ದಿ ಕಲರ್ ಪರ್ಪಲ್ – ನಾ ನೋಡಿದ ಸಿನೆಮಾ
ಇಂಚರ
ಇತ್ತೀಚೆಗೆ ನೋಡಿದ ಚಿತ್ರ ‘ದಿ ಕಲರ್ ಪರ್ಪಲ್’. ಅಲೈಸ್ ವಾಕರ್ ಎಂಬುವವರ ನಾವೆಲ್ ಆಧಾರಿತವಾದ ಈ ಚಿತ್ರ ತೆರೆಗಂಡಿದ್ದು ೧೯೮೫ ರಲ್ಲಿ. ಇದರ ನಿರ್ದೇಶಕರು ಸ್ಟೀವನ್ ಸ್ಪೀಲ್ ಬರ್ಗ್. ಇದು ಸಿಲಿ ಎಂಬ ಆಫ್ರಿಕನ್ ಅಮೇರಿಕನ್ ಹುಡುಗಿಯ ಕಥೆ. ಕಥೆ ಶುರುವಾಗೋದು ಹೀಗೆ. ಸಿಲಿಯ ತಾಯಿ ಹೆರಿಗೆ ನೋವಿನಲ್ಲಿರುತ್ತಾಳೆ. ಹೆಣ್ಣು ಮಗುವೊಂದು ಜನಿಸುತ್ತದೆ. ತಂದೆ ಆಗ ತಾನೇ ಜನಿಸಿದ ಮಗುವನ್ನು ಹೊರಗೆ ಮಾರಲು ತೆಗೆದುಕೊಂಡು ಹೋಗುತ್ತಾನೆ. ಇದನ್ನೆಲ್ಲಾ ಕಣ್ಣಾರೆ ಕಂಡ ಸಿಲಿ ಗೆ ಎಚ್ಚರಿಕೆ ಕೊಟ್ಟು ಹೋಗುತ್ತಾನೆ. ಸುಮಾರು ೧೯೦೦ ರ ದಶಕದಲ್ಲಿ ಈ ಅಶಿಕ್ಷಿತ ಬಡ ಕಪ್ಪು(ಆಫ್ರಿಕನ್) ಹೆಣ್ಣು ಮಕ್ಕಳ ಶೋಷಣೆ ಹೇಗೆ ನಡೆಯುತ್ತಿತ್ತು? ಗಂಡಸರ ದಬ್ಬಾಳಿಕೆ, ಅಮೇರಿಕನ್ ವೈಟ್ ನವರ ದರ್ಪ, ಅಶಿಕ್ಷಿತ ಕಪ್ಪು ಜನರ ಅದ್ರಲ್ಲೂ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾ ಹೋಗುತ್ತದೆ.
ಸಿಲಿಗೆ ೧೪ ವರ್ಷ, ಆಕೆಯ ತಾಯಿ ಹೆತ್ತು, ಹೆತ್ತು ಸುಸ್ತಾದಳೆಂದು, ಸಿಲಿಯ ತಂದೆ, ಸಿಲಿಯ ಮೇಲೆ ಬಲಾತ್ಕಾರ ಮಾಡುತ್ತಾನೆ. ಇದರಿಂದಾಗಿ ಸಿಲಿಗೆ ೨ ಮಕ್ಕಳಾಗುತ್ತವೆ. ಅವರಿಬ್ಬರನ್ನೂ ಮಕ್ಕಳಿಲ್ಲದ ಅಮೇರಿಕನ್ ವೈಟ್ ದಂಪತಿಗಳಿಗೆ ಮಾರಿಬಿಡುತ್ತಾನೆ. ತಾಯಿ ಸಾಯುತ್ತಾಳೆ. ಸಿಲಿ ತನ್ನ ತಂದೆಯ ಹೆಂಡತಿಯಾಗುತ್ತಾಳೆ! ಸಿಲಿಗೊಬ್ಬಳು ಅತ್ಯಂತ ಪ್ರೀತಿ ಪಾತ್ರಳಾದ ತಂಗಿ ನೆಟ್ಟಿ. ಈಕೆಯ ಮೇಲೆ ತಮ್ಮ ತಂದೆಯ ಕಣ್ಣು ಬೀಳದಂತೆ ಕಾಪಾಡುವ ಸಿಲಿ ಆಕೆಯನ್ನು ಶಾಲೆಗೆ ಹೋಗುವಂತೆ ನೋಡಿಕೊಳ್ಳುತ್ತಾಳೆ. ಚರ್ಚ್ ನಲ್ಲಿ ನೆಟ್ಟಿಯನ್ನು ನೋಡಿದ ವಿಧುರನೊಬ್ಬ ಸಿಲಿಯ ತಂದೆಯ ಬಳಿ ಬಂದು ಆಕೆಯನ್ನು ಮದುವೆ ಮಾಡಿಕೊಡಲು ಕೇಳುತ್ತಾನೆ. ಆದರೆ ಸಿಲಿಯ ತಂದೆ ಸಿಲಿಯನ್ನೇ ಮಾಡಿಕೋ ಎಂದು ಹೇಳುತ್ತಾನೆ. ಆಕೆ ಚೆನ್ನಾಗಿಲ್ಲ, ಕಪ್ಪು, ಆಕೆಯ ನಗು ಚೆನ್ನಾಗಿಲ್ಲ, ಆಕೆ ಈಗಾಗಲೇ ಹಾಳಾಗಿದ್ದಾಳೆ, ಇದೆಲ್ಲವೂ ಈ ವಿಧುರನ ಕಂಪ್ಲೇಂಟ್. ಆದರೆ ಅದಕ್ಕೆಲ್ಲವೂ ಸಮಜಾಯಿಶಿ ಕೊಡುತ್ತಾನೆ ಸಿಲಿಯ ತಂದೆ. ವಧು ಪರೀಕ್ಷೆಯಂತೂ ಥೇಟ್ ಪ್ರಾಣಿಗಳ ವ್ಯಾಪಾರದ ಹಾಗೇ ಭಾಸವಾಗುತ್ತದೆ. ಆಕೆಯನ್ನು ತಿರುಗಿಸಿ, ನಡೆಸಿ ತೋರಿಸುವ ತಂದೆ, ಒಪ್ಪಿಕೊಳ್ಳುವ ಈತ. ಸಿಲಿಯ ಮದುವೆಯಾಗುತ್ತದೆ. ಮತ್ತಷ್ಟು ಓದು 




