ವಿಷಯದ ವಿವರಗಳಿಗೆ ದಾಟಿರಿ

Recent Articles

5
ಫೆಬ್ರ

ಭಾರತದಲ್ಲಿ ವಿದ್ಯಾರ್ಥಿ ಆಂದೋಲನಗಳು – ಒಂದು ವಿಮರ್ಶೆ

– ಬಿ.ಜಿ.ಕುಲಕರ್ಣಿ,ಸಹಾಯಕ ಪ್ರಾಧ್ಯಾಪಕರು
ರಾಜ್ಯಶಾಸ್ತ್ರ ವಿಭಾಗ,ಬಸವಪ್ರಭು ಕೋರೆ ಪದವಿ ಮಹಾವಿದ್ಯಾಲಯ,ಚಿಕ್ಕೋಡಿ, ಜಿ.ಬೆಳಗಾವಿ                                                                   

ದೆಹಲಿ ಪ್ರತಿಭಟನೆಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಅತ್ಯಂತ ಪ್ರಮುಖವಾದ ಪಾತ್ರವಹಿಸಿರುವದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಸ್ವಾತಂತ್ರ್ಯ ನಂತರ ಶಿಕ್ಷಣ ಸುಧಾರಣೆಯ ರೂಪುರೇಷೆಗಳನ್ನು ಸಿದ್ಧಪಡಿಸುವಾಗ ಕೂಡ ಅವರು ಗಮನಾರ್ಹವಾದ ಪ್ರಭಾವವನ್ನು ಬೀರಿದ್ದಾರೆ.  ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಕೂಡ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. 1975-77ರ ತುರ್ತುಪರಿಸ್ಥಿತಿಯ ಅವಧಿಯನ್ನು ಹೊರತುಪಡಿಸಿ ಉಳಿದೆಲ್ಲ ಸಂದರ್ಭಗಳಲ್ಲಿಯೂ ವಿದ್ಯಾರ್ಥಿ ಸಂಘಟನೆಗಳು ತುಂಬಾ ಸಕ್ರೀಯವಾಗಿರುವದನ್ನು ನಾವು ಕಾಣಬಹುದಾಗಿದೆ. ರಾಜ್ಯಶಾಸ್ತ್ರದ ಆಧುನಿಕ ಪರಿಕಲ್ಪನೆಗಳಾದ ಸ್ವಾತಂತ್ರ್ಯ,ಸಮಾನತೆ ಮತ್ತು ಸಹೋದರತ್ವದ ಮಹತ್ವವನ್ನು ಸಾಮಾನ್ಯ ಜನರಲ್ಲಿ ಈ ವಿದ್ಯಾರ್ಥಿ ಸಂಘಟನೆಗಳು ಮೂಡಿಸಿವೆ. ರಾಜಕೀಯ ಅಭಿವೃದ್ಧಿ ಮತ್ತು ಆಧುನೀಕರಣ ಪ್ರಕ್ರಿಯೆಯ ಅಧ್ಯಯನ ಮಾಡುವಾಗ ವಿದ್ಯಾರ್ಥಿ ರಾಜಕೀಯವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಜಾಗತಿಕ ಮಟ್ಟದಲ್ಲಿ ಇಂದು ವಿದ್ಯಾರ್ಥಿ ಚಳುವಳಿಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ಕ್ರಿಯಾಶೀಲತೆಯ ಬಗ್ಗೆ  ಇಲ್ಲಿ ಚರ್ಚಿಸುವದು  ಸೂಕ್ತ.

ಕ್ರಾಂತಿಕಾರಿ ಚಳವಳಿಗಳು ಯಾವತ್ತೂ ಆದರ್ಶಗಳನ್ನು ಹೊಂದಿರುವ ಹಾಗು ಅವುಗಳನ್ನು ಅನುಷ್ಠಾನಗೊಳಿಸಬೇಕೆಂಬ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳ ಬೆಂಬಲವನ್ನು ಬಯಸುತ್ತವೆ. ಅದಕ್ಕಾಗಿಯೇ ಸಿ. ರೈಟ್ ಮೀಲ್ಸ್ ಎಂಬ ವಿದ್ವಾಂಸರು “ಹೊಸ ಕ್ರಾಂತಿಕಾರಿ ಚಳವಳಿಗೆ ಬುದ್ಧಿಜೀವಿಗಳು ಹಾಗು ವಿದ್ಯಾರ್ಥಿಗಳು ಮಾತ್ರ ಒಂದು ಭದ್ರವಾದ ಅಡಿಪಾಯ ಹಾಕುತ್ತಾರೆ” ಎಂದಿದ್ದಾರೆ. ಇವರ ವಿಚಾರಗಳಿಗೆ ಪೂರಕವಾಗಿ ಎಸ್.ಎಮ್.ಲಿಪ್‍ಸೆಟ್ “ಭವಿಷ್ಯತ್ತಿನ ರಾಜಕೀಯವನ್ನು ವಿಶ್ಲೇಷಣೆ ಮಾಡುವಾಗ ವಿದ್ಯಾರ್ಥಿಗಳನ್ನು ಕಡೆಗಣಿಸುವುದು ಮಹಾ ಪ್ರಮಾದಕ್ಕೆ ದಾರಿ ಮಾಡಿ ಕೊಡುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಲೀಬ್‍ಮ್ಯಾನ್ ವಾಕರ್ ಮತ್ತು ಗ್ಲೇಜರ್ ಜಗತ್ತಿನಾದ್ಯಂತ ಶಾಂತಿ ಕದಡುವ, ಸಾಂಪ್ರದಾಯಿಕ ಮೌಲ್ಯಗಳನ್ನು ಹಾಗು ಅಸ್ತಿತ್ವದಲ್ಲಿರುವ ಸರಕಾರಗಳನ್ನು ಪ್ರಶ್ನಿಸುವ ಎರಡೇ ಎರಡು ಗುಂಪುಗಳೆಂದರೆ ಬುದ್ಧಿಜೀವಿಗಳು ಮತ್ತು ವಿದ್ಯಾರ್ಥಿಗಳು” ಎಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ.

ಮತ್ತಷ್ಟು ಓದು »

4
ಫೆಬ್ರ

ಒಂದು ಸಾವು ತೋರಿಸಿದ ಜಗತ್ತಿನ ಕರಾಳ ಮುಖಗಳು!

– ಸಂಕೇತ್ ಡಿ ಹೆಗಡೆ

ರೋಹಿತ್ ವೆಮುಲಾಆವತ್ತು ಗೆಲೆಲಿಯೋ ಹೇಳಿದ್ದಿಷ್ಟೆ… “ನೀವು ಅಂದುಂಕೊಂಡಂಗೆ ಭೂಮಿ ಚಪ್ಪಟೆ ಇಲ್ರಪಾ.. ಅದು ಗೋಳಾಕಾರವಾಗಿದೆ” ಅಂತ. ಅವತ್ತಿನ ಕ್ಯಾಥೋಲಿಕ್ ಚರ್ಚ್ ಕೆಂಡಾಮಂಡಲವಾಯಿತು. ಏನು ಹೇಳಿದ್ದೇಯೊ ಆ ನಿನ್ನ ಥಿಯರಿಯನ್ನ ಮುಚ್ಚಿಕೊಂಡು ವಾಪಸ್ ತಗಂಬಿಡು ಅಂದಿತು. ಹಿಂದೊಬ್ಬ ಹೀಗೆಯೇ ಹೇಳಿ ಕೊನೆಗೆ ಹೆದರಿಸಿಕೊಂಡು ಸುಮ್ಮನಾಗಿದ್ದ. ಆದರೆ ಗೆಲೆಲಿಯೋ ಸುಮ್ಮನಿರುವ ಜಾಯಮಾನದವನಲ್ಲ. ತನ್ನದೇ ಸರಿ ಅಂದ. ತಾನು ಸಾಕ್ಷ್ಯ ಒದಗಿಸಬಲ್ಲೆ ಅಂದ. “ಈವಯ್ಯ ವಸಿ ಜಾಸ್ತಿ ಹಾರಾಡ್ತಿದಾನೆ” ಅಂತ ಆತನನ್ನು ಗೃಹಬಂಧನದಲ್ಲಿರಿಸಿದರು. ಶಿಕ್ಷೆ ಕೊಟ್ಟರು. ಆದರೆ ಕೊನೆಗೇನಾಯಿತು ಹೇಳಿ, ಸತ್ಯ ಸತ್ತುಹೋಯಿತಾ? ಒಂದಿಷ್ಟು ಅಜ್ಞಾನಿಗಳ ಗುಂಪು ಸುಳ್ಳನ್ನು ನಂಬಿ, ಇತರರನ್ನೂ ನಂಬಿಸಹೊರಟರು ಅಂತ ಭೂಮಿಯೇನಾದರೂ ಪುಸಕ್ಕಂತ ಚಪ್ಪಟೆಯಾಗಿಬಿಟ್ಟಿತಾ? ಇಲ್ಲ. ವಿಷಯಕ್ಕೆ ಬರುವ ಮುನ್ನ ತಮ್ಮನ್ನು ತಾವು ಎಡ ಅಥವಾ ಬಲಪಂಥದವರು ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರಿಗೆ ಈ ಘಟನೆಯನ್ನ ಮತ್ತೊಮ್ಮೆ ಓದಲು ರೆಕಮೆಂಡ್ ಮಾಡುತ್ತೇನೆ. ಅಂದಹಾಗೆ ನೀವು ನಿಮ್ಮ ಪೂರ್ವಗ್ರಹಗಳನ್ನ ಈ ದೇಶದ, ದೇಶದ ಜನರ ಮೇಲೆ ಹೇರಹೊರಟರೆ, ಅದರಲ್ಲಿ ನಿಮಗೆ ಯಶಸ್ಸು ಅಂತ ಸಿಕ್ಕರೆ, ಅದು ತಾತ್ಕಾಲಿಕ ಅಷ್ಟೆ. ಸತ್ಯವೇನು ಅಂತ ದೇಶವಾಸಿಗಳಿಗೆ ಒಂದಲ್ಲ ಒಂದು ದಿನ ಗೊತ್ತಾಗೇ ತೀರುತ್ತೆ!

ಭಾರತದ ಬಗ್ಗೆಯೊಂದು ಓಬಿರಾಯನ ಕಾಲದ ಪೂರ್ವಗ್ರಹವಿದೆ. “ಭಾರತದಲ್ಲಿ ದಲಿತರನ್ನು ತೀರಾ ಹೀನಾಯವಾಗಿ ನಡೆಸಿಕೊಳ್ಳಲಾಗತ್ತೆ. ಸಮಾಜದ ಸ್ತರಸ್ತರದಲ್ಲೂ ತಾರತಮ್ಯದ ಕಬಂಧಬಾಹುಗಳು ಕಾಣಸಿಗುತ್ತವೆ” ಅಂತ! ನಾನು ಒಪ್ಪಿಕೊಂಡು ಬಿಡುತ್ತೇನೆ. ಭಾರತದಲ್ಲಿ ತಾರತಮ್ಯ ಇತ್ತು. ಯಾಕೆ, ಅಸ್ಪೃಶ್ಯತೆ ಎಂಬ ನಾಚಿಗೇಡಿನ ಆಚರಣೆಯೂ ಇತ್ತು. ಯೆಸ್, ಮೇಲ್ವರ್ಗದವರು ಕೆಳವರ್ಗದವರನ್ನ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ, ಅವರನ್ನು ಹಿಂಸಿಸುತ್ತಿದ್ದ ಕಾಲವೊಂದು ಇತ್ತು. ಒಬ್ಬ ಮೇಲ್ವರ್ಗದಲ್ಲಿ ಜನಿಸಿದ ಹುಡುಗನಾಗಿ ಇವತ್ತು ನಾನು ಆ ಕಾಲದಲ್ಲಿ ನಡೆದುಹೋದ ಆ ಕೊಳಕು ಆಚರಣೆಗಳ ಓದಿ ನಾಚಿಕೆಯಿಂದ ತಲೆತಗ್ಗಿಸುತ್ತೇನೆ! ಇವತ್ತಿಗೂ ತಾರತಮ್ಯ ಸಂಪೂರ್ಣವಾಗಿ ತೊಲಗಿಲ್ಲ ಬಿಡಿ. ನಗರ ಭಾರತದಲ್ಲಿ ತೊಲಗಿದೆ. ಮುಂದುವರಿದ ಗ್ರಾಮೀಣ ಭಾರತದಲ್ಲೂ ಬಹುತೇಕ ಸತ್ತಿದೆ. ಆದರೆ ಹಿಂದುಳಿದ ಪ್ರದೇಶಗಳಲ್ಲಿ ಇನ್ನೂ ಜೀವಂತವಿದೆ. ಆದರೆ ಈ ಪ್ರಗತಿಪರರು ಅನಿಸಿಕೊಂಡಿರುವವರು ಇವತ್ತು ಬೀದಿಬೀದಿಯಲ್ಲಿ ಬೊಂಬ್ಡಾ ಬಜಾಯಿಸುತ್ತಿರುವಂತೆ ಕತ್ತು ಹಿಸುಕುವ ತಾರತಮ್ಯವೇನು ಸಮಾಜದ ಮುಖ್ಯವಾಹಿನಿಯಲ್ಲಿ ಇಲ್ಲ. ಇವತ್ತು ದಲಿತರಿಗೆ ಪ್ರತಿಯೊಂದರಲ್ಲೂ ಸಾಕುಬೇಕಷ್ಟು ಮೀಸಲಾತಿ ಒದಗಿಸಿ, ಅವರು ಸಮಾಜದಲ್ಲಿ ಎಲ್ಲಾ ಸ್ಥಾನಗಳಲ್ಲೂ ಮಿಂಚುವಂತೆ ಈ ಸಮಾಜ ನೋಡಿಕೊಂಡಿದೆ.  ಇವತ್ತೇನು ನಡೆಯುತ್ತಿದೆ ಅಂತ ನಾವು ಓದಿ ತಿಳಿಯಬೇಕಿಲ್ಲ. ಕಣ್ಣಿದ್ದವರಿಗೆಲ್ಲ ಕಾಣಿಸುತ್ತೆ. ಇದೇ ‘ಜಾತ್ಯತೀತ’ ರಾಷ್ಟ್ರದಲ್ಲಿ ಚಿಕ್ಕವನಿದ್ದಾಗಿನಿಂದ ಇಲ್ಲಿಯವರೆಗೂ ನನ್ನ ಜಾತಿಯ ಕಾರಣಕ್ಕಾಗಿ ಅರ್ಹತೆಯಿದ್ದರೂ ಅನೇಕ scholarshipಗಳಿಂದ ವಂಚಿತನಾದವನು ನಾನು.ಆತ ಅನುಕೂಲಸ್ಥ ಕುಟುಂಬದವನೇ ಆದರೂ, ಓದುವ ಸಕಲ ಸುವರ್ಣಾವಕಾಶಗಳಿದ್ದರೂ ಓದದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನನಗಿಂತ ಬಹಳ ಕೆಟ್ಟ rank ತೆಗೆದವ ನನ್ನದೇ ಕಾಲೇಜಿನಲ್ಲಿ ಓದುವುದನ್ನು ಕಂಡೂ ಕಾಣದಂತೆ ಸುಮ್ಮನಿರುವವ ನಾನು. ನನ್ನಷ್ಟೇ ಅಂಕಗಳನ್ನು ಪಡೆದರೂ, ನನ್ನ ಕಾಲೇಜಿನ ಹತ್ತುಪಟ್ಟು ಒಳ್ಳೆಯ ಸ್ಥಾನವಿರುವ ಕಾಲೇಜಿನಲ್ಲಿ, ನಾನು ಕೊಡುವ ಅರ್ಧ ಫೀಯನ್ನೂ ಕೊಡದೆ ಓದುವವರ ಕಂಡು ಆದ ಬೇಸರವ ಹೊಟ್ಟೆಯಲ್ಲಿ ನುಂಗಿಕೊಂಡು ಓದುತ್ತಿರುವವನು ನಾನು. ನನ್ನ ಜಾತಿಯ ಕಾರಣಕ್ಕಾಗಿ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾದ ಕುಟುಂಬಕ್ಕೆ ಸೇರಿದವನು ನಾನು. So, for your kind information ಭಾರತದಲ್ಲಿ ದಲಿತರ ಮೇಲೆ ಮಾತ್ರ “ಅಮಾನವೀಯ” “ಸೋ”ಸಣೆಯಾಗುತ್ತಿದೆ ಅಂತ ನನ್ನ ಮುಂದೆ ಪುಂಗಿ ಓದುವ ಅವಶ್ಯಕತೆ ಇಲ್ಲ.
ಮತ್ತಷ್ಟು ಓದು »

1
ಫೆಬ್ರ

ದೇವಾಲಯ ಪ್ರವೇಶದ ಕುರಿತು ತಪ್ಪು ತಿಳಿವಳಿಕೆಗಳು

– ಡಾ. ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ,ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಶನಿಸಿಂಗಾಣಪುರಇಂದು ಎರಡು ವಿಭಿನ್ನ ಸ್ಥಳಗಳಲ್ಲಿ ದೇವಾಲಯಗಳಿಗೆ ಸ್ತ್ರೀಯರ ಪ್ರವೇಶದ ಕುರಿತು ಹೋರಾಟಗಳು ನಡೆಯುತ್ತಿವೆ. ಈ ಹೋರಾಟವನ್ನು ನಡೆಸುತ್ತಿರುವವರು ಪ್ರಗತಿಪರರು ಹಾಗೂ ಸ್ತ್ರೀವಾದಿಗಳು. ಈ ಸಂದರ್ಭದಲ್ಲಿ ಅವರು ಎತ್ತುತ್ತಿರುವ ಚರ್ಚೆಯನ್ನು ಗಮನಿಸಿದಾಗ ಭಾರತೀಯ ಸಂಸ್ಕೃತಿಯ ಕುರಿತು ಈ ಮುಂದಿನ ತಪ್ಪು ಕಲ್ಪನೆಗಳು ಅವರಿಗೆ ಇರುವುದು ಸ್ಪಷ್ಟ. ಅದೆಂದರೆ: 1. ಹಿಂದೂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು. 2. ಹಿಂದೂಗಳ ದೇವಾಲಯಗಳು ಚರ್ಚು ಮಸೀದಿಗಳಂತೆ ಹಿಂದೂಗಳ ಸಾರ್ವಜನಿಕ ಪೂಜಾ ಸ್ಥಳಗಳು. ಹಾಗಾಗಿ ಹಿಂದೂ ಮಹಿಳೆಯರಿಗೆ ಇಂಥ ದೇವಾಲಯಗಳಲ್ಲಿ ಬಿಟ್ಟುಕೊಳ್ಳದಿರುವುದು ಲೈಂಗಿಕ ತಾರತಮ್ಯವನ್ನು ಮಾಡಿದಂತೇ ಎಂಬುದು ಅವರ ತರ್ಕ.

ಹಿಂದೂ ಎನ್ನುವುದು ಇಸ್ಲಾಂ ಕ್ರಿಶ್ಚಿಯಾನಿಟಿಗಳಂತೆ ರಿಲಿಜನ್ನಲ್ಲ. ಇದೊಂದು ಬಹು ಸಂಪ್ರದಾಯಗಳ ಸಮಾಜ. ಈ ಸಂಪ್ರದಾಯಗಳಿಗೆ ಆಧಾರವಾಗಿ ಕ್ರೈಸ್ತ ಮುಸ್ಲಿಮರಿಗೆ ಇರುವಂತೆ ಯಾವುದೇ ದೇವವಾಣಿ, ಪವಿತ್ರ ಗ್ರಂಥ ಅಥವಾ ಏಕರೂಪೀ ಡಾಕ್ಟ್ರಿನ್ನುಗಳ ಆಧಾರವಿಲ್ಲ. ಹಾಗಾಗಿ ಇಂಥ ಸಂಪ್ರದಾಯಗಳು ವೈವಿಧ್ಯಪೂರ್ಣವಾಗಿ ಬೆಳೆದುಕೊಂಡಿವೆ. ಹಿಂದೂ ದೇವಾಲಯಗಳು ಚರ್ಚುಗಳಂತೆ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಘಟಕಗಳಲ್ಲ. ಅವು ಹುಟ್ಟಿಕೊಳ್ಳುವುದು,ಅವುಗಳ ಅಭಿವೃದ್ಧಿ,ಜನಪ್ರಿಯತೆ,ನಿರ್ವಹಣೆ,ಅವನತಿ ಇವೆಲ್ಲ ಆಯಾ ಕ್ಷೇತ್ರಗಳ ಕ್ರಿಯಾಶೀಲತೆಗೆ ಸಂಬಂಧಪಟ್ಟ ಖಾಸಗಿ ವಿಚಾರಗಳಾಗಿವೆ. ಅವುಗಳಿಗೆ ಭಕ್ತರು ನಾನಾ ಕಡೆಗಳಿಂದ ಬರುತ್ತಾರೆ ಎಂಬ ಕಾರಣಕ್ಕೆ ಅವು ಸಾರ್ವಜನಿಕವಲ್ಲ. ಏಕೆಂದರೆ ಆ ಭಕ್ತರಿಗೆ ಅಲ್ಲಿ ಬರಲೇಬೇಕೆಂಬ ನಿರ್ಬಂಧವಿಲ್ಲ.ಭಕ್ತರು ಆಯಾ ಕ್ಷೇತ್ರದ ರೀತಿ ರಿವಾಜುಗಳಿಗೆ ಗೌರವಕೊಟ್ಟೇ ಅಲ್ಲಿಗೆ ತಮ್ಮ ಇಷ್ಟಾರ್ಥಗಳನ್ನು ಪಡೆಯಲು ಅಲ್ಲಿಗೆ ಬಂದಿರುತ್ತಾರೆ.ಯಾರಿಗಾದರೂ ಹೊಸ ದೇವಾಲಯವನ್ನು ಕಟ್ಟಿ ಬೆಳೆಸುವ ಆಯ್ಕೆ ಮುಕ್ತವಾಗಿದೆ. ಹಾಗಾಗಿ ನಮ್ಮಲ್ಲಿ ಜಾತಿಗಳಿಗೆ,ಮತಗಳಿಗೆ,ಕುಲಗಳಿಗೆ,ಪ್ರದೇಶಗಳಿಗೆ,ಊರುಗಳಿಗೆ,ಗಲ್ಲಿಗಳಿಗೆ ಪ್ರತ್ಯೇಕದೇವಾಲಯಗಳು ಇರುವುದು.

ಮತ್ತಷ್ಟು ಓದು »

31
ಜನ

ಬುದ್ಧಿಜೀವಿಗಳೆಂಬ ಆಸ್ಥಾನ ವಿದೂಷಕರನ್ನು ಕಡೆಗಣಿಸಬೇಡಿ!

– ರೋಹಿತ್ ಚಕ್ರತೀರ್ಥ

ಕೋತಿ ಮತ್ತು ಬಾಳೆಹಣ್ಣುಜನವರಿ 28ನೇ ತಾರೀಕು ಮೈಸೂರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಒಂದು ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇತ್ತೀಚೆಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮ ಅದು. ವಡ್ಡೇರ ಎಂಬ ಹಿಂದುಳಿದ ಜಾತಿಯ ತಂದೆಗೆ ಹುಟ್ಟಿದ ರೋಹಿತ್, ಹತ್ತು ವರ್ಷಗಳ ಹಿಂದೆಯೇ ಕ್ರಿಶ್ಚಿಯನ್ ಆಗಿ ಮತಾಂತರನಾಗಿದ್ದ ಎಂದು ದಾಖಲೆಗಳು ಹೇಳುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ದಲಿತ ಎಂದು ಬಿಂಬಿಸಿ ಕಾರ್ಯಕ್ರಮ ಮಾಡಿದ್ದರ ಔಚಿತ್ಯ ಏನೋ ಗೊತ್ತಿಲ್ಲ. ಆತನ ಸಾವಿಗೆ ಕುಟುಂಬದೊಳಗಿನ ಜಗಳಗಳೇ ಕಾರಣವಾಗಿದ್ದವು ಎಂದು, ಆತನ ಮನೆಯವರನ್ನು ಸಂದರ್ಶಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವಿಸ್ತೃತವಾದ ವರದಿಯನ್ನು ಪ್ರಕಟಿಸಿದೆ. ಆದಾಗ್ಯೂ ಆತ ತನ್ನ ಕೊನೆಯ ಪತ್ರದಲ್ಲಿ ಬರೆಯದೇ ಇರುವ ವಿಷಯಗಳನ್ನು ತಾವಾಗಿ ಕಲ್ಪಿಸಿಕೊಂಡು ಸಾವನ್ನು ಯಾವ್ಯಾವುದೋ ಸಮಸ್ಯೆಗಳಿಗೆಲ್ಲ ತಗುಲಿ ಹಾಕುವುದಕ್ಕೆ ಬುದ್ಧಿಜೀವಿಗಳು ಮತ್ತು ಮಾಧ್ಯಮದ ಮಂದಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಜುಗರ ತರುವುದೇ ಇವರೆಲ್ಲರ ಏಕೈಕ ಅಜೆಂಡಾ ಎಂಬುದು ಮತ್ತೆಮತ್ತೆ ಸಾಬೀತಾಗಿರುವ ಸತ್ಯ. ತಮ್ಮ ಕಾರ್ಯಸಾಧನೆಗಾಗಿ ಇವರು ಅಂತಾರಾಷ್ಟ್ರೀಯ ವೇದಿಕೆಗಳನ್ನು ಕೂಡ ನಿರ್ಲಜ್ಜೆಯಿಂದ ಬಳಸಿಕೊಳ್ಳಬಲ್ಲರು. ಬಿಬಿಸಿ ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ರೋಹಿತ್ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ಭಾರತದ ಮಾನ ಹರಾಜು ಹಾಕಿದ್ದೇ ಇದಕ್ಕೊಂದು ಜ್ವಲಂತ ನಿದರ್ಶನ.

ಇರಲಿ, ಆತನ ಸಾವಿಗೆ ಮಾನವೀಯ ನೆಲೆಯಲ್ಲಿ ದಲಿತ ಒಕ್ಕೂಟ ಕಾರ್ಯಕ್ರಮ ಯೋಜಿಸಿತ್ತು ಎಂದೇ ಹೇಳೋಣ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಬ್ಬರು ಘನ ಅತಿಥಿಗಳು ಆಡಿದ ಮಾತುಗಳಿಗೂ ಕಾರ್ಯಕ್ರಮದ ಆಶಯಕ್ಕೂ ತಾಳಮೇಳವೇ ಇರಲಿಲ್ಲ! ಒಬ್ಬ ಅತಿಥಿ ಕೆ.ಎಸ್. ಭಗವಾನ್, “ತ್ರೇತಾಯುಗದ ರಾಮನಿಗೆ ತನ್ನ ಪುರುಷತ್ವದ ಬಗ್ಗೆಯೇ ಸಂಶಯ ಇತ್ತು. ಹಾಗಾಗಿ ಎರಡು ಸಲ ಸೀತೆಯನ್ನು ಪರೀಕ್ಷೆಗೆ ಗುರಿಪಡಿಸಿದ. ಆ ಕಾಲದಲ್ಲಿ ಮಹಿಳೆಯರಿಗೂ ಆಸ್ತಿಯ ಹಕ್ಕು ಇದ್ದರೆ ಸೀತೆ ರಾಮನ ಜೊತೆ ವನವಾಸಕ್ಕೆ ಹೋಗುತ್ತಿರಲಿಲ್ಲ” ಎಂದರು. ಮುಂದುವರಿದು, “ರಾಮ ತನ್ನ ಪಟ್ಟಾಭಿಷೇಕದ ಕಾಲದಲ್ಲಿ 38 ಕೋಟಿ ರುಪಾಯಿಯ ಚಿನ್ನದ ನಾಣ್ಯಗಳನ್ನು ಪುರೋಹಿತರಿಗೆ ಕೊಟ್ಟ. ಹಾಗಾಗಿ ಪುರೋಹಿತಶಾಹಿಗಳು ರಾಮರಾಜ್ಯ ಬರಲಿ ಎನ್ನುತ್ತಿದ್ದಾರೆ” ಎಂಬ ಆಣಿಮುತ್ತುಗಳನ್ನು ಉದುರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎರಡನೇ ಅತಿಥಿ ಅದೇ ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಮಹೇಶ್ ಚಂದ್ರಗುರುಗಳು ಮೋದಿ, ಸ್ಮೃತಿ ಇರಾನಿ, ನೆಹರೂ ಮತ್ತು ವಿವಿಯ ಉಪಕುಲಪತಿ – ಎಲ್ಲರಿಗೂ ಹೋಲ್‍ಸೇಲ್ ಆಗಿ ಅವಾಚ್ಯಶಬ್ದಗಳಿಂದ ಬಯ್ದು ತನ್ನ ತೀಟೆ ತೀರಿಸಿಕೊಂಡರು. ಸಾಲದ್ದಕ್ಕೆ ಹುಚ್ಚ ವೆಂಕಟ್ ಸ್ಟೈಲ್‍ನಲ್ಲಿ ನನ್ ಎಕ್ಕಡಾ ನನ್ ಮಗಂದ್ ಎಂಬೆಲ್ಲ ಮುತ್ತಿನ ಹಾರದಂಥ ಪದಪುಂಜಗಳಿಂದ ತನ್ನ ಮಾತುಗಳನ್ನು ಕಳೆಗಟ್ಟಿಸಿ ಚಪ್ಪಾಳೆ ಗಿಟ್ಟಿಸಿದರು! ಈ ಇಬ್ಬರು ಪುಣ್ಯಾತ್ಮರು ಹೋದಲ್ಲೆಲ್ಲ ಏನು ಮಾತಾಡುತ್ತಾರೆನ್ನುವುದು ಇಡೀ ಜಗತ್ತಿಗೆ ಗೊತ್ತಿರುವಾಗ ಹುಡುಕಿ ಇಂಥವರನ್ನೇ ಕಾರ್ಯಕ್ರಮಕ್ಕೆ ಕರೆಸಿರುವುದನ್ನು ನೋಡಿದರೆ ದಲಿತ ಒಕ್ಕೂಟದ ಮುಖ್ಯ ಉದ್ಧೇಶ ರೋಹಿತ್‍ನಿಗೆ ಶ್ರದ್ಧಾಂಜಲಿ ಅರ್ಪಿಸುವುದಾಗಿರಲಿಲ್ಲ; ವಿವಾದದ ಬೆಂಕಿ ಹಾಕಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವುದು ಮಾತ್ರವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.
ಮತ್ತಷ್ಟು ಓದು »

29
ಜನ

ನಿರ್ಭೀತಿಯೇ ಮೈವೆತ್ತಿರುವ ಆಸಾಮಿ,ಈ ಸುಬ್ರಮಣಿಯನ್ ಸ್ವಾಮಿ!

– ಸಹನಾ ವಿಜಯ್ ಕುಮಾರ್

ಸುಬ್ರಮಣ್ಯ ಸ್ವಾಮಿಸುಬ್ರಮಣಿಯನ್ ಸ್ವಾಮಿ! ಹೆಸರನ್ನು ಕೇಳಿದ ತಕ್ಷಣ ಎಂಥವರೂ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಕ್ರಿಯಿಸಲೇ ಬೇಕು. ಸಿಟ್ಟೋ, ಗೊಂದಲವೋ, ಹೆಮ್ಮೆಯೋ, ಪ್ರೀತಿಯೋ ಒಟ್ಟಿನಲ್ಲಿ ಯಾವುದಾದರೊಂದು ಭಾವವಂತೂ ಹೊಮ್ಮಲೇ ಬೇಕು! ಅವರನ್ನು ಉಪೇಕ್ಷೆ ಮಾಡಿ ತಲೆಯನ್ನೊಮ್ಮೆ ಅಡ್ಡಡ್ಡಲಾಗಿ ಕೊಡವಿಕೊಂಡು ಎದ್ದು ಬಿಡುವುದು ಎಂಥವರಿಗೂ ಸಾಧ್ಯವಿಲ್ಲ! ಮೊನ್ನೆ ಜನವರಿ 23ರಂದು ಮೈಸೂರಿನಲ್ಲಿ ಅವರನ್ನು ಭೇಟಿಯಾಗಲು ದೌಡಾಯಿಸುವಾಗ ಮನಸ್ಸಿನಲ್ಲಿ ಹಲವಾರು ಚಿತ್ರಗಳು. ಟಿವಿ ಚಾನೆಲ್‍ಗಳಲ್ಲಿ ವಾದಕ್ಕೆ ನಿಂತಾಗಲೆಲ್ಲ ಗುಂಡು ಹೊಡೆದ ಹಾಗೆ ಮಾತನಾಡುವ, ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಮುಖದ ನೀರಿಳಿಸಿಬಿಡುವ ಅವರನ್ನು ನೇರಾನೇರ ಕಂಡು ಮಾತನಾಡುವ ಕಾತುರ. ಎದುರಿಗೆ ಹೋಗಿ ನಿಂತು ಸುರಿಸಿದ ಪ್ರಶ್ನೆಗಳ ಮಳೆಗೆ ಅವರದ್ದು ಸಿಡಿಲಬ್ಬರದ ಉತ್ತರ. ಸೆಕ್ಯುರಿಟಿಯವರ ಕೈಯಲ್ಲಿದ್ದ ಎಕೆ 47 ಬಂದೂಕನ್ನೂ ನಾಚಿಸುವಂಥ ಮಾತಿನ ವರಸೆ!

‘ಸರ್, ಸೋನಿಯಾ ಪ್ರಧಾನಿಯಾಗುವುದು ಕಾನೂನಿನ್ವಯ ಸಾಧ್ಯವಿಲ್ಲ ಎನ್ನುವ ವಿಷಯ ನೀವು ಹೇಳುವವರೆಗೂ (ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರಿಗೆ ಪತ್ರ ಬರೆದು) ಯಾರಿಗೂ ಗೊತ್ತೇ ಇರಲಿಲ್ಲ, ಯಾವ ಸತ್ಯವನ್ನೇ ಆಗಲಿ ನೀವೇ ಶೋಧಿಸಬೇಕು, ನೀವಲ್ಲದೆ ಬೇರೆ ಯಾರೂ ದಿಕ್ಕಿಲ್ಲ ಎನ್ನುವ ಹಾಗಿಬಿಟ್ಟಿದೆಯಲ್ಲ, ಮುಂದೆ ಹೇಗೆ?’ ಎಂಬ ಕಳಕಳಿಯ ಪ್ರಶ್ನೆಗೆ ಅವರು ನಗುತ್ತಾ ಕೊಟ್ಟ ಉತ್ತರ – ‘ಅಯ್ಯೋ, ನನ್ನ ಕಥೆ ಈಗಲೇ ಮುಗಿದುಹೋಗುತ್ತದೆ ಅಂದುಕೊಂಡುಬಿಟ್ಟಿರೇನು? ಯಾರಿಗೆ ಗೊತ್ತು, ನಾನು ನೂರಿಪ್ಪತ್ತು ವರ್ಷಗಳ ಕಾಲ ಬದುಕಿದರೂ ಬದುಕಬಹುದು’ ಎಂದು! ‘ನಾನೊಬ್ಬ ಸಾಧಾರಣ ಹಿನ್ನೆಲೆಯಿಂದ ಬಂದಂಥ ಮನುಷ್ಯ. ಉಳಿದವರಿಗೂ ನನಗೂ ಇರುವ ಒಂದೇ ವ್ಯತ್ಯಾಸವೆಂದರೆ ನಾನು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ಗಾಂಧೀಜಿಯವರು ಇದ್ದುದೂ ಹಾಗೇ ಅಲ್ಲವೇ?’ ಎಂದು ತಿರುಗಿ ಪ್ರಶ್ನಿಸಿದರು ಸ್ವಾಮಿ.

ಮತ್ತಷ್ಟು ಓದು »

27
ಜನ

ನನ್ನ ಅನ್ನಭಾಗ್ಯ

– ಪ್ರೇಮಶೇಖರ

ತಿಂಡಿಅದು ಆಗಸ್ಟ್ 1984.  ಹದಿನೈದಿಪ್ಪತ್ತು ಕಿಲೋಮೀಟರ್ ದೂರದ ಡೆಲ್ಲಿ ಯೂನಿವರ್ಸಿಟಿಯಲ್ಲಿ ಎಂ.ಎ. ಮುಗಿಸಿ, ಮನೆಯಿಂದ ಐದಾರು ನಿಮಿಷಗಳ ನಡಿಗೆಯಷ್ಟು ಹತ್ತಿರದಲ್ಲಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಸೇರಿದ್ದೆ, ಎಂ.ಫಿಲ್.ಗಾಗಿ.  ಕ್ಲಾಸುಗಳು ಆರಂಭವಾಗಿದ್ದವು.ಮನೆಯಲ್ಲಿ ನಾನೊಬ್ಬನೇ.ಉಳಿದವರೆಲ್ಲಾ ಮೈಸೂರಿಗೆ ಹೋಗಿದ್ದರಿಂದ ಹಾಗೂ ಇನ್ನೊಂದು ತಿಂಗಳವರೆಗೆ ದೆಹಲಿಗೆ ಹಿಂತಿರುಗುವ ಯೋಚನೆ ಅವರ್ಯಾರಲ್ಲೂ ಇಲ್ಲದ್ದರಿಂದ ಅಲ್ಲಿಯವರೆಗೆ ನನ್ನ ಏಕಾಂತವಾಸ ನಿರ್ವಿಘ್ನವಾಗಿ ಸಾಗುವುದು ನಿಶ್ಚಿತವಾಗಿತ್ತು.ಏಕಾಂತವಾಸವೇನೋ ನನಗಿಷ್ಟವೇ.ಓದುತ್ತಾ, ಚಿತ್ರ ಬಿಡಿಸುತ್ತಾ ಕೂತುಬಿಟ್ಟೆನೆಂದರೆ ನನಗೆ ಸುತ್ತಲ ಪ್ರಪಂಚದ ಪರಿವೇ ಇರುತ್ತಿರಲಿಲ್ಲ. ಆದರೆ ಈಗೊಂದು ಪ್ರಾಬ್ಲಂ.  ಸುತ್ತಲ ಜಗತ್ತಿನ ಪರಿವೇ ಇಲ್ಲದಂತೆ ನನ್ನ ಜಗತ್ತಿನಲ್ಲಿ ನಾನಿರಲು ಅವಕಾಶ ಮಾಡಿಕೊಡುತ್ತಿದ್ದುದು ಅಕ್ಕ,ಕಾಲಕಾಲಕ್ಕೆ ಊಟತಿಂಡಿ ಚಾಯ್ ನಿಂಬುಪಾನಿಗಳನ್ನು ಸಪ್ಲೈ ಮಾಡುತ್ತಾ.  ಈಗ…?

ಆದರೆ ಪವಾಡವೊಂದು ಘಟಿಸಿಬಿಟ್ಟಿತು!

ನನ್ನ ಹೊಟ್ಟೆಪಾಡಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಕ್ಕೆ ಮೊದಲೇ ನೆರೆಯ ಮೂವರು ದಯಾದ್ರ ಮಹಿಳೆಯರು ಅಕ್ಕ ಹಿಂತಿರುಗುವವರೆಗೆ ನನ್ನನ್ನು ಜೀವಂತವಾಗಿಡುವ ಜವಾಬ್ದಾರಿಯನ್ನು ಸ್ವಇಚ್ಚೆಯಿಂದ ತೆಗೆದುಕೊಂಡುಬಿಟ್ಟರು.  ಮೂವರೂ ಸೇರಿ ಸಮಾಲೋಚನೆ ನಡೆಸಿ ಮಾಸಿಕ (ಅದರಾಚೆಗೂ ವಿಸ್ತರಿಸಲನುಕೂಲವಾದ ಫ್ಲೆಕ್ಸಿಬಿಲಿಟಿ ಅನುಚ್ಚೇದಗಳನ್ನೊಳಗೊಂಡ) ಯೋಜನೆಯೊಂದನ್ನು ರೂಪಿಸಿಬಿಟ್ಟರು.ಎಲ್ಲ ನಿರ್ಧರಿಸಿಕೊಂಡ ಮೇಲೇ ನನಗೆ ಹೇಳಿದ್ದು.

ಮತ್ತಷ್ಟು ಓದು »

26
ಜನ

ಸುಳ್ಸುದ್ದಿ : ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಅಸ್ತಿತ್ವಕ್ಕೆ

– ಪ್ರವೀಣ್ ಕುಮಾರ್ ಮಾವಿನಕಾಡು

Nilume Sulsuddi - Secular Terror Politicsದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ”ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ”ಅಸ್ತಿತ್ವಕ್ಕೆ ತರಲಾಗಿದ್ದು, ವೇದಿಕೆಗೆ ನೂತನ ಪದಾಧಿಕಾರಿಗಳನ್ನೂ ಸಹಾ ಆಯ್ಕೆ ಮಾಡಲಾಗಿದೆ.ಶಂಕಿತ ಭಯೋತ್ಪಾದಕರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಕೆಲ ಸುಧಾರಣೆಗಳ ಉದ್ದೇಶದಿಂದ ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಯುತ.ಕಾಣೇಶ್ ಜಲ್ಲಿಕಟ್ಟು ಹೇಳಿದರು.ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ವೇದಿಕೆಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರವಾಗಿದ್ದು ಆ ವೈವಿಧ್ಯತೆಯಲ್ಲಿ ಭಯೋತ್ಪಾದನೆಯೂ ಒಂದು ಸಂಸ್ಕೃತಿಯಾಗಿದೆ. ಆದರೆ ಇತ್ತೀಚಿಗೆ ಕೆಲವು ಪರಿವಾರಗಳು ಈ ದೇಶದಲ್ಲಿ ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದು ಭಯೋತ್ಪಾದಕರ ಮೂಲ ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸುತ್ತಿವೆ ಎಂದು ಕಿಡಿಕಾರಿದರು.ಇಂತಹಾ ಸಂದರ್ಭದಲ್ಲಿ ಶಂಕಿತ ಭಯೋತ್ಪಾದಕರಿಗೆ ನೈತಿಕ ಬೆಂಬಲ ಅತ್ಯಗತ್ಯವಾಗಿದ್ದು ಅವರಿಗೆ ಬೆಂಬಲವಾಗಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.ಮುಂದಿನ ತಿಂಗಳು ವೇದಿಕೆಯವತಿಯಿಂದ ಶಂಕಿತ ಉಗ್ರಗಾಮಿಗಳನ್ನು ಸನ್ಮಾನಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮತ್ತಷ್ಟು ಓದು »

25
ಜನ

ರೋಹಿತಾಶ್ವನು ಅಲ್ಲಿಂದ ಬರೆದ ಪತ್ರ

– ವಿಕ್ರಂ ಜೋಷಿ

ಕೊನೆಯ ಪತ್ರನೀವು ಇನ್ನೂ ನನ್ನ ಗುಂಗಿನಲ್ಲೇ ಇದ್ದೀರಂತ ಗೊತ್ತು. ನನ್ನ ಹೆಸರುವಾಸಿ ಮಾಡಿ, ನನ್ನ ವಂಶವನ್ನು ರಸ್ತೆಯಮೇಲೆ ತಂದ ಮಾಧ್ಯಮದವರಿಗೆ,ವೈಚಾರಿಕ ರಾಜಕಾರಣಿಗಳಿಗೇ ಧನ್ಯವಾದಗಳು. ನನ್ನಂತಹವರ ಸಾವಿಗೇ ಕ್ಯಾಮರಾ ಕಟ್ಟಿಕೊಂಡು ಕಾಯುತ್ತಿರುತ್ತಾರೆ.ನಿಜ ಬಯಲಿಗೆ ಬರಲಿ,ನೀವೆಲ್ಲಾ ಓದಲಿ ಅಂತ ಈ ಶೋಕ ಪತ್ರ ಬರೆದಿದ್ದು. ನನಗೆ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ತುಂಬಾ ಬೇಸರವಿದೆ.ನನ್ನದು ನಿಜವಾಗಿಯೂ ಆತ್ಮಹತ್ಯೆ ಅಲ್ಲ, ಕೊಲೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುತ್ತಿರುವ ಈ ದೇಶದ ವಿರುದ್ಧ ಕೆಲ ದೇಶದ್ರೋಹಿಗಳು ಮಾಡುತ್ತಿರುವ ಸಂಚಿಗೆ ನಾನೂ ಒಬ್ಬ ಬಲಿ.ಕಡೆಗಾಲದಲ್ಲಿ ನನಗೆ ಸತ್ಯ ಅರಿವಾದರೂ, ಕಾಲ ಮಿಂಚಿ ಹೋಗಿತ್ತು. ಒಮ್ಮೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವ ಪ್ರವೃತ್ತಿ ನನ್ನದಲ್ಲ, ಇದನ್ನು ನೋಡಿಯೇ ಅಂದು ನನಗೆ ನೀನು ನಮ್ಮ ಮುಂದಿನ ನಾಯಕ ಎಂಬ ಮಹಾದಾಶೆ ತೋರಿಸಿದ್ದರಬೇಕು.

ಕಾಲೇಜಿಗೆ ಸೇರಿದಾಗಿನಿಂದ ನನಗೆ ಒಂದು ದಿನವೂ ಓದಲು ಅವಕಾಶ ಸಿಕ್ಕಿಲ್ಲ.”ನೀನು ಹಿಂದುಳಿದವ ಹಿಂದುಳಿದವ ಹೋರಾಡಬೇಕು”ಎಂಬ ಮಾತನ್ನು ಹೇಳಿ ಹೇಳಿ ನನ್ನ ಮನಸ್ಸು ತಿರುಗಿಸಿ ಬಿಟ್ಟರು,ಮೊದಲೇ ಬಿಸಿ ರಕ್ತದ ಯುವಕ.ನಾನು ನಂಬಿ ಕೆಟ್ಟೆ.ಕಾಲೇಜಿನಲ್ಲಿ ಓದುವುದನ್ನು ನಿಲ್ಲಿಸಿ ಹೀಗೆ ಹೋರಾಡುವುದನ್ನೇ ಮುಖ್ಯ ಭಾಗವಾಗಿ ಪರಿಗಣಿಸತೊಡಗಿದೆ, ಹೋರಾಡಿದ್ದಕ್ಕೆ ಬೇಸರವಿಲ್ಲ ಆದರೆ ಯಾಕೆ ಹೋರಾಡಿದೆ? ಯಾರಿಗೆ ಹೋರಾಡಿದೆ? ಯಾರು ಲಾಭ ಪಡೆದುಕೊಂಡರು? ಇಂದು ನನಗೆ ಅರ್ಥವಾಗುತ್ತಿದೆ, ಇಲ್ಲಿಯ ಮೆಟ್ಟಿಲಿನ ಮೇಲೆ ಕೂತು ನೋಡಿದಾಗ.

ಮತ್ತಷ್ಟು ಓದು »

22
ಜನ

ಆ ದಿನದ ಸಂಚಿಕೆಯಿಲ್ಲ…ತೊಳಲಾಟ ನಿಲ್ಲುವುದಿಲ್ಲ

– ಸಂದೀಪ್ ಶರ್ಮಾ ಮೂಟೇರಿ

ಕನ್ನಡ ಪತ್ರಿಕೆಗಳುವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ ಎಂದು ಮನಸ್ಸಿನಲ್ಲೆ ಹೇಳಿಕೊಂಡು ಹುಡುಕಲು ಯತ್ನಿಸಿದೆ, ಸಿಗಲಿಲ್ಲ. ಸಾಮಾನ್ಯವಾಗಿ ಪೇಪರ್ ಹಾಕುವ ಹುಡುಗ ಮಹಡಿಯ ಮೊಗಸಾಲೆಗೆ ಬಿಸಾಡುವ ಪ್ರಸಂಗ ಹೆಚ್ಚು ಎಂದು ತಿಳಿದು ಮೊಗಸಾಲೆಗೆ ಹೋಗಿ ನೋಡಿದರು ಪತ್ರಿಕೆಯ ಸುಳಿವಿಲ್ಲ. ಧರ್ಮಪತ್ನಿ ಒಗೆದಿದ್ದ ಬಟ್ಟೆಯನ್ನು ಹರಗಲು ಮೊಗಸಾಲೆಗೆ ಆಗಮಿಸಿದಾಗ ನಾನು ಪತ್ರಿಕೆಯವನಿಗಾಗಿ ಕಾಯುತ್ತಿರುವುದನ್ನು ಕಂಡು “ಏನು ಇಲ್ಲಿ ನಿಂತಿದ್ದೀರಿ?” ಎಂದು ಪ್ರಶ್ನಿಸಿದಳು. ನಾನು “ಪತ್ರಿಕೆಯವ ಇನ್ನು ಬರಲಿಲ್ಲವಲ್ಲ” ಎಂದೆ, ಅವಳು ಪುನರುಚ್ಚಿಸಿದಳು “ಎಲ್ರೀ ಬರ್ತಾನೆ, ಇವತ್ತು ಪತ್ರಿಕೆ ಬರೊಲ್ವಲ್ಲ, ನೆನ್ನೆ ಆಯುಧ ಪೂಜೆ ನಿಮಿತ್ತ ರಜೆ ಅಲ್ವೆ? ” ಎಂದಳು. ಹೌದಲ್ಲ, ನೆನ್ನೆ ತಾನೆ ಓದಿದ್ದ ನಾನು ಅಷ್ಟು ಬೇಗ ಮರೆತೆನೆ? ಎಂದು ಹಿಂದಿನ ದಿನದ ಬೆಳಗಿನ ಜಾವದ ಸಂದರ್ಭವನ್ನು ನೆನೆಸಿಕೊಂಡು ಒಳಗೆ ಬಂದೆ. ಬೆಳಗಿನ ಜಾವದ ಅಭ್ಯಾಸಬಲದಿಂದ ಮೊದಲು ಹುಡುಕುವುದೆ ಆ ದಿನದ ದಿನಪತ್ರಿಕೆಯನ್ನು, ವಾಚಕನ ದಿನಚರಿಯೆ ಹಾಗಲ್ಲವೆ?

ಒಳಗೆ ಬಂದರೆ ಕುಳಿತುಕೊಳ್ಳಲಾಗುತ್ತಿಲ್ಲ, ಕಾಫಿ ಹೀರುತ್ತಿದ್ದರು ಅದರ ರುಚಿಯು ಮನಸ್ಸಿಗೆ ನಾಟುತ್ತಿಲ್ಲ, ಅಂತರ್ಜಾಲ ಮೂಲಕ ಈ – ಪೇಪರ್ ಮೂಲಕವಾದರು ಸುದ್ದಿಗಳನ್ನು ತಿಳಿಯೋಣವೆಂದರೆ ಅಲ್ಲಿಯು ಇಲ್ಲ. ಸುದ್ದಿಗಳು ಜಾಲತಾಣದಲ್ಲಿ ದೊರಕುವುದರು ಕೂಡ ಪತ್ರಿಕೆಯನ್ನು ಕೈಯಲ್ಲಿ ಹಿಡಿದಷ್ಟು ಸಂತುಷ್ಟ ಮನೋಭಾವ ಹೊಂದಲು ಸಾಧ್ಯವೇ ಇಲ್ಲ. ವಿಧಿಯಿಲ್ಲದೆ ಹತ್ತು ದಿನಗಳ ಹಿಂದಿನ ಪತ್ರಿಕೆಯನ್ನು ಓದೋಣವೆಂದು ಅಂದುಕೊಂಡು ಹಳೆಯ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಸಕಲ ಸುದ್ದಿಗಳು ಮನನ ಮಾಡಿದಂತೆ ಅದರ ಪದಗಳ ಲಾಲಿತ್ಯವು ಮನಸ್ಸಿಗೆ ನಾಟುತ್ತಿತ್ತು. ಕೂಡಲೇ ಎತ್ತಿಟ್ಟೆ. ನನ್ನ ತೊಳಲಾಟ ನೋಡಲಾರದೆ “ಏನ್ರಿ ! ಮುಖ್ಯವಾದ ವಸ್ತುವನ್ನು ಕಳೆದುಕೊಂಡವರ ತರಹ ಅತೃಪ್ತಿಯನ್ನು ಹೊಂದಿರುವವರಂತೆ ಕಾಣುತ್ತೀರಿ” ಎಂದಳು. “ಇವತ್ತಿನ ದಿನಪತ್ರಿಕೆ ಇಲ್ಲವಲ್ಲೆ” ಎಂದೆ. “ಅಯ್ಯೋ, ನೀವೋ…ನಿಮ್ಮ ದಿನಪತ್ರಿಕೆಯೋ..”ಎಂದು ಮೂದಲಿಸಿದಳು. “ನಿನಗೇನೆ ಗೊತ್ತು ಬಿಸಿ ಬಿಸಿ ಸುದ್ಧಿ ಹೇಳುವ ದಿನಪತ್ರಿಕೆಯ ತೂಕದ ವಿಷಯಗಳು” ಎಂದೆ. ತಲೆಚಚ್ಚಿಕೊಂಡು ತನ್ನ ಕೆಲಸದಲ್ಲಿ ಮಗ್ನಳಾದಳು. ನಾನು ನಿಂತಲ್ಲಿಯೆ ನಿಂತೆ ತೊಳಲಾಟವನ್ನು ಸಹಿಸಿಕೊಂಡು.

ಮತ್ತಷ್ಟು ಓದು »

21
ಜನ

ರೋಹಿತ್‌ ಬದುಕು ಮತ್ತು ಸಾವಿನ ಸುತ್ತ ರಾಜಕೀಯ

– ಇಂಚರ

ರೋಹಿತ್ ವೆಮುಲಾರೋಹಿತ್ ವೆಮುಲಾ – ಆತನ ವಯಸ್ಸು ಸುಮಾರು ೨೭ ವರ್ಷ, ಸಮಾಜ ವಿಜ್ಙಾನದಲ್ಲಿ ರಿಸರ್ಚ್ ಸ್ಕಾಲರ್, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಓದು, ವಿದ್ಯಾರ್ಥಿ ಸಂಘಟನೆಗಳಲ್ಲಿ ಹುರುಪಿನಲ್ಲಿ ಪಾಲ್ಗೊಳ್ಳುತ್ತಿದ್ದವ….. ಇಷ್ಟೆಲ್ಲಾ ಇದ್ದರೂ ಆತ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ?

೨೦೧೦ ರಲ್ಲಿ ಫೇಸ್ ಬುಕ್ಕಿಗೆ ಪ್ರವೇಶ ಪಡೆದ ಅವನು ಮೊದಮೊದಲಿಗೆ ಸಿನೆಮಾ ವಿಡಿಯೋ ತುಣುಕುಗಳನ್ನು, ಹೊಸ ವರ್ಷದ ಶುಭಾಶಯಗಳನ್ನು ಹಾಕಿಕೊಳ್ಳುತ್ತಿದ್ದವ, ನಂತರ ಪ್ರೀತಿ, ಪ್ರೇಮದ ಬಗೆಗಿನ ಪೋಸ್ಟ್ ಗಳು, ಹೆಣ್ಣುಮಕ್ಕಳನೆಲ್ಲಾ ಮೋಸ ಮಾಡುವ ಕ್ಯಾಟಗೆರಿಗೆ ಸೇರಿಸಿ ತಮಾಷೆ ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದವ, ತೀರಾ ಇತ್ತೀಚಿನ ಪೋಸ್ಟ್ ಗಳಲ್ಲಿ ಕೇವಲ ರಾಜಕೀಯಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳನ್ನೇ ಹಾಕಿಕೊಂಡಿರುವುದು ತಿಳಿಯುತ್ತದೆ. ಆತನ ತಂದೆ ಆಸ್ಪತ್ರೆಯೊಂದರಲ್ಲಿ ವಾಚ್ ಮ್ಯಾನ್, ತಾಯಿ ಟೇಲರ್. ಕಡು ಬಡತನದಿಂದ ಬಂದವ ಪಿಹೆಚ್ ಡಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೇರುವುದು ಹರ ಸಾಹಸವೇ ಸರಿ. ಫೇಸ್ ಬುಕ್ಕಿನಲ್ಲಿ ಆತನ ಮನೆಯ ಫೋಟೋಗಳು, ಷೆಡ್ ನಂತಹ ಮನೆ, ಅದರ ಅಡುಗೆ ಮನೆ, ಅಪ್ಪನ ಯೂನಿ ಫಾರ್ಮ್ ನೇತಾಕಿರುವ ಹಗ್ಗ, ಅಮ್ಮನ ಹೊಲಿಗೆ ಯಂತ್ರದ ಫೋಟೋ, ಇವೆಲ್ಲವುಗಳ ಬಗ್ಗೆ ಅತ್ಯಂತ ಭಾವುಕನಾಗಿ ಬರೆದಿರುವ ರೀತಿ ನೋಡಿದಾಗ ಯಾರಿಗಾದರೂ ಆತನ ಭಾವುಕತೆ ಬಗ್ಗೆ ಅರ್ಥವಾಗುತ್ತದೆ. ತಾನಿದ್ದ ಹಾಸ್ಟೆಲಿನಲ್ಲಿ ವಿವೇಕಾನಂದರ ಫೋಟೋ ಮತ್ತು ಸಂದೇಶವನ್ನು ಹಾಕಿಕೊಂಡಿದ್ದವ, ಇದ್ದಕಿದ್ದಂತೆ ಇತ್ತೀಚೆಗೆ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದದ್ದನ್ನು ನೋಡಿದರೆ ಈತನದು ಚಂಚಲ ಮನಸ್ಥಿತಿ ಎಂದು ತಿಳಿಯುತ್ತದೆ. ತನ್ನ ಡೆತ್ ನೋಟ್ ಕೂಡ ಕಾವ್ಯಾತ್ಮಕವಾಗಿ ಬರೆದಿದ್ದಾನೆಯೇ ಹೊರತು ತನ್ನ ಮನೆಯವರ ಬಗ್ಗೆ ಕಿಂಚಿತ್ತೂ ಕೂಡ ಯೋಚಿಸಿಲ್ಲ. ಮನಸ್ಸು ದುರ್ಬಲಗೊಂಡು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಫೇಸ್ ಬುಕ್ ಡೈರಿ ಓದಿದಾಗ ಅಮಾಯಕ ಹುಡುಗನೊಬ್ಬನನ್ನು ನಮ್ಮ ರಾಜಕೀಯ ವ್ಯವಸ್ಥೆ (ಎಡ, ಬಲ, ದಲಿತ ಭೇದವಿಲ್ಲದೆ) ತುಳಿದದ್ದು ಅರ್ಥವಾಗುತ್ತದೆ. ಆತನ ಸಾವಿಗೆ ಇಡೀ ರಾಜಕೀಯ ವ್ಯವಸ್ಥೆ ಒಂದು ರೀತಿಯಲ್ಲಿ ಕಾರಣವಾದರೆ, ಅವನ ಅತಿ ಹೆಚ್ಚಿನ ಭಾವುಕತನ ಕೂಡ ಆತ್ಮಹತ್ಯೆಗೆ ಪ್ರೇರೇಪಿಸಿದೆ

ಮತ್ತಷ್ಟು ಓದು »