ಮೊದಲ ಬಾನಯಾನ : ಚಳಿಯಲ್ಲೂ ಬೆವೆತಿತ್ತು ಮನಸ್ಸು..!
– ಪ್ರಶಾಂತ್ ಯಳವಾರಮಠ
ನನ್ನ ಮುಂದಿನ ಪುಟ್ಟ ಸ್ಕ್ರೀನ್ ಮೇಲೆ ಚಲಿಸ್ತಾ ಇರೋ ವೇಗ ೭೫೦ ಮೈಲ್ಸ್/ಗಂಟೆಗೆ ಅಂತ ಮತ್ತು ಹೊರಗಡೆಯ ತಾಪಮಾನ -೬೩’ಸೆ ಅಂತ ತೋರಿಸ್ತಾ ಇದೆ !!! ನನ್ನ ಹೆಂಡತಿ ಹೇಳಿದಹಾಗೆ ಟೇಕ್ ಆಫ್ ಆಗುವಾಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನಾನು ಕಣ್ಬಿಟ್ಟಾಗ ಕಂಡ ಮಾಹಿತಿ ಇದು! ಏರ್ ಫ್ರಾನ್ಸ್ ವಿಮಾನದಲ್ಲಿ ಅದೂ ಮೊಟ್ಟಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾ ಇರೋ ನನ್ನ ಹುಚ್ಚು ಮನಸ್ಸಿನಲ್ಲಿ ಸಾವಿರಾರು ಕೆಟ್ಟ ಯೋಚನೆಗಳು ಬಂದು ಮನಸ್ಸು ತನ್ನಷ್ಟಕ್ಕೆ ತಾನೆ ಭಯಬೀತಗೊಂಡಿತ್ತು. ಇದರಿಂದ ಅತ್ತಿಂದಿತ್ತ ನೋಡುತ್ತಾ ಪಕ್ಕದಲ್ಲಿ ಯಾವುದೇ ಫೀಲಿಂಗ್ಸ್ ಗಳು ಇರದೇ ಕುಳಿತುಕೊಂಡಿರುವ ಅಜ್ಜಿಯೊಬ್ಬಳನ್ನು ನೋಡಿ ಧೈರ್ಯತಂದುಕೊಳ್ಳಲು ಪ್ರಯತ್ನಿಸಿದೆ, ನಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಅದಕ್ಕೆ ಹೀಗೆಲ್ಲ ಅನಿಸುತ್ತಾ ಇದೆ ಅಂಥ ನನ್ನಷ್ಟಕ್ಕೆ ನಾನೆ ಗೊಂದಲಗಳಿಂದ ಕೂಡಿದ ಮನಸ್ಸಿಗೆ ಸಮಾಧಾನ ಹೇಳುತ್ತಾ ಇದ್ದೆ.
ಇವುಗಳ ಮದ್ದೆ ತಮ್ಮ ನಾಜೂಕಾದ ನಡಿಗೆಗಳಿಂದ ಮುಖದಲ್ಲಿ ತುಂಬು ಮುಗುಳ್ನಗೆಗಳನ್ನು ತುಂಬಿಕೊಂಡ ಗಗನಸಖಿಯರು ಅತ್ತಿಂದಿತ್ತ ಓಡಾಡ್ತಾ ಇದ್ದಾರೆ ಎಷ್ಟೋ ಜನ ಕೆಂಪು ಮುಖಗಳ ವಿದೇಶಿಯರು ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲಿ ಮಾತಾಡುತ್ತ, ನಗುತ್ತಾ ನಿರ್ಭೀತರಾಗಿ ಹರಟುತ್ತಿದ್ದಾರೆ. ವಿಮಾನದಲ್ಲಿ ಆಗ್ತಾ ಇರೋ ಈ ಎಲ್ಲ ಆಗುಹೋಗುಗಳಿಂದ ನನಗು ಸ್ವಲ್ಪ ಸಮಾಧಾನವಾಗಿ ಮನಸ್ಸು ಹಗುರವಾಯಿತು.





