ಸಿಬಿಐ ಅಧಿಕಾರಿಗಳಾಗಿ ಸೇರಿದವರಿಗೆ ಮರೆಯಲಾರದ ಪಾಠ
– ರೋಹಿತ್ ಚಕ್ರತೀರ್ಥ
1987ನೇ ಇಸವಿಯ ಮಾರ್ಚ್ ತಿಂಗಳು. 19ನೇ ತಾರೀಕು. ಮುಂಬಯಿಯ ಪೊಲೀಸ್ ಮುಖ್ಯ ಕಚೇರಿಗೆ ಒಂದು ಫೋನ್‍ಕಾಲ್ ಬಂತು. ಇನ್ನೂ ಹದಿಮೂರು ವರ್ಷ ಸರ್ವೀಸ್ ಇದ್ದ, ದಕ್ಷ ಅಧಿಕಾರಿಯಾಗಿ ಹೆಸರು ಮಾಡಿ ಅದಾಗಲೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಗೇರಿದ್ದ ಅರವಿಂದ ಇನಾಂದಾರ್ ಫೋನೆತ್ತಿಕೊಂಡರು. ಅತ್ತ ಕಡೆಯಿಂದ ರಿಸೀವರ್ ಹಿಡಿದಿದ್ದ ಧ್ವನಿ ತಾನು ಒಪೆರಾ ಹೌಸ್‍ನಿಂದ ಮಾತಾಡುತ್ತಿರುವುದಾಗಿ ಹೇಳಿಕೊಂಡಿತು. ಅಲ್ಲಿನ ಒಂದು ಹೆಸರಾಂತ ಜ್ಯುವೆಲ್ಲರಿ ಮಳಿಗೆಯಲ್ಲಿ ಸಿಬಿಐ ದಾಳಿಯಾಗಿರುವುದಾಗಿ ಆ ಧ್ವನಿ ಹೇಳಿತು. ಮುಂಬಯಿಯನ್ನು ಕಂಡುಬಲ್ಲವರಿಗೆ ಒಪೆರಾ ಹೌಸ್ ಬಗ್ಗೆ ಹೆಚ್ಚೇನೂ ವಿವರಿಸಬೇಕಾಗಿಲ್ಲ. ನಮ್ಮ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಪುಸ್ತಕಗಳಿದ್ದಂತೆ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಬಟ್ಟೆಗಳನ್ನು ಹರವಿ ಹಾಕಿದಂತೆ, ಚಿಕ್ಕಪೇಟೆಯಲ್ಲಿ ಸೀರೆಗಳ ಬೆಟ್ಟ ಪೇರಿಸಿದಂತೆ ಅಥವಾ ಕೆ.ಆರ್.ಮಾರ್ಕೆಟ್‍ನಲ್ಲಿ ಹೂಗಳ ಜಾತ್ರೆ ನಡೆಸಿದಂತೆ ಮುಂಬಯಿಯ ಒಪೆರಾ ಹೌಸ್‍ನಲ್ಲಿ ಜ್ಯುವೆಲ್ಲರಿ ಮಳಿಗೆಗಳದ್ದೇ ದಿಬ್ಬಣ. ಒಂದಕ್ಕಿಂತ ಒಂದು ಬಿಗುವಾದ, ಎತ್ತರವಾದ, ಭವ್ಯವಾದ ಆಭರಣದಂಗಡಿಗಳು ಇರುವ ಅತ್ಯಂತ ಪಾಶ್ ಜಾಗ ಇದು. ದಿನವೊಂದಕ್ಕೆ ಏನಿಲ್ಲೆಂದರೂ ಈ ಜಾಗದಲ್ಲಿ ಹತ್ತಿಪ್ಪತ್ತು ಕೋಟಿ ರುಪಾಯಿಗಳ ವ್ಯವಹಾರ ಚಕಾಚಕ್ ನಡೆದುಹೋಗುತ್ತದೆ. ಅದೆಷ್ಟು ಕಪ್ಪುದುಡ್ಡು ಇಲ್ಲಿನ ಝಗಮಗ ಚಿನ್ನದ ಹೊಳಪಲ್ಲಿ ಬಿಳುಪಾಗಿಹೋಗುತ್ತವೋ ಲೆಕ್ಕವಿಟ್ಟವರಾರು! ಹಾಗಾಗಿ, ಸಿಬಿಐ ದಾಳಿ ನಡೆದಿದೆ ಎನ್ನುವುದನ್ನು ಕೇಳಿದಾಗ ಇನಾಂದಾರರೇನೂ ಅಷ್ಟೊಂದು ಅಚ್ಚರಿಪಡಲಿಲ್ಲ. ಆದರೆ ಮುಂದಿನ ಕತೆ ಕೇಳಿದಮೇಲೆ ಮಾತ್ರ ಆಶ್ಚರ್ಯಚಕಿತರಾಗಿ, ತಕ್ಷಣ ತನ್ನ ಗಾಡಿಯನ್ನು ಒಪೆರಾ ಹೌಸ್ ಕಡೆ ಓಡಿಸಿದರು. ಮತ್ತಷ್ಟು ಓದು 




