ವಿಷಯದ ವಿವರಗಳಿಗೆ ದಾಟಿರಿ

Posts tagged ‘ಫಣಿರಾಜ್’

7
ಮೇ

ಸಿದ್ಧಾಂತ ಮತ್ತು ಐಡಿಯಾಲಜಿ ಒಂದೇ ಅಲ್ಲ – “ಗೆಳೆಯ ಫಣಿರಾಜ್ ರವರ ಪತ್ರಕ್ಕೆ ಒಂದು ಪ್ರತಿಕ್ರಿಯೆ”

 – ಪ್ರೊ.ಜೆ.ಎಸ್.ಸದಾನಂದ

SIನಿಮ್ಮ ಪತ್ರ ಓದಿದ ನಂತರ ಒಂದು ತರದ ಹಿತಕರ ಅನುಭವವಾಯಿತು. ಹಿತಕರ ಏಕೆಂದರೆ ಇದೂವರೆಗೂ ನಮ್ಮ ಬಗ್ಗೆ ಪ್ರತಿಕ್ರಿಯಿಸಿದ ಬಹಳಷ್ಟು ಮಂದಿಗೆ ನಮ್ಮ ಸಂಶೋಧನೆಯ ಹಿಂದಿರುವ ಕುತಂತ್ರ, ಹುನ್ನಾರ ಹಾಗೂ ಆಮಿಷಕ್ಕೆ ಒಳಗಾಗುತ್ತಿರುವುದಷ್ಟೇ ಕಾಣಿಸುತ್ತಿತ್ತು. ಅದಕ್ಕೆ ವ್ಯತಿರಿಕ್ತವಾಗಿ ನೀವು ನಮ್ಮ ಸಂಶೋಧನೆಯ ಬಗ್ಗೆ ನಿಮಗಿರುವ ಕೆಲವು ಸಂದೇಹಗಳ ಕುರಿತು ತುಂಬಾ (ಸಾಮಾಜಿಕ ಹೋರಾಟದಲ್ಲಿ ಬಹಳ ಕಾಲದಿಂದಲೂ ತೊಡಗಿಸಿಕೊಂಡ ಬದ್ಧತೆಯಿಂದ ಹುಟ್ಟಿದ) ಕಾಳಜಿಯಿಂದ ಚರ್ಚೆ ಮಾಡಲು ಹೊರಟಿದ್ದೀರಿ. ನಮ್ಮ ಉದ್ದೇಶವೂ ಸಹ ನಮ್ಮ ಕೇಂದ್ರದಲ್ಲಿ ಕ್ಯೆಗೊಳ್ಳುತ್ತಿರುವ ಸಂಶೋಧನೆಗಳು ಸಾರ್ವಜನಿಕ ವಿಮರ್ಶೆಗೊಳಪಡಬೇಕು ಮತ್ತು ಅದರ ಪರಿಣಾಮದಿಂದ ನಮಗೂ, ಈ ನಿಟ್ಟಿನಲ್ಲಿ ಸಂಶೋಧನೆ ಮಾಡುತ್ತಿರುವ, ಚಿಂತಿಸುತ್ತಿರುವ ಇತರರಿಗೂ ಪ್ರಚಲಿತ ಚಿಂತನೆಯಲ್ಲಿರುವ (ನಮ್ಮದನ್ನೂ ಒಳಗೊಂಡು) ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಳ್ಳಲು ಸಹಾಯಕವಾಗಬೇಕು ಎನ್ನುವುದೇ ಆಗಿದೆ.

ನಮ್ಮ ಸಂಶೋಧನಾ ವಿಧಾನದ ಬಗ್ಗೆ ಈಗಾಗಲೇ ಹೇಳಿರುವುದರಿಂದ ಅದನ್ನು ಪುನರಾವರ್ತಿಸುವ ಅಗತ್ಯವಿಲ್ಲ. ಆದರೆ ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ಜಾತಿವ್ಯವಸ್ಥೆ, ಸೆಕ್ಯುಲರಿಸಂ, ಮಡೆಸ್ನಾನ ಇತ್ಯಾದಿಗಳ ಬಗ್ಗೆ ನಾವಾಗಲೀ ಬಾಲುವಾಗಲಿ ಯಾವುದೇ ವ್ಯೆಜ್ಞಾನಿಕ ಸಿದ್ದಾಂತವನ್ನು ಮಂಡಿಸುತ್ತಿಲ್ಲ. ಮುಂದಿನ ಸಂಶೋಧನೆಗಳು ಕ್ಯೆಗೆತ್ತಿಕೊಳ್ಳಬಹುದಾದ ಸಂಶೋಧನಾ ಪ್ರಶ್ನೆಗಳನ್ನಷ್ಟೇ ಮುಂದಿಡುತ್ತಿದ್ದೇವೆ. ಅದರ ಮೊದಲ ಹಂತವಾಗಿ ಅವುಗಳ ಕುರಿತಾಗಿ ಬರೆದ ಲೇಖನಗಳು ಈ ವಿದ್ಯಮಾನಗಳ ಸದ್ಯದ ಗ್ರಹಿಕೆಯ ಸ್ವರೂಪದಲ್ಲಿ ಇರುವ ಸಮಸ್ಯೆಗಳನ್ನು ಮಾತ್ರ ಗುರುತಿಸುವ ಪ್ರಯತ್ನ ಮಾಡುತ್ತವೆ. ನಾವು ಒಪ್ಪಿಕೊಂಡಿರುವ ಲಿಬರಲ್ ಪ್ರಜಾಪ್ರಭುತ್ವ, ಸೆಕ್ಯುಲರರ ಹಾಗೂ ವ್ಯೆಚಾರಿಕ ಸಿದ್ಧಾಂತಗಳ ಚೌಕಟ್ಟಿನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾದಾಗ ಉದ್ಭವಿಸುವ ಸಮಸ್ಯೆಗಳೇನು ಎಂದು ಗುರುತಿಸಲು ಪ್ರಯತ್ನಿಸಿದ್ದೇವೆ. ಇವುಗಳ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ. ಮುಂದೊಂದು ದಿನ ಯಾರಾದರೂ ಸಂಶೋಧನೆ ಕ್ಯೆಗೊಂಡರೆ ನಾವು ಸಮಸ್ಯೆಯನ್ನು ಗುರುತಿಸಿರುವ ವಿಧಾನದಲ್ಲೂ ತಪ್ಪಿದೆ ಎಂದು ತೋರಿಸುವ ಸಾಧ್ಯತೆ ಇದೆ. ಹಾಗಾದಾಗ ಅದನ್ನು ನಾವು ಒಪ್ಪಿಕೊಳ್ಳಲೇಬೇಕು. ನೀವೇಕೆ ಇಂತಹ ವಿಷಯಗಳನ್ನೇ ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ನಾವು ಖಂಡಿತಾ ಕೇಳುವುದಿಲ್ಲ.

ಮತ್ತಷ್ಟು ಓದು »