ವಚನ ಸಂಶೋಧನೆಯ ವಿಮರ್ಶೆ: ನಿರ್ಬಲ ವಾದ, ತಾರ್ಕಿಕ ಸಮಸ್ಯೆ
– ಡಂಕಿನ್ ಝಳಕಿ
`ಪ್ರಜಾವಾಣಿ’ಯಲ್ಲಿ ವಚನಗಳ ಕುರಿತ ನಮ್ಮ ಸಂಶೋಧನೆಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಒಂದು ಸಮಸ್ಯೆ ಮತ್ತೆ ಮತ್ತೆ ಚರ್ಚೆಗೆ ಬಂದಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಮುಂದಿನ ಮಾತುಗಳನ್ನು ಕುರಿತು ನಾವು ಚಿಂತಿಸಬೇಕು: ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ.
ಶಿವಪ್ರಕಾಶರ ಈ ಹೇಳಿಕೆಯ ಎರಡನೇ ಸಾಲನ್ನು ಗಮನಿಸಿ. ಈ ಸಾಲನ್ನು ನೋಡಿದಾಗಲೆಲ್ಲಾ ನನಗೆ ಅನಿಸಿದ್ದು ಈ ಆಕ್ಷೇಪಣೆಗೆ ಸಮರ್ಪಕವಾದ ಉತ್ತರ ನಮ್ಮ ಲೇಖನದಲ್ಲೇ ಇದೆಯಲ್ಲಾ ಎಂದು. ಹಾಗೇಕೆ ಅನಿಸುತ್ತದೆ ಎಂದೂ ಹೇಳಿ ಬಿಡುತ್ತೇನೆ. ಸಮಗ್ರ ವಚನ ಸಂಪುಟಗಳಲ್ಲಿರುವ ಒಟ್ಟು 21,788 ವಚನಗಳಲ್ಲಿ, ನಮ್ಮ ಲೇಖನ ತೋರಿಸುವ ಪ್ರಕಾರ, ಜಾತಿ ವಿರೋಧಿ ಚಳವಳಿ ಎಂಬ ವಿಷಯದ ಚರ್ಚೆಗೆ ಸರಿಯಾಗಿ ಉಳಿದುಕೊಳ್ಳುವ ವಚನಗಳು 72 ಮಾತ್ರ.
ಇರುವ ಈ 72 ವಚನಗಳಲ್ಲಿ, ವಚನಗಳು ಜಾತಿಯನ್ನು ವಿರೋಧಿಸುತ್ತವೆ ಎಂದು ಸಾಧಿಸ ಹೊರಡುವ ಚಿಂತಕರು ಬಳಸುವುದು ಕೇವಲ ಎಂಟು ಹತ್ತು ವಚನಗಳನ್ನು ಮಾತ್ರ. ಕೇವಲ ಎಂಟು ಹತ್ತು ವಚನಗಳನ್ನು ಆಯ್ದುಕೊಂಡು ಎಂಟುನೂರು ವರ್ಷಗಳ ಸುದೀರ್ಘ ಇತಿಹಾಸ ಉಳ್ಳ ಇಡಿಯ ವಚನ ಸಂಪ್ರದಾಯದ ಬಗ್ಗೆ ಮಾತನಾಡುವುದಾದರೆ, ಯೋಚಿಸಿ ನೋಡಿ, ನಾವು ಏನನ್ನು ಬೇಕಾದರೂ ಸಾಧಿಸಿಬಿಡಬಹುದು.
ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ
– ಡಾ. ಸಂತೋಷ್ ಕುಮಾರ್ ಪಿ.ಕೆ, ಶಿವಮೊಗ್ಗ.
ಪ್ರಜಾವಾಣಿ ೧೯/೦೩/೨೦೧೩ ರಲ್ಲಿ ಪ್ರಕಟವಾದ ಕಲಬುರ್ಗಿಯವ ಲೇಖನಕ್ಕೆ ಪ್ರತಿಕ್ರಿಯೆ
ವಚನಗಳ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಒಂದು ರೀತಿಯ ಕಂದರವಿದೆ. ಒಂದೆಡೆ ಸಂಶೋಧನೆ ವಾಸ್ತವದ ಕುರಿತು ವಾದಿಸುತ್ತಿದ್ದರೆ ಮತ್ತೊಂದೆಡೆ ಐಡಿಯಾಲಜಿಗಳು ಕಟ್ಟುಕತೆಯನ್ನೇ ಮರುಪ್ರಸಾರ ಮಾಡುತ್ತಿವೆ. ಇಲ್ಲಿ ಕಂದರವಿರುವುದು ಸಂಶೋಧನೆ ಮತ್ತು ಐಡಿಯಾಲಜಿಯ ನಡುವೆ. ಸಂಶೋಧನೆ ನಡೆಸಿ ಸುಮಾರು ೨೨೦೦೦ ವಚನಗಳನ್ನು ಪರಿಶೀಲನೆಗೆ ಒಡ್ಡಿ, ಡಂಕಿನ್ ಮತ್ತು ಬಾಲುರವರು ಒಂದು ಹೊಸ ಹೈಪೋಥೀಸಿಸ್ ನ್ನು ನೀಡುತ್ತಿದ್ದಾರೆ. ಆದರೆ ಅದು ಸಂಶೋಧನಾ ಹೈಪೋಥೀಸಿಸ್ ಎಂಬುದು ಚರ್ಚೆಯಲ್ಲಿ ಭಾಗವಹಿಸುತ್ತಿರುವ ಪೂರ್ವಪಕ್ಷದವರಿಗೆ ಅರ್ಥವಾಗದೆ ಇರುವುದು ಖೇದದ ಸಂಗತಿ.
ವಚನಗಳು ಜಾತಿವ್ಯವಸ್ಥೆಯನ್ನು ತೊಲಗಿಸಲು ನಡೆದಿರುವ ಚಳುವಳಿಯಲ್ಲ ಎಂದು ಯಾರಾದರೂ ವಾದಿಸಿದರೆ, ಅದಕ್ಕೆ ಪೂರ್ವಪಕ್ಷದವರು ಅದು ಹೇಗೆ ಜಾತಿವ್ಯವಸ್ಥೆಯ ವಿರುದ್ಧವೇ ನಡೆದಿದೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಅರಚಾಟ, ಕಿರುಚಾಟ, ವಯಕ್ತಿಕ ಟೀಕೆಗಳನ್ನು ಮಾಡಿದರೆ ಯಾವುದೇ ಹೈಪೋಥೀಸಿಸ್ ನ್ನು ರೆಫ್ಯೂಟ್ ಮಾಡಿದಂತೆ ಆಗುವುದಿಲ್ಲ. ವಚನಗಳು ಸಾವಿರಾರು ವಿಷಯಗಳ ಕುರಿತು ಮಾತನಾಡಿವೆ, ಅವುಗಳಲ್ಲಿ ಜಾತಿಯ ಕುರಿತು ಮಾತನಾಡಿರುವುದು ಒಂದಾಗಿದೆ. ವಚನಗಳ ಮೂಲ ಸಿದ್ಧಾಂತ (ಕಲಬುರ್ಗಿಯವರು ಹೇಳುವಂತೆ) ಜಾತಿವ್ಯವಸ್ಥೆಯನ್ನು ಹೋಗಲಾಡಿಸುವುದೇ ಆಗಿದ್ದರೆ ಅವರು ರಚಿಸಿರುವ ಬಹುತೇಕ ವಚನಗಳು ಆ ವಿಷಯದ ಸುತ್ತವೇ ಇರಬೇಕಿತ್ತು. ಆದರೆ ವಾಸ್ತವ ಹಾಗಿಲ್ಲ. ಈ ವಾದವನ್ನು ವಿರೋಧಿಸಬೇಕಾದರೆ ವಚನಗಳು ಬಹುಸಂಖ್ಯೆಯಲ್ಲಿ ಜಾತಿಯನ್ನು ವಿರೋಧಿಸುತ್ತವೆ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಇಷ್ಟು ಕನಿಷ್ಟ ಜ್ಞಾನವಿರದಿದ್ದರೆ ಐಡಿಯಾಲಜಿ, ಅಂದರೆ ವಾಸ್ತವಕ್ಕಿಂತ ತಾನು ನಂಬಿರುವುದೇ ಸತ್ಯ ಎಂಬ ಧೋರಣೆ ಮುಸುಕಾಗಿ ನಿಲ್ಲುತ್ತದೆ. ಐಡಿಯಾಲಜಿಯು ಸಿದ್ಧಾಂತಕ್ಕೆ ತೀರಾ ವ್ಯತಿರಿಕ್ತವಾದುದಾಗಿದೆ. ಸಾಮಾನ್ಯವಾಗಿ ಸಿದ್ಧಾಂತಗಳು ಇರುವ ಜ್ಞಾನವನ್ನು ಒರೆಗೆ ಹಚ್ಚುವ ಮೂಲಕ ಹೆಚ್ಚೆಚ್ಚು ಸ್ಪಷ್ಟತೆಯನ್ನು ಒದಗಿಸುತ್ತಾ ಹೋಗುತ್ತವೆ.





