ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …
– ರಾಕೇಶ್ ಶೆಟ್ಟಿ
ಹಿಂದಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಹೊಸ ಪುಸ್ತಕ “ಟಿಪ್ಪು ಸುಲ್ತಾನ್” ಕುರಿತು ಚರ್ಚಿಸುತ್ತ, ಲೇಖಕ ವಿಕ್ರಂ ಸಂಪತ್ ಅವರು, “ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಟಿಪ್ಪು ಜಯಂತಿ ಅಂತ ಮಾಡಿ ಬಳಸಿಕೊಂಡರು. ಬಿಜೆಪಿಯವರು, ಮೈಸೂರಿನ ಇತಿಹಾಸದಲ್ಲಿ ಬ್ರಿಟಿಷರು, ಮೈಸೂರಿನವರಿಂದ ಎಲ್ಲೂ ದಾಖಲಾಗದ ಉರಿಗೌಡ, ನಂಜೇಗೌಡ ಎನ್ನುವ ಫಿಕ್ಷನಲ್ ಕ್ಯಾರೆಕ್ಟರ್ ಗಳನ್ನು ಕಳೆದ ಚುನಾವಣೆಯಲ್ಲಿ ಸೃಷ್ಟಿಸಿ ಆಗಿನ ಎದುರಾಳಿಯಾಗಿದ್ದ ಜೆಡಿಎಸ್ ಪಕ್ಷದಿಂದ ಒಕ್ಕಲಿಗರ ಮತಗಳಿಸಲು ವ್ಯರ್ಥ ಪ್ರಯತ್ನ ಮಾಡಿದರು. ಕಡೆಗೆ ಒಕ್ಕಲಿಗ ಸಂಘದವರು, ನಮ್ಮ ಹೆಸರಿನಲ್ಲಿ ಸುಳ್ಳುಗಳನ್ನು ಹರಡಬೇಡಿ ಎಂದು ಆದೇಶ ನೀಡಿದ ನಿಂತರ ವಿಷಯಕ್ಕೆ ಮುಕ್ತಾಯ ಹಾಡಲಾಯಿತು.” ಎಂದಿದ್ದರು (ವಿಡಿಯೋ ಕೊಂಡಿ ಕಮೆಂಟ್ ಬಾಕ್ಸಿನಲ್ಲಿ). ಇದೇ ಮಾತನ್ನು ಅವರು ಪುಸ್ತಕದಲ್ಲಿಯೂ ಬರೆದಿದ್ದಾರೆ.
ವಿಕ್ರಂ ಸಂಪತ್ ಹೇಳಿದ ಮಾತು ನಿಜವೇ. ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿವೆ. ಆದರೆ, ಕೇವಲ ರಾಜಕೀಯ ಪಕ್ಷಗಳು ಮಾತ್ರ ಬಳಸಿಕೊಂಡಿವೆಯೇ?
ಇತಿಹಾಸಕಾರರು ತಮ್ಮ ಐಡಿಯಾಲಾಜಿಕಲ್ ಕ್ಯಾಂಪ್ ಬದಲಾದಾಗ, ತಾವಿರುವ ಕ್ಯಾಂಪಿನ ಗುಣಧರ್ಮಕ್ಕೆ ಹೊಂದುವಂತೆ ಇತಿಹಾಸವನ್ನು ಬಳಸಿಕೊಂಡಿಲ್ಲವೇ?
ಇಬ್ಬರು ಇತಿಹಾಸಕಾರರ ಉದಾಹರಣೆಯನ್ನು ಕೊಡುತ್ತೇನೆ.
ಮೊದಲಿಗರು ಪ್ರೊ.ನಂಜರಾಜ ಅರಸ್ ಅವರು. ಒಂದು ಕಾಲದಲ್ಲಿ “ಮೈಸೂರು ನೂರಿನ್ನೂರು ವರ್ಷಗಳ ಹಿಂದೆ” ಎನ್ನುವ ಪುಸ್ತಕವನ್ನು ಇವರು ಬರೆದಿದ್ದರು. ಬಹಳ ಚಂದದ ಪುಸ್ತಕ. ಆ ಪುಸ್ತಕದಲ್ಲಿ ಒಡೆಯರ್ ವಂಶವನ್ನು ಹೊಗಳಿ, ಟಿಪ್ಪುವನ್ನು ತೆಗಳಿ ಬರೆದಿದ್ದರು. ಅದೇ ಪುಸ್ತಕದ ಲೇಖಕರ ಅಭಿಪ್ರಾಯದಲ್ಲಿ, ಟಿಪ್ಪುವಿನ ಬಗ್ಗೆ ಸತ್ಯಾಂಶವನ್ನು ಹೇಳಿದ್ದರಿಂದ ಬರಗೂರು ರಾಮಚಂದ್ರಪ್ಪ ಇತ್ಯಾದಿ ಸೆಕ್ಯುಲರ್ ಸಾಹಿತಿ,ಚಿಂತಕರಿಂದ ಟೀಕೆ ವ್ಯಕ್ತವಾದ ಬಗ್ಗೆಯೂ ಬರೆದುಕೊಂಡಿದ್ದರು.
ಕಾಲ ಚಕ್ರ ಉರುಳಿತು. ಅದೇನು ಕಾರಣವೋ ಗೊತ್ತಿಲ್ಲ ನಂಜರಾಜ ಅರಸ್ ಅವರು ಒಡೆಯರ್ ವಂಶವನ್ನು ಟೀಕಿಸುತ್ತಾ, ಟಿಪ್ಪುವನ್ನು ಹೊಗಳಲು ಆರಂಭಿಸಿದರು. ನಂತರ “ಟಿಪ್ಪು ಮಾನ್ಯತೆ ಸಿಗದ ಸುಲ್ತಾನ” ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಮೊದಲ ಪುಸ್ತಕದಲ್ಲಿ ಹೊಗಳಿದ್ದನ್ನು ಇದರಲ್ಲಿ ತೆಗಳಿದರು. ಮೊದಲು ತೆಗಳಿದವರನ್ನು ಈಗ ಹೊಗಳಿ, ಅವನೊಬ್ಬ ನತದೃಷ್ಟ ಮಹಾನ್ ನಾಯಕ ಎಂಬಂತೆ ಚಿತ್ರಿಸಿದರು. (ಎರಡೂ ಅಭಿರುಚಿ ಪ್ರಕಾಶನದಿಂದ ಪ್ರಕಟಿತ)
ಮತ್ತೊಬ್ಬ ಇತಿಹಾಸಕಾರರ ಉದಾಹರಣೆ ಕೊಡುವ ಮೊದಲು, ಅವರ ಪುಸ್ತಕಗಳಲ್ಲೇ ಉಲ್ಲೇಖವಾಗಿರುವುದನ್ನು ತೋರಿಸುತ್ತೇನೆ ನೋಡಿ.
“ವರ್ತಮಾನದ ಹಾಸ್ಯಾಸ್ಪದ ರಾಜಕೀಯ ಸನ್ನಿವೇಶಗಳ ಸಂದರ್ಭದಲ್ಲಿ ನಾವು ಸೃಷ್ಠಿಸಿಕೊಂಡಿರುವ ಮಾನದಂಡಗಳ ಮೂಲಕ ಭೂತಕಾಲದ ಜನರನ್ನು ನಿರ್ಣಯಿಸುವುದು ಸಂಪೂರ್ಣವಾಗಿ ನಿರರ್ಥಕವೆಂದು ತೋರುತ್ತದೆ. ಹಿಂದಿನ ಕಾಲದ ಈ ವೀರರು ಅವರ ಸಮಯ ಮತ್ತು ಸಂದರ್ಭಗಳ ಉತ್ಪನ್ನಗಳೆಂದು ಅರಿತುಕೊಳ್ಳಬೇಕು. ವರ್ತಮಾನದ ನೈತಿಕತೆಯ ಕನ್ನಡಕದಲ್ಲಿ ಅವರ ಬಗ್ಗೆ ತೀರ್ಪು ನೀಡುವುದು ಸರಿಯಲ್ಲ. ಟಿಪ್ಪು ಕೂಡ ಇತರ ಎಲ್ಲರಂತೆ ವಿವಿಧ ಭಾವನೆಗಳಿರುವ ಮನುಷ್ಯರಾಗಿದ್ದರು. ಅವರಿಗೆ ಶುದ್ಧ ಕಪ್ಪು ಅಥವಾ ಬಿಳಿ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ತೋರುತ್ತದೆ…”
“… ನಿಸ್ಸಂದೇಹವಾಗಿ, ಟಿಪ್ಪು ಒಬ್ಬ ಮಹಾನ್ ಆಡಳಿತಗಾರ. ಅವರ ಕಾಲಕ್ಕಿಂತ ಮುಂದಿನದನ್ನು ಗ್ರಹಿಸಬಲ್ಲ ದಾರ್ಶನಿಕನಾಗಿದ್ದರು. ಹಿಂದೆ (ಹಿಂದಿನ ಅಧ್ಯಾಯಗಳಲ್ಲಿ) ಚರ್ಚಿಸಿದಂತೆ ಅವರ ಪ್ರಗತಿಪರ ಕ್ರಮಗಳು, ಮೈಸೂರು ರಾಜ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಂದಿನ ದುರ್ಬಲ ಒಡೆಯರ್‌ಗಳ ಅಡಿಯಲ್ಲಿ (ಮೈಸೂರು ರಾಜ್ಯ) ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿಯುತ್ತಿತ್ತು…”
ಟಿಪ್ಪು ಬಗ್ಗೆ ಇಷ್ಟು ಪ್ರೀತಿಯಿಂದ ಮಾತನಾಡಿದವರು ಯಾರಿರಬಹುದು? ಯಾರೋ ಸೆಕ್ಯುಲರ್ ಇತಿಹಾಸಕಾರರಲ್ಲ. ಈದೀಗ ಬಿಜೆಪಿ ಆಂಡ್ ಪರಿವಾರದವರ ಕಣ್ಮಣಿಯಾಗಿರುವ ಲೇಖಕ ವಿಕ್ರಂ ಸಂಪತ್ ಅವರೇ. (ಪುಸ್ತಕ : ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು. ಅಧ್ಯಾಯ : ದಿ ಲೆಗೆಸಿ ಆಫ್ ಟೀಪು ಸುಲ್ತಾನ್. ಪುಟ.ಸಂ ೩೭೩. ರೂಪ ಪಬ್ಲಿಕೇಷನ್ಸ್, ೨೦೦೮)
ಆಗ ಹಾಗೆ ಬರೆದವರು, ಈಗ ತಮ್ಮ ಹೊಸ ಪುಸ್ತಕದಲ್ಲಿ ಟಿಪ್ಪು ಕುರಿತು ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಗೊತ್ತೇ? (ಪು: ಟಿಪ್ಪು ಸುಲ್ತಾನ್ , ಅಧ್ಯಾಯ : ಎ ಬ್ಲಡೀಡ್ ಲೆಗೆಸಿ. ಪುಟ ಸಂ. ೬೭೩-೬೭೪. ಪೆಂಗ್ವಿನ್ ಪಬ್ಲಿಕೇಷನ್, ೨೦೨೪)


“ಅವರದೇ ಪತ್ರಗಳು, ಅವರ ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಅವರ ಸ್ವಂತ ಕನಸಿನ ಬಗೆಗಿನ ದಾಖಲಾತಿಗಳ ಬರಹಗಳಿಂದ, ಟಿಪ್ಪು ಮುಸ್ಲಿಮೇತರರ ಬಗ್ಗೆ ಅಪಾರವಾದ ದ್ವೇಷವನ್ನು ಹೊಂದಿದ್ದರು ಮತ್ತು ಅವರ ವಿರುದ್ಧ ಪವಿತ್ರ ಯುದ್ಧವನ್ನು (ಜಿಹಾದ್) ನಡೆಸುವುದು ತನ್ನ ಬದ್ಧ, ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಿದ್ದರು ಎನ್ನುವುದು ಸ್ಪಷ್ಟವಾಗಿದೆ…”
“… ಹೈದರ್‌ನಂತೆ, ಟಿಪ್ಪು ಕೂಡ, ಹಿಂದೂ ಬಹುಸಂಖ್ಯಾತರನ್ನು ಒಳಗೊಂಡಿರುವ ಮೈಸೂರು ಸಾಮ್ರಾಜ್ಯದ ಪ್ರಜೆಗಳಿಗೆ, ತನ್ನ ತಂದೆಯಿಂದ ಅಧಿಕಾರ ಕಳೆದುಕೊಂಡ ಒಡೆಯರ್ ಕುಟುಂಬದ ಬಗ್ಗೆ ಅಪರಿಮಿತವಾದ ಗೌರವ ಮತ್ತು ಮೃದು ಧೋರಣೆಯಿದೆ ಎನ್ನುವುದನ್ನು ಅರಿತುಕೊಂಡಿದ್ದರು. ಮೈಸೂರಿನಲ್ಲಿ ಬಹಿರಂಗವಾಗಿ ಯಾವುದೇ ರೀತಿಯ ಧಾರ್ಮಿಕ ಬದಲಾವಣೆಯ ಪ್ರಯತ್ನಗಳಲ್ಲಿ ತೊಡಗಿಕೊಂಡರೆ, ಪ್ರಜೆಗಳ ನಡುವೆ ಕುದಿಯುತ್ತಿರುವ ಕೋಪವು ಪೂರ್ಣ ಪ್ರಮಾಣದ ದಂಗೆಯಾಗಿ ಬದಲಾಗಬಹುದು ಎಂದು ಅವರು ತಿಳಿದಿದ್ದರು. ಯುದ್ಧರಂಗದಲ್ಲಿ ಅನೇಕ ಶತ್ರುಗಳೊಂದಿಗೆ ರಕ್ತಸಿಕ್ತ ಯುದ್ಧಗಳಲ್ಲಿ ತೊಡಗಿರುವಾಗ ಮತ್ತು ಇತರ ಸ್ಥಳಗಳಲ್ಲಿ ದಂಗೆಗಳನ್ನು ಅಡಗಿಸುವಲ್ಲಿ ಮಗ್ನರಾಗಿರುವಾಗ ಇದನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು… ಆದರೆ, ಅವರ ಆಲೋಚನೆಗಳು, ಅವರ ಬರಹ ಅವರ ಕನಸುಗಳು, ತಮ್ಮ ನಂಬಿಕೆಯ ಜೊತೆಗೆ ಇಲ್ಲದ ಜನರೆಡೆಗೆ ಸಹಜವಾದ ದ್ವೇಷವನ್ನು ಮತ್ತು ಅಂತವರನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವ ಆಲೋಚನೆ ಅವರ ಮನಸ್ಸಿನಲ್ಲಿ ನಿರಂತರವಾಗಿತ್ತು ಎನ್ನುವುದನ್ನು ತೋರಿಸಿಕೊಡುತ್ತವೆ.”
ಇದಿಷ್ಟೇ ಅಲ್ಲ. ಮೊದಲ ಪುಸ್ತಕದಲ್ಲಿ ಶ್ರೀರಂಗಪಟ್ಟಣದ ಮೂಡಲು ಬಾಗಿಲು ಕೋಟೆ ಆಂಜನೇಯ ದೇವಸ್ತಾನವನ್ನು ಕೆಡವಿ ಮಸೀದಿ ಮಾಡಿದ ಕುರಿತು ಏನು ವಿವರವಾಗಿ ಬರೆದಿಲ್ಲ. ಬಹುಶಃ ಲೇಖಕರ ಆಗಿನ ಮನಸ್ಥಿತಿಗೆ ಅದು ಪೂರಕವಾಗಿರಲಿಲ್ಲವೇನೋ. ಅದೇ ಘಟನೆಯನ್ನು ಹೊಸ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈಗ ಆಂಜನೇಯ ನೆನಪಾಗಿದ್ದಾನೆ.
ಮೊದಲ ಪುಸ್ತಕದಲ್ಲಿ ಟಿಪ್ಪುವನ್ನು ಟೈಗರ್, ಸುಲ್ತಾನ್ ಈ ಖುದಾದಾದ್ ಇತ್ಯಾದಿಯಾಗಿ ಹೊಗಳಲಾಗಿದೆ. ಉದಾಹರಣೆಗೆ, ಟಿಪ್ಪುವಿನ ಮೃತ ದೇಹವನ್ನು ಬ್ರಿಟಿಷರು ಹುಡುಕಿದ ಸಂದರ್ಭದಲ್ಲಿ, “ಟಿಪ್ಪುವಿನ ದೇಹ ಸಿಕ್ಕರೂ, ಹುಲಿ ಇನ್ನೂ ಜೀವಂತ ಇರಬಹುದು ಎಂದು ಮುಟ್ಟಲು ಬ್ರಿಟಿಷರು ಹೆದರಿದರು.” ಎಂದು ವರ್ಣಿಸಿದ್ದಾರೆ. ಹೊಸ ಪುಸ್ತಕದಲ್ಲಿ ಟೈಗರ್ ನಾಪತ್ತೆಯಾಗಿದೆ, ‘ಸುಲ್ತಾನ್ ಈ ಖುದಾದಾದ್’ ಹೋಗಿ ‘ಸರ್ಕಾರ್ ಈ ಖುದಾದಾದ್’ ಆಗಿದೆ.
ಮೊದಲ ಪುಸ್ತಕದಲ್ಲಿ ಟಿಪ್ಪು ರಾಕೆಟ್ ಪಿತಾಮಹ ಎಂಬ ಸೆಕ್ಯುಲರ್ ಕಲ್ಪನೆಯನ್ನೇ ಯಥಾವತ್ ಚಿತ್ರಿಸಲಾಗಿದ್ದರೇ, ಹೊಸ ಪುಸ್ತಕದಲ್ಲಿ ರಾಕೆಟ್ ಬಳಕೆ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಿರುವುದರ ಬಗ್ಗೆ ಎಲ್ಲಾ ಹೇಳುತ್ತಾ, ಇದ್ದಿದ್ದನ್ನು ಇವರು ಇಂಪ್ರೂವ್ ಮಾಡಿಕೊಂಡಿದ್ದಾರೆ ಎನ್ನುತ್ತಾರೆ.
ಮೊದಲ ಪುಸ್ತಕದಲ್ಲಿ ಕೊಡಗಿನಲ್ಲಿ ಟಿಪ್ಪು ನಡೆಸಿದ ದಮನಕಾರಿ ಯುದ್ಧಗಳ ಬಗ್ಗೆ ಮಾತನಾಡುತ್ತಾ, ಕೊಡವರಿಗೆ ಭೋಜನ ಕೂಟವನ್ನು ಏರ್ಪಡಿಸುವ ಮೂಲಕ ಅವರ ಜೊತೆಗಿನ ಯುದ್ಧಕ್ಕೆ ಕೊನೆ ಹಾಡಿದರು ಎಂದು ಬರೆದಿದ್ದಾರೆ. ಹೊಸ ಪುಸ್ತಕದಲ್ಲಿ ದೇವಾಟ್ ಪರಂಬು ಹತ್ಯಾಕಾಂಡದ ನೆನಪಾಗಿದೆ. ಐ.ಮಾ ಮುತ್ತಣ್ಣ,ಪಟ್ಟೋಲೆ ಪಳಮೆ, ಅಡ್ಡಂಡ ಕಾರ್ಯಪ್ಪ ಅವರ ಈ ಕುರಿತು ಬರೆದಿರುವುದಾಗಿ ಹೇಳಿದ್ದಾರೆ.
ಇದು ವಿಕ್ರಂ ಹೇಳಿಕೆಯ ಮೊದಲ ಭಾಗವಾದ ಟಿಪ್ಪುವನ್ನು “ಬಳಸಿಕೊಂಡ” ಬಗ್ಗೆಯಾದರೇ, ಹೇಳಿಕೆಯ ಎರಡನೇ ಭಾಗವಾದ “ಬ್ರಿಟೀಷ್ , ಮೈಸೂರಿನ ಯಾವ ಇತಿಹಾಸಕಾರನೂ ದಾಖಲಿಸಿದ ಇಬ್ಬರನ್ನು ಬಿಜೆಪಿ ಸೃಷ್ಠಿಸಿತು” ಎಂದಿದ್ದಾರಲ್ಲ ಅದರ ಬಗ್ಗೆಯೂ ಬೆಳಕು ಚೆಲ್ಲಬೇಕಾದ ಸಮಯವಿದು.
ಟಿಪ್ಪು ಸುಲ್ತಾನ್ ಪುಸ್ತಕದಲ್ಲಿ ತಮಗೆ ಸಹಾಯ ಮಾಡಿದ ಬಿಜೆಪಿಯ ನಾಯಕರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ನಾಯಕರ ಸಾಲಿನಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಹೆಸರು ಕಾಣಿಸಲಿಲ್ಲ! ಏಕೆಂದರೆ ಟಿಪ್ಪು ನಿಜ ಕನಸುಗಳು ಎಂಬ “ನಾಟಕ” ವನ್ನು ರಚಿಸಿದ ಅಡ್ಡಂಡ ಕಾರ್ಯಪ್ಪನವರು ನನಗೆ ತಿಳಿದ ಮಟ್ಟಿಗೆ ಆಗ ರಂಗಾಯಣದ ನಿರ್ದೇಶಕರಾಗಿದ್ದರೇ ಹೊರತು ಬಿಜೆಪಿಯ ಪದಾಧಿಕಾರಿಯೇನೂ ಆಗಿರಲಿಲ್ಲ. ಹೀಗಿದ್ದಾಗ ಬಿಜೆಪಿಯವರ ಸೃಷ್ಟಿ ಎಂದು ಹೇಳುವ ಬದಲಿಗೆ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಅವರ ಸೃಷ್ಟಿ ಎಂದು ನೇರವಾಗಿ ಹೇಳಬಹುದಿತ್ತಲ್ಲ? ಬಿಜೆಪಿಯೆಂದರೇ ಸಾರ್ವಜನಿಕ ಜಾಗದಲ್ಲಿರುವ ಗಂಟೆ ಯಾರಾದರೂ ಬಂದು ಸುಲಭವಾಗಿ ಬಡಿದು ಹೋಗಬಹುದು ಎನ್ನುವ ಕಾರಣಕ್ಕೆ ಹಾಗೆ ಹೇಳಿದರೇ?


ಆದರೆ, ಈ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿಯ ನಾಯಕರು ಹೆಡ್ಡರಂತೆ ಮುಂದೆ ಬಂದಿದ್ದೇನೂ ಸುಳ್ಳಲ್ಲ.(ಮುಂದೆ ಬಂದರೋ, ಮುಂದೆ ಹೋಗಿ ಎಂದು ಸೂಚನೆ ನೀಡಲಾಯಿತೋ?) , ಆಗುತ್ತಿದ್ದ ರಗಳೆ ಸಾಲದು ಎಂಬಂತೆ ಆ ಕುರುಕ್ಷೇತ್ರದ ಮುನಿರತ್ನ ನಿರ್ಮಾಪಕರಾಗಿ, ಆರ್. ಅಶೋಕ್-ಸಿ.ಟಿ ರವಿ ಅರ್ಪಿಸುವ, ಅಶ್ವತ್ ನಾರಾಯಣ್ ಚಿತ್ರಕಥೆ ಅಂತೆಲ್ಲಾ ಚೀಪ್ ಕ್ವಾಲಿಟಿಯ ಪೋಸ್ಟರ್ ಅನ್ನು ಬಿಟ್ಟು ವಿಷಯದ ಗಂಭೀರತೆಯನ್ನು ಎಷ್ಟು ಹಾಳು ಮಾಡಲು ಸಾಧ್ಯವಿತ್ತೋ ಅದೆಲ್ಲವನ್ನೂ ಮಾಡಿದರು ಪುಣ್ಯಾತ್ಮರು. ಆ ಸಂದರ್ಭ ಪೂಜ್ಯ ನಿರ್ಮಲಾನಂದ ಶ್ರೀಗಳು ಬಂದು ಈ ಅಸಹ್ಯವನ್ನು ನಿಲ್ಲಿಸದೇ ಇದ್ದಿದ್ದರೇ, ಈ ಪ್ರಹಸನದ ಹಿಂದೆ ಇದ್ದ ಬುದ್ಧಿವಂತ ಸ್ಟಾಟರ್ಜಿಸ್ಟುಗಳು ಇನ್ನೇನು ಮಾಡುವವರಿದ್ದರೋ?
ಈ ನಾಟಕವನ್ನು ಬರೆದ ಕಾರ್ಯಪ್ಪನವರಿಗೆ, ಈ ಹೋರಾಟಗಾರರ ಬಗ್ಗೆ ಬೇಸಿಕ್ ಇತಿಹಾಸವೂ ಗೊತ್ತಿಲ್ಲ ಎನ್ನುವುದನ್ನು ಖುದ್ದು ಅವರೇ ಮಾಧ್ಯಮಗಳ ಮುಂದೆ ತೋರಿಸಿಕೊಂಡರು. ಖಾಸಗಿ ವಾಹಿನಿಯ ಪ್ರಖ್ಯಾತ ಸಂವಾದ ಕಾರ್ಯಕ್ರಮವೊಂದರಲ್ಲಿ ಕುಳಿತ ಅಡ್ಡಂಡ ಕಾರ್ಯಪ್ಪನವರಿಗೆ, ಪ್ರೇಕ್ಷಕರ
ಗ್ಯಾಲರಿಯಲ್ಲಿದ್ದವರೊಬ್ಬರು ಕೇಳಿದರು, ಇತಿಹಾಸದಲ್ಲಿ ಎಲ್ಲಿ “ಉರಿಗೌಡ, ನಂಜೇಗೌಡರ ಬಗ್ಗೆ ದಾಖಲಾಗಿದೆ?”. ಕಾರ್ಯಪ್ಪನವರ ಉತ್ತರ “ಮಲಬಾರ್ ಮ್ಯಾನುವಲ್” ನೋಡಿ ಎಂದಾಗಿತ್ತು. ಅಸಲಿಗೆ ಮಲಬಾರ್ ಮ್ಯಾನುವಲ್ ಅಲ್ಲಿರುವುದು ಏನೆಂದರೆ, ಮಲಬಾರಿನ ಜನರ ಆಚಾರ, ವಿಚಾರ, ಉಡುಗೆ, ತೊಡುಗೆ, ಜೀವನ ಶೈಲಿ ಇತ್ಯಾದಿ. ಇವರಿಬ್ಬರ ಉಲ್ಲೇಖ ಅಲ್ಯಾಕೆ ಬರುತ್ತದೆ? ಈ ಕಾಲದಲ್ಲೂ ಜನರು ದಡ್ಡರು, ನಾವು ಮಾತ್ರ ಬುದ್ಧಿವಂತರು ಅಂತ ಹೊರಡುವವರಿಗೆ ಏನು ಹೇಳಬೇಕು?
ಪುಸ್ತಕಗಳು, ನಾಟಕದ ಟಿಕೆಟ್ ಗಳು ಭರ್ಜರಿಯಾಗಿ ಮಾರಾಟವಾಗಿ ಸಂಬಂಧಪಟ್ಟವರಿಗೆ ಭರ್ಜರಿ ಆರ್ಥಿಕ ಲಾಭವೇ ಆಗಿರಬಹುದು. ಆದರೆ, ನಷ್ಟವಾಗಿದ್ದು ಯಾರಿಗೆ ಗೊತ್ತೇ? ಟಿಪ್ಪುವಿನ ವಿರುದ್ಧ ನಿಜಕ್ಕೂ ತೊಡೆ ತಟ್ಟಿದ್ದ ಆ ಜೀವಗಳಿಗೆ. ಗಂಭೀರ ಅಕಾಡೆಮಿಕ್ ಚರ್ಚೆಯಾಗಬೇಕಾಗಿದ್ದ ಸ್ಥಳೀಯರ ಹೋರಾಟ ಅಧ್ಯಾಯವೊಂದು ಟ್ರೋಲ್ ಗೆ ಒಳಗಾಯಿತು. ಬರೆದವರಿಗೆ, ಬರೆಸಿದವರಿಗೆ ಲಾಭವಾಯಿತು, ವಿಷಯ ಸತ್ತು ಹೋಯಿತು.
ವಿಕ್ರಂ ಸಂಪತ್ ಅವರು ಈ ಕುರಿತು ಇತಿಹಾಸದಲ್ಲಿ ಎಲ್ಲೂ ದಾಖಲಾಗಿಲ್ಲ ಎಂದು ಮೈಸೂರಿನ ಇತಿಹಾಸದಲ್ಲಿ ನನಗೆ ಗೊತ್ತಿಲ್ಲದ್ದು ಏನೂ ಇಲ್ಲವೇ ಇಲ್ಲ ಎನ್ನುವ ಅಧಿಕಾರವಾಣಿಯಲ್ಲಿ ಹೇಳಿದ್ದಾರೆ. ಕನಿಷ್ಠ ನನ್ನ ಓದಿಗೆ ಸಿಕ್ಕಂತೆ ಇಲ್ಲ ಅಂದಿದ್ದರು ನಮ್ರತೆ ಅನ್ನಿಸಿಕೊಂಡಿರೋದು.
ಬಹುಶಃ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಟಿಪ್ಪು ಅಂತ್ಯದ ಬಗ್ಗೆ ಬರೆದು ಕೈ ಸುಟ್ಟುಕೊಂಡ ಕಾರಣಕ್ಕೋ ಏನೋ, ಇದೇ ವಿಕ್ರಂ ಸಂಪತ್ ಅವರು ಟಿಪ್ಪುವಿನ ಅಂತ್ಯದ ಚಿತ್ರಣವನ್ನು ಬ್ರಿಟಿಷ್ ಇತಿಹಾಸಕಾರರು ಸೃಷ್ಟಿಸಿಕೊಟ್ಟಿರುವ ನರೇಟಿವ್ ಅನ್ನು ಬಿಟ್ಟು ಆಚೀಚೆ ಅಲುಗಾಡಿಲ್ಲ. ಎಷ್ಟರಮಟ್ಟಿಗೆ ಎಂದರೆ, ಟಿಪ್ಪು ಸತ್ತ ಎಂದು ಗೊತ್ತಾದ ತಕ್ಷಣ “ಇನ್ನು ಇಂಡಿಯಾ ನಮ್ಮದೇ” ಎಂದು ಹ್ಯಾರಿಸ್ ಉದ್ಘಾರ ತೆಗೆದ ಎಂದು ಮೊದಲ ಪುಸ್ತಕದಲ್ಲಿ ಬರೆದಿದ್ದಾರೆ. (ನನ್ನ ಓದಿಗೆ ಅವನು ಹಾಗೆ ಹೇಳಿದ ಬಗ್ಗೆ ಬ್ರಿಟಿಷ್ ದಾಖಲೆಗಳಲ್ಲಿ ಸಿಗಲಿಲ್ಲ. ವಿಕ್ರಂ ಅವರಿಗೆ ಎಲ್ಲಿ ಸಿಕ್ಕಿತೋ, ಗೊತ್ತಾದರೆ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು.) ಆದರೆ, ಇದೇ ಉದ್ಘಾರ ಹೊಸ ಪುಸ್ತಕದಲ್ಲಿ ಕಾಣಿಸಿಲ್ಲ. ಹೀಗ್ಯಾಕೆ?
ಇನ್ನು ಟಿಪ್ಪುವಿನ ಸೋಲಿಗೆ, ಸಾವಿಗೆ ಏಕೈಕ ಕಾರಣ ಎಂಬಂತೆ ಚಿತ್ರಿಸಲಾಗಿರುವ “ಮೀರ್ ಸಾದಿಖ್” ನನ್ನು ಮೊದಲ ಪುಸ್ತಕದಲ್ಲಿ “ಶೇಖರ್” ಎಂಬ ಟಿಪ್ಪು ಆಪ್ತ ಕೊಂದ ಎನ್ನುವ ವಿಕ್ರಂ , ಹೊಸ ಪುಸ್ತಕದಲ್ಲಿ ಮಾತ್ರ ಅನಾಮಿಕರಿಂದ “ಮೀರ್ ಸಾದಿಖ್” ಸತ್ತ ಎನ್ನುತ್ತಾರೆ.
ಹಾಗಿದ್ದರೇ, ವಿಕ್ರಂ ಚಿತ್ರಿಸಿರುವಂತೆಯೇ ಟಿಪ್ಪು ಹತನಾದನೇ? ಅಲ್ಲಿ ಬ್ರೀಟಿಷರು-ನಿಜಾಮರನ್ನು ಬಿಟ್ಟರೆ ಮೂರನೇ ಶಕ್ತಿಗಳು ಇರಲಿಲ್ಲವೇ? ಖಂಡಿತ ಇದ್ದರು ಅದಕ್ಕೆ ಬೇಕಾದ ಇತಿಹಾಸದ ದಾಖಲೆಗಳನ್ನು, ಅಂದಿನ ಕಾಲದ ಮರಾಠ-ನಿಜಾಮ-ಬ್ರಿಟೀಷ್ ಸರ್ಕಾರಗಳು ಮೈಸೂರಿನ ಒಡೆಯರ್ ವಂಶವನ್ನು ನಡೆಸಿಕೊಂಡ ರೀತಿಯ ಬಗ್ಗೆ, ‘ದಕ್ಷ-ಸಮರ್ಥ ಆಡಳಿತಗಾರ” ಎಂದು ಬಿಂಬಿಸಲಾಗಿರುವ ದಿವಾನ್ ಪೂರ್ಣಯ್ಯ ಆಂಡ್ ಟೀಮ್ ಮಾಡಿದ್ದೇನು ಇತ್ಯಾದಿ ಅಪ್ರಿಯ ಸತ್ಯಗಳನ್ನು ನನ್ನ ಪುಸ್ತಕ “ಮುಚ್ಚಿಟ್ಟ ಕರ್ನಾಟಕ ಚರಿತ್ರೆ’ಯಲ್ಲಿ ನಾನು ನೀಡಿದ್ದೇನೆ.
ಟಿಪ್ಪುವಿನ ಅಂತ್ಯದ ಕುರಿತ ಗಿಳಿಪಾಠದ ನಡುವೆಯೂ ಬ್ರಿಟಿಷರ ಇತಿಹಾಸದಲ್ಲೇ “Read between the lines” ಮಾಡಿದರೇ ಅನುಮಾನದ ಗೆರೆಗಳು ಖಂಡಿತ ಮೂಡುತ್ತವೆ. ಆದರೆ, ಈಗ ಸತ್ಯ ಯಾರಿಗೆ ಬೇಕಾಗಿದೆ? ತಮ್ಮ ತಮ್ಮ ಅಜೆಂಡಾಗಳು ಪೂರೈಸಿದರೆ ಸಾಕಷ್ಟೇ.
ವಿಕ್ರಂ ಅವರ ಹೊಸ ಪುಸ್ತಕಕ್ಕಾಗಿ ಇಂಗ್ಲೀಷ್-ಹಿಂದಿಯ ಪ್ರಖ್ಯಾತ ಚಾನೆಲುಗಳಲ್ಲೆಲ್ಲಾ ವೇದಿಕೆ ಸಿಕ್ಕಿದೆ. ಅವರ ಹಿಂದೆ ಅಂತಹ ಪ್ರಭಾವಳಿಯಿರುವುದು ಸಂತೋಷವೇ. ಯಾವ ಲೇಖಕನಿಗೂ ಹಾಗೆ ವೇದಿಕೆ ಸಿಗುವುದು ಒಳ್ಳೆಯದೇ. ಪುಸ್ತಕ ಬಿಡುಗಡೆಗೆ ಬಿಜೆಪಿಯ ಸರ್ಕಾರದ ಮಂತ್ರಿಗಳಾದ ಜೈ ಶಂಕರ್, ಸಂಸದ ತೇಜಸ್ವಿ ಸೂರ್ಯ ಎಲ್ಲಾ ಹೋಗಿದ್ದರು ಎಂದು ಮಾಧ್ಯಮಗಳಲ್ಲಿ ಓದಿದ್ದೆ. ಬಿಜೆಪಿಯವರ ಬಗ್ಗೆ ಹೀಗೆ ಬರೆಯಲಾಗಿದೆ ಎನ್ನುವುದು ಪಾಪ ಇವರುಗಳಿಗೆ ಗೊತ್ತಿತ್ತೋ ಇಲ್ಲವೋ?
“ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ ” ಎನ್ನುವ ಮಾತೊಂದಿದೆ ಎನ್ನುವುದನ್ನು ಲೇಖಕ ರೋಹಿತ್ ಅವರು “ಕಥನ-ಮಥನ” ಪುಸ್ತಕದ ಪೀಠಿಕೆಯಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಅನುಭವದ ಪ್ರಕಾರ, ಪ್ರಸಕ್ತ ಸನ್ನಿವೇಶಕ್ಕೆ ಇನ್ನಷ್ಟನ್ನು ಸೇರಿಸಿ ಹೀಗೆ ಸೇರಿಸಬಹುದು ಅನ್ನಿಸಿತು. – “ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ , ಬರೆದವರ ‘ನೇಮ್’ ಏನು , ‘surname’ ಏನು? ಯಾರನ್ನು ಕೇಳಿ ಬರೆದರು?” ಎನ್ನುವುದರ ಮೇಲೆಯೂ ಪುಸ್ತಕದ ಭವಿಷ್ಯವನ್ನು ನಿರ್ಧರಿಸಬಹುದು ಅನ್ನಿಸಿತು. (ಈ ಹೇಳಿಕೆ ಸಾಮಾನ್ಯ ಓದುಗರಿಗೆ ಅನ್ವಯಿಸವುದಿಲ್ಲ, ಅವರಿಗೆ ಏನು ಬರೆದಿದ್ದಾರೆ ಎನ್ನುವುದಷ್ಟೇ ಮುಖ್ಯವೆನಿಸುತ್ತದೆ. ಇದು ಕೇವಲ ಸಾಂಸ್ಥಿಕ ವ್ಯವಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.)
ಕಡೆಯಲ್ಲಿ, ರಾಜಕೀಯ ಪಕ್ಷಗಳಿರುವುದೇ ರಾಜಕೀಯ ಲಾಭ ಎತ್ತಲು ಬಿಡಿ. ಆದರೆ ಇತಿಹಾಸಕಾರರು ಎನ್ನಿಸಿಕೊಂಡವರು, ಇತಿಹಾಸವನ್ನು ತಿರುಚಲಾಗಿದೆ ಎಂದೆಲ್ಲಾ ಮಾತನಾಡುವವರು ಹೀಗೆ ಬರೆಯುವುದನ್ನು ಹೇಗೆ ಅರ್ಥೈಸಿಕೊಳ್ಳಬೇಕು?
ಯಾರಾದರೂ ಇತಿಹಾಸದ ವಿದ್ಯಾರ್ಥಿಗಳಿದ್ದರೆ, ಈ ಪುಸ್ತಕಗಳನ್ನಿಟ್ಟುಕೊಂಡೇ ಇತಿಹಾಸಕಾರರ ಬಗ್ಗೆ ಪಿಹೆಚ್ಡಿ ಪ್ರಬಂಧ ಬರೆಯಬಹುದು ಅನ್ನಿಸುತ್ತದೆ. ಟಿಪ್ಪು ಕಟ್ಟರ್ ಇಸ್ಲಾಮಿಸ್ಟ್ ಆಗಿದ್ದ ಮತ್ತು ತನ್ನ ನಂಬಿಕೆಯನ್ನು ಜಾರಿಗೊಳಿಸಲು ಏನೇನು ಮಾಡಬೇಕೋ ಅದನ್ನೇ ಮಾಡಿದ. ಕನಿಷ್ಠ, ಟಿಪ್ಪು ಹೀಗೆ, ಅವನನ್ನು ವಿರೋಧಿಸುವ-ಪರವಹಿಸುವವರಂತೆ ಲಾಭ-ನಷ್ಟದ ಆಧಾರದಲ್ಲಿ ತನ್ನ ಧಾರ್ಮಿಕ ನಿಲುವು ಬದಲಿಸುವ ದ್ವಂದ್ವ ನೀತಿಯವನೇನೂ ಆಗಿರಲಿಲ್ಲ.
ಈ ಸತ್ಯ ಹಲವರಿಗೆ ಅಪ್ರಿಯ ಅನ್ನಿಸಬಹುದು. ಅನ್ನಿಸಲಿ. ಕೆಲವೊಮ್ಮೆ ಅನ್ಯಾಯವನ್ನು ನೋಡಿಯೂ ಸುಮ್ಮನಿರಬೇಕಾದ ಸಂದರ್ಭವಿರುತ್ತದೆ. ಕೆಲವೊಮ್ಮೆ ಅನ್ಯಾಯ, ತಾರತಮ್ಯ, ಹಿಪೊಕ್ರೇಸಿಗಳ ಬಗ್ಗೆ ದನಿಯೆತ್ತಲೇಬೇಕಾಗುತ್ತದೆ. ಇದು ಅದೇ ಸಮಯ.
( 1.ವಿಕ್ರಂ ಅವರ ಮೇಲೆ ನನಗೇನೋ ವೈಯಕ್ತಿಕ ಸಮಸ್ಯೆಯಿದೆ ಅಂದುಕೊಳ್ಳುವವರು ಇದ್ದರೆ, ಅಂತವರಿಗಾಗಿ – ನನಗೆ ಅವರ ಪರಿಚಯವಿಲ್ಲ. 2015-16ರಲ್ಲಿ ದೆಹಲಿಯಲ್ಲಿ ನಡೆದ ನ್ಯಾಷನಲ್ ರೈಟರ್ಸ್ ಮೀಟ್ ಅಲ್ಲಿ, ಹೈ ಹಲೋ ಹೇಳಿದ್ದು ನೆನಪಷ್ಟೇ. So, ಈ ಬರಹ ಅವರ ಪುಸ್ತಕದ ವಿಷಯವನ್ನು ಆಧರಿಸಿ ಮಾತ್ರವೇ ಹೊರತು ವ್ಯಕ್ಯಿಯ ಬಗ್ಗೆಯಲ್ಲ.
2.ಈ ಲೇಖನ ಬೇಡ ತೆಗೆಯಿರಿ ಎಂದು ಕಾಲ್ ಬರಬಹುದಾದ್ದರಿಂದ, ಅಂತವರಿಗೆ ಹೇಳ ಬಯಸುವುದು ದಯವಿಟ್ಟು ಹಾಗೆ ಹೇಳಲು ಕಾಲ್ ಮಾಡಬೇಡಿ. ನಾನು ತೆಗೆಯುವುದಿಲ್ಲ. No ಎನ್ನಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ನನ್ನ ಜೊತೆ ಒಡನಾಡಿದವರಿಗೆ ಗೊತ್ತಿರುತ್ತದೆ.)
ಕನ್ನಡ ಸಾರಸ್ವತ ಲೋಕಕ್ಕೊಂದು ಹೊಸ ಓದು
ಶ್ರೀಪಾದ್ ಭಟ್
ಈಗ ಲೇಖಕರಾದ, ಬ್ಲಾಗರ್ ಆದ ಮಿತ್ರ ರಾಕೇಶ ಶೆಟ್ಟರು ಹೊಸ ಓದನ್ನು ಕೊಟ್ಟಿದ್ದಾರೆ. ಕೃತಿಯ ಹೆಸರು’ ಮುಚ್ಚಿಟ್ಟ ಕರ್ನಾಟಕದ ಚರಿತ್ರೆ’. ಯಾಕೆ ಇದು ಹೊಸ ಓದು ಅಂದರೆ – ಇದು ಇತಿಹಾಸದ ಹೊಸ ಓದು. ಇದುವರೆಗೆ ಶಾಲೆ ಕಲಿತ ನಾವು ಯಾರೂ ಕೇಳಿರದ ಇತಿಹಾಸದ ಸಂಗತಿಗಳು ಇರುವುದರಿಂದ.
ನಮ್ಮಲ್ಲಿನ ಅಂದರೆ ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ- ಇತಿಹಾಸದಲ್ಲಿ. ನಮ್ಮ ದೇಶಕ್ಕೆ ಆಧುನಿಕ ಇತಿಹಾಸ ಅಥವಾ ಚರಿತ್ರೆ ಕೊಟ್ಟವರು ಬ್ರಿಟಿಷರು. ಅದನ್ನು ಹೇಗೆ ನೋಡಬೇಕು, ಯಾವುದು ಇತಿಹಾಸ ಅನಿಸಿಕೊಳ್ಳುತ್ತದೆ. ಅದಕ್ಕೆ ಆಧಾರಗಳು ಯಾವುವು ಎಂಬುದನ್ನೂ ತಿಳಿಸಿದವರೂ ಅವರೇ. ಅದನ್ನೇ ನಾವು ಉರು ಹೊಡೆದು ಮುಂದುವರೆಸಿಕೊಂಡು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾದ ಅಥವಾ ಪ್ರತಿಯಾದ ಸಾಲುಗಳನ್ನು ನಾವು ಒಪ್ಪಲು ತಯಾರಿಲ್ಲ ಎಂಬಂತೆ ನಮ್ಮನ್ನು ನಮ್ಮ ಶಾಲಾ ವ್ಯವಸ್ಥೆ ಅಣಿಗೊಳಿಸಿ ಕೃತಾರ್ಥವಾಗಿದೆ.ಆದರೆ ಈಚೆಗೆ ಈ ದೃಷ್ಟಿಕೋನ ಬದಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕಾರಣದಿಂದ ಸಾಮಾಜಿಕ ಜಾಲ ತಾಣಗಳ ಪ್ರಾಚುರ್ಯದಿಂದ ಜನರ ವಿವಿಧ ಬಗೆಯ ಅಭಿಪ್ರಾಯಗಳಿಗೆ ವೇದಿಕೆಗಳು ಸಾರ್ವಜನಿಕವಾಗಿ ದೊರೆಯುತ್ತಿದೆ. ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಸಾರ್ವಜನಿಕ ವೇದಿಕೆಯ ಜೊತೆಗೆ ಅಲ್ಲಿ ಹೇಳಬೇಕಾದ ವಿಷಯಗಳಿಗೂ ನಿರ್ದಿಷ್ಟ ದಿಕ್ಕು ದೆಸೆ, ನಿಯಂತ್ರಣ ಇರುತ್ತಿತ್ತು. ಈ ನಿಯಂತ್ರಣವನ್ನು ಕೂಡ ಯಾರು ಹೇಗೆ ಎಂಬುದೂ ನಿರ್ಧಾರವಾಗಿರುತ್ತಿತ್ತು. ಅಭಿಪ್ರಾಯ ಸ್ವಾತಂತ್ರ್ಯ ಮುಕ್ತತೆಗಳು ಮಾತಲ್ಲಿ ಮಾತ್ರ ಇತ್ತು ಅಂದರೂ ತಪ್ಪಿಲ್ಲ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿಯಂತ್ರಿತ ಮಾಧ್ಯಮಗಳು ಮೂಲೆ ಸೇರಿವೆ. ಸಾಮಾಜಿಕ ಮಾಧ್ಯಮ ಮುಕ್ತತೆ ಕೊಟ್ಟಿದೆ. ಹೀಗಾಗಿ ಜನರ ಅಭಿಪ್ರಾಯಕ್ಕೆ ಒಂದಲ್ಲ ಒಂದು ವೇದಿಕೆ ಸಾರ್ವಜನಿಕವಾಗಿ ಲಭಿಸಿ ಮುಕ್ತ ಚರ್ಚೆ ಆಗುತ್ತದೆ. ಲೆಕ್ಕವಿಲ್ಲದಷ್ಟು ಜನ ತಮ್ಮ ಮಾತನ್ನು ಹೇಳಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿಂದೆ ಹತ್ತಿಕ್ಕಿದ್ದ ಮಾತು, ವಿಷಯಗಳೆಲ್ಲ ಎಲ್ಲ ಕ್ಷೇತ್ರಗಳಿಂದಲೂ ಹೊರಬರುತ್ತಿವೆ. ನಮ್ಮೆಲ್ಲರನ್ನೂ ಬೇಗ ಪ್ರಭಾವಿಸುವ ಹಾಗೂ ಕಾಡುವ ಇತಿಹಾಸ ಇಂಥ ವಿಷಯಗಳಲ್ಲಿ ಒಂದು. ಬೇರೆ ಬೇರೆ ಈ ಮೊದಲು ಚರಿತ್ರೆ ಅಥವಾ ಇತಿಹಾಸದ ಬಗ್ಗೆ ಅದರ ಪಂಡಿತರು ಅನಿಸಿಕೊಂಡವರು ಅದರಲ್ಲೂ ಎಲ್ಲವನ್ನೂ ತಮ್ಮ ನಿಲುವು, ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತಿದ್ದ ರೋಮಿಲಾಥಾಪರ್ ಅವರಂಥವರು ಮಾತ್ರ ಮಾತನಾಡಬಹುದಿತ್ತು. ಆದರೆ ಇಂದು ಇತಿಹಾಸದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಯಾರು ಬೇಕಾದರೂ ಮಾತನಾಡಬಹುದು. ಏಕೆಂದರೆ ಇಂದು ಯಾರು ಮಾತನಾಡುತ್ತಾರೆಂಬುದಕ್ಕಿಂತಲೂ ಏನು ಮಾತನಾಡುತ್ತಿದ್ದಾರೆಂಬುದು ಮುಖ್ಯವಾಗುತ್ತದೆ. ಆದ್ದರಿಂದಲೇ ಇತಿಹಾಸದಂಥ ವಿಷಯದ ಬಗ್ಗೆ ಇಂದು ಹೊಸ ತಲೆಮಾರಿನ ವಿಕ್ರಂ ಸಂಪತ್, ಅಭಿಜಿತ್ ಚಾವ್ಡಾರಂಥ ಹೊಸ ಯುವ ವಿದ್ವಾಂಸರು ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಮ್ಮ ಯಾವುದೇ ವಿಷಯದ ಬಗ್ಗೆ ಹತ್ತಾರು ಮೂಲಗಳಿಂದ ವಿಷಯ ಹೊರತೆಗೆದು ಚರ್ಚಿಸಬಹುದಾಗಿದೆ. ಇಲ್ಲಿ ರಾಕೇಶ್ ಶೆಟ್ಟರು ಕೂಡ ಇಂಥ ಯತ್ನವನ್ನು ಮಾಡಿದ್ದಾರೆ. ಅವರ ವೃತ್ತಿ ತಂತ್ರಜ್ಞಾನ, ಆಸಕ್ತಿ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿ. ತಮ್ಮ ಆಸಕ್ತಿಯನ್ನು ಈ ಕೃತಿಯಲ್ಲಿ ಸಾಧಿಸಿಕೊಳ್ಳಲು ಏನೆಲ್ಲ ಶ್ರಮಪಡಬೇಕಾಯಿತು ಎಂಬುದನ್ನು ಲೇಖಕರು ಇದರಲ್ಲಿ ದಾಖಲಿಸಿದ್ದಾರೆ. ತಾವು ಯಾವ ಕಾರಣಕ್ಕೆ ಈ ಕೆಲಸಕ್ಕೆ ಕೈ ಹಾಕಬೇಕಾಯಿತು ಎಂಬುದನ್ನೂ ಹೇಳಿದ್ದಾರೆ. ಅಷ್ಟೇ ನಮ್ರವಾಗಿ ಇದು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯೇ ವಿನಾ ಇದೇ ಸಂಪೂರ್ಣ ಸತ್ಯ ಎಂದಲ್ಲವೆಂದು ಹೇಳಿದ್ದಾರೆ.
ಹೌದು. ನಿಸರ್ಗದಲ್ಲಿ ಎಲ್ಲವೂ ಬದಲಾಗುವಂತೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ಇತಿಹಾಸದ ಬಗ್ಗೆ ಇಂದು ಆಗಿರುವುದೂ ಅದೇ.ನಮಗೆ ಪಾಶ್ಚಾತ್ಯರು ಹೇಳಿಕೊಟ್ಟ ಇತಿಹಾಸ ಕಾಲಿಟ್ಟ ಕಡೆಯಲ್ಲೆಲ್ಲ ಘರ್ಷಣೆ ಆಗುತ್ತದೆ, ಶಾಂತಿ ನೆಲೆಸುವುದು ಕಷ್ಟವಾಗುತ್ತದೆ. ದಾಖಲೆಗಳು ದೊರೆತಂತೆ ಇತಿಹಾಸ ಮಾತಾಡುತ್ತಲೇ ಹೋಗುತ್ತದೆ. ಅಲ್ಲಿ ಮೌನ ಇರುವುದಿಲ್ಲ. ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಪೂರ್ವದಲ್ಲಿ ನಮ್ಮ ಸಮಾಜದಲ್ಲಿ ಗತ ಇತ್ತು. ಅದು ಕಾಲಾತೀತವಾಗಿದ್ದು ಅದನ್ನು ನಾವು ಜೀವಿಸುತ್ತಿದ್ದೆವು. ಅದರಲ್ಲಿ ನಂಬಿಕೆ ಮತ್ತು ಶ್ರದ್ಧೆಗಳಿದ್ದವು, ಆಚರಣೆ, ಸಂಪ್ರದಾಯಗಳನ್ನು ಅದು ಬೆಳೆಸಿತ್ತು. ಆದರೆ ಪಾಶ್ಚಾತ್ಯ ಹಿಸ್ಟರಿಯ ಚಿಂತನೆ ಹಾಗೂ ದೃಷ್ಟಿಕೋನ ಬಂದಮೇಲೆ ಎಲ್ಲವನ್ನೂ ಪ್ರಶ್ನಿಸುವ, ಶ್ರದ್ಧೆಯನ್ನು ಅಲುಗಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತೊಡಗಿತು. ಇದರಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳು ಇಲ್ಲವಾದವು. ಪಾಶದಚಾತ್ಯ ಹಿಸ್ಟರಿಯ ದೃಷ್ಟಿ ನಮ್ಮಲ್ಲಿ ನುಸುಳುವವರೆಗೂ ರಾಮಾಯಣ ಮತ್ತು ಮಹಾಭಾರತಗಳಂಥ ಗ್ರಂಥಗಳ ಯಾವ ವಿವರಗೂ ವಿವಾದಕ್ಕೆ ಆಸ್ಪದ ಮಾಡಿರಲಿಲ್ಲ. ಆದರೆ ಇಂದು ಅವುಗಳ ಸಣ್ಣಪುಟ್ಟ ವಿಚಾರಗಳೂ ಗದ್ದಲಕ್ಕೆ ಕಾರಣವಾಗುತ್ತಿವೆ. ಅದು ರಾಮಸೇತು, ಮಹಾಭಾರತ ಯುದ್ಧ ನಡೆದಿದ್ದು ನಿಜವಾ ಇತ್ಯಾದಿ ಆಗಿರಬೇಕಿಲ್ಲ. ಗಾಂಧಾರ, ಥುರಾ ಇವೆಲ್ಲ ಇಂದು ಎಲ್ಲಿವೆ ಕುರುಕ್ಷೇತ್ರ ಯುದ್ಧದಲ್ಲಿ ಅಷ್ಟುಜನ ಹೊಡೆದಾಡುವಷ್ಟು ಜಾಗ ಎಲ್ಲಿತ್ತು ಇತ್ಯಾದಿ ಏನು ಬೇಕಾದರೂ ಆಗಬಹುದು. ಪಾಶ್ಚಾತ್ಯ ಹಿಸ್ಟರಿ ದೃಷ್ಟಿ ನಮ್ಮ ಶ್ರದ್ಧೆ ಮತ್ತು ನಂಬಿಕೆಗಳನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದೆ.ಅದು ಅಯೋಧ್ಯೆ ಆಗಲಿ, ಆಗ್ರಾ ಆಗಲಿ, ಯಾವುದೇ ಜಾಗವಾಗಲಿ, ವ್ಯಕ್ತಿ ಆಗಲಿ ಇವೆಲ್ಲಕ್ಕೂ ಹಿಸ್ಟರಿಯಲ್ಲಿ ಎರಡೂ ಕಡೆ ಮಾತನಾಡಬಹುದಾದ ದಾಖಲೆಗಳು ದೊರೆಯುತ್ತವೆ.

ನಮ್ಮ ರಾಜ್ಯದಲ್ಲಿ ಈಚೆಗೆ ಇಂಥ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಅಂದರೆ ಅದು ಟಿಪ್ಪು ಸುಲ್ತಾನ. ಒಂದಿಷ್ಟು ಜನ ಆ ಕಡೆ ನಿಂತರೆ ಮತ್ತಷ್ಟು ಜನ ಈ ಕಡೆ ನಿಂತು ಹೊಡೆದಾಡುತ್ತರೆ, ಇಬ್ಬರ ಬಳಿ ಇರುವ ಅಸ್ತ್ರ ಒಂದೇ. ಅದು ಹಿಸ್ಟರಿ ಕೇಳುವ ದಾಖಲೆ. ಸಾಲದ್ದಕ್ಕೆ ಆಧುನಿಕ ಹಿಸ್ಟರಿ ಒಂದು ನಿರ್ದಿಷ್ಟ ವಾದಕ್ಕೆ ಬದ್ಧವಾಗಿ ಹಿಸ್ಟರಿ ಅಂದರೆ ಇಷ್ಟೇ ಹೇಳಬೇಕು ಎಂಬುದನ್ನೂ ಕಲಿಸಿ ತಾನು ಪ್ರತಿಪಾದಿಸುವ ದಾಖಲೆ ಆಧಾರಿತ ಸತ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ರಾಕೇಶ್ ಶೆಟ್ಟರು ಈ ಕೃತಿಯಲ್ಲಿ ಆಧುನಿಕ ಹಿಸ್ಟರಿಯ ದೃಷ್ಟಿಯನ್ನೇ ಬಳಸಿಕೊಂಡು ಇದುವರೆಗೆ ಅದು ಏನೆಲ್ಲವನ್ನು ಹೇಳಿದೆ, ಅದರ ದೃಷ್ಟಿಯಲ್ಲಿ ಎಲ್ಲೆಲ್ಲಿ ಏನು ಇರಬೇಕಿತ್ತು ಎಂದು ಸಾಧಾರ ತೋರಿಸಿದ್ದಾರೆ. ನಿಜ. ಆಧುನಿಕ ಹಿಸ್ಟರಿ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕ ಪಕ್ಕಕ್ಕೆ ಸರಿಸುತ್ತದೆ. ಮೈಸೂರು ಅರಸು ಮನೆತನ ಹಾಗೂ ಟಿಪ್ಪೂ ಕುರಿತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಂತೆ ರಾಕೇಶ್ ಶೆಟ್ಟರು ಅದೇ ಹಿಸ್ಟರಿಯ ಆಯುಧಗಳನ್ನು ಬಳಸಿ ಪ್ರತಿ ದಾಖಲೆ ಕೊಡುತ್ತಾರೆ, ಚರ್ಚೆ ಅಥವಾ ವಿವಾದವನ್ನು ಜೀವಂತ ಇಡುತ್ತಾರೆ. ಅಲ್ಲಿಗೆ ಆಧುನಿಕ ಹಿಸ್ಟರಿಯ ಒಂದು ದೃಷ್ಟಿ ಸಾಧಿತವಾಯಿತು.
ಆಧುನಿಕ ಶಾಲೆ ಅಥವಾ ಉನ್ನತ ಶಿಕ್ಷಣ ಪಡೆದ ನಮಗೆ ಯಾರಿಗೂ ಮೈಸೂರು ರಾಜಮನೆತನ ಹಾಗೂ ಟಿಪ್ಪು ಕುರಿತು ಮಾತನಾಡುವಾಗ ಅಥವಾ ಓದುವಾಗ ಸೀತಾದಂಡು ಎಂಬ ಹೆಸರು ಕೇಳಿದ ಅಥವಾ ಓದಿದ ನೆನಪೇ ಇರುವುದಿಲ್ಲ. ಹೌದು, ಟಿಪ್ಪು ಬಗ್ಗೆ ನಮ್ಮ ನಡುವೆ ಪ್ರತಿವರ್ಷ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಇಲ್ಲಿ ಇದೇ ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸೀತಾದಂಡಿನ ಪ್ರಸ್ತಾಪ ಬರುತ್ತದೆ. ಟಿಪ್ಪು ಕುರಿತು ಜನಪದರಲ್ಲಿ ಸಾಕಷ್ಟು ಸಂಗತಿಗಳು ಇವೆಯಾದರೂ ಆಧುನಿಕ ಹಿಸ್ಟರಿ ಅವನ್ನೆಲ್ಲ ಮಾನ್ಯ ಮಾಡುವುದಿಲ್ಲ. ನಮ್ಮ ಮೌಖಿಕ ಪರಂಪರೆಯಲ್ಲಿ ಅದಕ್ಕೆ ಸಾಕಷ್ಟು ಬೆಲೆ ಇದೆ. ಏಕೆಂದರೆ ಅದು ನಮ್ಮ ಗತ. ಬ್ರಿಟಿಷ್ ಪೂರ್ವದ ನಮ್ಮ ಚರಿತ್ರೆ. ಇದನ್ನು ಆಧಾರವಾಗಿಟ್ಟುಕೊಂಡು ಜನಪದ ತಜ್ಞ ಹನೂರು ಕೃಷ್ಣ ಮೂರ್ತಿಯವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಅದು ಆಧುನಿಕ ಹಿಸ್ಟರಿ ಆಧರಿಸಿದ್ದಲ್ಲ. ಮೌಖಿಕ ಪರಂಪರೆ ಆಧರಿಸಿದ್ದು. ಜನಸಾಮಾನ್ಯರಿಗೆ ಇದು ಹಿಡಿಸುತ್ತದೆ, ಆಪ್ತವಾಗುತ್ತದೆ, ಹಿಸ್ಟರಿಗೆ ಅಲ್ಲ. ಈ ಕೃತಿಯಲ್ಲಿ ರಾಕೇಶರು ದಾಖಲಿಸುವ ಬಹುತೇಕ ಸಂಗತಿಗಳು ಹಾಗೂ ತಿರುಮಲರಾವ್ ಮತ್ತು ನಾರಾಯಣರಾವ್, ಉರಿಗೌಡ, ಹುಲಿಗೌಡರಂಥ ಹೆಸರುಗಳು ನಮಗೆ ತೀರಾ ಅಪರಿಚಿತವಾದವು. ಇದುವರೆಗೆ ಒಂದೇ ಒಂದು ರಸ್ತೆಗೂ ಅವರ ಹೆಸರು ಇಡದಂತೆ ಆಧುನಿಕ ಹಿಸ್ಟರಿ ನೋಡಿಕೊಂಡಿದೆ.
ಪ್ರಾಥಮಿಕ ಶಾಲಾ ಪಠ್ಯದಿಂದ ಹಿಡಿದು ಉನ್ನತ ಶಿಕ್ಷಣ ಪಠ್ಯದವರೆಗೆ ಯಾರದು ಯಾವುದನ್ನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿಗಳು ಲಾಬಿಗಳು ಪಾಶ್ಚಾತ್ಯ ಚಿಂತನೆಯ ಪ್ರಭಾವದಲ್ಲಿ ಮುಳುಗಿಹೋಗಿವೆ. ಯಾವುದೇ ವಿಷಯದ ಪಠ್ಯ ಸಿದ್ಧಾಂತ ಬೋಧೊಸುತ್ತದೆಯೇ ವಿನಾ ಸಾಹಿತ್ಯ ಪಠ್ಯ ಸಾಹಿತ್ಯವನ್ನಾಗಲಿ, ಇತಿಹಾಸದ ಪಠ್ಯ ಚರಿತ್ರೆಯನ್ನಾಗಲೀ ಮಕ್ಕಳಿಗೆ ಕಲಿಸುವ ಬದಲು ಒಂದು ನಿರ್ದಿಷ್ಟ ಚಿಂತನೆಗೆ ಸದಸ್ಯರನ್ನು ಸೃಷ್ಟಿಸಿಕೊಡುತ್ತದೆ. ಭಾಷೆಯ ಪಠ್ಯ ಭಾಷೆಯನ್ನು ಎಲ್ಲಿಂದ ಹೇಗೆ ಕಲಿಯಬೇಕು ಅನ್ನುವುದಕ್ಕಿಂತಲೂ ಭಾಷಿಕ ರಾಜಕಾರಣ ಹಾಗೂ ಅನ್ಯ ಭಾಷೆಗಳ ವಿರುದ್ಧ ಎತ್ತಿಕಟ್ಟುತ್ತದೆ. ಹಾಗಾಗಿ ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನನ್ನು ಕಲಿಸಬೇಕಿತ್ತೋ ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಲು ಕಲಿಸುತ್ತದೆ. ಹೊರತಾಗಿ ಯಾವುದಾದರೂ ವಿಷಯದ ಜ್ಞಾನ ಬೇಕು ಅನಿಸಿದರೆ ಸ್ವಂತ ಪರಿಶ್ರಮ ಅಗತ್ಯವಾಗುತ್ತದೆ. ಅಂಥ ಅಗತ್ಯವನ್ನು ಈ ಕೃತಿ ಪೂರೈಸಲು ಶ್ರಮಿಸುತ್ತದೆ.
ಹಾಗೆ ನೋಡಿದರೆ, ಮೈಸೂರನ್ನು ನೆಪವಾಗಿಟ್ಟುಕೊಂಡು ರಾಕೇಶರು ಮಾಡಿದ ಇತಿಹಾಸದ ಈ ಕೆಲಸ ನಮ್ಮ ದೇಶದ ಹಳ್ಳಿಯ ಇತಿಹಾಸದ ವಿಷಯದಲ್ಲೂ ನಡೆದು ಹೊಸದಾಗಿ ಗ್ರಾಮ ಚರಿತ್ರೆಗಳನ್ನು ರೂಪಿಸುವ ದಂಡು ಸಿದ್ಧವಾಗಬೇಕಿದೆ. ಆಗ ಮಾತ್ರ ಪಾಶ್ಚಾತ್ಯ ರೂಪಿತ ಇತಿಹಾಸದ ಬದಲಾಗಿ ನಮಗೆ ನಮ್ಮ ಗತದ ಚಿತ್ರಣ ಲಭಿಸಲು ಸಾಧ್ಯ. ಇಂಥ ಕೆಲಸ ಎಲ್ಲ ಕಡೆ ಶುರುವಾಗಲಿ.
ಇದು ನೇರ ಮಾರಾಟದಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಲಭ್ಯ ಅನ್ನುವುದು ಖುಷಿಯ ಸಂಗತಿ. ಬಹುತೇಕ ಪುಸ್ತಕಗಳಂತೆ ಇದನ್ನು ಸಾಧ್ಯವಾದಷ್ಟು ಶಕ್ತಿ ಬಳಸಿ ಆದಷ್ಟು ದೂರ ಎಸೆಯುವಂಥದ್ದಲ್ಲ, ಎತ್ತಿಟ್ಟುಕೊಂಡು ಮತ್ತೆ ಮತ್ತೆ ಗಮನಿಸಬೇಕಾದ್ದು. ಇದರಿಂದ ನಮ್ಮ ಸಾಂಪ್ರದಾಯಿಕ ಜ್ಞಾನಭಂಡಾರಕ್ಕೆ ಮಾನ್ಯತೆ ದೊರೆಯುತ್ತದೆ.
ಕೃತಿ ವಿವರ: ಮುಚ್ಚಿಟ್ಟ ಕರ್ನಾಟಕ ಚರಿತ್ರೆ,
ಲೇ: ರಾಕೇಶ್ ಶೆಟ್ಟಿ,
ಪ್ರಕಾಶಕರು – ನಿಲುಮೆ ಪ್ರಕಾಶನ, ಬೆಂಗಳೂರು,
ಬೆಲೆ – ರೂ 350.
ಪುಟಗಳು-372
#ಮುಚ್ಚಿಟ್ಟಕರ್ನಾಟಕಚರಿತ್ರೆ #ರಾಕೇಶ್ ಶೆಟ್ಟಿ
– ಪುಸ್ತಕ, ಈ ಅಂಗಡಿಗಳಲ್ಲಿ ಲಭ್ಯವಿದೆ. (ದೂರದ ಊರಿನವರು ಪೋಸ್ಟ್ ಮೂಲಕ ತರಿಸಬಹುದು. ವಿವರ ಕೆಳಗಿನ ಚಿತ್ರದಲ್ಲಿದೆ)
ಬೆಂಗಳೂರು :
ರಾಷ್ಟ್ರೋತ್ಥಾನ
ನವಕರ್ನಾಟಕ
ಅಯೋಧ್ಯಾ
ದಾವಣಗೆರೆ :
ಜ್ಞಾನ ವಿಕಾಸ ಸಾಹಿತ್ಯ

ಟಿಪ್ಪುವಿನ ಮುಚ್ಚಿಟ್ಟ ಅಸಲಿ ಕಥೆಯನ್ನು ಬಿಚ್ಚಿಟ್ಟ ನಿಲುಮೆ ಪ್ರಕಾಶನದ ಹೊಸ ಪುಸ್ತಕ “ಮುಚ್ಚಿಟ್ಟಕರ್ನಾಟಕಚರಿತ್ರೆ”
– ಪುರುಷೋತ್ತಮ ಸಾಲಿಯಾನ್
ಅಸಲಿ ಚರಿತ್ರೆಯನ್ನು ಚಾಲ್ತಿಗೆ ತರುವ ಭಾಗವಾಗಿ ಹಲವಾರು ಪುಸ್ತಕಗಳ ಅಧ್ಯಯನದ ಜೊತೆಗೆ, ಕ್ಷೇತ್ರ ಕಾರ್ಯವನ್ನೂ ಕೈಗೊಂಡು ಬರೆದಿರುವ ಈ ಪುಸ್ತಕದಲ್ಲಿ ಮನಸ್ಸಿಗೆ ಮುಟ್ಟುವಂತೆ ಅಕ್ಷರಗಳು ಅಚ್ಚೊತ್ತಿದೆ.
ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ನಾಣ್ಣುಡಿ ಈ ಪುಸ್ತಕದಲ್ಲಿ ಮತ್ತೆ ರುಜುವಾತಗಿದೆ. ಒಂದು ಕಡೆ ಟಿಪ್ಪು ಹೈದರಾಲಿ ಜತೆಗೆ ಸೇರ್ಕೊಂಡ ಪೂರ್ಣಯ್ಯ ಇವರೆಲ್ಲರೂ ಸೇರಿ ಮೈಸೂರು ಸಂಸ್ಥಾನ ಮುಗಿಸಬೇಕೆಂಬ ಆಸೆಗೆ ಬಿದ್ದಾಗಲೇ ನೋಡಿ ರಾಣಿಯಾಗಿದ್ದವಳು ಆ ಮೂವರ ಪಾಲಿಗೆ ಮಾರಿಯಾಗಿ ಬಿಟ್ಟರು.
ಅದ್ಭುತವಾಗಿ ಅಕ್ಷರಗಳನ್ನು ಪೋಣಿಸಿ ಹೊರಬಂದಿರುವ ಕರ್ನಾಟಕದ ಮುಚ್ಚಿಟ್ಟ ಚರಿತ್ರೆ ಸದ್ಯ ಎರಡನೇ ಮುದ್ರಣಕ್ಕೆ ಅಣಿಯಾಗಿದೆ.
ನಮ್ಮದು ಶಕ್ತಿ ಆರಾಧಕರ ದೇಶ. ಮಹಾರಾಣಿಯವರ ಮೂಲಕ ಆ ಶಕ್ತಿ ಇಡೀ ಮೈಸೂರು ರಾಜ್ಯವನ್ನು ಉಳಿಸಿದ ಅಸಲಿ ಕಥೆಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಅದರ ಜತೆಗೆ ಅರಮನೆಯ ದಿವಾನರಾಗಿದ್ದ ಪೂರ್ಣಯ್ಯ ಮಾಡಿದ್ದ ಕುತಂತ್ರ ಹಾಗೂ ಮೋಸದಾಟವನ್ನು ಕೂಡ ಉಲ್ಲೇಖಿಸಲಾಗಿದೆ.
ಒಬ್ಬ ಒಡೆಯ(ಅರಸ)ನಾಗಬೇಕಾದ ವ್ಯಕ್ತಿ, ಶ್ರೀರಂಗಪಟ್ಟಣ ರಂಗನಾಥಸ್ವಾಮಿ ದೇಗುಲದ ಬದಿಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಗುಟ್ಟಾಗಿ ಹುಟ್ಟಿದ !
ಯಾಕೇ ಹುಟ್ಟಿದ? ಗುಟ್ಟಾಗಿ ಕೃಷ್ಣ ದೇವಾಲಯದಲ್ಲಿ ಜನಿಸಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಬರೆದಿದ್ದಾರೆ.
ಬಸಿರಾದ ಹೆಣ್ಣು ಮಗಳೊಬ್ಬಳು ತಾಯ್ತನ ಪಡೆಯಲು ಎಷ್ಟು ಕಷ್ಟ ಪಡುತ್ತಾಳೆ, ಮಗುವನ್ನು ಉಳಿಸಲು ಪಟ್ಟ ಹರಸಾಹ ಅಂದರೆ, ಮುಮ್ಮಡಿಯ ಜನನಕ್ಕಾಗಿ ಪಟ್ಟ ಕಷ್ಟ, ಟಿಪ್ಪು ಮಾಡಿದ ಅನ್ಯಾಯ ಕಣ್ಣಮುಂದೆ ಹಾಗೇಯೆ ಹಾದುಹೋಗಿದೆ “#ಮುಚ್ಚಿಟ್ಟಕರ್ನಾಟಕಚರಿತ್ರೆ” ಪುಸ್ತಕದಲ್ಲಿ.
ನಾವು ನೀವುಗಳು ಇವತ್ತು ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕೈ ಮುಗಿಯುವ ಚಾಮುಂಡಿ ವಿಗ್ರಹ ಏನಿದೆ ನೋಡಿ ಅದನ್ನ ಮತಾಂಧರಿಂದ ಉಳಿಸಲು ಪಟ್ಟ ಶ್ರಮಕ್ಕಿಂತಲೂ ಯುಕ್ತಿ ಪ್ರದರ್ಶಸಿದ ಬಗ್ಗೆಯೂ ಕೂಲಂಕಷವಾಗಿ ಅಧ್ಯಯನ ಮಾಡಿ ಪುಸ್ತಕದ ಲೇಖಕ #ರಾಕೇಶ್ ಬರೆದಿದ್ದಾರೆ.

ಒಂದು ವ್ಯಕ್ತಿಗೆ ಶಿಕ್ಷಣ ಸಿಕ್ಕರೆ ಆತ ಏನು ಬೇಕಾದರೂ ಮಾಡಬಲ್ಲ ರಾಜನಾದರೂ ಸರಿ ಕೂಲಿಯಾದರೂ ಸರಿ. ಆದರೆ, ದಿವಾನ ಪೂರ್ಣಯ್ಯ ಮುಮ್ಮಡಿಯವರಿಗೆ ಶಿಕ್ಷಣ ಕೊಡುವಲ್ಲಿ ಮಾಡಿದ ನಾಟಕ ಮತ್ತು ಅದರ ಹಿಂದಿನ ಅಸಲಿ ಕಥೆ ಇರುವುದು ಈ ಪುಸ್ತಕದಲ್ಲಿ ಮಾತ್ರ ಅನಿಸುತ್ತದೆ.
ಸ್ವಾರ್ಥದ ಈ ಪ್ರಪಂಚ ಜಾತಿಯ ಹಿಂದೆ ಓಡುತ್ತಿದೆ. ಅದರಂತೆಯೇ ಪೂರ್ಣಯ್ಯನು ಅದನ್ನೇ ಮಾಡಿದ, ದಿವಾನ ಹುದ್ದೆ ಆನುವಂಶಿಕವಾಗಿಯೇ ಉಳಿಯಬೇಕೆಂಬ ಆಸೆಯಿಂದ ಆಸೆ ಪಟ್ಟಿರಬಹುದೇ ಮತ್ತು ಆತನೂ 43 ಲಕ್ಷ ರೂಪಾಯಿಗಳ ಲೆಕ್ಕಾಚಾರದಲ್ಲಿ ಎಡವಿದ್ದಾನೇಯೇ ಎಂಬುದು ಕೂಡ ಇಲ್ಲಿ ಪ್ರಮುಖವಾಗುತ್ತೆ ಅದೂ ದಾಖಲೆ ಸಮೇತವಾಗಿ ಮುದ್ರಣವಾಗಿದೆ.
ಟಿಪ್ಪುವನ್ನು ವಧೆ ಮಾಡಲು ಸೀತಾ ದಂಡು ಹುಟ್ಟಿಕೊಂಡಿತೆ ಅಥವಾ ಈ ದಂಡಿನ ಹಿಂದೆ ರೋಚಕವಾದ ಕಥಾ ಸಂಕಲನ ಯಾವುದಿದೆ? ಸೀತಾ ದಂಡು ಎಂಬ ಹೆಸರು ಹುಟ್ಟಲು ಮೂಲ ಕಾರಣವಾದರೂ ಯಾವುದು? ದಂಡು ನಿರ್ವಹಿಸುತ್ತಿದ್ದ ಕೆಲಸವಾದರೂ ಏನು? ಇರ್ವರು ಗೌಡರ ಟೆಕ್ನಿಕ್ ಟಿಪ್ಪುವಿನ ವಧೆಗೆ ಕಾರಣವಾಗಿರಬಹುದೇ ಅಥವಾ ಬ್ರಿಟಿಷರೇ ಕೊಂದರೇ? ಅಲ್ಲದೆ ಈ ದಂಡಿಗೆ ತರಬೇತಿ ನೀಡಲು ಬಂದಿರುವ ಸಿಖ್ಖ್ ಕುಟುಂಬಗಳು ಅಥವಾ ಸೈನ್ಯಗಳು ಮುಂದೆ ಏನಾದವು? ಎಂಬ ಊಹಾಪೋಹಕ್ಕೆ ಈ ಪುಸ್ತಕದಲ್ಲಿ ತೆರೆ ಎಳೆಯಾಲಾಗಿದೆಂದರು ತಪ್ಪಾಗದು.
ಟಿಪ್ಪುವಿನ ಮನಸ್ಥಿತಿ ಬಗ್ಗೆ ಜೊಲ್ಲು ಸುರಿಸಿಕೊಂಡು ಪರವಾದ ಮಂಡಿಸುತ್ತಿರುವ ಬುದ್ದಿ ಜೀವಿಗಳ ಮುಖಕ್ಕೆ ಕರಿಮಸಿ ಬಳಿದಂತೆ ಶ್ರೀರಂಗಪಟ್ಟಣದ ಹನುಮಂತ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾದ ಕುರಿತು ಅತ್ಯಂತ ಸೂಕ್ಷ್ಮವಾಗಿ ಲೇಖಕ #ರಾಕೇಶ್ ಶೆಟ್ಟಿ ಅಕ್ಷರಗಳನ್ನು ಪೋಣಿಸಿ, ಈ ಪುಸ್ತಕದಲ್ಲಿ ಬರೆಯುವುದರಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಮುಂದಿನ ತಲಾ ತಲೆಮಾರುಗಳಿಗೂ ಇದೊಂದು ಮಸೀದಿಯೋ ಮಂದಿರವೋ ಎಂಬುದುದರ ಅನುಮಾನಗಳಿಗೆ ಎಡೆಕೊಡದಷ್ಟು ಪ್ರಿಂಟ್ ಆಗಿಬಿಟ್ಟಿದೆ ಪುಸ್ತಕ ” #ಮುಚ್ಚಿಟ್ಟ #ಕರ್ನಾಟಕಚರಿತ್ರೆ “.
ಟಿಪ್ಪು ಎಂಬ ವ್ಯಕ್ತಿ ಕನ್ನಡವನ್ನು ಎಷ್ಟರಮಟ್ಟಿಗೆ ನೆಲಕಚ್ಚಿಸಲು ಪ್ರಯತ್ನ ಪಟ್ಟ ಎಂಬುದನ್ನು ಸುಲ್ತಾನನ ಬೆನ್ನಿಗೆ ನಿಂತು ಬೆಂಬಲಿಸಿ ಕನ್ನಡ ಹೋರಾಟಗಾರರು, ಸ್ಸಾರಿ ಸೋ ಕಾಲ್ಡ್ ಹೋರಾಟಗಾರರು ಓದಬೇಕು. ಎಟ್ಲೀಸ್ಟ್ ಕನ್ನಡಾಂಬೆಯ ಮುಂದಿನ ಮಕ್ಕಳಾದರೂ ಇದನ್ನು ತಿಳಿದುಕೊಂಡರೆ ಉತ್ತಮ.ಆತನ ಖುದಾದಾದ್ ಸರ್ಕಾರ್ ಕನ್ನಡದ ಜಾಗದಲ್ಲಿ ಪರ್ಷಿಯನ್ ಭಾಷೆ ಜಿರಳೆ ಮೀಸೆ ಹೊಕ್ಕಂತೆ ಹೊಕ್ಕಿಲ್ಲ ಬದಲಾಗಿ ಲಾಗಮಿಲ್ಲದ ಕುದುರೆ ಓಡಿದಂತೆ ಕನ್ನಡದ “ಬಹುಳ ಪುಷ್ಯ ಕಾಲಯುಕ್ತಿ ” ರಜಬ್ ” ಆಗಿ ಬದಲಾಗಿದ್ದು ವಿಪರ್ಯಾಸ, ಅಷ್ಟು ಮಾಡಿದ ಟಿಪ್ಪುವನ್ನು ಮತ್ತೆ ಮತ್ತೆ ಹೊಗಲಿ ಕರ್ನಾಟಕದಲ್ಲಿ ಕಿಂಗ್ ಮಾಡಲು ಹೊರಟಿರುವ ಹೋರಾಟಗಾರರಿಗೂ ಲೇಖಕ ತನ್ನ ತೀಕ್ಷ್ಣವಾದ ನುಡಿಗಳಿಂದ ಅಚ್ಚು ಒತ್ತಿದ್ದು ಮಾತ್ರವಲ್ಲದೇ, ನಮ್ಮ ನಿಮ್ಮ ಪ್ರಾಂತ್ಯದ ಭಾಗವೂ ಯಾವ ರೀತಿ ಮರುನಾಮಕರಣ ಮಾಡಿದ್ದ ಅಲ್ಲದೆ ಇಸ್ಲಾಮಿನ ಅಮಲನ್ನು ಯಾವ ಯಾವ ಜಾಗದಲ್ಲಿ ತುರುಕಿಸಲು ಪ್ರಯತ್ನ ಪಟ್ಟ ಎಂಬುದರ ಬಗ್ಗೆ ಪುಟಪುಟಗಳಲ್ಲಿ ಸ್ಪುಟವಾಗಿ ಅಕ್ಷರಗಳನ್ನು ಸ್ಪೋಟಿಸಿದ್ದಾರೆ ಶೆಟ್ರು..!!
ಮೈಸೂರಿಗೆ ತೆರಳುವ ಪ್ರತಿಯೊಂದು ಪ್ರವಾಸಿಗನು ಕೂಡ ಈ ವಿಚಾರವನ್ನೊಮ್ಮೆ ತಿಳ್ಕೋಬೇಕು, ನಾವೂ ನೀವೂ ಯಾರೇ ಪ್ರವಾಸಿಗರು ಬಂದರು ನಮ್ಮ ವಾಹನವನ್ನು ಪಾರ್ಕ್ ಮಾಡುವ ಜಾಗವಿದೆ. ಅಲ್ಲಿಯೇ ಪಕ್ಕದಲ್ಲೊಂದು ಮೇಲ್ಚಾವಣಿಯಿಲ್ಲದ ಸಣ್ಣ ಗುಡಿಯಿದೆ ಆ ಗುಡಿಯ ಮಹಾತ್ಮೆ, ಅಲ್ಲಿನ ಶಕ್ತಿ, ಕಾರಣಿಕ ಪೂಜೆ, ಪುರಸ್ಕಾರ ಆ ಗುಡಿಗೂ ಮೈಸೂರು ಸೀಮೆಗೂ ವಿಶೇಷವಾಗಿ ಅರಮನೆಗೂ ಇರುವ ಸಂಬಂಧ ಮತ್ತು ಅಲ್ಲಿ ಇಂದು ನಡೆಯುತ್ತಿರುವ ಪೂಜೆಗಾಗಿ ನೀಡಿರುವ ತಾಮ್ರದ ಪತ್ರದ ದಾಖಲೆ ಸಮೇತವಾಗಿ ನೈಜಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಲೇಖಕ ರಾಕೇಶ್ ಶೆಟ್ಟಿ ಸಂಶೋಧನೆ ನಡೆಸಿ “#ಮುಚ್ಚಿಟ್ಟಕರ್ನಾಟಕಚರಿತ್ರೆಯಲ್ಲಿ” ಬರೆದಿರುವುದು ನನಗಂತೂ ಅಚ್ಚರಿ ತಂದುಬಿಟ್ಟಿದೆ .
ಹಾಗಾಗಿ ಓದಲು ಕುಳಿತರೆ ಬೆರಳುಗಳು ಪುಟಗಳನ್ನು ತನ್ನಿಂದ ತಾನೇ ಮೆದುಳಿನ ಆಜ್ಞೆಯನ್ನು ಆಲಿಸಿಕೊಂಡು ತಿರುಗಿಸಿಕೊಂಡು ಹೋಗುತ್ತಿತ್ತು.
ಹೀಗೆ ಒಂದು ಗುಡಿಯಲ್ಲ ಪ್ರವಾಸಕ್ಕೆಂದು ಹೋಗಿ ಅರಮನೆ ಮುಂದೆ ಸೆಲ್ಫಿಹೊಡೆದು ಕೊಂಡು ಸಾಮಾಜಿಕ ಜಾಲಾತಾಣದಲ್ಲಿ “I am in Mysore palace” ಎಂದು ಬರೆದುಕೊಳ್ಳುವ ನಾವಿಂದು ಒಂದು ವಿಚಾರ ಅರ್ಥಮಾಡಿಕೊಂಡು ಸಾಗಬೇಕಿದೆ ಅರಮನೆಯ ಸುತ್ತಮುತ್ತಲಿನ ಪ್ರತಿಯೊಂದು ಗುಡಿಗೋಪುರಕ್ಕೂ ಇತಿಹಾಸವಿದೆ. ಮತಾಂಧ ಟಿಪ್ಪುವಿನ ಕ್ರೂರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದು ತಿಳಿಯಬೇಕೆಂದರೆ ಈ ಪುಸ್ತಕದ ಓದು ಅತ್ಯಂತ ಅನಿವಾರ್ಯವಾಗಿದೆ.
ಸುಮಾರು ಮೂನ್ನೂರ ಎಪ್ಪತ್ತು ಪುಟಗಳ ಪುಸ್ತಕ ನನಗಂತೂ ಎರಡು ದಿನಗಳಲ್ಲಿ ಓದಿ ಮುಗಿಸಿಯಾಗಿದೆ. ಕಾರಣ ಒಬ್ಬ ಓದುಗನಾದವನಿಗೆ ಪುಸ್ತಕ ಓದಿಸಿಕೊಂಡು ಹೋಗಬೇಕು ಆವಾಗಷ್ಟೆ ಮಜಾ ಬರುತ್ತೆ. ಪುಟ ತಿರುವಿ ಹಾಕಿದಷ್ಟು ಕುತೂಹಲ ಮೂಡಿಸುತ್ತಿದೆ ,ಅಚ್ಚೊತ್ತಿದ ಚಿತ್ರಗಳು ನೈಜ ಚಿತ್ರಣವನ್ನು ಕಣ್ಣಮುಂದೆ ಹಾಗೇಯೆ ಹಾದು ಹೋಗುವಂತೆ ಮಾಡಿದೆ. ನನಗಂತೂ ಬಡತನದ ಕ್ರೂರತೆ ಮತಾಂಧನ ಕ್ರೌರ್ಯದ ನಡುವೆಯೂ ಹುಟ್ಟಿ ಬೆಳೆದ ಸಣ್ಣ ಮಗುವಿನ (ಮುಮ್ಮಡಿ)ಯ ಚಿತ್ರ ನೋಡಿ ಕಥೆ ಓದಿ ಕಣ್ಣಂಚಲಿ ಹನಿಬಿಂದುವೊಂದು ಪುಟದೊಳಗಿನ ಭೂಗರ್ಭವನ್ನು ಸೇರಿಬಿಟ್ಪಿತು. ರಾಣಿಯಾದವಳು ಅವತ್ತು ಅಂತಹ ನಿರ್ಧಾರ ಕೈಗೊಳ್ಳದೆ ಇದ್ದಿದ್ದರೆ ಇವತ್ತು ಮೈಸೂರೆಂಬ ಅರಮನೆ ವಂಶಸ್ಥರು ಇದ್ದರು ಎಂಬುದು ಶಿಲಾಶಾಸನದಲ್ಲಿ ಓದ ಬೇಕಿತ್ತೋ ಏನೋ….?? ಅಥವಾ ಶಾಲೆಯಲ್ಲಿ ಹೇಳಿದ ಹಾಗೆ ಟಿಪ್ಪುವೇ ಪುಣ್ಯಾತ್ಮ ಅಂತ ಒಪ್ಕೊ ಬೇಕಿತ್ತೋ…ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಅಂದು ಹರಸಾಹಸ ಪಡದಿದ್ದರೆ ಏನಾಗುತ್ತಿತ್ತೋ ಎಂದು ನೆನೆದು ಆಕೆಯ ಪಾದಕಮಲಗಳಿಗೆ ಶಿರ ಭಾಗಬೇಕೆಂದು ಅನ್ನಿಸಿಬಿಡುವಷ್ಟು “#ಮುಚ್ಚಿಟ್ಟಕರ್ನಾಟಕಚರಿತ್ರೆ ” ಹೊರಬಂದಿದೆ.
ಇತಿಹಾಸ-ಶಕ್ತಿ ಮುಚ್ಚಿಡಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ ಅದೆಷ್ಟೋ ಶಕ್ತಿ-ಇತಿಹಾಸ ಕಾಲಗಳು ಕಳೆದುಹೋದಂತೆ ಮತ್ತೆ ಮತ್ತೆ ಹೊರಬಿದ್ದಿದೆ ಅದಕ್ಕಾಗಿಯೇ ಆ ಚಾಮುಂಡಿ ಬೆಟ್ಟದ ಮೇಲೆ ಕುಳಿತು ನಿಲುಮೆ ರಾಕೇಶ್ ಶೆಟ್ಟಿಯಂತ ಲೇಖಕನನ್ನು ಹುಟ್ಟಿಸಿದ್ದಾರೆ ಅನಿಸುತ್ತಿದೆ. ಕಾರಣ ಇಷ್ಟೇ ಬರೆಯುವುದು ಸುಲಭ ಅನ್ನಿಸಬಹುದು ಆದರೆ ಸಂಶೋಧನೆ ನಡೆಸಿ ದಾಖಲೇ I mean ಸಾಕ್ಷಿ ಕೇಳುವ ಪುಣ್ಯಾತ್ಮರ ಮುಂದೆ ದಾಖಲೆ ಸಮೇತವಾಗಿ ಬರೆದು ಮನಕೆ ಮುದ ನೀಡುವಷ್ಟು ಅಕ್ಷರಗಳನ್ನು ಪೋಣಿಸುವುದಿದ್ಯಲ್ಲ, ಅದ್ರಲ್ಲೂ ಎಲ್ಲಾ ಕಡೆ ಬಚ್ಚಿಟ್ಟು -ಕತ್ತರಿಸಿಟ್ಟ ಇತಿಹಾಸವನ್ನು ಪುನರುತ್ಥಾನಗೊಳಿಸುವುದು ಸುಲಭದ ಮಾತಲ್ಲ.!
ಕಡೆಯಾದಾಗಿ ಒಂದು ಮಾತು “#ಮುಚ್ಚಿಟ್ಟಕರ್ನಾಟಕಚರಿತ್ರೆ ” ಹೊಸ ಇತಿಹಾಸ ಬರೆಯುವಲ್ಲಿ ಮುನ್ನುಡಿಯಾಗಬೇಕು,ಮೈಸೂರಿಗೆ ಹೋಗಿಬಂದವರು ಹೋಗಬೇಕಾದವರು ಇದನ್ನು ಓದಬೇಕು. ಟಿಪ್ಪುವನ್ನು ಅಪ್ಪಾ ಎಂದು ಕೊಂಡಾಡುವ ಎಡಬಿಡಂಗಿಗಳ ಮುಂದೆ ಪುಸ್ತಕ ತೆರೆದಿಡಬೇಕು. ಕನ್ನಡವನ್ನು ನಿಜವಾಗಿಯೂ ಪ್ರೀತಿಸುವ ಗೌರವಿಸುವ ಕನ್ನಡಿಗರಿಗೆ ನಿಜವಾದ ಅಸ್ಮಿತೆ ಗೊತ್ತಾಗಬೇಕೆಂದರೆ ಈ ಪುಸ್ತಕ ನಿಮ್ಮ ಮನೆಯೊಳಗೆ ಪ್ರವೇಶ ಮಾಡಬೇಕು, ನಾಟಕ- ಹೈಡ್ರಾಮ- ರಾಜಕಾರಣ ನಡೆಸಿ ಏನೇನೋ ಕಥೆ ಹೇಳಿ ದುಡ್ಡು ಕೊಳ್ಳೆಹೊಡೆಯುವವ ಇದನ್ನೊಮ್ಮೆ ಓದಿ ಬೆಚ್ಚಗೆ ನಿದ್ರಿಸಲು ಸಾಧ್ಯವೇ ಎಂದು ತಿಳಿಯಬೇಕು. because ಇದು ಅಸಲಿ ಕಥೆಯನ್ನು ಬಿಚ್ಚಿಟ್ಟಿದೆ,ನೈಜತೆ ಜೀವಂತವಾಗಿದೆ. ದಾಖಲೆ ಸಮೇತವಾದ ಪ್ರತಿಗಳು ಮುದ್ರಿತವಾಗಿದೆ. ಮರೂನ್ ಬಣ್ಣದ ಮುಖ ಪುಟದಲ್ಲಿ ಮುದ್ರಿತವಾದ ಬಂಗಾರ ಬಣ್ಣದ ಶೀರ್ಷಿಕೆ ,ಮುದ್ದಾದ ಮಗು,ಮತಾಂಧ ಟಿಪ್ಪು, ವೀರ ನಾರಿ ರಾಣಿಯ ಚಿತ್ರಗಳು ಹಾಗೇಯೇ ಮತ್ತೊಮ್ಮೆ ಕಣ್ಣಮುಂದೆ ಹಾದುಹೋಯಿತು.
ಕಣ್ಣು ಮನಸ್ಸು ತೇವಗೊಂಡಿತು.
“#ಮುಚ್ಚಿಟ್ಟಕರ್ನಾಟಕಚರಿತ್ರೆ” ಪುಸ್ತಕ ನನ್ನ ಮನಗೆದ್ದಿತು.
“ಪುಸ್ತಕ ಓದಿಯಾಗಿದೆ -ವಿಮರ್ಶೆ ಬರೆದಾಗಿದೆ ಹಾಗಾಗಿ ಮುಂದಿನ ಪಯಣ ಶ್ರೀರಂಗಪಟ್ಟಣಕ್ಕೆ ಮುಮ್ಮಡಿ ಹುಟ್ಟಿದ ಕೃಷ್ಣನ ದೇಗುಲ ನೋಡಲಿಕ್ಕೆ ” ದರುಶನ ತೋರಯ್ಯ ಕೃಷ್ಣಾ…. “
ನಮಸ್ಕಾರ





