ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 19, 2010

1

ಹೊಲಸು ತುಂಬಿದ ರಾಜಕೀಯವೂ….. ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ…

‍ನಿಲುಮೆ ಮೂಲಕ

-ಶಂಶೀರ್, ಬುಡೋಳಿ, ಪತ್ರಕರ್ತ

ನಿಮಗೆ ಇದನ್ನು ಹೇಳಲೇಬೇಕು. ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಇರುವುದು ನಿಮಗೆ ತಿಳಿದಿರಬಹುದು. ಈ ಯೋಜನೆ ಕರ್ನಾಟಕದಲ್ಲಿ ಇನ್ನಷ್ಟೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಗೊಳ್ಳಬೇಕಷ್ಟೇ. ಹೀಗಾಗಿ ಈ ಯೋಜನೆಯ ಯಶಸ್ಸಿನ ಕುರಿತು ಈಗ ಮಾತನಾಡುವುದು ಔಚಿತ್ಯವಲ್ಲ. ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮಹಿಳೆಯರು ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೊಸ ರಾಜಕೀಯದ ಭಾಷ್ಯಕ್ಕೆ ಮುನ್ನುಡಿ ಬರೆದರು. ಕಳೆದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಶೇಕಡಾ ೫೦ರಷ್ಟು ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ರೈತ ಮಹಿಳೆ, ಟೈಲರಿಂಗ್ ವೃತ್ತಿಯಲ್ಲಿರುವ , ಬೀದಿ ಬದಿ ವ್ಯಾಪಾರ ಮಾಡುವ, ಲೆಕ್ಕಪರಿಶೋಧಕಿಯರ ಜೊತೆಗೆ ಸ್ನಾತಕೋತ್ತರ ಪದಧರೆಯರು ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇವರಲ್ಲಿ ಹೆಚ್ಚಿನವರು ಕೇರಳದಲ್ಲಿ ಬಹಳ ಯಶಸ್ಸನ್ನು ಗಳಿಸಿಕೊಂಡಿರುವ ಕುಟುಂಬಶ್ರೀ ಯೋಜನೆಯಡಿಯಲ್ಲಿ ಪಳಗಿದವರಾಗಿದ್ದಾರೆ. ವಿವಿಧ ಪಕ್ಷಗಳಲ್ಲಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೇರಳಿ ಮಹಿಳೆಯರು ಹೊಸ ರಾಜಕೀಯದ ಭಾಷ್ಯ ಬರೆಯುವತ್ತ ದಾಪುಗಾಲು ಇಟ್ಟಿದ್ದಾರೆ ಎಂದು ಹೇಳಬಹುದು.

ಇಂತಹ ಬದಲಾವಣೆ ದೇಶದ ಪ್ರತಿ ರಾಜ್ಯದಲ್ಲಿ ಆದರೆ ಪುರುಷ ಪ್ರಧಾನ ರಾಜಕೀಯದಲ್ಲಿ ಸಮಾನ ಮನಸ್ಕ ಚಿಂತನೆಗಳು ಹರಿದಾಡಬಹುದು. ಕೇರಳದಲ್ಲಿ ಚುನಾವಣಾ ಕಣಕ್ಕಿಳಿದು ಗಮನಾರ್ಹ ಫಲಿತಾಂಶ ಎದುರು ಹಾಕಿದ ಮಹಿಳೆಯರು ಕೇಂದ್ರಿಕರಿಸಿರುವ ವಿಚಾರಗಳು ಕೂಡಾ ಗಮನ ಸೆಳೆಯುವಂತಹದ್ದು. ಅದು ಯಾವುದೆಂಬುದು ನಿಮಗೆ ಕೂತುಹಲವಿರಬಹುದು. ಅದು ಯಾವುದೆಂದರೆ, ದಿನಗೂಲಿ ಮಾಡುವ ಮಹಿಳೆಯರ ಸಮಸ್ಯೆ, ಮದ್ಯಪಾನ ನಿಷೇಧ, ಮಹಿಳಾ ಸಮಾನತೆಯ ಕಟ್ಟುನಿಟ್ಟಿನ ಜಾರಿ ಹೀಗೆ ಮುಂತಾದ ಯೋಜನೆಗಳು ಇವರ ಬತ್ತಳಿಕೆಯಲ್ಲಿವೆ. ಸಾಂಘಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕುಟುಂಬಶ್ರೀ ಯೋಜನೆಯು ಇವತ್ತು ಕೇರಳದ ಮಹಿಳೆಯರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿರುವುದು ಒಂದು ಸಾಧನೆಯೇ ಸರಿ. ಹೀಗಾಗಿ ಇಂತಹ ಯೋಜನೆಗಳು ಇವತ್ತು ಕರ್ನಾಟಕ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಬೇಕಾಗಿದೆ. ಈ ಯೋಜನೆಯ ಮೂಲಕ ೨,೫೦,೦೦೦ ಮಹಿಳೆಯರು ಭೂಮಿಯನ್ನು ಲೀಸ್‌ಗೆ ಪಡೆದುಕೊಂಡು ಉಳುಮೆ ಮಾಡಿ ಯಶ ಸಾಧಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ೧೪೦ ಮಂದಿಯ ಶಾಸಕಾಂಗ ಸಭೆಯಲ್ಲಿ ಕೇವಲ ಏಳು ಮಹಿಳಾ ಶಾಸಕರಿದ್ದಾರೆ. ಇರುವಂತಹ ರಾಜಕೀಯ ಪಕ್ಷಗಳಲ್ಲಿ ಸೀಮಿತ ಸಂಖ್ಯೆಯ ಮಹಿಳೆಯರು ಉನ್ನತ ಸ್ಥಾನದಲ್ಲಿದ್ದು, ಈ ಸಲದ ಚುನಾವಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮುಂದಿನ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಗೆಲುವು ಸಾಧಿಸಿದರೆ ರಾಜಕೀಯ ಪಕ್ಷಗಳಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಬಹುದೇನೋ? ಇದು ನೆರೆ ರಾಜ್ಯ ಕೇರಳದಲ್ಲಿನ ಚಿತ್ರಣ.

ಕೇರಳದಲ್ಲಿ ಉದಯವಾಗಿರುವ ಮಹಿಳಾ ರಾಜಕಾರಣದ ಹೊಸ ಗಾಳಿ ರಾಜಕೀಯ ರಂಗಕ್ಕೆ ಉತ್ತೇಜನ ನೀಡಬಲ್ಲುದೇ ಅಥವಾ ರಾಜಕೀಯ ಅತಂತ್ರತೆಗೆ ಅಂತ್ಯ ನೀಡಬಹುದೇ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಭ್ರಷ್ಟಾಚಾರ ರಾಜಕೀಯ, ಭೂಹಗರಣ ರಾಜಕೀಯ , ಅಕ್ರಮ ಗಣಿಗಾರಿಕೆ, ರೆಸಾರ್ಟ್ ರಾಜಕೀಯ, ರಾಜಕೀಯ ಕುದುರೆ ವ್ಯಾಪಾರದಿಂದ ಬಳಲುತ್ತಿರುವ ಕರ್ನಾಟಕ ರಾಜಕೀಯ ರಂಗಕ್ಕೆ ಪುನಶ್ಚೇತನ ಕೊಡುವಂತಹ ಕಾರ್ಯವಾಗಬೇಕಾಗಿದೆ. ಆದರೆ ಅದು ಅಷ್ಟು ಸುಲಭದಲ್ಲಿ ಆಗುವಂತಹ ಕಾರ್ಯವಲ್ಲ. ಇಂದಿನ ಕಟ್ಟಾ ಸುಬ್ರಹ್ಮಣ್ಯ ಮತ್ತು ಕಟ್ಟಾ ಜಗದೀಶ್ ಎಂಬ ತಂದೆ-ಪುತ್ರನ ಕೆ‌ಐ‌ಎಡಿಬಿ ಪ್ರಕರಣದವರೆಗಿನ ರಾಜ್ಯ ರಾಜಕೀಯದ ಹಾಗು -ಹೋಗುಗಳು ಹೆಚ್ಚಿನದಾಗಿ ಹೇಸಿಗೆ ಹುಟ್ಟಿಸುವಂತಿದೆ. ಇದೊಂದು ನಮ್ಮ ಮುಂದೆ ಗಂಭೀರವಾದಂತಹ ಪ್ರಶ್ನೆಯೊಂದನ್ನು ಎತ್ತಿ ಹಿಡಿಯುತ್ತದೆ? ಪುರುಷ ಪ್ರಧಾನ ಸಮಾಜದ ಸರಕಾರದಿಂದ ಪ್ರಭುತ್ವದ ಉಳಿವು ಸಾಧ್ಯವೇ ಅಥವಾ ರೂಪಿತವಾಗಬಲ್ಲುದೇ ಎಂಬ ಪ್ರಶ್ನೆ ಆತಂಕಕಾರಿಯಾಗಿದ್ದು, ಯಾವ ರೀತಿ ಮುಂದಿನ ದಿನದಲ್ಲಿ ರಾಜ್ಯದಲ್ಲಿ ಸರಕಾರ ಉರುಳಬಹುದೆಂದು ಹೇಳಲು ಸಾಧ್ಯವಿಲ್ಲ. ಮೌಲ್ಯಾಧಾರಿತ ರಾಜಕೀಯ ಕೇವಲ ಪದವಿ, ಸ್ನಾತಕೋತ್ತರ ಪಠ್ಯ ಪುಸ್ತಕಗಳಲ್ಲಿ ಬಚ್ಚಿಕೊಂಡಿವೆ. ಅದು ಬಿಟ್ಟು , ನಿಜ ರಾಜಕೀಯ ರಂಗದಲ್ಲಿ ಮೌಲ್ಯಾಧಾರಿತ ರಾಜಕೀಯಕ್ಕೆ ಬೆಲೆ ಇಲ್ಲದಂತಾಗಿದೆ.ರಾಜಕೀಯ ಪಕ್ಷಗಳ ಡೊಂಬರಾಟವು ಇವತ್ತು ರಾಜ್ಯದ ಜನತೆಯನ್ನು ಕಂಗೆಡಿಸಿದ್ದು, ಸ್ವಾಭಿಮಾನವೆಂಬುದು ಹೊರಟು ಹೋದಂತಿದೆ. ತಮಗೆ ಬೇಕಾದ ಪಟ್ಟ ಕೊಡದಿದ್ದರೆ ರೆಸಾರ್ಟ್ ವಾಸದಲ್ಲಿ ಬೆದರಿಕೆ ಹಾಕುವ ಹಾಗೂ ಸಿ.ಡಿ. ರಾಜಕೀಯದ ಮೂಲಕ ಮಾಧ್ಯಮಗಳಲ್ಲಿ ವಿರೋಧ ಪಕ್ಷಗಳನ್ನು ಬೆದರಿಸುವ ರಾಜಕಾರಣಿಗಳಿಗೆ ಬೇಕಾಗಿರುವುದು ರಾಜ್ಯದ ಹಿತವಲ್ಲ, ಬದಲು ಸ್ವ ಹಿತಾಸಕ್ತಿ.

ಹೀಗಾಗಿ ರಾಜಕೀಯವೆಂಬುದು ಇವತ್ತು ಹೊಲಸು ತುಂಬಿದ ಕೆರೆಯಾದಂತಾಗಿದೆ. ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರದಲ್ಲಿ ಶೋಭಾ ಕರಂದ್ಲಾಜೆ ಬಿಟ್ಟರೆ ಉನ್ನತ ಸಚಿವ ಸ್ಥಾನದಲ್ಲಿ ಮತ್ತ್ಯಾವ ಸಚಿವೆಯರೂ ಕಾಣ ಸಿಗುತ್ತಿಲ್ಲ. ಯಡಿಯೂರಪ್ಪನವರ ಆಪ್ತೆ ಎಂಬ ಆರೋಪ ಶೋಭಾರ ಮೇಲಿದ್ದರೂ, ಇವೆಲ್ಲಾ ಸಾಮಾನ್ಯ ಆರೋಪಗಳೆಂದು ಬಿಂಬಿತವಾಗುತ್ತಿದೆ. ಅದೇನೆ ಇರಲಿ, ತತ್ವರಹಿತ, ಸಿದ್ಧಾಂತ ರಹಿತ ರಾಜಕೀಯ ರಂಗದಲ್ಲಿ ಹೊಸ ಭಾಷ್ಯವನ್ನು ಬರೆಯುವಂತಹ ಸಾಧ್ಯತೆ ಮಹಿಳೆಗಿದೆ ಎಂದು ಹೇಳಬಹುದು. ಪ್ರತಿಭಾ ಪ್ರಕರಣ, ಪದ್ಮಪ್ರಿಯ ಪ್ರಕರಣದ ಜೊತೆಗೆ ಮಹಿಳೆಯರ ಮೇಲಿನ ದೌರ್ಜನ್ಯ, ಕೌಟುಂಬಿಕ ನ್ಯಾಯಾಲಯದ ಅವ್ಯವಸ್ಥೆಯ ಕುರಿತು ರಾಜಕಾರಣಿಗಳಿಗೆ ಯೋಚಿಸಲು ಸಮಯವಿಲ್ಲದಂತಾಗಿದೆ. ಮಾತ್ರವಲ್ಲ, ವರದಕ್ಷಿಣೆ ಪಿಡುಗಿಗೆ ಬಲಿಯಾಗುತ್ತಿರುವ ಮಹಿಳೆಯರನ್ನು ಕಾಪಾಡುವ ಯೋಜನೆಗಳು ಕೂಡಾ ಬರುತ್ತಿಲ್ಲ. ಕೌಟುಂಬಿಕ ನ್ಯಾಯಾಲಯದ ಅವ್ಯವಸ್ಥೆಯನ್ನು ಸರಿಪಡಿಸುವ ಕನಿಷ್ಠ ರೀತಿಯ ಜವಾಬ್ದಾರಿಯೂ ಕೂಡಾ ನಮ್ಮ ರಾಜಕಾರಣಿಗಳಿಗಿಲ್ಲ ಎಂಬುದು ವಿಪರ್ಯಾಸವಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರ ಕುರಿತು, ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಹಿಳೆಯರ ಕುರಿತು, ಮಹಿಳಾ ಉದ್ಯೋಗ ರಕ್ಷಣೆ, ಕೂಲಿ-ಕಾರ್ಮಿಕ ಮಹಿಳೆಯರ ಬದುಕಿನ ಕುರಿತು, ದಲಿತ ಹೆಣ್ಣುಮಕ್ಕಳ ಅತಂತ್ರ ಬದುಕಿನ ಕುರಿತು ಯೋಚಿಸಿ ಸೂಕ್ತ ರಕ್ಷಣಾ ವ್ಯವಸ್ಥೆ, ಇವರ ಬದುಕಿಗೆ ಭದ್ರತೆ ಕಲ್ಪಿಸುವ ಮನೋಭಾವವುಳ್ಳವರು ಕಡಿಮೆಯಿದ್ದರಿಂದ ಇವತ್ತು ಮಹಿಳೆಗೆ ಸೂಕ್ತ ರಕ್ಷಣೆಯೆಂಬುದೇ ಇಲ್ಲವಾಗಿದೆ. ಇವತ್ತು ನಮ್ಮ ರಾಜ್ಯದಲ್ಲಿ ಬೀದಿಯಲ್ಲಿ ಕಸ ಗುಡಿಸಿ ಬದುಕು ಸಾಗಿಸುವ ದಲಿತ ಮಹಿಳೆಯರಿದ್ದಾರೆ. ಅವರ ಬದುಕೇ ಇದಕ್ಕೆ ಮೀಸಲಿಟ್ಟಂತಾಗಿದೆ. ದಲಿತ ಪುರುಷ ಮತ್ತು ಮಹಿಳೆಯರು ಕೇವಲ ಕನಿಷ್ಠ ಮಟ್ಟದ ಕೆಲಸಗಳನ್ನು ಮಾತ್ರ ಮಾಡಬೇಕು ಎಂದು ಹೇಳುವುದು ದರ್ಪವಲ್ಲವೇ? ಇದನ್ನಾಕೆ ಯಾರೂ ಭೇದಭಾವ ಎನ್ನಲ್ಲ.

ದಲಿತ ಮಹಿಳೆಯರು ಮೇಲ್ವರ್ಗದ ಮನೆಯೊಳಗೆ ಪ್ರವೇಶಿಸಬಾರದೆಂಬ ಭ್ರಮೆ ಇವತ್ತಿಗೂ ಚಾಲನೆಯಲ್ಲಿದೆ .ಇದಕ್ಕೆ ಏನೆನ್ನಬೇಕು? ಕಳೆದ ನೆರೆ ಹಾವಳಿಯಲ್ಲಿ ಸೊತ್ತು, ಸಂಪತ್ತುಗಳನ್ನು ಕಳೆದುಕೊಂಡ ಮಹಿಳೆಯರು ಇವತ್ತು ಅತಂತ್ರ ಸ್ಥಿತಿಯಲ್ಲಿದ್ದು, ಶೌಚಾಲಯವಿಲ್ಲದೇ ಈಗಲೂ ಒದ್ದಾಡುತ್ತಿದ್ದಾರೆ. ಬೀದಿ ಬದಿ ಅಥವಾ ಮಾನಸಿಕ ದೌರ್ಜನ್ಯದ ಮೂಲಕ ಸಾಮೂಹಿಕ ಅಥವಾ ಏಕ ಅತ್ಯಾಚಾರಕ್ಕೊಳಗಾಗುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿದೆಯೆಂದರೆ ಯಾರು ನಂಬಬಹುದೇ? ಮಹಿಳಾ ಸಚಿವೆ, ಮಹಿಳಾ ಕಮಿಷನ್, ಮಹಿಳಾ ಅಭಿವೃದ್ದಿ ಮಂಡಳಿ ಹಾಗೂ ಮಹಿಳಾ ಪರ ಚಳವಳಿ, ಹೋರಾಟಗಳು ನಡೆಯುತ್ತಲೆ ಇರಬಹುದು. ಆದರೆ ಅಮಾಯಕ ಹೆಣ್ಣುಮಕ್ಕಳು ಕಾರಣವಿಲ್ಲದ ಪ್ರಕರಣಗಳಿಗೆ ಬಲಿಯಾಗುತ್ತಿರುವುದು ದುರಂತವಲ್ಲವೇ? ಮಹಿಳೆಗಿರುವ ಕಾನೂನು ಮಹಿಳೆಯರಿಗೆ ಸೂಕ್ತವಾದ ರಕ್ಷಣೆ ನೀಡದಿದ್ದರೆ ಅಂತಹ ಕಾನೂನು ಇದ್ದರೆಷ್ಟು, ಇಲ್ಲದಿದ್ದರೆಷ್ಟು?

1 ಟಿಪ್ಪಣಿ Post a comment
  1. Pramod's avatar
    ಡಿಸೆ 22 2010

    ಭಾರತೀಯ ಮಹಿಳೆಯ ಸ್ಥಿತಿಗತಿಯ ಬಗ್ಗೆ ಬರೆದು ಸಾರಾ ಪಾಲಿನ್ ಎ೦ಬ ಗುಡ್ ಫಾರ್ ನಥಿ೦ಗ್ ಮಹಿಳೆಯ ಚಿತ್ರ ಹಾಕಿದ್ರೆ ಬರಹಕ್ಕೆ ನೆಗೆಟಿವ್ ಇ೦ಪ್ರೆಷನ್ ಬರ್ತದೆ. ರಷ್ಯ ಎಲ್ಲಿದೆ ಈಕೆಗೆ ಗೊತ್ತಿಲ್ಲ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments