತಿಳಿಯದ ವಿಷಯವೆಂದರೆ ವಿಕಿಪೀಡಿಯವು ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಸ್ವಯಂಸೇವಕರ ಕಾಣಿಕೆಯಿಂದ ಕೂಡಿದೆ. ಪ್ರಸ್ತುತ, ವಿಶ್ವಾದ್ಯಂತ ೨೭ ಸ್ವಯಂಸೇವಕರು ಕನ್ನಡ ವಿಕಿಪೀಡಿಯಕ್ಕೆ ಕಾಣಿಕೆ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ಓದು »

11
ಜೂನ್

ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

-ರಾಕೇಶ್ ಎನ್ ಎಸ್
 
ಭಾರತ ೨೦೦೭ರಲ್ಲಿ ವಿಶ್ವ ಟೆಂಟಿ ಟ್ವೆಂಟಿ ಚಾಂಪಿಯನ್ ಆದ ಕುರುಹಾಗಿ ಮತ್ತು ಜೀ ಸಮೂಹದ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸಡ್ಡು ಹೊಡೆಯಲಿಕ್ಕಾಗಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಅಕಾಲದಲ್ಲಿ ಜನ್ಮ ತಾಳಿ ಐದು ವರ್ಷ ಸಂದಿದೆ. ’ಶುದ್ಧ ಕ್ರಿಕೆಟ್’ ಎಂಬುದು ಐಪಿಎಲ್‌ನ ಜಾತಕದಲ್ಲೇ ಬರೆದಿಲ್ಲ ಎಂಬುದು ಈ ಪಂಚ ವರ್ಷದಲ್ಲೆ ಸಾಬೀತಾಗಿದೆ.
ಭಾರತ ಟ್ವೆಂಟಿ-ಟ್ವೆಂಟಿ ವಿಶ್ವ ಚಾಂಪಿಯನ್ ಆದದ್ದು ಒಂದೇ ಐಪಿಎಲ್‌ನ ಉಗಮಕ್ಕೆ ಕಾರಣವಾಗಿರಲಿಲ್ಲ. ಭಾರತದಲ್ಲಿ ಕ್ರಿಕೆಟ್‌ನ ಏಕಸ್ವಾಮ್ಯ ಹೊಂದಿರುವ ಬಿಸಿಸಿಐಯ ಅಧಿಪತ್ಯಕ್ಕೆ ಜೀ ಸಮೂಹದ ಸುಭಾಶ್ ಚಂದ್ರ ಐಸಿಎಲ್‌ನ ಮೂಲಕ ಕೊಡಲಿಯೇಟು ನೀಡಿದಾಗ ತನ್ನ ಕ್ರಿಕೆಟ್ ಕೊಪ್ಪರಿಗೆ ಇನ್ನೊಬ್ಬರ ಪಾಲಾಗುವುದನ್ನು ಯಾವುದೇ ಬೆಲೆ ತೆತ್ತು ತಪ್ಪಿಸಬೇಕು ಎಂಬ ಬಿಸಿಸಿಐ ಯೋಚನೆಯೇ ಐಪಿಎಲ್‌ನ ತಳಪಾಯ. ಉಳಿದಂತೆ ಕ್ರಿಕೆಟಿಗರ ಉದ್ಧಾರ, ಮನರಂಜನೆ ಮುಂತಾದ ಬಿಸಿಸಿಐ
ಹೇಳಿಕೆಗಳು ಸುಮ್ಮನೆ ತೋರಿಕೆಯದ್ದು ಅಷ್ಟೆ.
 
ಟ್ವೆಂಟಿ-ಟ್ವೆಂಟಿ ನಿಂತಿರುವುದೇ ಹೊಡಿ ಬಡಿ ಸಿದ್ಧಾಂತದ ಮೇಲೆ. ಕ್ರಿಕೆಟ್‌ನ ಮೂಲ ಧರ್ಮಕ್ಕೆ ಇದು ವಿರುದ್ಧವಾದರೂ ಕಾಲ ಧರ್ಮಕ್ಕನುಗುಣವಾಗಿ ಈ ಸಂಸ್ಕ್ರತಿಯನ್ನು ಒಪ್ಪಿಕೊಂಡರೆ ಅದರಲ್ಲಿ ತಪ್ಪೇನಿಸಲಾಗದು. ಆದರೆ ಕ್ರಿಕೆಟ್ ಎಂಬ ಆಟ ಉದ್ದಿಮೆಗಳ ತೆಕ್ಕೆಗೆ ಸೇರಿಕೊಂಡಾಗ ಉಂಟಾಗುವ ಉತ್ಪಾತಗಳು ಮಾತ್ರ ಸಹ್ಯವಾಗಿಲ್ಲ. ಮನರಂಜನೆ ಮತ್ತು ವ್ಯಾಯಾಮ ಕ್ರೀಡೆಯ ಎರಡು ಕಣ್ಣುಗಳಿದ್ದಂತೆ. ಮನರಂಜನೆ ಆಡುವವನಿಗೆ ಮತ್ತು ನೋಡುವವನಿಗೆ ಹಾಗೆ ವ್ಯಾಯಾಮ ಆಡುವವನಿಗೆ ಸಿಗುತ್ತದೆ. ಆದರೆ ವೃತ್ತಿಪರ ಆಟಗಾರರಿಗೆ ಪ್ರತ್ಯೇಕವಾದ ವ್ಯಾಯಾಮವೇ ಇರುತ್ತದೆ. ನಮ್ಮಂತವರಿಗೆ ಮಾತ್ರ ಆಡುವುದೇ ವ್ಯಾಯಾಮ! ಅದ್ದರಿಂದ ಯಾವುದೇ ವೃತ್ತಿಪರ ಆಟಗಾರನಿಗೆ ಆತ ನಮ್ಮ ಮುಂದೆ ನೀಡುವ ಪ್ರದರ್ಶನ ಆತನಿಗೆ ವ್ಯಾಯಾಮ ಮತ್ತು ಮನರಂಜನೆಯಾಗಿ ಮುಖ್ಯವಾಗುವುದಕ್ಕಿಂತ ನೋಡುಗನಿಗೆ ಅದು ನೀಡುವ ಮನರಂಜನೆಯಷ್ಟೆ ಪ್ರಮುಖವಾಗುತ್ತದೆ. ಐಪಿಎಲ್ ನಂತಹ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರ ಎಷ್ಟು ಮನರಂಜನೆ ನೀಡಬಲ್ಲ ಎಂಬುದರ ಮೇಲೆ ಅತನ ಹಣದ ಜೋಳಿಗೆ ತುಂಬುತ್ತದೆ. ಅದ್ದರಿಂದ ಇಲ್ಲಿ ಒಬ್ಬ ಆಟಗಾರ ಪ್ರದರ್ಶಕನಾಗಿ ಮುಖ್ಯನಾಗುತ್ತಾನೆಯೇ ಹೊರತು ಆತನ ಕೌಶಲ್ಯಗಳಿಂದಾಗಿ ಅಲ್ಲ. ಮತ್ತಷ್ಟು ಓದು »