ಎಷ್ಟೂ ಅಂತ ಮಾನಸಿಕ ಮಾಲಿನ್ಯ ಹರಡುತ್ತೀರಿ?
– ಜೆಬಿಆರ್ ರಂಗಸ್ವಾಮಿ
ನಮ್ಮ ಸಾಹಿತ್ಯಲೋಕದ ದೇವೇಗೌಡರಾದ ಮಾನ್ಯ ದೇ.ಜವರೇಗೌಡರು ಕ್ರೈಸ್ತರ ಸಭೆಯಲ್ಲಿ ಮಾತಾಡಿದ್ದಾರೆ. ಅಸಮಾನತೆ ಬೋಧಿಸುವ ಹಿಂದೂ ಧರ್ಮದ ಮೇಲೆ ಕೊಂಚವೂ ಗೌರವವಿಲ್ಲವಂತೆ.ಅದು ಧರ್ಮವೇ ಅಲ್ಲವೆಂದು ಕಿಡಿಕಾರಿದರಂತೆ! 25 ವರ್ಷದಿಂದ ಕ್ರಿಸ್ತನನ್ನು ಪೂಜಿಸುತ್ತಿದ್ದಾರಂತೆ ! ಕ್ರಿಸ್ತ ಮಾತ್ರ ಸಮಾನತೆಯನ್ನು ಸಾರಿದ್ದಾರಂತೆ. ಹಿಂದೂಧರ್ಮದವರಿಗೆ ತಾರತಮ್ಯವನ್ನು ಬಿಡಲೂ ಮನಸ್ಸಿಲ್ಲವಂತೆ . . .ಅಂತ ಅದೇನೇನೋ ಹೇಳಿಕೊಂಡು ಸನ್ಮಾನ ಸ್ವೀಕರಿಸಿದ್ದಾರೆ. ( ಪ್ರಜಾವಾಣಿ 30-08-2015 )
ಅವರಿಗೆ ಹಿತವೆನಿಸಿದರೆ ಯೇಸುವನ್ನೋ ಮತ್ತೊಬ್ಬರನ್ನೋ ಆರಾಧಿಸಿಕೊಳ್ಳಲಿ.ಅದು ಅವರ ವೈಯುಕ್ತಿಕ.ಅದನ್ನು ಕಟ್ಟಿಕೊಂಡು ಏನೂ ಆಗಬೇಕಾಗಿಲ್ಲ.ಆದರೆ ಆ ಸಭೆಯಲ್ಲಿ ಅನಗತ್ಯವಾಗಿ ಹಿಂದೂಧರ್ಮವನ್ನು ಹೀಗೆಳೆದು ಮಾತಾಡುವ ಅಗತ್ಯವಿತ್ತೇ? ನೂರುವರ್ಷದ ಬದುಕಿನಲ್ಲಿ ಏನೇನೋ ಓದಿರುವ ಅವರಿಗೆ,ಪ್ರಪಂಚದ ಎಲ್ಲ ಧರ್ಮಗಳಲ್ಲೂ ಅಸಮಾನತೆ,ಕ್ರೌರ್ಯ,ಮೂಢಾಚರಣೆಗಳು ಇರುವುದು ತಿಳಿದೇ ಇಲ್ಲವೇ? ಸರ್ವರನ್ನೂ ಸಮಾನವಾಗಿ ಕಾಣುವ ತತ್ವಬೋಧೆ,ಮೌಲ್ಯಗಳು ಎಲ್ಲಧರ್ಮಗಳಲ್ಲೂ ಇದೆ. ನಿಜ.ಆದರೆ ಅವೇ ಮೌಲ್ಯ ಸಿದ್ಧಾಂತಗಳನ್ನು ಅವು ಇರುವ ಹಾಗೆಯೇ ಸರ್ವರೆಲ್ಲರೂ ಸಮಾನವಾಗಿ ಆಚರಿಸಬಲ್ಲ ಒಂದೇ ಒಂದು ಧರ್ಮ ಯಾವುದಾದರೂ ಈ ಭೂಲೋಕದಲ್ಲಿದೆಯೇ?
ಒಂದು ಸಾವಿನ ಸುತ್ತ ಬುದ್ಧಿಜೀವಿಗಳ ಭೂತಕುಣಿತ
– ರೋಹಿತ್ ಚಕ್ರತೀರ್ಥ
ಕಲ್ಬುರ್ಗಿಯವರ ಸಾವು ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಯಾರೋ ಇಬ್ಬರು ಅಪರಿಚಿತರು ಬೈಕ್ನಲ್ಲಿ ಮನೆವರೆಗೆ ಬಂದು ತಾವು ನಿಮ್ಮ ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಕಲ್ಬುರ್ಗಿ ಎದುರು ಬಂದು ನಿಂತು ಅವರ ಹಣೆಯ ಸಹಸ್ರಾರಕ್ಕೆ ಗುರಿಯಿಟ್ಟು ಗುಂಡು ಹೊಡೆದು ಪರಾರಿಯಾದರು. ಕ್ಷಣಮಾತ್ರದಲ್ಲಿ ಕಲ್ಬುರ್ಗಿ ನೆಲಕ್ಕುರುಳಿದರು. ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸುದ್ದಿ ಭಾನುವಾರದ ಮುಂಜಾನೆ ಹತ್ತೂವರೆ ಹೊತ್ತಿಗೆಲ್ಲ ರಾಜ್ಯಾದ್ಯಂತ ಸಂಚಲನ ಹುಟ್ಟಿಸಿತು. ಕೊಲೆ ಯಾಕಾಗಿ ಆಗಿದೆ, ಯಾರು ಮಾಡಿದ್ದಾರೆ ಎನ್ನುವುದರ ಕುರಿತು ಯಾರಿಗೂ, ಪೋಲೀಸರಿಗೂ ಮಾಹಿತಿ ಇರಲಿಲ್ಲ. ಆದರೆ, ಕೊಲೆ ನಡೆದು ಅರ್ಧತಾಸಿನಲ್ಲೇ ಈ ಕೊಲೆಯನ್ನು ಪೂರ್ವದಲ್ಲೇ ನಿಯೋಜಿಸಿದ್ದವರಂತೆ ಹತ್ತುಹಲವು ಸಾಹಿತಿಗಳು, ಪಂಡಿತರು ಮಾಧ್ಯಮಗಳಲ್ಲಿ ಕಾಣಿಸಿಕೊಂಡು “ಇದಕ್ಕೆ ಸಂಘಪರಿವಾರವೇ ಕಾರಣ. ಕಲ್ಬುರ್ಗಿಯವರ ವಿಚಾರವನ್ನು ಸಹಿಸಿಕೊಳ್ಳಲಾಗದೆ ಶೂಟ್ ಮಾಡಿ ಉಸಿರು ನಿಲ್ಲಿಸಿದ್ದಾರೆ” ಎಂದು ಹೇಳತೊಡಗಿದರು. ಬರಗೂರು ರಾಮಚಂದ್ರಪ್ಪ ಟಿವಿ ಜೊತೆಗೆ ಮಾತಾಡುತ್ತ ಎಷ್ಟೊಂದು ಕರಾರುವಾಕ್ಕಾಗಿ ಈ ಕೊಲೆಯ ವಿವರಗಳನ್ನು ಕೊಟ್ಟರೆಂದರೆ ಅವರೇ ಸಂಘಿಗಳ ಜೊತೆ ಕೂತು ಈ ಕೊಲೆಯನ್ನು ರೂಪಿಸಿದ್ದರೋ ಎಂಬ ಅನುಮಾನ ನೋಡುಗನಿಗೆ ಬರಬೇಕು, ಹಾಗಿತ್ತು! ಅತ್ತ ದೊಡ್ಡ ಬುದ್ಧಿಜೀವಿಗಳು ಟಿವಿ ಮಾಧ್ಯಮದಲ್ಲಿ ತಮ್ಮ ಚಿಂತನೆ ಹರಿಯಬಿಡುತ್ತಿದ್ದರೆ ಇತ್ತ ಮರಿ ಬುದ್ಧಿಜೀವಿಗಳು ಫೇಸ್ಬುಕ್ ಮತ್ತು ಟ್ವಿಟ್ಟರ್ ಮಾಧ್ಯಮಗಳಲ್ಲಿ ಸಂಘಪರಿವಾರ ಮತ್ತು ಕೋಮುವಾದಿಗಳನ್ನು ಹೀಯಾಳಿಸತೊಡಗಿದರು. ಕೆಲವರು ಕಲ್ಬುರ್ಗಿಯನ್ನು ಕೊಂದವನು ಆಧುನಿಕ ಗೋಡ್ಸೆ ಎಂದರು. ಸಂಜೆಯ ಹೊತ್ತಿಗೆ ಮತ್ತೆ ಟೌನ್ಹಾಲಿನೆದರು ಸೇರಿದ್ದ ಪ್ರಗತಿಪರ ಮತ್ತು ತಳಸ್ಪರ್ಶಿ ಚಿಂತಕರಿಗೆ ಯಾರು ಕೊಲೆಗಾರ ಎನ್ನುವುದು ರುಪಾಯಿಗೆ ಹದಿನಾರಾಣೆ ಸ್ಪಷ್ಟವಾಗಿತ್ತು!
ನಮ್ಮದಲ್ಲದ ಭಾರತದ ರಾಜಕೀಯ ಇತಿಹಾಸ
ಡಾ. ಸಂತೋಷ್ ಕುಮಾರ್ ಪಿ.ಕೆ
ಭಾರತದ ಪ್ರಾಚೀನ ಕಾಲದ ರಾಜಕೀಯ ಚಿಂತನೆ ಎಂಬುದು ಬಹುತೇಕವಾಗಿ ರಾಜ್ಯಶಾಸ್ತ್ರಜ್ಞರಿಗೆ ಅಪ್ರಸ್ತುತವಾಗಿದೆ. ಇದಕ್ಕೆ ಪ್ರಧಾನವಾಗಿ ಎರಡು ಕಾರಣಗಳನ್ನು ನೋಡಬಹುದು, ಒಂದು, ಕಾಲಾಂತರದ ಬದಲಾವಣೆ, ಹಾಗೂ ಎರಡು, ನಮ್ಮೆಲ್ಲಾ ರಾಜಕೀಯ ಚಿಂತನೆ ಮತ್ತು ಅಳವಡಿಸಿಕೊಂಡಿರುವ ರಾಜಕೀಯ ವ್ಯವಸ್ಥೆಗಳೆಲ್ಲವೂ ಆಧುನಿಕ ಪಾಶ್ಚಾತ್ಯ ರಾಷ್ಟ್ರಗಳಿಂದ ಪ್ರೇರೇಪಿತವಾಗಿರುವುದರಿಂದ ಭಾರತೀಯ ಚಿಂತನೆಯ ಅಗತ್ಯತೆ ನಮಗೆ ಕಾಣಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮಾತ್ರ ಕೌಟಿಲ್ಯನ ಸಿದ್ಧಾಂತ, ಮಹಾಭಾರತದ ಕೆಲವು ಭಾಗಗಳು, ಹಾಗೂ ಹಲವಾರು ನೀತಿಸಾರಗಳನ್ನು ಪರೀಕ್ಷೆಯ ದೃಷ್ಟಿಯಿಂದ ಓದುತ್ತಿರುತ್ತಾರೆ. ಇದರ ಒಟ್ಟಿಗೆ ಹಲವಾರು ವಿದ್ವಾಂಸರುಗಳೂ ಸಹ ಪ್ರಾಚೀನತೆಯ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೂ ವಿದ್ಯಾರ್ಥಿಗಳ ಓದು, ವಿದ್ವಾಂಸರ ಅಧ್ಯಯನಗಳು ಆಧುನಿಕ ರಾಜಕೀಯ ವ್ಯವಸ್ಥೆಗೆ ಯಾವುದೇ ಕೊಡುಗೆಯನ್ನು ನೀಡುವ ಭರವಸೆಗಳಿಲ್ಲ, ಕಾರಣ ಆಧುನಿಕ ಸಮಸ್ಯೆಗಳಿಗೆ ಆಸಕ್ತಿದಾಯಕವಾದ ಪರಿಹಾರವನ್ನು ಹುಡುಕುವ ಯಾವ ಲಕ್ಷಣಗಳೂ ಸಹ ಗೋಚರಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಪ್ರಾಚೀನ ಭಾರತದ ರಾಜಕೀಯ ಚಿಂತನೆ ಅನಾಸಕ್ತಿಯ ವಿಷಯವಾಗಿಯೇ ಮುಂದುವರಿಯುತ್ತಿದೆ.
ಪ್ರಾಚೀನ ಭಾರತವನ್ನು ಅಧ್ಯಯನ ನಡೆಸುವುದು ಚರಿತ್ರೆಕಾರರ ಕೆಲಸವೇ ಆಗಿದ್ದರೂ ಸಹ, ಅಲ್ಲಿನ ರಾಜಕೀಯ ವಿಚಾರ ಧಾರೆಗಳನ್ನು ಪತ್ತೆಹಚ್ಚುವುದು, ಅಧ್ಯಯನ ನಡೆಸುವುದು ರಾಜ್ಯಶಾಸ್ತಜ್ಞರ ಜವಾಬ್ದಾರಿಯೂ ಹೌದು. ಆದರೆ, ರೊಮಿಲಾ ಥಾಪರ್, ಅಲ್ಟೇಕರ್, ಆರ್.ಎಸ್.ಶರ್ಮಾ, ಡಿ.ಡಿ.ಕೋಸಾಂಬಿ ಇನ್ನೂ ಮುಂತಾದ ‘ಇತಿಹಾಸಕಾರ’ರಿಗೆ ಮಾತ್ರ ಇಂತಹ ಅಧ್ಯಯನಗಳು ಮುಖ್ಯವಾಗುತ್ತಿರುವುದು ಹಾಗೂ ರಾಜ್ಯಶಾಸ್ತ್ರಜ್ಞರುಗಳು ಅದನ್ನು ಅವಗಾಹನೆಗೆ ತಮ್ಮ ತೆಗೆದುಕೊಳ್ಳದೆ ಇರುವುದು ವಾಸ್ತವಾಗಿದೆ. ರಾಜಕೀಯ ಚಿಂತನೆಗಳ ಕುರಿತೇ ಅಧ್ಯಯನ ನಡೆಸುವವರು ಇತಿಹಾಸದ ಚಿಂತನೆಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸದೇ ಹೋದರೆ ಪ್ರಾಚೀನ ರಾಜಕೀಯ ಚಿಂತನೆಗೆ ಪ್ರವೇಶ ದೊರಕುವುದು ಕಷ್ಟಸಾಧ್ಯ.
ಸಲ್ಲೇಖನ ವ್ರತದ ನಿಷೇಧದ ಹಿಂದಿನ ವಸಾಹತುಶಾಹಿ ಪ್ರಜ್ಞೆ
– ಡಂಕಿನ್ ಝಳಕಿ, India Platform
ಸಲ್ಲೇಖನ ವ್ರತದ ಆಚರಣೆ ಆತ್ಮಹತ್ಯೆಗೆ ಸಮಾನ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಉಚ್ಚ ನ್ಯಾಯಾಲಯವು ಈ ವ್ರತವನ್ನು ಕಾನೂನು ಬಾಹಿರವೆಂದು ಘೋಷಿಸಿ, ಇದನ್ನು ಭಾರತೀಯ ದಂಡ ಸಂಹಿತೆ 306 ಹಾಗು 309ರ ಅನುಸಾರ ಶಿಕ್ಷಾರ್ಹ ಅಪರಾಧ ಎಂದು ತೀರ್ಪನ್ನು ನೀಡಿದೆ. ದಂಡ ಸಂಹಿತೆ 306ರ ಪ್ರಕಾರ ಆತ್ಮಹತ್ಯೆಗೆ ಪ್ರೇರಣೆ ನೀಡುವುದು ಮತ್ತು 309ರ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸುವುದು ಎರಡೂ ಶಿಕ್ಷಾರ್ಹ ಅಪರಾಧ. ಈ ಪ್ರಕಾರ ಸಲ್ಲೇಖನ ವ್ರತವನ್ನು ಕೈಗೊಳ್ಳುವ ವ್ಯಕ್ತಿಯ ಜೊತೆಗೆ ಈ ವ್ರತದಲ್ಲಿ ಭಾಗಿಯಾಗುವ ಪ್ರತಿಯೋರ್ವನೂ, ಅಂದರೆ ಇಡಿಯ ಜೈನ ಸಂಪ್ರದಾಯವನ್ನೂ ಬಹುಶಃ ಕಟಕಟೆಗೆ ಎಳೆಯಬಹುದು. ಹೀಗೆ ಭಾರತೀಯ ಸಂಪ್ರದಾಯವೊಂದನ್ನು, ಅದನ್ನು ಆಚರಿಸುವವರನ್ನು ಅಪರಾಧೀ ಸ್ಥಾನಕ್ಕೆ ಎಳೆಯುತ್ತಿರುವುದು (ಕ್ರಿಮಿನಲೈಸ್ ಮಾಡುತ್ತಿರುವುದು) ಇದೇ ಮೊದಲಲ್ಲ. ಕಳೆದ ಸುಮಾರು ಒಂದು ಸಾವಿರ ವರುಷಗಳ ಕಾಲ, ಎರಡು ವಸಾಹತುಶಾಹಿ ಆಳ್ವಿಕೆಗಳಡಿ ಭಾರತೀಯ ಸಂಪ್ರದಾಯಗಳು ಎದುರಿಸಿದ್ದು ಇದೇ ಪರಿಸ್ಥಿತಿ. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ, ಈ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಬದುಕುವ ಹಕ್ಕಿನ ಉಲ್ಲಂಘನೆ ಎಂಬ ಅರ್ಥವಾಗದ ಪಾಶ್ಚಾತ್ಯ ಮತ್ತು ಕ್ರಿಶ್ಚಿಯನ್ ಚಿಂತನೆಯ ಹೆಸರಿನಲ್ಲಿ, ಸಾವಿರಾರು ವರುಷಗಳಿಂದ ನಡೆಯುತ್ತಾ ಬಂದಿರುವ ಭಾರತೀಯರ ಆಧ್ಯಾತ್ಮಿಕ ಆಚರಣೆಗಳನ್ನು ಹೀಗೆ ತುಚ್ಛವಾಗಿ ಕಂಡು ಅವುಗಳ ಸಂಹಾರ ನಡೆಯುತ್ತಿರುವ ಇಂದಿನ ದಿನಗಳಲ್ಲಿ ನಾವು ಮಾಡಬೇಕಾದದ್ದು ಏನು? ಮತ್ತಷ್ಟು ಓದು 
‘ಆತ್ಮಾಹುತಿ’ ಯಿಂದ ಆತ್ಮವಿಮರ್ಶೆ
– ಮನುಶ್ರೀ ಜೋಯಿಸ್
ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆ ಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹ ರೋಮಾಂಚನ. ಪೂರ್ವಜರ ಚರಿತ್ರೆಯೆಂದೆನೋ.. ಪುಸ್ತಕ ಮುಗಿದಾಗ ಮನಸು ತುಂಬಿ ಬರುತ್ತದೆ. ಇನ್ನು ಕೊನೆ ಅಧ್ಯಾಯದ ಪುಟಗಳಲ್ಲಿ ಕಣ್ಣಾಡಿಸುವಾಗ ಬಿಟ್ಟು ಹೋದ ಎಷ್ಟೋ ಹೆಜ್ಜೆ ಗುರುತುಗಳನ್ನು ಹಚ್ಚಿಕೊಂಡು ಬಿಟ್ಟಿರುತ್ತೇವೆ.
ಹೀಗೆ ಪುರಾಣಗಳಂತೆ ಮನಸಿಗೆ ಹತ್ತಿರವಾಗುವ, ಎತ್ತರದಲ್ಲಿ ನಿಲ್ಲುವ ಒಂದು ಅದ್ಭುತ ಕೃತಿ ಶಿವರಾಮುರವರ ‘ಆತ್ಮಾಹುತಿ’. ಇದು 1970 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಪ್ರತಿಯೊಬ್ಬ ಭಾರತೀಯನು ತಿಳಿದಿರಬೇಕಾದ ಇತಿಹಾಸ ಇದು. ಓದಲೇ ಬೇಕಾದ the best book.
ಸ್ವಾತಂತ್ರ್ಯ ವೀರ ಸಾವರಕರ ರವರ ಜೀವನ ಚರಿತ್ರೆ. ಇದನ್ನು ಆತ್ಮಕಥೆಯಂತೆ ನಿರೂಪಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬನ ಉನ್ನತ ಧೇಯ್ಯೋದ್ದೇಶಗಳು ಹೇಗೆ ಮಹಾನ್ ವ್ಯಕ್ತಿತ್ವಕ್ಕೆ ಮೆಟ್ಟಿಲುಗಳಾಗುತ್ತವೆ ಎಂಬುದಕ್ಕೆ ನಿದರ್ಶನವಿದು. ಬಾಲಕನಿದ್ದಾಗ ಚಿಗುರುವ ದೇಶ ಭಕ್ತಿ ಇಡೀ ವಿಶ್ವಕ್ಕೆ ವ್ಯಾಪಿಸುವ ಕಥಾನಕವಿದು. ಹಿಂದುತ್ವದ ಅಮೋಘ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಇವರ ಜ್ಞಾನ ಅಗಾಧ. ಇದೆಲ್ಲವನ್ನೂ ಕೇಳುವುದಕ್ಕಿಂತ ಅನುಭವಿಸ ಬೇಕೆಂದಿದ್ದರೆ ಆತ್ಮಾಹುತಿಯನ್ನು ಓದಲೇಬೇಕು ಬೇಕು.
ಮತ್ತಷ್ಟು ಓದು 
“ನೀನು” ಯಾರು? ಸತ್ಯ ಶೋಧನೆಗೆ ಸಮಿತಿ
– ಪ್ರವೀಣ್ ಕುಮಾರ್ ಮಾವಿನಕಾಡು
ಇತ್ತೀಚೆಗಷ್ಟೇ ವಾಲ್ಮೀಕಿ ಯಾರು ಎನ್ನುವ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಸರ್ಕಾರ, ಹೇಗಾದರೂ ಮಾಡಿ ಮತ್ತೆ ಆ ಪುಸ್ತಕ ಜನರನ್ನು ತಲುಪಲು ಬಿಡಬಾರದು ಎನ್ನುವ ಕಾರಣಕ್ಕಾಗಿ ಆಯ್ದ ವ್ಯಕ್ತಿಗಳಿಂದ ಕೂಡಿದ ಸತ್ಯ ಶೋಧನಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈಗ ಉಪೇಂದ್ರ ನಿರ್ದೇಶಿಸಿ ನಟಿಸಿದ ಉಪ್ಪಿ2 ಚಿತ್ರದಲ್ಲಿ ಬರುವ ‘ನೀನು’ ಅಂದರೆ ಯಾರು ಎನ್ನುವ ಬಗ್ಗೆ ಸತ್ಯಶೋಧನೆ ಕೈಗೊಳ್ಳಲು ಹಂಪೆನಾಗ್ ಅವರ ನೇತೃತ್ವದಲ್ಲಿ ಸರಕಾರ ಇನ್ನೊಂದು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ! ಅಲ್ಲದೇ ಉಪೇಂದ್ರ ಅವರು ತಮ್ಮ ಚಿತ್ರಕ್ಕೆ ಉಪ್ಪಿಟ್ಟು ಎನ್ನುವ ಹೆಸರನ್ನೇ ಏಕೆ ಇಟ್ಟರು,ಬಹುಜನರು ಸೇವಿಸುವ ಇತರ ಮಾಂಸಾಹಾರದ ಹೆಸರನ್ನು ಏಕೆ ಇಡಲಿಲ್ಲ ಎನ್ನುವ ಬಗ್ಗೆಯೂ ಸಮಿತಿ ಚರ್ಚಿಸಿ ಸರ್ಕಾರಕ್ಕೆ ತನ್ನ ವರದಿ ಒಪ್ಪಿಸಲಿದೆ.
ಈ ಮೊದಲು ಕೆಲವು ಕಾರಣಗಳಿಗಾಗಿ ಉಪೇಂದ್ರ ರವರ ಈ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ಸರ್ಕಾರ ಅಂದುಕೊಂಡಿತ್ತಾದರೂ ನಂತರ,ನ್ಯಾಯಾಲಯವು ಸರ್ಕಾರ ಕೊಡಲಿದ್ದ ಕಾರಣಗಳನ್ನು ಒಪ್ಪುವ ಸಾಧ್ಯತೆಗಳು ತೀರಾ ಕಮ್ಮಿ ಎನ್ನುವ ತಜ್ಞರ ಸಲಹೆಯ ಮೇರೆಗೆ ಈ ಸತ್ಯ ಶೋಧನಾ ಸಮಿತಿಯನ್ನು ರಚಿಸಿ ಆ ಸಮಿತಿಯಿಂದ ತಮಗೆ ಬೇಕಾದ ರೀತಿಯಲ್ಲಿ ವರದಿಯನ್ನು ಪಡೆದು ನಂತರ ಚಿತ್ರ ಪ್ರದರ್ಶನ ರದ್ದು ಮಾಡಲು ತೀರ್ಮಾನಿಸಿದೆ.ಆದ್ದರಿಂದ ಶ್ರೀ ಹಂಪೆನಾಗರಾಜು ಅವರ ನೇತೃತ್ವದಲ್ಲಿ ಆರು ಜನ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಮೇಕಿಂಗ್ ಆಫ್ ಸೂಪರ್ಮ್ಯಾನ್
– ರೋಹಿತ್ ಚಕ್ರತೀರ್ಥ
ನಾನು ಶೇಕ್ ನಾಸಿರ್. ಕನಸಿನ ನಗರಿ ಮುಂಬೈಯಿಂದ ಬರೋಬ್ಬರಿ 296 ಕಿಲೋಮೀಟರ್ ದೂರದ ಮಾಲೆಗಾಂವ್ ಎಂಬ, ದಿನದ ಹನ್ನೆರಡು ಗಂಟೆ ಕರೆಂಟಿಲ್ಲದ ಪುಟ್ಟಹಳ್ಳಿಯ ಜಗತ್ಪ್ರಸಿದ್ಧ ಫಿಲ್ಮ್ ಡೈರೆಕ್ಟರ್. ನೀವು, ನಾನು ಮಾಡಿದ ಶೋಲೆ, ಶಾನ್ ಚಿತ್ರಗಳನ್ನು ನೋಡಿಯೇ ಇರುತ್ತೀರಿ. ನನ್ನ ವಿಶ್ವವಿಖ್ಯಾತ ಸೂಪರ್ಮ್ಯಾನ್ ಚಿತ್ರ ಕೂಡ. ಬಿಡಿ, ಸೂಪರ್ಮ್ಯಾನ್ ಕತೆ ಹೇಳೋ ಮೊದಲು, ನನ್ನ ಮತ್ತು ನಮ್ಮ ಹಳ್ಳಿಯ ಕತೆ ಸ್ವಲ್ಪ ಹೇಳ್ತೀನಿ. ಕತೆಗೆ ಮುನ್ನ ಪೀಠಿಕೆ, ಚಿತ್ರಕ್ಕೆ ಮುನ್ನ ಫ್ಲ್ಯಾಶ್ಬ್ಯಾಕ್ – ತುಸು ಇಂಟರೆಸ್ಟಿಂಗ್ ಆಗಿರುತ್ತೆ.
ಅಂದಹಾಗೆ, ನನ್ನೂರಿನ ಹೆಸರನ್ನು ನೀವು ಕೇಳಿರಬಹುದು, ಓದಿರಬಹುದು. ಕೋಮುಘರ್ಷಣೆಗೆ ಬಹಳ ಪ್ರಸಿದ್ಧವಾದ ಊರು ನನ್ನದು. ಹಳ್ಳಿಯ ನಡುಮಧ್ಯೆ ಗೌರಮ್ಮ ಬೈತಲೆ ತೆಗೆದ ಹಾಗೆ ಒಂದು ನದಿ ಹರಿಯುತ್ತೆ. ಅದರಾಚೆ ಹಿಂದೂಗಳು, ಈಚೆ ಮುಸ್ಲಿಮರು ಬದುಕ್ತಾ ಇದಾರೆ. ಇರೋರಲ್ಲಿ ಮುಕ್ಕಾಲುಭಾಗ ಮುಸ್ಲಿಮರೇ ಇರೋದು. ನಮ್ಮ ಬಿಕನಾಸಿ ಉದ್ಯೋಗಗಳಿಗೆ ಒಂದು ಹೆಸರು ಅಂತ ಕೂಡ ಇಲ್ಲ. ಗುಜರಿ, ಪೇಪರ್, ಚಾದಂಗಡಿ, ಗಾಡಿ ರಿಪೇರಿ, ಪಂಚರು, ಪ್ಲಂಬರ್, ಬಟ್ಟೆ ಅಂಗಡಿ, ಹಜಾಮತಿ – ಹೀಗೆ ಮಧ್ಯಾಹ್ನ ರೊಟ್ಟಿ ತಟ್ಟೋದಕ್ಕೆ ಆಗುವಷ್ಟು ಕೂಲಿ ಹುಟ್ಟಿದರೆ ಸಾಕು, ಅದೇ ಒಂದು ಉದ್ಯೋಗ. ಇವತ್ತು ಗಡ್ಡ ಹೆರೆದವನು ನಾಳೆ ಬೋರ್ಡು ಬರೀಬಹುದು, ನಿನ್ನೆ ಟೈರ್ ಹೊಲಿದು ಪಂಚರ್ ಹಾಕಿದೋನು ಇವತ್ತು ಟೈಲರ್ ಆಗಬಹುದು! ಒಟ್ಟಲ್ಲಿ ಹೇಳುವುದಾದರೆ, ಈ ಊರಿನ ಸಮಸ್ತರೂ ಸಕಲಕಲಾವಲ್ಲಭರು!
ಸ್ವಪ್ನ ಸಾರಸ್ವತ – ಎರಡು ಅನಿಸಿಕೆಗಳು
ಸ್ವಪ್ನ ಸಾರಸ್ವತ – ಕುಲ ಮತ್ತು ಕಾಲದ ಕಥೆ
– ನವೀನ ಗಂಗೋತ್ರಿ
ನೆನಪಳಿಯದ ಕೃತಿಗಳ ಸಾಲಿನಲ್ಲಿ ಈ ಹೆಸರು ಎಂದಿಗೂ ಅಜರಾಮರ- ಸ್ವಪ್ನ ಸಾರಸ್ವತ. ಒಂದು ಕೃತಿ ಯಾಕೆ ಹಾಗೆ ಪದೇ ಪದೇ ಸ್ಮರಣೀಯವಾಗುತ್ತದೆ ಎನ್ನುವುದಕ್ಕೆ ಆ ಕೃತಿಯ ರೋಚಕತೆಯಾಗಲೀ, ಕಥೆಯ ಕಲ್ಪಕತೆ ಅಥವಾ ಕುತೂಹಲದ ತುದಿಯಲ್ಲಿ ನಿಲ್ಲಿಸುವ ಗುಣವಾಗಲೀ ಕಾರಣವಾಗದೆ ಆ ಕೃತಿಯು ತನ್ನ ಪಾತ್ರಗಳ ಮೂಲಕ ಮಾನವ ಬದುಕಿನ ಯಾವೆಲ್ಲ ಘಟ್ಟಗಳನ್ನು ತಾಕಬಲ್ಲದು,ಮತ್ತು ತಾತ್ತ್ವಿಕವಾಗಿ ಯಾವ ಅನಿಸಿಕೆಯನ್ನು ವ್ಯಕ್ತಪಡಿಸಬಲ್ಲದು ಎನ್ನುವುದು ಕಾರಣವಾಗುತ್ತದೆ. ಮಹಾಕಾವ್ಯಗಳಲ್ಲದೆ, ನಮ್ಮನಡುವೆ ಉಳಿದುಬಂದ ಯಾವುದೇ ಮೌಲಿಕ ಕೃತಿಯನ್ನು ತೆಗೆದುಕೊಂಡರೂ ಅದರ ಸಾರ್ವತ್ರಿಕ ಗುಣ ಇದುವೇ ಆಗಿರುತ್ತದೆ- ಮಾನವ ಬದುಕನ್ನು ಅದು ಕಾಣುವ ರೀತಿ ಮತ್ತು ಕಟ್ಟಿಕೊಡುವ ತಾತ್ತ್ವಿಕತೆ. ಬದುಕಿನ ಅರ್ಥದ ಬಗ್ಗೆ ಮನುಷ್ಯನಿಗಿರುವ ಆರದ ಕುತೂಹಲವೂ ಇದಕ್ಕೆ ಕಾರಣವಿದ್ದೀತು. ಎಷ್ಟೇ ರೋಚಕವಾದರೂ ಯಾವುದೋ ಸಾಮಾನ್ಯ ಪತ್ತೇದಾರಿ ಕಾದಂಬರಿ, ಯಾವುದೋ ಸಾಮಾನ್ಯ ಪ್ರೇಮ ಕಥೆ ನೆನಪಿರುವುದು ತುಂಬ ತುಂಬ ವಿರಳ. ಸಾರಸ್ವತದ ಚಿರಂಜೀವಿತ್ವ ಇರುವುದು ಅದರ ಚಿಂತನೆ ಮತ್ತು ತಾತ್ತ್ವಿಕ ಹಿನ್ನೆಲೆಯಲ್ಲಿ.
ಗೋವೆಯೆಂಬ ಪುಟ್ಟ ನಾಡಲ್ಲಿ ತಮ್ಮಪಾಡಿಗೆ ತಾವು ಬದುಕಿದ್ದ ಸಾರಸ್ವತ ಜನಾಂಗ, ಏಕಾ ಏಕಿ ಎರಗಿದ ಹುಂಬ ಪೋರ್ಚುಗೀಸರ ಭಯಂಕರ ಕಿರುಕುಳ ತಾಳಲಾರದೆ ತಮ್ಮ ಉಸಿರಿನ ನೆಲ ಬಿಟ್ಟು, ಬದುಕಲ್ಲಿ ಎಂದಿಗೂ ಕಂಡಿರದಿದ್ದ ಅರಿಯದ ನೆಲೆಗೆ ಎದ್ದುನಡೆದ ಕಥೆ ಅದು. ಕಥೆಯ ಹಂದರವಂತೂ ತುಂಬ ತುಂಬ ಸಂಕೀರ್ಣವಾಗಿದೆ. ಓದುವುದಕ್ಕೇ ಅದೊಂದುಬಗೆಯ ಏಕಾಗ್ರತೆಯನ್ನು ಬೇಡುವ ಈ ಕೃತಿ ತನ್ನ ಬರಹಗಾರನಲ್ಲಿ ಬೇಡಿದ ತಪಸ್ಸಿನ ಮೊತ್ತವನ್ನು ಕಲ್ಪಿಸಿ ಚಕಿತನಾಗುತ್ತೇನೆ.
ಸಮುದಾಯವೊಂದು ತನ್ನ ಜೀವನೆಲೆಯಂತಿರುವ ಭೂಭಾಗವನ್ನು ತೊರೆದು ಬರುವಾಗ ಅದೊಂದು ’ಕೇವಲ ಸ್ಥಾನಾಂತರಣ’ ಆಗಿರದೆ, ತಲೆಮಾರುಗಳನ್ನು ಪ್ರಭಾವಿಸುವ ಸಂಗತಿಯಾಗಿರುತ್ತದೆ ಎನ್ನುವುದು ಸಾರಸ್ವತವನ್ನು ಓದುವಾಗ ನಿಚ್ಚಳವಾಗುತ್ತದೆ. ತನ್ನ ಪರಿವಾರ, ಪರಿಸ್ಥಿತಿ, ಸಮೂಹದ ಸಮೇತ ಒಂದು ಕುಲ ಸ್ಥಾನಾಂತರವಾಗುವಾಗ ಯಾವುದೆಲ್ಲವನ್ನು ತನ್ನೊಡನೆ ಕೊಂಡೊಯ್ಯಬಹುದು? ಆಸ್ತಿ, ಹಣ, ಒಡವೆ, ಉಳಿಕೆ, ಗಳಿಕೆ- ಯಾವುದನ್ನು? ಸಾರಸ್ವತದ ದೃಷ್ಟಿ ಕೇಂದ್ರಗೊಳ್ಳುವುದು ಇದ್ಯಾವುದರ ಮೇಲೆಯೂ ಅಲ್ಲ, ಬದಲಿಗೆ ಆ ಹಂತದಲ್ಲಿ ಮನುಷ್ಯ ತುಂಬಾ ಗಾಢವಾಗಿ ಹೊತ್ತೊಯ್ಯಲು ಬಯಸುವುದೆಂದರೆ ತನ್ನ ತಲೆಮಾರುಗಳಿಗೆ ಸಾಕಾಗುವಷ್ಟು ನೆನಪನ್ನು, ಸಂಪ್ರದಾಯ ಆಚಾರ ಮತ್ತು ನಂಬುಗೆಗಳನ್ನು ಎಂಬ ನಿಲುಮೆಗೆ ಸಾರಸ್ವತ ಬರುತ್ತದೆ. ನೆಲ ಬಿಟ್ಟೆದ್ದು ಬಂದದ್ದೇ ಆಚಾರದ ಉಳಿಕೆಗಾಗಿ ಎಂಬಾಗ, ಹೊತ್ತೊಯ್ಯಬೇಕಿರುವುದು ಅದನ್ನೇ ಅಲ್ಲವೆ?
ಯು. ಆರ್. ಅನಂತಮೂರ್ತಿಯವರ “ಪ್ರಜ್ಞೆ ಮತ್ತು ಪರಿಸರ”
–ಡಾ. ಪ್ರವೀಣ ಟಿ. ಎಲ್,ಕುವೆಂಪು ವಿಶ್ವವಿದ್ಯಾನಿಲಯ
ಕಳೆದ ವರ್ಷ ತುಂಬಾ ಚರ್ಚೆಯಲ್ಲಿದ್ದು, ಈಗ ನಮ್ಮೊಂದಿಗಿಲ್ಲದ ಹಿರಿಯ ಸಾಹಿತಿ ಯು. ಆರ್ ಅನಂತಮೂರ್ತಿ. ಅವರು ಮೋದಿ ವಿರುದ್ಧ ನೀಡಿದ ಹೇಳಿಕೆಯಿಂದ ಹಿಡಿದು, ಅವರ ಅಂತ್ಯ’ಸಂಸ್ಕಾರ’ದ ನಂತರವೂ ಸುದ್ದಿಯಲ್ಲಿದ್ದರು. ಆ ಸಂದರ್ಭದಲ್ಲಿ ಅವರನ್ನು ಅರ್ಥಮಾಡಿಕೊಳ್ಳಲು ಸ್ವತಃ ಅವರ ಸಮರ್ಥಕರಿಗೂ, ವಿಮರ್ಶಕರಿಗೂ ಸ್ವಲ್ಪ ತ್ರಾಸವೇ ಆಯಿತು. ಆಗ ಕೆಲವರು ಅನಂತಮೂರ್ತಿಯವರ ನಿಲುವನ್ನು ‘ಕಪಟತನ’ ಎಂದು ಒರಟಾಗಿಯೂ, ಇನ್ನು ಕೆಲವರು ‘ದ್ವಂಧ್ವ’ ಎಂದೂ ತೀರ್ಪಿತ್ತರು. ಅವರ ಗ್ರಹಿಕೆಯ ಸಂಪೂರ್ಣ ಚಿತ್ರಣವನ್ನು ನೀಡುವುದು ಈ ಲೇಖನದ ವ್ಯಾಪ್ತಿಯಲ್ಲಿ ಅಸಾಧ್ಯ. ಆದರೆ ಅವರು ಹಿಂದೂ ಸಂಪ್ರದಾಯಗಳ ‘ಆಂತರಿಕ ವಿಮರ್ಶಕ’ರಾಗಿ ಜೀವನದುದ್ದಕ್ಕೂ ಅದರ ಆಚರಣೆಗಳನ್ನು ಟೀಕಿಸುತ್ತಾ ಬಂದವರು, ಕೊನೆಗೆ ಆ ಸಂಪ್ರದಾಯದಂತೆಯೇ ತನ್ನ ಸಂಸ್ಕಾರ ನಡೆಯಬೇಕೆಂದು ಇಚ್ಚಿಸಿದ್ದು ದೊಡ್ಡ ಚರ್ಚೆಗೆ ಗ್ರಾಸವಾಯಿತು. ಈ ನಡೆಯು ಅವರ ಪ್ರಗತಿಪರ ಮಿತ್ರರಿಗೆ ನುಂಗಲಾರದ ತುತ್ತಾಗಿದ್ದು ಈಗ ಇತಿಹಾಸ. (ಅವರ ಕಾದಂಬರಿಯ ನಾರಾಣಪ್ಪನವರ ಸಂಸ್ಕಾರದಂತೆ ತನ್ನ ಸಂಸ್ಕಾರ ದೊಡ್ಡ ಸವಾಲಾಗದಿರಲಿ ಎಂದು ಬ್ರಾಹ್ಮಣ ಪರಂಪರೆಯಂತೆ ತಮ್ಮ ಅಂತ್ಯಸಂಸ್ಕಾರವಾಗಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸಿದರೇನೋ!!) ಆದರೆ ಹೀಗ್ಯಾಕೆ ಮಾಡಿದರು ಎಂಬ ಪ್ರಶ್ನೆಗೆ ಬಹುತೇಕರು ಸಮರ್ಪಕ ಉತ್ತರ ಹುಡುಕುವ ಬದಲಿಗೆ, ಅದನ್ನು ಬ್ರಾಹ್ಮಣರ ಕುತಂತ್ರಕ್ಕೋ, ಕಪಟತನಕ್ಕೋ ಸಂಬಂಧ ಕಲ್ಪಿಸಿ ಕೈತೊಳೆದುಕೊಂಡರು. ಆದರೆ ಅದನ್ನು ಗ್ರಹಿಸಲು ಯತ್ನಿಸಿದ ಕೆಲವರು ‘ಮೇಷ್ಟ್ರು ನಮ್ಮ ನಂಬಿಕೆಗೆ ಮೋಸ ಮಾಡಿದರು’ ಎಂದು ಅಲವತ್ತುಕೊಳ್ಳುವಲ್ಲಿಯೇ ತೃಪ್ತಿಹೊಂದಿದರು. ಆ ದ್ವಂದ್ವವನ್ನು ಅರ್ಥೈಸುವ ಚಿಕ್ಕ ಪ್ರಯತ್ನವೇ ಈ ಬರಹ.
ಆನುದೇವಾ ಹೊರಗಣವನು ಸೆಕ್ಯುಲರಿಸಂನಿಂದ
– ರಾಕೇಶ್ ಶೆಟ್ಟಿ
ಅರಸರ ಆಡಳಿತದಲ್ಲಿದ್ದು ಆ ನಂತರ ದಶಕಗಳಿಗೂ ಹೆಚ್ಚು ಕಾಲದ ಮಾವೋವಾದಿಗಳ ಹಿಂಸಾಚಾರದ ನಂತರ ಅರಸರ ಆಡಳಿತಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ನೇಪಾಳಿಗಳು ಮತ್ತು ನೇಪಾಳ ಹೆಜ್ಜೆ-ಹೆಜ್ಜೆಗೂ ಸವಾಲುಗಳನ್ನು ಎದುರಿಸುತ್ತಲೇ ಸಾಗುತ್ತಲಿದೆ.ಪ್ರಜಾಪ್ರಭುತ್ವಕ್ಕೆ ಕಾಲಿಟ್ಟಂತೆ,ಹೊಸ ಸಂವಿಧಾನ ರಚಿಸುವ ನಿರ್ಧಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬಂದಿದ್ದರೂ ೨೦೦೬ರಿಂದ ಈ ಪ್ರಕ್ರಿಯೆ ನಾನಾ ವಿಘ್ನಗಳಿಂದ ಕುಂಟುತ್ತಲೇ ಸಾಗಿದೆ.ಇತ್ತೀಚೆಗೆ ನಡೆದ ಪ್ರಬಲ ಭೂಕಂಪದ ನಂತರ ದೊಡ್ಡ ಮನಸ್ಸು ಮಾಡಿ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗೂಡಿ ಮತ್ತೆ ಈ ಕಾರ್ಯಕ್ಕೆ ಜೈ ಎಂದಿದ್ದವು.ಈಗ ಕಾರ್ಯ ಶುರುವಾದಂತೆ ಬಹಳಷ್ಟು ಪರ-ವಿರೋಧ ಪ್ರತಿಭಟನೆ ಚರ್ಚೆಗಳು ಶುರುವಾಗಿವೆ.
ಅವುಗಳಲ್ಲಿ ಒಂದು,ನೇಪಾಳದ ಭಾಗಗಳನ್ನು ಜನರ ಆಚರಣೆ-ಭಾಷೆಯ ಮೇಲೆ ಪ್ರತ್ಯೇಕವಾಗಿಸುವುದನ್ನು ವಿರೋಧ ವ್ಯಕ್ತವಾಗುತ್ತಿದೆ.ಈ ನಡೆ ಮುಂದೆ ನೇಪಾಳವನ್ನು ಇನ್ನಷ್ಟು ಚೂರು ಚೂರು ಮಾಡಲಿದೆ ಎಂಬ ದೂರದೃಷ್ಟಿಯುಳ್ಳವರು ನೇಪಾಳದಲ್ಲಿರುವುದು ನೇಪಾಳಿಗಳ ಪುಣ್ಯವೇ ಸರಿ.ಬಹುಷಃ ಅವರು ಭಾರತದ ಸ್ಥಿತಿಯಿಂದ ಪಾಠ ಕಲಿತಿರಬಹುದು.ಅದರಲ್ಲೂ ಮುಖ್ಯವಾಗಿ ಭಾರತದ ಈಶಾನ್ಯ ರಾಜ್ಯಗಳನ್ನು ನೋಡಿ.ಒಂದೆಡೆ ಮಿಷನರಿಗಳ ಚಿತಾವಣೆ,ಮತ್ತೊಂದೆಡೆ ಜನಾಂಗೀಯ ಆಧರಿತ ಉಗ್ರಪಡೆಗಳ ಹಿಂಸಾಚಾರಗಳಿಂದ ಈಗಾಗಲೇ ಎಂಟು ರಾಜ್ಯಗಳಾಗಿರುವ ಈಶಾನ್ಯ ಭಾಗವೂ ಇನ್ನೂ ಚೂರುಚೂರಾಗುವ ಆಂತಕವಿದ್ದೇ ಇದೆ.ಈಶಾನ್ಯ ರಾಜ್ಯಗಳ ಉದಾಹರಣೆಯೇಕೆ.ನೆರೆಯ ತಮಿಳುನಾಡಿನಲ್ಲಿಯೇ ಭಾಷೆ ಮತ್ತು ನಮ್ಮ ಸಂಸ್ಕೃತಿಯಗೇ ಪರಕೀಯವಾದ ’ದ್ರಾವಿಡ ಜನಾಂಗೀಯ’ ಎಂಬ ಹುಚ್ಚು ಕಲ್ಪನೆಯ ಚಳುವಳಿಯ ನೆಪದಲ್ಲಿ ಏನೆಲ್ಲಾ ಅಧ್ವಾನಗಳಾಯಿತು ಎಂಬುದನ್ನು ನೋಡಿದರೆ ಸಾಕಲ್ಲವೇ? ಈ ನಿಟ್ಟಿನಲ್ಲಿ ನೋಡಿದಾಗ ನೇಪಾಳಿಗಳ ಆತಂಕ ಸರಿಯಾಗಿದೆ ಎನಿಸುತ್ತದೆ.




