ಲಲಿತ ಪ್ರಬಂಧ: ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
ಸುಪ್ರೀತ್ ಕೆ ಎಸ್
‘ಎಷ್ಟನೆ ಸಲದ ದಂಡ ಯಾತ್ರೆಯಪ್ಪಾ ಇದು?’ ಹಾಗಂತ ಕಾಫಿಗೆ ಕರೆಯುವ ಗೆಳೆಯರನ್ನು ರೇಗಿಸುತ್ತಿರುತ್ತೇನೆ. ಹಾಸ್ಟೆಲ್ಲಿನ ಹುಡುಗರು ಕಾಫಿಗೆ ಹೋಗುವ ಸಂಭ್ರಮವೇ ಬೇರೆ. ಬೆಳಿಗಿನ ಚಳಿಯಲ್ಲಿ ಧೈರ್ಯ ಮಾಡಿ ಎದ್ದವರು ಮಾಡಿಟ್ಟ ಕಾಫಿಯನ್ನು ತಮ್ಮ ಕೆಪಾಸಿಟಿಗೆ ತಕ್ಕಂತ ಹೀರಿಬಿಟ್ಟಿರುತ್ತರಾದ್ದರಿಂದ ನನ್ನಂಥ ಸೂರ್ಯದ್ವೇಷಿಗಳಿಗೆ, ಏಳು ಗಂಟೆಯ ಮೊದಲು ಎದ್ದು ಬಿಡುವುದು ನೈತಿಕ ಅಧಃಪಥನ ಎಂದು ಭಾವಿಸಿರುವವರಿಗೆ ಖಾಲಿ ಕಾಫಿ ಜಗ್ ಮಾತ್ರ ಕಾದಿರುತ್ತದೆ!
ಎಲ್ಲಾ ಹುಡುಗರು ಇದ್ದಾಗ ಹಾಸ್ಟೆಲ್ಲಿನ ವಾತಾವರಣ ಕಲಕಲ ಎನ್ನುತ್ತಿರುತ್ತದೆ. ಎಲ್ಲರಿಗೂ ಕಾಲೇಜು ರಜೆಯಿದ್ದರೆ, ಇಲ್ಲವೇ ಪರೀಕ್ಷೆಗಳಿಗೆ ಓದಲು ಕಾಲೇಜಿನವರೇ ರಜೆ ಕರುಣಿಸಿ ಓಡಿಸಿದ್ದರೆ ಕಾಫಿ ಟೀ ಕುಡಿಯಲು ಸಮೀಪದ ಕಾಫಿ ಬಾರ್‌ಗೆ ದಂಡು ದಂಡು ಸಮೇತ ಲಗ್ಗೆ ಹಾಕುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಬೆಳಗಿನ ತಿಂಡಿ ಮುಗಿಸಿಕೊಂಡ ನಂತರ ಒಂದು ಸುತ್ತು, ಮಧ್ಯಾನದ ಊಟಕ್ಕೂ, ತಿಂಡಿಗೂ ನಡುವಿನ ಸಮಯದಲ್ಲಿ ಓದಿ ಓದಿ ಸುಸ್ತಾದವರಿಗಾಗಿ ಒಂದು ಸುತ್ತು, ಮಧ್ಯಾನದ ಊಟ ಮುಗಿಸಿ ಗಡದ್ದಾಗಿ ನಿದ್ದೆ ಹೊಡೆದು ಸಂಜೆಗೆ ಎದ್ದು ಒಂದು ಸುತ್ತು, ರಾತ್ರಿ ಊಟವಾದ ಮೇಲೆ ಓದುತ್ತಾ ಕೂರಲು ಎನರ್ಜಿ ಬೇಕಾದವರದ್ದು ಒಂದು ಸುತ್ತು ಕಾಫಿ ಬಾರ್ ಪರ್ಯಟನೆ- ಇದು ನಮ್ಮ ದೈನಂದಿನ ಅವಿಭಾಜ್ಯ ಅಂಗ. ಕೆಲವೊಮ್ಮೆ ಕಾಲೇಜು ಗೆಳೆಯರು ನಮ್ಮ ಭೇಟಿಗೆ ಹಾಸ್ಟೆಲ್ಲಿಗೇ ಬಂದಾಗ, ಒಲ್ಲದ ಅತಿಥಿ ರೂಮಿನಲ್ಲಿ ಒಕ್ಕರಿಸಿಕೊಂಡು ಕೊರೆತದಿಂದ ರೋಧನೆ ಕೊಡುವಾಗ ಅವನನ್ನು ಸಾಗಿ ಹಾಕಲು ಈ ‘ಕಾಫಿ’ ಆಪದ್ಭಾಂದವನ ಹಾಗೆ ನೆರವಿಗೆ ಬರುವುದೂ ಇದೆ. ಮತ್ತಷ್ಟು ಓದು 




