ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭಗವದ್ಗೀತೆ’

23
ಜುಲೈ

ಒಳಗಣ್ಣು – 1 ( ಭಗವದ್ಗೀತೆಯನ್ನು ಯಾವ ಪ್ರಾಯದಲ್ಲಿ ಓದಬೇಕು? )

– ಸ್ವಾಮಿ ಶಾಂತಸ್ವರೂಪಾನಂದ

krishna-poster-FV90_lನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಒಮ್ಮೆ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ಒಂದು ಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಮತ್ತು ಪ್ರವಚನ ಏರ್ಪಾಟಾಗಿತ್ತು. ಪೂಜೆಯ ಹೊತ್ತಿಗೆ ಊರಿನ ಹಲವು ತರುಣರು ಹಾಜರಿದ್ದರು. ಆದರೆ ಪೂಜೆಯ ಬಳಿಕ ಗೀತಾಪ್ರವಚನ ಎಂದಾದಾಗ ಅಲ್ಲಿದ್ದ ತರುಣರೆಲ್ಲ ಹೊರಟುಹೋಗಿ ನಡುವಯಸ್ಸು ದಾಟಿದ ಮಂದಿಯಷ್ಟೇ ಉಳಿದರು. ಹಾಗೇಕಾಯಿತು ಎಂದು ಅಲ್ಲಿದ್ದವರಲ್ಲಿ ಕೇಳಿದಾಗ “ಸತ್ಸಂಗ, ಪ್ರವಚನ ಇವೆಲ್ಲ ಮಕ್ಕಳಿಗೇಕೆ ಸ್ವಾಮಿ! ಅದನ್ನು ಕೇಳುವುದೇನಿದ್ದರೂ ಜೀವನದ ಎಲ್ಲ ವ್ಯಾಪಾರ ಮುಗಿಸಿ ಪರಲೋಕಕ್ಕೆ ಹೊರಡಲನುವಾದ ಮುದುಕರ ಕೆಲಸವಲ್ಲವೆ?” ಎಂದು ಹೇಳಿದರು. ಇನ್ನೊಂದು ಸಂದರ್ಭದಲ್ಲಿ, ಮುಂಬಯಿಯ ಮನೆಯೊಂದಕ್ಕೆ ಆಮಂತ್ರಿತನಾಗಿ ಹೋಗಿದ್ದೆ. ಮನೆ ಯಜಮಾನ ನನಗೆ ಅವರ ದೇವರ ಮನೆ ತೋರಿಸುತ್ತ, ಅಲ್ಲೇ ಪಕ್ಕದಲ್ಲಿ ಪೇರಿಸಿದ್ದ ಉದ್ಗ್ರಂಥಗಳನ್ನು ತೋರಿಸಿ, ಅವಕ್ಕೆ ಪ್ರತಿದಿನ ಪೂಜೆ ಮಾಡುತ್ತೇನೆ ಎಂದರು. “ಹೌದೆ? ಏನು ಪುಸ್ತಕಗಳವು?” ಎಂದು ಕೇಳಿದೆ. ನೋಡಿದರೆ ಬಹಳ ಹಳೆಯ ಕಾಲದ ಪುಸ್ತಕಗಳಂತೆ ಕಂಡವು. ಹಾಳೆ ವೃದ್ಧಾಪ್ಯದ ಕಾರಣದಿಂದ ಬೂದುಬಣ್ಣಕ್ಕೆ ತಿರುಗಿತ್ತು. ರಟ್ಟಿಗೂ ಮನುಷ್ಯನೊಬ್ಬನ ಆಯುಸ್ಸಿನಷ್ಟೇ ಪ್ರಾಯವಾಗಿರಬೇಕು! “ಇವು ರಾಮಾಯಣ, ಮಹಾಭಾರತ ಮತ್ತು ಭಾಗವತದ ಗ್ರಂಥಗಳು. ನನ್ನ ಅಜ್ಜ ಅವನ್ನು ಬಳಸುತ್ತಿದ್ದರಂತೆ. ನಂತರ ತಂದೆಯ ಕೈಗೆ ಬಂದವು. ಅಲ್ಲಿಂದ ನನಗೆ ಸಿಕ್ಕವು. ಮೂರು ತಲೆಮಾರಿನಿಂದ ಅವು ಹೀಗೆ ದೇವರ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆ” ಎಂದರಾತ. “ಓಹ್! ನೀವು ಇವನ್ನು ಅಭ್ಯಾಸ ಮಾಡಿದ್ದೀರೆಂದು ತುಂಬ ಖುಷಿಯಾಯಿತು” ಎಂದು ಹರ್ಷ ವ್ಯಕ್ತಪಡಿಸಿದೆ. “ಇಲ್ಲ ಇಲ್ಲ! ಇವೆಲ್ಲ ಸಂಸ್ಕೃತದಲ್ಲಿರುವ ಪುಸ್ತಕಗಳು! ನನಗೆ ಇಂಗ್ಲೀಷ್ ಮತ್ತು ಕೊಂಚ ಹಿಂದಿ ಬಿಟ್ಟರೆ ಮಿಕ್ಕ ಭಾಷೆಗಳ ಅಭ್ಯಾಸವಿಲ್ಲ. ಸಂಸ್ಕೃತವಂತೂ ನನ್ನ ಅಜ್ಜನ ಕಾಲಕ್ಕೇ ನಿಂತುಹೋಯಿತು. ಅವರು ಆಗಿನ ಕಾಲದ ಮೇಧಾವಿಗಳೊಂದಿಗೆ ಸಂಸ್ಕೃತದಲ್ಲಿ ಚರ್ಚೆ ಮಾಡುತ್ತಿದ್ದರಂತೆ. ತಂದೆಗೆ ಅಲ್ಪಸ್ವಲ್ಪ ಬರುತ್ತಿದ್ದಿರಬೇಕು. ನನಗಂತೂ ಸಂಸ್ಕೃತವನ್ನು ಸುಡುತಿನ್ನಲಿಕ್ಕೂ ಬರುವುದಿಲ್ಲ! ಇವೆಲ್ಲ ಹಳೆ ತಲೆಮಾರಿನ ವಸ್ತುಗಳೆಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ ಅಷ್ಟೆ! ನಿವೃತ್ತನಾದ ಮೇಲೆ ನಾನು ಮಹಾಭಾರತವೋ ರಾಮಾಯಣವೋ ಯಾವುದಾದರೊಂದು ಕೃತಿಯ ಇಂಗ್ಲೀಷ್ ಅನುವಾದವನ್ನು ಕೊಳ್ಳಬೇಕೆಂದಿದ್ದೇನೆ” ಎಂದರು ಆ ಪುಣ್ಯಾತ್ಮ. ನನಗೆ ಭ್ರಮನಿರಸನವಾದರೂ ಮತ್ತಷ್ಟು ಕುತೂಹಲ ಉಳಿದಿತ್ತು. “ಅದೇಕೆ ಯಾವುದಾದರೊಂದು ಕೃತಿ ಎನ್ನುತ್ತೀರಿ? ಎರಡೂ ಕೊಳ್ಳಬಹುದಲ್ಲ!” ಎಂದೆ ನಾನು. ಅದಕ್ಕೆ ಆ ಮನುಷ್ಯ ನಗುತ್ತ “ತಮಾಷೆ ಮಾಡ್ತಿದ್ದೀರಾ ಸ್ವಾಮೀಜಿ! ನಿವೃತ್ತನಾದ ಮೇಲೆ ನಮಗೆ ಎಷ್ಟು ಮಹಾ ಆಯುಷ್ಯ ಉಳಿದಿರುತ್ತೆ! ಹೆಚ್ಚೆಂದರೆ ಹತ್ತು ವರ್ಷ! ಅಷ್ಟರಲ್ಲಿ ಒಂದು ಗ್ರಂಥ ಓದಿ ಅರ್ಥೈಸಿಕೊಳ್ಳುವುದೇ ಕಷ್ಟದ ಮಾತು. ಅಂಥಾದ್ದರಲ್ಲಿ ಎರಡೆರಡು ಹೇಗೆ ಸಾಧ್ಯ? ಎರಡು ಪುಸ್ತಕ ಕೊಂಡು ಅವುಗಳಲ್ಲೊಂದನ್ನು ಓದಲು ಆಗದೇ ಹೋದರೆ ಆ ನಿರಾಸೆ ಮನಸ್ಸಲ್ಲಿ ಉಳಿದುಬಿಡುತ್ತದಲ್ಲವೆ?” ಎಂದು ಉತ್ತರಿಸಿದರು. ಮತ್ತಷ್ಟು ಓದು »

29
ಡಿಸೆ

ಬಂಗುಡೆ ಫ್ರೈ ಮತ್ತು ಭಗವದ್ಗೀತೆ

– ರೋಹಿತ್ ಚಕ್ರತೀರ್ಥ

ದೇವನೂರು ಮಹಾದೇವವರ್ಷಕ್ಕೋ ಎರಡು ವರ್ಷಕ್ಕೋ ಒಂದು – ಎರಡಲ್ಲ, ಒಂದೇ – ಸಿನೆಮಾ ಕೊಡುತ್ತಿದ್ದ ಹಿಂದಿಯ ರಾಜ್‍ಕುಮಾರ್ ಮೇಲೆ, ನನ್ನ ತಂದೆಗೆ ಕುತೂಹಲ, ಪ್ರೀತಿ, ಹುಚ್ಚು ಅಭಿಮಾನ ಇದ್ದವು. ಹಾಗೆಯೇ, ಬಹುಕಾಲ ಮೌನವಾಗಿದ್ದು ವರ್ಷಕ್ಕೆ ಒಂದೆರಡು ಮಾತು, ಒಂದೆರಡು ಹಾಳೆ ಸಾಹಿತ್ಯ ಬರೆಯುವವರ ಬಗ್ಗೆ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಇಂಥವರು ಕಾವಿ ತೊಟ್ಟರೆ, ಮಾತಾಡದೆ ಕೂತರೂ ಜಗತ್ಪ್ರಸಿದ್ಧರಾಗುತ್ತಾರೆ! ಇಂತಹ ಮಿತಾಕ್ಷರಿಗಳ ಪಂಥಕ್ಕೆ ಸೇರಿದ ಕನ್ನಡದ ಸಾಹಿತಿ ದೇವನೂರ ಮಹಾದೇವ, ವರ್ಷಕ್ಕೆ ಒಂದು ಭಾಷಣ ಮಾಡಿದರೆ, ಅದರ ಹಿಂದೆ ಹಲವು ದಿನಗಳ ಚಿಂತನೆ ಇರುತ್ತದೆ; ಇರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಹಾಗೆಯೇ, ಅವರ ಐನೂರು ಪದಗಳೊಂದು ಲೇಖನ ಪ್ರಕಟವಾದರೂ, ಅದರಲ್ಲೇನೋ ಗಹನವಾದ ಸೂತ್ರರೂಪೀ ಸಂಗತಿಗಳು ಅಡಕವಾಗಿರಬಹುದು ಎಂಬ ಪೂರ್ವಗ್ರಹದಿಂದ ಎರಡೆರಡು ಬಾರಿ ಓದಿನೋಡುವ ಸಾಹಿತ್ಯಪ್ರೇಮಿಗಳಿದ್ದಾರೆ. ಹಾಗಾಗಿ ದಿನಕ್ಕೆ ಸಾವಿರ ಪದಗಳನ್ನು ಕುಟ್ಟುವ ನನ್ನಂಥ ಕೈಬಡುಕರಿಗಿಂತ ದೇವನೂರರ ಮೇಲೆ ಹುಟ್ಟುವ ನಿರೀಕ್ಷೆ ದೊಡ್ಡದು. ಅದನ್ನು ನಿಜ ಮಾಡುವ ಆನೆಯಂಥ ಹೊಣೆಗಾರಿಕೆಯೂ ಅವರ ಹೆಗಲ ಮೇಲೆ ಕೂತಿರುತ್ತದೆ.

ಈ ವರ್ಷ, ನಿಯಮ ತಪ್ಪಿ, ದೇವನೂರ ಎರಡು ಸಲ ಮಾತಾಡಿದರು. ಒಮ್ಮೆ, ಪ್ರಶಸ್ತಿ ಯಾಕೆ ವಾಪಸು ಮಾಡುತ್ತಿದ್ದೇನೆ ಎಂದು ಹೇಳಲು ಪತ್ರ ಬರೆಯುವುದರ ಮೂಲಕ. ಇನ್ನೊಮ್ಮೆ, ಮಂಗಳೂರಲ್ಲಿ ನಡೆದ – ಸಾಹಿತ್ಯವೊಂದು ಬಿಟ್ಟು ಮಿಕ್ಕೆಲ್ಲ ಅಪಸವ್ಯಗಳೂ ಇದ್ದ – ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡುವ ಮೂಲಕ. ಪ್ರಶಸ್ತಿ ವಾಪಸು ಪ್ರಹಸನದ ನಿಜಬಣ್ಣ ಲೋಕಕ್ಕೇ ಗೊತ್ತಾಗಿರುವುದರಿಂದ, ಆ ಸಂದರ್ಭದ ಮಾತುಗಳನ್ನು ಮತ್ತೆ ಕೆದಕುವುದು ಬೇಡ. ನಕಲು ಸಮ್ಮೇಳನದಲ್ಲಿ ಅವರು ಏನು ಹೇಳಿದರು ಎನ್ನುವುದನ್ನು ಮಾತ್ರ ಈ ಲೇಖನದ ಸೀಮಿತ ಚೌಕಟ್ಟಿಗೆ ಎತ್ತಿಕೊಂಡಿದ್ದೇನೆ.

**
ಇತ್ತೀಚೆಗೆ ರಾಮಾಯಣ, ಮಹಾಭಾರತಗಳ ಕಡೆ ನಮ್ಮ ಸಮಕಾಲೀನ ಲೇಖಕರು ಮತ್ತೆಮತ್ತೆ ಹೊರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚರ್ಚೆಯ ವಿಷಯವಾಗಿರುವುದರಿಂದ ದೇವನೂರ ಕೂಡ ಆ ಎರಡು ಗ್ರಂಥಗಳನ್ನು ಎತ್ತಿಕೊಂಡಿದ್ದಾರೆ. ಮಿದುಳಿಲ್ಲದ ಧ್ವನಿವರ್ಧಕದಂತೆ ತನ್ನನ್ನು ಬಿಂಬಿಸಿಕೊಂಡು ಪ್ರಚಾರ ಪಡೆದ ಭಗವಾನ್‍ಗಿಂತ ಭಿನ್ನ ಧಾಟಿಯಲ್ಲಿ ಮಾತಾಡಿದ್ದರಿಂದ ದೇವನೂರರ ಮಾತುಗಳು – ಒಪ್ಪುವ ಒಪ್ಪದಿರುವ ಪ್ರಶ್ನೆಗಿಂತ, ಕನಿಷ್ಠ ವಿಶ್ಲೇಷಣೆಗೊಳಪಡಿಸಲು ಅರ್ಹವಾಗಿವೆ. ದೇವನೂರ ಬಹುಶಃ ಮೂರು ಪೂರ್ವಗ್ರಹಗಳಿಂದ ತನ್ನ ಮಾತು-ಚಿಂತನೆಗಳನ್ನು ಶುರುಮಾಡುತ್ತಾರೆ ಎಂದು ಕಾಣುತ್ತದೆ. ಒಂದು – ಭಾರತದಲ್ಲಿ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ಪಡೆಯುವುದೇ ದಲಿತರ ದೊಡ್ಡ ಸವಾಲಾಗಿದೆ. ಎರಡು – ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವು ಭಾಗಗಳು ಸರಿಯಿಲ್ಲ, ಮತ್ತು ಈ ಗ್ರಂಥಗಳೇ ಇಂದಿಗೂ ನಮ್ಮನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಆಳುತ್ತಿವೆ. ಮೂರು – ಜಾತಿ ವರ್ಗ ಕಳೆದು ಎಲ್ಲವೂ ಸಮಾನವಾದರೆ ದೇಶದಲ್ಲಿ ಸರ್ವೋದಯವಾಗುತ್ತದೆ. ನಾನು ನನ್ನ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೆ ಹಿನ್ನೆಲೆಯಾಗಿಟ್ಟುಕೊಂಡು ದೇವನೂರರ ಮಾತುಗಳ ವಿಶ್ಲೇಷಣೆ ನಡೆಸುವುದು ಸಾಧ್ಯ. ಹಾಗಾಗಿ ಮುಂದಿನ ಎಲ್ಲ ಮಾತುಗಳನ್ನು ಓದುಗರು ತಂತಮ್ಮ ಜಗತ್ತಿನ ಹಿನ್ನೆಲೆಯಲ್ಲಿಟ್ಟು ತಾಳೆ ನೋಡುವುದಕ್ಕೆ ಸ್ವತಂತ್ರರು.
ಮತ್ತಷ್ಟು ಓದು »

4
ನವೆಂ

ವಸಾಹತುಪ್ರಜ್ಞೆಯಲ್ಲಿ ಪುಣ್ಯಯೋನಿ-ಪಾಪಯೋನಿ

– ವಿನಾಯಕ್ ಹಂಪಿಹೊಳಿ

ಭಗವದ್ಗೀತೆಇತ್ತೀಚೆಗೆ ಕೆ. ಎಸ್. ಭಗವಾನ್ ಎಂಬ ಬುದ್ಧಿಜೀವಿಯೋರ್ವರಿಂದಾಗಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಭಾರೀ ವಿವಾದಕ್ಕೊಳಗಾದವು. ಆ ಶ್ಲೋಕಗಳಲ್ಲಿ ಕೆಲವೇ ವರ್ಗದ ಜನರನ್ನು ಪುಣ್ಯಯೋನಿಗಳೆಂತಲೂ ಉಳಿದ ಬಹುಸಂಖ್ಯಾತರನ್ನು ಪಾಪಯೋನಿಗಳೆಂತಲೂ ಕೃಷ್ಣ ಕರೆದದ್ದು ಈ ಹಿಂದೂ ರಿಲಿಜನ್ನಿನಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಚಿತ್ರಿಸಲಾಯಿತು. ಆ ಎರಡು ಶ್ಲೋಕಗಳನ್ನು ಗದ್ದೆಯಲ್ಲಿನ ಕಳೆಗೆ ಹೋಲಿಸಿ, ಇವುಗಳನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯಪಟ್ಟರು. ಆ ಎರಡು ಶ್ಲೋಕಗಳು “ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ” ಎಂಬ ಉಪನಿಷದ್ವಾಕ್ಯಕ್ಕೆ ವಿರುದ್ಧವಾದ ಆಶಯವನ್ನು ಹೊಂದಿದೆ ಎಂಬುದಾಗಿ ಸಾರಿದರು. ಈ ಹಿಂದೂ ಎಂಬ ಧರ್ಮದಲ್ಲಿ ಎರಡು ಭಾಗಗಳಿವೆ, ಅವು ಸಾಮಾಜಿಕ ಮತ್ತು ಅಧ್ಯಾತ್ಮಿಕ, ಎರಡೂ ಕ್ಷೇತ್ರಗಳಲ್ಲಿ ಅನೇಕ ಕೃತಿಗಳಿವೆ, ಅದರಲ್ಲಿ ಅಧ್ಯಾತ್ಮಿಕ ಕೃತಿಗಳ ಕುರಿತು ಅವರಿಗೆ ಸಮ್ಮತಿಯಿದೆ, ಆದರೆ ಸಾಮಾಜಿಕ ಕೃತಿಗಳ ಕುರಿತು ಅವರಿಗೆ ಭಾರೀ ಆಕ್ಷೇಪವಿದೆ ಎಂಬ ಅವರ ಹೇಳಿಕೆಯನ್ನು ಅವರ ವಾದದ ಸಾರಾಂಶ ಎನ್ನಬಹುದು.

ನಮ್ಮ ಸಂಪ್ರದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಮತ್ತು ಜೀವನದಲ್ಲಿ ಕಾಣುವ ಪರಿಣಾಮಗಳಿಗೆ ಪ್ರತ್ಯಕ್ಷವಾಗಿ ಕಾಣದ ಕಾರಣಗಳನ್ನು ಪೂರ್ವಜನ್ಮಕ್ಕೆ ಹೊಂದಿಸಿ ಅರಿಯುವದು ನಮ್ಮಲ್ಲಿ ಮೊದಲಿನಿಂದ ಇರುವ ಪರಂಪರೆ. ತನ್ಮೂಲಕ ಒಬ್ಬ ಜೀವನದಲ್ಲಿ ಪಡೆದಿರುವ ಪ್ರತಿಯೊಂದಕ್ಕೂ ಒಂದು ಕಾರಣವನ್ನು ಹುಡುಕಿಕೊಳ್ಳುವದು ಸಹಜವಾದ ಪ್ರಕ್ರಿಯೆ. ಆತ್ಮಕ್ಕೆ ಲಿಂಗವಿರುವದಿಲ್ಲ, ಲಿಂಗವೆಂಬುದು ಕೇವಲ ದೇಹದ ಒಂದು ಗುಣ ಎಂಬುದು ನಮ್ಮ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿರುವ ವಿಚಾರ. ಹೀಗಾಗಿ ಆತ್ಮ-ಪುನರ್ಜನ್ಮ-ದೇಹಗಳ ಕುರಿತು ಇರುವ ಈ ಆಧ್ಯಾತ್ಮಿಕ ವಿಚಾರಗಳಲ್ಲಿ ಒಂದು ಆತ್ಮ ಒಮ್ಮೆ ಗಂಡಾಗಿ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಮತ್ತೊಂದು ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುವ ಕಲ್ಪನೆಗಳು ಕಥೆಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಜನ್ಮದಿಂದ ಜನ್ಮಕ್ಕೆ ಅಲೆಯುವ ಒಂದು ಆತ್ಮ ಗಂಡು ದೇಹ ಪಡೆಯುವದಕ್ಕೋ, ಇಲ್ಲವೇ ಹೆಣ್ಣು ದೇಹ ಪಡೆಯುವದಕ್ಕೋ ಒಂದು ಕಾರಣ ಬೇಕಾಗುತ್ತದೆ.

ಮತ್ತಷ್ಟು ಓದು »

30
ಮೇ

ಗೀತೆಯನ್ನು ಅರ್ಥೈಸಿಕೊಳ್ಳಲಾಗದವರು ಬದುಕಿನ ವಾಸ್ತವಗಳನ್ನು ಅರಗಿಸಿಕೊಳ್ಳಲಾರರು

– ಮಯೂರ ಲಕ್ಷ್ಮಿ

“ಈ ಜಗತ್ತು ಭಗವಂತನ ಸೃಷ್ಟಿ ಎನ್ನುವ ವಿಚಾರವು ಭಗವದ್ಗೀತೆಯನ್ನು ಓದಿದಾಗ ಅರಿವಾಯಿತು… ಈ ವಿಚಾರದ ಮುಂದೆ ಇನ್ನೆಲ್ಲಾ ಆಲೋಚನೆಗಳೂ ಗೌಣವೆನಿಸಿತು” – ಆಲ್ಬರ್ಟ್ ಐನ್ ಸ್ಟೀನ್

ಭಗವದ್ಗೀತೆಭಗವದ್ಗೀತೆಯನ್ನು ಉದಾತ್ತ ಮನಸ್ಸುಗಳಿಂದ ವಿಶಾಲ ಹೃದಯಗಳಿಂದ ಅರ್ಥಮಾಡಿಕೊಳ್ಳುವವರಿಗೆ ಅದು ಸಕ್ಕರೆಯಂತೆ ಸಿಹಿ, ಅತ್ಯಂತ ಸರಳವಾದ ರೀತಿಯಲ್ಲಿ ಮನುಷ್ಯನು ಈ ಭೂಮಿಯಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನು ತಿಳಿಸುವ ಸುಲಭ ಸಾಧನ, ಸಂಕುಚಿತ ಮನಸ್ಸುಗಳಿಂದ ಅದರ ವ್ಯಾಪ್ತಿಯನ್ನು ಪೂರ್ವಾಗ್ರಹಪೀಡಿತರಾಗಿ ತಪ್ಪುಗಳನ್ನೇ ಹುಡುಕಿ ನೋಡುವವರಿಗೆ ಅದು ಅರ್ಥವಾಗದ ಕ್ಲಿಷ್ಟ ಗ್ರಂಥವೇ ಸರಿ! ಇನ್ನು ಗೀತೆ ಎಂದರೆ ಕೋಮುವಾದಿ ಗ್ರಂಥ ಶ್ರೀಕೃಷ್ಣನೆಂದರೆ ಸ್ತ್ರೀಲೋಲ ಎಂಬ ಭಾವನೆಯಿಂದಲೇ ನೋಡುವವರಿಗೆ ಇದು ಅರ್ಥವಾದೀತಾದರೂ ಹೇಗೆ? ಕೃಷ್ಣನ ರಾಜನೀತಿಯ ನೈಪುಣ್ಯತೆಯನ್ನು ಮುತ್ಸದ್ದಿತನವನ್ನೂ ಅವನ ಸಮಾಜ ಪರಿವರ್ತನೆಯ ಮತ್ತು ಧರ್ಮರಕ್ಷಣೆಯ ಸಂಕಲ್ಪವನ್ನು ಒಪ್ಪದವರು ಅವನ ವಾಣಿಯಾದ ಗೀತೆಯನ್ನು ಸ್ವೀಕರಿಸುವುದು ಸಾಧ್ಯವಿಲ್ಲಾ. ಹಿಂದೂ ಧರ್ಮಗ್ರಂಥಗಳನ್ನು ಟೀಕಿಸಿ ಬುದ್ಧಿವಂತರೆನಿಸಿಕೊಳ್ಳುವುದು ಕೆಲವರ ಹವ್ಯಾಸ.

ಪ್ರಪಂಚದ ಎಲ್ಲಾ ಮಹನೀಯರೂ ದಾರ್ಶನಿಕರೂ ಗೀತೆಯನ್ನು ಕೋಮುವಾದವನ್ನು ಪ್ರಚೋದಿಸುವ ಗ್ರಂಥವೆಂದೇ ನೋಡಿದ್ದಲ್ಲಿ ಭಗವದ್ಗೀತೆ ವಿಶ್ವವ್ಯಾಪಿ ಎನಿಸಿಕೊಳ್ಳುತ್ತಿತ್ತೇ? ಸಾಹಿತ್ಯವೆಂದರೆ ಜ್ಞಾನದ ಸಾಧನಗಳು,ಜಾಗೃತಿಯ ಚೇತನಗಳು.. ಇಂತಹ ಪುಸ್ತಕಗಳನ್ನೋದಿ ವಿವೇಕಿಗಳಾಗಲೂ ಬಹುದು, ವಿಮರ್ಶಕರಾಗಲೂಬಹುದು.ಪುಸ್ತಕಗಳ ವಿಮರ್ಶೆ ಓದುಗರಿಗೆ ಬಿಟ್ಟದ್ದು, ಅಭಿವ್ಯಕ್ತಿ ಸ್ವಾತಂತ್ರ ಎಲ್ಲರಿಗೂ ಇದೆ ಎನ್ನವುದು ನಿಜವಾದರೂ ಅಭಿವ್ಯಕ್ತಿಯ ಹೆಸರಲ್ಲಿ ಮನಬಂದಂತೆ ಹೇಳಿಕೆಗಳನ್ನು ನೀಡಿ ಪುಸ್ತಕಗಳನ್ನು ಸುಡುವುದು ಪರಿಹಾರವೆಂದು ವಾದಿಸುವುದು ಭ್ರಮೆಯಲ್ಲದೇ ಇನ್ನೇನು? ಪ್ರತಿಯೊಂದನ್ನೂ ತಾರ್ಕಿಕ ಮಟ್ಟದಲ್ಲೇ ವಿಮರ್ಶಿಸುತ್ತಾ ಹೋದರೆ ಹೊಸ ಹೊಸ ರೀತಿಯ ‘ಇಸಂ’ಗಳ ಸೃಷ್ಟಿಯಾಗುತ್ತಾ ಹೋಗುವುದೇ ಹೊರತು ಬೌದ್ಧಿಕ ಪರಾಮರ್ಶೆಯಾಗದು.

ಮತ್ತಷ್ಟು ಓದು »

25
ಮೇ

ನಾಡು-ನುಡಿ : ಮರುಚಿಂತನೆ – ನೈನಂ ದಹತಿ ಪಾವಕಃ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಭಗವದ್ಗೀತೆಇತ್ತೀಚೆಗೆ ಕೇಂದ್ರಸಚಿವರೊಬ್ಬರು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎನ್ನುವ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಭಗವದ್ಗೀತೆಯನ್ನು ಭಾರತೀಯರಿಗೆಲ್ಲರಿಗೂ ಕಡ್ಡಾಯವಾಗಿ ಕಲಿಸಬೇಕು ಎಂಬ ಕೂಗು ಕೂಡ ಒಂದೆಡೆ ಏಳುತ್ತಿದೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದೆಡೆ ಅದನ್ನು ಸುಟ್ಟುಹಾಕಬೇಕು ಎಂಬ ಹೇಳಿಕೆಗಳು ಕೂಡ ಬರತೊಡಗಿವೆ. ಭಗವದ್ಗೀತೆಯನ್ನು ರಾಷ್ಟ್ರ ಗ್ರಂಥವನ್ನಾಗಿ ಮಾಡಬೇಕೆನ್ನುವ ಅನೇಕರು ಅದನ್ನು ಓದಿ ಅರ್ಥಮಾಡಿಕೊಂಡು ಪ್ರಭಾವಿತರಾಗಿ ಅದೊಂದು ಮಹತ್ವದ ಗ್ರಂಥ ಎಂದು ಮನಗಂಡಿರುವ ಸಂಭಾವ್ಯತೆ ಇಲ್ಲ. ಅದು ಹಿಂದೂಗಳ ಪವಿತ್ರಗ್ರಂಥ, ಅದರಲ್ಲಿ ಏನೋ ಮಹತ್ವದ ಸಂಗತಿ ಇದೆ ಎಂಬುದಷ್ಟೇ ಅವರಿಗೆ ಮುಖ್ಯವಾಗಿದೆ. ಅಂದರೆ ಯಾವುದೋ ಒಂದು ಪುಸ್ತಕವನ್ನು ನಾವು ಓದದಿದ್ದರೂ ಅದರಷ್ಟಕ್ಕೇ ಅದು ಮುಖ್ಯ ಎಂದೇಕೆ ಅವರಿಗೆ ಅನ್ನಿಸುತ್ತದೆ ಎಂಬುದಕ್ಕೆ ಅವರು ಅದನ್ನು ಬೈಬಲ್ಲು, ಖುರಾನುಗಳ ಸಾಲಿನಲ್ಲಿ ಇಟ್ಟು ನೋಡುತ್ತಿದ್ದಾರೆ ಎನ್ನದೇ ಬೇರೆ ಉತ್ತರ ಹೊಳೆಯುವುದಿಲ್ಲ.

ಇದಕ್ಕಿಂತಲೂ ಆಶ್ಚರ್ಯಕರವಾದ ಸಂಗತಿಯೆಂದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವ ಹೇಳಿಕೆಗಳು. ಇಂಥ ಹೇಳಿಕೆಗಳನ್ನು ಮಾಡುವವರು ಕೂಡ ಹಿಂದೂಯಿಸಂ ಎಂಬುದಿದೆ, ಭಗವದ್ಗೀತೆಯು ಹಿಂದೂಗಳ ಪವಿತ್ರಗ್ರಂಥ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹಾಗೂ ಬ್ರಾಹ್ಮಣರು ಅದರ ಪುರೋಹಿತಶಾಹಿ ಎಂಬುದನ್ನು ಭದ್ರವಾಗಿ ನಂಬಿದ್ದಾರೆ. ಹಾಗೂ ಆ ನಿರ್ದಿಷ್ಟ  ಕಾರಣದಿಂದಲೇ ಅದನ್ನು ಸುಡಬೇಕು ಎನ್ನುತ್ತಿದ್ದಾರೆ. ಏಕೆ ಸುಡಬೇಕೆಂದರೆ ಬ್ರಾಹ್ಮಣರು ಭಗವದ್ಗೀತೆಯ ಮೂಲಕ ವರ್ಣ ವ್ಯವಸ್ಥೆಯನ್ನು ಹಾಗೂ ಶೋಷಣೆಯ ಡಾಕ್ಟ್ರಿನ್ನುಗಳನ್ನು ಬೋಧಿಸುತ್ತಿದ್ದಾರೆ. ಅದನ್ನಾಧರಿಸಿಯೇ ಭಾರತೀಯ ಜಾತಿವ್ಯವಸ್ಥೆ, ತರತಮಗಳು, ಶೋಷಣೆಗಳು ಅಸ್ತಿತ್ವದಲ್ಲಿ ಇವೆ, ಹಾಗಾಗಿ ನಮ್ಮ ಸಮಾಜದಲ್ಲಿ ಇದನ್ನೆಲ್ಲ ತೊಡೆಯಬೇಕಾದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವುದು ಅವರ ವಾದ. ಇಂಥ ಹೇಳಿಕೆಗಳನ್ನು ಮಾಡುವವರೂ ಭಗವದ್ಗೀತೆಯನ್ನು ಓದಿರುವುದಿಲ್ಲ, ಓದಿದ್ದರೂ ಅರ್ಥಮಾಡಿಕೊಂಡಿಲ್ಲ.
ಮತ್ತಷ್ಟು ಓದು »

10
ಮಾರ್ಚ್

ಭಗವದ್ಗೀತೆ ಮತ್ತು ರಾಜಕಾರಣ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಭಗವದ್ಗೀತೆಅದೇಕೋ ಏನೋ,ಇತ್ತೀಚೆಗೆ ಭಗವದ್ಗೀತೆ ಪದೇ ಪದೇ ವಿವಾದಕ್ಕೀಡಾಗುತ್ತಿದೆ. ಮೊದಲು ಕೇ೦ದ್ರ ಮ೦ತ್ರಿ ಸುಷ್ಮಾ ಸ್ವರಾಜ್,’ಗೀತೆಯನ್ನು ರಾಷ್ಟ್ರೀಯ ಗ್ರ೦ಥವಾಗಿಸಬೇಕು’ ಎ೦ದೆನ್ನುವ ಮೂಲಕ ವಿವಾದಕ್ಕೆ ನಾ೦ದಿ ಹಾಡಿದರು.ಕೆಲವು ದಿನಗಳ ಹಿ೦ದೆ ಭಗವಾನ್ ಎನ್ನುವವರೊಬ್ಬರು ’ಗೀತೆಯನ್ನು ಸುಡುತ್ತೇನೆ’ ಎನ್ನುವ ಮೂಲಕ ವಿವಾದದಕಿಡಿಯನ್ನು ಹೆಚ್ಚಿಸಿದರು.ಈಗ ಅವರ ಹಿ೦ದೆ ಅಗ್ನಿ ಶ್ರೀಧರ ’ಜೀವನದಲ್ಲಿ ಎ೦ದಾದರೊ೦ದು ದಿನ ಗೀತೆಯನ್ನು ಸುಡುತ್ತೇನೆ’ ಎನ್ನುವ ಮೂಲಕ ಕಿಡಿಯನ್ನು ಜ್ವಾಲೆಯಾಗಿಸಿದ್ದಾರೆ.

ಮು೦ಚಿನಿ೦ದಲೂ ಭಗವದ್ಗೀತೆಯೆನ್ನುವುದು ಅನೇಕ ವಿವಾದಗಳಿಗೆ ಕಾರಣಿಕರ್ತ ಗ್ರ೦ಥ. ಗೀತೆಯ ಕುರಿತಾಗಿ ನಮ್ಮ ಸ೦ವಿಧಾನಶಿಲ್ಪಿ ಅ೦ಬೇಡ್ಕರ್,”ನನಗೆ ಆಶ್ಚರ್ಯ ಮೂಡಿಸುವ ಸ೦ಗತಿಯೆ೦ದರೇ ಭಗವದ್ಗೀತೆಯೆಡೆಗಿನ ವಿದ್ವಾ೦ಸರ ಭಿನ್ನಾಭಿಪ್ರಾಯಗಳು. ಗೀತೆಯಲ್ಲಿನ ಶ್ಲೋಕಗಳ ಬಗ್ಗೆ ಒಬ್ಬೊಬ್ಬ ಪ೦ಡಿತರದ್ದೂ ಒ೦ದೊ೦ದು ಬಗೆಯ ವ್ಯಾಖ್ಯಾನ.ಪ್ರತಿಯೊಬ್ಬರಿಗೂ ಭಗವದ್ಗೀತೆಯಲ್ಲಿ ವಿಭಿನ್ನವಾದ ಸತ್ಯದ ಸಾಕ್ಷಾತ್ಕಾರ.ನನ್ನ ಪ್ರಕಾರ ಭಗವದ್ಗೀತೆಯೆನ್ನುವುದು ಧಾರ್ಮಿಕ ಗ್ರ೦ಥವೂ ಅಲ್ಲ,ತತ್ವಶಾಸ್ತ್ರದ ಮಹಾಮೀಮಾ೦ಸೆಯೂ ಅಲ್ಲ.ವಿಚಿತ್ರ ನೋಡಿ, ಮಹಾಭಾರತದ ಭೀಷ್ಮಪರ್ವದಲ್ಲಿ ಕೃಷ್ಣನಿ೦ದ ,ಅರ್ಜುನನಿಗಾದ ಬೋಧನೆಯೆನ್ನಲಾಗುವ ಭಗವದ್ಗೀತೆಯಲ್ಲಿ ಪಾರ್ಥಸಾರಥಿ,ಮಧ್ಯಮ ಪಾ೦ಡವನನ್ನು ಯುದ್ದಕ್ಕಾಗಿ ಪ್ರೇರೇಪಿಸುತ್ತಾನೆ. ದೇಹಕ್ಕೆ ಮಾತ್ರ ಸಾವು ,ಆತ್ಮಕ್ಕೆ ಸಾವಿಲ್ಲ,ರಣರ೦ಗದಲ್ಲಿ ಶತ್ರುಗಳನ್ನು ಸದೆಬಡಿಯುವುದು ಕ್ಷತ್ರಿಯನ ಕರ್ತವ್ಯವೆನ್ನುತ್ತ ಭಗವ೦ತನೇ ಹಿ೦ಸೆಯ ಪರೋಕ್ಷ ಸಮರ್ಥಕನಾಗುವುದು ವಿಪರ್ಯಾಸವಲ್ಲವೇ?.ಸಾಮಾನ್ಯವಾಗಿ ಭಗವದ್ಗೀತೆಯ ಪ್ರತಿಪಾದಕರು ಗೀತೆಯ ಭಾಗವಾಗಿರುವ ’ಕರ್ಮಯೋಗ’ವನ್ನು ಮನುಷ್ಯನ ಕರ್ಮಗಳ ವಿವರಣೆಯ ಕುರಿತಾದ ಅಧ್ಯಾಯವೆ೦ದೂ, ’ಜ್ನಾನ ಯೋಗ’ವನ್ನು ಮನುಷ್ಯ ಜೀವನದ ಅ೦ತಿಮಜ್ನಾನದ ಬಗೆಗಿನ ವಿವರಣೆಗಳ ಅಧ್ಯಾಯವೆ೦ದೂ ವಿವರಿಸುತ್ತಾರೆ.ಆ ಮೂಲಕ ಭಗವದ್ಗೀತೆಯೆನ್ನುವುದು ಮಾನವ ಜನ್ಮದ ಜೀವನ ಸಾರವನ್ನು ಸಾರುವ ಮಹಾನ ಗ್ರ೦ಥವೆ೦ದು ವಾದಿಸುತ್ತಾರೆ.ಮೇಲ್ನೋಟಕ್ಕೆ ಇದು ಸರಿಯೆನಿಸಿದರೂ,ಕೂಲ೦ಕುಷ ಅಧ್ಯಯನದಿ೦ದ ಮಾತ್ರ ಭಗವದ್ಗೀತೆಯ ನಿಜವಾದ ತಾತ್ಪರ್ಯವನ್ನರಿಯಬಹುದು. ಮತ್ತಷ್ಟು ಓದು »

25
ಫೆಬ್ರ

ದಹಿಸಬೇಕಾಗಿರುವುದು ಧರ್ಮಗ್ರಂಥವನ್ನಲ್ಲ ಸಂಕುಚಿತ ಮನಸ್ಸಿನ ತ್ಯಾಜ್ಯವನ್ನು!

– ಸಂದೇಶ್.ಎಚ್.ನಾಯ್ಕ್ ಹಕ್ಲಾಡಿ,ಕುಂದಾಪುರ    

ಭಗವದ್ಗೀತೆಯಾವ ದೇಶ ತನ್ನ ಸಂಸ್ಕೃತಿ,ಸಂಸ್ಕಾರ, ಆಚಾರ, ವಿಚಾರಗಳಂತಹ ಮೇರು ಮೌಲ್ಯಗಳ ಮೂಲಕ ಜಗತ್ತಿನ ಜನಮಾನಸದಲ್ಲಿ ವೈಶಿಷ್ಟ್ಯಪೂರ್ಣ ಹೆಗ್ಗಳಿಕೆಗೆ ಭಾಜನವಾಗಿದೆಯೋ ಅದೇ ದೇಶದಲ್ಲಿನ ಬಹುಪಾಲು ನಾಗರೀಕರ ಮನಸ್ಸಿನಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಹಾಗೂ ಆಹ್ಲಾದತೆಗಳನ್ನು ಪಸರಿಸುವ ಧರ್ಮ, ಧಾರ್ಮಿಕತೆಯ ಅಂಶಗಳೆಂದರೆ ಕೆಲವು ವಿಚಾರವಾಧಿಗಳು ಹಾಗೂ ಪ್ರಗತಿಪರರಿಗೆ ಅದೇಕೋ ಕಡು ದ್ವೇಷ. ದೇವರು, ಆರಾಧನೆ, ಪೂಜೆ, ಪುನಸ್ಕಾರ, ಧರ್ಮಗ್ರಂಥಗಳೆಂಬ ಶಬ್ಧಗಳು ಅಂತಹವರ ಕಿವಿಗೆ ಬೀಳುತ್ತಲೇ ಕಾದ ಕಬ್ಬಿಣವನ್ನು ಕಿವಿಗೆ ಸುರಿದಂತೆ ವರ್ತಿಸಲಾರಂಭಿಸುತ್ತಾರೆ. ತಮ್ಮ ವೈಚಾರಿಕ ಹೊಳಹುಗಳಷ್ಟೇ ಸಾರ್ವಕಾಲಿಕವೆಂಬ ತಪ್ಪುಗ್ರಹಿಕೆಯನ್ನೇ ಸದಾ ಸಮಾಜದ ಮೇಲೆ ಹೇರುವ ಹಾಗೂ ಇನ್ನುಳಿದವೆಲ್ಲವೂ ದೋಷಪೂರಿತ, ಅಪಾಯಕಾರಿಯೆಂಬಂತೆ ಬಿಂಬಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿರುವವರು ಕಟ್ಟುವುದಕ್ಕಿಂತಲೂ ಕೆಡವುದು, ಒಡೆಯುವುದು ಹಾಗೂ ಬೀದಿಗೆ ಬೀಳಿಸಿ ವಿಕೃತ ಖುಷಿ ಪಡುವುದರಲ್ಲೇ ತಮ್ಮ ಉದ್ಧೇಶ ಈಡೇರಿಸಿಕೊಳ್ಳಬಲ್ಲೆವೆಂಬ ಅನಾರೋಗ್ಯಕರ ಮನಸ್ಥಿತಿಯೊಂದನ್ನು ಬೆಳೆಸಿಕೊಂಡಿದ್ದಾರೆ ಹಾಗೂ ಅದನ್ನು ಒತ್ತಾಯಪೂರ್ವಕವಾಗಿ ಸಮಾಜದ ಮೇಲೆ ಹೇರುವ ವಿಫಲ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಒಂದು ಭಾಗವೇ ‘ಭಗವದ್ಗೀತೆ’ಗೆ ಬೆಂಕಿ ಇಡಲು ಮುಂದಾಗಿರುವ ಆಕ್ರಮಣಕಾರಿ ಮನೋಪ್ರವೃತ್ತಿಯ ದುರಹಂಕಾರಿ ವರ್ತನೆ.

ಸಿಕ್ಕ ವೇದಿಕೆಯ ಘನತೆ ಗಾಂಭೀರ್ಯತೆಗೆ ನ್ಯಾಯ ಒದಗಿಸದೆ ತಮ್ಮ ವೈಯಕ್ತಿಕ ಅಸ್ತಿತ್ವ ಹಾಗೂ ವೈಚಾರಿಕ ಧೋರಣೆಯ ಚಲಾವಣೆಯನ್ನು ಕಾಯ್ದುಕೊಳ್ಳಲೋಸುಗ ಸಮಾಜೋದ್ಧಾರದ ಸೋಗು ತೊಟ್ಟು ಸದಾ ಅನ್ಯರ ಭಾವನೆಗಳನ್ನು ಅಪಮಾನಿಸುತ್ತಾ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವವರ ವರ್ತನೆಯಲ್ಲಿ ಢಾಳಾಗಿ ಗೋಚರಿಸುವುದು ವಿವೇಕ ಹಾಗೂ ವಿವೇಚನೆಗಳ ಕೊರತೆ. ಈ ಅಪಭ್ರಂಶ ವರ್ತನೆಯನ್ನು ಅನುಮೋದಿಸುವ, ಬೆಂಬಲಿಸುವ ಸಣ್ಣ ಹಿಂಬಾಲಕರ ಗುಂಪು ವೇದಿಕೆ ಮುಂದಿದ್ದರಂತೂ ಮುಗಿದೇ ಹೋಯಿತು. ಅವರ ಮಾತು, ಕೃತಿಗಳ ಮೇಲಿನ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಆ ಮೂಲಕ ತಮ್ಮಲ್ಲಡಗಿರುವ ಅಸಹಿಷ್ಣುತೆ, ಸಂಕುಚಿತತೆಗಳನ್ನು ಮತ್ತೆ ಮತ್ತೆ ಜಾಹೀರುಗೊಳಿಸುತ್ತಾರೆ.
ಮತ್ತಷ್ಟು ಓದು »

18
ಡಿಸೆ

ಗೀತೆ ಅರ್ಥೈಸಿಕೊಳ್ಳಲು ತಯಾರಿಲ್ಲದವರ ವ್ಯರ್ಥ ವಿರೋಧ

– ಡಾ. ಬಿ.ಕೆ ಸುರೇಶ್,ಮಂಡ್ಯ

ಭಗವದ್ಗೀತೆಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಬೇಕೆಂಬ ಪರ ವಿರೋಧದ ವಿಮರ್ಶೆಗಳಲ್ಲಿ “ದಾಯಾದಿಗಳ ಕಥನ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂದು ವಿಶ್ಲೇಷಿಸಿರುವ ಶ್ರೀ ವೆಂಕಟೇಶ್ ಕೆ ಜನಾದ್ರಿ ಅವರ ಆಲೋಚನೆ ವಿಚಿತ್ರವಾಗಿದೆ. ಕುರುಕ್ಷೇತ್ರ ಕದನದಲ್ಲಿ ಬುದ್ದ, ಕ್ರಿಸ್ತ, ಬಸವಣ್ಣ, ಗಾಂಧೀಜಿ ಮೊದಲಾದವರನ್ನೆಲ್ಲಾ ಎಳೆದು ತಂದು ಅವರೆಲ್ಲಾ ಇದ್ದಿದ್ದರೆ ಏನೇನು ಆಡುತ್ತಿದ್ದರು? ಏನೇನು ಸಂಭವಿಸುತ್ತಿತ್ತು? ಎಂಬುದನ್ನು ತಿಳಿಸಿದ್ದಾರೆ. ಖಂಡಿತವಾಗಿಯೂ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾರೇ ಇದ್ದಿದ್ದರೂ ಭಗವದ್ಗೀತೆ ಹುಟ್ಟುತ್ತಿರಲಿಲ್ಲ. ಅರ್ಜುನ ಉಳಿಯುತ್ತಲೂ ಇರಲಿಲ್ಲ. ಮಹಾಭಾರತದ ಅಸ್ತಿತ್ವವೇ ಇರುತ್ತಿರಲಿಲ್ಲ. ಗೀತೆ ಮತ್ತು ಕೃಷ್ಣನ ಮಹತ್ತ್ವ ಇರುವುದೇ ಅಲ್ಲಿ. ಭಗವದ್ಗೀತೆಯನ್ನು ಏನಕೇನ ವಿರೋಧಿಸಲೇ ಬೇಕೆಂಬ ಒಂದೇ ಒಂದು ಕಾರಣಕ್ಕೆ ಲೇಖಕರು ಕಾಲಧರ್ಮಕ್ಕನುಗುಣವಾಗಿ ಮಹಾಪುರುಷರು ಸಮಾಜವನ್ನು ಉದ್ದರಿಸಿದ್ದ ಸಂಗತಿಯನ್ನು ಮರೆತಿದ್ದಾರೆ. ಬುದ್ದನ ಕಾಲ ಮತ್ತು ಕಾಲಧರ್ಮವೇ ಬೇರೆ ಮತ್ತು ಬಸವಣ್ಣ ಕಾಲ ಮತ್ತು ಕಾಲಧರ್ಮವೇ ಬೇರೆ ಎಂಬ ಸಂಗತಿಯನ್ನು ಅವರು ಮರೆತಿದ್ದಾರೆ ಅಥವಾ ಮರೆತಂತೆ ನಟಿಸಿದ್ದಾರೆ. ಮಹಾಭಾರತ ಕಾಲದಲ್ಲಿ ಧರ್ಮವನ್ನು(ಪೂಜಾ ವಿಧಾನ ಎಂದು ಅರ್ಥೈಸಿಕೊಳ್ಳಬಾರದು) ಪ್ರತಿಪಾದನೆ ಮಾಡಬೇಕಾದ ವಿಧಾನ ಕೃಷ್ಣನದ್ದಾದರೆ ಬುದ್ದನ ಕಾಲದಲ್ಲಿ ಅದರ ವಿಧಾನ ಭೀನ್ನವೇ ಆಗಿರುತ್ತದಲ್ಲಾ. ನಮ್ಮ ಕಾಲದಲ್ಲಿ ಸ್ಲೇಟು ಹಿಡಿದು ಶಾಲೆಹೋಗುತ್ತಿದ್ದೆವು. ಈಗ ಮಕ್ಕಳು ಟ್ಯಾಬ್ಲಟ್ ಹಿಡಿದು ಹೋಗಲಾಗುತ್ತಿದೆ. ಹಾಗಾಗಿ ಸ್ಲೇಟೇ ಸರಿ ಇಲ್ಲ ಎನ್ನಲಾಗುತ್ತದೆಯೇ? ಬುದ್ದ ಮತ್ತು ಕೃಷ್ಣ ಇಬ್ಬರನ್ನೂ ಅವತಾರಿ ಪುರುಷರು ಎನ್ನುವ ನೆಲದಲ್ಲಿ ಅವೆರಡೂ ವಿಧಾನಗಳನ್ನು ನಮ್ಮ ದೇಶ ಒಪ್ಪಿದೆ. ಒಪ್ಪದೇ ಇರುವ ಮಾನಸಿಕತೆ ನಮ್ಮಲ್ಲಿ ಆರಂಭವಾಗಿದ್ದು ಕಮ್ಯುನಿಷ್ಟ ಚಿಂತನೆ ಸಮಾಜದಲ್ಲಿ ಪ್ರಚಾರಕ್ಕೆ ಬಂದ ಮೇಲಷ್ಟೆ. ತಮ್ಮ ಮೂಗಿನ ನೇರಕ್ಕೆ ವಾದಗಳನ್ನು ಮಂಡಿಸುವ ಇಂಥ ವಿಧಾನಗಳು ಪ್ರಚಲಿತಕ್ಕೆ ಬಂದಿರುವುದೂ ಕೂಡ ಕಮ್ಯುನಿಷ್ಟ್ ಚಿಂತನೆಯ ಪ್ರಚಾರದ ತರುವಾಯ.

ಮತ್ತಷ್ಟು ಓದು »

17
ಡಿಸೆ

ಭಾರತೀಯ ಸಂಸ್ಕೃತಿ,ಪರಂಪರೆಯ ಚೇತನವಾದ ಭಗವದ್ಗೀತೆ, ಕೇವಲ ದಾಯಾದಿಗಳ ಕಲಹವೇ..?

– ಎಸ್.ಎನ್.ಭಾಸ್ಕರ್‍, ಬಂಗಾರಪೇಟೆ

ಭಗವದ್ಗೀತೆಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಣೆ ಮಾಡುವ ಬಗ್ಗೆ ಪ್ರಸ್ತಾಪಿತವಾದ ಹಿನ್ನೆಲೆಯಲ್ಲಿ ದಿನಾಂಕ ೧೨-೧೨-೨೦೧೪ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ “ದಾಯಾದಿಗಳ ಕಲಹ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನವೊಂದು ಪ್ರಕಟವಾಗಿತ್ತು.

ಭಗವದ್ಗೀತೆಯ ವ್ಯಾಪ್ತಿಯ ಬಗ್ಗೆ, ಮಹತ್ವದ ಬಗ್ಗೆ ಸೂಕ್ತವಾದ ಅರಿವು ಇಲ್ಲದೇ ಬರೆದಂತಹ ಈ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಕೆಳಗಿನ ಲೇಖನವನ್ನು ಬರೆಯಲಾಗಿದೆ.

—————————————————————————————————-

“ಭಗವದ್ಗೀತೆಯನ್ನು ಅಭ್ಯಸಿಸಿ, ಭಗವಂತನ ಈ ಸೃಷ್ಠಿಯ ಪರಿಕಲ್ಪನೆಯನ್ನು ತಿಳಿದ ಅರಿವಿನ ಮುಂದೆ ಜಗತ್ತಿನಲ್ಲಿ ಅಸ್ಥಿತ್ವದಲ್ಲಿರುವ ಸಮಸ್ತ ಅಂಶಗಳು ಗೌಣವೆನಿಸುತ್ತವೆ” – ಆಲ್ಬರ್ಟ್ ಐನ್‌ಸ್ಟೈನ್.

“ಜೀವನದಲ್ಲಿ ಸಂದೇಹಗಳು ನನ್ನ ಕಾಡಿದಾಗ, ದುಃಖ, ಭ್ರಮನಿರಸನಗಳು ಎದುರಾದಾಗ, ಯಾವುದೇ ಆಶಾಕಿರಣಗಳು ಗೋಚರಿಸದಿದ್ದಾಗ, ಭಗವದ್ಗೀತೆಯ ಕಡೆ ನಾನು ಮುಖಮಾಡುತ್ತೇನೆ, ಮರುಕ್ಷಣ ದುಃಖ ದುಮ್ಮಾನಗಳು ಕರಗಿ, ಮನಸ್ಸಿನನಲ್ಲಿ ವಿಶ್ವಾಸದ ಮಂದಹಾಸ ಮೂಡುತ್ತದೆ. ಭಗವದ್ಗೀತೆಯನ್ನು ಧ್ಯಾನಿಸುವ ವ್ಯಕ್ತಿಯು ನಿರಂತರ ಸುಖಿಯಾಗುತ್ತಾನೆ, ಪ್ರತಿನಿತ್ಯವೂ ಜೀವನದ ಹೊಸ ಹೊಸ ಅರ್ಥಗಳನ್ನು ತಿಳಿಯುತ್ತಾನೆ” – ಮಹಾತ್ಮಾ ಗಾಂಧಿ.

ಮತ್ತಷ್ಟು ಓದು »

19
ಡಿಸೆ

ಭಗವದ್ಗೀತೆಯ ನೈತಿಕ ಜಿಜ್ಞಾಸೆ

– ರಮಾನಂದ ಐನಕೈ

ಭಗವದ್ಗೀತೆಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಂಥ ವಿವಾದಕ್ಕೆ ಎಡೆಯಾಗುತ್ತಲಿದೆ. ಭಗವದ್ಗೀತೆಯನ್ನು ಟೀಕಿಸುವ ಬಹುತೇಕ ಜನ ಅದನ್ನು ಓದಿಯೇ ಇಲ್ಲ. ಇನ್ನೂ ಕೆಲವು ಓದಿದವರಿಗೆ ಅದು ಅರ್ಥವೇ ಆಗಿಲ್ಲ. ಅದನ್ನು ಓದಿ ಅರ್ಥಮಾಡಿಕೊಂಡವರಿಗೆ  ಈ ವಿವಾದ ಎಬ್ಬಿಸಿದವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಇಷ್ಟೆಲ್ಲ ಗೊಂದಲವಾಗಲು ಮುಖ್ಯ ಕಾರಣವೆಂದರೆ ನಾವು ಭಗವದ್ಗೀತೆಯನ್ನು ಗೃಹಿಸುತ್ತಿರುವ ರೀತಿ. ಭಗವದ್ಗೀತೆಯನ್ನುವುದು ಒಂದು ಕತೆಯಲ್ಲ. ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ. ಅದು ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ.

ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂತು. ಏಕೆಂದರೆ ಪಾಶ್ಚಾತ್ಯರು ಪ್ರೊಟೆಸ್ಟಾಂಟ್ ವಿಚಾರಧಾರೆಯ ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆ ರಿಲಿಜನ್ನಿನ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು. ಇದು ಇಂದು ಆಧುನಿಕ ಭಾರತದಲ್ಲಿ ಭಗವದ್ಗೀತೆಯ ಕುರಿತಾಗಿ ಅಖಾಡವನ್ನೇ ನಿರ್ಮಾಣ ಮಾಡುತ್ತಲಿದೆ. ಹಾಗಾಗಿ ಭಗವದ್ಗೀತೆಯಲ್ಲಿ ಏನಿದೆ ಮತ್ತು ಅದು ಏನು ಹೇಳುತ್ತಲಿದೆ ಎಂಬುದನ್ನು ಈ ಶತಮಾನದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಮತ್ತಷ್ಟು ಓದು »