ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ’

16
ಡಿಸೆ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 15: ಸಣ್ಣವರು,ದೊಡ್ಡವರು…

ನಾನು ಸಣ್ಣವನಿದ್ದಾಗ, ಹಲವು ಮಂದಿ ದೊಡ್ಡವರು ನನ್ನ ಕೈ ಹಿಡಿದು ನಡೆಸಿದ್ದರು. ದೈನಂದಿನ ಜೀವನಕ್ಕೆ ಅನ್ವಯಿಸುವಷ್ಟೇ ಪರಿಣಾಮಕಾರಿಯಾಗಿ ಆ ಮಾತು ಕಲಾ ಜೀವನಕ್ಕೂ ಅನ್ವಯಿಸುವಂತಹುದು. ಆಮೇಲೆ, ನಾನೂ ಒಬ್ಬ ಕಲಾವಿದ ಎಂದು ಹೇಳಿಕೊಳ್ಳುವ ಶಕ್ತಿ ಬಂದಾಗ (ಶಕ್ತಿಗಿಂತಲೂ ಹೆಚ್ಚಿನ ಕುರುಡು ಧೈರ್ಯವೂ ಇದ್ದಾಗ) ಹಲವು ಮಂದಿ ದೊಡ್ಡವರೆನಿಸಿಕೊಂಡವರ ಸ್ನೇಹ-ಪರಿಚಯಗಳನ್ನು ಮಾಡಿಕೊಂಡಿದ್ದೇನೆ. ಎಷ್ಟೋ ಮಂದಿ ಸಣ್ಣವರನ್ನು ಕಲಾರಂಗಕ್ಕೆ ಪರಿಚಯ ಮಾಡಿಸಿಕೊಟ್ಟಿದ್ದೇನೆ.
ದೊಡ್ಡವರೆನಿಸಿದವರು ಹಲವರಲ್ಲಿ ಕೆಲವರು ಈಗ ಕಣ್ಮರೆಯಾಗಿದ್ದಾರೆ. ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಸಣ್ಣವರಾಗಿದ್ದವರು ಮೆಲ್ಲಮೆಲ್ಲನೆ ದೊಡ್ಡವರಾಗುತ್ತಲಿದ್ದಾರೆ. ನಾನು ಎಳೆಯ ಕಲಾವಿದರನ್ನು ತರಬೇತಿಗಾಗಿ ನಮ್ಮಲ್ಲಿಗೆ ಎಳೆದು ತಂದಾಗ, ನನ್ನ ಆಯ್ಕೆಯ ಕ್ಷೇತ್ರವನ್ನು ವಿಸ್ತಾರಗೊಳಿಸುವ ಧೈರ್ಯ ನನಗಿರಲಿಲ್ಲ. ಮನೆಯವರಿಂದ ಬೇರ್ಪಡಿಸಿ ಹುಡುಗರನ್ನು ನನ್ನ ಬಳಿಗೆ ಕರೆತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ನಮ್ಮ ಮನೆಯ ಸಮೀಪದವರನ್ನಾದರೂ ಕರೆತಂದು ಸೇರಿಸಿಕೊಳ್ಳುವ ಮೊದಲು “ನಿಮ್ಮ ಹುಡುಗನಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇನೆ.” ಎಂಬ ಭರವಸೆ ಕೊಟ್ಟೇ ಕರೆತರಬೇಕಾಗುತ್ತಿತ್ತು. ಹಾಗೆ ತಂದು ತರಬೇತಿ ಮಾಡಿಸಿದವರಲ್ಲಿ ಹೆಚ್ಚಿನವರು ತಮ್ಮ ರಂಗಪ್ರವೇಶದ ಹಾರೈಕೆಗಳನ್ನು ಸಾರ್ಥಕಗೊಳಿಸಿದ್ದಾರೆ. ಇನ್ನು ಕೆಲವರು ತಾವು ಪರಿಣತರಾದೆವೆಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು, ಜೀವನದ ಇತರ ಜಂಜಾಟಗಳಿಗೆ ಸಿಕ್ಕಿ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುವ ಮಟ್ಟಕ್ಕೂ ಮುಟ್ಟಿದ್ದಾರೆ.

ಎಲ್ಲರೂ ಒಂದೇ ರೀತಿಯಾಗಿರಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಏಕರೂಪದ ಸಾಕಾರವೇ ಸಾಕ್ಷಾತ್ಕಾರವಾಗುವುದಾದರೆ, ಭಗವದ್ ಸೃಷ್ಟಿಯಲ್ಲಿ ವೈವಿಧ್ಯವೇ ಇರಲಾರದಲ್ಲ? ನನ್ನೊಂದಿಗೆ ಸಣ್ಣವರಾಗಿದ್ದು ದೊಡ್ಡವರಾಗುತ್ತಿರುವಾಗಲೇ ವಿಧಿಯ ಕಡೆ ಸೇರಿದವರು ಇಬ್ಬರು-ನಮ್ಮ ದೊಡ್ಡಪ್ಪನ ಮಕ್ಕಳು. ಒಬ್ಬನ ಹೆಸರು ರಾಮ, ಇನ್ನೊಬ್ಬನ ಹೆಸರು ಕೃಷ್ಣ. ರಾಮನ ಹೆಸರು ಅವನು ನಿರ್ವಹಿಸುತ್ತಿದ್ದ ರಾಕ್ಷಸ ಪಾತ್ರಗಳಿಂದಾಗಿ ಮೆರೆದಿತ್ತು. ಕೃಷ್ಣ ಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದ. ಅವರಿಬ್ಬರೂ ಪಡೆದು ಬಂದಿದ್ದ ಪ್ರತಿಭೆಯನ್ನು ಮೆರೆಸಲು ಸರಿಯಾದ ಅವಕಾಶ ದೊರೆಯುವ ಮೊದಲೇ ಇಬ್ಬರೂ ಅನಾರೋಗ್ಯಕ್ಕೆ ತುತ್ತಾದರು. ನನ್ನ ಜೊತೆಗೇ- ಅಥವಾ ಒಂದೆರಡು ವರ್ಷಗಳ ಹಿಂದು ಮುಂದಿನ ವ್ಯತ್ಯಾಸದಲ್ಲಿ- ರಂಗಪ್ರವೇಶ ಮಾಡಿ ಇಂದಿಗೂ ತಮ್ಮ ಕಲಾಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತಲಿರುವವರು ಕೆಲವರಿದ್ದಾರೆ. ಅವರೆಲ್ಲರನ್ನೂ ನಾನು ಪ್ರತ್ಯೇಕವಾಗಿ ಹೆಸರಿಸಬೇಕಾಗಿಲ್ಲ.