‘ಮಾನವ ಹಕ್ಕು ಉಲ್ಲಂಘನೆ’ ಅನ್ನುವುದು ಮೋದಿಗೆ ಮಾತ್ರ ಅನ್ವಯವೇ?
– ರಾಕೇಶ್ ಶೆಟ್ಟಿ
ಕಳ್ಳಬೆಕ್ಕು ತೀರ್ಥಯಾತ್ರೆಗೆ ಹೊರಟು ನಿಂತ ಕತೆ ಗೊತ್ತಿದೆಯಲ್ವಾ! ಅಮೇರಿಕಾದ ವಾರ್ಟನ್-ಇಂಡಿಯಾ ಎಕಾನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಭಾಷಣ ಮಾಡಲು ಆಹಾನ ಕೊಟ್ಟು ಕಡೆಗೆ ಎಡಪಂಥೀಯರ ಒತ್ತಾಯಕ್ಕೆ ಮಣಿದು ಅದನ್ನು ರದ್ದುಗೊಳಿಸಿ ಭಾರತದ ಸಂವಿಧಾನದಡಿ ಜನರಿಂದ ಚುನಾಯಿಸಿ ಬಂದ ಮುಖ್ಯಮಂತ್ರಿಯೊಬ್ಬರಿಗೆ ಅವಮಾನ ಮಾಡುವುದಿದೆಯಲ್ಲ ಅದು ಮೋದಿಗಾದ ಅವಮಾನವಲ್ಲ.ಬದಲಿಗೆ ಆ ರಾಜ್ಯಕ್ಕಾದ ಅವಮಾನ ಕೂಡ ಹೌದು.ಗುಜರಾತ್ ಗಲಭೆಯ ನಂತರ ಮೋದಿಯೆಡೆಗೆ ಬೆನ್ನು ತಿರುಗಿಸಿ ನಿಂತಿದ್ದ ಐರೋಪ್ಯ ಒಕ್ಕೂಟ ಇವತ್ತು ಸ್ನೇಹ ಹಸ್ತಚಾಚಿ ನಿಂತಿದೆ.ಆದರೆ ತೀರ್ಥಯಾತ್ರೆಗೆ ಹೊರಟು ನಿಂತ ಕಳ್ಳಬೆಕ್ಕು ಅಮೇರಿಕಾ ಮಾತ್ರ ಇನ್ನು ಹುಸಿ ಧ್ಯಾನದಲ್ಲಿದ್ದಂತಿದೆ.ಮೋದಿಯ ವಿಷಯದಲ್ಲಿ ಅದೂ ಈಗಲೂ ಹಟಮಾರಿ ಧೋರಣೆಯನ್ನು ಮುಂದುವರೆಸಿಕೊಂಡು ಬಂದಿದೆ.
“ನೀವು ಬಯಸುವ ಬದಲಾವಣೆ ನೀವೆ ಆಗಿ ತೋರಿಸಿ” ಅಂದಿದ್ದರು ಗಾಂಧೀಜಿ.ಆದರೆ ಅಮೇರಿಕಾದ ವರಸೆ ಸಲ್ಪ ಉಲ್ಟಾ ಈ ವಿಷಯದಲ್ಲಿ “ತಾನು ಬಯಸುವ ಬದಲಾವಣೆ ಬೇರೆಡೆಯಲ್ಲಿ,ಬೇರಯವರಿಂದ ಆಗಬೇಕು.ತಾನು ಮಾತ್ರ ತನ್ನ ಚಾಳಿ ಬಿಡಲಾರೆ” ಅನ್ನುವಂತೆ.ಮೋದಿಯ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಭಾಷಣ ಬಿಗಿಯುವ ಈ ಅಮೇರಿಕಾ ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವುದೇನು?





