ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೩
– ಷಣ್ಮುಖ ಎ
ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
- ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೧
- ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೨
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಚಿತ್ರಣ– ಕಾಯಿದೆ ಮತ್ತು ವಾಸ್ತವ ಸ್ಥಿತಿಗಳು
ಈ ವರದಿಯಲ್ಲಿ ಸಂಗ್ರಹಿಸಿರುವ ಅಂಕಿ-ಅಂಶ ಮತ್ತು ಉಲ್ಲೇಖಿತವಾಗಿರುವ ವಿವರಣೆಗಳನ್ನೇ ಗಮನಿಸಿದರೂ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯು ಏಕೆ ವಿಫಲವಾಗುತ್ತಿದೆ ಎನ್ನುವುದು ಅರಿವಿಗೆ ಬರುತ್ತದೆ. ಈ ವರದಿಯಲ್ಲಿನ ಅಂಶಗಳು ಸ್ಪಷ್ಟಪಡಿಸುವ ಹಾಗೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಜಾತಿವ್ಯವಸ್ಥೆಯ ಚೌಕಟ್ಟಿನಡಿಯಲ್ಲಿ ನಿರೂಪಿಸಲಾದ ಸಾಮಾಜಿಕ ತಾರತಮ್ಯದ ಅಥವಾ ಅಸ್ಪೃಷ್ಯತೆಯ ಆಚರಣೆಯ ಹೆಸರಿನಲ್ಲಿ ದಾಖಲಾಗುತ್ತಿರುವುದು ಕೆಲವೇ ಪ್ರಕರಣಗಳು. ಅದರಲ್ಲೂ ನೇರವಾಗಿ ಈ ರೀತಿಯ ಪ್ರಕರಣಗಳಲ್ಲಿ ನಿಂದನೆ ಮತ್ತು ಹಲ್ಲೆಗಳನ್ನೊಳಗೊಂಡ ಪ್ರಕರಣಗಳೇ ಹೆಚ್ಚಿನವು. ಉಳಿದಂತೆ ಈ ವರದಿಯು ನಿಜಕ್ಕೂ ಸಾಮಾಜಿಕ ತಾರತಮ್ಯ, ಅಸ್ಪೃಷ್ಯತಾಚರಣೆ ಎನ್ನುವುಂತಹ ಪ್ರಕರಣಗಳನ್ನು ವಿರಳವಾಗಿ ಹೆಸರಿಸುತ್ತದೆ. ಉಳಿದಂತೆ ನಿಂದನೆ, ಹಲ್ಲೆ, ಭೂ ವಿವಾದ, ಗೋಮಾಳ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಕರಣಗಳೇ ಹೆಚ್ಚಾಗಿವೆ.
ಈ ರೀತಿಯ ವ್ಯಾಜ್ಯಗಳು ಸಾಮಾನ್ಯವಾಗಿ ಜನರ ನಡುವೆ ದಲಿತರೆನಿಸಿಕೊಂಡಿರುವವರ ನಡುವೆ, ದಲಿತರಲ್ಲದವರ ನಡುವೆ ಮತ್ತು ದಲಿತರೆನಿಸಿಕೊಂಡವರು ಮತ್ತು ಅಲ್ಲದವರ ನಡುವೆ ನಡೆಯುತ್ತಲೇ ಇರುತ್ತವೆ. ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ ಇದು ಸಾಮಾನ್ಯ ಸಂಗತಿ. ಆದರೆ,ಈ ರೀತಿಯಲ್ಲಿ ಸಾಮಾನ್ಯವಾಗಿ ದಾಖಲಾಗುವ ಪ್ರಕರಣಗಳಲ್ಲಿ ವಾದಿ ಪ್ರತಿವಾದಿಗಳು ದಲಿತರು ಮತ್ತು ದಲಿತೇತರರು ಆಗಿದ್ದರೆ, ಅದು ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯ್ದೆಯ ಅಡಿಯಲ್ಲಿ ದಾಖಲಾಗುತ್ತದೆ ಅಷ್ಟೇ. ಉಳಿದ ಸಂದರ್ಭದಲ್ಲಿ ಸಾಮಾನ್ಯ ಪ್ರಕರಣವೆಂದು ದಾಖಲಾಗುತ್ತದೆಯಷ್ಟೆ.
ಸಾಮಾನ್ಯವಾಗಿ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವರೆಗೆ ಅದರಲ್ಲಿ ತಪ್ಪಿತಸ್ಥರು ಮತ್ತು ಮುಗ್ದರ ತೀರ್ಮಾನ ಸಾಧ್ಯವಿಲ್ಲ. ಅದರೆ ಅದೇ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣವು ದಾಖಲಾದ ತಕ್ಷಣ ಅಲ್ಲಿ ಅಪರಾಧಿ ಮತ್ತು ಮುಗ್ದರ ತೀರ್ಮಾನವಾಗಿರುತ್ತದೆ. ಹಾಗಾಗಿಯೇ ಅಲ್ಲವೇ? ಇಲ್ಲಿ ಕೇವಲ ಪ್ರಕರಣ ದಾಖಲಾಗಿ ಕನ್ವಿಕ್ಷನ್ ಆಗದಿದ್ದರೂ, ಪೆಂಡಿಂಗ್ ಇದ್ದರೂ, ರಾಜಿಮಾಡಿಕೊಂಡಿದ್ದರೂ ಸಹ ಸರ್ಕಾರದ ಹಣಕಾಸಿನ ಪರಿಹಾರ ನೀಡಲಾಗಿರುತ್ತದೆ. ಅಲ್ಲದೆ ದೂರದಾರರೆನಿಸಕೊಂಡ ಮತ್ತು ದೌರ್ಜನ್ಯಕ್ಕೆ ಒಳಗಾದವರೆನಿಸಿಕೊಂಡ ದಲಿತರೂ ಸಹ ಪ್ರಕರಣಗಳನ್ನು ದಾಖಲು ಮಾಡಿ ಪರಿಹಾರ ಪಡೆದನಂತರ ಇಡೀ ಪ್ರಕರಣದ ಬಗ್ಗೆ ಆಸಕ್ತಿಯನ್ನೇ ತೋರದೆ ಕೆಲಸ ಮುಗಿಯಿತೆಂದು ಸುಮ್ಮನಿದ್ದುಬಿಡುತ್ತಿರುತ್ತಾರೆ.
ಈ ಕಾಯ್ದೆಯಡಿಯಲ್ಲಿ ದಲಿತರ ದೌರ್ಜನ್ಯ ಪ್ರಕರಣಗಳನ್ನು ಪರಿಭಾವಿಸುವುದರಲ್ಲಿಯೇ ಸಮಸ್ಯೆಗಳಿವೆ ಎನ್ನುವುದು ಒಂದೆಡೆಯಾದರೆ, ಮತ್ತೊಂದೆಡೆ ಹಳ್ಳಿಯ ದೀನರ ನಿಜವಾದ ಜಾತಿ ತಾರತಮ್ಯ ಅಥವಾ ಅಸ್ಪೃಷ್ಯತೆಯ ಆಚರಣೆಗಳ ಸಮಸ್ಯೆಗಳನ್ನು ಇದು ಹೇಗೆ ಪರಿಹರಿಸುತ್ತದೆ? ಎನ್ನುವ ಪ್ರಶ್ನೆ ಏಳುತ್ತದೆ. ಹೇಳಬೇಕೆಂದರೆ ಅಸ್ಪೃಷ್ಯತೆಯ ಆಚರಣೆಗಳ ಸಂದರ್ಭಕ್ಕಿಂತ ಅತಿಹೆಚ್ಚಾಗಿ ಈ ಕಾಯ್ದೆಯು ಬಳಕೆಯಾಗಿರುವುದೇ ಬೇರೆ ಸಂದರ್ಭಗಳಲ್ಲಿ. ಹಾಗಿದ್ದಪಕ್ಷದಲ್ಲಿ ಮಂತ್ರಿಗಳು ಮತ್ತು ಬುದ್ಧಿಜೀವಿ ವರ್ಗಗಳು ಈ ಕಾಯ್ದೆಯು ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತಿಲ್ಲ, ಈ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಯಾಗುವವರ ಪ್ರಮಾಣ ಅತ್ಯಂತ ಕಡಿಮೆ ಇದೆಯೆಂದು ಕಳವಳ ಪಡುವುದರ ಹಿಂದೆ ಯಾವ ವಾಸ್ತವ ಸಮಸ್ಯೆಯ ಕಾಳಜಿ ಇದೆ?
ವರದಿಯಲ್ಲಿನ ಅಂಕಿ-ಅಂಶಗಳ ಪ್ರಕಾರ ಇವರದು ವಾಸ್ತವ ಸಮಸ್ಯೆಯ ಕುರಿತ ಕಾಳಜಿ ಎಂಬುದಕ್ಕೆ ಪುರಾವೆಗಳೇ ಕಾಣುವುದಿಲ್ಲ. ಹಾಗಿದ್ದರೆ, ಈ ಕಾಳಜಿಯ ಮೂಲ ಬೇರೆಡೆಯಿಂದ ರೂಪುಗೊಳ್ಳುತ್ತಿದೆ ಎನಿಸುತ್ತದೆ. ಮುಖ್ಯವಾಗಿ, ಈ ಕಾಳಜಿಯು ಮಾಧ್ಯಮವಲಯ ಮತ್ತು ಭಾರತೀಯ ಸಾಮಾಜಿಕ ಚಿತ್ರಣಗಳಲ್ಲಿ ಸಾಮಾನ್ಯ ಜ್ಞಾನವಾಗಿರುವ ಜಾತಿವ್ಯವಸ್ಥೆಯ ಕರಾಳ ಮುಖಗಳ ಕುರಿತು ತುಂಬಿಕೊಂಡಿರುವ ಸ್ಟಿರಿಯೋಟೈಪುಗಳಿಂದ ಹುಟ್ಟಿದ ಕಾಳಜಿಯಾಗಿರುವಂತಿದೆ.
ಜಾತಿವ್ಯವಸ್ಥೆಯ ಸ್ಟಿರಿಯೋಟೈಪುಗಳು ಮತ್ತು ಜಾತಿ ಸಂಘರ್ಷಗಳ ಸಾಮಾನ್ಯ ಜ್ಞಾನ
ದಲಿತ ಜಾತಿಗಳ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ, ಈ ಲೇಖನದ ಆರಂಭದಲ್ಲಿ ಉಲ್ಲೇಖವಾಗಿರುವ ಪತ್ರಿಕಾ ವರದಿಗಳೂ ಒಳಗೊಂಡಂತೆ, ಸಾಮಾನ್ಯವಾಗಿರುವ ಗ್ರಹಿಕೆ ಏನೆಂದರೆ ಈ ರೀತಿಯ ಜಾತಿ ದೌರ್ಜನ್ಯಗಳನ್ನು ಮೇಲ್ಜಾತಿಯವರು ಮಾಡುತ್ತಾರೆ ಎಂಬುದು. (ಬಹುಮುಖ್ಯವಾಗಿ ಗುರುತಿಸಬೇಕಾದ ಅಂಶವೆಂದರೆ ಭಾರತೀಯ ಸಮಾಜದಲ್ಲಿರುವ ದಲಿತೇತರ ವರ್ಗದವರನ್ನೆಲ್ಲಾ ಸವರ್ಣೀಯರೆಂಬ ಪದದಿಂದಲೇ ಗುರುತಿಸಲಾಗುತ್ತದೆ). ಅತ್ಯಾಚಾರ, ಬಡಿತ, ಕೊಲೆ, ಸಾರ್ವಜನಿಕ ಸೇವೆಗಳನ್ನು ಪಡೆಯಲು ಕೆಲವು ಜಾತಿಗಳಿಗೆ ಸೇರಿದವರಿಗೆ ನಿರಾಕರಿಸುವುದು ಮುಂತಾದುವುದಗಳೆಲ್ಲವನ್ನೂ ಮೇಲ್ಜಾತಿಯವರಿಂದಾದ (ಸವರ್ಣೀಯರು) ಹಿಂಸೆಗಳು ಎಂಬಂತೆ ಚಿತ್ರಿಸಲಾಗುತ್ತದೆ. ನಿಜ, ಇವೆಲ್ಲವೂ ಕೆಲವು ಜನ ಅಥವಾ ಗುಂಪಿನ ಜನರು ಇತರೆಯವರ ಮೇಲೆ ಮಾಡಿದ ಅಪರಾಧಗಳೇ. ಆದರೆ, ಇವೆಲ್ಲವೂ ಇಲ್ಲಿಯ ಸಾಮಾಜಿಕ ರಚನೆಯಾದ ‘ಜಾತಿವ್ಯವಸ್ಥೆ’ಯಲ್ಲಿ ಬೇರೂರಿರುವ ವ್ಯವಸ್ಥಿತವಾದ ದೌರ್ಜನ್ಯಗಳೇ? ಸಮಾಜವಿಜ್ಞಾನಗಳಲ್ಲಿನ ಸಾಹಿತ್ಯಗಳಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಗಳನ್ನು ವಿವರಿಸಲು ಬಳಸಿರುವ ಹೇಳಿಕೆಗಳಲ್ಲಿ ಕೆಲವನ್ನು ನೋಡೋಣ:
- ಮೇಲ್ಜಾತಿಯವರು ವೈಚಾರಿಕತೆಗೆ ವಿರುದ್ಧವಾಗಿದ್ದಾರೆ.
- ಮೇಲ್ಜಾತಿಯವರು ಸಸ್ಯಹಾರಿಗಳು
- ಮೇಲ್ಜಾತಿಯವರು ತಮ್ಮ ಮೇಲ್ಮೆಯನ್ನು ಕಾಯ್ದುಕೊಳ್ಳಲು ಜಾತಿವ್ಯವಸ್ಥೆ ಮತ್ತು ಹಿಂದೂಯಿಸಂ ಅನ್ನು ರಕ್ಷಿಸುತ್ತಿದ್ದಾರೆ.
- ಹಿಂದೂ ಮೇಲ್ಜಾತಿಯವರು ಕೆಳಜಾತಿಯವರೊಡನೆ ಕ್ರೂರವಾಗಿ ವರ್ತಿಸುತ್ತಾರೆ.
- ಬ್ರಾಹ್ಮಣ ಜಾತಿಯವರು ರಾಜಕೀಯವಾಗಿ ಬಲಿಷ್ಟರು.
- ಕೆಳಜಾತಿ/ದಲಿತರು ರಾಜಕೀಯ, ಆರ್ಥಿಕ, ಮತ್ತು ಇತರೇ ಸ್ವಾತಂತ್ರಗಳಿಂದ ವಂಚಿತರಾಗಿದ್ದಾರೆ.
- ಕೆಳಜಾತಿ/ದಲಿತರು ಚರಿತ್ರೆಯುದ್ದಕ್ಕೂ ಶೋಷಿತ ಸಮುದಾಯದವರು.
- ಕೆಳಜಾತಿಯವರು ಮೇಲ್ಜಾತಿಯವರ ಬಿಟ್ಟಿ ಗುಲಾಮರು
- ಕೆಳಜಾತಿಯವರನ್ನು ಮಾನವ ಮಲ ಮತ್ತು ಮೂತ್ರ ಸೇವಿಸುವಂತೆ ಬಲಾತ್ಕರಿಸುತ್ತಾರೆ.
- ಕೆಳಜಾತಿಯವರು ಮೇಲ್ಜಾತಿಯವರ ಅನುವಂಶೀಯ ಗುಲಾಮರು.
- ಕೆಳಜಾತಿಯವರು ಪರಾವಲಂಬಿ ಸಮುದಾಯದವರು.
- ಕೆಳಜಾತಿಯವರು ಸಾಮಾಜಿಕವ್ಯವಸ್ಥೆಯಲ್ಲಿ ಅತ್ಯಂತ ಕೆಳಹಂತದಲ್ಲಿದ್ದಾರೆ.
- ಕೆಳಜಾತಿಯವರು ಅಜ್ಞಾನಿಗಳು
- ಕೆಳಜಾತಿಯವರು ಅಂತ್ಯಜರು
- ಕೆಳಜಾತಿಯವರು ಹಕ್ಕುಗಳು, ಗೌರವ ಸಾಮಾಜಿಕ ಭದ್ರತೆ ಮುಂತಾದುವುಗಳಿಂದ ವಂಚಿತರು
- ಕೆಳಜಾತಿಯವರು ಶಿಕ್ಷಣಕ್ಕೆ ಅರ್ಹರಲ್ಲ
- ಕೆಳಜಾತಿಯವರು ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶಿಸುವಂತಿಲ್ಲ
- ಕೆಳಜಾತಿಯವರು ಮೇಲ್ಜಾತಿಯವರಿಗೆ ವಿಧೇಯರಾಗಿರಬೇಕು
- ಕೆಳಜಾತಿಯವರು ಮಾಂಸಾಹಾರಿಗಳು
- ಕೆಳಜಾತಿಯವರು ತುಳಿತಕ್ಕೊಳಗಾದವರು
- ಕೆಳಜಾತಿಯವರು ಅಮಾನವೀಯವಾಗಿ ಪರಿಗಣಿಸಲ್ಪಟವರು
- ಕೆಳಜಾತಿಯವರು ಒಳ್ಳೆಯ ಬಟ್ಟೆ, ಚಿನ್ನ, ಮತ್ತಿತರ ಬೆಲೆಬಾಳುವ ಒಡವೆಗಳನ್ನು ಧರಿಸುವಂತಿಲ್ಲ
- ಕೆಳಜಾತಿಯ ಮಹಿಳೆಯರು ಮೇಲ್ಜಾತಿಯವರಿಂದ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದವರು
- ಕೆಳಜಾತಿಯವರು ಆಸ್ತಿ ಹೊಂದುವಂತಿಲ್ಲ
- ಕೆಳಜಾತಿಯವರು ರಾಜಕಾರಣದ ಬಗ್ಗೆ ಜ್ಞಾನ ಹೊಂದಿರುವುದಿಲ್ಲ
- ಕೆಳಜಾತಿಯವರು ರಾಜಕೀಯವಾಗಿ ಬಲಿಯಾಗಿರುವವರು
ಇವು ಭಾರತೀಯ ಸಮಾಜವನ್ನು ಅರ್ಥಮಾಡಿಕೊಳ್ಳಲು ಬಳಸಲ್ಪಟ್ಟಿರುವ ‘ಜಾತಿವ್ಯವಸ್ಥೆ’ಯ ಚೌಕಟ್ಟಿನಿಂದ ಹುಟ್ಟಿದ ಸ್ಟೀರಿಯೋಟೈಪುಗಳ ಚಿತ್ರಣಗಳು. ಈ ರೀತಿಯ ಚಿತ್ರಣದಲ್ಲಿ ಸಮಸ್ಯೆಗಳ ಸರಣಿಯೇ ಇದೆ.
ಓರ್ವ ಜಾತಿವ್ಯವಸ್ಥೆಯ ಬಗ್ಗೆ ಮಾತನಾಡಬೇಕೆಂದರೆ ‘ಹಿಂದೂಯಿಸಂನ ಡಾಕ್ಟ್ರಿನ್’ಗಳ ಬಗ್ಗೆ ಅನಿವಾರ್ಯವಾಗಿ ಉಲ್ಲೇಖಿಸಲೇಬೇಕು. ಒಂದು ವೇಳೆ ಹಿಂದೂಯಿಸಂ ಎಂಬ ರಿಲಿಜನ್‍ನ ಬಗ್ಗೆ ಮಾತನಾಡಲು ಜಾತಿವ್ಯವಸ್ಥೆ ಬೇಕೇಬೇಕು ಎಂದಾದಲ್ಲಿ, ಅದೇ ಹಿಂದೂ ರಿಲಿಜನ್ನು ಜಾತಿವ್ಯವಸ್ಥೆಯು ಇತರೇ ಸಾಮಾಜಿಕ ವ್ಯವಸ್ಥೆಗಳಿಗಿಂತ ಭಿನ್ನವೆಂದು ಗುರುತಿಸಲು ಮಾನದಂಡವಾಗಿ ಕೆಲಸ ಮಾಡದು. ಜಾತಿಯನ್ನು ಉಲ್ಲೇಖಿಸದೆ ಹಿಂದೂಯಿಸಂನ್ನು ಗುರುತಿಸುವುದು ಅಸಾಧ್ಯ.; ಹಿಂದೂಯಿಸಂ ಅನ್ನು ಉಲ್ಲೇಖಿಸದೆ ಜಾತಿವ್ಯವಸ್ಥೆಯನ್ನು ಗುರುತಿಸುವುದು ಸಾಧ್ಯವಿಲ್ಲ. ಇದರ ಫಲವಾಗಿ, ಜಾತಿಯ ಕುರಿತು ಕೆಲವು ಸ್ಟೀರಿಯೋಟಿಪಿಕಲ್ ನಿರೂಪಣೆಗಳನ್ನು ನೀಡುತ್ತಾ ಬಂದಿರುವುದನ್ನು ಕಾಣುತ್ತೇವೆ. ಜಾತಿಯ ಕುರಿತ ಈ ಬರವಣಿಗೆಗಳು ಪ್ರತಿಯೊಂದು ಜಾತಿಗಳೂ ತಮ್ಮದೇ ಆದ ನಿರ್ದಿಷ್ಟ ಲಕ್ಷಣಗಳನ್ನು ಹೊಂದಿರುತ್ತವೆ ಎಂದು ಉಲ್ಲೇಖಿಸುತ್ತವೆ: ‘ಕೆಲವು ಜಾತಿಗಳು ಧೈರ್ಯಶಾಲಿಗಳು’ (ರಜಪೂತರು ಮರಾಠರು); ‘ಕೆಲವು ಜಾತಿಯವರು ಜಿಪುಣರು’ (ಶೆಟ್ಟಿ, ವಣ್ಣಿಯಾರ್, ಮಾರ್ವಾಡಿಗಳು); ‘ಕೆಲವು ಜಾತಿಯವರು ಮೋಸಗಾರರೂ ಮತ್ತು ಶೋಷಕರು (ವಿಭಿನ್ನ ಬ್ರಾಹ್ಮಣ ಜಾತಿಯವರು) ‘ಕೆಲವು ಜಾತಿಯವರು ಗುಲಾಮಗಿರಿಯರು (ಹೊಲೆಯರು, ಮಾದಿಗರು, ಪರಯರು ಮುಂತಾದವರು) ಈ ರೀತಿಯಲ್ಲಿ ಪ್ರತಿಯೊಂದು ಜಾತಿಗೂ ಒಂದು ನಿರ್ದಿಷ್ಟ ಗುಣಲಕ್ಷಣಗಳನ್ನು ಆರೋಪಿಸುವ ವಿಧಾನವು ಜಾತಿಘರ್ಷಣೆಗಳ ಸ್ವರೂಪದ ಬಗ್ಗೆ ಒಂದು ರ್ದಿಷ್ಟ ರೀತಿಯಲ್ಲೇ ಅರ್ಥೈಸಿಕೊಳ್ಳುವ ಒತ್ತಡ ಹೇರುತ್ತವೆ. ಈ ರೀತಿಯ ಸ್ಟೀರಿಯೋಟಿಪಿಕಲ್ ಅರ್ಥವಿವರಣೆಗಳ ಪ್ರಕಾರ ಮೇಲ್ಜಾತಿಯವರು ಕೆಳಜಾತಿಯವರ ಮೇಲೆ ದೌರ್ಜನ್ಯಗಳನ್ನು ಮಾಡುತ್ತಿರುತ್ತಾರೆ.
ಈ ರೀತಿಯಲ್ಲಿ ಗುಣವಿಶೇಷಣಗಳ ಆಧಾರದಲ್ಲಿ ಜನರನ್ನು ವಿಭಜಿಸುವ ಬಗ್ಗೆ ಮಾತನಾಡುವುದು ಮೇಲಿನ ರೀತಿಯ ಭಾರತೀಯ ಸಮಾಜದ ಕುರಿತ ಸ್ಟೀರಿಯೋಟೈಪಿಕಲ್ ಅರ್ಥನಿರೂಪಣೆಗಳಿಂದಲೇ ಹುಟ್ಟಿದೆ. ಮೂಲತಃ ಈ ರೀತಿಯ ಜಾತಿವ್ಯವಸ್ಥೆ ಮತ್ತು ಹಿಂದೂಯಿಸಂನ ಚೌಕಟ್ಟನ್ನು ವಸಾಹತು ನಿರೂಪಣೆಗಳು ಬಳಸುವ ಮೂಲಕ ಅವು ಮೇಲ್ಜಾತಿ ಮತ್ತು ಕೆಳಜಾತಿಯ ವಿಭಜನೆಯ ಬಗ್ಗೆ ಈ ರೀತಿಯ ಅಸ್ಪಷ್ಟ ವಿವರಣೆಗೆ ಕೊಡುಗೆ ನೀಡಿವೆ. ಎಲ್ಲಾ ದಲಿತೇತರರನ್ನು ಸವರ್ಣೀಯರೆಂಬುದಾಗಿಯೂ ಮತ್ತು ದಲಿತರನ್ನು ಅವರ್ಣೀಯ(ಅಂತ್ಯಜ)ರೆಂಬುದಾಗಿಯೂ ಗುರುತಿಸುವುದೂ ಸಹ ಇದೇ ಕಥೆಯ ಒಂದು ಭಾಗ.
ಜಾತಿ ವ್ಯವಸ್ಥೆ ಮತ್ತು ದಲಿತರ ಮೇಲಿನ ದೌರ್ಜನ್ಯ
ಭಾರತೀಯ ಸಮಾಜದ ಚಿತ್ರಣವೆಂದು ಬೌದ್ಧಿಕವಲಯದಲ್ಲಿ ಸಾಮಾನ್ಯವಾಗಿ ಜನಜನಿತವಾಗಿರುವ ಈ ಕಥೆಯನ್ನೊಮ್ಮೆ ನೋಡುವ: ಭಾರತೀಯ ಸಮಾಜದಲ್ಲಿರುವ ವಿಭಿನ್ನ ಜಾತಿಸಮುದಾಯಗಳು ಒಂದು ವ್ಯವಸ್ಥೆಯನ್ನು ಒಪ್ಪಿಕೊಂಡು ಅನುಸರಣೆ ಮಾಡುತ್ತಿವೆ, ಆ ವ್ಯವಸ್ಥೆಯು ಜಾತಿಗಳನ್ನು ಮೇಲ್ಜಾತಿ ಕೆಳಜಾತಿಗಳೆಂಬಂತೆ ಶ್ರೇಣೀಕರಣವಾಗಿ ವಿಂಗಡಿಸುತ್ತದೆ ಮತ್ತು ಎಂದೆಂದಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿಯೂ ಸಹ ಮೇಲ್ಜಾತಿಗಳಿಗೆ ಅನುಕೂಲ ವಾಗುವಂತೆಯೇ ನಿರ್ವಹಿಸಿಕೊಂಡು ಹೋಗುತ್ತಿರುತ್ತದೆ. ಕೆಳಜಾತಿಗಳು ಮೇಲ್ಜಾತಿಗಳಿಗೆ ವಿಧೇಯತೆಯನ್ನು ಮತ್ತು ಎಂದೆಂದಿಗೂ ಕೆಳಹಂತದ ಸ್ಥಾನವನ್ನು ಏಕೆ ಮತ್ತು ಹೇಗೆ ಒಪ್ಪಿಕೊಂಡವು? ಏಕೆಂದರೆ, ಈಗ ಅಸ್ತಿತ್ವದಲ್ಲಿರುವ ಕಥೆ ಹೇಳುತ್ತದೆ, ಈ ರೀತಿಯ ನಿಯಮಗಳು ಭಾರತೀಯ ರಿಲಿಜನ್ ಆದ ಹಿಂದೂಯಿಸಂನಲ್ಲಿ ಬೇರೂರಿದೆ. ಭಾರತೀಯ ಜಾತಿವ್ಯವಸ್ಥೆಯು ಹಿಂದೂಯಿಸಂ ಅನ್ನು ಆಧರಿಸಿರುವುದರಿಂದ ಭಾರತೀಯರು ಅದನ್ನು ಅನುಸರಿಸಲೇಬೇಕು. ಬ್ರಾಹ್ಮಣ ಪುರೋಹಿತರು ಈ ರಿಲಿಜನ್ನಿನ ಪವಿತ್ರಗ್ರಂಥಗಳನ್ನು ಅರ್ಥೈಸುವ ಮೂಲಕ ವಿಭಿನ್ನ ಜಾತಿಗಳಿಗೆ ವಿಭಿನ್ನ ಸ್ಥಾನಮಾನವನ್ನು ನಿರ್ಧರಿಸುತ್ತಿರುತ್ತಾರೆ. ಅವರು ಅವನ್ನು ಹೇಗೆ ಅರ್ಥೈಸುವರೆಂದರೆ, ಯಾವಾಗಲೂ ಈ ಸಾಮಾಜಿಕ ರಚನೆಯಲ್ಲಿ ತಮ್ಮ ಜಾತೀಯೇ ಅತ್ಯುನ್ನತ ಸ್ಥಾನದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಇದು ಅತ್ಯಂತ ಕಠಿಣವಾದ ವ್ಯವಸ್ಥೆಯ ಉಗಮಕ್ಕೆ ಕಾರಣವಾಯಿತು, ಅದೇ ‘ಜಾತಿವ್ಯವಸ್ಥೆ’.
ಇದು ಬ್ರಾಹ್ಮಣರು ಅತ್ಯಂತ ಮೇಲಿನ ಮತ್ತು ಅಂತ್ಯಜರು ಅಥವಾ ಅಸ್ಪೃಷ್ಯರು ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ಸಾಮಾಜಿಕ ಶ್ರೇಣೀಕರಣಕ್ಕೆ ಕಾರಣವಾಯಿತು.ಈ ಶ್ರೇಣೀಕರಣ ವ್ಯವಸ್ಥೆಯಲ್ಲಿ ಪ್ರತಿಯೊಂದು ಜಾತಿಯ ಸ್ಥಾನವನ್ನು ಶುದ್ಧ ಮತ್ತು ಅಶುದ್ಧತೆಯ ಆಧಾರದಲ್ಲಿ ನಿರ್ಧರಿಸಲಾಗುತ್ತದೆ ಮತ್ತು ಅವರ ಈ ರೂಢಿ-ಆಚರಣೆಯ ಸ್ಥಾನಮಾನದ ಆಧಾರದಲ್ಲಿ ಪ್ರತಿಯೊಂದು ಜಾತಿಯೂ ಸಾಮಾಜಿಕ, ಧಾರ್ಮಿಕ, ರಾಜಕೀಯ, ಮತ್ತು ಆರ್ಥಿಕ ಹಕ್ಕುಗಳನ್ನು ಅನುಭೋಗಿಸುತ್ತವೆ. ಇಷ್ಟೇ ಅಲ್ಲದೆ,ಈ ಸಾಮಾಜಿಕ ಶ್ರೇಣೀಕರಣದಲ್ಲಿ ಕಡಿಮೆ ಅಂತಸ್ತನ್ನು ಪಡೆದಷ್ಟೂ ಹಕ್ಕುಗಳೂ ಕಡಿಮೆಯಾಗುತ್ತವೆ ಎನ್ನಲಾಗುತ್ತದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜಾತಿಯ ಗುರುತು ಉದ್ಯೋಗ, ಮತ್ತು ಸ್ಥಾನಮಾನಗಳು ಹುಟ್ಟಿನಿಂದಲೇ ನಿರ್ಧರಿಸಲ್ಪಟ್ಟು ಅವು ಆತನ/ಳ ಮರಣದವರೆಗೂ ಉಳಿದುಕೊಂಡಿರುತ್ತವೆ.
ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಣ ಸಂಬಂಧವು ಒಂದು ರೀತಿಯಲ್ಲಿ ಮೇಲಧಿಕಾರ ಮತ್ತು ಕೆಳಗಿನ ಆಧಿಕಾರದ ರೀತಿಯ ಸಂಬಂಧವಾಗಿದೆ. ಹೀಗಾಗಿ, ಮೇಲ್ಜಾತಿ ಮತ್ತು ಕೆಳಜಾತಿಗಳಿಗೆ ಸೇರಿದ ವ್ಯಕ್ತಿಗಳ ನಡುವಣ ಅಥವಾ ಗುಂಪುಗಳ ನಡುವೆ ನಡೆಯುವ ಯಾವುದೇ ರೀತಿಯ ಜಗಳಗಳನ್ನು ಅಟ್ರಾಸಿಟಿ ಎಂದೇ ಬಿಂಬಿಸಲಾಗುತ್ತದೆ. ಜಾತಿವ್ಯವಸ್ಥೆಯನ್ನು ಸಮರ್ಥಿಸುವ ಮತ್ತು ಅಧಿಕಾರಬದ್ಧಗೊಳಿಸುವ ತಮ್ಮ ಪವಿತ್ರಗ್ರಂಥಗಳನ್ನು ಬಳಸಿಕೊಂಡು ಈ ರೀತಿಯ ಅಸಮಾನ ಮತ್ತು ಅನ್ಯಾಯಯುತವಾದ ಸಂಬಂಧವನ್ನು ಶತಶತಮಾನಗಳಿಂದಲೂ ಹಿಂದೂಗಳು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಅನಿವಾರ್ಯ ತೀರ್ಮಾನ: ಎಲ್ಲಿಯವರೆಗೆ ‘ಜಾತಿವ್ಯವಸ್ಥೆ’ ಇರುತ್ತದೆಯೋ ಅಲ್ಲಿಯವರೆಗೆ ಅಟ್ರಾಸಿಟಿಗಳೂ ಮುಂದುವರಿಯುತ್ತವೆ.
ಮೂಲತಃ ಈ ಕಾಯ್ದೆಯು ರೂಪುಗೊಂಡಿದ್ದೂ ಕೂಡ ಈ ಜಾತಿವ್ಯವಸ್ಥೆಯ ಚಿತ್ರಣವನ್ನಾದರಿಸಿದ ಕಥನಗಳಲ್ಲಿನ ಘಟನೆಗಳನ್ನಾಧರಿಸಿಯೇ. ಹಾಗಾಗಿ ಈ ಕಾಯ್ದೆಯಿಂದ ದೊರೆಯಬಹುದಾದ ನ್ಯಾಯ ಆ ರೀತಿಯ ಕಥನಗಳಲ್ಲಿ ಬರುವ ಘಟನೆಗಳು ಸಮಾಜದ ವಾಸ್ತವದಲ್ಲಿ (ಅಂದರೆ ಜಾತಿವ್ಯವಸ್ಥೆ ಅಸ್ತಿತ್ವದಲ್ಲಿದ್ದು ಅದರ ಪರಿಣಾಮವಾಗಿ ದೌರ್ಜನ್ಯಗಳು) ನಡೆದಾಗ ದೊರೆಯಬಹುದೇ ವಿನಃ ಹಾಗಿಲ್ಲದಿದ್ದ ಪಕ್ಷದಲ್ಲಿ ಆ ನ್ಯಾಯ ದೊರೆಯಲು ಸಾಧ್ಯವಿಲ್ಲ. ಮಾತ್ರವಲ್ಲ ಈ ಜಾತಿವ್ಯವಸ್ಥೆಯ ಚೌಕಟ್ಟಿನಿಂದಾಗಿ ಬೇರೆ ಘಟನೆಗಳನ್ನು ಸಹ ದೌರ್ಜನ್ಯದ ಘಟನೆಗಳೆಂದು ಪರಿಭಾವಿಸಿ, ಪರಿಹರಿಸಲು ಮುನ್ನೆಡೆದರೆ ಅದರ ದುರುಪಯೋಗ ವಾಗಬಹದು; ಇಲ್ಲವೇ ದಲಿತರೇ ಈ ಪ್ರಕರಣಗಳನ್ನು ದಾಖಲು ಮಾಡಿ ನಂತರ ಉಪೇಕ್ಷಿಸಬಹುದು. ವಾಸ್ತವವಾಗಿ ಇವೆರೆಡೂ ನಡೆಯುತ್ತಿವೆ ಎನ್ನುವುದನ್ನು ಈ ವರದಿ ತೋರಿಸುತ್ತಿದೆ.
ಒಟ್ಟಾರೆಯಾಗಿ ಈ ಮೇಲಿನ ವಿಶ್ಲೇಷಣೆಯಿಂದ ಕೆಲವು ಮಹತ್ವದ ಅಂಶಗಳು ಕಂಡುಬರುತ್ತವೆ:
- ದಲಿತ ಜಾತಿಗಳವರು ದಾಖಲಿಸಿರುವ ಪ್ರಕರಣಗಳಲ್ಲಿ ಹೆಚ್ಚಿನವು ಅಸ್ಪೃಷ್ಯತೆಯ ಆಚರಣೆಯ ವಿಚಾರಕ್ಕಿಂತ ಮಿಗಿಲಾಗಿ ಬೇರೆ ಇನ್ನಿತರ ಯಾವ್ಯಾವುದೋ ಕಾರಣಗಳಿಂದ ಉಂಟಾದ ಜಗಳಗಳನ್ನೂ ದೌರ್ಜನ್ಯ ಕಾಯಿದೆಯಡಿಯಲ್ಲಿ ದಾಖಲಾಗುತ್ತಿರುವುದು ವೇದ್ಯವಾಗುತ್ತದೆ.
- ಈ ಪ್ರಕರಣಗಳ ಸಂದರ್ಭಗಳಲ್ಲಿ ಒಂದೊಮ್ಮೆ ಮೊಕದ್ದಮೆಯನ್ನು ದಾಖಲಿಸಿಯಾದ ಮೇಲೆ ಅನ್ಯಾಯಕ್ಕೊಳಗಾದವರೆನಿಸಿಕೊಂಡವರು ಇಲ್ಲಿ ಪರಿಹಾರಗಳನ್ನು ಪಡೆದು ಸುಮ್ಮನಾಗಿಬಿಡುತ್ತಾರೆ. ಅವರಿಗೆ ಈ ಪ್ರಕರಣವನ್ನು ಮುಂದುವರಿಸಿ ಈ ಕಾನೂನಿನಿಂದ ನ್ಯಾಯ ಪಡೆಯುವ ಉದ್ದೇಶವಿಲ್ಲ. ಅಂದರೆ ಈ ಕಾನೂನನ್ನು ಬಳಸಿಕೊಂಡು ತಮ್ಮ ದಲಿತ ಸಮಸ್ಯೆಯ ಪರಿಹರಿಸಿಕೊಳ್ಳಬೇಕೆಂಬ ಭಾವನೆ ಇವರಿಗಿಲ್ಲ.
- ಈ ಕಾನೂನಿನಡಿ ಪ್ರಕರಣ ದಾಖಲಿಸಿ ಆರ್ಥಿಕ ಪರಿಹಾರ ಪಡೆದಾಕ್ಷಣ ತಮ್ಮ ಸಮಸ್ಯೆ ಇಲ್ಲಿಗೆ ಮುಗಿಯೆಂತೆಂಬಂತೆ ವ್ಯವಹರಿಸುವ ಪ್ರಕರಣದ ಕುರಿತ ಇವರ ಅನಾಸಕ್ತಿಯನ್ನು ಗಮನಿಸಿದರೆ ಹಣಪಡೆಯುವುದಷ್ಟೇ ಈ ಕಾನೂನಿನಿಂದ ದೊರೆಯಬಹುದಾದ ಪರಿಹಾರ ಎಂಬಂತೆ ಇವರು ಭಾವಿಸಿದಂತಿದೆ. ಹಾಗಾಗಿ ದಲಿತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಇನ್ನೂ ಹೆಚ್ಚಿನ ಪರಿಹಾರಗಳು ಸರ್ಕಾರದಿಂದ ದೊರೆಯಬೇಕೆನ್ನುವ ಇಂಗಿತ ಮತ್ತು ನೀಡಿರುವ ಪರಿಹಾರ ಸಾಲದೆಂಬ ಅತೃಪ್ತಿ ಇವರಲ್ಲಿದೆ.ಈ ಕುರಿತ ಬೇಡಿಕೆಗಳ ಒತ್ತಡಕ್ಕೂ ಕರ್ನಾಟಕ ಸರ್ಕಾರವು ಮಣಿದು ಜುಲೈ-2012 ರಿಂದ ಅನ್ವಯವಾಗುವಂತೆ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರದ ಮೊತ್ತವನ್ನು ಕನಿಷ್ಟ ರೂ. 60,000 ದಿಂದ ಗರಿಷ್ಟ ರೂ. 2,50,000 ವರೆಗೆ ನೀಡಲು ತೀರ್ಮಾನಿಸಿರುವುದು.ಇದನ್ನು ನೋಡಿದರೆ ದಲಿತರ ಬೇಡಿಕೆ ಮತ್ತು ಸರ್ಕಾರದ ಪ್ರತಿಸ್ಪಂದನಗಳೆರಡೂ ದಲಿತರ ಸಮಸ್ಯೆಗಳಿಗೆ ಆರ್ಥಿಕ ಪರಿಹಾರ ನೀಡಿಕೆಯನ್ನೇ ಕೇಂದ್ರವಾಗಿರಿಸಿ ಕೊಂಡಿರುವುದು ಗೋಚರವಾಗುತ್ತದೆ.
- ಪರಿಹಾರದ ಪ್ರಲೋಭನೆಯಿಂದ ದಲಿತ ಜಾತಿಗಳವರು ಸಣ್ಣಪುಟ್ಟ ಜಗಳಗಳನ್ನೂ ಮತ್ತು ಇನ್ನಿತರ ಯಾವುದೋ ಕಾರಣಗಳಿಗಾಗಿ ಹುಟ್ಟಿಕೊಳ್ಳುವ ಜಗಳಗಳನ್ನು ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳೆಂದು ಬಿಂಬಿಸಿ ದಾಖಲಿಸುವ ಪ್ರವೃತ್ತಿ ಇರುವುದನ್ನು ಈ ವರದಿಯೇ ಉಲ್ಲೇಖಿಸುತ್ತದೆ.ಪರಿಹಾರದ ಹೆಚ್ಚಳವು ಈ ರೀತಿಯ ಪ್ರವೃತ್ತಿಯನ್ನು ಇನ್ನೂ ಹೆಚ್ಚಿಸಬಹುದೇ ವಿನಃ ಕಡಿಮೆ ಮಾಡಲಾರದು.
- ವರದಿಯೇ ಉಲ್ಲೇಖಿಸುವುಂತೆ ಹಳ್ಳಿಗಳಲ್ಲಿನ ಸಾಮಾಜಿಕ ಸ್ವಾಸ್ಥ್ಯಗಳನ್ನು ಕೆಡಿಸುವಲ್ಲಿ ಈ ಪ್ರಕರಣಗಳು ತಮ್ಮದೇ ಕೊಡುಗೆಯನ್ನು ನೀಡುತ್ತಿವೆ. ಸಣ್ಣಪುಟ್ಟ ಕಾರಣಗಳಿಗೆ ಜನರ ನಡುವೆ ವೈಮನಸ್ಯಗಳು ತಲೆದೋರಿದಾಗ ಅಂತವುಗಳನ್ನು ಈ ಕಾಯಿದೆಯಡಿ ಪ್ರಕರಣ ದಾಖಲಿಸಿದಾಗ ಎರಡೂ ಕಡೆಯವರ ನಡುವಿನ ದ್ವೇಷ ದೊಡ್ಡಮಟ್ಟಕ್ಕೆ ಬೆಳೆಯುವಂತಾಗುತ್ತದೆ. ಜನಸಮುದಾಯಗಳ ನಡುವಿನ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಂವಹನದ ಸಾದ್ಯತೆಗಳು ಮುಚ್ಚಿಕೊಳ್ಳುತ್ತಾ ಸಾಗಿ ಒಂದು ಹಂತದ ನಂತರ ಸಮುದಾಯಗಳ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿಬಿಡುತ್ತದೆ.
- ದಲಿತ ಸಮಸ್ಯೆಗಳು ಮತ್ತು ದಲಿತೇತರ ಸಮಸ್ಯೆಗಳಾವುವು ಎನ್ನುವ ಕುರಿತ ಅಸ್ಪಷ್ಟತೆಯೂ ಕೂಡ ಈ ಕಾಯ್ದೆಯ ಬಳಕೆಯ ಸ್ವರೂಪದಲ್ಲಿ ತಿಳಿಯುತ್ತದೆ. ಅಂದರೆ ದಲಿತ ಜಾತಿಗಳವರು ಮತ್ತು ಇತರೆ ಜಾತಿಗಳವರ ನಡುವಣ ಪ್ರಕರಣ ಎನ್ನುವ ಒಂದೇ ಅಂಶ ಈ ಕಾಯ್ದೆಯಡಿ ಮೊಕದ್ದಮೆ ದಾಖಲಾಗಲು ಇರುವ ಮಾನದಂಡವಾದಂತಿದೆ. ದಲಿತ ಜಾತಿಗಳು ಎದುರಿಸುವ ಯಾವ ಸಮಸ್ಯೆಗಳು ದಲಿತರಿಗೇ ವಿಶಿಷ್ಟವಾದ (ಅಂದರೆ ಅಸ್ಪೃಷ್ಯತೆಯ ಆಚರಣೆಗಳ) ಸಮಸ್ಯೆಗಳೆಂಬ ಕುರಿತು ಇರುವ ಅಸ್ಪಷ್ಟತೆ ಇಲ್ಲಿನ ಕಾಯ್ದೆಯ ದುರ್ಬಳಕೆಯಲ್ಲಿ ಬಿಂಬಿತವಾಗುತ್ತದೆ.
- ಮಾಜಿ ಪ್ರಧಾನ ಮಂತ್ರಿ ಮತ್ತು ಮಾಜಿ ಸಮಾಜ ಕಲ್ಯಾಣ ಸಚಿವರ ಈ ಮೇಲಿನ ಕಾಳಜಿ ಮಾಧ್ಯಮ ವಲಯ ಮತ್ತು ಭಾರತೀಯ ಸಾಮಾಜಿಕ ಚಿತ್ರಣಗಳಲ್ಲಿ ಸಾಮಾನ್ಯ ಜ್ಞಾನವಾಗಿರುವ ಜಾತಿವ್ಯವಸ್ಥೆ ಕರಾಳ ಮುಖಗಳ ಸ್ಟೀರಿಯೋಟೈಪುಗಳಿಂದ ಹುಟ್ಟಿರುವಂತದ್ದಾಗಿರುವ ಸಾಧ್ಯತೆ ಇದೆ. ಮೂಲತಃ ಈ ಕಾಯಿದೆಯು ರೂಪಿತವಾಗಿದ್ದೂ ಕೂಡ ಈ ಜಾತಿವ್ಯವಸ್ಥೆಯ ಚಿತ್ರಣವನ್ನಾದರಿಸಿದ ಕಥನಗಳಲ್ಲಿನ ಘಟನೆಗನ್ನಾದರಿಸಿಯೇ.ಹಾಗಾಗಿ ಈ ಕಾಯಿದೆಯಿಂದ ದೊರೆಯಬಹುದಾದ ನ್ಯಾಯವು ಆ ರೀತಿಯ ಕಥನಗಳಲ್ಲಿ ಬರುವ ಘಟನೆಗಳು ಸಮಾಜದ ವಾಸ್ತವದಲ್ಲಿ ನಡೆದಾಗ ಮಾತ್ರವೇ ವಿನಃ ಅವು ವಾಸ್ತವದಲ್ಲಿ ನಡೆಯದಿದ್ದರೆ ಆ ನ್ಯಾಯ ದೊರೆಯದು. ಮಾತ್ರವಲ್ಲ ಬೇರೆ ಘಟನೆಗಳನ್ನು ಸಹ ಈ ಜಾತಿವ್ಯವಸ್ಥೆಯ ಚೌಕಟ್ಟಿನಡಿಯಲ್ಲಿನ ದೌರ್ಜನ್ಯದ ಘಟನೆಯೆಂದು ಪರಿಭಾವಿಸಿ ಪರಿಹರಿಸಲು ಮುನ್ನೆಡೆದರೆ ಅದರ ದುರುಪಯೋಗವಾಗಬಹದು; ಇಲ್ಲವೇ ದಲಿತರೇ ಈ ಪ್ರಕರಣಗಳನ್ನು ದಾಖಲು ಮಾಡಿ ನಂತರ ಉಪೇಕ್ಷಿಸಬಹುದು.
- ಹೆಚ್ಚಿನ ಸಂದರ್ಭಗಳಲ್ಲಿ ಈ ಜಗಳಗಳು ಸಾಮಾನ್ಯ ಸ್ವರೂಪದವುಗಳಾಗಿದ್ದು ದೌರ್ಜನ್ಯಗಳೆಂದು ಪರಿಗಣಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುತ್ತವೆ. ಆದರೆ ಸ್ಥಳೀಯ ರಾಜಕೀಯ ಮುಖಂಡರು, ದಲಿತ ಸಂಘಟನೆಯವರು ಮತ್ತು ಮೇಲ್ಮಟ್ಟದ ಅಧಿಕಾರಿಗಳು ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯ ಹೇರಿ ಪ್ರಕರಣ ದಾಖಲಿಸುವ ಅಂಶವನ್ನು ಪೋಲೀಸರು ತಿಳಿಸುವುದನ್ನು ಈ ವರದಿಯು ಉಲ್ಲೇಖಿಸುತ್ತದೆ.ಅಂದರೆ, ಕೆಲವು ಘಟನೆಗಳು ದಲಿತರ ಅನುಭವದಲ್ಲಿ ನಿಜವಾಗಿಯೂ ದೌರ್ಜನ್ಯವಾಗಿರದ ಸಾಧ್ಯತೆ ಇದ್ದು, ಇನ್ಯಾರದೋ ಕುಮ್ಮಕ್ಕಿನಿಂದ ಈ ರೀತಿಯ ಪ್ರಕರಣವನ್ನು ದಾಖಲಿಸಿದಂತೆ ಕಾಣುತ್ತದೆ. ಹಾಗಾಗಿಯೇ ಅವರು ನ್ಯಾಯಕ್ಕಿಂತ ಪರಿಹಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಇಲ್ಲಿ ಕಂಡುಬರುತ್ತಿದೆ.
ಪರಾಮರ್ಶೆ:
- Bhat H.K, (2008) “An Evaluation Study on the Atrocities and Compensation Given to Victims of Atrocities on Scheduled Castes in Karnataka” A Report Submitted to Dr. B. R. Ambedkar Research Institute, (Government of Karnataka ), Bangalore. http://planning.kar.nic.in/sites/planning.kar.nic.in/files/ Evaluation%20Studies/5%20Atrocities.pdf
- “Low conviction rate of cases under SC/ST Act ‘shocks’ PM,” Sep 7, 2009, Times of India http://articles.timesofindia.indiatimes.com/2009-09-07/india/28060941_1_conviction-rate-st-act-scs-and-sts)
- Suhas Chakma, “Combating caste violence”, Posted on 26 April 2012, http://www.tehelka.com/story_ main52.asp? filename=Fw260412Combating.asp
- Andre Beteeille (1995) “Caste class and Power changing patterns of Stratification in a Tanjore village” University Press: Oxford.
- Balagangadhara, S.N. (2007), “Stereotypes: A Theoretical Hypothesis”,Research Centre Vergelijkende Cultuurwetenschap, Apotheekstraat 5, Universiteit Gent 9000 Gent Belgium (http://www.devhas.org/forum/index.php?topic=11.0)
- Dirks (2001) “Castes of Mind”: Colonialism and the making of Modern India, Princeton, and University Press: Oxford.
- Javaraiah, M.N (1995) “Ambedkar and Social Justice” Pragathi publication.
- Kancha Ilaiah (2000) “God as political philosophers Buddha’s Challenge to Brahiminism” Samya publications, Kolkota, pp 159-174.
- Leela Dube (1996) “Caste and Women” in Srinivas M.N(Ed) Caste: Its 20th Century Avatar, Penguin, New Delhi.
- Mogalli Ganesh (1991) “Dalits and Globalisation”, Prasaranga Karnataka University, Hampi.
- OM Prakash Sangwan (1996) “Dalit Society and the challenge of Development” – Common wealth publications, New Delhi.
- Panini, M.N. (1996) “The Political Economy of caste” in Srinivas M.N. (Ed) Cast: Its 20th Century Awtar, Penguin New Delhi.
- Sharankumar Limbale (2004) “Towards on Aesthietic of Dalith Literature” from the Marathi by Alok Mukarjee Orient Longman publication, New Delhi.
- Sheth. D.L. (1999) “Secularisation of caste and the making of a new middle class” Economic and Political weekly, August 21-28.
- Sukhadeo Tharat (2004) “Hindu Social System and Human Rights of Dalits: Criticle quest publish, New Delhi.
- Surinder Jhodka (2002) “Nation and Village: Images of Rural India in Gandhi, Nehru, Ambedkar”, Economic and Political weekly, August 10.
- ಬಾಲಗಂಗಾಧರ, ಎಸ್. ಎನ್. (2010). ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ. ರಾಜಾರಾಮ ಹೆಗ್ಡೆ (ಅನು). ಹೆಗ್ಗೋಡು: ಅಕ್ಷರ ಪ್ರಕಾಶನ.
- ಬಾಲಗಂಗಾಧರ, ಎಸ್. ಎನ್. (2010). ಪೂರ್ವಾವಲೋಕನ. ಜೆ. ಎಸ್. ಸದಾನಂದ ಮತ್ತು ರಾಜಾರಾಮ ಹೆಗ್ಡೆ (ಸಂ). ಬೆಂಗಳೂರು: ಅಭಿನವ ಪ್ರಕಾಶನ.
ಷಣ್ಮುಖ ಅವರೆ ಹಾಗಾದರೆ ದಲಿತರ ಮೇಲೆ ನಡೆಯುವ ದೌರ್ಜನ್ಯ ಸುಳ್ಳು ಎಂದು ಹೇಳುತ್ತೀರೋ ಅಥವಾ ದೌರ್ಜನ್ಯಗಳು ನಡೆಯುತ್ತಿಲ್ಲವೆನ್ನುತ್ತೀರೋ ಅಥವಾ ಅವುಗಳನ್ನು ಅವರು( ದಲಿತರು) ದೌರ್ಜನ್ಯವೆಂದು ಪರಿಗಣಿಸುತ್ತಿಲ್ಲ ನಡುವಿನ ವ್ಯಕ್ತಿಗಳೇ ಅದನ್ನು ದೊಡ್ಡದು ಮಾಡುತ್ತಿದ್ದಾರೆನ್ನುತ್ತೀರೋ ನಿಮ್ಮ ಲೇಖನದ ಆಶಯ ನನಗರ್ಥವಾಗುತ್ತಿಲ್ಲ. ಇರಲಿ ಈಗಿನ ಕಾನೂನಿನಿಂದ ದಲಿತರ ದೌರ್ಜನ್ಯಗಳು ನಿಲ್ಲಲಾರವೆಂದರೆ ತಾವು ಎಂಥ ಕಾನೂನು ರೂಪಿಸಬೇಕೆಂದು ಸಲಹೆ ನೀಡಿಲ್ಲ. ಅದನ್ನಾದರೂ ಹೇಳಬೇಕಿತ್ತು. ನಿತ್ಯ ಪೇಪರಿನಲ್ಲಿ ಟಿ. ವಿ ಗಳಲ್ಲಿ ಇಂಥ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಬಾವಿಗಳಲ್ಲಿ ಕೆರೆಗಳಲ್ಲಿ ಕುಡಿಯುವ ನೀರಿಗೆ ಕಾವಲು ಹಾಕಿ ದಲಿತರು ಮುಟ್ಟದಂತೆ ನೋಡಿಕೊಳ್ಳುತ್ತಿರುವ ಪ್ರಸಂಗಗಳು ತಮಗೂ ಗೊತ್ತು. ಎಂಥ ಕಾನೂನಿಂದಾದರೂ ದಲಿತರ ಈ ದೌರ್ಜನ್ಯ ನಿಂತೀತು? ಇನ್ನೊಂದು ವಿಷ್ಯ ಎಂದರೆ ಕಾನೂನುಗಳು ಕೆಲವು ಸಲ ದುರುಪಯೋಗ ಆಗುವದು ನಮ್ಮಲ್ಲಿ ಸಾಮಾನ್ಯವಾಗಿದೆ. ಹಾಗಂತ ಆ ಕಾನೂನನ್ನೇ ನಿಲ್ಲಿಸಿ ಬಿಟ್ಟರೆ ದೌರ್ಜನ್ಯಗಳು ಇನ್ನೂ ಹೆಚ್ಚಾಗುತ್ತವೆಯೇ ವಿನಃ ಕಡಿಮೆಯಾಗಲ್ಲ. ಇದು ಮಹಿಳೆಯರ ದೌರ್ಜನ್ಯ ಕಾನೂನಿಗೂ ಅನ್ವಯಿಸುತ್ತದೆ. ಆದ್ದರಿಂದ ಕಾನೂನು ಪಾಲಕರು ಸರಿಯಾಗಿ ಕಾನೂನು ಪಾಲನೆಯಾಗುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೇ ವಿನಃ ದಂಡರೂಪದ ಹಣ ಪಡೆದು ವ್ಯಕ್ತಿಗಳನ್ನು ಬಿಡಬಾರದು. ಹಾಗೆ ದಲಿತರ ಆಸ್ತಿ ಹಾನಿ ಪ್ರಕರಣಗಳಲ್ಲಿ ಮಾತ್ರ ಹಣ ನೀಡಬೇಕೇ ವಿನಃ ಉಳಿದ ಪ್ರಕರಣದಲ್ಲಿ ಹಣ (ಪರಿಹಾರ ರೂಪದ) ಕೊಡಬಾರದು. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ. ನಾನು ನಿರೀಕ್ಷಿಸುತ್ತಿರುವೆ.
ವಾಲವಿಯವರೇ,
ದಲಿರತ ಮೇಲಿನ ದೌರ್ಜನ್ಯ ಕಾಯಿದೆಯ ಅಡಿಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಕುರಿತು ಇಲ್ಲಿ ಚರ್ಚಿಸಿದ್ದೇನೆ. ಈ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳ ಕುರಿತು ಸರ್ಕಾರವೇ ನಡೆಸಿರುವ ಅಧ್ಯಯನ ವರಧಿಯನ್ನು ಉಲ್ಲೇಖಿಸಿಯೇ ಎಲ್ಲವನ್ನೂ ವಿವರಿಸಿದ್ದೇನೆ. ನೀವು “ಅಸ್ಪೃಶ್ಯತೆಯ ಆಚರಣೆ”ಯನ್ನು ದಲಿತರ ಮೇಲಿನ ದೌರ್ಜನ್ಯ ಎಂದು ಹೇಳುತ್ತಿದ್ದೀರಿ ಎಂದು ಭಾವಿಸುತ್ತಿದ್ದೇನೆ. ಹಾಗಿದ್ದರೆ, ಹಾಗಿದ್ದರೆ ಇದೇ ಲೇಖನಮಾಲಿಕೆಯ ಎರಡನೇ ಭಾಗದಲ್ಲಿರುವ ಡಂಕಿನ್ ಜಳಕಿಯವರ ಮತ್ತು ನನ್ನ ಪ್ರತಿಕ್ರಿಯೆಗಳನ್ನು ಗಮನಿಸಿ.
ಇಲ್ಲಿಯ ಮೂಲಭೂತ ಸಮಸ್ಯೆ ಎಂದರೆ ಅಸ್ಪೃಶ್ಯತೆಯ ಆಚರಣೆಯ ಕುರಿತು ಯಾವುದೇ ನಿರ್ಧಿಷ್ಟ ವೈಜ್ಞಾನಿಕ ಮಾನದಂಡ/ಥಿಯರಿಯೇ ಇಲ್ಲ. ಇದರಿಂದಾಗಿ ಎಲ್ಲಾ ರೀತಿಯ ಜಗಳಗಳು ಈ ಕಾಯ್ದೆಯ ವ್ಯಾಪ್ತಿಯಲ್ಲಿ ದಾಖಲಾಗುತ್ತಿವೆ. ಅವುಗಳೆಲ್ಲವೂ ಅಸ್ಪೃಶ್ಯತೆಯ ಆಚರಣೆಯ ಪ್ರಕರಣಗಳೆಂದೇನೂ ಇಲ್ಲ. ಆ ಜಗಳಗಳಲ್ಲಿ ತೊಡಗಿರುವವರು ಒಂದು ಪಕ್ಷದವರು ಪರಿಶಿಷ್ಟರಾಗಿರಬೇಕು ಮತ್ತು ಇನ್ನೊಂದು ಪಕ್ಷದವರು ಪರಿಶಿಷ್ಟೇತರರಾಗಿದ್ದರೆ ಮುಗಿಯಿತು ಅಷ್ಟೆ!. ಇಂತಹ ಸ್ವರೂಪದ ನ್ಯಾಯಿಕ ಪ್ರಕ್ರಿಯೆಯಲ್ಲಿ ನಿಜವಾದ ‘ಅಸ್ಪೃಶ್ಯತೆಯ” ಆಚರಣೆಯನ್ನು ಗುರುತಿಸಿ ನಿವಾರಿಸುವ ಸಾಧ್ಯತೆಯೇ ಮುಚ್ಚಿಹೋಗುತ್ತದೆ ಎನ್ನುವುದು ನಮ್ಮ ವಾದ.
ಈ ಸ್ಥಿತಿಗೆ ಮೂಲಕಾರಣ ಈ ಕಾಯ್ದೆಯೇ ಅವೈಜ್ಞಾನಿಕವಾದ (ಇಲ್ಲದ) “ಜಾತಿವ್ಯವಸ್ಥೆ” ಸಿದ್ದಾಂತವನ್ನುಅದರಿಸಿ ರೂಪಿತವಾಗಿದೆ (ನೋಡಿ: ಜಾತಿ ವ್ಯವಸ್ಥೆ ಇಲ್ಲ ಎಂದರೆ- http://goo.gl/XrzD8U). “ಜಾತಿವ್ಯವಸ್ಥೆ” ಸಿದ್ದಾಂತವೇ ಪೊಳ್ಳಾದರೆ ಅದನ್ನು ಆದರಿಸಿದ ಕಾಯ್ದೆಯೂ ಸಹ ತಪ್ಪು ಪರಿಣಾಮಗಳನ್ನಷ್ಟೇ ನೀಡಬಲ್ಲದು. ಈ ಕಾಯ್ದೆಯ ಕುರಿತ ವರಧಿಯು ಇದನ್ನೇ ಧೃಡೀಕರಿಸುತ್ತದೆ. ಅಂದರೆ ರೋಗವನ್ನು ಸರಿಯಾಗಿ ಗುರುತಿಸಿ ಸರಿಯಾದ ಔಷಧ ಕೊಡದೆ ತಪ್ಪಾಗಿ ಗುರುರಿಸಿ ತಪ್ಪು ಔಷಧ ಕೊಟ್ಟರೆ ಅದು ಆ ರೋಗವನ್ನು ವಾಸಿ ಮಾಡುವ ಬದಲಿಗೆ ಇರೋ ರೋಗವನ್ನು ಹೆಚ್ಚಿಸಬಹುದು ಇಲ್ಲವೇ ಇರುವ ರೋಗದ ಜೊತೆಗೆ ಹೊಸ ರೋಗಗಳನ್ನೂ ಹುಟ್ಟಿಸಬಹುದು. ಈ ಲೇಖನದ ಆಶಯವೂ ಈ ಅಂಶವನ್ನು ಮನಗಾಣಿಸುವುದೇ ಆಗಿದೆ.
ಅಂದಹಾಗೆ ಕಾನೂನುಗಳು ನಮ್ಮ ಯಾವುದೇ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತವೆಯೇ ಎನ್ನುವುದು ಬೇರೆಯದೇ ಪ್ರಶ್ನೆ ಇಲ್ಲಿಯ ಚರ್ಚೆಯ ವ್ಯಾಪ್ತಿಯಲ್ಲಿ ಅದನ್ನು ವಿವರಿಸುವುದು ಕಷ್ಟ! ನಮಸ್ಕಾರ
ಕ್ಷಮಿಸಿ ವೆಬ್ ವಿಳಾಸ ತಪ್ಪಾಗಿದೆ ಇದನ್ನು ನೋಡಿ: ಜಾತಿವ್ಯವಸ್ಥೆ ಇಲ್ಲ ಎಂದರೆ … http://goo.gl/bRohrI
ದಲಿತ ಸಮುದಾಯದ ವ್ಯಕ್ತಿಯು ಇತರ ಸಮುದಾಯದ ವರಿಂದ ಪಡೆದ ಜಮೀನಿನ ಮೇಲೆ ತಂದೆಯ ಆಸ್ತಿಯಲ್ಲಿ ಭಾಗ ಬೇಕೆಂಬ ನಿಲುವಿನೊಂದಿಗೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೋಡಿರುವುದನ್ನು ವಾಪಸ್ ಪಡೆಯಲಿಲ್ಲ ಎಂಬ ಕಾರಣಕ್ಕೆ ದಲಿತ ಎನ್ನುವ ಕಾರಣಕ್ಕೆ ದಲಿತ ದೌರ್ಜನ್ಯ ಕಾಯ್ದೆಯನ್ನು ಇಲ್ಲಿ ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದಾರೆ ಅದು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರೊಬ್ಬರು ಇಲ್ಲಿ ಇಮ್ನೊಂದು ಗಮನಿಸಬೇಕಾದ ವಿಚಾರವೇನೆಂದರೆ ಇವರ ಕುಟುಂಬದಲ್ಲಿ ಎಲ್ಲಾ ಸದಸ್ಯರು ಸರ್ಕಾರಿ ಶಿಕ್ಷಕರಾಇಗಿ ಸೇವೆ ಸಲ್ಲಿಸುತ್ತಿದ್ದು ಸರ್ಕಾರಿ ಗೋಮಾಳ ಜಮೀನಿನ ಸಂಭಂದಿಸಿದಂತೆ ವಿವಾದ ಪ್ರಾರಂಭವಾಗಿ ಕೋರ್ಟ್ ಮೆಟ್ಟಿಲೇರಿದೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಸುಖಾ ಸುಮ್ಮನೆ ಎರಡು ವರ್ಷಗಳಿಂದ ದಲಿತ ಎನ್ನುವ ಕಾರಣಕ್ಕೆ ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗ ಪಡೆಸಿಕೊಳ್ಳಲು ಮುಂದಾಗಿರುವುದು ಅಲ್ಲದೆ ಸುಳ್ಳು ದೂರುಗಳನ್ನು ನೀಡುವುದು ಇದಕ್ಕೆ ನಾವುಗಳು ಹೇಳಿಕೆ ನೀಡಿ ವಾಪಸ್ ಹಾಗುವುದೆ ಇದೆ ಉದ್ಯೋಗ ಹಾಗಿದೆ ಈ ಘಟನೆ ಸಂಭಂದ ನನಗೆ ಹಿರಿಯರು ಮಾರ್ಗದರ್ಶನ ನೀಡಬೇಕು ಎಂದು ಮನವಿ