ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 22, 2016

2

ನಿಜವಾದ ಹೀರೋಗಳಿವರು

‍ನಿಲುಮೆ ಮೂಲಕ

 ಮಯೂರಲಕ್ಷ್ಮೀ.

Bhagat-Singh-Factsಅವರು ಯುವಕರು… ಅಪ್ರತಿಮ ಧೈರ್ಯ, ಸಾಹಸ ಪ್ರವೃತ್ತಿ, ತೇಜಸ್ಸು ಮತ್ತು ಸದ್ಗುಣಗಳು ಅವರಲ್ಲಿತ್ತು.. ಅವರಲ್ಲಿದ್ದ ನಾಯಕತ್ವ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತ ಜ್ಞಾನದಿಂದ ಅವರು ಏನನ್ನಾದರೂ ಸಾಧಿಸಬಹುದಿತ್ತು.. ಅದು ಬ್ರಿಟಿಷರು ಭಾರತೀಯರನ್ನು ದಾಸ್ಯದಲ್ಲಿಟ್ಟು ಆಳುತ್ತಿದ್ದ ಕಾಲ. ಆ ಮೂವರೂ ಯಾವುದೇ ಅಧಿಕಾರದ ಆಮಿಷಕ್ಕೆ ಒಳಗಾಗಲಿಲ್ಲ, ತಾವೇ ವಿಧಿಸಿಕೊಂಡ ದೇಶರಕ್ಷಣೆಯ ಕಟ್ಟುಪಾಡುಗಳನ್ನು ಮೀರದೆ ಆಂಗ್ಲರಿಂದ ದೇಶವನ್ನು ಮುಕ್ತಗೊಳಿಸಲು ಯಾವ ತ್ಯಾಗವನ್ನಾದರೂ ಮಾಡಲು ಸಿದ್ಧರಾದರು. ಅಂತೆಯೇ ತಮ್ಮ ಪ್ರಾಣವನ್ನೂ ದೇಶಕ್ಕಾಗಿ ಅರ್ಪಿಸಿದರು. ಈ ದೇಶ ಎಂದೂ ಮರೆಯದ ಮರೆಯಲಾಗದ ಯುವಚೇತನರು ಈ ಮೂವರು.. ನಮ್ಮ ಇಂದಿನ ಯುವಶಕ್ತಿಗೆ ನಿಜವಾದ ಮಾದರಿ ಇವರೇ…!

ಸರ್ದಾರ್ ಭಗತ್‍ಸಿಂಗ್:

ಜನನ: 28 ಸೆಪ್ಟೆಂಬರ್, 1907, ಸ್ಥಳ: ಪಂಜಾಬಿನ ಲ್ಯಾಲ್‍ಪುರ್ ಜಿಲ್ಲೆ.

ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸಂಸ್ಥೆಯ ರೂವಾರಿ.

ಕೆಚ್ಚೆದೆಯ ಹೋರಾಟಗಾರ.

 

ಶಿವರಾಮ ಹರಿ ರಾಜಗುರು:

ಆಗಸ್ಟ್ 24, 1908ರಲ್ಲಿ ಪುಣೆಯ ಬಳಿಯ ‘ಖೇಡ್’ ಎಂಬ ಪಟ್ಟಣದಲ್ಲಿ ಜನನ.

ಸಂಸ್ಕೃತ ಭಾಷೆಯ ಪಾಂಡಿತ್ಯ.

‘ಶಿವಾಜಿ ಮಹಾರಾಜ’ನ ಗೆರಿಲ್ಲಾ ಯುದ್ಧ ವೈಖರಿಯ ನಿಪುಣತೆ.

 

ಸುಖದೇವ ಥಾಪರ್: 15, ಮೇ 1907ರಲ್ಲಿ ಪಂಜಾಬಿನ ಲೂಧಿಯಾನದಲ್ಲಿ ಜನನ.

ಪಂಜಾಬಿನ ಮತ್ತೊಂದು ಹುಲಿ. ಸಂಘಟನಾ ಚಾತುರ್ಯ.

ವೈಜ್ಞಾನಿಕ ವಿಚಾರಗಳೊಂದಿಗೆ ಕ್ರಾಂತಿಕಾರಕ ಆಲೋಚನೆಗಳು.

‘ನೌಜವಾನ್ ಭಾರತ್ ಸಭಾ’ ಪತ್ರಿಕೆಯ ಸಂಸ್ಥಾಪಕ.

 

ಪಂಜಾಬಿನ ಲ್ಯಾಲ್‍ಪುರ್ ಜಿಲ್ಲೆಯ ‘ಬಾಂಗಾ’ ಎಂಬ ಹಳ್ಳಿಯಲ್ಲಿ 28 ಸೆಪ್ಟೆಂಬರ್, 1907ರಂದು ಜನ್ಮ ತಳೆದವನು ‘ಸರ್ದಾರ್’ ಭಗತ್ ಸಿಂಗ್. ಅವನು ಜನಿಸಿದ ದಿನದಂದೇ ಅವನ ತಂದೆ ಮತ್ತು ಚಿಕ್ಕಪ್ಪಂದಿರು ಜೈಲಿನಿಂದ ಬಂಧಮುಕ್ತರಾದರು. ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟದಲ್ಲಿ ‘ಗದಾರ್ ಪಕ್ಷ’ದೊಂದಿಗೆ ಗುರುತಿಸಿಕೊಂಡಿದ್ದರು. ತನ್ನ ತಂದೆ ಚಿಕ್ಕಪ್ಪಂದಿರ ನಡುವೆ ತೇಜಸ್ವೀ ಬಾಲಕನಾಗಿ ಬೆಳೆಯುತ್ತಿದ್ದ ಬಾಲಕ ಭಗತ್ ನನ್ನು ಪರಿವಾರದವರು ಯಾವುದೇ ಆಂಗ್ಲ ಶಾಲೆಗೆ ಕಳುಹಿಸಲಿಚ್ಛಿಸದ ಕಾರಣ ದಯಾನಂದ ಸರಸ್ವತಿಯವರ ಆರ್ಯ ಸಮಾಜದ ಸಂಸ್ಕಾರದಲ್ಲಿ ಬೆಳೆದನು. ತನ್ನ ಬಾಲ್ಯದಿಂದಲೇ ದೇಶಭಕ್ತಿಯ ಕಿಚ್ಚನ್ನು ಹೊತ್ತಿದ್ದ ಭಗತ್‍ನನ್ನು ದಯಾನಂದರ ಶಾಲೆಗೆ ಸೇರಿಸಿ, ನಂತರ ಲಾಲಾ ಲಜಪತ್ ರಾಯರ ಕಾಲೇಜು ಸೇರಿ  ವಿದ್ಯಾಭ್ಯಾಸ ಮುಂದುವರೆಸಬೇಕಾಯಿತು. ಶಾಲಾ-ಕಾಲೇಜು ಹಂತದಲ್ಲಿಯೇ ಭಗತ್ ಸ್ವಾತಂತ್ರದ ಕನಸನ್ನು ಹೊತ್ತಿದ್ದು, ನಾಟಕ ಪ್ರಾತ್ಯಕ್ಷಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ, ಅತ್ಯುತ್ತಮ ವಾಗ್ಮಿಯಾಗಿಯೂ ದೇಶಭಕ್ತಿಯನ್ನು ಪ್ರತಿಬಿಂಬಿಸುವ ಗೀತೆಗಳನ್ನೂ ರಚಿಸಿ ಹಾಡುತ್ತಿದ್ದನು. ಅವನ ಬದುಕಿನಲ್ಲಿನ ಮಹತ್ವದ ಪರಿವರ್ತನೆ ಬಂದದ್ದು ಮುಂದೆ ಅವನು 1919ರಲ್ಲಿ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದ ಸ್ಥಳವನ್ನು ಕಣ್ಣಾರೆ ಕಂಡಾಗಲೇ!

 

ಮುಗ್ಧ ಭಾರತೀಯರ ಮೇಲೆ ಬ್ರಿಟಿಷರು ನಡೆಸಿದ ಧಾಳಿ ಮತ್ತು ನರಮೇಧದ ಘಟನೆಯ ವರದಿ ಅವನಲ್ಲಿನ ಕ್ರಾಂತಿಯ ಕಿಚ್ಚನ್ನು ಇಮ್ಮಡಿಸಿತು. ಮುಂದೆ, ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡನು. ಆದರೆ ಅವನ ಮೇಲೆ ಇನ್ನೂ ಹೆಚ್ಚು ಪರಿಣಾಮವಾದದ್ದು ಬ್ರಿಟಿಷ್ ಆಳ್ವಿಕೆಯ ಮುಖ್ಯ ಸಂಸ್ಥಾನಗಳಲ್ಲಿ ಒಂದಾಗಿದ್ದ ‘ಚೌರೀ-ಚೌರಾ’ದಲ್ಲಿ ನಡೆದ ಘಟನೆಯಿಂದ. ಬ್ರಿಟಿಷ್ ಪೋಲೀಸರ ವಿರುದ್ಧ ದಂಗೆ ಎದ್ದಿದ್ದ ಭಾರತೀಯರು ಸತತ ಆಘಾತಗಳನ್ನು ತಾಳಲಾರದೆ ರಕ್ಷಣೆಗಾಗಿ ತಾವೂ ಸಿಡಿದೆದ್ದು ಪೋಲಿಸರನ್ನು ಹೊಡೆದರು. ಇದರ ಪರಿಣಾಮವಾಗಿ ಈಗಾಗಲೇ ‘ಸೈಮನ್ ಕಮಿಷನ್’ ಮೂಲಕ ‘ಬ್ರಿಟಿಷ್ ಪೋಲೀಸ್ ಕಾಯ್ದೆ’ಯಡಿಯಲ್ಲಿ’ ನೂರಾರು ಭಾರತೀಯರನ್ನು ಬಂಧಿಸಿದ್ದರು. ಮುಗ್ಧ ರೈತರ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಿ ಸ್ವಾತಂತ್ರವನ್ನು ಬಯಸಿದ್ದ ನಾಗರೀಕರ ರಕ್ತಪಾತವಾಯ್ತು. ಇದೆಲ್ಲವೂ ನಡೆದದ್ದು, ಭಾರತದಲ್ಲಿ 1860ರವರೆಗೂ ಆಳ್ವಿಕೆಯಲ್ಲಿದ್ದ ‘ಈಸ್ಟ್ ಇಂಡಿಯಾ ಕಂಪನಿ’ಯು ಭಾರತೀಯ ನಾಗರೀಕರು ಎಚ್ಚೆತ್ತು ತಮ್ಮ ವಿರುದ್ಧ ಹೋರಾಡಿ ತಮ್ಮ ದೇಶದ ರಕ್ಷಣೆಗಾಗಿ ನಿಂತಲ್ಲಿ, ತಮ್ಮ ಅಸ್ತಿತ್ವ ಮತ್ತು ಸರ್ಕಾರದಡಿಯಲ್ಲಿ ಭಾರತೀಯರು ಬದುಕಲಾರರು ಎಂದು ಅರಿವಾಗಿ ಭಾರತೀಯರ ಮೇಲೆ ತಂದೊಡ್ಡಿದ ಕಾನೂನುಗಳಿಂದ. ಬ್ರಿಟಿಷ್ ಸೇನೆಯೊಂದಿಗೆ ಈಗ ಕಾನೂನು ಸಹ ಭಾರತೀಯ ಪ್ರಜೆಗಳ ವಿರುದ್ಧ ತನ್ನ ಕಾರ್ಯಾಚರಣೆ ನಡೆಸಲಾರಂಭಿಸಿತ್ತು. ಇನ್ನು ‘ಶಾಂತಿ’ ‘ಸಮಾಧಾನ’ಗಳಿಂದ ಬ್ರಿಟಿಷರ ದಾಸ್ಯದಿಂದ ಈ ದೇಶವನ್ನು ಬಂಧಮುಕ್ತವನ್ನಾಗಿ ಮಾಡವುದು ಅಸಾಧ್ಯ ಎಂದು ನಿರ್ಧರಿಸಿದ ಭಗತ್‍ನ ಕ್ರಾಂತಿಕಾರಿ ಆಲೋಚನೆಗಳು ಯೋಜನೆಗಳಾಗಿ ನಂತರ ಕಾರ್ಯರೂಪಕ್ಕೆ ಬರಲಾರಂಭಿಸಿದವು.

 

ಈ ಮೂವರ ಮುಂದಿದ್ದ ಗುರಿಯೊಂದೇ!……..

ಅವರಿಗೆ ಶಕ್ತಿಯ ಜೊತೆಗೆ ಯುಕ್ತಿಯಿಂದಲೇ ಶತೃಗಳನ್ನು ಗೆಲ್ಲಬೇಕೆಂಬ ಅರಿವಿತ್ತು. ಭಾರತದ ಹಿಂದಿನ ಇತಿಹಾಸ, ಅಂದಿನ ಪರಿಸ್ಥಿತಿ, ಬ್ರಿಟಿಷರಿಂದ ಭಾರತೀಯರ ಮೇಲೆ ಬಲವಂತವಾಗಿ ಹೇರಲ್ಪಟ್ಟಿದ್ದ ಕಾನೂನು ವ್ಯವಸ್ಥೆ. ಎಲ್ಲವನ್ನೂ ಅತಿ ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಭಗತ್ ಸಿಂಗ್ ನ ಭರವಸೆಯ ಕಣ್ಣುಗಳಿಗೆ ಮುಂದಿನ ದಾರಿ ಸ್ಪಷ್ಟವಾಗಿತ್ತು!  ಅದೇ ನಂತರ ಕಾರ್ಯರೂಪಕ್ಕೆ ಬರಲಾರಂಭಿಸಿತು. 1926ರಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ಅಷಾಫ್‍ಕುಲ್ಲಾ ಖಾನ್ ಮತ್ತು ಚಂದ್ರಶೇಖರ್ ಆಜಾದ್‍ರಿಂದ ಸ್ಥಾಪಿಸಲ್ಪಟ್ಟಿದ್ದ ‘ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್’ ಸೇರಿದ ಭಗತ್ ಮುಂದೆ ಅದೇ ಸಂಘಟನೆಯನ್ನು ಸಧೃಢಗೊಳಿಸಿದ. ನಂತರದ ದಿನಗಳಲ್ಲಿ ತನ್ನ ಸ್ವಗೃಹವನ್ನೂ ತೊರೆದನು. ತನ್ನ ಮನೆಯಲ್ಲಿದ್ದರೆ ಮದುವೆಯಾಗಿ ಕೊನೆಗೆ ಸ್ವಾರ್ಥದಿಂದ ತನಗಾಗಿ ಬದುಕಿ ದೇಶಕ್ಕೇನೂ ಮಾಡಲಾರೆನೆಂದು ಅರಿತ ಅವನದು ಕಠಿಣ ನಿರ್ಧಾರವಾಗಿತ್ತು.ತನ್ನ ಮುಂದಿನ ಬದುಕು ಈ ದೇಶಕ್ಕಾಗಿಯೇ! ಇನ್ಯಾವ ಸಂಸಾರ ಮೋಹದಂತಹ ಆಸೆಗಳು ತನ್ನನ್ನು ಬದಲಿಸಲಾರದೆಂದು ಪತ್ರ ಬರೆದಿಟ್ಟು  ತೆರಳಿದ.

 

ಹೀಗೆ ಹೊರಟ ಅವನ ಮುಂದಿನ ದಾರಿ ಕಾನ್ಪುರ. ತನ್ನ ಚಟುವಟಿಕೆಗಳಿಂದ ಬ್ರಿಟಿಷರಿಂದ ಮೊದಲ ಬಾರಿ 1927ರಲ್ಲಿ ಬಂಧನಕ್ಕೊಳಗಾದ ಭಗತ್ ಅದರಿಂದ ಹೆದರಲಿಲ್ಲ. ತನ್ನ ದೇಶಕ್ಕಾಗಿ ಮನೆ, ತನ್ನವರು ಮತ್ತು ತನ್ನದಾಗಿದ್ದ ಎಲ್ಲವನ್ನೂ ತ್ಯಾಗ ಮಾಡಿದ್ದ ಭಗತ್‍ನಲ್ಲಿ ಬ್ರಿಟಿಷ್-ಬಂಧಮುಕ್ತ ಭಾರತದ ನಿರ್ಮಾಣದ ಕನಸೊಂದೇ ನಿರಂತರವಾಗಿ ಕಾಡಿದ್ದು!

ಅಂದಿನ ಭಾರತದ ಮೇಲಿದ್ದ ಬ್ರಿಟಿಷ್ ಕಾನೂನು ವ್ಯವಸ್ಥೆ ‘ಇಂಡಿಯನ್ ಪೋಲೀಸ್ ಆ್ಯಕ್ಟ್’ನ ರೂಪದಲ್ಲಿ ಭಾರತೀಯರನ್ನು ಮನಬಂದಂತೆ ಬಂಧಿಸುವುದು, ಲಾಠೀ ಪ್ರಹಾರ ನಡೆಸುವುದು ಮತ್ತು ಕಾನೂನಿನ ಹೆಸರಲ್ಲಿ ಅಸಹಾಯಕ ಭಾರತೀಯರ ಮೇಲೆ ದೌರ್ಜನ್ಯವೆಸಗುವುದು ಅವಿರತವಾಗಿ ನಡೆದಿತ್ತು. ಉತ್ತರ ಭಾರತದ ಲಾಹೊರ್‍ನಲ್ಲಿ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳಿಂದ ಅದಾಗಲೇ ಬ್ರಿಟಿಷರಿಗೆ ನುಂಗಲಾರದ ತುತ್ತಾಗಿದ್ದ ಲಾಲಾ ಲಜಪತ್ ರಾಯ್‍ರವರೂ ಭಗತ್ ಮೇಲೆ ಪರಿಣಾಮ ಬೀರಿದ್ದರು. 1928ರಲ್ಲಿ ಭಾರತದಲ್ಲಿನ ಬ್ರಿಟಿಷ್ ಕಾನೂನು ‘ಸೈಮನ್ ಕಮಿಷನ್’ ಜಾರಿ ಮಾಡಿತು. ಎಲ್ಲಾ ಭಾರತದ ಮುಖ್ಯ ನಾಯಕರೂ ಇದನ್ನು ವಿರೋಧಿಸಿದರು. ಅದೊಂದು ದಿನ ಲಾಹೋರಿನಲ್ಲಿ ಇದನ್ನು ಪ್ರತಿಭಟಿಸಿ ಲಾಲಾ ಲಜಪತ್ ರಾಯ್ ಶಾಂತಿಯುತ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಆದರೆ ಯಾವುದೇ ಕಾರಣವಿಲ್ಲದೆ ಬ್ರಿಟಿಷ್ ಪೋಲಿಸ್‍ನ ಅಧಿಕಾರಿ ‘ಸಾಂಡರ್ಸ್’ನ ಆದೇಶದ ಮೇಲೆ ಒಂದೇ ಸಮನೆ ಲಾಲಾಜೀಯವರ ಮೇಲೆ ಲಾಠೀ ಪ್ರಹಾರ ನಡೆಸಿದಾಗ ಅವರು ತೀವ್ರವಾಗಿ ಗಾಯಗೊಂಡರು. ತಲೆಗೆ ಬಿದ್ದ ಏಟುಗಳಿಂದ ಒಂದೇ ಸಮನೆ ರಕ್ತ ಹರಿಯಲಾರಂಭಿಸಿತು! ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದರೂ ಲಾಲಾ ಲಜಪತ ರಾಯ್ ಕೊನೆಯುಸಿರೆಳೆದರು.

 

ಶಾಂತವಾಗಿಯೇ ಪ್ರತಿಭಟಿಸಿದರೂ ಬೆಲೆ ನೀಡದೆ ಲಾಲಾಜೀಯವರನ್ನು ಬಲಿ ತೆಗೆದುಕೊಂಡ ಬ್ರಿಟಿಷರ ಪಾಶವೀ ಕೃತ್ಯವನ್ನೂ ಅದಕ್ಕೆ ಕಾರಣನಾದ ಸ್ಯಾಂಡರ್ಸ್‍ನ ವರ್ತನೆಯನ್ನು ಭಗತ್ ವಿರೋಧಿಸಿದ. ಎಲ್ಲಕ್ಕಿಂತಾ ಮುಖ್ಯವಾಗಿ ಭಾರತೀಯರ ಮೇಲೆ ಅವರ ಪೋಲೀಸರು ಮನಬಂದಂತೆ ಲಾಠೀ ಪ್ರಹಾರ ನಡೆಸಿದರೂ (ರೈಟ್ ಟು ಡಿಫೆನ್ಸ್‍ನ ಹೆಸರಲ್ಲಿ) ತಮ್ಮನ್ನು ರಕ್ಷಿಸಿಕೊಳ್ಳಲು ಯಾವ ಉಪಾಯವೂ ಇಲ್ಲದೆ ಭಾರತೀಯರನ್ನು ಅಸಹಾಯಕರನ್ನಾಗಿ ಮಾಡಿದ್ದ ಬ್ರಿಟಿಷ್ ಕಾನೂನಿನ ಮೇಲೆ ಅವನ ಆಕ್ರೋಷ ಹೆಚ್ಚತೊಡಗಿತು. ವಿಷಯ ಕೋರ್ಟಿನಲ್ಲಿ ವಿಚಾರಣೆ ನಡೆದಾಗ ಭಗತ್ ಸಿಂಗ್ ಸ್ಯಾಂಡರ್ಸ್‍ನ ಕೃತ್ಯವನ್ನು ವಿರೋಧಿಸಿದ. ಅವನ ವಾದವು ‘ಲಾಠೀ ಪ್ರಹಾರದಲ್ಲಿ ತಲೆಯ ಮೇಲೆ ಹೊಡೆಯುವುದು ಕಾನೂನಿಗೆ ವಿರುದ್ಧವೆಂದೂ, ಲಾಲಾಜೀಯವರನ್ನು ಕೊಲ್ಲಲೆಂದೇ ಈ ಕೃತ್ಯ ಸ್ಯಾಂಡರ್ಸ್ ನಡೆಸಿದನೆಂದೂ’ ಆಗಿತ್ತು. ಆದರೆ ನ್ಯಾಯಾಲಯವು ಸ್ಯಾಂಡರ್ಸ್‍ನ ವರ್ತನೆಯನ್ನೇ ಅನುಮೋದಿಸಿ ಸ್ಯಾಂಡರ್ಸ್ ನಿರ್ದೋಷಿಯೆಂದು ಘೋಷಿಸಿತು.

 

ಲಾಲಾಜಿಯವರ ಮರಣ, ಬ್ರಿಟಿಷ್ ಕಾನೂನು ಅವನ ಸಹನೆಯನ್ನು ಕೆರಳಿಸಿತು, ಸ್ಯಾಂಡರ್ಸ್‍ನ ಮೇಲೆ ಪ್ರತೀಕಾರದ ಅಗ್ನಿ ಪ್ರಖರವಾಯಿತು! ಸುಖದೇವ್, ರಾಜಗುರು, ಆಜಾದ್‍ರ ಒಡಗೂಡಿ ಸೇಡಿನ ಜಾಲವನ್ನು ರೂಪಿಸಿದ. ಅದೇ ಸ್ಯಾಂಡರ್ಸ್‍ನ ಕೊಲೆಯ ಸಂಚು! ಆ ಮೂಲಕ ಬ್ರಿಟಿಷ್ ಸೇನೆಯ ಮೇಲೆ ಪ್ರತೀಕಾರ….! 17 ಡಿಸೆಂಬರ್ 1928 ಲಾಹೋರ್ ಪೋಲೀಸ್ ಮುಖ್ಯ ಕಛೇರಿ. ಭಗತನೊಂದಿಗೆ ರಾಜಗುರು ಹೊರಗೆ ಕಾದಿದ್ದು ಸ್ಯಾಂಡರ್ಸ್ ಹೊರ ಬರುತ್ತಲೇ ಬಂದೂಕಿನಿಂದ ಗುಂಡು ಹಾರಿಸಿ ಅವನನ್ನು ಸ್ಥಳದಲ್ಲೇ ಕೊಂದು ಕೂಡಲೇ ಅಲ್ಲಿಂದ ತಪ್ಪಿಸಿಕೊಂಡು ಹೊರಟರು. ತನ್ನ ವೇಷ ಬದಲಿಸಿಕೊಂಡ ಭಗತ್ ರಾಜಗುರುವಿನೊಂದಿಗೆ ತನ್ನ ಮತ್ತೊಬ್ಬ ಕ್ರಾಂತಿಕಾರಿ ಸ್ನೇಹಿತ ಚರಣ್ ಮತ್ತವನ ಪತ್ನಿಯ ಸಹಾಯದಿಂದ ರೈಲಿನಲ್ಲಿ ಲಾಹೋರಿನಿಂದ ಮೊದಲು ಲಖ್ನೌ ನಂತರ ಹೌರಾ ತಲುಪಿದನು. ಸ್ಯಾಂಡರ್ಸ್‍ನ ಕೊಲೆಯ ಬಗ್ಗೆ ಭಗತ್‍ಗಾಗಲೀ ಸುಖದೇವ ರಾಜಗುರುವಿಗಾಗಲೀ ಯಾವುದೇ ಹೆದರಿಕೆಯಿರಲಿಲ್ಲ. ಭಗತ್ ತಪ್ಪಿಸಿಕೊಳ್ಳಲು ಕಾರಣ, ಈಗಲೇ ಸೆರೆ ಸಿಕ್ಕರೆ ಭಗತ್ ನ ಕೆಲಸ ಮುಗಿಯುವುದಿಲ್ಲ ಅಷ್ಟೇ ಅಲ್ಲದೇ ಬ್ರಿಟಿಷರಿಗೆ ತಕ್ಕ ಪಾಠ ಕಲಿಸುವುದಿನ್ನೂ ಬಾಕಿಯಿತ್ತು.

 

ಸ್ವಾತಂತ್ರ ಹೋರಾಟದ ಕಿಡಿಯು ತನ್ನ ವ್ಯಾಪ್ತಿಯನ್ನು ದೇಶದೆಲ್ಲೆಡೆ ಹರಡಿತು. ಎಲ್ಲೆಡೆಯಲ್ಲೂ ಭಗತ್ ಸಿಂಗ್‍ನ ಗುಣಗಾನ, ಅವನ ಧೈರ್ಯವನ್ನು ಮೆಚ್ಚಿದವರು ಎಲ್ಲಾ ಹೋರಾಟಗಾರರು. ಅವನೀಗ ದೇಶದ ಯುವಶಕ್ತಿಯ ನೆಚ್ಚಿನ ಯುವನಾಯಕನ ಪ್ರತಿರೂಪ ಪಡೆದ. 8 ಏಪ್ರಿಲ್ 1929ರಂದು ‘ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ’ ಪ್ರವಾಸಿಗರು ಕುಳಿತಿದ್ದ ಸ್ಥಳದಲ್ಲಿದ್ದ ಭಗತ್ ಮತ್ತವನ ಸಹಚರ ಅಸೆಂಬ್ಲಿ ಹಾಲ್‍ನಲ್ಲಿ ಪೂರ್ವಯೋಜಿತದಂತೆ ಸರಿಯಾದ ಸಮಯಕ್ಕೆ ಬಾಂಬ್ ಸ್ಫೋಟಿಸಿದರು. ಸ್ಫೋಟದಿಂದ ಯಾವ ಸಾವು ನೋವುಗಳಾಗಲಿಲ್ಲ, ಒಂದಿಬ್ಬರು ಗಾಯಗೊಂಡರಷ್ಟೇ! ಏಕೆಂದರೆ ಇದರ ಉದ್ದೇಶ ಬ್ರಿಟಿಷ್ ಆಳ್ವಿಕೆ, ಕಾನೂನು ಮತ್ತು ಭಾರತದಲ್ಲಿನ ಸಾಮಾಜಿಕ-ರಾಜಕೀಯ ವ್ಯವಸ್ಥೆಗಳ ಕುರಿತು ಪ್ರತಿರೋಧವೇ ಹೊರತು ಯಾರಿಗೂ ಹಾನಿಯುಂಟುಮಾಡುವುದಲ್ಲ. ಅಸೆಂಬ್ಲಿಯ ತುಂಬ “ಇನ್‍ಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆ! ಈ ಬಾರಿ ತನ್ನನ್ನು ಬ್ರಿಟಿಷರು ಬಂಧಿಸಿದಾಗ ಯಾವುದೇ ಪ್ರತಿರೋಧವನ್ನೂ ವ್ಯಕ್ತಪಡಿಸಲೂ ಇಲ್ಲ, ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ! ಅವನನ್ನು ಬ್ರಿಟಿಷರು ಬಂಧಿಸಿ ಜೈಲಿನಲ್ಲಿರಿಸಿದರು.

 

ಭಗತ್ ಮತ್ತವನ ಸಹಚರರು ಈಗ ಸ್ವಾತಂತ್ರ್ಯ ಸಂಗ್ರಾಮದ ಹೊಸ ಸಂಕೇತ…..ಎಲ್ಲರ ಸ್ಫೂರ್ತಿ! ಅವನ ಧೈರ್ಯ, ಸಮಯಪ್ರಜ್ಞೆ ಶತಮಾನದ ಗುಲಾಮಗಿರಿಯಿಂದ ಬೇಸತ್ತಿದ್ದ ಭಾರತೀಯರಿಗೆ ಹೊಸ ಹಾದಿಯಾಯಿತು. ಆದರೆ ಗಾಂಧೀಜಿಯವರು ಭಗತ್‍ನಿಂದಾದ ಸ್ಯಾಂಡರ್ಸ್ ಕೊಲೆಯನ್ನು ಅನ್ಯಾಯವೆಂದು ವಿರೋಧಿಸಿದರು. ಪಂಡಿತ್ ನೆಹರೂ ಸಹ ಇದೇ ಅಭಿಪ್ರಾಯವನ್ನು ಅನುಮೋದಿಸಿದರು. ಸ್ವತಂತ್ರ ಹೋರಾಟದಲ್ಲಿ ತಮ್ಮನ್ನು ಕ್ರಾಂತಿಕಾರಕರೆಂದು ಅನುಮೋದಿಸದ ಗಾಂಧೀಜಿಯವರಿಗೆ ಸುಖದೇವ ಒಂದು ಪತ್ರವನ್ನೂ ಬರೆದು ತನ್ನ ಹತಾಶೆಯನ್ನು ವ್ಯಕ್ತಪಡಿಸಿದನು.

 

ಬಂಧನದಲ್ಲಿದ್ದ ಭಗತ್ ಮತ್ತವನ ಸಂಗಡಿಗ ಬಟುಕೇಶ್ವರ ದತ್ತರ ವಿಚಾರಣೆ 7 ಮೇ, 1929ರಂದು ಆರಂಭವಾಯ್ತು. ಭಗತ್ ತನ್ನ ಪರವಾಗಿ ತಾನೇ ವಾದಿಸಲು ನಿರ್ಧರಿಸಿದ. ಅವನ ವಾದ, ವಿಚಾರಗಳ ಸರಣಿ ಎಲ್ಲರನ್ನೂ ನಿಬ್ಬೆರಗಾಗಿಸಿತು! ದೇಶದೆಲ್ಲೆಡೆ ಅವನ ಬಂಧನಕ್ಕೆ ಭಾರತೀಯರಿಂದ ವಿರೋಧ ವ್ಯಕ್ತವಾಗತೊಡಗಿತು. ಅದೇ ಸಮಯದಲ್ಲಿ ತನ್ನ ಸಂಘಟನೆಯ ಸಹಚರರನ್ನೂ ಲಾಹೋರಿನಲ್ಲಿ ಬಂಧಿಸಲಾಯಿತು! ಭಗತ್ ಮತ್ತವನ ಸಹಚರರ ಮೇಲೆ ಸ್ಯಾಂಡರ್ಸ್ ಕೊಲೆ ಮತ್ತು ಲಾಹೋರ್ ಕಾನೂನು ವಿರೋಧಿ ಕಾರ್ಯಾಚರಣೆಯ ಆಪಾದನೆ ಹೇರಲಾಯಿತು! ಆದರೆ ಭಗತ್ ಸಿಂಗ್ ಅಸಾಮಾನ್ಯ ಮನೋಬಲವನ್ನು ಹೊಂದಿದ್ದ ಧೀರ! ಸೆರೆಯಲ್ಲಿದ್ದರೂ ಅವನದು ಎಡೆಬಿಡದ ಕ್ರಾಂತಿ, ಅವನ ವಿಚಾರ ವೈಖರಿ, ಅಪಾರ ಜ್ಞಾನವೆಲ್ಲವೂ ಅಭಿವ್ಯಕ್ತವಾದವು….ಜೈಲಿನಲ್ಲಿ ಆಹಾರ ಸೇವಿಸಲು ನಿರಾಕರಿಸಿದಾಗ ಬಲವಂತವಾಗಿ ಪೈಪುಗಳ ಮೂಲಕ ಆಹಾರವನ್ನು ತುರುಕುವ ಪ್ರಯತ್ನ ನಡೆಯಿತು, ಕುಡಿಯಲು ನೀರನ್ನೂ ಕೊಡದೆ ನಾನಾ ತರಹದ ಹಿಂಸೆಗಳನ್ನು ನೀಡಲಾಯ್ತು!

 

ಸೆರೆಯಲ್ಲಿದ್ದ ಭಾರತೀಯ ಕೈದಿಗಳನ್ನು ಅಮಾನುಷವಾಗಿ ಬ್ರಿಟಿಷರು ನಡೆಸಿಕೊಳ್ಳುತ್ತಿದ್ದ ರೀತಿಯನ್ನೂ ಕಂಡು ಕ್ರೋಧಗೊಂಡ ಅವನು ಅಲ್ಲಿಯೂ ಅದನ್ನು ತಪ್ಪೆಂದು ಸಮರ್ಥಿಸಿದ. ಅಲ್ಲಿನ ಅವನ ದಿನಚರಿಯಲ್ಲಿ ಸತತವಾಗಿ ಚಿಂತನೆ ಮತ್ತು ಬರಹಗಳು ಪ್ರಮುಖವಾದವು. ಭಾರತದಲ್ಲದೇ ವಿದೇಶದಲ್ಲೂ ಭಗತ್ ಸಿಂಗ್ ಕುರಿತು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು! ಅನೇಕ ಪ್ರಸಿದ್ಧ ವ್ಯಕ್ತಿಗಳು ಅವನನ್ನು ನೋಡಲು ಭೇಟಿಯಿತ್ತರು, ಸೆರೆಮನೆಯಲ್ಲಿಯೇ ಅವನನ್ನು ಪತ್ರಕರ್ತರು ಸಂಪರ್ಕಿಸಿ ಸಮಾಲೋಚನೆಯನ್ನೂ ನಡೆಸುತ್ತಿದ್ದರು.

 

ಅನೇಕ ದಿನಗಳ ವಿಚಾರಣೆಗಳ ನಂತರ ಭಗತ್‍ನ ವಾದಗಳೆಲ್ಲವೂ ತಿರಸ್ಕೃತಗೊಂಡವು. ಭಗತ್ ಸಿಂಗ್, ರಾಜ್‍ಗುರು ಮತ್ತು ಸುಖದೇವ್ ಅವರನ್ನು 23 ಮಾರ್ಚ್ 1931ರಂದು ನೇಣುಕಂಬಕ್ಕೇರಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿತು.

ಭಗತ್ ಸಿಂಗ್ ದೇಶಕ್ಕೆ ನೀಡಿರುವ ಸಂದೇಶ:

“ಎಲ್ಲವೂ ಸುಟ್ಟು ಭಸ್ಮವಾದರೂ, ಭಸ್ಮದ ಕಣಕಣಗಳು ನನ್ನ ಜ್ವಾಲೆಯಿಂದ ಜಾಗೃತವಾಗುವವು.. ಸೆರೆಯಲ್ಲಿದ್ದರೂ ನನ್ನ ಧ್ಯೇಯಕ್ಕಾಗಿ ಎಂದಿಗೂ ನಾನು ಬಂಧಮುಕ್ತ…”

ಕ್ರಾಂತಿಯ ಕೋರಿಕೆಯು ಅಂತರಾತ್ಮದ ನಿಲುವಾಗಬೇಕು! ಮಾನವೀಯತೆಯ ದ್ಯೋತಕವೂ ಆಗಬೇಕು ಇದು ಅವಿನಾಶೀ ಭಾವವಾಗಬೇಕು!

“ಬ್ರಿಟಿಷರ ವಿರುದ್ಧ ನಡೆಸಿರುವ ಯಾವ ಕೃತ್ಯವನ್ನೂ ಕುರಿತು ನಾನು ಪಶ್ಚಾತ್ತಾಪ ಪಡುವುದಿಲ್ಲ, ಮುಂದಿನ 15 ವರ್ಷಗಳಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾಗುತ್ತದೆ. ಆದರೆ ದೇಶದ ಅಭಿವೃದ್ಧಿಗಾಗಿ ಮೊದಲು ಆಗಬೇಕಾದ ಮುಖ್ಯ ಕೃತ್ಯವೇನೆಂದರೆ ಬ್ರಿಟಿಷರು ಸ್ವಾರ್ಥದಿಂದ ಹಿಂದೂಸ್ಥಾನದ ಮೇಲೆ ಹೇರಿರುವ ಕಾನೂನು ವ್ಯವಸ್ಥೆ, ಕಾಯಿದೆಗಳನ್ನು ಸ್ವಾತಂತ್ರ್ಯ ಬರುವ ಮೊದಲು ಸಂಪೂರ್ಣವಾಗಿ ತಿರಸ್ಕರಿಸಿ!”

ತನ್ನ ಮಣ್ಣು, ಭೂಮಿ, ಗಂಧ-ಗಾಳಿಯನ್ನು ಪ್ರೀತಿಸುತಿದ್ದ, ಭಾರತದ ಧ್ವಜವು ಉತ್ತುಂಗಕ್ಕೇರುವುದರ ಕನಸನ್ನೇ ಎಲ್ಲರಿಗಿತ್ತ ಭಗತ್, ರಾಜಗುರು, ಸುಖದೇವ್ ಅವರನ್ನು ಗಲ್ಲಿಗೇರಿಸಲು ನೀಡಿದ ಬ್ರಿಟಿಷ್ ಕಾನೂನನ್ನು ಪ್ರತಿಭಟಿಸಲು ಯಾವ ಧೀಮಂತ ನಾಯಕರೂ ಮುಂದೆ ಬರಲಿಲ್ಲ! ಅದು ಈ ದೇಶದ ಮಟ್ಟಿಗೆ ದೌರ್ಭಾಗ್ಯವೇ ಸರಿ. ಅಸಹಾಯಕರಾಗಿ ನೋಡುವುದಷ್ಟೇ ಭಾರತೀಯರ ಕೆಲಸವಾಗಿತ್ತು!

 

ಮೇರಾ ರಂಗ್ ದೇ ಬಸಂತೀ ಚೋಲಾ… ಮೇರಾ ರಂಗ್ ದೇ……..

ಭಾರತವೆಂಬ ಈ ಪುಣ್ಯಭೂಮಿಯಲ್ಲಿ ಜನ್ಮ ತಳೆದು ಬಣ್ಣಗಳನ್ನೆರಚಿ,

ದುಷ್ಟರಾಳ್ವಿಕೆಯ ದಾಸ್ಯದ ಪ್ರಹಾರಗಳಿಂದ ಘಾಸಿತಗೊಂಡು,

ಅಜ್ಞಾನವೆಂಬ ಕಪ್ಪು ಕತ್ತಲೆಯಲ್ಲಿ ದೇಶ ನಿದ್ರಿಸುತ್ತಿದ್ದಾಗ…..

ಸೋಲಿಲ್ಲದ ಸರದಾರರಾಗಿ ಹೋರಾಡಿ ಭಾರತಾಂಬೆಯ ಮಡಿಲಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ಭಗತ್, ಸುಖದೇವ ರಾಜಗುರು ಬಲಿದಾನಿಗಳಾಗಿ ಉರಿಸಿಟ್ಟ ಕ್ರಾಂತಿಯಿನ್ನೂ ಹಸಿರಾಗಿದೆ….

2 ಟಿಪ್ಪಣಿಗಳು Post a comment
  1. ಮಾರ್ಚ್ 22 2016

    ನನಗೆ ಗೊತ್ತಿಲ್ಲದ ತುಂಬಾ ವಿಷಯಗಳು ಗೊತ್ತಾಯಿತು ಈ ನಿಮ್ಮ ಬರಹದಿಂದ.

    ಉತ್ತರ
  2. ಮಾರ್ಚ್ 22 2016

    ನಿಲುಮೆ ಯಲ್ಲಿ ಬರುವ ಪ್ರತಿಯೊಂದು ಲೇಖನವೂ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ನಿಲುಮೆ ತಂಡದವರಿಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments