ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 21, 2010

2

ಅಪರಾಧ ಮತ್ತು ಶಿಕ್ಷೆ

‍ನಿಲುಮೆ ಮೂಲಕ

ಅಜಕ್ಕಳ ಗಿರೀಶ ಭಟ್

 ಕ್ಷಮಿಸಿ, ನನ್ನ ಅಭಿಪ್ರಾಯ ಈಗಿನ ಬಹುತೇಕ ಜನರ ಅಭಿಪ್ರಾಯಕ್ಕಿಂತ ಬೇರೆಯಾಗಿದೆ. ಅದರಲ್ಲೂ ಮಾನವ ಹಕ್ಕಿನ ಬಗ್ಗೆ ಕಾಳಜಿ ಉಳ್ಳವರ ಮಟ್ಟಿಗಂತೂ ಅಮಾನವೀಯವಾಗಿ ಕಾಣುವಂತಿರಬಹುದು.ಇರಲಿ. ಅಪರಾಧಕ್ಕೆ ಶಿಕ್ಷೆ ಯಾಕೆ?ಈ ಪ್ರಶ್ನೆ ವಿಚಿತ್ರವಾಗಿ ಕಾಣಬಹುದು. ತುಂಬಾ ಜನ ಅಂದುಕೊಳ್ಳುವುದೇನೆಂದರೆ ಅಪರಾಧ ಮಾಡಿದ್ದಕ್ಕಾಗಿ ಶಿಕ್ಷೆ ಅಂತ. ವಾಸ್ತವವಾಗಿ ಶಿಕ್ಷೆ ಕೊಡಬೇಕಾದದ್ದು ಮತ್ತು ಕೊಡುವುದು ಆತ ಇನ್ನು ಮುಂದೆ ಅಪರಾಧ ಮಾಡಬಾರದು ಎಂದಷ್ಟೆ ಅಲ್ಲ .ಅದಕ್ಕಿಂತ ಮುಖ್ಯವಾಗಿ,ಅಂಥ ಅಪರಾಧಗಳನ್ನು ಬೇರೆಯವರು ಮಾಡಬಾರದು ಎಂಬ ಕಾರಣಕ್ಕಾಗಿ. ಹಾಗಾಗಿ ಅಪರಾಧದ ಪ್ರಮಾಣಕ್ಕೆ ಅನುಗುಣವಾಗಿ ಕಠಿಣ ಶಿಕ್ಷೆಯೇ ಆಗಬೇಕಾಗುತ್ತದೆ. ಭಿನ್ನಾಭಿಪ್ರಾಯ ಎಂದೆನಲ್ಲ, ಅದು ಜೈಲುಗಳ ಬಗ್ಗೆ. ಜೈಲುಗಳು ಕೆಟ್ಟ ಸ್ಥಿತಿಯಲ್ಲಿವೆಯೆಂದು ಎಲ್ಲರೂ ಬೊಬ್ಬೆ ಹೊಡೆಯುತ್ತಾರೆ.ಜೈಲುಗಳು ಇರಬೇಕಾದದ್ದೇ ಹಾಗೆ. ಅಲ್ಲದಿದ್ದರೆ ಅದು ಶಿಕ್ಷೆಯಾಗುವುದು ಹೇಗೆ? ವಿಚಾರಣಾಧೀನ ಕೈದಿಗಳಿಗೆ ಮಾತ್ರ ಒಳ್ಳೆ ವ್ಯವಸ್ಥೆಯಿರಬೇಕು ನಿಜ.ಹಾಗಾಗಿ ಅವರಿಗೆ ಬೇರೆಯೇ ಜೈಲುಗಳು ಬೇಕು.ಈ ಮಟ್ಟಿಗೆ ಜೈಲು ವ್ಯವಸ್ಥೆ ಸುಧಾರಣೆಯಾಗಬೇಕೆಂಬುದು ನಿಜ. ನ್ಯಾಯಾಲಯದಿಂದ ತಪ್ಪಿತಸ್ಥರೆಂದು ತೀರ್ಮಾನವಾದ ಕೈದಿಗಳಿಗೆ ಈಗಿರುವುದಕ್ಕಿಂತ ಕೆಟ್ಟ ಜೈಲುಗಳೇ ಬೇಕು. ಅವರಿಗೆ ನಾಟಕ ಅದು ಇದು ಮನರಂಜನೆ ಇತ್ಯಾದಿ ಇರಬಾರದು. ಅವರ ಮನಪರಿವರ್ತನೆ ಮಾಡಬೇಕು ಎಂಬುದೆಲ್ಲ ಬರೀ ಬೊಗಳೆ. ಹಾಗೆ ಮನಪರಿವರ್ತನೆ ಆಗಬೇಕಾದರೆ ಶಿಕ್ಷಿಸದೆ ಬಿಡುವುದೇ ಒಳ್ಳೆಯದು.

ತಪ್ಪು ಮಾಡಿದವರನ್ನು ಕ್ಷಮಿಸಬೇಕು ಅಂತೆಲ್ಲ ಹಲವು ಪ್ರಾಜ್ಞರು,ಸಂತರು ಹೇಳಿದ್ದಾರೆ ನಿಜ; ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡುವುದು ತಪ್ಪು ಅಂತಾದರೆ ಈ ಎರಡನೆ ತಪ್ಪನ್ನೂ ದೇವರು ಮನ್ನಿಸಿಯಾನು. ಎಲ್ಲದಕ್ಕಿಂತ ಮೊದಲು ಆಗಬೇಕಾದದ್ದು ಏನೆಂದರೆ, ಈಗಿರುವುದಕ್ಕಿಂತ ಹತ್ತು ಪಟ್ಟು ನ್ಯಾಯಾಲಯಗಳನ್ನು ಸ್ಥಾಪಿಸುವುದು. ಎಲ್ಲ ಹಂತಗಳಲ್ಲು ನ್ಯಾಯಾಲಯಗಳು ಹೆಚ್ಚಾಗಬೆಕು. ನ್ಯಾಯತೀರ್ಮಾನವು ಅತ್ಯಂತ ಶೀಘ್ರವಾಗಿ ಆಗಬೇಕಾದುದು ಮುಖ್ಯ. ವಿಚಾರಣಾಧೀನವಾಗಿ ಕೈದಿಗಳು ಕೊಳೆಯಬಾರದು. ಪ್ರತಿ ಹಂತದ ನ್ಯಾಯಾಧೀಶರ ತೀರ್ಪುಗಳು ವಿಮರ್ಶೆಗೆ ಒಳಗಾಗಬೇಕು. ಒಬ್ಬ ನ್ಯಾಯಾಧೀಶನ ಇಂತಿಷ್ಟು ಖಟ್ಳೆಗಳು ಮೇಲಿನ ಹಂತದಲ್ಲಿ ಬಿದ್ದು ಹೋದರೆ ಆತನಿಗೆ ಹಿಂಬಡ್ತಿ, ವಜಾ ಇತ್ಯಾದಿ ಶಿಕ್ಷೆಗಳಾಗಬೇಕು.ಇದು ತಾಲೂಕು ಮಟ್ಟದಿಂದ ಮೇಲಿನವರೆಗೂ ಅನ್ವಯಿಸಬೇಕು.ಸುಪ್ರೀಂ ಕೊರ್ಟ್ ನ್ಯಾಯಾಧೀಶರೇ ಹಾಳಾದರೆ ದೇವರೇ ಗತಿ !?

ಪೋಲಿಸರ ಬಗ್ಗೆ ಕೂಡ ಮಾನವ ಹಕ್ಕಿನವರಿಗೆ ಇರುವುದಕ್ಕಿಂತ ಹೆಚ್ಚು ಸಹಾನುಭೂತಿ ನನಗಿದೆ.ಯಾಕೆಂದರೆ ಪೋಲಿಸರು ಕೂಡಾ ಮಾನವರೇ ಎಂದು ನನ್ನ ಅಲ್ಪ ತಿಳುವಳಿಕೆಗೆ ತೋರುತ್ತದೆ.ಲಾಕಪ್ ಡೆತ್,ಎನಕೌಂಟರ್ ಇತ್ಯಾದಿ ಆರೋಪಗಳು ಇವೆ ಬಿಡಿ. ಆದರೂ ಕೊಲೆಗಾರನೊಬ್ಬನನ್ನು ಹಿಡಿದು, ಆರಾಮಕುರ್ಚಿಯಲ್ಲಿ ಕೂರಿಸಿ ಚಾ ತರಿಸಿ “ನೀವು ಕೊಲೆಗೆ ಬಳಸಿದ ಆಯುಧ ಎಲ್ಲಿದೆ ದಯಮಾಡಿ ಹೇಳಿ” ಎಂದರೆ ಅವರು ತಂದುಕೊಟ್ಟಾರು ಅಂತ ಕೆಲವರು ಅಂದಾಜು ಮಾಡುತ್ತಾರೆ.ಏನು ಮಾಡೋಣ, ಪೊಲೀಸರ ದೌರ್ಜನ್ಯವನ್ನು ನೆನಪು ಮಾಡಿಕೊಳ್ಳುವಾಗ ಅವರ ಅಸಹಾಯಕತೆಯನ್ನೂ ನಾವು ನೆನಪಿಸಿಕೊಳ್ಳಬೇಕು.

ಕಸಬನ ಉದಾಹರಣೆ ತೆಗೆದುಕೊಳ್ಳಿ. ೩೦೦ ಚಿಲ್ರೆ ಸಾಕ್ಷಿಗಳ ಪಾಟೀಸವಾಲು ಆಗಬೇಕೆಂದು ಅವನ ವಕೀಲ ಹೇಳಿದ್ದನಂತೆ. ಕೋರ್ಟ್ ೭೦ ಸಾಕು ಅಂತ ಹೇಳಿದೆಯಂತೆ.೭೦ ಜನರನ್ನಾದರೂ ಪಾಟೀಸವಾಲು ಮಾಡಬೇಕಾದರೆ ಎಷ್ಟು ದಿನ ಬೇಕು ಲೆಕ್ಕ ಹಾಕಿ. ಒಂದು ಕೊಲೆಯನ್ನು ೧೦೦೦ ಜನ ನೋಡಿದ್ದೇವೆಂದು ಹೇಳಿದರೆ ಅಷ್ಟೂ ಜನರನ್ನು ಪಾಟೀಸವಾಲು ಮಾಡಬೇಕೆಂದಾಯಿತು.ಪುಣ್ಯಕ್ಕೆ ಕಸಬ ಗುಂಡು ಹಾರಿಸುವುದನ್ನು ಟಿ.ವಿ.ಯಲ್ಲಿ ನೋಡಿದ ಅಷ್ಟೂ ಮಂದಿಯನ್ನು ಪಾಟೀಸವಾಲು ಮಾಡಲಿಕ್ಕಿದೆ ಅಂತ ಆ ವಕೀಲ ಹೇಳಲಿಲ್ಲ!!ಅವನಿಗೆ ಉರ್ದುವಿನಲ್ಲಿ ಚಾರ್ಜುಶೀಟು ಬೇರೆ ಬೇಕಂತೆ.ಅವನು ಮೈನರೋ ಮೈನೆರೆದಿದ್ದಾನೋ ಅಂತ ನೋಡಲಿಕ್ಕೇ ನಮ್ಮ ಸರಕಾರಕ್ಕೆ ಎಷ್ಟು ಖರ್ಚಾಯಿತು ಎಂದು ದೇವರಿಗೇ ಗೊತ್ತು. ಕಸಬ್ ಒಂದು ಉದಾಹರಣೆ ಮಾತ್ರ. ಗಾಂಧೀಜಿ ಹಿಂದ್ ಸ್ವರಾಜ್ ನಲ್ಲಿ ವಕೀಲರನ್ನು ಬೈದದ್ದು ಸುಮ್ಮನೆ ಅಲ್ಲ.ಸತ್ಯ ಎಲ್ಲರಿಗೂ ಪರಮಮೌಲ್ಯವಾಗಬೇಕಾದದ್ದು ನ್ಯಾಯ ತಾನೆ?ಅದರಲ್ಲೂ ನ್ಯಾಯಾಲಯದಲ್ಲಿ ?ಆದರೆ ನ್ಯಾಯವಾದಿಗಳು “ಈತ ಅಪರಾಧಿಯಾಗಿದ್ದರೆ ನನ್ನ ಈ ಕಕ್ಷಿಗಾರನಿಗೆ ಶಿಕ್ಷೆಯಾಗುವಂತೆ ನಾನೇ ವಾದಿಸುತ್ತೇನೆ.ಸತ್ಯವನ್ನೇ ಹೇಳುತ್ತೇನೆ” ಎಂದೆಲ್ಲ ಯಾವ ಪ್ರತಿಜ್ಞೆಯನ್ನೂ ಮಾಡುವುದಿಲ್ಲವಲ್ಲ.

ಕೊನೆ ಬೆಡಿ: ಸುಳ್ಳು ಹೇಳುವುದು ಅನ್ಯಾಯ.ಆದರೆ ಬೇರೆಯವರ ಪರವಾಗಿ ಸುಳ್ಳು ಹೇಳುವವನು ನ್ಯಾಯವಾದಿ.

Read more from ಲೇಖನಗಳು
2 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಡಿಸೆ 21 2010

    ಎಲ್ಲಾ ವ್ಯವಸ್ಥೆಗಳೂ ಸರಿಯಾಗಿಯೇ ಇವೆ. ಆದರೆ ಎಲ್ಲಾ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅಷ್ಟೇ.
    ಶಿಕ್ಷೆಗಳಲ್ಲೂ ಸಾಮಾನ್ಯ ಮತ್ತು ಕಠಿಣ ಎಂಬುದೂ ಇದೆ. ಆದರೆ ಅದರ ಪರಿಪಾಲನೆ ಆಗುತ್ತಿದೆಯೇ ಎನ್ನುವುದು ಪ್ರಶ್ನೆ. ಹಾಗೆ ಆಗುತ್ತಿಲ್ಲವಾದರೆ ಅದಕ್ಕೆ ಕಾರಣ ಭ್ರಷ್ಟಾಚಾರ.
    ನ್ಯಾಯಾಲಯದಲ್ಲಿ ನ್ಯಾಯವಾದಿಗಳು ಎಷ್ಟು ಸುಳ್ಳು ಹೇಳುತ್ತಾರೆ ಅನ್ನುವುದಕ್ಕಿಂತಲೂ ನ್ಯಾಯಾಯಾಧೀಶರುಗಳು ಎಷ್ಟು ನಿಷ್ಠಾವಂತರಾಗಿದ್ದಾರೆ ಅನ್ನುವುದರ ಮೇಲೆ ನ್ಯಾಯ ವ್ಯವಸ್ಥೆ ಅವಲಂಬಿತವಾಗಿದೆ.
    ಮಹಾತ್ಮ ಗಾಂಧಿಯವರು ವಕೀಲರನ್ನು ಬೈದರೆಂದ ಮಾತ್ರಕ್ಕೆ ವಕೀಲರೆಲ್ಲಾ ಸುಳ್ಳರೆಂದಾಗದು. ಅವರು ಅಂದು ಯಾವ ಹಿನ್ನೆಲೆಯಲ್ಲಿ ಬೈದಿದ್ದರೆಂಬುದು ಮುಖ್ಯವಾಗುತ್ತದೆ.
    “ನರ್ಸ್” ಜಯಲಕ್ಷ್ಮಿ ಮಂತ್ರಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡು, ನಂತರ ಮೊಕದ್ದಮೆ ಹೂಡಿ, ಕೊನೆಗೆ ಕೋಟ್ಯಾನುಕೋಟಿಯ ವ್ಯಾಪಾರ ಕುದುರಿಸಿಕೊಂಡಳು ಎಂದ ಮಾತ್ರಕ್ಕೆ, ಎಲ್ಲಾ “ನರ್ಸ್” ಗಳಿಗೆ ಹೇಗೆ ಹಣೆಪಟ್ಟಿ ನೀಡಲಾಗದೋ ಹಾಗೆಯೇ, ನ್ಯಾಯವಾದಿಗಳ ಬಗ್ಗೆಯೂ ಎಚ್ಚರವಹಿಸಿ ಮಾತಾಡಬೇಕಾಗುತ್ತದೆ.
    ಯಾವುದೇ ಒಂದು ಗುಂಪಿನವರಿಗೆ ಅಥವಾ ಒಂದು ವೃತ್ತಿಯಲ್ಲಿರುವವರಿಗೆ ಸಾರಾಸಗಟಾಗಿ ಹಣೆಪಟ್ಟಿ ನೀಡುವುದು ಸೂಕ್ತವೆನಿಸದು.

    ಉತ್ತರ
  2. apsubrahmanyam's avatar
    apsubrahmanyam
    ಡಿಸೆ 21 2010

    ಶಿಕ್ಷೆ ನೀಡುವ ಹಿ೦ದೆ ಇರುವ ಒ೦ದು ಮುಖ್ಯ ವಿಷಯ ಬಿಟ್ಟುಹೋಗಿದೆ, ಅದು ಸೇಡು ತೀರಿಸಿಕೊಳ್ಳುವ ಉದ್ದೇಶ. ದಿನ ನಿತ್ಯದ ಆಗುಹೋಗುಗಳಲ್ಲಿ ಸೇಡಿನ ವ್ಯಾಪಕತೆ ಸರ್ವ ವಿದಿತ, ನಾನು ಹಿ೦ದೆ ಎಲ್ಲೋ ಓದಿ ತಿಳಿದ೦ತೆ, ಕಾನೂನು ಶಾಸ್ತ್ರದಲ್ಲೂ, ಇದರ ಪ್ರಸ್ತಾಪ ಇದೆ. ನೀವು ಹೇಳಿರುವ ಕೆಲವು ವಿಷಯ ಕುರಿತ೦ತೆ, ಶಿಕ್ಷೆಯ ತೀವ್ರತೆಯೂ ಸೇರಿದ೦ತೆ, ಅಭಿಪ್ರಾಯ ಬೇಧ ಇರಬಹುದಾದರೂ, ತಪ್ಪಿತಸ್ಥನನ್ನು ಸುಧಾರಣೆ ಮಾಡುವುದು, ಇತ್ಯಾದಿ ಎಲ್ಲವೂ ಬೊಗಳೆಯೇ ಸರಿ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments