ಈ ಸ್ವಾತಂತ್ರ್ಯಕ್ಕೆ ಅಸ್ಸಾಮಿನ ಉರಿಯ ಅರಿವುಂಟೇ?
– ಸಂತೋಶ್ ತಮ್ಮಯ್ಯ
ನೇಪಾಳದ ಹಿಂದೂ ರಾಜನನ್ನು ಪದಚ್ಯುತಗೊಳಿಸಿದಾಗ ಭಾರತದಲ್ಲಿ ಯಾವ ಕಮ್ಯುನಿಷ್ಟ್ ಕಾಮ್ರೆಡನಿಗೂ ಪೆಟ್ಟು ಬಿದ್ದಿರಲಿಲ್ಲ. ಪಾಕಿಸ್ಥಾನದ ರಿಂಕಲ್ ಕುಮಾರಿಯನ್ನು ಮತಾಂಧರು ಮತಾಂತರಿಸಿದಾಗ ಇಲ್ಲಿನ ಯಾವ ಹಿಂದುವೂ ಬೀದಿಗೆ ಇಳಿದಿರಲಿಲ್ಲ. ಅಲ್ಲೆಲ್ಲೋ ಪಾಶ್ಚಾತ್ಯ ದೇಶದಲ್ಲಿ ಗಣಪತಿ, ಲಕ್ಷ್ಮಿ, ಬ್ರಹ್ಮದೇವರನ್ನು ಹೆಂಗಸರ ಚಡ್ಡಿಗಳಲ್ಲಿ ಚಿತ್ರಿಸಿ ರಾಂಪ್‌ವಾಕ್ ಮಾಡಿದಾಗಲೂ ಹಿಂದುಗಳಾರೂ ಬಸ್ಸುಗಳಿಗೆ ಕಲ್ಲು ಬಿಸಾಡಿರಲಿಲ್ಲ. ಅದಾವುದೋ ಕೆರೆಬಿಯನ್ ದೇಶದಲ್ಲಿ ಹಿಂದುವಾದವನು ಅಧ್ಯಕ್ಷನಾಗಬಾರದು ಎಂದಾಗ ಜಗತ್ತಿನಾದ್ಯಂತ ಹಿಂದುಗಳಾರೂ ಖಂಡಿಸಲಿಲ್ಲ. ಅವೆಲ್ಲಾ ಬಿಡಿ. ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದರೂ ಹಿಂದುಗಳಿಗೆ ಪಕ್ಕದ ಪರಮ ಅಸಹ್ಯವಾದ ಕಟ್ಟಡವೊಂದು ಸಾಮರಸ್ಯದ ಪ್ರತೀಕದಂತೆಯೇ ಕಾಣುತ್ತದೆ. ಅಯೋಧ್ಯೆಯ ರಾಮ ಇನ್ನೂ ಟೆಂಟ್ ವಾಸಿಯಾದರೂ ಬಹುತೇಕರಿಗೆ ಅದೇನೂ ಅಂಥ ಕೊರಗಿನಂತೆ ಕಾಣುವುದಿಲ್ಲ. ಯಾವ ಹಿಂದೂ ಸಂನ್ಯಾಸಿಯೂ ಮೌಲ್ವಿಗಳಂತೆ ಅಬ್ಬರಿಸುವುದಿಲ್ಲ. ಒಂದು ವೇಳೆ ಸಂನ್ಯಾಸಿ ಅಬ್ಬರಿಸಿದರೂ ಯಾರಿಗೂ ಹೆದರಿಕೆಯಾಗುವಂತೆ ಕಾಣುವುದೂ ಇಲ್ಲ.
ಅದು ಹಿಂದುವಿನ ಅತಿಯಾದ ಸಾತ್ತ್ವಿಕತೆಯೋ ಅಥವಾ ಭಂಡತನ ಮಿಶ್ರಿತ ಅತಿಯಾದ ಭಯವೋ ಎಂದು ವಿಶ್ಲೇಷಿಸುವುದು ಕಷ್ಟ. ಆದರೆ ಆತನಿಗೆ ಹಿಂದು ಎಂಬ ಕಾರಣಕ್ಕೆ ಸಿಟ್ಟು ಬರದಿರುವುದಂತೂ ಸತ್ಯ. ಮೇಲಿನ ಎಲ್ಲಾ ಸಂದರ್ಭಗಳಲ್ಲಿ ಅದು ಸಾಭೀತಾಗಿದೆ. ಬೀದಿಗಿಳಿಯಲು, ಪ್ರತಿಭಟಿಸಲು ಹಿಂದುವಿಗೆ ದಿನಕ್ಕೊಂದು ಕಾರಣವಾದರೂ ಸಿಗುತ್ತವೆ. ಆದರೆ ಅದು ನಡೆಯುವುದಿಲ್ಲ. ಏಕೆಂದರೆ ಹಿಂದುವಿಗೆ ಸಮಾಜಕ್ಕಾಗಿ ಎಂದಿಗೂ ಸಿಟ್ಟು ಬರುವುದಿಲ್ಲ.





