ವಿಷಯದ ವಿವರಗಳಿಗೆ ದಾಟಿರಿ

Posts tagged ‘6-5=2 ಚಿತ್ರ ವಿಮರ್ಶೆ’

3
ಡಿಸೆ

6-5=2 ಚಿತ್ರ ವಿಮರ್ಶೆ

-ಡಾ.ಅಶೋಕ್ ಕೆ ಆರ್

6-5=2ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.
ಎರಡು ಘಂಟೆಯ 6-5=2 ಚಿತ್ರ ಪ್ರೀತಿ ಪ್ರೇಮದ ಚಿತ್ರಗಳ ಗುಂಗಿನಲ್ಲಿ ಕಳೆದುಹೋದ ಪ್ರೇಕ್ಷಕರನ್ನು ಖಂಡಿತ ಹೊಡೆದೆಬ್ಬಿಸುತ್ತದೆ! ಬಹುಶಃ ಉಪೇಂದ್ರ ನಿರ್ದೇಶನದ ಶ್ ಚಿತ್ರದ ನಂತರ ಕನ್ನಡದಲ್ಲಿ ಬಂದ ಪರಿಣಾಮಕಾರಿ ‘ದೆವ್ವದ’ ಚಿತ್ರ ಎಂದರೆ ತಪ್ಪಲ್ಲ. ಕೊನೇಪಕ್ಷ ಶ್  ಸಿನಿಮಾದಲ್ಲೂ ಪ್ರೀತಿ ಪ್ರೇಮ ಕಾಮ ಹಾಡು ಫೈಟುಗಳಿದ್ದವು. ಈ ಚಿತ್ರದಲ್ಲಿ ಅದೂ ಇಲ್ಲ. ಆರು ಮಂದಿ ಟ್ರೆಕ್ಕಿಂಗಿಗೆಂದು ಹೋಗುತ್ತಾರೆ, ಕಾಡಿನ ಪರಿಸರ ಗಮನಿಸಿದರೆ ಗುಂಡ್ಯ, ಬಿಸಿಲೆ, ಕುಮಾರಪರ್ವತವಿರಬೇಕು. ಆ ಆರು ಜನರಲ್ಲಿ ಒಬ್ಬ ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಬೇಕೆಂಬ ಕನಸನ್ನೊತ್ತವನು. ತನ್ನ ಗುರುವಿನಿಂದ ಒಂದು ಕ್ಯಾಮೆರಾ ತರುತ್ತಾನೆ ಟ್ರೆಕ್ಕಿಂಗಿನ ಪ್ರತಿ ಘಟ್ಟವನ್ನು ಚಿತ್ರಿಸಬೇಕೆಂಬ ಆಸೆಯೊಂದಿಗೆ. ಇಡೀ ಚಿತ್ರ ಆ ಕ್ಯಾಮೆರಾದಲ್ಲಿ ಚಿತ್ರಿತವಾದ ‘ನೈಜ’ ದೃಶ್ಯಗಳಷ್ಟೇ! ಟ್ರೆಕ್ಕಿಂಗಿನ ಸಮಯದಲ್ಲಿ ನಡೆದ ತಮಾಷೆ ಸಿಟ್ಟು ಸೆಡವು ದುರ್ಘಟನೆಗಳು ಅಲ್ಲಿನ ರಮ್ಯ ಪರಿಸರವೆಲ್ಲ ಲೇಟ್ ರಮೇಶನ ಕ್ಯಾಮೆರಾದಲ್ಲಿ ಹಸಿಹಸಿಯಾಗಿ ಬಂಧಿಯಾಗಿದೆ. ಚಾರಣಕ್ಕೆಂದು ಬಂದವರ ಮೇಲೆ ಆ ಪರಿಸರದಲ್ಲಿನ ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡುತ್ತವೆ. ಬದುಕುವರ್ಯಾರು, ಸಾಯುವವರ್ಯಾರು, ಕಾಣೆಯಾಗುವವರ್ಯಾರು ಎಂಬುದೇ ಚಿತ್ರದ ಹೂರಣ. ಕ್ರುದ್ಧ ಶಕ್ತಿಗಳು ಆಕ್ರಮಣ ಮಾಡಲು ಕಾರಣವೇನು ಎಂಬುದರ ವಿವರವಿಲ್ಲ, ಮನದಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ಯಾವ ವಿವರಗಳೂ ಚಿತ್ರದಲ್ಲಿಲ್ಲ! ಯಾಕೆಂದರೆ ಸ್ವರ್ಣಲತಾ ಪ್ರೊಡಕ್ಷನ್ನಿನ ಜಾಹೀರಾತು ತಿಳಿಸುವಂತೆ ಇದು ಚಲನಚಿತ್ರವಲ್ಲ! ನೈಜ ವಿಡಿಯೋ ಅಷ್ಟೇ!!