ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸ್ವಗತ’

3
ಜನ

ನನ್ನ ಆಕಾಶಯಾನ

ಕವಿ ನಾಗರಾಜ್

ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು.
ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ – ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ;

ಮತ್ತಷ್ಟು ಓದು »