ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 22, 2010

1

ಉಳ್ಳಾಲದ ದರ್ಗಾ ಒಂದು ಪರಿಚಯ

‍ನಿಲುಮೆ ಮೂಲಕ

ಶಿಹಾ ಉಳ್ಳಾಲ್


ಭೂಗರ್ಭ ಶಾಸ್ತ್ರದ ಪ್ರಕಾರ ಭಾರತ ಮತ್ತು ಶ್ರೀಲಂಕೆಗಳು ಒಂದಾಗಿದ್ದುವೆಂದೂ, ಇವೆರಡರ ಮಧ್ಯೆ ಸಮುದ್ರವಿರಲಿಲ್ಲವೆಂದೂ  ಶ್ರೀಲಂಕೆಯ ತಲೈಮನ್ನಾರ್‌ನಿಂದ ರಾಮೇಶ್ವರದವರೆಗೆ ಕಲ್ಲುಗಳು ಇದ್ದು (ಆಡಂಬ್ರಿಜ್) ಇಲ್ಲಿ ಭೂಮಿ ಇದೆಯೆಂಬ ಕುರುಹು ಇದೆ. ಮತ್ತು ತಮಿಳುನಾಡಿನ ರಾಮೇಶ್ವರದಲ್ಲಿ ಸಯ್ಯಿದುನಾ ಆದಂ(ಅ.ಸ)ರ ಮಕ್ಕಳಾದ ಹಝ್ರತ್ ಹಾಬೀಲ್(ರ.ಅ.) ಮತ್ತು ಹಝ್ರತ್ ಖಾಬೀಲ್ (ರ.ಅ.)ಮಕ್‌ಬರವಿರುತ್ತದೆ. ಪ್ರವಾದಿ ಹಝ್ರತ್ ನೂಹ್ (ಅ.ಸ.)ರವರ ಕಾಲದಲ್ಲಿ (ಕ್ರಿ.ಪೂ.೩೭೮೦)ಬಂದ ಭೀಕರ ಜಲಪ್ರಳಯದಿಂದಾಗಿ  ಶ್ರೀಲಂಕೆ, ಭಾರತ ಭೂಖಂಡ ದಿಂದ ಬೇರ್ಪಟ್ಟಿತೆಂದೂ ಭೂಗರ್ಭ ಶಾಸ್ತಜ್ಞರು ಹೇಳಿರುತ್ತಾರೆ. ಹಾಗಾದರೆ ಹಿಂದಿನ ಕಾಲದಲ್ಲಿ ಶ್ರೀಲಂಕೆ ಭಾರತದ ಒಂದು ಭಾಗವಾಗಿತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರವಾದಿ ಆದಂ(.ಅ.ಸ)ರವರ ಪಾದಕಮಲಗಳು ಪ್ರಥಮವಾಗಿ ಸ್ಪರ್ಶಿಸಲ್ಪಟ್ಟ ಸ್ಥಳ ಅಂದೂ, ಇಂದೂ ‘ಆದಂಮಲೆ’ಎಂದು ಕರೆಯಲ್ಪಡುವ ಶ್ರೀಲಂಕೆಯ ಆದಂ ಪರ್ವತದಲ್ಲಿ ಎಂದು ಚರಿತ್ರೆ ಉಲ್ಲೇಖಿಸುತ್ತದೆ.  ಆ ಪುಣ್ಯ ಮಲೆ ಇಂದು ಜಗತ್ತಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಝ್ರತ್ ಆದಂ (ಅ.ಸ.)ರವರು ಆದಂಮಲೆಯ   ಮೇಲಿನಿಂದ  ಇಳಿದು ಬಂದು ಅದರ ಸುತ್ತಮುತ್ತಲ  ಪರಿಸರಗಳಲ್ಲಿ ಸಂಚರಿಸಿದ್ದರು. ಆ ಬಳಿಕ ಅಲ್ಲಾಹನ ಆದೇಶದಂತೆ ಹಝ್ರ್ರತ್ ಆದಮ್ (ಅ.ಸ.) ಭಾರತದ ಮೂಲಕ ಕಾಲ್ನಡಿಗೆಯಲ್ಲೇ ಪವಿತ್ರ ಮಕ್ಕಾದ ಕಡೆಗೆ ಹೊರಟರು. ಮಕ್ಕಾ ತಲುಪಿದ ಅವರು ಮಾನವ ಪಾಪ(ದೋಷ)ಪರಿಹಾರಕ್ಕೆ ಮಲಾಯಿಕರು(ದೇವದೂತ) ಅಂತರೀಕ್ಷದಲ್ಲಿರುವ ಬೈತುಲ್ ಮಅಮೂರ್ ಮಸೀದಿಯ ನೇರಕ್ಕೆ ಭೂಮಿಯಲ್ಲಿ ನಿರ್ಮಿಸಿದ ಕಅಬಾ-ಶರೀಫಿಗೆ ತೆರಳಿ ಅಲ್ಲಾಹನ ಸ್ತುತಿಗೈದು, ತನ್ನ ಪತ್ನಿ ಹವ್ವಾ (ರ.ಅ.) ರನ್ನು ಅರಫಾ ಮೈದಾನದಲ್ಲಿ ಸಂಧಿಸಿದರು. ಅಲ್ಲಿಂದ ಅವರೀರ್ವರೂ ಭಾರತಕ್ಕೆ ಹಿಂತಿರುಗಿ ಇಲ್ಲೇ ವಾಸಿಸತೊಡಗಿದರು.

ಪ್ರವಾದಿ ಸಯ್ಯಿದುನಾ ಆದಂ (ಅ.ಸ.)ರವರನ್ನು ಜಬಲ್ ಖುಬೈಸ್ ಎಂಬ ಬೆಟ್ಟದಲ್ಲಿಯೂ ಹಝ್ರತ್ ಹವ್ವಾ (ರ.ಅ.)ರವರು ಜಿದ್ದಾದಲ್ಲಿ ಅಂತ್ಯವಿಶ್ರಮ ಹೊಂದಿರುತ್ತಾರೆ.  ಹಝ್ರತ್ ಆದಂ (ಅ.ಸ.). ಹಾಗೂ ಹಝ್ರತ್ ಹವ್ವಾ (ರ.ಅ.) ದಂಪತಿಗೆ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು ೪೦೦ ಮಂದಿ ಸಂತತಿಗಳಿದ್ದರೆಂದೂ ಇಬ್ನ್ ಅಬ್ಬಾಸ್(ರ)ರವರು ವ್ಯಾಖ್ಯಾನಿಸಿದ್ದಾರೆ. ಅವರು ಶ್ರೀಲಂಕೆಯಿಂದ ಮಕ್ಕಾದ ವರೆಗಿನ ಹಲವಾರು ರಾಜ್ಯಗಳಲ್ಲಿ ಜೀವಿಸಿದ್ದರೆಂದೂ ಹೇಳಲಾಗಿದೆ.

ಭಾರತದಿಂದ ಮಲಬಾರ್ ಪ್ರದೇಶದ ದಾರಿಯಾಗಿ (ಸುಮಾರು) ೪೦ ಬಾರಿ ಆದಂ (ಅ.ಸ.)ರವರು ಪವಿತ್ರ ಮಕ್ಕಾಕ್ಕೆ ಹೋಗಿದ್ದರೆಂದು ‘ತಾರಿಕ್ ತಿಬಿರಿ’ ಯಲ್ಲಿ ಪ್ರಸ್ತಾಪಿಸಲಾಗಿದೆ. ಒಂದು ಸಾವಿರ ವರ್ಷ ಬದುಕಿ ಹಜ್ರತ್ ಆದಂ (ಅ.ಸ.) ರವರು ಇಹತ್ಯಾಗಗೈದರೆಂದು ಇಮಾಮ್ ನಬವಿ (ರ)ತನ್ನ ತಹ್ದೀಬ್ ಗ್ರಂಥದಲ್ಲಿ ಹೇಳಿದ್ದಾರೆ.

ಪ್ರವಾದಿ ಹಝ್ರತ್ ನೂಹ್ (ಅ.ಸ.)ರವರ ಕಾಲದಲ್ಲುಂಟಾದ ಜಲಪ್ರಳಯದ ನಂತರ ತನ್ನ ಪುತ್ರರಾದ ಸಾಮ್, ಹಾಮ್, ಯಾಫೀಸ್ ಎಂಬವರನ್ನು ಜಗತ್ತಿನ ಮೂರು ಕಡೆಗಳಿಗೆ ಪ್ರವಾದಿ ನೂಹ್(ಅ.ಸ.)ರವರು ಕಳುಹಿಸಿದ್ದರು. ಅವರಲ್ಲೊಬ್ಬರು ತನ್ನ ಕುಟುಂಬ ಸಹಿತ ಏಷ್ಯಾ ಖಂಡದ ಭಾರತದ ಮಲಬಾರ್ ಪ್ರಾಂತ್ಯದಲ್ಲಿ ಜೀವಿಸಿದ್ದರೇಂದೂ, ಅದೇ ಪ್ರಾಂತ್ಯದಲ್ಲಿ ಸಮಾಧಿ ಹೊಂದಿದರೆಂದೂ ಚರಿತ್ರೆ ಸಾಕ್ಷೀಕರಿಸುತ್ತದೆ. ಪ್ರವಾದಿ ಹಝ್ರ್ರತ್ ಮೂಸಾ (ಅ.ಸ.) (ಕ್ರಿ.ಪೂ೧೯೨೫)ರವರ ಅನುಯಾಯಿಗಳಲ್ಲೊಬ್ಬರಾದ ಅಶೈಕ್ ದಾವೂದುಲ್ ಹಕೀಂ(ರ.ಅ.)ರವರು ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ದರ್ಗಾ ಶರೀಫ್, ತಮಿಳ್ನಾಡಿನ ಮುತ್ತುಪೇಟೆ ಎಂಬಲ್ಲಿ ಕಾಣಬಹುದಾಗಿದೆ.

ಅಂತ್ಯಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ(ಸ.ಅ.)(ಕ್ರಿ.ಶ.೫೭೯)ರವರು ತನ್ನ ಅನುಯಾಯಿಗಳ ಪೈಕಿ ಕೆಲವರನ್ನು ಭಾರತಕ್ಕೂ ಕಳುಹಿಸಿದ್ದರು. ಅರೇಬಿಯಾದಿಂದ ಭಾರತಕ್ಕಾಗಮಿಸಿದ ಪ್ರವಾದಿ (ಸ.ಅ.)ರವರ ಅನುಯಾಯಿಗಳು ಕನ್ಯಾಕುಮಾರಿ ಮೊದಲ್ಗೊಂಡು ಗೋಕರ್ಣದವರೆಗಿನ ಮಲಬಾರ್ ಪ್ರದೇಶಗಳಲ್ಲಿ ಇಸ್ಲಾಮೀ ಪುನರುತ್ಥಾನ ಕಾರ್ಯದಲ್ಲಿ ಸಕ್ರಿಯರಾಗಿ ದುಡಿಯುವುದರೊಂದಿಗೆ ಪುರಾತನ ಮಸೀದಿಗಳ ಪುನರ್ ನಿರ್ಮಾಣ, ಹೊಸ ಮಸೀದಿಗಳ ನಿರ್ಮಾಣ, ದೀನೀ ವಿದ್ಯಾಭ್ಯಾಸ ವರ್ಧನೆ ಇತ್ಯಾದಿ ಮಹತ್ಕಾರ್ಯಗಳನ್ನು ನೆರವೇರಿಸುತ್ತಾ ಆ ಮಹಾನುಭಾವರು ಈ ದೇಶದಲ್ಲೇ ಬಹುಕಾಲ ಬದುಕಿ, ಭಾರತದ ವಿವಿದೆಡೆಗಳಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ದೃಷ್ಟಾಂತಗಳೂ, ಇತಿಹಾಸಗಳೂ ಬಹಳಷ್ಟಿವೆ.

ಕ್ರಿ.ಶ೧೫೯೨ ರಲ್ಲಿ ಹಿಜರಿ೧೦೦೦ ದ ಮೊದಲು ಪವಿತ್ರ ಮದೀನಾದಿಂದ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.)ರವರು ನೇರವಾಗಿ ಉಳ್ಳಾಲಕ್ಕೆ ಬಂದು, ಇಲ್ಲಿನ ಕ್ರಿ.ಶ. ೬೪೧ ಹಿಜರಿ೨೧ರಲ್ಲಿ ಜಾಬಿರ್ ಬಿನ್‌ಮಾಲಿಕ್(ರ.ಅ.)ರವರು ಖಾಝಿಯಾಗಿ ಉದ್ಘಾಟಿಸಲ್ಪಟ್ಟ (ಕೇರಳ ರಾಜ್ಯದ ಪಯ್ಯಂಗಡಿ ಮಾಡಾಯಿಪಳ್ಳಿಯ ಗಜೇಟಿಯರ್‌ನಲ್ಲಿರುವ ದಾಖಲೆಯಂತೆ) ಈ ಪುರಾತನ ಜುಮ್ಮಾ  ಮಸೀದಿಯನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಇಲ್ಲೇ ಜೀವಿಸುತ್ತಾ, ಕೊನೆಗೆ ಆ ಮಹಾನ್ ಪುರುಷ ಅದೇ ಮಸೀದಿಯ ಪರಿಸರದಲ್ಲಿ ಅಂತ್ಯವಿಶ್ರಮಗೊಂಡರು. ಗತಕಾಲದ ಇತಿಹಾಸವನ್ನು ಪ್ರತಿಬಿಂಬಿಸುವ ಉಳ್ಳಾಲದ ಈ ಮಸೀದಿಯನ್ನು ಈಗಿರುವ ಭವ್ಯ ಮಸೀದಿಯನ್ನಾಗಿ ೧೯೫೮ರಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ.)ರವರು ಅಂತ್ಯವಿಶ್ರಾಂತಿ ಪಡೆಯುತ್ತಿರುವ ದರ್ಗಾ ಶರೀಫ್, ಇಂದು ಕೇಂದ್ರ  ಜುಮ್ಮಾ ಮಸೀದಿಯ ಪಕ್ಕದಲ್ಲಿದ್ದು, ದೇಶ ವಿದೇಶಗಳ ಲಕ್ಷಾಂತರ ಮಂದಿ ಆಸ್ತಿಕ ಭಾಂದವರ ಯಾತ್ರಾಸ್ಥಳವಾಗಿ ಪ್ರಸಿದ್ಧಿ ಪಡೆದಿದೆ. ಈ ದರ್ಗಾ ಶರೀಫಿನ ಕಟ್ಟಡವನ್ನು ಇಷ್ಟೊಂದು ಸುಂದರವಾಗಿಯೂ, ಭವ್ಯವಾಗಿಯೂ ನಿರ್ಮಾಣಗೈದದ್ದು ೧೯೭೦ರಲ್ಲಾಗಿದೆ.

ಕರ್ನಾಟಕ ರಾಜ್ಯದ ದಕ್ಷಿಣ ಭಾಗವೂ,ಕೇರಳ ಕಿನಾರೆಯ ಉತ್ತರ ಭಾಗವೂ ಪರಸ್ಪರ ತಬ್ಬಿಕೊಂಡ ಮಂಗಳೂರು ನಗರ ಹಾಗೂ ತಲಪಾಡಿಯ ಮಧ್ಯೆ ಇರುವ ಚರಿತ್ರ ಪ್ರಸಿದ್ಧವಾದ ಉಳ್ಳಾಲ, ದೇಶದ ಪ್ರಖ್ಯಾತ ಪುಣ್ಯ ಕ್ಷೇತ್ರಗಳಲ್ಲೊಂದಾಗಿ ವಿಜೃಂಭಿಸುತ್ತಿದೆ. ಬಹು ಕಾಲದ ಹಿಂದೆ ದಟ್ಟ್ಟವಾಗಿ ಹಬ್ಬಿದ ಬಳ್ಳಿ ಕಾಡುಗಳಿಂದ ಆವೃತವಾಗಿ ಕತ್ತಲು ಕವಿದಿದ್ದ ಈ ನಾಡಲ್ಲಿ, ನೀಲಾಕಾಶದ ಬೆಳ್ಳಿ ನಕ್ಷತ್ರಗಳು ಕಣ್ಣು ತೆರೆದಾಗ ಮಾತ್ರ ಬೆಳಕು ಹರಿಯುತ್ತಿತ್ತು. ಅರಬಿ ಸಮುದ್ರದ ಭೋರ್ಗರೆವ ಮಾರುತದ ಮಡಿಳಲ್ಲಿ  ಅನಾಗರಿಕತೆಯ ಹೊದಿಕೆ ಹೊದ್ದು, ನಿದ್ರಿಸಿದ ಜನಸಮೂಹಕ್ಕೆ ಇಸ್ಲಾಮೀ ವಿಜ್ಞಾನದ ಪನ್ನೀರು ತಳಿಸಿ, ನಾಗರಿಕತೆಯ ಪ್ರಜ್ಞೆ ಮೂಡಿಸಲು ಸುಮಾರು ೪೦೦ ವರ್ಷಗಳ ಹಿಂದೆ ಪವಿತ್ರ ಮದೀನಾದಿಂದ ಪರ್ಯಟನೆ ಹೊರಟು ಪರ್ವತದೆತ್ತರದಲ್ಲಿ ಉರುಳಿ ಬೀಳುವ ಹಿಂದೂ ಮಹಾಸಾಗರದ ತೆರೆಗಳ ಮೇಲೆ ಬಟ್ಟೆಯೊಂದನ್ನು ಹಾಸಿ, ಅದರ ಮೇಲೆ ಕುಳಿತು, ಬಟ್ಟೆಯನ್ನೇ ವಾಹನವನ್ನಾಗಿ ಬಳಸಿಕೊಂಡು ರಾತ್ರಿ ಹಗಲೆನ್ನದೆ  ಸಹಸ್ರಾರು ಕಿ.ಮೀ.ಗಳಷ್ಠು ದೂರ ಜಲಯಾನ ಮಾಡಿ, ಕರಾವಳಿ ಕರ್ನಾಟಕದ ಉಳ್ಳಾಲಕ್ಕೆ ತಲುಪಿದ ಮಹಾ ಪುರುಷರಾಗಿದ್ದಾರೆ, ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ.)ತಂಗಳ್‌ರವರು.

ಮದನಿ ತಂಗಳ್‌ರ ಜೀವನ ಮತ್ತು ಉಪದೇಶ
ಉಳ್ಳಾಲದ ಮೇಲಂಗಡಿಯಲ್ಲಿ ಅದಕ್ಕೂ ಮೊದಲೇ ಇದ್ದ ಇದೇ ಜುಮ್ಮಾ ಮಸೀದಿಯಲ್ಲಿ ಮದನಿ ತಂಗಳ್ ವಾಸಿಸತೊಡಗಿದರು.ತನ್ನ ಬದುಕನ್ನೇ ಅಲ್ಲಾಹನ ಸಂಪ್ರೀತಿಗಾಗಿ ಸಮರ್ಪಿಸಿಕೊಂಡ ಆ ಮಹಾನುಭಾವರು, ಕುರ್‌ಆನ್ ಪಾರಾಯಣದಲ್ಲೂ, ವೃತಾನುಷ್ಠಾನದಲ್ಲೂ, ನಮಾಜಿನಲ್ಲೂ, ಆರಾಧನೆ, ಪ್ರಾರ್ಥನೆಗಳಲ್ಲೂ ತಲ್ಲೀನರಾಗುವುದರೊಂದಿಗೆ, ತಾನಿಲ್ಲಿಗೆ ಬಂದ ಅತೀ ಪ್ರಾಮುಖ್ಯ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಸ್ಥಳೀಯ ಜನರೊಂದಿಗೆ ಸಂಪರ್ಕವಿರಿಸ ತೊಡಗಿದರು. ಉಪದೇಶ, ಮಾರ್ಗದರ್ಶನಗಳನ್ನು ನೀಡತೊಡಗಿದರು. ಪ್ರಥಮ ಪ್ರವಾದಿ ಹಝ್ರತ್ ಆದಂ(ಅ.ಸ)ರ ಮೊದಲ್ಗೊಂಡು ಅಂತ್ಯಪ್ರವಾದಿ ಮಹಮ್ಮದ್ ಮುಸ್ತಫಾ(ಸ.ಅ.)ತನಕದ ೧,೨೪,೦೦೦ ಪ್ರವಾದಿಗಳೂ, ಅವರ ಅನುಯಾಯಿಗಳಾದ ಸ್ವಹಾಬಿಗಳೂ, ಮದ್‌ಹಬ್‌ನ ಇಮಾಮರುಗಳೂ, ಖುತುಬುಲ್ ಅಖ್ತಾಬ್ ಅಶೈಕ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ(ಖ.ಸಿ.)ರವರೂ ಅಜ್ಮೀರಿನ ಖ್ವಾಜಾ ಮುಈನುದ್ದೀನ್ ಜಿಸ್ತಿ (ಖ.ಸಿ.) ಮುಂತಾದ ಮಹಾ ಪುರುಷರು ಈ ಜಗತ್ತಿಗೆ ಏನನ್ನೂ ಭೋದಿಸಿದ್ದಾರೋ, ಅವರಿಲ್ಲಿ ಏನೆಲ್ಲಾ ಸತ್ಕಾರ್ಯಗಳನ್ನುಗೈದಿದ್ದಾರೋ ಅದನ್ನೇ ಹಝ್ರತ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.)ರವರೂ ಉಪದೇಶಿಸಿದರಲ್ಲದೇ, ಜನರ ಧಾರ್ಮಿಕ, ಸಾಮಾಜಿಕ, ಉನ್ನತಿಗಾಗಿ ಜೀವ ಸವೆಸಿದರು.
“ದೇವ ವಿಶ್ವಾಸ ಮತ್ತು ಧರ್ಮ ಪ್ರಜ್ಞೆಗಳನ್ನು ದೃಢಗೊಳಿಸಿ  ಜೀವಿಸಬೆಕೆಂದೂ, ಐಹಿಕ ಜಗತ್ತು ನಶ್ವರವಾದುದೆಂದೂ, ಈ ಜೀವಿತಕ್ಕೊಂದು ಅಂತ್ಯವಿದೆ, ಐಹಿಕ ಜಗತ್ತು ಒಂದು ಕೃಷಿಸ್ಥಳವಾಗಿದೆ. ಶಾಶ್ವತವಾದ ಪಾರತ್ರಿಕ ಲೋಕಕ್ಕೆ ಅಗತ್ಯವುಳ್ಳ ಸತ್ಫಲಗಳನ್ನು ಇಲ್ಲಿ ಬೆಳೆಸಿಕೊಳ್ಳಬೇಕಾಗಿದೆ. ಇಲ್ಲಿ ಮಾಡಿದ ಸತ್ಕರ್ಮಗಳು ನಾಳೆ ಪರಲೋಕದಲ್ಲಿ ಬೆಳಕು ನೀಡುವುದೆಂದೂ, ಸಂಪತ್ತು ಹಾಗೂ ದಾರಿದ್ರ್ಯಗಳು ಔದಾರ್ಯವಲ್ಲ, ಅವುಗಳು ಅಲ್ಲಾಹನ ಪರೀಕ್ಷಾ ಮಾಧ್ಯಮಗಳು” ಇವೆಲ್ಲಾ ಹಝ್ರ್ರತ್ ಸಯ್ಯಿದ್ ಮದನಿ ತಂಗಳ್(ಖ.ಸಿ.)ರ ಉಪದೇಶಗಳ ಕೆಲವು ತುಣುಕುಗಳಾಗಿವೆ.
ಈ ಮಧ್ಯೆ ಉಳ್ಳಾಲಕ್ಕೆ ಸಮೀಪದ ಅಳೇಕಲ ಎಂಬಲ್ಲಿನ ಸುಸಂಸ್ಕೃತ ಕುಟುಂಬದ ಸ್ತ್ರೀಯೊಬ್ಬಾಕೆಯನ್ನು ಆ ಮಹಾ ಪುರುಷ  ಸಯ್ಯಿದ್ ಮದನಿ ತಂಗಳ್ ವಿವಾಹವಾದರು. ಉತ್ತಮ ಸಂಸ್ಕೃತಿಯೂ, ಬುದ್ಧಿ ವಿವೇಕವೂ, ಚರಿತ್ರ್ಯಶುದ್ಧಿಯೂ ಉಳ್ಳ ಆದರ್ಶ ಸ್ತ್ರೀಯಾಗಿದ್ದರು ಅವರು..

ಕರಾಮತ್(ಪವಾಡ)ಗಳು.
ಒಂದು ದಿನ ಅಳೇಕಲ ಮಸೀದಿಯ ಕೆರೆಯಲ್ಲಿ ನಮಾಜಿಗಾಗಿ ಅಂಗ ಶುದ್ಧಿಗೊಳಿಸುತ್ತಿದ್ದ ಹಜ್ರತ್ ಸಯ್ಯಿದ್ ಮದನಿ ತಂಗಳ್, ತನ್ನೆರಡೂ ಕೈಗಳಲ್ಲಿ ‘ನೀರೆನ್ನೆತ್ತಿಕೊಂಡು ಪದೇ ಪದೇ ಹಲವಾರು ಬಾರಿ ಮೇಲಕ್ಕೆತ್ತಿ ನೀರೆರಚಿದರು. ಈ ದೃಶ್ಯ ಕಂಡು ಚಕಿತರಾದ ಮಂದಿ ಈ ರೀತಿ ಮೇಲಕ್ಕೆ ನೀರೆರಚಲು ಕಾರಣವೇನೆಂದು ಮದನಿ ತಂಗಳ್‌ರವರಲ್ಲಿ ವಿಚಾರಿಸಿದರು.  ಮಕ್ಕಾದ ಪವಿತ್ರ ಹರಮ್ ಶರೀಫಿನ ಒಂದು  ಮೂಲೆಯಲ್ಲಿ ಬೆಂಕಿ ಹತ್ತಿಕೊಂಡದ್ದು ನನಗೆ ಕಂಡಿತು. ಅದಕ್ಕಾಗಿ ಇಲ್ಲಿಂದ ನೀರೆರಚಿ ಆ ಬೆಂಕಿಯನ್ನು ನಂದಿಸಿದೆ’ ಎಂದು ಸಯ್ಯಿದ್ ಮದನಿಯವರು ಉತ್ತರಿಸಿದರು. ಆ ವರ್ಷ ಹಜ್ ಯಾತ್ರೆಗೆ ಹೋಗಿದ್ದ ಸ್ಥಳೀಯ ಯಾತ್ರಿಕರು ಹಜ್ ಕಾರ್ಯ ಮುಗಿಸಿ ಮರಳಿದ ನಂತರ  ಪವಿತ್ರ ಹರಮ್ ಶರೀಫಿನ ಒಂದು ಭಾಗಕ್ಕೆ ಬೆಂಕಿ ಹಿಡಿದಿತ್ತೆಂದೂ, ಅನಿರೀಕ್ಷಿತವಾಗಿ ಎಲ್ಲಿಂದಲೋ ನೀರು ಎರೆಚಲ್ಪಟ್ಟು ಆ ಬೆಂಕಿ ನಂದಿತೆಂದೂ ಹೇಳಿದಾಗ, ಸಯ್ಯಿದ್ ಮದನಿ ತಂಗಳ್ ರವರು ಇಲ್ಲಿಂದ ಎರೆಚಿದ ನೀರೇ ಮಕ್ಕಾದ ಬೆಂಕಿಯನ್ನು ಆರಿಸಿದ್ದೆಂಬ ವಾಸ್ತವಿಕತೆ ಎಲ್ಲರಿಗೂ ಮನವರಿಕೆಯಾಯಿತು.
ಉಳ್ಳಾಲ ಸಮೀಪದ ನಮಾಜು ಮಸೀದಿಯ ಮೌಲವಿಯೊಬ್ಬರು ಆಧ್ಯಾತ್ಮಕ ವಿಚಾರಗಳ ಕುರಿತು ಅರಿತು ಕೊಳ್ಳ್ಳುವುದಕ್ಕಾಗಿ ಸಯ್ಯಿದ್ ಮದನಿ ತಂಗಳ್(ಖ.ಸಿ.)ರಲ್ಲಿ ಆಗಾಗ ಬರುವ ವಾಡಿಕೆ ಇತ್ತು. ಒಂದು ದಿನ ಆ ಮೌಲವಿಯವರು ಮದನಿ ತಂಗಳ್(ಖ.ಸಿ.)ರವರಲ್ಲಿ ಜಿನ್ನ್‌ಗಳ ಕುರಿತಾದ ಕೆಲವು ವಿಚಾರಗಳನ್ನು ಕೇಳಿದರು. ‘ನಿಮಗೆ ಇಂದೇ ಜಿನ್ನನ್ನು ಕಾಣಿಸುವೆನು’. ನೀವು ಹೋಗಿ’  ಎಂದು ಮದನಿ ತಂಗಳ್(ಖ.ಸಿ.) ಆ ಮೌಲವಿಯನ್ನು ಕಳುಹಿಸಿದರು. ರಾತ್ರಿ ಸುಂದರವಾದ ಒಬ್ಬ ವ್ಯಕ್ತಿ ತನ್ನ ಬಳಿ ಬರುವುದನ್ನು ಆ ಮೌಲವಿ ಕಂಡರು, ಮಸೀದಿಯೊಳಗೆಲ್ಲಾ ಸುವಾಸನೆ ಹಬ್ಬಿ ಕೊಂಡಿತ್ತು. ಆ ಅಪರಿಚಿತ ವ್ಯಕ್ತಿ ಸಲಾಂ ಹೇಳಿದಾಗ ಮೌಲವಿ ಮರು ಸಲಾಂ ಹೇಳಿದರು. ಅವರಿಬ್ಬರೂ ಪರಸ್ಪರ ಮಾತನಾಡಿಕೊಂಡರು.ಹಾಗಾದರೆ ಸುಗಂಧ ಭರಿತ ಸುವಾಸನೆ ಎಲ್ಲಿಂದ ಬರುತ್ತಿದೆ ಎಂದು ಮೌಲವಿ ವಿಚಾರಿಸಿದಾಗ ಆ ಬಂದ ವ್ಯಕ್ತಿ ತನ್ನ ಕೈಯಲ್ಲಿದ್ದ ಚೀಲದಿಂದ ವಿಶಿಷ್ಠವಾದ ಪುಷ್ಪವೊಂದನ್ನು ತೆಗೆದು ಬೀಸುತ್ತಿರುವ ಪರಿಮಳ ಈ ಹೂವಿನದ್ದೆಂದು ತಿಳಿಸಿದರು. ಆ ಪುಷ್ಪವನ್ನು ತನಗೆ ಕೊಡುವಿರಾ ಎಂದು ಮೌಲವಿಯವರು ಕೇಳಿದಾಗ ಆ ವ್ಯಕ್ತಿ ತಕ್ಷಣ ಹೂವನ್ನು ಮೌಲವಿಯ ಕೈಗಿತ್ತು ಮರೆಯಾದರು. ಬೆಳಗಾಗುತ್ತಲೇ ಮೌಲವಿಯವರು ಹೂವಿನೊಂದಿಗೆ ಮದನಿ ತಂಗಳ್(ಖ.ಸಿ.)ರ ಬಳಿ ಧಾವಿಸಿ ಬಂದು ನಡೆದ ವೃತ್ತಾಂತವನ್ನೆಲ್ಲಾ ವಿವರಿಸಿದರು.’ ನಿನ್ನೆ ನೀವು ಕೇಳಿದ ಜಿನ್ನ್ ವರ್ಗದ ವ್ಯಕ್ತಿಯೊಬ್ಬರನ್ನು ನಿಮ್ಮ ಬಳಿ ಕಳುಹಿಸಿದ್ದೆ, ನೀವು ಭಯ ಪಡುವುದು ಬೇಡವೆಂದು ಮನುಷ್ಯ ರೂಪದಲ್ಲಿ ಕಳುಹಿಸಿದ್ದು’ ಎಂದು ಸಯ್ಯಿದ್ ಮದನಿ ತಂಗಳ್(ಖ.ಸಿ.) ವಿಶದೀಕರಿಸಿದಾಗ  ಮೌಲವಿಯವರು ಆನಂದಪರವಶರಾದರು.
ಮಂಗಳೂರಿನಲ್ಲಿ ಬಂದಿಳಿದ ಹಾಯಿಹಡಗೊಂದರಿಂದ ಸಾಮಾಗ್ರಿಗಳನ್ನು ಇಳಿಸುವಾಗ ಹಡಗಿನಲ್ಲಿ ಬಂದ ವರ್ತಕರು  ತಾವು ಜೋಪಾನವಾಗಿರಿಸಿದ ಚಿನ್ನ  ತುಂಬಿದ ಚೀಲವೊಂದು ಆಕಸ್ಮಾತ್ ಸಮುದ್ರಕ್ಕೆ ಬಿದ್ದು ನೀರು ಪಾಲಾಯಿತು. ಇದರಿಂದ ಬಹಳಷ್ಟ್ಠು ದುಃಖಕ್ಕೀಡಾದ ಆ ವರ್ತಕರು ಮಂಗಳೂರಿನ ಅನೇಕರಲ್ಲಿ ಈ ವಿಚಾರ  ನಿವೇದಿಸಿಕೊಂಡಾಗ. ಇಲ್ಲಿಗೆ ಸಮೀಪದ ಉಳ್ಳಾಲದಲ್ಲಿಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.)ಎಂಬ ಹೆಸರಿನ ಸಂತರೊಬ್ಬರಿದ್ದಾರೆ. ಅವರಲ್ಲಿ ವಿಚಾರ ಹೇಳಿದರೆ ಅವರು ನಿಮಗೊಂದು ಪರಿಹಾರ ಕಾಣಿಸಬಹುದು. ಎಂದು ಕೆಲವರು ಆ ವರ್ತಕರಲ್ಲಿ ಸೂಚಿಸಿದರು. ಹಾಗೆಯೇ ಆ ವರ್ತಕರು ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.)ರ ಬಳಿಗೆ ಬಂದು ತಮ್ಮ ದುಃಖವನ್ನು ನಿವೇದಿಸಿದಾಗ ‘ಈ ವಿಷಯದಲ್ಲಿ  ನೀವು ವ್ಯಸನಿಸದಿರಿ, ಅಲ್ಲಾಹುವಿನ ಸಹಾಯದಿಂದ ನಿಮಗದು ಮರಳಿ ಸಿಗುವುದು. ‘ನೀವು ಈಗ ಹೋಗಿ, ನಾಳೆ ಪುನಃ ಇಲ್ಲಿಗೆ ಬನ್ನಿ’ ಎಂದು ಮದನಿ ತಂಗಳ್(ಖ.ಸಿ.) ರವರು ಹೇಳಿದರು. ಅಂತೆಯೇ ಆ ವರ್ತಕರು ಅಂದು ಸಮಾದಾನದಿಂದ ಅಂದು ನಿರ್ಗಮಿಸಿ, ಮರುದಿನ ಆ ಮಹಾನುಭಾವರ  ಸನ್ನಿಧಿಯಲ್ಲಿ ಹಾಜರಾದರು. ತಕ್ಷಣ ಸಯ್ಯಿದ್ ಮದನಿ ತಂಗಳ್(ಖ.ಸಿ.) ರು ತಾನು ಕುಳಿತಿದ್ದ ಪೀಠದ ಹಿಂದಿನಿಂದ ತೆಗೆದು  ತೋರಿಸಿದಂತೆ ಮಾಡಿ ಅವರು ಚಿನ್ನ ಇರಿಸಿದ್ದ ಚೀಲ ಹಿಡಿದುಕೊಂಡು ‘ಈ ಚೀಲ ನಿಮ್ಮದೋ’ಎಂದು ವಿಚಾರಿಸಿದರು. ಆ ಚೀಲದಿಂದ  ನೀರಹನಿಗಳು ಉಸುರುತ್ತಿದ್ದವು. ಕೂಡಲೇ ಆ ವರ್ತಕರು ಚೀಲವನ್ನು ಪರೀಕ್ಷಿಸಿ, ಇದು ತಮ್ಮ ಚೀಲವೆಂದು ದೃಢಪಡಿಸಿದಾಗ, ಮದನಿ ತಂಗಳ್(ಖ.ಸಿ.) ಆ ಚೀಲವನ್ನು ಅವರಿಗೆ ನೀಡಿ ಅವರನ್ನು ಆಶೀರ್ವದಿಸಿ ಕಳುಹಿಸಿದರು.
ಸಂತ ಶ್ರೇಷ್ಠ ಹಝ್ರತ್ ಸಯ್ಯಿದ್ ಮದನಿ (ಖ) ತಂಗಳ್(ಖ.ಸಿ.) ರವರು ಪ್ರಾತ ಕಾಲದ ನಮಾಜಿಗಾಗಿ ತನ್ನ ಪತ್ನಿಯನ್ನು ನಿದ್ದೆಯಿಂದೆಚ್ಚರಿಸುವ ಕ್ರಮವಿತ್ತು. ಅದೊಂದು ದಿನ ಎಂದಿನಂತೆ ಅವರು ಪತ್ನಿಯನ್ನು ನಿದ್ದೆಯಿಂದ ಎಚ್ಚರಿಸಿದರು. ಪತ್ನಿ ಎದ್ದು ಪ್ರಾತಃಕಾಲದ ಆರಾಧನೆ ಹಾಗೂ ಇನ್ನಿತರ ನಿತ್ಯವಿಧಿಗಳನ್ನು ಪೂರೈಸಿ ಬರುವಾಗ ತನ್ನ ಪತಿ ಇನ್ನೂ ಮಲಗಿ ನಿದ್ರಿಸುತ್ತಿರುವುದನ್ನು ಕಂಡು ಅವರನ್ನು ಎಚ್ಚರಿಸಿ, ‘ತಾವು ಏತಕ್ಕಾಗಿ ಬೆಳಗಿನ ನಮಾಜಿಗಾಗಿ ಎದ್ದೇಳಲಿಲ್ಲ’ಎಂದು ವಿಚಾರಿಸಿದರು. ಪತ್ನಿಯ        ಸಮಯೋಚಿತ ಪ್ರಶ್ನೆಗೆ ‘ನಾನು ನನ್ನ ಜನ್ಮ ಭೂಮಿಯಾದ ಮದೀನಾದಲ್ಲಿರುವ ಪವಿತ್ರ ‘ಮಸ್ಜಿದುನ್ನಭವಿಯಲ್ಲಿ ಬೆಳಗಿನ ನಮಾಜು ಮುಗಿಸಿ ಬಂದು ಇಲ್ಲಿ ನಿದ್ರಿಸಿದ್ದಾಗಿದೆ’ ಎಂದು ಸಯ್ಯಿದ್ ಮದನಿ ತಂಗಳ್(ಖ.ಸಿ.) ಉತ್ತರಿಸಿದರು.
ಹಝ್ರತ್ ಸಯ್ಯಿದ್ ಮದನಿ ತಂಗಳ್(ಖ.ಸಿ.)ರವರಿಗೆ  ಮುಪ್ಪು ಆವರಿಸುತ್ತಿರುವಾಗ ಒಂದು ದಿನ ಪತಿ-ಪತ್ನಿ ಯರ ಮಾತಿನ ಮಧ್ಯೆ ‘ಅಲ್ಲಾಹ ವಿಧಿಯಂತೆ ಒಂದು ವೇಳೆ ನನಗಿಂತಲೂ ಮೊದಲು ನನ್ನನ್ನು ಬಿಟ್ಟು ಇಹ ತ್ಯಾಗಗೈದದ್ದಾದರೆ ನನ್ನ ಜೀವನಕ್ಕೆ ಏನು ದಾರಿಯಿದೆ’ ಎಂದು ಬಹಳ ದೂರದೃಷ್ಟಿಯಿಂದ ಪ್ರಶ್ನಿಸಿದಾಗ, ‘ನನ್ನ ಮರಣಾ ನಂತರ ನಿನ್ನ ದೈನಂದಿನ ಜೀವನಕ್ಕೆ ಬೇಕಾಗುವಷ್ಟು ಹಣ ನನ್ನ ಹಾಸಿಗೆಯಡಿಯಿಂದ ದಿನಂಪ್ರತಿ ನಿನಗೆ ಲಭಿಸುವುದು, ಎಂದು ಹಝ್ರತ್ ಸಯ್ಯಿದ್ ಮದನಿ ತಂಗಳ್(ಖ.ಸಿ.) ಪತ್ನಿಯನ್ನು ಸಾವಧಾನಿಸಿದರು.
ಅಲ್ಲಾಹನ ವಿಧಿಯಂತೆಯೇ ಆಗಿತ್ತು. ಹಜ್ರತ್ ಸಯ್ಯಿದ್ ಮದನಿತಂಗಳ್(ಖ.ಸಿ.)ರವರ ಮರಣಾ ನಂತರ ಅವರ ಹಾಸಿಗೆ ಅಡಿಯಿಂದ ದಿನಂಪ್ರತಿ ಒಂದೊಂದು ನಾಣ್ಯ ಅವರ ಪತ್ನಿಗೆ ಸಿಗುತ್ತಿತ್ತು. ಒಂದು ದಿನ ನೆರೆ ಮನೆಯ ಹೆಂಗಸರ ಸಲಹೆಯಂತೆ ಸಿಗುತ್ತಿದ್ದ ಒಂದು ನಾಣ್ಯದಲ್ಲಿ ಮರುದಿನದಿಂದ ಅರ್ಧ ನಾಣ್ಯ ಖರ್ಚು ಮಾಡಿ ಅರ್ಧ ನಾಣ್ಯ ತೆಗೆದಿರಿಸತೊಡಗಿದರು. ಆದರೆ ಒಂದು ದಿನ ಮಾತ್ರವೇ ಅರ್ಧ ನಾಣ್ಯ ತೆಗೆದಿರಿಸಲು ಸಾಧ್ಯವಾಯಿತು. ಮರುದಿನದಿಂದ ಹಾಸಿಗೆಯಡಿಯಲ್ಲಿ ದಿನ ಖರ್ಚಿಗೆ ಸಾಕಾದೀತೆಂದು ಗ್ರಹಿಸಿದ  ಅರ್ಧ ನಾಣ್ಯ ಮಾತ್ರವೇ ಲಭಿಸಲಾರಂಭಿಸಿತು. ಆ ವಿಧವಾ ಸ್ತ್ರೀ ಬದುಕಿದ್ದ ಕೊನೆಯ ದಿನದವರೆಗೂ ಅವರ ಜೀವನಕ್ಕಾಗಿ ಆ ನಾಣ್ಯ ಸಿಗುತ್ತಲೇ ಇತ್ತು.
ಆ ಮಹಾನುಭಾವರ  ಮರಣಾ ನಂತರ ಒಂದು ಬಾರಿ ಬಹುತೇಕ ಮಂದಿ ಕಾಲರಾವ್ಯಾಧಿಗೆ ತುತ್ತಾಗಿ ಬಹಳಷ್ಟು  ಸಾವು ಸಂಭವಿಸಿತು. ಈ ಮಾರಕ ವ್ಯಾಧಿಯಿಂದ ತತ್ತರಿಸಿದ ಜನರು ಒಂದುಗೂಡಿ ಮದನಿತಂಗಳ್(ಖ.ಸಿ.)ರ ಮಖ್‌ಬರದ ಬಳಿ ಬಂದು, ಹಝ್ರತ್ ಸಯ್ಯಿದ್ ಮದನಿ ತಂಗಳ್(ಖ.ಸಿ.)ರ ಬರ್ಕತ್ತಿನಿಂದ ತಮ್ಮನ್ನು ಈ ಸಾಂಕ್ರಾಮಿಕ ರೋಗದಿಂದ ರಕ್ಷಿಸಬೇಕೆಂದು  ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಅದೇ ದಿನ ಮಧ್ಯರಾತ್ರಿ ದರ್ಗಾದ ಬಳಿಯಲ್ಲಿ ಬಾಂಗ್ ಕರೆಯೂ, ಕುದುರೆ ಘೀಳಿಡುವುದೂ ಕೇಳಿಸಿತು. ಅಲಂಕೃತ ವಸ್ತ್ರ ಧರಿಸಿದ ಒಬ್ಬ ಯುವಕ ಕುದುರೆಯ ಮೇಲೇರಿ, ಕಾಲರಾ ಪೀಡಿತ ಪ್ರದೆಶಗಳಲ್ಲೆಲ್ಲಾ ಸಂಚರಿಸಿದ್ದನ್ನು ಹಲವರು ಕಣ್ಣಾರೆ ಕಂಡರು. ಮರುದಿನ ಬೆಳಗಾಗುವುದರೊಳಗಾಗಿ ಆ ಭೀಕರ ರೋಗದಿಂದಲೂ, ತಾಳಲಾರದ ದುಃಖದಿಂದಲೂ ಸರ್ವಶಕ್ತನಾದ ಅಲ್ಲಾಹು ಎಲ್ಲರನ್ನೂ ರಕ್ಷಿಸಿದ್ದ, ಅಂದಿನಿಂದ ಇದುವರೆಗು ಆ ಪರಿಸರದಲ್ಲಿ ಅಂತಹ ಮಾರಕ  ರೋಗಗಳು ಮತ್ತೆ ಬರಲಿಲ್ಲ.
ಒಂದೊಮ್ಮೆ ಉಳ್ಳಾಲ ದರ್ಗಾದ ಉರೂಸಿನ ಪೂರ್ವಭಾವಿಯಾಗಿ ಮಸೀದಿ, ದರ್ಗಾಗಳಿಗೆ ಬಣ್ಣ ಬಳಿಯಲೆಂದು ಬಂದಿದ್ದ ಆಲ್ಬರ್ಟ್ ಎಂಬ ಪೈಂಟರ್ ದಿನಂಪ್ರತಿ ನೂರಾರು  ಮಂದಿ ದರ್ಗಾಕ್ಕೆ ಬಂದು ತಮ್ಮ ವಿಭಿನ್ನ ಉದ್ದೇಶಗಳ ಈಡೇರಿಕೆಗಾಗಿ  ಪ್ರಾರ್ಥಿಸುವುದನ್ನು ಕಂಡು, ಎರಡು ವರ್ಷಗಳ ಹಿಂದೆ ತನ್ನಿಂದ ಕಳೆದು ಹೋಗಿದ್ದ ಚಿನ್ನದ ಚೈನೊಂದು ಈ ದರ್ಗಾ ದಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ  ಮಹಾ ಪುರುಷರ ಪುಣ್ಯದಿಂದಲೂ ತನಗೆ ಮರಳಿ ಸಿಗುತ್ತಿದ್ದರೆ ಒಳ್ಳೆಯದಿತ್ತೆಂದು ಆತ ದರ್ಗಾ ಸನ್ನಿಧಿಯಲ್ಲಿ ಪ್ರಾರ್ಥಿಸಿದ. ಅಂದು ಆಲ್ಬರ್ಟ್ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಹಂಪನಕಟ್ಟೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಹೆಂಗಸೊಬ್ಬಳ ಕುತ್ತಿಗೆಯಲ್ಲಿ ಕಳೆದು ಹೋಗಿದ್ದ ತನ್ನ ಚಿನ್ನದ ಸರವನ್ನು ಗುರುತಿಸಿದ  ಆಲ್ಬರ್ಟ್ ಆಕೆಯ ಬಳಿ ಹೋಗಿ ‘ಅಮ್ಮಾ ನಿಮ್ಮ ಕುತ್ತಿಗೆಯಲ್ಲಿರುವ ಚಿನ್ನದ ಸರ ನನ್ನದು ಎರಡು ವರ್ಷಗಳ ಹಿಂದೆ ಅದು ನನ್ನಿಂದ ಕಳೆದು ಹೋಗಿತ್ತು. ದಯವಿಟ್ಟು ಅದನ್ನು ನನಗೆ ಕೊಡಿ’ಎಂದು ಕೇಳಿದಾಕ್ಷಣ ಆ ಸ್ತ್ರೀ ತನ್ನ ಕುತ್ತಿಗೆಯಿಂದ ಚೈನನ್ನು ತೆಗೆದು ಆಲ್ಬರ್ಟ್ ನ ಕೈಗಿತ್ತಳು.
ಒಂದು ದಿನ ಮೂಕನಾದ ಮುಸ್ಲಿಮೇತರ ವ್ಯಕ್ತಿಯೊಬ್ಬ ದರ್ಗಾದ  ಬಳಿಯಿಂದಾಗಿ ದಾಟಿ ಹೋಗುತ್ತಿದ್ದಾಗ ತಟ್ಟನೆ ಏನೋ ನೆನಪಾದಂತಾಗಿ, ದರ್ಗಾಕ್ಕೆ ಅಭಿಮುಖೀಕರಿಸಿಕೊಂಡು  ಕೈಜೋಡಿಸಿ ನಿಂತು  ‘ಮಾತನಾಡಲಾರದ ನನಗೆ ಈ ಪುಣ್ಯ ಪುಣ್ಯ ಸ್ಥಳದಲ್ಲಿ ಮಾತನಾಡುವ ಸೌಭಾಗ್ಯವನ್ನು ದಯಪಾಲಿಸು ದೇವಾ’ ಎಂದು ಹೃದಯಾಂತರಾಳದಲ್ಲಿ ಮೊರೆಯಿಟ್ಟು ಪ್ರಾರ್ಥಿಸಿದ. ಅಷ್ಟರಲಿ ಬಿರುಸಾದ ಗಾಳಿ ಮಳೆ ಬರತೊಡಗಿತು. ಆ ಮೂಕ ವ್ಯಕ್ತಿ ಅಲ್ಲಿಂದ ಓಟಕಿತ್ತ. ಓಡುವಾಗ ಕಲ್ಲು ಎಡ ಬಿದ್ದುಬಿಟ್ಟ. ಬಿದ್ದಲ್ಲಿಂದ ಏಳುತ್ತಿರುವಂತೆಯೇ ಆ ವ್ಯಕ್ತಿ ಸರಿಯಾಗಿ ಮಾತನಾಡಲಾರಂಭಿಸಿದ.
ಒಂದು ಸಲ ಉರೂಸಿನ ಅವಶ್ಯಕತೆಗಾಗಿ ಮಾಂಸ ಖರೀದಿಸುವಾಗ ಮಾಂಸ ಮಾರುವವನು ಒಮ್ಮೆ ತೂಗಿದ ಮಾಂಸವನ್ನೇ ಮತ್ತೆ ಮತ್ತೆ ತೂಕ ಮಾಡಿ ಮೋಸ ಮಾಡಲೆತ್ನಿಸಿದ, ಅರೆಕ್ಷಣದಲ್ಲಿ ಆ ವ್ಯಕ್ತಿಗೆ ಸಹಿಸಲಾಗದ ಹೊಟ್ಟೆನೋವು ಪ್ರಾರಂಭವಾಯಿತು. ಯಾವ ಔಷಧಿಯಲ್ಲೂ ಶಮನವಾಗಿಲ್ಲ, ಕೊನೆಗೆ ತನ್ನ ತಪ್ಪಿಗಾಗಿ ಪಶ್ಚಾತಾಪಪಟ್ಟು ಆತ ಸಯ್ಯಿದ್ ಮದನಿ ದರ್ಗಾದಲ್ಲಿ ಕಾಣಿಕೆ ಹಾಕಿ ತಾನು ಮಾಡಿದ ಮೋಸವನ್ನು ಕ್ಷಮಿಸಿ, ತನ್ನ ಹೊಟ್ಟೆನೋವು ಶಮನವಾಗಲೆಂದು ಪ್ರಾರ್ಥಿಸಿದ, ಕೂಡಲೇ ಅಲ್ಲಾಹು ಅವನ ಪ್ರಾರ್ಥನೆ ಸ್ವೀಕರಿಸಿದ ಫಲವಾಗಿ ಆತ ಉದರ ಶೂಲೆಯಿಂದ ಮುಕ್ತನಾದ.
೧೯೪೫ರಲ್ಲಿ ಉರೂಸು ನಡೆಯುತ್ತಿರುವಾಗ ಜಲಕ್ಷಾಮವುಂಟಾಗಿ ಕೆರೆಗಳೂ ಬಾವಿಗಳೂ ಬತ್ತಿಹೋಗಿ ಕುಡಿಯಲೂ ಸಹಾ ತೊಟ್ಟು ನೀರಿಲ್ಲದೇ ಜನರು ಕಂಗಾಲಾದರು. ಕೊನೆಗೆ ಎಲ್ಲರೂ ದರ್ಗಾದ ಬಳಿ ಜಮಾಯಿಸಿ ‘ಕುಡಿಯಲು ಸಹಾ ನೀರಿಲ್ಲದೆ ನಾವು ಕಷ್ಟಪಡುತ್ತಿದ್ದು,ಈ ವಿಪತ್ತಿನಿಂದ ನಮ್ಮನ್ನು ಈ ಕ್ಷಣದಲ್ಲೇ ರಕ್ಷಿಸಬೇಕೆಂದು ಸಯ್ಯಿದ್ ಮದನಿ ತಂಗಳ್(ಖ.ಸಿ.)ರನ್ನು ಮುಂದಿರಿಸಿಕೊಂಡು ಅಲ್ಲಾಹನಲ್ಲಿ  ಸಾಮೂಹಿಕ ಪ್ರಾರ್ಥನೆ ನಡೆಸಿದರು. ಪ್ರಾರ್ಥನೆ ಮುಗಿಯುವುದರ ಒಳಗಾಗಿ ಸಮೀಪದ ಕಿರುಬಾವಿಯಲ್ಲಿ ಬಿರುಸಾದ ನೀರಿನ ಬುಗ್ಗೆಯು ಪ್ರವಹಿಸತೊಡಗಿತು. ಇದರಿಂದ ಇಲ್ಲಿ ನೆರೆದಿದ್ದ ಲಕ್ಷಾಂತರ
ಜನಸಮೂಹಕ್ಕೆ ನೀರಿನ ಬವಣೆಯೇ ಕಂಡು ಬರಲಿಲ್ಲ, ಚಾರಿತ್ರಿಕವಾದ ಈ ಕಿರುಬಾವಿ ಇಂದು ಸಹಾ ದರ್ಗಾದ  ಪಕ್ಕದಲ್ಲೇ ಕಾಣಬಹುದಾಗಿದೆ.
ಉರೂಸಿನ ಅಂಗವಾಗಿ ಸಂದಲ್ ಹೊರಡುವ ಮಧ್ಯರಾತ್ರಿ ವೇಳೆ ಉಳ್ಳಾಲ ಕಡಲತೀರಕ್ಕೆ ಹಲವಾರು ಹಾಯಿ ಹಡಗುಗಳಲ್ಲಿ ಸಾವಿರಾರು ಮಂದಿ ಬಂದಿಳಿದು ದರ್ಗಾ ಸಂದರ್ಶನ ಮಾಡುವುದನ್ನು ಅನೇಕರು ಕಂಡದ್ದಿದೆ. ಆದರೆ ಈ ಸಂದರ್ಶಕರು ಯಾರು, ಎಲ್ಲಿಂದ ಬರುವರು ಎಂದು ಇದುವರೆಗೆ ತಿಳಿಯಲಾಗಿಲ್ಲ, ಇದು ಹಝ್ರತ್ ಸಯ್ಯಿದ್ ಮದನಿ ತಂಗಳ್(ಖ.ಸಿ.)ರ ಕರಾಮತ್‌ನ ಇನ್ನೊಂದು ಅನುಭವವೆನ್ನಬಹುದು.
೧೯೭೬ರಲ್ಲಿ ದರ್ಗಾಕ್ಕೆ ಹರಕೆಯಿಟ್ಟ ಒಂದು ನಡುಪಟ್ಟಿಯನ್ನು ಸಿಟಿಬಸ್ಸಿನ ನಿರೀಕ್ಷಕರೊಬ್ಬರಲ್ಲಿ ದರ್ಗಾಕ್ಕೆ ತಲುಪಿಸಲೆಂದು ಇನ್ನೊಂದು ಬಸ್ಸಿನ ಕಂಡಕ್ಟರ್ ಒಬ್ಬರು ಕೊಟ್ಟಿದ್ದರು. ಆ ನಿರೀಕ್ಷಕ ನಡುಪಟ್ಟಿಯನ್ನು ಹಿಡಿದುಕೊಂಡು ದರ್ಗಾಕ್ಕೆ ಬಂದರೂ ಅಲ್ಲಿ ಅದನ್ನು ಒಪ್ಪಿಸದೆ, ಯಾರಿಗೂ ತಿಳಿಯದಂತೆ ಒಂದೆಡೆ ಅದನ್ನು ಹೂತಿಟ್ಟನು. ಅಷ್ಟರಲ್ಲೇ ಆ ವ್ಯಕ್ತಿಗೆ ತಾಳಲಾರದ  ಉದರಶೂಲೆಯೂ, ಭೇದಿಯೂ ಪ್ರಾರಂಭವಾಯಿತು. ಏನು ಮಾಡಿದರೂ ಸಮಾಧಾನವಾಗದೆ ಆತನಿಗೆ ನಿಶ್ಯಕ್ತಿ ಯುಂಟಾದಾಗ, ತಾನು ಮಾಡಿದ ತಪ್ಪಿನ ಅರಿವಾಯಿತು. ಕೂಡಲೇ ತಾನು ಹೂತಿಟ್ಟ ನಡುಪಟ್ಟಿಯನ್ನು ತಂದು ದರ್ಗಾಕ್ಕೆ ಒಪ್ಪಿಸಿ ಕ್ಷಮೆಯಾಚಿಸಿದ ತಕ್ಷಣ ಆತನ ಅನಾರೋಗ್ಯ ದೂರವಾಯಿತು.

ಹೀಗೆ ತನ್ನ ಜೀವಿತ ಕಾಲದಲ್ಲೂ ಮರಣಾನಂತರವೂ ನೂರಾರು ಕರಾಮತ್‌ಗಳನ್ನು ಕಾಣಿಸಿದ ಆ ಮಹಾಪುರುಷ ಹಝ್ರತ್ ಸಯ್ಯಿದ್ ಮದನಿ ತಂಗಳ್(ಖ.ಸಿ.)ರ ದರ್ಗಾ ಸನ್ನಿಧಿಯಲ್ಲಿ ಸಾದಾತ್ತುಗಳೂ, ಪಂಡಿತವರೇಣ್ಯರೂ, ಸೂಫಿವರ್ಯರೂ, ಔಲಿಯಾಗಳೂ, ಸದಾ ಝಿಯಾರತ್ ಮಾಡುತ್ತಲಿರುತ್ತಾರೆ. ನಾನಾ ವಿಧದ ರೋಗ ರುಜಿನಗಳು, ಮತಿಭ್ರಮಣೆ, ಭೂತಪ್ರೇತಗಳ ಭಾದೆ, ಮಾಟಮಂತ್ರಗಳೇ ಮುಂತಾದ ತೊಂದರೆಗಳಿಗೀಡಾದವರೂ, ಶಾರೀರಿಕವೂ, ಮಾನಸಿಕವೂ ಆದ ಕಷ್ಟ, ನಷ್ಟಗಳೂ ಯಾತನೆ, ವೇದನೆಗಳಿಂದ ಕಂಗೆಟ್ಟವರೂ, ಪ್ರಕರಣಗಳಲ್ಲೊಳಗೊಂಡು ಯಾವ ದಾರಿಯೂ ಇಲ್ಲದೆ ದಿಕ್ಕೆಟ್ಟವರೂ ಹೀಗೆ ನೂರಾರು ಬಗೆಯ ಸಮಸ್ಯೆಗಳ ಪರಿಹಾರಕ್ಕಾಗಿಯೂ, ಇಲ್ಲಿನ ಪುಣ್ಯ ಸಂಪಾದನೆಗಾಗಿಯೂ, ಜಾತಿ, ಮತ ಭೇದವಿಲ್ಲದೆ ಜಗತ್ತಿನ ನಾನಾ ಕಡೆಗಳಿಂದ ಲಕ್ಷಾಂತರ ಜನ ದಿನಂಪ್ರತಿ ಸಯ್ಯಿದ್ ಮದನಿ ದರ್ಗಾಕ್ಕೆ ಸಂದರ್ಶನವೀಯುತ್ತಾರೆ.

ತಾಜುಲ್ ಉಲಮಾ ಕೆ. ಸಯ್ಯಿದ್ ಅಬ್ದುಲ್ ರಹ್ ಮಾನ್ ಕುಂಜಿಕೋಯ ತಂಗಳ್ ರವರು ಅಧ್ಯಾಂಇಕ ಜಗತ್ತಿನ ಅತ್ಯುನ್ನತ ವಿದ್ವಾಅಂಸರಾಗಿ ದೇಶದಾದ್ಯಾಂತ ಜನ ಮನ್ನಣೆಗೆ ಪಾತ್ರರಾಗಿದಾರೆ, ಇವರು ಹಿಜರಿ ೧೩೭೧ ಶವಾಲ್ ೧೪ ಸೋಮವಾರ (೭-೨-೧೯೫೨) ರಿಂದ ಅರೆಬಿಕ್ ಉನ್ನತ ದರ್ಶಿನ ಮುದರ್ರಿಸ್ ಆಗಿಯೂ, ಹಿಜರಿ ೧೩೯೧ ಶವ್ವಲ್ ೨೨ ಆದಿತ್ಯವಾರ ಸಾಯಂಕಾಲ್ ೪ ಕ್ಕೆ (೧೨-೧೨-೧೯೭೧) ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿಯೂ, ಜಿಜರಿ ೧೩೩೯ ದುಲ್ಹಜ್ ಚಾಂದ್ ೬ ಗುರುವಾರ ಸಂಜೆ ಗಂಟೆ ೩ ಕ್ಕೆ (೯-೧೧-೧೯೭೮) ಉಳ್ಳಾಲ ಜಮಾತಿನ ಖಾಝಿಯಾಗಿಯೂ ನೇಮಕಗೊಂಡಿರುವ ಶೇಖುನಾ ರವರ ಮಾರ್ಗದರ್ಶನದಲ್ಲಿ ವಾರ್ಷಿಕ ಅಂದಾಜು ಮುಂಗಡ ಪತ್ರದ ಆಧಾರದಲ್ಲಿ ಆಡಳಿತ ಸಮಿತಿಯು ತನ್ನೆಲ್ಲಾ ಕಾರ್ಯಚಟುವಟಿಕೆಗಲನ್ನು ನೆರೆವೇರಿಸುತ್ತದೆ.

ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ಬಹಳ ಹಿಂದಿನಿಂದಲೂ ಉರೂಸು ನಡೆಯುತ್ತಿದ್ದು, ಮೊದಮೊದಲು ವರ್ಷಂಪ್ರತಿಯಾಗಿಯೂ, ಎರಡು ವರ್ಷಕ್ಕೊಮ್ಮೆಯೂ, ಆ ಬಳಿಕ ಮೂರು ವರ್ಷಕ್ಕೊಮ್ಮೆಯೂ, ಇಲ್ಲಿ ಉರೂಸು ಜರುಗುತ್ತಿತ್ತು. ೧೯೨೦ ರಿಂದ ಮೊದಲ್ಗೊಂಡು ಪ್ರತೀ ಐದು ವರ್ಷಗಳಿಗೊಮ್ಮೆ ಉರೂಸ್ ನಡೆಸಲು ಪ್ರಾರಂಭಿಸಲಾಯಿತು.

(ಮೇಲಿನ ಅಭಿಪ್ರಾಯಗಳು ಲೇಖಕರದ್ದು )
Read more from ಲೇಖನಗಳು
1 ಟಿಪ್ಪಣಿ Post a comment
  1. Mahesh's avatar
    Mahesh
    ಆಕ್ಟೋ 23 2010

    ಲೇಖನ ತುಂಬಾ ಚೆನ್ನಾಗಿದೆ, ಮಾಹಿತಿ ನೀಡಿದಕ್ಕಾಗಿ ವಂದನೆಗಳು

    Mahesh

    ಉತ್ತರ

Leave a reply to Mahesh ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments