ವಿಷಯದ ವಿವರಗಳಿಗೆ ದಾಟಿರಿ

Posts tagged ‘Deendayal4Bharat’

8
ಆಗಸ್ಟ್

ಪ್ರಜಾಪ್ರಭುತ್ವ ಎಂಬುದು ರಾಮನಂತೆ ; ರಾಜಕಾರಣಕ್ಕೆ ಬೇಕಿದೆ ನೀತಿ ಸಂಹಿತೆ

– ಸಂತೋಷ್ ತಮ್ಮಯ್ಯ

ಭಾಷೆ ಇದ್ದಮೇಲೆ ವ್ಯಾಕರಣವಿರುವಂತೆ, ಕಾವ್ಯ ಇದ್ದಮೇಲೆ ಕವಿಯೊಬ್ಬನೂ ಇರುವಂತೆ ರಾಜಕೀಯ ಪಕ್ಷ ಇದ್ದಮೇಲೆ ಅದರ ಹಿಂದೊಂದು ಸಿದ್ಧಾಂತವಿರಲೇಬೇಕು. ಪಕ್ಷದ ಹುಟ್ಟು ಕೂಡಾ ಒಂದು ಸಿದ್ಧಾಂತ, ಚಳವಳಿಗಳ ಬುನಾದಿಗಳ ಮೇಲೆ ಆಗಿರುತ್ತದೆ. ಈ ಸಿದ್ಧಾಂತಗಳು ಒಂಥರಾ ಚಪ್ಪರವಿದ್ದಂತೆ. ಆ ಚಪ್ಪರದ ಕೆಳಗೆ ಪ್ರತಿಷ್ಠಾಪಿತವಾದವುಗಳೇ ಪಕ್ಷಗಳು. ವಿಶ್ವಾದ್ಯಂತದ ರಾಜಕೀಯ ಪಕ್ಷಗಳ ಜಾತಕಗಳೆಲ್ಲವೂ ಸಾಧಾರಣವಾಗಿ ಹೀಗೆಯೇ. ಒಂದು ಉದ್ದೇಶ, ಒಂದು ಧ್ಯೇಯ, ಸಮಾಜದ ಅಶೋತ್ತರ, ರಾಷ್ಟ್ರೀಯತೆ, ಪ್ರಾಂತೀಯತೆ, ಪರಂಪರೆ ಮೊದಲಾದವುಗಳು ಆ ಚಪ್ಪರದ ಕಂಬಗಳು. ಸಿದ್ಧಾಂತಗಳನ್ನು ನೋಡಿದರೂ ಆಯಾ ಪಕ್ಷಗಳ ನಡೆ, ವರ್ತನೆಗಳನ್ನು ಸುಲಭವಾಗಿ ಕಂಡುಹಿಡಿದುಬಿಡಬಹುದು. ರಾಜಕೀಯ ಪಕ್ಷಗಳು ಸಿದ್ಧಾಂತಗಳಿಲ್ಲದಿರುವ ಸಾಧ್ಯತೆಗಳೇ ಇಲ್ಲ. ಕನಿಷ್ಠ ಅವು ವ್ಯಕ್ತಿಕೇಂದ್ರಿತವಾದ ಚೆಹರೆಯನ್ನಾದರೂ ಹೊಂದಿರುತ್ತವೆ. ಅಂಥ ಪಕ್ಷ ಆ ವ್ಯಕ್ತಿಯ ವರ್ತನೆ, ಪ್ರಭಾವವನ್ನೇ ಸಿದ್ಧಾಂತವೆಂಬಂತೆ ಬಣ್ಣಿಸಿಕೊಳ್ಳುತ್ತದೆ. ಇನ್ನು ಕೆಲವೊಮ್ಮೆ ಯಾವುದೋ ದೇಶದಲ್ಲಿ ಯಾವುದೋ ಒಂದು ಹೊತ್ತಿನಲ್ಲಿ ನಡೆದ ಒಂದು ಹತ್ಯಾಕಾಂಡವನ್ನೇ ಸಿದ್ಧಾಂತ ಎಂದು ಬಿಂಬಿಸುವ ರಾಜಕೀಯ ಪಕ್ಷಗಳೂ ಇವೆ. ತತ್‌ಕ್ಷಣದ ಒಂದು ಸ್ಪಂದನೆಯನ್ನೇ ರಾಜಕೀಯ ಸಿದ್ಧಾಂತ ಎಂದುಕೊಳ್ಳುವವರೂ ಇದ್ದಾರೆ. ರಾಷ್ಟ್ರೀಯತೆಯ ಹಂಗಿಲ್ಲದಿರುವ ಸಿದ್ಧಾಂತಗಳನ್ನೂ ಕೂಡಾ ಜಗತ್ತು ನೋಡಿದೆ, ಅನುಭವಿಸಿದೆ. ಅಧುನಿಕ ಪ್ರಜಾಪ್ರಭುತ್ವಕ್ಕೂ ಪೂರ್ವದಲ್ಲೇ ಇದ್ದ ಕೆಲವು ಗುಂಪುಗಳು, ಆ ಗುಂಪುಗಳಿಗೂ ಇದ್ದ ಸಿದ್ಧಾಂತಗಳನ್ನೂ ಜಗತ್ತು ನೋಡಿದೆ. ದೀರ್ಘ ಕಾಲ ಬಾಳಿದ ಗಟ್ಟಿತನದ ಸಿದ್ಧಾಂತಗಳನ್ನು, ಪಕ್ಷಗಳನ್ನೂ ನೋಡಿದೆ. ಆತುರದಿಂದ ಸಷ್ಟಿಯಾದವು ಅಷ್ಟೇ ಬೇಗ ಕಾಲವಾದುದನ್ನೂ ನೋಡಿದೆ. ನೆಪಮಾತ್ರಕ್ಕೆ ದೊಡ್ಡದಾಗಿ ಕಾಣುವ ಆದರೆ ಒಳಗೊಳಗೇ ಸತ್ತಂತಿರುವ ಪಕ್ಷ ಮತ್ತು ಸಿದ್ಧಾಂತವನ್ನೂ ನೋಡಿದೆ. ಮತ್ತು ಹಲವು ಅನಿವಾರ್ಯತೆಗಳಿಂದ ಸಿದ್ಧಾಂತದಿಂದ ಹೊರಳಿಕೊಂಡವುಗಳನ್ನು ಕೂಡಾ ಜಗತ್ತು ಹಲವು ಸಂದರ್ಭಗಳಲ್ಲಿ ನೋಡಿದೆ. ಭಾರತವಂತೂ ಅದನ್ನು ತೀರಾ ಹತ್ತಿರದಿಂದ ನೋಡಿದೆ.

ಮತ್ತಷ್ಟು ಓದು »

31
ಜುಲೈ

ಹಣ್ಣಾದ ಬದುಕು; ಸಾಂಸ್ಕೃತಿಕ ರಾಜಕಾರಣದ ಬೆಳಕು

– ಸಂತೋಷ್ ತಮ್ಮಯ್ಯ

ನಾಡಿನ ಖ್ಯಾತ ತತ್ವಶಾಸ್ತ್ರಜ್ಞರೊಬ್ಬರು ಕಲಾವಿಮರ್ಶಕ ಅನಂದ ಕೆಂಟಿಶ್ ಕುಮಾರಸ್ವಾಮಿಯವರನ್ನು ವಿವರಿಸುವುದು ಹೀಗೆ ; ಅಯೋಧ್ಯೆ ಕ್ಷೋಭೆಗೊಂಡಿತ್ತು. ಕೈಕೆಯಿಯ ಕೋಪ ಅರಮನೆಯ ಶಾಂತಿಯನ್ನು ತಿಂದು, ಪಟ್ಟಾಭಿಷೇಕದ ಹರ್ಷ ಕ್ಷಣಮಾತ್ರದಲ್ಲಿ ನೀರುಪಾಲಾಗಿ, ದಶರಥನಿಗೆ ಸಂದಿಗ್ದತೆ ಉಂಟಾಗಿ. ರಾಮನಿಗೆ ಕಾಡಿಗೆ ತೆರಳಲು ಸೂಚಿಸಿ ಆತ ಕುಸಿದು ಬಿದ್ದಿದ್ದ. ರಾಮ ಪಿತೃವಾಕ್ಯಪರಿಪಾಲನೆಗಾಗಿ ಕಾಡಿಗೆ ತೆರಳಿದ. ಇತ್ತ ಕುಸಿದಿದ್ದ ದಶರಥ ಅದೇ ಕೊರಗಿನಿಂದ ಕೊನೆಯುಸಿರೆಳದಿದ್ದ. ಅದೇ ಹೊತ್ತಿಗೆ ಕೈಕೆಯ ಮಗ ಭರತ ಸೋದರ ಶತ್ರುಘ್ನನೊಡನೆ ಕೇಕೆಯ ದೇಶಕ್ಕೆ ಹೋಗಿದ್ದನಲ್ಲ. ಅವರಿಗೆ ತುರ್ತು ಕರೆ ಹೋಯಿತು. ರಾಜಧಾನಿಗೆ ಕೂಡಲೇ ಮರಳಬೇಕೆಂಬ ಕರೆಗೆ ಸೋದರರಿಬ್ಬರೂ ಕುದುರೆಯೇರಿ ಅಯೋಧ್ಯೆಗೆ ದೌಢಾಯಿಸಿ ಬರುತ್ತಿದ್ದರು. ಇನ್ನೇನು ಕತ್ತಲಾಗುತ್ತಿದೆ ಎಂಬಷ್ಟರಲ್ಲಿ ಅವರು ಅಯೋಧ್ಯೆ ಹೊರವಲಯಕ್ಕೆ ಬಂದು ಮುಟ್ಟಿದ್ದರು. ಹೊರವಲಯದಲ್ಲೊಂದು ಭವನ. ಆ ಭವನಕ್ಕೊಬ್ಬ ಕಾವಲುಗಾರ. ಭವನದಲ್ಲಿ ಇದುವರೆಗೆ ಆಗಿಹೋದ ಇಕ್ಷ್ವಾಕು ವಂಶದ ಸಾಮ್ರಾಟರ ಪ್ರತಿಮೆಗಳ ಸಾಲುಗಳು. ಭರತನಿಗೆ ಏನನ್ನಿಸಿತೋ ಏನೊ ಶತ್ರುಘ್ನ ಬಂದದ್ದೇ ಇದೆ ಪೂರ್ವಿಕರಿಗೊಮ್ಮೆ ನಮಸ್ಕರಿಸಿ ಹೊರಡೋಣ ಎಂದ. ಕಾವಲುಗಾರ ದೊಂದಿ ತಂದ. ಸೋದರರು ಭವನ ಹೊಕ್ಕರು. ಉದ್ದಕ್ಕೆ ನಿಂತ ಇತಿಹಾಸಪುರುಷರು. ಅಣ್ಣತಮ್ಮರು ಕೊನೆಯಿಂದ ಅಜ್ಜಂದಿರನ್ನು ನೋಡುತ್ತಾ ಬಂದರು. ಪ್ರತಿಮೆಗಳನ್ನು ನೋಡುತ್ತಾ ಶತ್ರುಘ್ನ ಮೆಲುದನಿಯಲ್ಲಿ ಹೆಸರೆಣಿಸತೊಡಗಿದ, ಅಜ, ರಘು, ದಿಲೀಪ… ಅಷ್ಟರಲ್ಲಿ ಭರತ, ಅಲ್ಲಲ್ಲ ತಪ್ಪುಎಂದು ಮತ್ತೆ ಎಣಿಸಿ ನೋಡಿದ ಆತನೂ ತಪ್ಪಿದ. ದಶರಥನೂ ಕಾಲವಾಗಿ ಪ್ರತಿಮೆಯಾಗಿ ನಿಂತುಬಿಟ್ಟಿದ್ದಾನೆ ಎಂದು ಎಂದು ತಿಳಿಯದ ರಾಜಕುಮಾರರು ಮತ್ತೆ ಮತ್ತೆ ಲೆಕ್ಕ ತಪ್ಪಿದರು. ದೊಂದಿಯೂ ಇತ್ತು, ಬೆಳಕೂ ಇತ್ತು, ಆ ಭವನವನ್ನು ಅವರು ಎಷ್ಟೋ ಭಾರಿ ನೋಡಿದ್ದರು ಕೂಡಾ. ಆದರೂ ಲೆಕ್ಕ ತಪ್ಪಿದರು!

ಈ ಜಿಜ್ಞಾಸೆಯನ್ನು ಬಿಚ್ಚಿಟ್ಟವರು ಆನಂದ ಕೆಂಟಿಶ್ ಕುಮಾರಸ್ವಾಮಿಯವರು ಎಂದರು ಆ ಭಾಷಣಕಾರರು. ಅಂದರೆ ಸನಾತನ ಪರಂಪರೆಯಲ್ಲಿ ಮಾನವ ತದ್ರೂಪನ್ನು ಪ್ರತಿಮೆಯಾಗಿ ಕೆತ್ತುವ ಪರಂಪರೆ ಇರಲಿಲ್ಲ ಎಂಬುದನ್ನು ಆನಂದ ಕುಮಾರಸ್ವಾಮಿಯವರು ಶೋಧಿಸಿದ್ದರು.

ಮತ್ತಷ್ಟು ಓದು »