ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬೆಂಗಳೂರು’

19
ಜೂನ್

ಕನ್ನಡ ಪರ ದನಿಯೆತ್ತಿದರೆ ತಾಲಿಬಾನಿಗಳಾ!?

(ಮಾತೃ ಭಾಷೆಗೆ ಅಪಮಾನಕಾರಿ ಹೇಳಿಕೆ ನೀಡಿದ ವಲಸಿಗರ ಬೆನ್ನು ಬಿದ್ದಿದ್ದಕ್ಕೆ ಕನ್ನಡ ಅಭಿಮಾನಿಗಳಿಗೆ ಸಿಕ್ಕ ಬಿರುದು ’ಇಂಟರ್ನೆಟ್ ತಾಲಿಬಾನಿಗಳು’ ,ಮತ್ತು ಅದನ್ನ ದಯಪಾಲಿಸಿದ್ದು ಕ್ಷ-ಕಿರಣ ಅನ್ನುವ ಬ್ಲಾಗು.ಮಾತೃ ಭಾಷೆಯ ಮಹತ್ವದ ಮತ್ತು ಆ ವಿಷಯದ ಅರಿವಿಲ್ಲದೆ ಬರೆಯುವವರ ಮೇಲೆ ನಿಲುಮೆಗೆ ಅನುಕಂಪವಿದೆ.ಆ ಬರಹಕ್ಕೆ ಹೊಳೆನರಸೀಪುರ ಮಂಜುನಾಥ್ ಅವರ ಉತ್ತರ ಇಲ್ಲಿದೆ – ನಿಲುಮೆ)

– ಹೊಳೆನರಸೀಪುರ ಮ೦ಜುನಾಥ. ಬೆ೦ಗಳೂರು.

ಸನ್ಮಾನ್ಯ ರಾಕೇಶ ಮಥಾಯಿಸ್, ತಮ್ಮ ಬ್ಲಾಗಿನಲ್ಲಿ ತಾವು ಬರೆದಿರುವ ಅಪ್ಪಟ ಕನ್ನಡಾಭಿಮಾನಿ ಬರಹಕ್ಕೆ ನನ್ನ ಪ್ರತ್ಯುತ್ತರ ಹೀಗಿದೆ ನೋಡಿರಿ.

“ನಾನೊಬ್ಬ ಮಾಧ್ಯಮದ ವಿಧ್ಯಾರ್ಥಿ. ನನ್ನ ಸುತ್ತಮುತ್ತ ಮಾಧ್ಯಮ ಪ್ರಪಂಚದಲ್ಲಿ ನಡೆಯುತ್ತಿರುವ ಜಾತೀಯತೆ, ಲಾಬಿ, ಭ್ರಷ್ಠಾಚಾರ ನೋಡಿ ಕರ್ನಾಟಕ ಮಾಧ್ಯಮ ಲೋಕದ ಮೇಲೆ ಕ್ಷಕಿರಣ ಬೀರುವ ಅಗತ್ಯವಿದೆಯೆಂದೆನಿಸಿ ಪುಟ್ಟ ಪ್ರಯತ್ನ. ಈ ಹಾದಿ ಸುಗಮವಲ್ಲವೆಂಬ ಅರಿವು ನನಗಿದೆ, ಆದರೆ ಹಿಂದಿನ ಕಟ್ಟಳೆ ಪದ್ಧತಿಗೊಳಗಾಗದೆ ಆಗಸವನ್ನೇ ತೆರೆದಿಟ್ಟಿರುವ ಇಂಟರ್ನೆಟ್ ಮಾಧ್ಯಮಕ್ಕೆ ನಾನು ಋಣಿಯಾಗಿದ್ದೇನೆ.” ಎ೦ದು ನಿಮ್ಮ ಪರಿಚಯದಲ್ಲಿ ಹೇಳಿಕೊ೦ಡಿರುವ ತಮ್ಮ ಕಣ್ಣಿಗೆ ಹೊರ ರಾಜ್ಯದವರು ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ತಳೆದಿರುವ ನಿಲುವು, ತೋರಿಸುತ್ತಿರುವ ಅಸಡ್ಡೆ, ಇವರಿ೦ದಾಗಿ ಅವಕಾಶವ೦ಚಿತರಾಗುತ್ತಿರುವ ಅಸಹಾಯಕ ವಿದ್ಯಾವ೦ತ ಕನ್ನಡಿಗರು ಕಾಣಿಸಲಿಲ್ಲವೇ?  ಹೊರರಾಜ್ಯದವರು ಕರ್ನಾಟಕದಲ್ಲಿರಬೇಕಾದರೆ ಕನ್ನಡ ಕಲಿಯಲೇಬೇಕು ಎ೦ದಿದ್ದನ್ನು ಧೈರ್ಯವಾಗಿ ಫೇಸ್ ಬುಕ್ಕಿನ೦ತಹ ಸಾಮಾಜಿಕ ತಾಣದಲ್ಲಿ “ಫಕ್ ಆಫ್” ಎ೦ದಿದ್ದನ್ನು ವಿರೋದಿಸಿದವರು ತಮ್ಮ ಕಣ್ಣಿಗೆ “ಅ೦ತರ್ಜಾಲದ ತಾಲಿಬಾನಿಗಳು” ಎನ್ನುವ ರೀತಿಯಲ್ಲಿ ಕ೦ಡಿರುವುದು ತು೦ಬಾ ಆಶ್ಚರ್ಯಕರವಾಗಿದೆ.  ಹಾಗೆಯೇ ತಮ್ಮ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ ಎ೦ದು ಹೇಳಲು ವಿಷಾದವಾಗುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯವರು ನಡೆಸಿದ ಕನ್ನಡಪರ ಹೋರಾಟಗಳನ್ನು “ಪು೦ಡಾಟಗಳು” ಅನ್ನುವಷ್ಟು ಪ್ರಬುದ್ಧರಾಗಿದ್ದೀರಲ್ಲ?  ತಾವು ಯಾವ ಮಾನದ೦ಡಗಳನ್ನು ಅನುಸರಿಸಿ ಈ ನಿರ್ಧಾರಕ್ಕೆ ಬ೦ದಿರುವಿರಿ ಎ೦ಬುದನ್ನೂ ವಿವರವಾಗಿ ಕನ್ನಡನಾಡಿನ ಜನತೆಗೆ ತಿಳಿಸುವ೦ಥವರಾಗಿ.  ಇದೇ ಪ್ರಕರಣ ಪಕ್ಕದ ತಮಿಳುನಾಡಿನಲ್ಲಿಯೋ, ಮಹಾರಾಷ್ಟ್ರದಲ್ಲಿಯೋ ನಡೆದಿದ್ದರೆ ಇಷ್ಟು ಹೊತ್ತಿಗೆ ಹಾಗೆ ಮಾತನಾಡಿದವರನ್ನು ಹೊಡೆದು ಓಡಿಸಿರುತ್ತಿದ್ದರು.
ಮತ್ತಷ್ಟು ಓದು »

12
ಜೂನ್

ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿರಲಿ…!

– ರಾಕೇಶ್ ಶೆಟ್ಟಿ

ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ನಮ್ಮ ಬೆಂಗಳೂರಿಗೆ ಬಂದು, ಇಲ್ಲಿನ ಅನ್ನ,ನೀರು ಕುಡಿದು ’ಕನ್ನಡ ಕಲಿಯಿರಿ’ ಅಂದರೆ ನಮ್ಮ ವಿರುದ್ಧವೇ ತಿರುಗಿ ಬಿದ್ದು ಕನ್ನಡ/ಬೆಂಗಳೂರಿನ ಬಗ್ಗೆ ದ್ವೇಷಕಾರುವುದು ಒಂದು ರೀತಿಯ ಸುಲಭದ ತುತ್ತಾಗಿದೆ.

ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ” ಅನ್ನುವ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು.ಇದೇ ವಿಷಯವನ್ನ ಬೆಂಗಳೂರು ಮಿರರ್ ಅನ್ನುವ ಇಂಗ್ಲೀಷ್ ಪತ್ರಿಕೆ ಅನ್ಯ ಭಾಷಿಗರನ್ನ ಉದ್ರೇಕಿಸುವ ರೀತಿಯಲ್ಲಿ ಬರೆದಿದೆ.ಅಲ್ಲಿನ ಪ್ರತಿಕ್ರಿಯೆಗಳನ್ನ ನೋಡಿದರೆ ಬರೆದವರನ್ನ ಅಟ್ಟಾಡಿಸಿ ಬಡಿಯಬೇಕು ಅನ್ನಿಸುತ್ತದೆ.

ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾದರೆ, ಈ ನೆಲದ ಭಾಷೆ,ಸಂಸ್ಕೃತಿ,ಆಚಾರಗಳಿಗೆ ಬೆಲೆ ಕೊಡಬೇಕು ಅನ್ನುವ ಕಾಮನ್ ಸೆನ್ಸ್ ಇವರಲ್ಲಿ ಇಲ್ಲ ಅನ್ನುವುದಕ್ಕಿಂತ, ಯಾವುದಕ್ಕೂ ಪ್ರತಿಕ್ರಿಯಿಸಿದ ಕನ್ನಡಿಗರ ಧೋರಣೆಯನ್ನೆ ಇಂತ ಜನಗಳು ನಮ್ಮ ದೌರ್ಬಲ್ಯ ಅಂದುಕೊಂಡಿದ್ದಾರೆ.ಇಲ್ಲದಿದ್ದರೆ ಫ಼ೇಸ್ಬುಕ್ಕಿನಲ್ಲಿ ಹಾಲಿಡೇಐಕ್ಯು ಕಂಪೆನಿಯ ಉದ್ಯೋಗಿ ರಾಬಿನ್ ಚುಗ್ ಅನ್ನುವ ಪರದೇಶಿ ಕನ್ನಡಿಗರಿಗೆ ಫ಼ಕ್ ಆಫ಼್ ಅನ್ನುತ್ತಿರಲಿಲ್ಲ ಅಲ್ಲವಾ? ಆ ಕಿಡಿಗೇಡಿ ಕೆಲಸ ಮಾಡುವ ಕಂಪೆನಿಯ ವಿಳಾಸವಿಲ್ಲಿದೆ. ಅವರಿಗೊಂದು ಮಿಂಚೆ ಬರೆದು (ಭಾಷೆ ವಿಷಯ ಮುಟ್ಟಿಸುವಂತಿರಲಿ,ಬೈಗುಳ ದಯವಿಟ್ಟು ಬೇಡ) ಈ ಮಣ್ಣಿನ ಭಾಷೆಯ ಬಗ್ಗೆ ಗೌರವ ಇಲ್ಲದ ಇಂತವರನ್ನ ನಿಮ್ಮ ಕಂಪೆನಿಯಲ್ಲಿ ಇಟ್ಟುಕೊಳ್ಳುವಿರಾ ಅಂತಲೇ ಕೇಳಬೇಕು.ಮೊದಲೆ ಅವನಿಗೆ ಇಲ್ಲಿನ ರೀತಿ ರಿವಾಜುಗಳ ಬಗ್ಗೆ ತಕರಾರುಗಳಿವೆ.ಇಂತ ಹುಡುಗನನ್ನ ವಾಪಸ್ ಅವನ ಮನೆಗೆ ಕಳಿಸೋದು ನಮ್ಮ ಕರ್ತವ್ಯವಲ್ಲವೇ ಗೆಳೆಯರೇ?

ಮತ್ತಷ್ಟು ಓದು »

9
ಜೂನ್

ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿ

– ಶ್ರೀ ಹರ್ಷ ಸಾಲಿಮಠ

ಇದೊಂದು ಮಾತನ್ನು ಅತ್ಯಂತ ತೀವ್ರ ಸಂಕಟದಿಂದ ಹೇಳುತ್ತಿದ್ದೇನೆ. ಕಾಲಿಗೆ ಗ್ಯಾಂಗ್ರಿನ್ ಆದಾಗ ಕಾಲನ್ನು ಕತ್ತರಿಸುತ್ತಾರಲ್ಲ ಹಾಗೆ.  ನೋವಾಗುತ್ತದೆ ಆದರೆ ಬದುಕಲು ಅದು ಅನಿವಾರ್ಯ. ಕನ್ನಡ/ಕರುನಾಡು ಉಳಿಯಬೇಕೆಂದರೆ ಈ ಕೆಲಸ ಆಗಬೇಕಾಗಿದೆ.

ಬೆಂಗಳೂರಲ್ಲಿ ಕನ್ನಡ ಸಿಗುವುದಿಲ್ಲ.ಕನ್ನಡಿಗರು ಕಾಣೆಯಾಗುತ್ತಿದ್ದಾರೆ ಎಂಬ ಮಾತನ್ನು ಅತಿಶಯೋಕ್ತಿ ಎಂದುಕೊಂಡಿದ್ದೆ.ಇತ್ತೀಚಿನ ನನ್ನ ಕೆಲ ಅನುಭವಗಳು ಇದು ಸತ್ಯವೆಂದು ಬಿಂಬಿಸಿವೆ. ನಾನು ಎರಡು ಕಂಪನಿಗಳಿಗೆ ಇಂಟರ್‍ ವ್ಯೂ ಪ್ಯಾನೆಲಿಸ್ಟ್ ಆಗಿದ್ದೇನೆ. ಎರಡು ಕಾಲೇಜುಗಳಿಗೆ ಅಕಡೆಮಿಕ್ ಕನ್ಸಲ್ಟಂಟ್ ಆಗಿದ್ದೇನೆ. ನನ್ನ ಅನುಭವ ಮತ್ತು ವಿಶ್ಲೇಷಣೆಯಿಂದ ಇದೊಂದು ಅಭಿಪ್ರಾಯವನ್ನು ಮುಂದಿಡುತ್ತಿದ್ದೇನೆ.

ಇಲ್ಲಿಯವರೆಗೆ ಕಂಪನಿಗಳಿಗಾಗಿ ಸುಮಾರು ಸೂರು ಜನರ ಸಂದರ್ಶನ ನಡೆಸಿದ್ದೇನೆ. ದಯವಿಟ್ಟು ನಂಬಿ. ಇಲ್ಲಿಯವರೆಗೆ ಒಬ್ಬನೇ ಒಬ್ಬ ಕನ್ನಡಿಗ ಸಂದರ್ಶನಕ್ಕಾಗಿ ಬಂದಿಲ್ಲ! ನಾನು ಮತ್ತು ಪ್ಯಾನೆಲ್ ನಲ್ಲಿರುವ ಕೆಲವರು ಕನ್ನಡಿಗ ಗೆಳೆಯರು ಕನ್ನಡದ ಹುಡುಗರು ಬಂದರೆ ಕೊಂಚ ದಡ್ಡರಿದ್ದರೂ ಸರಿ ಶತಾಯಗತಾಯ ಮುಂದಕ್ಕೆ ತಳ್ಳಬೇಕೆಂದು ಯೋಜಿಸಿಕೊಂಡಿದ್ದೆವು. ಆದರೆ ಕನ್ನಡದ ಒಬ್ಬ ಹುಡುಗನಾದರೂ ಬಂದರೆ ತಾನೆ? ಬಂದವರು ಬಹುತೇಕರು ತೆಲುಗರು ಮತ್ತು ಬಿಹಾರಿಗಳು! ಕೃಷ್ಣದೇವರಾಯ ವಿಶ್ವವಿದ್ಯಾಲಯದ ಲ್ಲಿ ಬಿಎಎಸ್ಸಿ  ಪದವಿ ಮುಗಿಸಿ ಎರಡು ವರುಷಗಳ ಸುಳ್ಳು ಅನುಭವ ಹಾಕಿಕೊಂಡು ಬರುತ್ತಾರೆ. ಕಂಪನಿಗಳಾದರೋ ಇವರು ಸುಳ್ಳರು ಎಂದು ತಿಳಿದೂ ತೆಗೆದುಕೊಳ್ಳುತ್ತವೆ. ಏಕೆಂದರೆ ಈಗ ಬಹುತೇಕ ಕಂಪನಿಗಳು ಸರ್ವಿಸ್ ಮತ್ತು ಮೇಂಟೆನೆನ್ಸ್ ಕೆಲಸಗಳನ್ನು ನಡೆಸುತ್ತಿವೆ. ಈ ಕೆಲಸಕ್ಕೆ ಹೆಚ್ಚಿನ ಕೌಶಲ್ಯ ಅಗತ್ಯವಿಲ್ಲ. ಒಂದೆರಡು ತಿಂಗಳಲ್ಲಿ ಯಾರಾದರೂ ಕಲಿಯಬಹುದು. ಗಿರಾಕಿಗಳಿಗೆ ತೋರಿಸಲು ಬಿಲ್ಲಿಂಗಿಗಾಗಿ ಕೆಲವು ನೌಕರರ ಅವಶ್ಯಕತೆ ಇರುತ್ತದೆ. ಹಾಗಾಗಿ ಕೌಶಲ್ಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಕಂಪನಿಗಳು ಇವರನ್ನು ಕೊಳ್ಳುತ್ತವೆ. ಇವರು ಕಡಿಮೆ ಸಂಬಳಕ್ಕೆ ರಾತ್ರಿ ಪಾಳಿಗೂ ಕೆಲಸ ಮಾಡಲು ತಯಾರಿರುವುದರಿಂದ ಕಂಪನಿಗಳಿಗೂ ಲಾಭ!
ಮತ್ತಷ್ಟು ಓದು »

5
ಜೂನ್

ಗಾಂಧಿ ಪಕ್ಷದೊಳಗಿನ ಬ್ರಿಟಿಷರು…!

– ರಾಕೇಶ್ ಶೆಟ್ಟಿ

ತಲೆಬರಹವನ್ನ ನಕಲಿ ಗಾಂಧಿಗಳ ಪಕ್ಷದೊಳಗಿನ ಬ್ರಿಟಿಷರು ಅಂತ ಓದಿಕೊಳ್ಳಿ.ಮಹಾತ್ಮರ ಹೆಸರನ್ನ ಬೇಡ ಬೇಡವೆಂದರೂ ಅನಿವಾರ್ಯವಾಗಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷದ/ಸರ್ಕಾರದ ದೌರ್ಜನ್ಯದ ವಿರುದ್ಧ ಮಾತನಾಡುವಾಗ ಬಳಸಿಕೊಳ್ಳಲೇಬೇಕಿದೆ.

ಪ್ರಾಮಾಣಿಕ ಪ್ರಧಾನಿಯ ಸರ್ಕಾರ ಅನೈತಿಕ ಕೆಲಸಕ್ಕೆ ಕಡೆಗೂ ಕೈ ಇಟ್ಟಿದೆ.ಮಧ್ಯರಾತ್ರಿ ಕಳ್ಳರಂತೆ-ದರೋಡೆಕೋರರಂತೆ ರಾಮ್ ಲೀಲಾ ಮೈದಾನಕ್ಕೆ ನುಗ್ಗಿ ಹೆಂಗಸರು-ಮಕ್ಕಳು ಅಂತ ನೋಡದೆಯೆ ರಾಕ್ಷಸರಂತೆ ವರ್ತಿಸಿದ ರೀತಿ ನೋಡಿದರೆ, ಮನಮೋಹನ್ ಸಿಂಗ್ ಅನ್ನುವ ಸೋ-ಕಾಲ್ಡ್ ಪ್ರಧಾನಿಯ ಪ್ರಾಮಾಣಿಕತೆ ಉಪ್ಪಿನಕಾಯಿ ಹಾಕಲಿಕ್ಕಾ ಅಂತ ಕೇಳಲೆಬೇಕಾಗುತ್ತದೆ.

ಹುಚ್ಚು ನಾಯಿ ಕಡಿತಕ್ಕೆ ಚುಚ್ಚು ಮದ್ದು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅನ್ನೋದಕ್ಕೆ ದಿಗ್ವಿಜಯ್ ಸಿಂಗ್ ಆಗಾಗ ನೀಡೋ ಹೇಳಿಕೆಗಳೇ ಉದಾಹರಣೆ.ಇಂತ ದಿಗ್ಗಿ ನಿನ್ನೆ ಹೇಳಿದ ಮಾತು ನೆನಪಿದೆಯಾ? ‘ಸರ್ಕಾರ ರಾಮ್ದೇವ್ ಅವರಿಗೆ ಹೆದರಿಲ್ಲ, ಒಂದು ವೇಳೆ ಹೆದರಿದ್ದರೆ ರಾಮ್ ದೇವ್ ಅವರನ್ನ ಬಂಧಿಸುತಿತ್ತು!’.ಹಾಗೇ ಹೇಳಿದ ಮಧ್ಯರಾತ್ರಿಯೇ ಬ್ರಿಟಿಷರು ಜಲಿಯನ್ ವಾಲಾಬಾಗ್ಗೆ ನುಗ್ಗಿದ ರೀತಿಯಲ್ಲೆ ನುಗ್ಗಿ ಅದೇ ರಾಮ್ ದೇವ್ರನ್ನ ಬಂಧಿಸಿದ್ದಾರೆ.ಅಂದರೆ ಕಾಂಗ್ರೆಸ್ಸ್ ಸರ್ಕಾರದ ಬೆದರಿದೆ ಅಂತಲೇ ಅರ್ಥವಲ್ಲವಾ?

ಮತ್ತಷ್ಟು ಓದು »

30
ಮೇ

ಬಸವನ ಗುಡಿಯಲ್ಲಿ ‘ಕರಪ್ಷನ್ ಸಾಕು’ ಆ೦ದೋಲನ. ನಾ ಕ೦ಡ೦ತೆ

– ಹರೀಶ್ ಆತ್ರೇಯ

ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ. ಇನ್ನೂ ಕೆಲವರ ಶೋ, ವಾಲ೦ಟೀರ್ ಟೀ ಶರ್ಟ್ ಮೇಲೆ ಎಲ್ಲರ ಕಣ್ಣು, ಮಾಸ್ಟರ್ ಹಿರಣ್ಣಯ್ಯರನವರ ಅನುಭವದ ಮಾತು, ಅಣ್ಣಾ ಹಜಾರೆಯವರ ಮುಗ್ಧ ನುಡಿಗಳು, ರಾಜಕಾರಣಿಗಳ/ ಸರ್ಕಾರಿ ಅಧಿಕಾರಿಗಳ ಮೋಸದಿ೦ದ ಬೇಸತ್ತ ಜನರ ಹತಾಶ ನುಡಿಗಳು, ಜೈಕಾರ, ಗಲೀ ಗಲೀಮೆ ಶೋರ್ ಹೈ ಸಾರೆ ನೇತ ಚೋರ್ ಹೈ ಎನ್ನುವ ಘೋಷಣೆಗಳು, ಇನ್ನೂ ಕೆಲವರಿಗೆ ಇಲ್ಲೇನ್ ನಡೀತಿದೆ ಅ೦ತ್ಲೇ ಗೊತ್ತಿಲ್ದೆ ಇರೋ ಅಮಾಯಕತೆ (?) ಇದೆಲ್ಲರ ನಡುವೆ ನಮ್ ಯಡ್ಯೂರಪ್ಪನವರ ಪರ ಅದ್ಯಾರೋ ನರಸಿ೦ಹ (ಮು. ಮುಖ್ಯಮ೦ತ್ರಿ) ಎ೦ಬುವವನ ಪ್ರಚಾರ, ಸ್ವರಾತ್ಮ ತ೦ಡದ ಪಾಪ್ ರೀತಿಯ ಸ೦ಗೀತ ಅದಕ್ಕೆ ಜನರು ತಲೆದೂಗಿದ್ದು, ಇವು ನಿನ್ನೆಯ ಆ೦ದೋಲನದ ಹೈಲೈಟ್.

ಹನ್ನೊ೦ದು ಗ೦ಟೆಯಿ೦ದ ೨:೫೦ರ ತನಕ ಕಾರ್ಯಕರ್ತರ ಜನಗಳ ಮತ್ತು ಅಲ್ಲಿ ಆಡುತ್ತಿದ್ದ ಯುವಕರ ಮುಖಗಳನ್ನು ಗಮನಿಸುತ್ತಾ ಬ೦ದೆ. ಅಣ್ಣಾ ಹಜಾರೆಯವ್ರು ಬ೦ದದ್ದು ೨:೫೦ ಕ್ಕೆ. ಅಲ್ಲಿಯವರೆಗೂ ಒ೦ದೆರಡು ಬಾರಿ ಸ್ಟೇಜಿನ ಹತ್ರ ಸುತ್ತ ಮುತ್ತ ಓಡಾಡ್ತಾ ಎಲ್ಲರ ಅಭಿಪ್ರಾಯಗಳನ್ನ ಸ೦ಗ್ರಹಿಸುತ್ತಾ ನಿ೦ತೆ. ಕಾರ್ಯಕರ್ತನೊಬ್ಬ “ನೀವು ವಾಲ೦ಟೀರಾ”? ಅ೦ತ ಕೇಳಿದ “ಅಲ್ಲಪ್ಪ” ಅ೦ದೆ “ಹೀಗೆಲ್ಲಾ ಓಡಾಡ್ಬೇಡಿ ಸರ್ ಬಾ೦ಬ್ ಥ್ರೆಟ್ ಇದೆ “ಅ೦ದ ಆಯ್ತಣ್ಣ ಅ೦ತ ಒ೦ಕಡೆ ಕೂತು ಅವರ ಕೆಲ್ಸಾನ ಗಮನಿಸುತ್ತಾ ಬ೦ದೆ. ಮನೇಲಿ ಇರಕ್ಕೆ ಬೋರ್ ಆಗಿ ನಾವೂ ಟಿ ವೀಲಿ ಕಾಣ್ತೀವಲ್ಲ ಅ೦ತ ಯೋಚಿಸ್ಕೊ೦ಡ್ ಬ೦ದು ಟೈಟ್ಸ್, ಅರೆ ತೋಳಿನ ಟಾಪ್ (ಇನ್ನೂ ಕೆಲವರು ಬನೀನ್ ಥರದ್ದು, ಬೇಡ ಬಿಡಿ) ಹಾಕ್ಕೊ೦ಡ್ “ಹೇ ಇಟ್ಸ್ ವೆರಿ ಫನ್ನಿ ಯೋ ನೋ, ಐ ಅಯಾಮ್ ಆಲ್ಸೋ ಎ ವಾಲ೦ಟೀರ್ ಹಿಯರ್, ಇಲ್ಲಿ ಸಕ್ಕತ್ತಾಗಿದೆ, ಐ ವಾನ ವೇರ್ ದಿಸ್ ಟಿ ಶರ್ಟ್, ಹ್ಮ್ ಲೆಟ್ಸ್ ಗೋ ಇನ್ ಸೈಡ್ ದಿ ವಾನ್ ” ಅ೦ತ ಹೋದವರು ಅರ್ಧ ಗ೦ಟೆಯನ೦ತರ ಸರ್ವಾ೦ಗ ಸು೦ದರಿಯರಾಗಿ ಬ೦ದರು.

ಮತ್ತಷ್ಟು ಓದು »

18
ಮೇ

ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ

ಡಾ|| ಬಿ.ಆರ್. ಸತ್ಯನಾರಾಯಣ 

ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ’ ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ ‘ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ’ ಎಂಬ ಲೇಖನದ ಪೂರ್ಣಪಾಠ ಇಲ್ಲಿದೆ. 14.4.11ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಪ್ರಬಂಧದ ಬಗ್ಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರ ಚಿತ್ರವನ್ನು ಇಲ್ಲಿ ಕಾಣಿಸಿರುತ್ತೇನೆ.

ಬೆಂಗಳೂರಿನ ಸ್ಥಳನಾಮಗಳ ಬಗ್ಗೆ ಈಗಾಗಲೇ ಹಲವಾರು ವಿದ್ವಾಂಸರು ಬೆಳಕು ಚೆಲ್ಲಿದ್ದಾರೆ. ’ಬೆಂಗಳೂರು’ ಎಂಬ ಸ್ಥಳನಾಮದ ಬಗೆಗೆ ನಡೆದ ಅಧ್ಯಯನಗಳು ಅಸಂಖ್ಯಾತ. ಬೆಂಗಳೂರು ಪದದ ಪ್ರಾಚೀನರೂಪಗಳು ಯಾವ ಶಾಸನದಲ್ಲಾಗಲೀ, ಸಾಹಿತ್ಯಕೃತಿಯಲ್ಲಾಗಲೀ ಉಲ್ಲೇಖಗೊಂಡಿಲ್ಲ. ಅತ್ಯಂತ ಪ್ರಾಚೀನ ಉಲ್ಲೇಖವಾಗಿ ದೊರೆತಿರುವ ಬೇಗೂರಿನ ಶಾಸನದಲ್ಲಿಯೂ ’ಬೆಂಗಳೂರು’ ಎಂದು ಸ್ಪಷ್ಟವಾಗಿಯೇ ಇದೆ. ಬೆಂದಕಾಳು ಊರು, ಬೆಂದಕಾಡು ಊರು, ಬೆಂಗಾಡು ಊರು, ಬೆಣಚುಕಲ್ಲು ಊರು… ಇತ್ಯಾದಿ ಹಲವಾರು ನಿಷ್ಪತ್ತಿಗಳಲ್ಲಿ, ಊಹೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಬಿಡಬೇಕು ಎಂಬುದೇ ಬಹುದೊಡ್ಡ ಸಮಸ್ಯೆಂಇಇಗಿದೆ.
ಸಾಮಾನ್ಯವಾದ ಐತಿಹಾಸಿಕ ಆಕರಗಳನ್ನು ಬಿಟ್ಟು ಸ್ವಲ್ಪ ಭಿನ್ನವಾಗಿ ನೋಡಲೆತ್ನಿಸಿದಾಗ ದೊರೆತಿದ್ದು, ಕೆನೆತ್ ಅಂಡರ್‌ಸನ್ ಉಲ್ಲೇಖಿಸಿರುವ ವಿಷಯ. ’ಇಲ್ಲಿಯ ಜನ ಹೆಚ್ಚಾಗಿ ತಿನ್ನುವ, ರುಚಿಕಟ್ಟಾದ ಹಾಗೂ ತರಾವರಿ ಕಾಳುಗಳಿಂದಲೇ ಈ ಹೆಸರು ಬಂದಿದೆಯೆಂದು ಇಲ್ಲಿನ ಜನ ನಂಬಿದ್ದಾರೆ’ ಎಂಬುದನ್ನು ಅಂಡರ್‌ಸನ್ ದಾಖಲಿಸಿದ್ದಾನೆ. ಬೇಯಿಸಿ ತಿನ್ನಬಹುದಾದ ಕಾಳುಗಳ ದೆಸೆಯಿಂದಿಲೇ ಬೆಂಗಳೂರು ಹೆಸರು ರೂಪಗೊಂಡಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಬಹುದು, ಅಷ್ಟೆ.
ಬೃಹದಾಕಾರವಾಗಿ ಹಾಗೂ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸ್ಥಳನಾಮಗಳು ನೆಲೆಗೊಳ್ಳುವುದು, ಬದಲಾಗುವುದು, ಸಂಕ್ಷಿಪ್ತಗೊಳ್ಳುವ ಪ್ರಕ್ರಿಯೆಯೇ ವಿಶೇಷವಾದುದು. ಮೊದಲ ಹಂತದಲ್ಲಿ ಕನ್ನಡ ಅಥವಾ ದ್ರಾವಿಡಮೂಲದಲ್ಲಿದ್ದ ಹೆಸರುಗಳು, ಸಂಸ್ಕೃತೀಕರಣಗುಳ್ಳುತ್ತಿದ್ದವು. ನಂತರದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷಾಮೂಲದಿಂದ ಇಂಗ್ಲಿಷ್ ಭಾಷೆಗೆ, ಇಂಗ್ಲಿಷ್ ಭಾಷೆಯಿಂದ ಇಂಗ್ಲಿಷ್ ಭಾಷೆಯ ಸಂಕ್ಷಿಪ್ತರೂಪದೆಡೆಗೆ ಬದಲಾಗಿರುವುದನ್ನು ಕಾಣಬಹುದು. ಮತ್ತೊಂದು ಬೆಳವಣಿಗೆಯೆಂದರೆ ಇಂಗ್ಲಿಷ್ ಭಾಷೆಯಿಂದ ಮತ್ತೆ ಭಾರತೀಯ ಹೆಸರುಗಳನ್ನು ಪಡೆದಿರುವುದನ್ನು ನೋಡಬಹುದು. ಭಾರತೀಯ ಹೆಸರುಗಳನ್ನು ಸಂಕ್ಷಿಪ್ತಗೊಳಿಸಿರುವುದೂ ಉಂಟು. ಕೆಲವು ಉದಾಹರಣೆಗಳ ಮೂಲಕ ಈ ಬದಲಾಗುವ ಪ್ರವೃತ್ತಿಯನ್ನು ಹೆಚ್ಚು ಮನನ ಮಾಡಿಕೊಳ್ಳಬಹುದು. ಮತ್ತಷ್ಟು ಓದು »
31
ಮಾರ್ಚ್

ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು

ಸಾತ್ವಿಕ್ ಎನ್ ವಿ

ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.

ಮತ್ತಷ್ಟು ಓದು »