ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕಾನೂರು ಹೆಗ್ಗಡತಿ’

30
ಮೇ

ಕಾನೂರು ಹೆಗ್ಗಡಿತಿ – 75

– ಡಾ| ಬಿ.ಆರ್ ಸತ್ಯನಾರಾಯಣ

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ ಸಾರ್ಥಕ ೭೫ ವರ್ಷಗಳು ಕಳೆದಿವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ.ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.

ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಸ್ನೇಹಿತರಲ್ಲಿ ನೀವೇಕೆ ಬರೆಯಲು ಪ್ರಯತ್ನಿಸಬಾರದು? ಎಂದು ಪೀಡಿಸುತ್ತಿದ್ದರಂತೆ. ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ನೀವೇ ಏಕೆ ಬರೆಯಬಾರದು? ಎಂದರಂತೆ. ಆಗ ಕುವೆಂಪು ಅವರು ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ! ಎಂದು ನಕ್ಕಬಿಟ್ಟಿದ್ದರಂತೆ. ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!

ಮತ್ತಷ್ಟು ಓದು »

29
ಡಿಸೆ

ಕೋಲ್ಕತ್ತಾದಲ್ಲಿ ಕುವೆಂಪು

-ಪ್ರೊ. ಬಿ ಎ ವಿವೇಕ ರೈ

ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ )  ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು ರಾಮಕೃಷ್ಣ ಮಠದಲ್ಲಿ ಸ್ವಾಮಿ ಶ್ರದ್ಧಾನಂದರಿಂದ ಮಂತ್ರ ದೀಕ್ಷೆ ಪಡೆದದ್ದು. ಎರಡನೆಯದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ಎಲ್ಲ ಆಪ್ತರ ಒತ್ತಾಯದ ಮೇಲೆ ದೆಹಲಿಗೆ ಹೋದದ್ದು ೧೯೬೮.ಅವರ ಕಲ್ಕತ್ತಾದ ಭೇಟಿಯ ವೇಳೆಗೆ ಅವರಿಗೆ ಸುಮಾರು ಇಪ್ಪತ್ತೈದು ವರ್ಷ ಪ್ರಾಯ.ಅದೇ ವರ್ಷ ಅವರು ಎಂ ಎ ಮುಗಿಸಿದ್ದು.ಕಲ್ಕತ್ತಾ ಸಂದರ್ಶನ ಮತ್ತು ರಾಮಕೃಷ್ಣ ಆಶ್ರಮದ  ದರ್ಶನ ಕುವೆಂಪು ಬದುಕಿನ ಮೇಲೆ ಅಪಾರ ಪ್ರಭಾವವನ್ನು ಬೀರಿತು.ಅವರ ಸಾಹಿತ್ಯದ ದ್ರವ್ಯಗಳನ್ನು ರೂಪಿಸಿತು.

ಅಂತಹ ಕಲ್ಕತ್ತಾದಲ್ಲಿ ,ಅಂದರೆ ಈಗಿನ ಕೊಲ್ಕೊತ್ತಾದಲ್ಲಿ ‘ಕುವೆಂಪು’ ಬಗ್ಗೆ ಎರಡು ದಿನಗಳ ರಾಷ್ಟೀಯ ವಿಚಾರಸಂಕಿರಣ ಮೊನ್ನೆ ಮತ್ತು ನಿನ್ನೆ (ಸಪ್ಟಂಬರ ೧೦ ಮತ್ತು ೧೧ ) ನಡೆಯಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಜಂಟಿಯಾಗಿ ನಡೆಸಿದ ಈ ಮಹತ್ವದ ಸಂಕಿರಣಕ್ಕೆ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆ ಮತ್ತು ಕನ್ನಡ ವಿಶ್ವವಿದ್ಯಾಲಯ ಸಹಯೋಗ ಕೊಟ್ಟಿದ್ದವು.ವಿಚಾರಸಂಕಿರಣ ನಡೆದದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಲ್ಕತ್ತಾದ ಪ್ರಾದೇಶಿಕ ಕಚೇರಿಯಲ್ಲಿ .

ಮತ್ತಷ್ಟು ಓದು »