ಇರ್ಷಾದ್ ಎಂ.ವೇಣೂರು

ಸಿಂಗ್ರಿ ರೌಂಡ್ಸ್…
ಬೆಳಿಗ್ಗೆ 8.15 ದಾಟಿದರೆ ಸಾಕು ಯಾವುದೇ ಕೆಲಸದಲ್ಲಿ ಬ್ಯೂಸಿ ಆಗಿರುವವರು ಟಿ.ವಿ ಮುಂದೆ ಹಾಜರಾಗ್ತಾರೆ. ಬೇರೆ ಯಾವುದೇ ಚಾನಲ್ ನೋಡ್ತಿರೋರು ಸುವರ್ಣ ನ್ಯೂಸ್ ಚಾನೆಲ್ ಗೆ ಜಂಪ್ ಆಗ್ತಾರೆ. 8 ಗಂಟೆಯ ನ್ಯೂಸ್ ಓದ್ತಿರೋ ಆಂಕರ್ ‘ಈಗ ಸಿಂಗ್ರಿ ರೌಂಡ್ಸ್ ಪ್ರಸಾರವಾಗತ್ತೆ, ಕ್ಷಣ ಕ್ಷಣದ ಸುದ್ದಿಗಾಗಿ ಸುವರ್ಣ ನ್ಯೂಸ್ 24X7 ನೋಡ್ತಾ ಇರಿ’ ಎಂದಾಗ ಟಿವಿ ಮುಂದೆ ಕೂತವರ ಮುಖದಲ್ಲಿ ಮಂದಹಾಸ ಬೀರುತ್ತೆ. ಇನ್ನು ಸಿಂಗ್ರಿ ಮ್ಯೂಸಿಕ್ ಬಂತು ಅಂದ್ರೆ ಮನೆ ಮಂದಿಯ ಕಣ್ಣೆಲ್ಲಾ ಟಿ.ವಿ ಪರದೆಯ ಮೇಲೆ ಬೀಳುತ್ತೆ!
ಹಿಂದಿನ ದಿನದ ಆಗು ಹೋಗುಗಳನ್ನು ತನ್ನದೇ ಆದ ಶೈಲಿಯಲ್ಲಿ ಉಣಬಡಿಸುವ ಸಿಂಗ್ರಿ ಎಲ್ಲರ ಅಚ್ಚುಮೆಚ್ಚು. ತೆರೆಯ ಮೇಲೆ ಕುಡುಕನೋರ್ವ 90 ಹಾಕ್ಕೊಂಡು ಗಾಳಿಯಲ್ಲಿ ತೂರಾಡ್ತಾ ಇರ್ತಾನೆ. ಅವನಿಗೆ ಸಾಥಿಯಾಗಿ ಕುಡುಕನ ವಾಯ್ಸ್ ರಾಜಕೀಯ – ಪ್ರಚಲಿತ ವಿದ್ಯಮಾನಗಳ ಬಗ್ಗೆ ತನ್ನ ಅನಿಸಿಕೆ ಹೇಳುತ್ತಾ ಹೋಗುತ್ತೆ. ಕೇವಲ ರಾಜಕೀಯದ ಸುತ್ತ ಮಾತ್ರ ಸಿಂಗ್ರಿ ರೌಂಡ್ ಹಾಕಲ್ಲ. ಕೆಲವೊಮ್ಮೆ ವಿಶಿಷ್ಟ ಸುದ್ದಿಗಳೂ ಅಲ್ಲಿರುತ್ತೆ! ಪ್ರತಿಯೊಂದು ಟಾಂಗ್ – ಟಾಂಟ್ ಮೂಲಕ ಚಾಟಿಯೇಟು ನೀಡಿದ ಬಳಿಕ ಹ್ಹಿಹ್ಹಿಹ್ಹಿ ಎಂಬ ಮಗುವಿನ ನಗು ಪ್ರೇಕ್ಷಕರ ಬಾಯಲ್ಲೂ ಪ್ರತಿಫಲನವಾಗುತ್ತೆ.
ಸಿಂಗ್ರಿಯ ಕಾನ್ಸೆಪ್ಟ್ ನಿಜವಾಗ್ಲೂ ಗ್ರೇಟ್. ಇಲ್ಲಿ ಬರುವ ಎಲ್ಲಾ ವಿಚಾರಗಳು ನೇರವಾಗಿ ಯಾರನ್ನು ತಲುಪಬೇಕೋ ಅವರನ್ನು ತಲುಪಿರುತ್ತೆ. ಸುಳ್ಳು ಹೇಳಿದವರೆಲ್ಲಾ ಸಿಂಗ್ರಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡು ಚಚ್ಚಿ ಹೋಗ್ತಾರೆ. ಸಮಾಜದ ಕಣ್ಣಿಗೆ ಮಣ್ಣೆರಚುವ ರಾಜಕಾರಣಿಗಳೆಲ್ಲಾ ಸಿಂಗ್ರಿ ಕೈಯ್ಯಲ್ಲಿ ನಗೆಪಾಟಲಿಗೀಡಾಗ್ತಾರೆ. ಸತ್ಯ ಯಾವುದು? ಸುಳ್ಳು ಯಾವುದು ಎಂದು ಗೊತ್ತಾಗಬೇಕಾದರೆ ಸಿಂಗ್ರಿ ನೋಡಿದ್ರೆ ಸಾಕು! ಸಿಂಗ್ರಿಯ ಮಾತಿನ ಮೋಡಿಯೇ ಎಲ್ಲವನ್ನೂ ಬಯಲು ಮಾಡುತ್ತೆ. ಸಿಂಗ್ರಿ ತೆರೆಯ ಮೇಲೆ ದಿನಕ್ಕೆ ನಾಲ್ಕು ಬಾರಿ ಬರ್ತಾನೆ. ಫ್ರೆಶ್ ಆಗಿ ಬೆಳಿಗ್ಗೆ 8.25ಕ್ಕೆ ಬಂದವನು 8.30 ಬೈ ಬೈ ಎಂದು ನೈಂಟಿ ಹಾಕಲಿಕ್ಕೆ ಹೋಗ್ತಾನೆ. ಮತ್ತೆ ಮಧ್ಯಾಹ್ನ 12.25ಕ್ಕೆ ಹಾಜರಾಗಿ 1.230ಕ್ಕೆ ಕಣ್ಮರೆಯಾಗ್ತಾನೆ. ಮತ್ತೆ 6.25, 9.25ಕ್ಕೆ ಬಂದು ಗುಂಡು ಹಾಕಲಿಕ್ಕೆ ಹೋಗ್ತಾನೆ. ಶನಿವಾರ ಸಂಜೆ 6.30ಕ್ಕೆ ಸಿಂಗ್ರಿಯ ವೀಕ್ಲಿ ರೌಂಡ್ಸ್ ಇರುತ್ತೆ. ಅವತ್ತಂತೂ ಅರ್ಧ ಗಂಟೆ ರಸದೌತಣ. ಸಿಂಗ್ರಿಯ ‘ಕೀರ್ತಿ’ ಇಷ್ಟೆಲ್ಲಾ ಹಬ್ಬಲು ಕಾರಣ ಅದರ ವಾಯ್ಸ್ ಓವರ್. ವಾಯ್ಸ್ ಕೊಡುವವರು 90 ಹಾಕ್ಕೊಂಡೇ ಕೊಡ್ತಿರ್ಬೇಕು ಎಂದು ಮಾತಾಡಿಕೊಳ್ಳುವ ಜನರೂ ಇದ್ದಾರೆ!
ಬಳ್ಳಾರಿ ನಾಡ ರಕ್ಷಣೆ ನಡಿಗೆ ಸಂದರ್ಭ ಸಿಂಗ್ರಿ ಮೇಕರ್ ಗೆ ಅನಾರೋಗ್ಯ ಕಾಡಿದಾಗ ಆ ಜಾಗವನ್ನು ತುಂಬಲು ಸಿಂಗ್ರಿ ತಮ್ಮ ಡಿಂಗ್ರಿ 2 ದಿನ ತೆರೆಯ ಮೇಲೆ ಬಂದಿದ್ದ. ಆದರೆ ಅಭಿಮಾನಿಗಳು ಆತನನ್ನು ಒಪ್ಪಲೇ ಇಲ್ಲ. ನಮಗೇ ಸಿಂಗ್ರಿನೇ ಬೇಕು ಎಂದು ಕರೆಮಾಡಿ ಸಿಂಗ್ರೀನ ಬರಮಾಡಿಕೊಂಡಿದ್ದರು. ಸಿಂಗ್ರಿ ತೆರೆಯ ಮೇಲೆ 5 ನಿಮಿಷ ಬಂದರೂ ಕೆಲವೊಂದು ಅಚ್ಚಳಿಯದ ರೌಂಡ್ಸ್ ಹಾಕಿ ಹೋಗಿದ್ದಾನೆ. ಮಾಯಾವತಿ ಕರ್ನಾಟಕಕ್ಕೆ ಬಂದ ಸಂದರ್ಭ ಆನೆ ಮೊದಲು ತೆರೆಯ ಮೇಲೆ ಬಂದು ನಂತರ ಮಾಯವತಿ ಬರುವಾಗ ಸಿಂಗ್ರಿ ‘ಆನೆ ಬಂತೊಂದಾನೆ’ ಎಂದು ಹಾಡಿದ್ದ. ತುಟಿ ಕಚ್ಚಿ ಕುಳಿತವರೂ ಗಹ ಗಹಿಸಿ ನಗಾಡಿದ್ದರು! ಬಿಜೆಪಿ ಸರ್ಕಾರಕ್ಕೆ ಅತೃಪ್ತರು ಬೆಂಬಲ ಹಿಂಪಡೆದಾಗ ಗೋವಾದಲ್ಲಿ ‘ಮಿಸ್ಟರ್ ಮೇಡಂ’ ಎಂದು ವರದಿಗಾರ್ತಿಯ ಜೊತೆ ಅದ್ಯಾವುದೋ ಹೊಸ ಇಂಗ್ಲೀಷ್ ಭಾಷೆ ಮಾತಾಡಿದ್ದ ಡಿ.ಸುಧಾಕರ್ಗೆ ಸಿಂಗ್ರಿ ಕರೆದು ಗೂಟಾ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಕ್ಲಾಸು ತೆರೆದು ಇಂಗ್ಲೀಷ್ ಕಲಿಸುವ ಕೆಲಸ ಕೊಟ್ಟಿದ್ದ. ಯಡಿಯೂರಪ್ಪ ಮುಂದೆ ಹೈಕಮಾಂಡ್ ಸೋತಾಗ ಸಿಂಗ್ರಿ ಹೈ ಕಮಾಂಡ್ ನಲ್ಲಿ ಎಷ್ಟು ವಿಧ? ವಿವರಿಸಿ ಎಂದು ಪ್ರಶ್ನೆ ಕೇಳಿ ತಾನೇ ಉತ್ತರಿಸಿದ್ದ. ಹೈಕಮಾಂಡ್ ನಲ್ಲಿ ಎರಡು ವಿಧ. ಒಂದು ಕಾಂಗ್ರೆಸ್ ಹೈಕಮಾಂಡ್. ಇನ್ನೊಂದು ಬಿಜೆಪಿ ಹೈಕಮಾಂಡ್. ಕಾಂಗ್ರೆಸ್ ಹೈಕಮಾಂಡ್ ಯಾವತ್ತಿದ್ದರೂ ಹೈಕಮಾಂಡೇ. ಬಿಜೆಪಿ ಹೈಕಮಾಂಡ್ ಮಾತ್ರ ಲೋ ಕಮಾಂಡ್ ಎಂದು ನಗು ಮೂಡಿಸಿದ್ದ. ಮರೆಯಲಾಗದ ಸಿಂಗ್ರಿ ಇಫೆಕ್ಟ್ ಎಂದರೆ ಹಿರಿಯೂರಿನಲ್ಲಿ ಡಿ.ಸುಧಾಕರ್ ಹೆಲಿಕಾಪ್ಟರ್ ನಿಂದ ಇಳಿದಿದ್ದು. ಮಕ್ಕಳು ಜಾರು ಬಂಡಿಯಲ್ಲಿ ಜಾರುವ ಹಾಗೆ, ನೀರಿನೊಳಗೆ ಕಲ್ಲು ಬುಳುಂಕ್ ಎಂದು ಬೀಳುವ ಹಾಗೆ ಸುಧಾಕರ್ ಹೆಲಿಕಾಪ್ಟರ್ ನಿಂದ ಇಳಿದ ಪರಿ ವೀಕ್ಷಕರಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗು ಮೂಡಿಸಿತ್ತು!
ಭಿನ್ನಮತದ ಸಂದರ್ಭ ರಾಜಕಾರಣಿಗಳೆಲ್ಲಾ ಕ್ಯಾಮರ ಮುಂದೆ ಬರಲು ಹೆದರಿಕೊಳ್ಳುತ್ತಿದ್ದರು. ಸಾರ್ ಕ್ಯಾಮರಾ ಇಟ್ಟು ಬನ್ನಿ ಮಾತಾಡೋಣ ಎನ್ನುತ್ತಿದ್ದರು. ಕಾರಣ ಕೇಳಿದರೆ ನೀವು ಸಿಂಗ್ರಿ ರೌಂಡ್ಸ್ ನಲ್ಲಿ ನಮ್ಮನ್ನು ಚಚ್ಚಿ ಹಾಕುತ್ತೀರಿ ಎಂದು ಸಪ್ಪೆ ಮೊರೆ ಹಾಕಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರಿಗೂ ಸಿಂಗ್ರಿಯ ಬಿಸಿ ತಾಗಿತ್ತು! ಹಲವು ರಾಜಕಾರಣಿಗಳ ಕ್ಯಾಮರಾ ಶೋಕಿ ಸ್ವಲ್ಪ ಮಟ್ಟಿಗೆ ನಿಂತಿದ್ದು ಸಿಂಗ್ರಿಯ ನೈಂಟಿಯಿಂದಲೇ!
ಸಿಂಗ್ರಿ ಜನ್ಮ ತಾಳಿದ್ದು ಕಳೆದ ಮಾರ್ಚ್ ನಲ್ಲಿ. ದಿನಕ್ಕೆ 5 ನಿಮಿಷ ಮಾತ್ರ ತೆರೆಯ ಮೇಲೆ ಕಾಣುವ ಸಿಂಗ್ರಿಗೆ ಫೇಸ್ ಬುಕ್ ನಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸಿಂಗ್ರಿ ಕಮ್ಯೂನಿಟಿಯೇ ಜನ್ಮ ತಾಳಿದೆ. ಕನ್ನಡ ಚಲನಚಿತ್ರ ನಟ ರಮೇಶ್ ಅರವಿಂದ್ ನಾನು ಸಿಂಗ್ರಿಯ ಫ್ಯಾನ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ನೋಡಿದರೆ ಸಿಂಗ್ರಿಯ ಇಫೆಕ್ಟ್ ಎಷ್ಟಿದೇಂತ ಗೊತ್ತಾಗುತ್ತೆ! ಪತ್ರಿಕೋದ್ಯಮದ ತರಗತಿಯಲ್ಲಿ ಒಂದು ಪಾಠವಿದೆ. ಅದೇ ಮಿಡಲ್ಸ್. ಅಂದ್ರೆ ಯಾವುದೇ ಒಂದು ವಿದ್ಯಮಾನಗಳನ್ನು ತೆಗೆದುಕೊಂಡು ಅದನ್ನು ವ್ಯಂಗ್ಯವಾಗಿ ಅಭಿವ್ಯಕ್ತಪಡಿಸುವುದು. ಅದು ಬರಹ ರೂಪದಲ್ಲಿ ಆಗಿರಬಹುದು ಅಥವಾ ದೃಶ್ಯ ರೂಪದಲ್ಲಿ ಬೇಕಾದರೂ ಆಗಿರಬಹುದು. ದೃಶ್ಯ ಮಾಧ್ಯಮದಲ್ಲಿ ಅದು ಸಿಂಗ್ರಿಯಾಗಿ ಬರುತ್ತಿದೆ.
ಇಷ್ಟೆಲ್ಲಾ ಓದಿದ ಮೇಲೆ ನಿಮಗೂ ಸಿಂಗ್ರಿ ನೋಡ್ಬೇಕೂಂತ ಮನಸಾದ್ರೆ ಪ್ರತೀ ದಿನ ಸುವರ್ಣ ನ್ಯೂಸ್ ನೋಡಿದ್ರೆ ಆಯ್ತು. ಈಗ್ಲೇ ನೋಡ್ಬೇಕು ಅನಿಸಿದ್ರೆ ಯೂ ಟ್ಯೂಬ್ ನಲ್ಲಿ ಸಿಂಗ್ರಿ ರೌಂಡ್ಸ್ ಎಂದು ಟೈಪ್ ಮಾಡಿ ನೋಡಬಹುದು. ಸಿಂಗ್ರಿ ಬರುವ ಹೊತ್ತಾಯ್ತು. ನಾನು ಬರ್ಲಾ ಬೈ ಬೈ…
ಮದ್ಯಪಾನವನ್ನು ದೂರದರ್ಶನದ ವಾಹಿನಿಗಳಲ್ಲಿ ವೈಭವೀಕರಿಸಬಾರದೆಂದು ಇರುವಾಗ, ಈ ಸಿಂಗ್ರಿ ರೌಂಡ್ಸ್ ಅನ್ನು ಹೇಗೆ ಸ್ವೀಕರಿಸಬಹುದು ಹೇಳಿ.
ಇದರಿಂದಾಗಿ ಪರೋಕ್ಷವಾಗಿ ಕುಡಕರನ್ನು ಪ್ರೋತ್ಸಾಹಿಸಿದಂತಾಗುತ್ತಿಲ್ಲವೇ?
ಅಲ್ಲಿ ಇರುವ ಹಾಸ್ಯ, ವಿಷಯದಲ್ಲಿನ ವಾಸ್ತವತೆ ಎಲ್ಲವೂ ಸ್ವಾಗತಾರ್ಹ.
ಆದರೆ, ಕುಡುಕರಷ್ಟೇ ನಿಜ ನುಡಿಯುತ್ತಾರೆ ಅನ್ನುವ ಈ ಪರೋಕ್ಷ ಪ್ರಚಾರ ಛೀ…ಛೀ… ಅನ್ನುವುದಕ್ಕೂ ನಾಲಾಯಕ್ಕು ಎಂದು ನನ್ನ ಅನಿಸಿಕೆ.
singri rounds balasuva kudukana role concept chennagilla. bere graphic balasi programme roopisidare chennagiruthe…