ಕವಲು ದಾರಿಯಲ್ಲಿ ಕನ್ನಡ
-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ
ನನ್ನ ಸ್ನೇಹಿತರ ಮನೆಯಲ್ಲಿ ನಡೆದ ಘಟನೆ ಇದು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಯಾದ ನನ್ನ ಸ್ನೇಹಿತರ ಮಗ ಕನ್ನಡ ಪಠ್ಯಪುಸ್ತಕದಲ್ಲಿನ ಪದವೊಂದರ ಅರ್ಥಕ್ಕಾಗಿ ತನ್ನ ತಂದೆಯಲ್ಲಿ ಕೇಳಿದ. ಅವರಿಬ್ಬರ ನಡುವಿನ ಸಂಭಾಷಣೆ ಹೀಗಿತ್ತು. ‘ಪಪ್ಪಾ ವ್ಹಾಟ್ ಈಜ್ ಬೇವಿನ ಮರ?’. ಆ ಮಗುವಿಗೆ ಅರ್ಥವಾಗಬೇಕೆಂದರೆ ಆತನದೇ ಧಾಟಿಯಲ್ಲಿ ಉತ್ತರಿಸುವುದು ಬಿಟ್ಟು ಆ ತಂದೆಗೆ ಬೇರೆ ದಾರಿಯೇ ಇರಲಿಲ್ಲ. ‘ಪಾಪು ಬೇವಿನಮರ ಮೀನ್ಸ್ ನೀಮ್ ಟ್ರೀ. ಎ ಟ್ರೀ ಆಫ್ ಬಿಟರ್ ಲೀವ್ಸ್. ಹ್ಯಾವ್ ಯು ಸೀನ್ ಎ ಬಿಗ್ ಟ್ರೀ ಇನ್ ಗ್ರ್ಯಾಂಡ್ ಪಾ ಹೌಸ್? ದಟ್ ಈಜ್ ಬೇವಿನ ಮರ’. ತಂದೆ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಿದ ನಂತರ ಆ ಮಗುವಿನ ಸಮಸ್ಯೆ ಸುಲಭವಾಗಿ ಬಗೆಹರಿಯಿತು. ತನ್ನದೇ ಪರಿಸರದಲ್ಲಿನ ವಸ್ತುವೊಂದರ ವಿವರಣೆಗಾಗಿ ಆ ಮಗು ತನ್ನದಲ್ಲದ ಅನ್ಯಭಾಷೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸಹಜವಾಗಿಯೇ ಆತಂಕಪಡುವ ಸಂಗತಿ. ನಾವುಗಳೆಲ್ಲ ಚಿಕ್ಕವರಾಗಿದ್ದಾಗ ಇಂಗ್ಲಿಷ್ ಪಠ್ಯ ಪುಸ್ತಕದ ಜೊತೆಗೆ ಗೈಡ್‍ಗಳನ್ನು ಬಳಸುತ್ತಿದ್ದೇವು. ಆ ಗೈಡ್‍ಗಳಲ್ಲಿ ಇಂಗ್ಲಿಷ್ ಪಠ್ಯದ ಕನ್ನಡ ಭಾವಾರ್ಥದ ಜೊತೆಗೆ ಇಡೀ ಪಠ್ಯ ಕನ್ನಡ ಅಕ್ಷರಗಳಲ್ಲಿ ಪ್ರಕಟವಾಗಿರುತ್ತಿತ್ತು. ಹೀಗಾಗಿ ನಾವು ಇಂಗ್ಲಿಷ ಭಾಷೆಯನ್ನು ಕನ್ನಡ ಅಕ್ಷರಗಳ ಮೂಲಕವೇ ಕಲಿಯುತ್ತಿದ್ದೇವು. ಆದರೆ ಇವತ್ತು ನಮ್ಮದೇ ನೆಲದ ಮಕ್ಕಳು ಕನ್ನಡ ಭಾಷೆಯನ್ನು ಇಂಗ್ಲಿಷ್ ಮೂಲಕ ಕಲಿಯಲು ಪ್ರಯತ್ನಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಇಂಗ್ಲಿಷ್ ಭಾಷೆಯನ್ನು ಕನ್ನಡದ ಮೂಲಕ ಕಲಿಯುವಂತಾಗಲಿ ಎನ್ನುವ ಸಲಹೆಯನ್ನು ಕೇಳದಷ್ಟು ಬಹುದೂರ ನಾವುಗಳೆಲ್ಲ ಸಾಗಿ ಬಂದಿದ್ದೇವೆ. ಮತ್ತಷ್ಟು ಓದು 
ASER ವರದಿ 2012 ಮತ್ತು ಕರ್ನಾಟಕದ ಕಲಿಕೆ ಒಳನೋಟ – 1
-ಪ್ರಶಾಂತ ಸೊರಟೂರ
ASER (Annual Status Education Report – ಕಲಿಕೆ ಗುಣಮಟ್ಟದ ವರುಶದ ವರದಿ)
ಇದು ಸರಕಾರೇತರ ಸಂಸ್ಥೆಯಾದ ’ಪ್ರಥಮ್’ನಿಂದ ಕಲಿಕೆಯ ಗುಣಮಟ್ಟ ತಿಳಿದುಕೊಳ್ಳಲು 2005ರಿಂದ ಪ್ರತಿ ವರುಶ, ಇಂಡಿಯಾದ ಸುಮಾರು 15,000 ಹಳ್ಳಿ ಪ್ರದೇಶದ ಶಾಲೆಗಳಲ್ಲಿ ಅರಸುವಿಕೆ (ಸಮೀಕ್ಷೆ) ನಡೆಸಿ ಹೊರತರಲಾಗುತ್ತಿರುವ ವರದಿ.
ASER ಕಲಿಕೆಮಟ್ಟವನ್ನು ಒರೆಗೆಹಚ್ಚುವ ಬಗೆ:
ಇಂಡಿಯಾದ ಪ್ರತಿ ಜಿಲ್ಲೆಯಲ್ಲಿ 30 ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತದೆ. (ಹಿಂದಿನ ಎರಡು ವರುಶದ 20 ಮತ್ತು 10 ಹೊಸ ಹಳ್ಳಿಗಳು).
ಹಳ್ಳಿಗಳ ಗುಣಮಟ್ಟ (ರಸ್ತೆ, ಮನೆಗಳು ಇತ್ಯಾದಿ), ಕುಟುಂಬದ ಗುಣಮಟ್ಟ (ತಂದೆ-ತಾಯಿಯ ಕಲಿಕೆ, ಮನೆ ಇತ್ಯಾದಿ), ಶಾಲೆಯ ಗುಣಮಟ್ಟ (ಶಿಕ್ಶಕರು-ಮಕ್ಕಳ ಅನುಪಾತ, ಕಲಿಕೆಯ ಸಲಕರಣೆಗಳು, ಕುಡಿಯುವ ನೀರು, ಓದುಮನೆ) ಮುಂತಾದವುಗಳನ್ನು ಈ ಅರಸುವಿಕೆಯು (ಸಮೀಕ್ಶೆಯು) ಒಳಗೊಂಡಿರುತ್ತದೆ.
6 – 14 ವಯಸ್ಸಿನ (1 ರಿಂದ 7/8 ನೇ ತರಗತಿ) ಮಕ್ಕಳು ಈ ವರದಿಗೆ ಒಳಪಡುತ್ತಾರೆ.ಕಲಿಕೆಯ ಗುಣಮಟ್ಟವನ್ನು ASER ನ ಮೂರು ಸಲಕರಣೆಗಳಿಂದ ಅಳೆಯಲಾಗುತ್ತದೆ. 1) ತಾಯ್ನುಡಿಯಲ್ಲಿ ಓದುವಿಕೆಯ ಮಟ್ಟ 2) ಇಂಗ್ಲಿಶ ಓದುವಿಕೆಯ ಮಟ್ಟ 3) ಗಣಿತ ಕಲಿಕೆಯ ಮಟ್ಟ (ಕಳೆಯುವಿಕೆ ಮತ್ತು ಭಾಗಾಕಾರ)
ಜೊತೆಗೆ 2012ರ ವರದಿಯಲ್ಲಿ ಶಾಲೆಗೆ ಸೇರುವ ಮಕ್ಕಳ ಪ್ರಮಾಣ, ಸರಕಾರ ಮತ್ತು ಖಾಸಗಿ ಶಾಲೆಗಳ ಪ್ರಮಾಣ, ಹೊರಕಲಿಕೆಗೆ (ಟ್ಯೂಶನ್) ಹೋಗುವವರ ಪ್ರಮಾಣ ಮುಂತಾದವುಗಳ ಕುರಿತು ತಿಳಿಸಲಾಗಿದೆ.
2012 ರಲ್ಲಿ ಕರ್ನಾಟಕದ 778 ಹಳ್ಳಿಗಳ, ಸುಮಾರು 18,000 ಸಾವಿರ ಮಕ್ಕಳು ಈ ಆರಸುವಿಕೆಗೆ (ಸಮೀಕ್ಷೆಗೆ) ಒಳಪಟ್ಟಿದ್ದರು.
ಮತ್ತಷ್ಟು ಓದು 




