ವಿಷಯದ ವಿವರಗಳಿಗೆ ದಾಟಿರಿ

Posts tagged ‘ಟಿ ವಿ’

19
ಜೂನ್

ಟಿ ವಿ ಎಂಬ ಸುಂದರಿ ..

– ಅನಿತ ನರೇಶ್ ಮಂಚಿ

ವಾಶಿಂಗ್ ಪೌಡರ್ ನಿರ್ಮ, ವಾಶಿಂಗ್ ಪೌಡರ್ ನಿರ್ಮ..’ ಇದು ಗೆಳತಿಯ ಬಾಯಲ್ಲಿ ಕೇಳಿ ಬರುತ್ತಿದ್ದ ಹೊಸ ಹಾಡು. ‘ಯಾರೇ ಹೇಳ್ಕೊಟ್ಟಿದ್ದು’ ಕೊಂಚ ಅಸೂಯೆ ಇತ್ತು ನನ್ನ ಧ್ವನಿಯಲ್ಲಿ. ‘ಹೇಳ್ಕೊಡೋದ್ಯಾಕೆ..? ನಾನೇ ಕೇಳಿ ಕಲ್ತಿದ್ದು, ಟಿ ವಿ  ನೋಡಿ… ಗೊತ್ತಾ ನಿಂಗೆ , ನಮ್ಮಲ್ಲಿ ಹೊಸ ಟಿ ವಿ ತಂದಿದ್ದಾರೆ.., ಇದರ ಡ್ಯಾನ್ಸ್ ಕೂಡ ಇದೆ ನಿಲ್ಲು ತೋರಿಸ್ತೀನಿ,ಮೊದ್ಲು ಬಟ್ಟೆ ಮಣ್ಣಾಗಿರುತ್ತೆ, ಹೀಗೆ ಮಾಡಿದ ಮೇಲೆ ಬಟ್ಟೆ ಹೊಸದಾಗಿ ಹೊಳೆಯುತ್ತೆ’ ಎಂದು ತನ್ನ ಫ್ರಾಕಿನ ಎರಡೂ ತುದಿಗಳನ್ನು ಬೆರಳುಗಳಲ್ಲಿ ಅಗಲಿಸಿ ಹಿಡಿದು ಉರುಟುರುಟಾಗಿ ಸುತ್ತಿದಳು ರಸ್ತೆಯಲ್ಲಿಯೇ.. !!

ಟಿ ವಿ ನಾ..?? ಕೇವಲ ಅದರ ಬಗ್ಗೆ ಕೇಳಿ ಮಾತ್ರ ತಿಳಿದಿದ್ದ ನನ್ನ ಕಣ್ಣ ಗೋಲಿಗಳು ಸಿಕ್ಕಿ ಹಾಕಿ ಕೊಳ್ಳುವಷ್ಟು ಮೇಲೇರಿದವು  ಅಚ್ಚರಿಯಿಂದ  !! ಕೂಡಲೇ  ಅವಳನ್ನು ಕೇಳಿ ಅದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದೆ.
ಮನೆಗೆ ಹೋದವಳೇ ಕೈಕಾಲು ತೊಳೆಯದೆ ಅಡುಗೆ ಮನೆಗೆ ನುಗ್ಗಿ ಅಮ್ಮನಿಗೆ ಎಲ್ಲಾ ಸುದ್ಧಿಯನ್ನು ಬಿತ್ತರಿಸಿದೆ. ಅಮ್ಮನೂ ಇದನ್ನು ಅಪ್ಪನಿಗೆ ವರದಿ ಒಪ್ಪಿಸಿದಳು. ಅಪ್ಪನೂ ಇಂತಹ ವಿಷಯಗಳಲ್ಲಿ ತುಂಬಾ ಉತ್ಸಾಹಿ . ಹೊಸತೇನೇ ಇದ್ದರೂ ಅದು ಎಲ್ಲರ ಮನೆಗಳಲ್ಲಿ ಕಣ್ಬಿಡುವ ಮೊದಲೇ ನಮ್ಮಲ್ಲಿ ಇರಬೇಕಿತ್ತು.
ರೇಡಿಯೊ, ಟೇಪ್ ರೆಕಾರ್ಡರ್ ಗಳಷ್ಟೆ ಅಲಂಕರಿಸಿದ್ದ ಮೇಜೀಗ ಟಿ ವಿ  ಯ ಸ್ವಾಗತಕ್ಕೂ ಸಜ್ಜಾಗಿ ನಿಂತಿತು.ಒಂದು ಶುಭ ಮುಹೂರ್ತದಲ್ಲಿ ಬಲಗಾಲಿಟ್ಟು ಒಳ ಪ್ರವೇಶಿಸಿದಳು ಟಿ ವಿ  ಎಂಬ ಸುಂದರಿ. ನಾನಂತೂ’ಯಾರಿಗೂ ಹೇಳೋದ್ಬೇಡ ಗುಟ್ಟು, ನಮ್ಮಲ್ಲಿ ಟಿ ವಿ  ತರ್ತಾರೆ’ ಅಂತ ಮೊದಲೇ ಎಲ್ಲರ ಬಳಿಯೂ ಪ್ರತ್ಯೇಕ ಪ್ರತ್ಯೇಕವಾಗಿ ಹೇಳಿ ಆಗಿತ್ತು. ಇದರ ಜೊತೆಗೆ ನಮ್ಮದು ವಠಾರದ ಮನೆಯಾಗಿದ್ದ ಕಾರಣ ಕುತೂಹಲದ ಧ್ವನಿಗಳೂ, ಕಣ್ಣುಗಳೂ ನೂರ್ಮಡಿಸಿದವು. ಆ ಹೊತ್ತಿನಲ್ಲಿ ನಮ್ಮಲ್ಲಿ ಜಮಾಯಿಸಿದ್ದ ಜನರನ್ನು ಯಾರಾದರು ಹೊರಗಿನವರು ನೋಡಿದ್ದರೆ ಇಲ್ಲೇನೋ ಬಹು ದೊಡ್ಡ ಸಮಾರಂಭ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದರು.