ವಿಷಯದ ವಿವರಗಳಿಗೆ ದಾಟಿರಿ

Posts tagged ‘ಎಲ್ಲರ ಕನ್ನಡ’

10
ಜೂನ್

ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು ಪತ್ರ

– ವಿನಾಯಕ್ ಹಂಪಿಹೊಳಿ

ಶಂಕರ ಬಟ್ಅಲ್ರೀ ಶಂಕರ್,

ನೀವೇನೋ ಹಳೆಗನ್ನಡ, ತಮಿಳು, ಮಲಯಾಳಂ, ತುಳು, ಹವ್ಯಕ ಕನ್ನಡ ಎಲ್ಲಾ ಓದೀರಿ. ಇವೆಲ್ಲಾ ದ್ರವಿಡ ಭಾಷಾಗಳು, ಹಿಂಗಾಗಿ ಋ, ಖ, ಘ, ಙ, ಛ, ಝ, ಞ, ಠ, ಢ, ಥ, ಧ, ಫ, ಭ ಎವೆಲ್ಲ ಅಕ್ಷರಗಳು ಕನ್ನಡದಾಗ ಬ್ಯಾಡಾ ಅಂತನೂ ಹೇಳೀರಿ. ಅಚ್ಚಗನ್ನಡ ಶಬ್ದದಾಗ ಮಹಾಪ್ರಾಣ ಅಕ್ಷರಗಳು ಬರಂಗಿಲ್ಲ ಅಂತನೂ ಅಂದ್ರಿ. ಜತಿಗೆ, ಷ ಬ್ಯಾಡ ಅಂತನೂ ಅಂದ್ರಿ. ಆ ಬದ್ಲಾವಣಿ ನಿಮ್ಮಿಂದನಽ ಶುರೂನೂ ಮಾಡಿದ್ರಿ. ನಿಮ್ಮ ಹೆಸರು ಭಟ್ಟ ಅಂತಿತ್ತು ಅದನ್ನು ಬಟ್ ಅಂತ ಮಾಡ್ಕೊಂಡೀರಿ. ಇರ್ಲಿ. ಇಂಗ್ಲೀಷನ್ಯಾಗ ಬರ್ಯೋಮುಂದ ಜ್ವಾಕಿ. ಆದ್ರ ನಿಮ್ಮ ಸಲಹಾ ಸರ್ಕಾರ ಕೇಳ್ತದೋ ಬಿಡ್ತದೋ, ಆದರೆ ಅದಕ್ಕೂ ಮೊದ್ಲ ನನ್ನ ಮಾತಿಗೂ ಸ್ವಲ್ಪ ಬೆಲಿ ಕೊಟ್ಟು ವಿಚಾರ ಮಾಡ್ರೀ..

ನಾವು ಧಾರವಾಡದ ಮಂದಿ. ನಮ್ಮ ಉತ್ತರ ಕರ್ನಾಟಕದ ಕನ್ನಡ, ಕನ್ನಡ ಹೌದೋ ಅಲ್ಲೋ? ಉತ್ತರ ಕರ್ನಾಟಕದ ಕನ್ನಡದಾಗ, ಸಾಹಿತ್ಯ, ಕಾದಂಬರಿ, ಕಾವ್ಯಗಳು ಐತೋ ಇಲ್ಲೋ? ಮುಂದನೂ ಈ ಕನ್ನಡ ಇರ್ಬಕೋ ಬ್ಯಾಡೋ? ನೀವು ಎಲ್ಲ ಮಹಾಪ್ರಾಣಗಳನ್ನು ನಮ್ಮ ಕನ್ನಡದ ಲಿಪಿಯಿಂದ ತಗದ್ರ ನಮ್ಮ ಸಾಹಿತ್ಯಕ್ಕ ಯಾವ ಲಿಪಿ ಇಟ್ಕೋಳೂಣು? ಬೆಂಗ್ಳೂರವ್ರು ಸತ್ಯ ಅನ್ಲಿಕ್ಕೆ ನಿಜ, ದಿಟ ಅನ್ನು ಪದ ಉಪಯೋಗಸ್ತಾರ. ಆದ್ರ ನಮ್ದು ಗಂಡ್ ಕನ್ನಡ ನೋಡ್ರಿ. ಖರೇನ ಹೇಳ್ತೀನಿ, ನಾವು ’ಖರೆ’ ಅನ್ನುಮುಂದ ವಟ್ಟ ’ಕರೆ’ ಅಂತ ಯಾವತ್ತೂ ಅನ್ನಂಗಿಲ್ರೀ. ನೀವು ಹವ್ಯಕರು, ಅಡಿಗಿ ಹೆಂಗಾಗ್ಯದ ಅಂತ ಕೇಳಿದ್ರ ’ಬಾಽಽರಿ ಚೊಲೊ ಆಯ್ದು ಮಾರಾಯ’ ಅಂತೀರಿ. ಆದ್ರ ನಾವು ನಮ್ಮ ಗಂಡ್ ಕನ್ನಡದಾಗ ’ಭಾರೀಽಽ ಛೊಲೋ ಆಗ್ಯದ್ ಲೇ ಮಂಗ್ಯಾ’ ಅಂತೀವಿ.

ನಾವು ಕಿಟಕಿ ಅನ್ನಂಗಿಲ್ಲ. ಸ್ಪಷ್ಟ ಖಿಡಕಿ ಅಂತೀವಿ. ಸ್ಪಷ್ಟ ಶಬ್ದದಾಗೂ ’ಷ’ ಅಕ್ಷರ ಭಾರೀ ಖಡಕ್ಕಾಗಿ ಬರ್ತೈತಿ ನಮ್ಮ ಮಾತ್ನ್ಯಾಗ. ನಾವು ನಿಮ್ಮಂಗ ಗಂಟೆ ಅನ್ನಂಗಿಲ್ರೀ. ಫಕ್ತ ಘಂಟಿ ಅಂತೀವಿ. ನೀವು ಸೆಲೆ ಅಂತೀರಿ. ನಾವು ನೀರಿನ ಝರಿ ಅಂತೀವಿ. ಅನ್ನಕ್ಕ ಹಚ್ಕೊಳ್ಳಿಕ್ಕೆ ಮೈದಾ ಹಿಟ್ಟಿಲೆ ಝುಣಕ ಅಂತ ಮಾಡ್ತೇವಿ. ಬಯ್ಯೋಮುಂದ ’ಭಾಮ್ಟ್ಯಾ’ ಅಂತ ಬೈತೀವಿ. ನಿಮಗ ಉಚ್ಚಾರ ಮಾಡ್ಲಿಕ್ಕೆ ತ್ರಾಸಾಗ್ತದ, ಅದ್ರ ನಮಗ ಅಗ್ದೀ ಸರಽಽಳ ನೋಡ್ರಿ. ಯಾರರೇ ಭಾಳಽಽ ದಪ್ಪ್ ಇದ್ರ ಢೇಪ್ಯಾ ಅಂತೀವಿ. ಠೇವಣಿ ಶಬ್ದ ಹೆಂಗದನೋ ಹಂಗ ಬಳಸ್ತೀವಿ. ಬಹಳ ಅನ್ನಂಗಿಲ್ರೀ. ತಟ್ಟೆ ಅನ್ನಂಗಿಲ್ರೀ. ಥಾಬಾಣ ಅಂತೀವಿ. ಕಚ್ಚಿ ಉಡೋ ದೊಡ್ಡ ಪಂಜಾಕ್ಕ ಧೋತ್ರ ಅಂತೀವಿ.

ಮತ್ತಷ್ಟು ಓದು »

15
ಏಪ್ರಿಲ್

ಸಾಹಿತ್ಯ ಪರಂಪರೆಯ ಅರಿವಿಲ್ಲದ ’ಎಲ್ಲರ ಕನ್ನಡ’

ಡಾ. ಮಾಧವ ಪೆರಾಜೆ ಅವರ ಲೇಖನಕ್ಕೊಂದು ಪೂರಕ ಪ್ರತಿಕ್ರಿಯೆ

– ಡಾ. ಮೋಹನ ಕುಂಟಾರ್

imagesಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣದ ಮೂಲಕ ಡಿ.ಎನ್.ಶಂಕರಭಟ್ಟರು ಕನ್ನಡ ಬರವಣಿಗೆಯಲ್ಲಿ ಹೊಸ ಕ್ರಾಂತಿಯನ್ನು ಮಾಡಲು ಮುಂದಾಗಿದ್ದಾರೆ. ಅವರ ಮಾರ್ಗದಲ್ಲೇ ಮುಂದುವರಿಯುವ ಅವರ ಶಿಷ್ಯವರ್ಗ ಅದನ್ನೇ ಸಮರ್ಥಿಸಿ ಕೃತಿರೂಪಕ್ಕೆ ಇಳಿಸುತ್ತಿದೆ. ಒಂದು ರೀತಿಯಲ್ಲಿ ಇದು ಅತಿಬುದ್ಧಿವಂತಿಕೆಯ ಪ್ರದರ್ಶನವಲ್ಲದೇ ಬೇರೇನೂ ಅಲ್ಲ.

ಕನ್ನಡಕ್ಕೆ ಭಾಷಿಕವಾಗಿಯೂ ಸಾಹಿತ್ಯಿಕವಾಗಿಯೂ ಗೌರವ ತರುವ ಸುದೀರ್ಘ ಪರಂಪರೆಯಿದೆ. ಅದರ ಮೂಲಕವೇ ಕನ್ನಡ ಪರಂಪರೆ ವಿಶಾಲವಾಗಿ ಅಷ್ಟೆ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿರುವುದನ್ನು ಗುರುತಿಸಲಾಗುತ್ತಿದೆ. ಪಂಪ, ಕುಮಾರವ್ಯಾಸಾದಿಗಳು ಬರೆಯುವ ಕಾಲಕ್ಕೆ ಮಾತನಾಡುವ ಭಾಷೆ ಬಳಕೆಯಲ್ಲಿತ್ತು. ಮಾಸ್ತಿ, ಕಾರಂತ, ಕುವೆಂಪು ಅವರ ಕಾಲದಲ್ಲಿಯೂ ಇತ್ತು. ಅವರೆಲ್ಲ ಬರವಣಿಗೆಯ ಭಾಷೆಯೊಂದನ್ನು ಕನ್ನಡದ ಮೂಲಕ ಕಟ್ಟಿಕೊಟ್ಟು ಕನ್ನಡ ಭಾಷೆಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಇವರೆಲ್ಲರ ಗ್ರಾಂಥಿಕ ಭಾಷೆಗೆ ಆಡುನುಡಿಯ ಸೊಗಡೂ ಪೂರಕವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿ ಕನ್ನಡದ ಮಾತಿನ ಭಾಷೆಯಲ್ಲಿ ಮಹಾಪ್ರಾಣಾಕ್ಷರಗಳಿದ್ದುವು, ಋಕಾರಗಳೂ ಇದ್ದುವು. ಉಚ್ಚಾರದಲ್ಲಿ ಅದನ್ನು ಸ್ಪಷ್ಟವಾಗಿ ಬಳಸದೆ ಇದ್ದಾಗಲೂ ಆ ವ್ಯತ್ಯಾಸವನ್ನು ನಿರಂತರವಾಗಿ ಕನ್ನಡ ಪರಂಪರೆ ಗ್ರಹಿಸುತ್ತಾ ಬಂದಿದೆ. ಅದಕ್ಕಾಗಿ ಕನ್ನಡ ಭಾಷೆಯ ಲಿಖಿತ ಪರಂಪರೆಯ 1500 ವರ್ಷಗಳ ಸುದೀರ್ಘ ಇತಿಹಾಸದ ನಡುವೆ ಆ ಅಕ್ಷರಗಳೆಲ್ಲ ಉಳಿದುಕೊಂಡು ಬಂದಿವೆ. ಬರಹ ಭಾಷೆ ಎನ್ನುವುದು ಭಾಷಾಭಿವ್ಯಕ್ತಿಯ ಒಂದು ಸಾಧ್ಯತೆ ಮಾತ್ರ. ಅದೇ ಅಂತಿಮ ಅಲ್ಲ. ಬಳಕೆಯ ಉಚ್ಚಾರವೆಲ್ಲ ಬರಹದ ಭಾಷೆಯಲ್ಲಿ ಬರಬೇಕೆಂಬ ಹಟ ಸಲ್ಲದು. ಬರವಣಿಗೆಯ ಭಾಷೆಗೆ ಒಂದು ಮಿತಿ ಇದೆ. ಒಂದು ಶಿಸ್ತು ಇದೆ. ಆ ಶಿಸ್ತು ಮಾತಿನ ಭಾಷೆಯಿಂದಲೇ ರೂಪುಗೊಂಡುದು. ಮಾತಿನ ಭಾಷೆಯೇ ಅಂತಿಮ. ಅವುಗಳಲ್ಲಿ ವ್ಯತ್ಯಸ್ಥ ರೂಪಗಳನ್ನು ಅಂಗೀಕರಿಸಿದ ಕಾರಣಕ್ಕೆ ಬರಹದಲ್ಲಿ ವಿಭಿನ್ನ ಸಂಕೇತಗಳು ಬಳಕೆಯಾಗಿವೆ. ಈ ಸಂಕೇತಗಳೇ ಅಲ್ಪಪ್ರಾಣಗಳೆಂದೂ, ಮಹಾಪ್ರಾಣಗಳೆಂದೂ ದಾಖಲಾಗಿವೆ. ಈಗ ಅವು ಕನ್ನಡದ ಬರಹ ಭಾಷೆಯ ಅವಿಭಾಜ್ಯ ಸಂಕೇತಗಳು. ಆಗಾಗ ಕವಿಗಳು ಅಚ್ಚಕನ್ನಡದ ಬಳಕೆಗಾಗಿ ಶ್ರಮಿಸಿದ್ದುಂಟು. ಆಂಡಯ್ಯನಂತಹ ಪ್ರಾಚೀನರು ಹಾಗೂ ಕೊಳಂಬೆ ಪುಟ್ಟಣ್ಣಗೌಡರಂಥ ಆಧುನಿಕರನ್ನು ಇಲ್ಲಿ ಹೆಸರಿಸಬಹುದು. ಆದರೆ ಅವರ ಪ್ರಯೋಗಗಳು ವಿಫಲವಾಗಿ ಅದನ್ನು ಮೀರಿದ ಪ್ರಯೋಗಗಳೇ ಕನ್ನಡದಲ್ಲಿ ದಾಖಲಾದವು.

ಮತ್ತಷ್ಟು ಓದು »

10
ಏಪ್ರಿಲ್

ಶಂಕರ ಬಟ್ಟರದ್ದು “ಎಲ್ಲರ ಕನ್ನಡ”ವೇ?

– ಡಾ.ಮಾಧವ ಪೆರಾಜೆ

images

ಡಾ. ಆರ್. ಚಲಪತಿಯವರು ‘ತಂತಿ ಮೇಲಿನ ನಡಿಗೆ’ ಎನ್ನುವ ಪುಸ್ತಕವನ್ನು ಇದೀಗ ತಾನೇ ಪ್ರಕಟಿಸಿದ್ದಾರೆ. ‘ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತು ಕತೆ’ ಎನ್ನುವ ಉಪಶೀರ್ಷಿಕೆಯೂ ಇದಕ್ಕಿದೆ. ಸಖಿ ಪ್ರಕಾಶನ ಹೊಸಪೇಟೆ ಇವರು ಇದನ್ನು ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆಯ ಕುರಿತು ಒಟ್ಟಾರೆಯಾಗಿ ನಾನು ಮುಂದೆ ಚರ್ಚಿಸಲಿರುವುದರಿಂದ ಆರಂಭದಲ್ಲಿಯೇ ಒಂದು ಮಾತನ್ನು ವಿಶೇಷವಾಗಿ ಪ್ರಸ್ತಾಪಮಾಡಿ ಮುಂದುವರಿಯುತ್ತೇನೆ.ಈ ಪುಸ್ತಕದ ಮುಖಪುಟದ ಮೇಲಿನಿಂದ ಅದು ಸ್ವತಂತ್ರ ಪುಸ್ತಕದ ಹಾಗೆ ಕಾಣುತ್ತದೆ. ಆದರೆ ತೆರೆತೆರದಂತೆ ಅದು ಸಂಪಾದನೆ ಎನ್ನುವುದು ಸ್ಪಷ್ಟವಾಗುತ್ತದೆ.ಶಿಕ್ಷಣ ಕ್ಷೇತ್ರದಲ್ಲಿ ದಶಕಗಳಿಂದ ತೊಡಗಿಸಿಕೊಂಡಿರುವವರೊಂದಿಗೆ ಲೇಖಕರು ಮಾಡಿದ ಸಂದರ್ಶನಗಳಿರುವ ಪುಸ್ತಕವಿದು. ಹಾಗಿರುವಾಗ ಇಂತಹ ಪುಸ್ತಕವನ್ನು ಸಂಪಾದನೆ ಎಂದು ಸ್ಪಷ್ಟವಾಗಿ ಗುರುತಿಸಬೇಕು.ಅದುವೇ ಸರಿಯಾದ ವಿಧಾನ.

ಈ ಪುಸ್ತಕದಲ್ಲಿ ಪ್ರಯೋಗವಾಗಿರುವ ಭಾಷೆಯ ಕುರಿತು ಒಂದು ಉದಾಹರಣೆಯನ್ನು ನೀಡುತ್ತೇನೆ.

ಉದಾ: ೧:

“ಪದವಿ ತರಗತಿಗಳಲ್ಲಿ ಏನನ್ನು ಕಲಿಯುವುದು/ ಕಲಿಸುವುದಾಗಿರಬೇಕು?”

ಎಂ.ಜಿ.ಸಿ. ಯಾವುದೇ ಒಂದು ಮಾತ್ರುಬಾಶೆಯನ್ನು ತರಗತಿಯಲ್ಲಿ ಕಲಿಯುವ ವಿದ್ಯಾರ್‍ತಿಗೆ ಆ ಭಾಶೆಯಲ್ಲಿ ವ್ಯವಹರಿಸುವ ಸಾಮಾನ್ಯ ಜ್ನಾನವಿರುತ್ತದೆ. ತರಗತಿಗಳಲ್ಲಿ ಹೊಸ ಪಾರಿಬಾಶಿಕ ಪದಗಳು ಪರಿಚಯವಾಗುತ್ತವೆ. ಹಾಗೂ ಒಂದು ರೀತಿಯ ಆಲೋಚನಾ ಕ್ರಮಕ್ಕೆ ಆಡುಬಾಶೆಯಿಂದ ಶಿಶ್ಟಬಾಶೆಯ ಕಡೆಗೆ ಅವನ/ಳ ಗಮನ ಹರಿಯುತ್ತದೆ.

ಒಂದು ರೀತಿಯಲ್ಲಿ ಕಲಿಸುವವರು ಮತ್ತು ಕಲಿಯುವವರು ಅಸಹಾಯಕರು. ಪಟ್ಯಕ್ರಮ ಮತ್ತು ಪಟ್ಯವನ್ನು ಸಿದ್ದಪಡಿಸುವವರೇ ಬೇರೆಯವರಾಗಿರುತ್ತಾರೆ. ಈಗ ಪರಿಸ್ತಿತಿ ಸುದಾರಿಸುತ್ತಿದೆ ಎನಿಸಿದರೂ ವಿವಿಗಳ ಒಟ್ಟು ರಚನಾ ವಿನ್ಯಾಸವೇ ಪ್ಯೂಡಲ್ ಮಾದರಿಯದು- ವಸಾಹತು ಕಲ್ಪನೆಯದು. ಅವು ಇಂದಿಗೂ ಡೆಮಕ್ರೆಟಿಕ್ ಆಗಿಯೇ ಇಲ್ಲ.(ಪು.೧೨) ಮತ್ತಷ್ಟು ಓದು »