ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 8, 2010

3

ನಾವಾಗಿದ್ರೆ……?

‍ನಿಲುಮೆ ಮೂಲಕ

ಸಾತ್ವಿಕ್ ಎನ್ ವಿ
ನಮ್ಮ ಗೆಳೆಯನೊಬ್ಬನ ಬಗ್ಗೆ ನಮಗೆ ವಿಪರೀತ ಅಸಡ್ಡೆ. ಸದಾ ತಿಂಡಿಯದ್ದೇ ಜ್ಞಾನ. ಕಲಿಯುವುದರಲ್ಲಿ ಆರಕ್ಕೆರಲ್ಲ, ಮೂರಕ್ಕಿಳಿಯಲ್ಲ. ಅಪ್ಪನ ದುಡ್ಡಿನಿಂದ ಎಂಜಿನಿಯರಿಂಗ್ ಸೀಟ್ ಸಿಕ್ಕಿತು. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು. ಯಾವಾಗಲು ಬೈಕ್ ಬಿಟ್ಟು ಇಳಿಯಲಾರ. ನಿಂತಲ್ಲಿ ನಿಲ್ಲಲಾರ. (ಅವನು ಹಾಗೆ ನಿಲ್ಲದೇ ಇರೋದಕ್ಕೆ ಪಾಪ ಬೇರೆಯದೇ ಕಾರಣ ಇದೆ. ಕನಕಾಂಗಿ ಕೈಗೆ ಸಿಕ್ಕವರು ಕೋಲೆಬಸವನಾಗದೇ ವಿಧಿಯುಂಟೇ?)
ನೂರು ಸಲ ಹೇಳಿದ ಕೆಲಸ ನೂರಾವೊಂದನೆ ಸಲ ಮಾಡ್ತಾನೆ. ಇಂಥವನಿಗೊಂದು ಹುಟ್ಟುಹಬ್ಬ. ಇದಕ್ಕೆ ಖಗಪಕ್ಷಿಗಳ ಹಾಗೆ ಕಾದ ಸ್ನೇಹಿತರು ಒಂದು ವಾರದ ಮುಂಚಿನಿಂದಲೇ ತಯಾರಿ. ಯಾವುದಕ್ಕೆ ಎಲ್ಲಿ ಪಾರ್ಟಿ ಮಾಡೋದು ಅಂಥಾ. ಆದರೆ ಈ ಬಕಾಸುರ ನಗುತ್ತಾನೆಯೇ ಹೊರತು ಪ್ಲೇಸ್ ಬಾಯಿ ಬಿಡೊಲ್ಲ. ಇವನು ಸಿಕ್ರೇಟ್ ಗಿಷ್ಟು ಮೊದಲು ಎಲ್ಲಿ ಎಂದು ಹೇಳಬಾರದೇ ಎಂದುಕೊಂಡವರು ತುಂಬಾ ಜನ. ಆ ದಿನದ ಅತಿಥ್ಯಕ್ಕೆ ವಾರ ಉಪವಾಸ ಮಾಡ್ತೀನಿ ಗುರು ಅಂದೋರು ಇದ್ದರು. ಏನೇ ಹೇಳಲಿ ಇವನು ಬಾಯಿ ಬಿಡೋಲ್ಲ.

ಕೊನೆಗೆ ಈ ಮಹಾನುಭಾವನ ಹುಟ್ಟಿದ ದಿನವೂ ಬಂತು. ಸಂಜೆಯಲ್ವಾ ಪಾರ್ಟಿ ಅಂತಾ ಎಲ್ಲರೂ ಕಾಯ್ತಾ ಇದ್ದರು. ಸಂಜೆಯಾದ್ರು ಈ ಮಹಾನುಭಾವನ ಕಾಲ್ ಇಲ್ಲ. ಇನ್ನು ಫ್ರೆಂಡ್ಸ್ ಸುಮ್ನೆ ಇರ್ತಾರಾ? ಅವರೇ ಫೋನ್ ಮಾಡಿದ್ರು. ಅವನ ಉತ್ತರ ಕೇಳಿ ಅವರಿಗೆಲ್ಲ ತಲೆ ತಿರುಗೊದೊಂದೆ ಬಾಕಿ. ಪಾರ್ಟಿ ಮಧ್ಯಾಹ್ನನೇ ಮುಗಿತು ಎಂದು ನಿರುಮ್ಮಳನಾಗಿ ಫೋನ್ ಇಟ್ಟನಂತೆ. ಇವರು ನನಗೆ ಫೋನ್ ಮಾಡಿ ಅವನ ಗುಣಗಾನ ಆರಂಭ ಮಾಡಿದ್ರು. ಮೊದಲೇ ಅವನ ಬಗ್ಗೆ ನಮಗೆ ಅಸಡ್ಡೆ. ಹೀಗೆ ಮಾಡಿದ್ರೆ ಕೇಳಬೇಕೆ? ಆದ್ರೂ ನನಗೆ ಇದರಲ್ಲಿ ಎನೋ ವಿಶೇಷ ಇದೆ ಅನ್ನಿಸ್ತು. ಯಾಕಂದ್ರೆ ದುಡ್ಡು ಮಜಾ ಮಾಡೋಕೆ ಅನ್ನೋನು ಪಾರ್ಟಿ ತಪ್ಪಿಸಿ ಹಣ ಉಳಿಸಲು ಹೋಗಲ್ಲ. ಸಮಯ ಬಂದಾಗ ಕೇಳಿದರಾಯ್ತು ಅಂತ ಸುಮ್ಮನಾದೆ.
ಒಂದು ದಿನ ಅವನೇ ಯಾವುದೋ ವಿಷಯ ಕೇಳೊಕೆ ಬಂದ. ಆಗ ನಾನು ಪಾರ್ಟಿ ವಿಷಯ ಕೇಳಿದೆ. ಅದಕ್ಕೆ ಅವನು ಒಂದು ಕ್ಷಣ ಸುಮ್ಮನಿದ್ದು, ‘ನೋಡು ನಾನು ಆ ದಿನ ಖರ್ಚು ಮಾಡಬೇಕಿದ್ದ ಹಣನೆಲ್ಲಾ ಲೆಕ್ಕ ಹಾಕಿದೆ. ಇದಕ್ಕಿದ್ದ ಹಾಗೆ ನನ್ನ ಗೆಳೆಯರು ಹಣಕಾಸಿನಲ್ಲಿ ಕಷ್ಟದಲ್ಲಿರೋದು ನೆನಪಾಯ್ತು. ಅವರಿಗೆ ನೇರ ಹಣ ಕೊಟ್ಟರೆ ತಗೋಳಲ್ಲ. ದೇವರು ಬಡತನದ ಜೊತೆಗೆ ಸ್ವಾಭಿಮಾನನೂ ಕೊಟ್ಟಿರುತ್ತಾನೆ. ಅದಕ್ಕೆ ನಾನು ಹುಟ್ಟು ಹಬ್ಬದ ನೆವ ಮಾಡಿಕೊಂಡು ಅವರಿಗೆಲ್ಲ ಗಿಫ್ಟ್ ಕೊಡೊ ನೆಪದಲ್ಲಿ ನಮಗೆ ಆ ವರ್ಷ ಬೇಕಾದ ಟೆಕ್ಟ್ ಬುಕ್ ಗಳನ್ನು ತಂದು ಅವರಿಗೆ ಕೊಟ್ಟೆ. ಅಮ್ಮನೇ ಮಾಡಿದ ವಿಶೇಷ ಅಡುಗೆಯನ್ನು ಬಡಿಸಿದೆ. ಅವರ ಖುಷಿಯಲ್ಲಿ ನನಗೆ ಅದೇನೊ ಆನಂದ ಕಣೊ. ನನಗೆ ದೇವರು ಇಷ್ಟೊಂದು ಕೊಟ್ಟಿರುವಾಗ ನಾನು ಕೊನೆಪಕ್ಷ ನನ್ನ ಗೆಳೆಯರ ನೆರವಿಗೆ ಬರಲಿಲ್ಲ ಅಂದ್ರೆ ಏನು ಪ್ರಯೋಜನ ಅನ್ನಿಸ್ತು. ಅದಕ್ಕೆ ಹಾಗೆ ಮಾಡಿದೆ. ನಾನು ಪಾರ್ಟಿ ಕೊಡದೇ ಇರೊ ಬಗ್ಗೆ ನನಗೇನು ವಿಷಾದ ಇಲ್ಲ ಅಂತ ಏನೇನೊ ಹೇಳ್ತಾ ಇದ್ದ…. ನನಗೆ ಮಾತಾಡಲು ಬಾಯಿ ಬರಲ್ಲಿಲ್ಲ. ನನ್ನ ಕಣ್ಣುಗಳೆ ಮಾತಾಡುತ್ತಿದ್ದವು…

Read more from ಲೇಖನಗಳು
3 ಟಿಪ್ಪಣಿಗಳು Post a comment
  1. girisha's avatar
    girisha
    ಆಕ್ಟೋ 9 2010

    chennaagide saatwik. abhinandanegalu. girisha

    ಉತ್ತರ
  2. girisha's avatar
    girisha
    ಆಕ್ಟೋ 9 2010

    satwik, chennaagide. abhinandanegalu. -girisha

    ಉತ್ತರ
  3. girisha's avatar
    girisha
    ಆಕ್ಟೋ 9 2010

Leave a reply to girisha ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments