ಹೊಸದನ್ನೇನೋ ಕಂಡಂತೆ…!!
– ಅವಿನಾಶ್ ಜಿ ರಾಮ್
ವಿಚಿತ್ರವಾಗಿ ಕಾಡುವ ರಿಚ್ಚಿ, ಮೌನವಾಗಿಯೇ ಕೊಲ್ಲುವ ಮುನ್ನಾ ಅಲಿಯಾಸ್ ಪ್ರಣಯರಾಜ.. ನೋಡುವವರ ಕಣ್ಣು ತೇವ ಮಾಡಲೇಂದೆ ಕಾದು ಕುಳಿತ ರತ್ನಕ್ಕ ಮತ್ತವಳ ಮಗ ರಾಘು.. ಪಾಪ ಎನಿಸುವ ಬಾಲು.. ಕಣ್ಣೆದುರು ಬಂದಾಗೆಲ್ಲಾ ಬೆರಗು ಮೂಡಿಸುವ ಡೆಮಾಕ್ರಸಿ.. ಹೀಗೆ ಪಟ್ಟಿ ಮಾಡುತ್ತ ಹೋದರೆ ಉಳಿದವರ ಗುಂಪು ದೊಡ್ಡದಾಗುತ್ತ ಹೋಗುತ್ತದೆ..
ಅತ್ಯಂತ ವಿಭಿನ್ನ ಆಯಾಮಗಳೊಂದಿರುವ ಈ ಸಿನಿಮಾ ನನ್ನ ಕುತೂಹಲಕ್ಕೆ ಮೋಸ ಮಾಡಿಲ್ಲ. ಪ್ರತಿ ಪ್ರೇಮ್‌ನಲ್ಲೂ ತನ್ನ ಸಹಿ ಉಳಿಸಿರುವ ಕರಮ್ ಚಾವ್ಲಾರ ಕ್ಯಾಮೆರಾ ಕೈಚಳಕ, ಇಡೀ ಸಿನಿಮಾದಲ್ಲೊಂದು ಯಶಸ್ವಿ ಪಾತ್ರವಾಗಿರುವ ಅಜನೀಶ್ ರ ಸಂಗೀತ..:) ಕತ್ತರಿ ಪ್ರಯೋಗದಲ್ಲಿ ಕುಶಲತೆ ತೋರಿರುವ ಸಚಿನ್. ಈ ಎಲ್ಲಾ ತಂತ್ರಜ್ಞರ ತಾಂತ್ರಿಕತೆಯಲ್ಲಿ ಮಿಂದಿದೆ ‘ಉಳಿದವರು..‘
ತಂಡದ ನಾಯಕನಾಗಿರುವ ರಕ್ಷಿತ್ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನದ್ದು ನೀಡಬಲ್ಲೇ ಎಂದು ಸಾಬೀತು ಮಾಡಿದ್ದಾರೆ. ಚಿತ್ರಕಥೆಯ ಶೈಲಿ ಭಿನ್ನವಾಗಿದೆ. ವರ್ಲ್ಡ್ ಸಿನಿಮಾಗಳ ಪ್ರಭಾವ ಅವರಿಗಾಗಿದೆ. ರಕ್ಷಿತ್ ಬರೀ ನಟನಾಗಿ ಮಾತ್ರ ಉಳಿದು ಹೋಗಬಾರದಾಗಿ ವಿನಂತಿ..
ಇನ್ನೂ ಲಾಭಾಂಶಗಳ ಲೆಕ್ಕಾಚಾರ ಮಾಡದೇ ಚಿತ್ರ ನಿರ್ಮಾಣ ಮಾಡಿದ ಸಿಂಪಲ್ ಸುನಿ ಮತ್ತು ತಂಡಕ್ಕೆ ಕೃತಜ್ಞತೆ ಹೇಳಲೇಬೇಕು..ಈ ಚಿತ್ರ ಅರ್ಥ ಆಗ್ತಿಲ್ಲ ಅನ್ನೋ ಕೊರಗು ಹಾಗೂ ವಿಮರ್ಶೆಗಳು ಎಲ್ಲೆಡೆ ಉಚಿತವಾಗಿ ಕೇಳಿ ಬರುತ್ತಿವೆ. ಇದುವರೆಗೂ ಎಂತೆಂಥ ಅನರ್ಥಗಳು, ಹೊಲಸು ತುಂಬಿರುವ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅಂತವುಗಳನ್ನು ಗೆಲ್ಲಿಸಿ ಯಶಸ್ವಿ ಚಿತ್ರ ಎಂಬ ಹಣೆ ಪಟ್ಟಿ ಕೊಟ್ಟವರು ನಾವು ಇನ್ನು ಈ ‘ ಉಳಿದವರನ್ನು ಅರಗಿಸಿಕೊಳ್ಳಲಾಗಲಿಲ್ಲವೆಂದರೇ ಹೇಗೆ..?
ಜೋಶಿಯವರು ಕಂಡಂತೆ.. ಉಳಿದವರು ಕಂಡಂತೆ.. ಹೀಗಂತೆ…
-ಶ್ರೀವತ್ಸ ಜೋಶಿ
ಬೇಡಾ ನಂಬಬೇಡಾ… ಜೀವ ಹೋದರೂ ಕನ್ನಡ ಪತ್ರಿಕೆಗಳಲ್ಲಿನ ಚಿತ್ರವಿಮರ್ಶೆಗಳನ್ನು ನಂಬಬೇಡ.
‘ಉಳಿದವರು ಕಂಡಂತೆ’ ಬಗ್ಗೆ ಅವು ಬರೆದಿರೋ ವಿಮರ್ಶೆಯನ್ನಂತೂ ದೇವರಾಣೆಗೂ ನಂಬಬೇಡ.
ಅದರಲ್ಲೂ ಕಪ್ರ, ಪ್ರವಾ, ವಿಕ, ವಿವಾ ಗಳ ಪ್ರಲಾಪವನ್ನು ಕೇಳಲೇಬೇಡ. ಉದಯವಾಣಿಯಲ್ಲಿನ ವಿಮರ್ಶೆಯನ್ನು ಓದದೆ ಬಿಡಬೇಡ.
ಇದು, ಸದಭಿರುಚಿಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ವಾಷಿಂಗ್ಟನ್ ಡಿಸಿಯಿಂದ ಒಬ್ಬ ಶ್ರೀ(ವತ್ಸ)ಸಾಮಾನ್ಯ ಕನ್ನಡಿಗನ ಕಿವಿಮಾತು.
ಭಾನುವಾರ (ಮಾರ್ಚ್ 30) ಬೆಳಿಗ್ಗೆ ಹತ್ತು ಗಂಟೆಗೆ ಇಲ್ಲಿನ AMC ಸಿನೆಮಾ ಕಾಂಪ್ಲೆಕ್ಸ್‌ನಲ್ಲಿ ’ಉಳಿದವರು ಕಂಡಂತೆ’ ಸಿನೆಮಾ ಪ್ರದರ್ಶನ ಇತ್ತು. ಅಮೆರಿಕದ ಇತರ ನಾಲ್ಕು ಕಡೆಗಳಲ್ಲಿ (ನ್ಯೂಜೆರ್ಸಿ, ಶಿಕಾಗೊ, ಡೆಟ್ರಾಯಿಟ್ ಮತ್ತು ಕ್ಯಾಲಿಫೋರ್ನಿಯಾ) ಸಹ ಈ ಚಿತ್ರ ಬಿಡುಗಡೆಯಾಯ್ತು. ಕನ್ನಡ ಚಲನಚಿತ್ರ ಪ್ರದರ್ಶನ ಇಲ್ಲಿ ಅಪರೂಪವೆಂದೇ ಹೇಳಬೇಕು, ಅದರಲ್ಲೂ ’ಉಳಿದವರು ಕಂಡಂತೆ’ಯಂಥ ವಿಭಿನ್ನ ವಿಶಿಷ್ಟ, “ಈರೀತಿಯದು ಕನ್ನಡದಲ್ಲಿ ಇದೇ ಮೊದಲು” ಎನ್ನಲಾದ ಚಿತ್ರ, ಅಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾದಾಗಲೇ ಇಲ್ಲೂ ಪ್ರದರ್ಶನ ಕಾಣುತ್ತಿರುವುದು ನಮಗೆಲ್ಲ ಸಂತೋಷದ, ಹೆಮ್ಮೆಯ ವಿಚಾರ. ವಾಷಿಂಗ್ಟನ್ ಡಿಸಿಯಲ್ಲಿನ ಚಿತ್ರಮಂದಿರ ಹೆಚ್ಚೂಕಡಿಮೆ ಭರ್ತಿಯಾಗಿತ್ತು, ಇತ್ತೀಚೆಗೆ ಇಲ್ಲಿಗೆ ಬಂದ ನವಯುವಕರು, ಐಟಿಹುಡುಗರು ತುಂಬಿಕೊಂಡಿದ್ರು. ನಾವೆಲ್ಲ ಚಿತ್ರವನ್ನು ತುಂಬ ಇಷ್ಟಪಟ್ಟೆವು.
’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆ ಕನ್ನಡದ ಪ್ರಮುಖ ದಿನಪತ್ರಿಕೆಗಳ ಶನಿವಾರದ ಸಂಚಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾನು ಗಮನಿಸಿದ್ದೆ, ಓದಿದ್ದೆ. ಅದೇನೂ ನನ್ನ ಮೇಲೆ ಪ್ರಭಾವ ಬೀರಿತ್ತು ಅಂತಲ್ಲ. ಆದರೆ ನಾನೇ ಸಿನೆಮಾ ನೋಡಿ ಬಂದಮೇಲೆ ಆ ವಿಮರ್ಶೆಗಳು (ಒಂದನ್ನು ಹೊರತುಪಡಿಸಿ) ಎಂಥ ಪ್ರಮಾಣದಲ್ಲಿ ದಾರಿತಪ್ಪಿಸುವಂಥವಾಗಿವೆ, ವಾಸ್ತವಕ್ಕೆ ಅದೆಷ್ಟು ದೂರವಾಗಿವೆ ಎಂದು ಅರಿತು ಆಘಾತವಾಯಿತು. ’ಉಳಿದವರು ಕಂಡಂತೆ’ಯಂಥ ಒಂದು ಉತ್ತಮ ಪ್ರಯತ್ನ/ಪ್ರಯೋಗದ ಉನ್ನತ ಮಟ್ಟದ ಮೌಲ್ಯವನ್ನು ಅರಿಯಲಾರದೆ “ದ್ರಾಕ್ಷಿ ಹುಳಿಯಾಗಿದೆ” ಎಂದು ಮುಖ ಸಿಂಡರಿಸಿ ಓಡಿದ ನರಿಯನ್ನು ಅವು ನನಗೆ ನೆನಪಿಸಿದವು.





