ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ – ಪ್ರಗತಿಪರರು
– ಡಾ.ಭಾಸ್ಕರ್ ಮಯ್ಯ
ಆಧುನಿಕ ತತ್ವಶಾಸ್ತ್ರದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ. ವೇದಾಂತ ದರ್ಶನಕ್ಕೆ ನೂರಾರು ವ್ಯಾಖ್ಯಾನಗಳಿವೆ. ಆದರೆ ಅವುಗಳಲ್ಲಿ ಪ್ರಮುಖ ಸ್ಥಾನವಿರುವುದು `ಶಾಂಕರ ವೇದಾಂತ’ಕ್ಕೆ. ಆದರೆ, ಶಂಕರರು ವೇದಾಂತ ದರ್ಶನಕ್ಕೆ ವ್ಯಾಖ್ಯಾನ ಬರೆದಿರುವುದು ಭಾವವಾದೀ ದೃಷ್ಟಿಯಿಂದ ಶಂಕರರು ಭಾವವಾದದ ಮೇರು ಶಿಖರ ಎಂಬಲ್ಲಿ ಎರಡು ಮಾತಿಲ್ಲ. ಅವರಿಗೆ ಸರಿಗಟ್ಟುವ ಭಾವವಾಣಿ ದಾರ್ಶನಿಕರುಪಾಶ್ಚಾತ್ಯ ದರ್ಶನ ಶಾಸ್ತ್ರದಲ್ಲಿ ದೊರಕುವುದಿಲ್ಲ. ಆದರೆ, ವಿವೇಕಾನಂದರು ವೇದಾಂತಕ್ಕೆ ವ್ಯವಹಾರಿಕ ರೂಪವನ್ನು ಕೊಟ್ಟರು. ಈ ಬಗೆಯ ವ್ಯಾಖ್ಯಾನ ಕೂಡಾ ತತ್ವಶಾಸ್ತ್ರಕ್ಕೆ ನವನವೀನ.
ಅಗಾಧ ಪ್ರತಿಭೆ
1863ನೆಯ ಇಸವಿ ಜನವರಿ 12 ರಂದು ಕಲ್ಕತ್ತಾದ ಒಂದು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದ ವಿವೇಕಾನಂದರು ಅಗಾಧ ಪ್ರತಿಭೆಯ ವ್ಯಕ್ತಿ. ಆ ಕಾಲದಲ್ಲಿಯೇ ಬಿ.ಎ. ಶಿಕ್ಷಣ ಮುಗಿಸಿದ ವಿವೇಕಾನಂದರು ( ಮೂಲ ಹೆಸರು ನರೇಂದ್ರನಾಥ) ವಿದ್ಯಾರ್ಥಿ ಜೀವನದಲ್ಲಿ ನಾಸ್ತಿಕರಾಗಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ಅವರ ಚಿಂತನಾ ಕ್ರಮವೇ ಬದಲಾಯಿತು.ರಾಮಕೃಷ್ಣರು ಮಹಾನ್ ಸಂತರಾಗಿದ್ದರೂ ಅನಕ್ಷರಸ್ತರು. ವಿವೇಕಾನಂದರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪ್ರಖಾಂಡ ಪಂಡಿತರು. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಒಂದೇ ಜೀವನದ ಎರಡು ಮುಖಗಳು ಅಥವಾ ಒಂದೇ ಸತ್ಯದ ಎರಡು ರೂಪಗಳು. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ರಾಮಕೃಷ್ಣರು ಅನುಭೂತಿ ಆದರೆ ವಿವೇಕಾನಂದರು ಅವರ ವ್ಯಾಖ್ಯಾನ ಅಭಿವ್ಯಕ್ತಿ.
ವಿವೇಕಾನಂದರು ಹಾರ್ಬರ್ತ್ ಸ್ಪೆನ್ಸರ್ ಹಾಗೂ ಜಾನ್ ಸ್ಟುವರ್ಟ್ರಮಿಲ್ ಅವರ ಪ್ರೇಮಿಯಾಗಿದ್ದರು. ಶೆಲಿ, ವರ್ಡ್ಸ್ವರ್ತ್ರ ದಾರ್ಶನಿಕತೆ, ಹೆಗಲ್ನ ವಸ್ತುನಿಷ್ಠ ಆದರ್ಶವಾದ ಹಾಗೂ ಫ್ರಾನ್ಸಿನ ರಾಜ್ಯಕ್ರಾಂತಿ ವಿವೇಕಾನಂದರನ್ನು ತೀವ್ರವಾಗಿ ಪ್ರಭಾವಿಸಿತ್ತು.
ವಿವೇಕಾನಂದರು ಕೇವಲ 39 ವರ್ಷಗಳ ಕಾಲ ಜೀವಿಸಿದ್ದರೂ ಅವರ ಸಂದೇಶ ಇವತ್ತಿನ ಕೋಮುವಾದಿ ರಾಜಕೀಯಕ್ಕೆ ಅತ್ಯಂತ ಪ್ರಬಲವಾದ ಶಸ್ತ್ರ. ರಾಮಮೋಹನ್ ರಾಯ್, ಕೇಶವ ಚಂದ್ರ ಸೇನ್, ದಯಾನಂದ ಸರಸ್ವತಿ, ರಾನಡೆ, ಅನಿಬೆಸೆಂಟ್ ಮತ್ತು ರಾಮಕೃಷ್ಣರು ಹದಮಾಡಿದ ನೆಲದಲ್ಲಿ ವಿವೇಕಾನಂದರು ಅಶ್ವತ್ಥದಂತೆ ಬೆಳೆದು ನಿಂತರು. ಇಂದು ಕೋಮುವಾದಿಗಳು ಆ ಅಶ್ವತ್ಥದ ರೆಂಬೆಕೊಂಬೆಗಳನ್ನು ಕಡಿದು ಯೂಪಸ್ಥಂಭ (ಬಲಿಸ್ಥಂಭ)ವನ್ನಾಗಿ ರೂಪಿಸುತ್ತಿದ್ದಾರೆ.





