ಕಾನೂನಿನಂಗಳ ೪ : ಆಧುನಿಕ ಕಾನೂನುಗಳು
– ಉಷಾ ಐನಕೈ ಶಿರಸಿ
ಭಾರತದಲ್ಲಿ ಕಾನೂನುಗಳನ್ನು ಅಧ್ಯಯನ ಮಾಡುವಾಗ ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ನೋಡುವುದು ಅನಿವಾರ್ಯವಾಗುತ್ತದೆ. ಅದಾವವೆಂದರೆ ಬ್ರಿಟಿಶ್ ವಸಾಹತುಶಾಹಿ ಪೂರ್ವದ ಕಾನೂನುಗಳು ಹಾಗೂ ವಸಾಹತುಶಾಹಿ ನಂತರದ ಕಾನೂನುಗಳು. ಪೂರ್ವದ ಕಾನೂನುಗಳು ಪ್ರಾಚೀನ ಭಾರತದ ಕಾನೂನುಗಳೆಂದೇ ಗುರುತಿಸಲ್ಪಡುತ್ತದೆ. ಶ್ರುತಿ, ಸ್ಮೃತಿ, ಧರ್ಮ, ಸಂಪ್ರದಾಯಗಳೆಲ್ಲ ಆ ಕಾಲದ ಕಾನೂನಿನ ನೆಲೆಗಳು. ವಸಾಹತುಶಾಹಿ ನಂತರದ ಕಾನೂನುಗಳು ಆಧುನಿಕ ಕಾನೂನುಗಳೆಂದು ಗುರುತಿಸ್ಪಟ್ಟು ಇಂದಿಗೂ ಕೂಡ ಚಾಲನೆಯಲ್ಲಿವೆ.
ವಸಾಹತುಶಾಹಿ ನಂತರದ ಕಾನೂನುಗಳು ಏಕೆ ಆಧುನಿಕ ಕಾನೂನುಗಳೆಂದು ಕರೆಯಲ್ಪಟ್ಟವು ಎಂಬುದಕ್ಕೆ ವಿವರಣೆಗಳು ಬೇಕಿಲ್ಲ. ಏಕೆಂದರೆ ಅದೊಂದು ಸಾಮಾನ್ಯ ಜ್ಞಾನ. ಐರೋಪ್ಯರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದವರು. ನಂತರ ಈ ದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡರು. ಪಾಶ್ಚಾತ್ಯ ದೇಶಗಳ ಹಾಗೆ ಇಡೀ ಭಾರತದ ದೇಶವನ್ನು ಪುನರ್ಕಟ್ಟಲು ಪ್ರಯತ್ನಿಸಿದರು. ಅವರ ಈ ಪ್ರಯತ್ನ ಒಳಿತು ಕೆಡಕುಗಳೆರಡನ್ನೂ ಒಳಗೊಂಡಿದೆ. ಭಾರತ ನೂರಾರು ಪ್ರಾಂತಗಳಾಗಿ ಒಡೆದು ಹಂಚಿಹೋಗಿತ್ತು. ಇದು ಆಡಳಿತಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ತುಂಬ ತೊಂದರೆಯನ್ನುಂಟುಮಾಡುತ್ತಿತ್ತು.
ಕಾನೂನಿನ ವಿಷಯವಾಗಿ ನೋಡುವುದಾದರೆ ಆಯಾ ಪ್ರಾಂತ್ಯದ ರೂಢಿ, ಪದ್ಧತಿಗಳೇ ಅಲ್ಲಿನ ಕಾನೂನುಗಳಾಗಿದ್ದವು. ಹೀಗಾಗಿ ಸ್ಥಳದಿಂದ ಸ್ಥಳಕ್ಕೆ ಕಾನೂನಿನ ಸ್ವರೂಪ ಕೂಡ ಭಿನ್ನತೆಯನ್ನು ಹೊಂದಿತ್ತು. ಇದು ಇಡೀ ಭಾರತವನ್ನು ಆಳಲು ಹೊರಟ ಇಂಗ್ಲೀಶರಿಗೆ ನ್ಯಾಯ ನಿರ್ಣಯ ನೀಡಲು ತೊಡಕಾಯಿತು. ಹೀಗಾಗಿ ತಮ್ಮಂತಹದೇ ಒಂದು ಏಕರೂಪಿ ಕಾನೂನಿನ ಪರಿಕಲ್ಪನೆಯನ್ನು ಇಲ್ಲಿ ಅನುಷ್ಠಾನಗೊಳಿಸಲು ನಿರ್ಣಯಿಸಿದರು. ಪ್ರಾರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಅಧಿಕಾರದ ಕೇಂದ್ರಗಳಾದ ಮದ್ರಾಸ್, ಮುಂಬಯಿ, ಕಲ್ಕತ್ತಾಗಳ ಮೂಲಕ ಬ್ರಿಟಿಶ್ ಇಂಗ್ಲೀಶ್ ಕಾನೂನುಗಳನ್ನು ಆಧಾರವಾಗಿಟ್ಟುಕೊಂಡು ಆಡಳಿತ ನಡೆಸುತ್ತಿತ್ತು. ನಂತರ ಈ ಅಧಿಕಾರ ಬ್ರಿಟಿಶ್ ಸರಕಾರಕ್ಕೆ ಹಸ್ತಾಂತರವಾದಾಗ ಇಡೀ ಭಾರತಕ್ಕೆ ಅನ್ವಯವಾಗುವಂತಹ ಹಲವು ಕಾನೂನುಗಳು ರಚಿತವಾದವು.
ಕಾನೂನಿನಂಗಳ ೩ : ವ್ಯವಹಾರಧರ್ಮ ಮತ್ತು ರಾಜಧರ್ಮ
– ಉಷಾ ಐನಕೈ ಶಿರಸಿ
ಭಾರತೀಯ ಸಂಸ್ಕೃತಿಯಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಕಾನೂನುಗಳು ಅಸ್ತಿತ್ವದಲ್ಲಿತ್ತು ಎಂಬ ಬಗ್ಗೆ ಹಲವಾರು ಆಧಾರಗಳು ಸಿಗುತ್ತವೆ. ಶ್ರುತಿ, ಸ್ಮೃತಿ, ಧರ್ಮ, ಸಂಪ್ರದಾಯ ಪದ್ಧತಿ ಎಲ್ಲವೂ ಕಾನೂನಿನಂತೆ ಕೆಲಸ ಮಾಡಿ ಸಮಾಜವು ಸುಸ್ಥಿತಿ ಯಲ್ಲಿ ನಡೆಯಲು ಸಹಾಯಕವಾಗಿದ್ದವು. ಇವು ಗಳಲ್ಲಿ ಕೆಲವು ಲಿಖಿತವಾಗಿ ಇನ್ನೂ ಕೆಲವು ಅಲಿಖಿತ ವಾಗಿ ನಮಗೆ ಗೋಚರವಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆಧುನಿಕ ಕಾನೂನುಗಳ ಎಲ್ಲ ಅಂಶಗಳೂ ಪರೋಕ್ಷವಾಗಿ ಭಾರತೀಯದ್ದಾಗಿ ನಮ್ಮ ಸಂಸ್ಕೃತಿಯಲ್ಲಿ ನೆಲೆಗೊಂಡಿತ್ತು.
ಮುಖ್ಯವಾಗಿ ‘ಧರ್ಮ’ ಭಾರತೀಯ ಮನುಷ್ಯರನ್ನು ನಿಯಂತ್ರಿಸುತ್ತಿತ್ತು. ಧರ್ಮ ಅಂದರೆ ಗುಣ, ನಿಜವಾದ ಯಾವುದರಲ್ಲಿ ಯಾವುದು ಇರಬೇಕೋ ಅದೇ ಧರ್ಮ. ಇದು ಸಾಮರಸ್ಯಗೊಳ್ಳುವುದು ಹೇಗೆ? ಅದೇ ಧರ್ಮದ ಶಕ್ತಿ. ಕಾಮ, ಕ್ರೋಧ, ಮೋಹ, ಮದ ಲೋಭ, ಮಾತ್ಸರ್ಯ ಈ ಅರಿಷಡ್ವರ್ಗಗಳನ್ನು ಗೆಲ್ಲದೇ ಮೋಕ್ಷ ಸಾಧ್ಯವಿಲ್ಲ ಎಂಬುದು ನಮ್ಮ ಪ್ರಾಚೀನ ಪರಂಪರೆಯ ನಂಬಿಕೆಯಾಗಿತ್ತು. ಮೋಕ್ಷ ಎಂದರೆ ಒಂದು ಆದರ್ಶ. ಒಂದು ಅಪವಾದವಿಲ್ಲದ ಸ್ಥಿತಿ. ಆ ಕಾರಣಕ್ಕಾಗೇ ಧರ್ಮ ಮನುಷ್ಯನನ್ನು ಮೋಕ್ಷದೆಡೆಗೆ ಮುಖ ಮಾಡಿ ಸುತ್ತಿತ್ತು. ಈ ಮೋಕ್ಷವನ್ನು ಸಾಧಿಸುವ ಮಾರ್ಗದಲ್ಲೇ ಮನುಷ್ಯ ತನಗೆ ತಾನೇ ಹಲವಾರು ಕಟ್ಟು ಪಾಡುಗಳಿಗೆ ಬದ್ಧನಾಗುತ್ತಿದ್ದ. ಸನ್ನಡ ತೆಗೆ ಪ್ರಾಮುಖ್ಯತೆ ಕೊಡುತ್ತಿದ್ದ. ಹೀಗೇ ತಮಗೆ ತಾವೇ ಸ್ವಯಂ ಆರೋಪಿಸಿಕೊಳ್ಳುವ ಕಾನೂನು ಎಂದರೆ ಧರ್ಮ.
ಕಾನೂನಿನಂಗಳ ೨ : ಸಂಸ್ಕೃತಿಯೇ ಪ್ರಾಚೀನ ಭಾರತೀಯ ಕಾನೂನು
– ಉಷಾ ಐನಕೈ ಶಿರಸಿ
ಮನುಷ್ಯ ಆದಿಯಲ್ಲಿ ಯಾವಾಗ ಸಾಂಘಿಕಜೀವನವನ್ನು ಪ್ರಾರಂಭಿಸಿದನೋ ಆಗಿನಿಂದಲೇ ಹಲವಾರು ಅವ್ಯಕ್ತವಾದ ಕಾನೂನುಗಳನ್ನು ಕಟ್ಟಿ ಕೊಳ್ಳುತ್ತಾಬಂದ. ಶಿಲಾಯುಗದ ಮನುಷ್ಯ ಒಬ್ಬನೇ ಬೇಟೆಯಾಡುವುದನ್ನು ನಿಲ್ಲಿಸಿ ಹಲವಾರು ಜನರೊಂದಿಗೆ ಪ್ರಾಣಿಗಳ ಬೇಟೆಗೆ ಹೋಗತೊಡಗಿದ. ಬೇಟೆಯಾಡಿ ಬಂದನಂತರ ತಾವು ಬೇಟೆ ಯಾಡಿದ ರೀತಿಯನ್ನು ಈ ಗುಂಪು ಅಭಿನಯದ ಮೂಲಕ ತೋರಿಸುವ ಪ್ರಯತ್ನ ನಡೆಯಿತು. ಇದೇ ಮುಂದೆ ವಿಧಿ, ಆಚರಣೆಯಾಗಿ ಖಾಯಂ ಗೊಂಡಿತು. ಈ ಸಂದರ್ಭದಲ್ಲಿ ವಿಧಿಯಾಚರಣೆಗಳಿಗೆ ಕೆಲವು ನಿಯಮಾವಳಿಗಳನ್ನು ಹೆಣೆದುಕೊಳ್ಳುತ್ತ ಬಂದರು. ಅದನ್ನೇ ಆ ಕಾಲದ ಕಾನೂನಿನ ಸ್ವರೂಪ ಎಂದು ಗುರುತಿಸಬಹುದು. ಮನುಷ್ಯ ಗುಂಪು ಕಟ್ಟಿ ಸಮಾಜಜೀವನ ನಡೆಸತೊಡಗಿದಾಗ ಗುಂಪು-ಗುಂಪುಗಳ ನಡುವೆ ಗುಂಪು ಹಾಗೂ ವ್ಯಕ್ತಿಯ ನಡುವಿನ ವ್ಯವಹಾರಕ್ಕೆ ಹಲವು ನಿಯಮಾವಳಿಗಳು ಹುಟ್ಟಿಕೊಂಡವು. ಇದನ್ನು ಕಾನೂನು ಎಂದು ಕರೆಯುತ್ತೇವೆ. ಹೀಗೆ ಮನುಷ್ಯ ನಾಗರಿಕತೆಯುದ್ದಕ್ಕೆ ಒಂದಲ್ಲಒಂದು ರೀತಿಯ ಕಾನೂನು ರೂಪಗೊಳ್ಳುತ್ತ ಪರಿವರ್ತನೆಯಾಗುತ್ತ ಸಮಾಜವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಬಂದದ್ದನ್ನು ನಾವು ಕಾಣುತ್ತೇವೆ.
ನಮ್ಮ ಭಾರತ ದೇಶದ ಮಟ್ಟಿಗೆ ನೋಡುವುದಾದರೆ ಇಲ್ಲೂ ಕೂಡ ಕಾನೂನಿನ ಇತಿಹಾಸ ಬಹು ದೀರ್ಘವಾಗಿದೆ. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದ ಭಾರತೀಯ ಸಂಸ್ಕೃತಿ ಇಡೀ ಜಗತ್ತಿನ ಗಮನ ಸೆಳೆದಿದೆ. ಸಮೃದ್ಧಿಯಿಂದ ಮರೆದಿದೆ. ಹೀಗಿದ್ದಾಗ ಈ ಸಂಸ್ಕೃತಿಯ ಜನ ನೆಮ್ಮದಿಯಿಂದ ಬಾಳಿ ಬದುಕಿ ಬಂದಿದ್ದಾರೆಂಬು ದಂತೂ ನಿಜ. ಅಂದರೆ ಅಂತಹ ಒಂದು ಸುಸಂಬದ್ಧವಾದ ವ್ಯವಸ್ಥೆ ಈ ಸಂಸ್ಕೃತಿಯಲ್ಲಿ ಇತ್ತು ಅಂತಾಯಿತು. ಅದು ಯಾವ ವ್ಯವಸ್ಥೆ? ಹೇಗೆ ನಡೆಯುತ್ತಿತ್ತು? ಯಾವ ಪ್ರೇರಣೆಯಿಂದ ಹಾಗೂ ಹಿನ್ನೆಲೆಯಿಂದ ನಡೆಯುತ್ತಿತ್ತು ಎಂಬಿವೇ ಮುಂತಾದ ಪ್ರಶ್ನೆಗಳು ಎದುರಾಗುತ್ತವೆ. ಇದಕ್ಕೆಲ್ಲ ಒಂದೇ ಒಂದು ಸರಳವಾದ ಉತ್ತರ ಎಂದರೆ ‘ಪ್ರಾಚೀನ ಭಾರತದ ಕಾನೂನುಗಳು’.
ಕಾನೂನಿನಂಗಳ ೧ : ಕಾನೂನಿನ ಸ್ವರೂಪ
– ಉಷಾ ಐನಕೈ ಶಿರಸಿ
ಪ್ರತೀ ಮನುಷ್ಯ ಹುಟ್ಟುವಾಗಲೇ ಆತನಿಗೆ ಅರಿವಿಲ್ಲದೇ ಹಲವಾರು ರೀತಿಯ ಕಾನೂನು ವ್ಯಾಪ್ತಿಗೆ ಸೇರಿಬಿಡುತ್ತಾನೆ. ಅದನ್ನು ಬೇಕಾದರೆ ಧರ್ಮ ಅನ್ನೋಣ. ನೈಸರ್ಗಿಕ ಕಾನೂನು ಅನ್ನೋಣ ಅಥವಾ ಪ್ರಭುತ್ವ ನಿಗದಿಪಡಿಸಿದ ಕಾನೂನು ಎಂದು ಕರೆಯೋಣ. ಒಟ್ಟಿನಲ್ಲಿ ಮನುಷ್ಯನಿಗೆ ಕಾನೂನಿನ ಆಶ್ರಯ ಬೇಕೇಬೇಕು. ಏಕೆಂದರೆ ಮನುಷ್ಯ ಸಂಘಜೀವಿ. ಅಷ್ಟೇ ಅಲ್ಲ, ಜೀವಿಗಳಲ್ಲೇ ಅತ್ಯಂತ ವಿಶಿಷ್ಟವಾದ ಮೆದುಳನ್ನು ಹೊಂದಿದ ಬುದ್ಧಿವಂತ ಈ ಮನುಷ್ಯ. ಇಂಥ ಮನುಷ್ಯರು ಸಾಮೂಹಿಕವಾಗಿ ಬಾಳಬೇಕಾದರೆ ಅದಕ್ಕೊಂದು ಚೌಕಟ್ಟು ಬೇಕು. ನಿಯಮಾವಳಿ ಬೇಕು. ಮಾರ್ಗದರ್ಶಿ ತತ್ವಗಳು ಬೇಕು. ಇದರಿಂದ ಇಡೀ ಸಮುದಾಯ ಆರೋಗ್ಯಕರವಾಗಿ ಪ್ರಗತಿಯತ್ತ ಸಾಗಲು ಸಾಧ್ಯ. ಹೀಗೆ ಮನುಷ್ಯ ಸಮೂಹವನ್ನು ನಿಯಂತ್ರಿಸಲು, ಚಾಲನೆಗೆ ತರಲು ಸೃಷ್ಟಿಸಿಕೊಂಡ ಚೌಕಟ್ಟನ್ನೇ ನಾವು ಕಾನೂನು ಎನ್ನಬಹುದು.
ಕಾನೂನು ಮನುಷ್ಯನಿಗೆ ಹಕ್ಕನ್ನು ನೀಡುತ್ತದೆ. ಹಕ್ಕಿಗೆ ಪ್ರತಿಯಾಗಿ ಕೆಲವು ಕರ್ತವ್ಯಗಳನ್ನು ಸೂಚಿಸುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳೇ ಮನುಷ್ಯನ ಆತ್ಮಗೌರವ, ಸದ್ವಿನಯ, ಪರೋಪಕಾರ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಸೃಷ್ಟಿಸುತ್ತವೆ ಮತ್ತು ನಿರ್ದೇಶಿಸುತ್ತವೆ.
ಕಾನೂನು ಎಂದರೆ ಏನು ಎನ್ನುವ ಪ್ರಶ್ನೆಗೆ ನಿಖರವಾದ ಒಂದು ವ್ಯಾಖ್ಯೆಯನ್ನು ಕೊಡುವುದು ಕಷ್ಟ. ಕಾನೂನು ಅನ್ನುವ ಪದ ಸರಳವಾಗಿ ಕಂಡರೂ ಅದರ ಅರ್ಥವ್ಯಾಪ್ತಿ ಬಹುವಿಸ್ತಾರವಾಗಿದೆ. ಹಾಗಾಗಿ ಮನುಷ್ಯನ ಹಕ್ಕು ಮತ್ತು ಕರ್ತವ್ಯಗಳ ಮೂಲಕವೇ ಕಾನೂನುಗಳನ್ನು ಅರ್ಥೈಸಿಕೊಳ್ಳುತ್ತ ಹೋಗಬೇಕು.





